ನಿಬಿಡ ಕಾನನದೊಳಗೆ ಕರ್ನಾಟಕದ ವನ್ಯಜೀವಿಗಳ ದರ್ಶನ ಮಾಡಿಸುವ ಫ್ರೆಂಡ್ಸ್ ಆಫ್ ಬಂಡೀಪುರ

ಮೂರು ದಿನಗಳ ನಟ್ಟಡವಿಯ ವಾಸದಲ್ಲಿ ಅನೇಕ ಸಫಾರಿಗಳು, ವನ್ಯಜೀವಿ ಕುರಿತ ತರಗತಿಗಳು, ಗುಂಪು ಚಟುವಟಿಕೆಗಳು ಮತ್ತು ಬೆಟ್ಟದ ಮೇಲಿನ ಹಿಮವದ್ ಗೋಪಾಲ ಸ್ವಾಮಿ ದೇಗುಲ ಭೇಟಿ ಸೇರಿದೆ.;

Update: 2025-07-27 02:30 GMT
ಬಂಡೀಪುರ ಅರಣ್ಯವು ಸಾವಿರ ಆನೆಗಳು, ಸುಮಾರು 200 ಹುಲಿಗಳು ಮತ್ತು 300 ವಿಧದ ಪಕ್ಷಿಗಳ ಆವಾಸ ಸ್ಥಾನ.

ಅದು ಕೇವಲ ಮಿಡತೆ ಆಗಿರಲಿಲ್ಲ.

ಆ ರಾತ್ರಿಯಲ್ಲಿ ಇಡೀ ಕಾಡು ಝುಯ್ಯೆನ್ನುವ ಆ ಅಪರಿಮಿತ ಸದ್ದಿನೊಂದಿಗೆ ತುಂಬಿ ಹೋಗಿತ್ತು. ಆ ದಟ್ಟಡವಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಅದು ಸಾಕ್ಷಿ ನುಡಿಯುತ್ತಿತ್ತು.

ಉಳಿದಂತೆ ನಾವು ತಂಗಿದ್ದ ಆ ಕೊಠಡಿಯ ಹೊರಗೆ ಎಲ್ಲವೂ ಪ್ರಶಾಂತವಾಗಿದ್ದಂತೆ ಗೋಚರಿಸುತ್ತಿತ್ತು. ಅಲ್ಲಿ ನೂರಕ್ಕೂ ಹೆಚ್ಚು ಜಿಂಕೆಗಳ ಹಿಂಡು ಮುಸ್ಸಂಜೆಯ ಭೋಜನದ (ಹೌದು ಅವು ಮುಂಜಾನೆ/ಮುಸ್ಸಂಜೆ ಸಕ್ರಿಯವಾಗಿರುತ್ತವೆ) ಬಳಿಕ ಸುದೀರ್ಘವಾದೊಂದು ನಿದ್ದೆಗೆ ಸಜ್ಜಾಗುತ್ತಿದ್ದವು. ಅವುಗಳತ್ತ ಟಾರ್ಚ್ ಲೈಟ್ ಬೆಳಗಿದರೆ ಅಷ್ಟೂ ಜಿಂಕೆಗಳ ಕಣ್ಣುಗಳು ಒಮ್ಮೆಗೇ ಫಳಗುಟ್ಟಿದವು; ನೂರಾರು ಮಿಂಚುಹುಳುಗಳು ಫಕ್ಕನೆ ಬೆಳಗಿ ಕಾಡಿನ ಭೂದೃಶ್ಯವನ್ನು ಕಣ್ಣ ಮುಂದೆ ಅನಾವರಣ ಮಾಡಿದಂತೆ.

ಒಂದು ಕುಳಿರ್ಗಾಳಿ ರೂಮಿನ ಬಾಗಿಲಿನತ್ತ ತೀಡಿ ಒಳನುಸುಳಿತು. ಆಗ ಇದ್ದಕ್ಕಿದ್ದಂತೆ ಒಂದು ಝೇಂಕಾರ ಕೇಳಿಬಂದಿತು. ಕಾಡಿನಲ್ಲಿ ನೀವು ನೋಡುವುದಷ್ಟೇ ಮುಖ್ಯವಾಗುವುದಿಲ್ಲ, ಕಿವಿಗೊಟ್ಟು ಆಲಿಸಬೇಕು ಕೂಡ.

