ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ʻನಿರ್ದಿಗಂತʼವಾಗಿ ಏರಿ…
-ಕುವೆಂಪು
ಈ ಪದ್ಯದ ಅರ್ಥವ್ಯಾಪ್ತಿಯನ್ನು ಎದೆಯಾಳಕ್ಕೆ ಇಳಿಸಿಕೊಂಡವರು, ನಮ್ಮ ನಟ, ಕಲಾವಿದ, ಸೂಕ್ಷ್ಮ ಮನಸ್ಸಿನ ಸಾಮಾಜಿಕ ಕಳಕಳಿಯ ನಿರ್ದೇಶಕ ಪ್ರಕಾಶ್ ರೈ.
ಕಳೆದ ವರ್ಷ ಇವೇ ದಿನಗಳು ನಮ್ಮನ್ನು ಶ್ರೀರಂಗಪಟ್ಟಣದ ಬಳಿಯ ಕೆ.ಶೆಟ್ಟಿಹಳ್ಳಿ ಎಂಬ ಹಸಿರು ಮುಕ್ಕಳಿಸುವ ತಾಣದಲ್ಲಿ, ಒಂದಿಷ್ಟು ʻರಂಗʼಹಕ್ಕಿಗಳಿಗಾಗಿ, ರಂಗಭೂಮಿಯ ನೈತಿಕ ಹಕ್ಕಿಗಾಗಿ ನಿರ್ಮಿಸಿದ ಕಾವುಗೂಡಿನತ್ತ ಸೆಳೆದಿತ್ತು. ಬಹುಭಾಷಾ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಮೂಲತಃ ರಂಗಭೂಮಿಯ ಹಕ್ಕಿಯಾದ ನಮ್ಮೆಲ್ಲರ ಪ್ರಕಾಶ್ ರೈ, (ಉಳಿದ ಭಾಷೆಯವರಿಗೆ ಪ್ರಕಾಶ್ ರಾಜ್) ಪರಿಭ್ರಮಣ ಮಾಡಿ ಮತ್ತೆ ಗೂಡಿಗೆ ಮೊಟ್ಟೆ ಇಡಲು ಬರುವ ಹಕ್ಕಿಯಂತೆ, ಕೆ.ಶೆಟ್ಟಿಹಳ್ಳಿಯ ಪ್ರಕೃತಿಯ ಮಡಿಲಲ್ಲಿ ತಮಗಾಗಿ ಅಲ್ಲ, ತಮ್ಮಂಥ ರಂಗಭೂಮಿಯ ಹಕ್ಕಿಗಳಿಗಾಗಿ ತಮ್ಮದೇ ನೆಲದಲ್ಲಿ ಕಾವುಗೂಡೊಂದನ್ನು ನಿರ್ಮಿಸಿದ್ದರು. ಆ ಕಾವುಗೂಡಿನಿಂದ ಒಂದಷ್ಟು ಹಕ್ಕಿಗಳು ಗಗನದಲ್ಲಿ ಸ್ವಚ್ಛಂದವಾಗಿ ಹಾರಲು ಸಜ್ಜಾಗಿವೆ. ದಿಗಂತರಹಿತ ಆಗಸದಲ್ಲಿ ಹೊಸ ಕನಸುಗಳೆ ತುಂಬಿದ ಬದುಕಿಗಾಗಿ ಸ್ವಂತ ರೆಕ್ಕೆಗಳ ಸಹಾಯದಿಂದ ತಮ್ಮ ತಾಣಗಳನ್ನು ಹುಡುಕಲು ಹೊರಟಿವೆ.