ಅಷ್ಟೂ ಜಿಂಕೆಗಳ ಕಿವಿಗಳು ನೆಟ್ಟಗೆ ನಿಂತವು. ಭಯದಿಂದ ಮೈಕೊಡವಿ ಪಟಪಟನೆ ಎದ್ದವು. ಜೋರಾಗಿ ಚೀರುತ್ತ ಛಂಗನೆ ನೆಗೆಯುತ್ತ ಕ್ಷಣಾರ್ಧದಲ್ಲಿ ಅಲ್ಲಿಂದ ಮಾಯವಾದವು.

ಅಸಲಿಗೆ ಅದು ಅಪಾಯದ ಕರೆ!

ಹೌದು, ಕಾಡಿಗೆ ಅದರದ್ದೇ ಆದ ಭಾಷೆಯಿದೆ. ಅಲ್ಲೆಲ್ಲೊ ಸನಿಹದಲ್ಲಿ ಪರಭಕ್ಷಕವೊಂದು ಸುತ್ತಾಡುತ್ತಿತ್ತು ಎಂಬುದರ ಸಂಕೇತವದು. ಕೆಲವೇ ಕ್ಷಣಗಳಲ್ಲಿ ಲಂಗೂರಗಳೂ ಕಿರುಚಾಡಲು ಶುರುಮಾಡಿದವು.

ಹುಲಿಯೋ ಅಥವಾ ಚಿರತೆಯೋ? ಅದೊಂದೆ ನಮ್ಮ ಚಿಂತೆ ಅಥವಾ ಆಸಕ್ತಿಗೆ ಕಾರಣವಾಗಿತ್ತು. ಚೀರಾಟಗಳು ಇನ್ನಷ್ಟು ಮತ್ತಷ್ಟು ತೀವ್ರವಾದವು. ಆಗ ಆ ಮಬ್ಬು ಬೆಳಕಿನಲ್ಲಿ ಗೋಚರಿಸಿದ ದೃಶ್ಯ ನಮ್ಮನ್ನು ಕಂಗೆಡಿಸಿತು. ನಾವು ಉಸಿರುಗಟ್ಟಿ ನಿಂತುಬಿಟ್ಟೆವು. ಎರಡು ಚಿರತೆಗಳು ಕ್ಷಣಾರ್ಧದಲ್ಲಿ ಛಂಗನೆ ನೆಗೆಯುತ್ತ ಬಂದವು. ನಾವು ನಿಂತಿದ್ದ ಕೇವಲ 200 ಮೀಟರ್ ದೂರದಲ್ಲಿಯೇ ನಮ್ಮ ಕಣ್ಣ ಮುಂದೆಯೇ ಇವೆಲ್ಲವೂ ನಡೆದು ಹೋದವು. ಆ ಕತ್ತಲಲ್ಲಿ ರಕ್ತಪಾತವೇ ನಡೆದುಹೋಗಿತ್ತು.

ಅತಿಕ್ರಮಣ ಮಾಡೀರಿ ಜೋಕೆ: ಗುರಾಯಿಸುತ್ತ ನಿಂತಿರುವ ದೈತ್ಯ ಕಾಡೆಮ್ಮೆ

ನಮ್ಮ ನಡುವೆಯೇ ಇದ್ದ ಆ ಯುವತಿ ಥರಥರನೆ ನಡುಗಿಹೋದಳು. ತನ್ನ ವಿಂಡ್-ಚೀಟರ್ ನಲ್ಲಿ ಮುದುಡಿ ಕುಳಿತುಬಿಟ್ಟಳು. ಆದರೆ ನಾನಾ ಸ್ಥಳಗಳಿಂದ ಬಂದಿದ್ದ ಅಪರಿಚಿತರೇ ತುಂಬಿದ್ದ ನಮ್ಮ ಇಡೀ ತಂಡಕ್ಕೆ ಮೊದಲ ದಿನವೇ ಚಿರತೆಯ ದರ್ಶನವಾಗಿತ್ತು. ಇದಕ್ಕಿಂತ ಸಂಭ್ರಮ ಇನ್ನೇನಿರಲು ಸಾಧ್ಯ?

ನಾವೆಲ್ಲ ಅಲ್ಲಿ ಯಾಕಿದ್ದೆವು ಎಂದು ನೀವು ಅಚ್ಚರಿಯಿಂದ ಕೇಳಬಹುದು. ಕರ್ನಾಟಕ ಅರಣ್ಯ ಇಲಾಖೆ ಆಯೋಜಿಸಿದ್ದ ವನ್ಯಜೀವಿ ಶಿಬಿರದ ಭಾಗವಾಗಿ ಬಂಡೀಪುರ ಅರಣ್ಯದ ಅತ್ಯಂತ ಪ್ರಮುಖ ವಲಯದಲ್ಲಿ ನಾವಿದ್ದೆವು.

ಅದು ನಮ್ಮ ಮೊದಲ ದಿನ.

‘ಫ್ರೆಂಡ್ಸ್ ಆಫ್ ಬಂಡೀಪುರ’

ಈ ಆಕರ್ಷಕ ಹೆಸರಿನ ಕಾರ್ಯಕ್ರಮವು ಒಂದು ವಿಶಿಷ್ಟ ಯೋಜನೆಯಾಗಿದೆ. ಇದರಲ್ಲಿ ನೀವು ಮೂರು ದಿನಗಳ ಕಾಲ ನಟ್ಟಡವಿಯಲ್ಲಿ ತಂಗಬಹುದು. ಇಲ್ಲಿ ಹಲವಾರು ಸಫಾರಿಗಳಿವೆ, ವನ್ಯಜೀವಿ ತರಗತಿಗಳಿವೆ, ಗುಂಪು ಚಟುವಟಿಕೆಗಳು ಮತ್ತು ಬಂಡೀಪುರ ಮೀಸಲು ಅರಣ್ಯದ ನಡುವೆಯೇ ಇರುವ ಅತಿ ಎತ್ತರದ ಶಿಖರವಾದ (ಸರಿಸುಮಾರು 5000 ಅಡಿ ಎತ್ತರ) ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಬಹುದು.

ಇಂತಹುದೊಂದು ಅಪರೂಪದ ಕಾರ್ಯಕ್ರಮದ ನೇತೃತ್ವ ವಹಿಸಿರುವವರು ಸದಾ ಚುರುಕಿನ ಶಿಕ್ಷಣಾಧಿಕಾರಿ ಮೋಹನ ಕುಮಾರ. ಅವರಿಗೆ ಸಾಥ್ ನೀಡಿರುವವರು ನಿಸರ್ಗಪ್ರೇಮಿ ಧರ್ಮೇಂದ್ರ ಸ್ವಾಮಿ ಅಲಿಯಾಸ್ ಧರ್ಮ (ಎಂಥ ಅದ್ಭುತ ಪಕ್ಷಿ ವೀಕ್ಷಕ ಅವರು) ಹಾಗೂ ನೆರೆಯ ಜಕ್ಕಹಳ್ಳಿ ಗ್ರಾಮದವರೇ ಆದ ಯೋಗಿ. ಇಂತಹುದೊಂದು ಶಿಬಿರವು ಪ್ರತಿವಾರವೂ ನಡೆಯುತ್ತದೆ-ಶನಿವಾರದಿಂದ ಸೋಮವಾರದ ವರೆಗೆ.

ಕೇವಲ ಒಂದು ವರ್ಷದ ಹಿಂದಷ್ಟೇ ಪ್ರಯೋಗಾರ್ಥವಾಗಿ ಆರಂಭಿಸಲಾದ ಈ ಶಿಬಿರ ಈಗ 36ನೇ ತಂಡವನ್ನು ಕರೆದೊಯ್ಯಲು ಸಜ್ಜಾಗುತ್ತಿದೆ-ಎಲ್ಲ ನಿರೀಕ್ಷೆಗಳನ್ನು ಮೀರಿ.

ಈಗ ವ್ಯಕ್ತವಾಗಿರುವ ಪ್ರತಿಕ್ರಿಯೆ ಅದ್ಭುತವಾಗಿದೆ. ಕರ್ನಾಟಕದಿಂದ ಕನ್ನಡ ಮಾತ್ರ ಮಾತನಾಡುವ ಜನರಿಂದ ಅಪಾರ ಬೇಡಿಕೆ ಬರುತ್ತಲೇ ಇದೆ. ಇಲ್ಲಿಯ ವರೆಗೆ ಇಂಗ್ಲಿಷ್ ಮಾತನಾಡುವವರಿಗಾಗಿ ಕೇವಲ ಐದು ಕಾರ್ಯಕ್ರಮಗಳನ್ನು ಮಾತ್ರ ಆಯೋಜಿಸಲಾಗಿದೆ. ಇನ್ನಷ್ಟು ಇಂಗ್ಲಿಷ್ ಶಿಬಿರಗಳು ನಿಶ್ಚಿತ.

ಆದರೆ, ಗಮನಿಸಿ..  ಇದೊಂದು ಸಾಮಾನ್ಯ ಪ್ರವಾಸಿ ಕಾರ್ಯಕ್ರಮವಲ್ಲ. ಬದಲಿಗೆ ಜನರಿಗೆ ಅರಣ್ಯ, ಅದರ ಮಹತ್ವ ಮತ್ತು ಸಂರಕ್ಷಣೆಯ ಅರಿವು ಮೂಡಿಸುವ ಗುರಿಯನ್ನು ಹೊಂದಿರುವ ವಿಶಿಷ್ಟ ಉಪಕ್ರಮ.

ಕೇವಲ ಪ್ರವಾಸಿಯಲ್ಲ

“ಮೊದಲನೆಯದಾಗಿ ಕೇವಲ ಪ್ರವಾಸಿಯಾಗಿ ನಮ್ಮೊಂದಿಗೆ ಸೇರಿಕೊಳ್ಳುವುದು ನಮಗಿಷ್ಟವಿಲ್ಲ. ಜನರಿಗೆ ಅರಣ್ಯದ ಬಗ್ಗೆ ಅರಿವು ಮೂಡಿಸಬೇಕು, ಅವರಲ್ಲಿ ಸಂವೇದನೆ ಬೆಳೆಸಬೇಕು ಮತ್ತು ನಾವು ಮಾಡುವ ಕೆಲಸವನ್ನು ಅವರು ಗಮನಿಸಬೇಕು ಎಂಬುದು ನಮ್ಮ ಉದ್ದೇಶ. ನನಗೆ ತಿಳಿದ ಮಟ್ಟಿಗೆ ಇಂತಹುದೊಂದು ಕಾರ್ಯಕ್ರಮವನ್ನು ಯಾವ ಮೀಸಲು ಅಥವಾ ರಾಷ್ಟ್ರೀಯ ಉದ್ಯಾನವನದವರು ನಡೆಸುತ್ತಿಲ್ಲ. ಇದನ್ನೊಂದು ಆರಂಭಿಕ, ಪರಿಚಯದ ಕಾರ್ಯಕ್ರಮವಾಗಿ ಹಮ್ಮಿಕೊಂಡಿದ್ದೇವೆ. ನಾವು ಹೇಳುವ ಸಂಗತಿಯನ್ನು ಎಲ್ಲರಿಗೂ ಮನವರಿಕೆಯಾಗಬೇಕು ಎಂಬುದು ನಮ್ಮ ಆಸೆ. ಆಸಕ್ತರಿಂದ ಸಿಕ್ಕ ಪ್ರತಿಕ್ರಿಯೆ ಮಾತ್ರ ಅತ್ಯದ್ಭುತವಾದುದು. ನಮ್ಮದೇ ಸಿಬ್ಬಂದಿ ಅವರದೇ ಕುಟುಂಬಗಳನ್ನು ಕರೆತರುತ್ತಿದ್ದಾರೆ. ನಾವು ಕೂಡ ಕಾರ್ಯಕ್ರಮಕ್ಕೆ ಇನ್ನಷ್ಟು ಹೊಸತನವನ್ನು ತುಂಬುತ್ತಿದ್ದೇವೆ” ಎಂದು ಬಂಡೀಪುರ ಹುಲಿ ಮೀಸಲು ಅರಣ್ಯದ ಕ್ಷೇತ್ರ ನಿರ್ದೇಶಕ ಎಸ್. ಪ್ರಭಾಕರನ್ (ಥೇಟ್ ವಿಜಯ ಸೇತುಪತಿಯಂತಿದ್ದಾರೆ!) ವಿವರಿಸುತ್ತಾರೆ.