ರಂಗನ ತಿಟ್ಟಲ್ಲ ರಂಗದ ತಿಟ್ಟು
ಹಿಂದಿನ ವರ್ಷ ಮಾತನಾಡುವಾಗ, ಪ್ರಕಾಶ್ “ಹತ್ತು ಹಕ್ಕಿಗಳು ಸೇರಿದರೆ ಪಕ್ಕದಲ್ಲಿ ರಂಗನ ತಿಟ್ಟು, ಅದರ ಪಕ್ಕದ ಈ ಕಾವುಗೂಡ ʼರಂಗದʼ ತಿಟ್ಟುʼ ಎಂದು ಹೇಳಿ ತಮ್ಮ ಮುಗುಳ್ನಗೆಯ ರುಜು ಹಾಕಿದ್ದರು. ಆಗ ಅವರಿಗಿದ್ದದ್ದು ರಂಗಭೂಮಿ ಕಳೆದುಕೊಳ್ಳುತ್ತಿದೆ ಎಂದು ಭಾವಿಸಲಾದ ಘನತೆ ದಕ್ಕಿಸಿಕೊಡುವ ಉಮೇದು. ಖ್ಯಾತಿಯ ಅಲೆಯೇರಿರುವ ಹೊತ್ತಿನಲ್ಲಿಯೂ ತಮ್ಮ ಮೂಲ ಗೂಡಾದ ರಂಗಭೂಮಿಯ ಬಗ್ಗೆ ಚಿಂತಿಸುತ್ತಾ, ರಂಗಭೂಮಿಗೆ ಹೊಸರಂಗು ತಂದುಕೊಡಬೇಕೆಂದು ಈ ಕಾವುಗೂಡಿನ ಬಗ್ಗೆ ಚಿಂತಿಸಿದರೂ, ತಾವು ತಮ್ಮ ಪ್ರತಿಭೆಯನ್ನು ಮತ್ತೆ ಒರೆಹಚ್ಚಬೇಕೆಂಬ ಆಸೆ ಅವರಲ್ಲಿ ಅಂದು ಲವಲೇಶವೂ ಕಂಡಿರಲಿಲ್ಲ. ರಂಗಭೂಮಿಯ ಹೊಸ ಪೀಳಿಗೆಯ ದಿಗಂತವನ್ನು ವಿಸ್ತರಿಸುವುದು ಅವರ ಕನಸು, ಉದ್ದೇಶ ಏನಾದರೂ ಅಂದುಕೊಳ್ಳಿ. ಅದಾಗಿತ್ತು. ಲೋಕಪಾವನಿ ನದಿಯ ತಾಣದಲ್ಲಿನ ತಮ್ಮ ತೋಟದ ನಡುವಿನಲ್ಲಿ ಈ ಗೂಡು ನಿರ್ಮಿಸಿದರು. ಇದನ್ನು ಇನ್ ಕ್ಯುಬೇಟರ್ ಥಿಯೇಟರ್ (Incubator Theatre) ಎಂದು ಕರೆದರು. ಈ ಗೂಡನ್ನು ಕಟ್ಟಲು ಅವರು ಅವರಿವರಿಂದ ದೇಣಿಗೆ ಕೇಳಲಿಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ, ತಾವು ಗಳಿಸಿದ್ದನ್ನು ಇಲ್ಲಿ ಬಳಸಿದರು.
ಕಾವುಗೂಡಿನ ಉದ್ದೇಶ
ಅವರ ಕನಸಿನ ಕಾವುಗೂಡಿನ ನಿರ್ದಿಷ್ಟ ಉದ್ದೇಶವಾದರೂ ಏನು? ಎಂದು ಕೇಳಿದಾಗ, “ಈ ಕಾವುಗೂಡಿನಲ್ಲಿ ರಂಗಶಾಲೆಗಳ ಮುಂದುವರಿದ ಭಾಗವಾಗಿ ರಂಗಭೂಮಿಯ ಕಲಿಕೆಯಾಗಬೇಕು, ಸಮಾಜ-ಸಮುದಾಯಕ್ಕೆ ಸಂಬಂಧಪಟ್ಟ ರಂಗ-ಚಟುವಟಿಕೆಗಳನ್ನು ಸಂಘಟಿಸುವ ಪ್ರಯತ್ನ ಇಲ್ಲಿ ಆಗಬೇಕು. ಇದು ಶಾಲೆಯಲ್ಲವಾದ್ದರಿಂದ ಇಲ್ಲಿ ಪಠ್ಯಕ್ರಮದ ಹೊರೆ ಇರಕೂಡದು. ಹೊಸದನ್ನು ಕಲಿಯುವುದು, ಕಲಿತದ್ದರಲ್ಲಿ ಜೊಳ್ಳೆನ್ನಿಸಿದ್ದನ್ನು ಮರೆಯುವುದು. ಸಿದ್ಧ ನಾಟಕಗಳನ್ನು ಪ್ರದರ್ಶಿಸುವ ಭಾರದಿಂದ ಕಳೆಚಿಕೊಳ್ಳುವುದು. ಹೊಸ ಪಠ್ಯಗಳನ್ನು ಸೃಷ್ಟಿಸುವುದು. ಕೋಮುಭರಿತ ಭಾವನೆಗಳೇ ತುಂಬಿರುವ ಜಾಗತಿಕ ಸಂದರ್ಭದಲ್ಲಿ ಸಾಮಾಜಿಕ ಕಳಕಳಿಯ ಬದುಕುಗಳಿಗೆ ಅರ್ಥ ಕಲ್ಪಿಸುವ ಸಾಧ್ಯತೆಯನ್ನು ಸೃಷ್ಟಿಸುವುದು, ರಂಗಭೂಮಿ ನಂಬಿದವರಿಗೆ ಘನತೆಯ ಬದುಕಿನ ಸಾಧ್ಯತೆಯ ದಾರಿ ಕಾಣಿಸುವುದು” ಎಂದಾಗ, ಇದು ಕನಸಷ್ಟೇ ಎಂದು ಇತರರಿಗೆ ಅನ್ನಿಸದ್ದರೆ ಅದು ಅವರ ತಪ್ಪಲ್ಲ.
ಹಾಗೆಂದು ಇಲ್ಲಿನ ರಂಗ ಹಕ್ಕಿಗಳು ದಿಗಂತದೆಡೆಗೆ ನೋಡಲೇ ಬೇಕೆಂದು ಪ್ರಕಾಶ್ ಬಯಸಲಿಲ್ಲ. ಅವರೆಲ್ಲ ಹೊಸದಾರಿ, ಹೊಸ ಪಯಣದಲ್ಲಿ ಹೊಸ ಅಚ್ಚರಿಗಳನ್ನು ಕಂಡುಕೊಳ್ಳಲಿ ಎಂಬ ಪುಟ್ಟ ಕನಸು ಅವರದಾಗಿತ್ತು. ಈ ಕಾವುಗೂಡಿನಲ್ಲಿ ಅವರು ಈ ಕನಸಿಗೆ ಕಾವು ಕೊಟ್ಟರು. ಆ ಪ್ರಯತ್ನ ಅವರನ್ನು ಈ ಕಾವುಗೂಡಿನಲ್ಲಿ ಬೆಚ್ಚಗಿರಿಸಿ, ಸಾಕಿ, ರೆಕ್ಕೆ ಬಲಿಯಲು ಅವಕಾಶ ಕಲ್ಪಿಸಿ, ರಂಗ ದಿಗಂತದತ್ತ ಹಾರಲು ನೆರವಾಗಿದೆ.
ವರ್ಷದ ನಂತರ ಹಿನ್ನೋಟ
ಈ ಪ್ರಯತ್ನ ಆರಂಭವಾಗಿ ಇಂದಿಗೆ ಒಂದು ವರ್ಷವಾಗಿದೆ. ಒಂದು ವರ್ಷದ ನಂತರ ನಿರ್ದಿಗಂತ ಹೇಗಿದೆ? ಅಂದುಕೊಂಡಿದ್ದರಲ್ಲಿ ಎಷ್ಟು ದೂರ ನಡೆದು ಬಂದಿದೆ? ಅದರ ಮುಂದಿನ ದಾರಿ ಯಾವುದು? ಎಂಬುದರ ಬಗ್ಗೆ ಮಾತನಾಡಲು ಪ್ರಕಾಶ್ ಉತ್ಸುಕರಾಗಿದ್ದರು. ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆಸಿದ ತನ್ನ ಸಹಜೀವಿಗಳನ್ನು ಅವರು ತಾವು ಮೂಡಿಸಿದ ಹೆಜ್ಜೆ ಗುರುತುಗಳನ್ನು ಗುರುತಿಸಲು ಮುಂದೆ ಬಿಟ್ಟು, ನಿರ್ದಿಗಂತದ ಅಂಚೊಂದರಲ್ಲಿ ಕೈಕಟ್ಟಿ ಪ್ರಕಾಶ್ ನಿಂತಿದ್ದರು. ತಮ್ಮ ಪ್ರಯತ್ನಕ್ಕೆ ಹೆಗಲುಕೊಟ್ಟ ಗೆಳೆಯ ಡಾ. ಶ್ರೀಪಾದ್ ಭಟ್ ಖಾಲಿಬಿಟ್ಟ ಜಾಗಗಳನ್ನು ಭರ್ತಿ ಮಾಡುವಷ್ಟಕ್ಕೆ ತಮ್ಮ ಇರುವಿಕೆಯನ್ನು ಸೀಮಿತಗೊಳಿಸಿಕೊಂಡು, ನಿರ್ದಿಗಂತದಲ್ಲಿ ಒಂದು ಸುತ್ತು ಸುತ್ತಾಡಿಸಿದರು.