ಬಂಡೀಪುರ ಅರಣ್ಯ ನಿಮ್ಮನ್ನೆಂದಿಗೂ ಬೋರ್ ಹೊಡೆಸುವುದಿಲ್ಲ. ಈ ಅರಣ್ಯದೊಳಕ್ಕೆ ಬೇಟೆಗಾಗಿ ಹೋದ ಮೈಸೂರು ಮಹಾರಾಜರು ನಿಸರ್ಗಪ್ರೇಮಿಯಾಗಿ ಹೊರಬಂದರು ಎಂಬ ಕಥೆ ಇದೆ. ಇದನ್ನು ಭಾರತದ ಮೊಟ್ಟಮೊದಲ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದನ್ನಾಗಿ ಮಾಡಲು ಮೊದಲ ಹೆಜ್ಜೆ ಇಟ್ಟವರೇ ಅವರು. ಮಹಾರಾಜರು ಅರಣ್ಯದೊಳಕ್ಕೆ ಹೊಕ್ಕು ಯಾಕೆ ಮಂತ್ರಮುಗ್ಧರಾಗಿ ಹೊರಬಂದರು ಎಂಬುದು ಊಹಿಸುವುದೇನೂ ಕಷ್ಟವಲ್ಲ.

ಈ ದಟ್ಟಡವಿಯಲ್ಲಿರುವ ಆನೆಗಳ ಸಂಖ್ಯೆ ಅಜಮಾಸು ಒಂದು ಸಾವಿರ, ಹುಲಿಗಳ ಸಂಖ್ಯೆ ಸುಮಾರು 200 ಮತ್ತು 300ಕ್ಕೂ ಅಧಿಕ ಬಗೆಯ ಪಕ್ಷಿಗಳಿವೆ. ಥರಾವರಿ ವೃಕ್ಷ ಸಮೂಹಗಳು, ಕೀಟಗಳು, ಸರೀಸೃಪಗಳು ಮತ್ತು ಉಭಯಚರಗಳು ಆಶ್ರಯ ನೀಡಿರುವ ಈ ವಿಶಾಲ ಕಾಡು, ವನ್ಯಜೀವಿಗಳನ್ನು ವೀಕ್ಷಿಸಲು ಮತ್ತು ಫೊಟೋಗ್ರಫಿ ಮಾಡಲು ದೇಶದಲ್ಲಿಯೇ ಸೂಕ್ತ ತಾಣವಾಗಿದೆ.ಕಾಡ ನಡುವೆ: ಬಂಡೀಪುರ ಫ್ರೆಂಡ್ಸ್ ಶಿಬಿರದಲ್ಲಿ ಭಾಗವಹಿಸಿದವರು ತಂಗಿದ ತಾಣ.

ಕಾಡ ನಡುವೆ: ಬಂಡೀಪುರ ಫ್ರೆಂಡ್ಸ್ ಶಿಬಿರದಲ್ಲಿ ಭಾಗವಹಿಸಿದವರು ತಂಗಿದ ತಾಣ.

ಅರಣ್ಯದ ನಡುವೆಯೇ ಹಾದುಹೋಗುವ ಮೈಸೂರು-ಊಟಿ ಹೆದ್ದಾರಿ (ಇಲ್ಲಿ ರಾತ್ರಿ ಸಂಚಾರವನ್ನು ನಿಷೇಧಿಸಲಾಗಿದೆ) ದಕ್ಷಿಣ ಭಾರತದ ಅತ್ಯಂತ ಸುಂದರವಾದ ಹಾಗೂ ಜೀವನದಲ್ಲೊಮ್ಮೆ ಪ್ರಯಾಣಿಸಲೇಬೇಕಾದ ರಸ್ತೆ.