ಕಾಲನ ಕರೆಗೆ ಕಂಪಿನ ಕರೆ
“ಸಮಕಾಲೀನ ಸಾಂಸ್ಕೃತಿಕ ಜಗತ್ತಿನಲ್ಲಿ ಸೃಜನಾತ್ಮಕವಾಗಿ ತೊಡಗಿಸಿಕೊಳ್ಳಬೇಕೆಂಬ ಹಂಬಲದಿಂದ ಹುಟ್ಟಿಕೊಂಡಿದ್ದು ನಿರ್ದಿಗಂತ. ರಂಗಭೂಮಿಯ ಪ್ರಧಾನ ನೆಲೆಯಲ್ಲಿ ಸಾಹಿತ್ಯ, ಸಂಗೀತ, ಚಿತ್ರಕಲೆ, ನೃತ್ಯ, ಶಿಲ್ಪಕಲೆ ಮುಂತಾದ ಲಲಿತ ಕಲೆಗಳನ್ನು ಒಳಗೊಂಡು ಕಾಲಕ ಕರೆಗೆ, ಕಂಪಿನ ಕರೆಯನ್ನು ಜೋಡಿಸುವ ಪ್ರಯತ್ನದಲ್ಲಿದೆ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು, ಪರಿಸರ ತಜ್ಞರು, ಇಲ್ಲಿ ಪರಸ್ಪರ ಸಂಬಂಧಿಗಳಾಗಿ, ಕಾವುಗೂಡಿಗೆ ಜೀವ ನೀಡಿದ್ದಾರೆ”
“ನಿರ್ದಿಗಂತದ ಪ್ರಕೃತಿಯೊಂದಿಗಿನ ನಡೆಗೆ ಒಂದು ವರ್ಷವಾಗಿದೆ. ರಂಗಭೂಮಿಯ ಕಲಾವಿದರಿಗೆ ಕಾವುಗೂಡಾಗಿ ಮೈದಳೆಯುತ್ತ ಹಲವು ಪ್ರಯೋಗಗಳನ್ನು ನಡೆಸುತ್ತ, ಸಮಾಜದೊಳಗೆ ಸೂಕ್ತ ಮಧ್ಯ ಪ್ರವೇಶಿಕೆ ಪಡೆಯುತ್ತ ನಿರ್ದಿಗಂತವು ಸಾಗಿದೆ. ಸಾರ್ವಜನಿಕರಿಗಾಗಿ ರಂಗ ಪ್ರದರ್ಶನಗಳು, ಯುವ ಸಮುದಾಯವನ್ನು ತಲುಪುವ ಉದ್ದೇಶದ ʻಕಾಲೇಜುರಂಗʼ, ಶಿಕ್ಷಣ ಮತ್ತು ರಂಗಭೂಮಿಯ ಸಮಾಸ ಸೃಷ್ಟಿಸುವತ್ತ ನಡೆಸುತ್ತಿರುವ ಪ್ರಯೋಗವಾಗಿ ʻಶಾಲಾರಂಗʼ ಹಾಗೂ ಮಕ್ಕಳೊಡನೆ ರಂಗಪ್ರಯೋಗ ನಡೆಸಲು ರಂಗ ಶಿಕ್ಷಕರನ್ನು ತೊಡಗಿಸಿರುವ ʻಶಾಲಾ ರಂಗವಿಕಾಸʼ, ಇಂದಿನ ಯುವ ನಿರ್ದೇಶಕರುಗಳ ಲೋಕ ಗ್ರಹಿಕೆಯನ್ನು ಅರಿಯುವ ಮತ್ತು ಅವರ ಕನಸಿಗೆ ಬೆಂಬಲವಾಗಿ ನಿಲ್ಲುವ ʻರಂಗ ವಿಕಾಸʼ ಯೋಜನೆ..ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದೆ” .
ನೇಹದ ನೇಯ್ಗೆ ಎಂಬ ಅಪೂರ್ವ ಕುಸುರಿ ಕೆಲಸ
“ನೇಹದ ನೇಯ್ಗೆ ಎಂಬ ಬಹುತ್ವದ ರಂಗೋತ್ಸವಗಳನ್ನು ಸಂಘಟಿಸಿದೆ. ಇಲ್ಲಿಯ ಪರಿಸರಕ್ಕೆ ನಾಡಿನ, ಹೊರನಾಡಿನ, ಅಂತೆಯೇ ವಿವಿಧ ದೇಶಗಳ ಕಲಾ ಪ್ರತಿನಿಧಿಗಳು ಬಂದಿದ್ದಾರಲ್ಲದೆ, ಹೊಸ ರಂಗಭಾಷೆಯ ಹುಡುಕಾಟದ ತಾಲೀಮು ನಡೆಸಿದ್ದಾರೆ. ನೃತ್ಯ-ಸಂಗೀತವೇ ಮೊದಲಾದ ಕಾರ್ಯಾಗಾರಗಳು ಇಲ್ಲಿ ನಡೆದಿವೆ . ಇಲ್ಲಿ ಸೀಮೆಗಲ್ಲು, ಅಡಿಗಲ್ಲುಗಳಿಲ್ಲ. ಸೋಲುವ ಭಯವಿಲ್ಲ. ಪದಾಧಿಕಾರಿಗಳಿಲ್ಲ. ಒಟ್ಟಂದದಲ್ಲಿ ಕೆಲಸ ಮಾಡುವ ಸೊಗಸಿಗೆ ರೂಪಕದಂತೆ ಬಾಳುವ ಕನಸಷ್ಟೇ ಇರುವುದು. ಇದು ನಿರ್ದಿಗಂತದ ಒಂದು ವರ್ಷದ ನಡೆ….” ಎಂದು ಹೇಳುತ್ತಾ ಪ್ರಕಾಶ್ ಈ ಸಂದರ್ಭಕ್ಕಾಗಿಯೇ ತಂದ ವರ್ಣರಂಜಿತ ಸಂಚಿಕೆಯನ್ನು ಎಲ್ಲರ ಕೈಗಿತ್ತರು.
ಇಲ್ಲೊಂದು ಮಾತು ಹೇಳಬೇಕು. ಅದು ನೇಹದ ನೇಯ್ಗೆ ಕುರಿತು. “ನೇಹದ ನೇಯ್ಗೆ ಎನ್ನುವುದು ನಿರ್ದಿಗಂತ ರಂಗೋತ್ಸವದ ಶೀರ್ಷಿಕೆ. ರಂಗೋತ್ಸವ ನಡೆದದ್ದು, ಮಂಗಳೂರು, ಚಿಕ್ಕಮಗಳೂರಿನಲ್ಲಿ. ಮಂಗಳೂರಿನಲ್ಲಿ ನಡೆದ ಉತ್ಸವವನ್ನು, ಖ್ಯಾತ ಮರಾಠಿ ಕಲಾವಿದ ನಾನಾ ಪಾಟೇಕರ್ ಉದ್ಘಾಟಿಸಿದರೆ, ಚಿಕ್ಕಮಗಳೂರಿನ ಉತ್ಸವನ್ನು ಸಿನಿ ಮತ್ತು ರಂಗ ಕಲಾವಿದ, ಕನ್ನಡ ಉಪನ್ಯಾಸಕ, ಕಿಶೋರ್ ಉದ್ಘಾಟಿಸಿದರು. ಇಲ್ಲಿ ʻನೇಹʼ ಎಂಬ ಪದವು ಸಂವಿಧಾನದ ಪೀಠಿಕೆಯಲ್ಲಿನ ಮೈತ್ರಿ ಎಂಬ ಪದದಿಂದ ಪ್ರೇರಿತವಾಗಿದ್ದರೆ, ʻನೇಯ್ಗೆʼ ಎಂಬ ಪದವು ರಂಗಕಾರ್ಯಗಳ ಕಟ್ಟುವಿಕೆ. ಭಿನ್ನ ಕಾಲದೇಶಗಳ ಸಹೋದರತೆಯ ಹೆಣೆಯುವಿಕೆ ಮುಂತಾದ ಅರ್ಥಗಳನ್ನು ಹೊಂದಿದೆ. ನಾಟಕವೆಂದರೆ ಹಲವು ಸೌಂದರ್ಯ ವಿಜ್ಞಾನಗಳ ನೇಯ್ಗೆಯೂ ಆಗಿದೆ. . ಈ ರಂಗೋತ್ಸವದಲ್ಲಿ ಸ್ಥಳೀಯ ಜಾನಪದ ಮಹಾಕಾವ್ಯದ ನಾಯಕ ಮಂಟೇಸ್ವಾಮಿ, ಫುಟ್ಬಾಲ್ ಆಟಗಾರ ಓಝಿಲ್, ಹಾಡುಗಾರ ಬಾಬ್ ಮಾರ್ಲೆ, ಬರಹಗಾರ ಅಲ್ಬರ್ಟ್ ಕಮು ಮುಂತಾದವರ ಹಲವರ ಕಥನಗಳು ನಾಟಕವಾಗಿ ಮೈದಾಳಿದೆ. ಜನಪದ ಹಾಡುಗಳ ಜೊತೆಗೆ ಪ್ರತಿಭಟನೆಯ ಹಾಡುಗಳೂ ಸೇರಿಕೊಂಡಿವೆ. ಪ್ರೊಸೀನಿಯಂ ನಾಟಕಗಳ ಜೊತೆಗೆ ಬೀದಿ ನಾಟಕಗಳೂ ಒಂದಾಗಿವೆ. ಇವುಗಳ ಜತೆ ಸಂಗೀತ ಪ್ರಯೋಗಗಳು, ಬೊಂಬೆಯಾಟ (ಪಪೆಟ್)ಗಳು ಎಲ್ಲವೂ ಕೂಡಿಕೊಂಡು ಪ್ರಯೋಗಗೊಂಡಿವೆ. ಹೀಗೆ ಹಲವು ಮನಸುಗಳ, ನಾಡುಗಳ, ಕನಸುಗಳ, ಪ್ರಕಾರಗಳ ನೇಯ್ಗೆ ಇದು. ಇವನ್ನು ಒಟ್ಟು ಸೇರಿಸುವಲ್ಲಿ ಒಂದು ಛಂದವಿದೆ”, ಎಂದರು ಶ್ರೀಪಾದ್ ಭಟ್.
ಇದೆಲ್ಲ ನಿರ್ದಿಗಂತದಲ್ಲಿ ನಡೆಯುತ್ತಿರುವುದರೆಲ್ಲದರ ಮೌನ ಸಾಕ್ಷಿದಾರನಂತೆ, ನೂರು ಹೆಜ್ಜೆಗಳಾಚೆ, ಲೋಕಪಾವನಿ, “ಹರಿಯುವ ನದಿಗೆ ನೆನಪಿನ ಹಂಗಿಲ್ಲ….” ಎನ್ನುವುದನ್ನು ನಿಜಗೊಳಿಸಲೆಂಬಂತೆ ಹರಿದು ಕಾವೇರಿ ಸೇರಲು ಹವಣಿಸುತ್ತಿತ್ತು. ಪ್ರಕಾಶ್ ಮಾತು ಹಾಗೂ ನಿರ್ದಿಗಂತದ ರಂಗಕ್ರಿಯಗಳಗೆ ಪ್ರತಿಕ್ರಿಯೆ ಎಂಬಂತೆ ದೂರದಲ್ಲಿ ಯಾರ ಜಪ್ತಿಗೂ ಸಿಗದ ನವಿಲುಗಳು, ತುಂತುರು ಮಳೆಯಲ್ಲಿ ರೆಕ್ಕೆ ಬಿಚ್ಚಿ ನರ್ತಿಸುತ್ತಿದ್ದವು…..