ಎರಡನೇ ದಿನ ಬೆಳಗಿನ ಜಾವ 6.20ಕ್ಕೆಲ್ಲ ನಮ್ಮ ಪಯಣ ಆರಂಭವಾಯಿತು. ಆಗಲೂ ನಮಗೆ ದಟ್ಟವಾದ ಹುಲ್ಲುಹಾಸಿನ ಮೇಲೆ ಇನ್ನೊಂದು ಚಿರತೆ ದರ್ಶನ ನೀಡಿತು-ಹಿಂದಿನ ದಿನದ ತನ್ನ ಬೇಟೆಯೊಂದಿಗೆ. ರೇಷಿಮೆಯಷ್ಟು ತಿಳಿತಿಳಿಯಾಗಿದ್ದ ಮಂಜಿನ ಪರದೆಯನ್ನು ಸರಿಸುತ್ತ ನಮ್ಮ ಬಸ್ಸು ಕಾಡಿನಾಳಕ್ಕೆ ಮುನ್ನುಗ್ಗಿತು.

ನಮ್ಮ ಚಾಲಕನೋ ಮಿತಭಾಷಿ. ಅವರ ಕಣ್ಣು-ಕಿವಿ ಮಾತ್ರ ತುಂಬಾ ಸೂಕ್ಷ್ಮ. ಆ ಅಲ್ಲಿ-ಇಲ್ಲಿ ಕೇಳಿಸುವ ಸಣ್ಣ ಸದ್ದಿಗೂ ಕಿವಿಗೊಡುತ್ತಿದ್ದರು. ಕಾಡಿನೊಳಕ್ಕೆ ಸಿಗಬಹುದಾದ ಯಾವುದಾದರೂ ಸುಳಿವುಗಳನ್ನು ಎದುರು ನೋಡುತ್ತಿದ್ದರು. ಬಿಎಸ್ಎನ್ಎಲ್ ನೆಟ್ವರ್ಕ್ ಆಗಾಗ ಕೈಕೊಡುತ್ತಿದ್ದರೂ ಸಫಾರಿ ಚಾಲಕರು ಮಾತ್ರ ಅಪರೂಪದ ವನ್ಯಜೀವಿಗಳ ದರ್ಶನದ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದರು. ಕೆಲವೊಮ್ಮೆ ಅವಸರಕ್ಕೂ ಬೀಳುತ್ತಿದ್ದರು.

ಆನೆಗಳು, ಕಾಡೆಮ್ಮೆ, ಕರಡಿ, ರಾಜ ರಣಹದ್ದುಗಳು, ಗಿಡುಗ, ಸ್ಥಳೀಯ ಹಕ್ಕಿಗಳು- ಒಂದೇ ಒಂದು ತಾಸಿನಲ್ಲಿ ಎಲ್ಲವೂ ನಮಗೆ ದರ್ಶನ ನೀಡಿದವು. ಆದರೆ ಒಂದು ಜೀವಿ ಮಾತ್ರ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿತ್ತು-ಅದು ರಾಯಲ್ ಬೆಂಗಾಲ್ ಹುಲಿ. ‘ಮೂರಕ್ಕೆರೆ’ (ಅದು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೆರೆಯ ಹೆಸರು) ಎಂಬ ಹೆಸರಿನ ಹೆಣ್ಣು ಹುಲಿ ತನ್ನ ನಾಲ್ಕು ಮರಿಗಳ ಜೊತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ಗುಸುಗುಸು ನಮ್ಮ ನಡುವೆ ಹರಡಿತ್ತು. ಆದರೆ ಅದೆಲ್ಲವೂ ನಮ್ಮ ನಿರೀಕ್ಷೆಗೆ ಮೀರಿದ್ದು.

ಮತ್ತೆ ‘ಎಚ್ಚರಿಕೆಯ ಕರೆ’

ಜುಲೈ ತಿಂಗಳ ಸಂಜೆಯ ಸೂರ್ಯ ಕಾಡಿನಾಚೆಗೆ ಮರೆಯಾಗಲು ಎಲ್ಲ ತಯಾರಿ ನಡೆಸಿದ್ದ. ನಮ್ಮ ಭರವಸೆ ಮಸುಕಾಗತೊಡಗಿತು. ನಮ್ಮ ಕೊನೆಯ ಸಫಾರಿ ಮುಗಿಸಲು ಬಾಕಿ ಉಳಿದಿದ್ದು ಕೇವಲ 40 ನಿಮಿಷ ಮಾತ್ರ.

‘ಎಚ್ಚರಿಕೆಯ ಕರೆ’ ಎಂದು ಆಗ ಯಾರೋ ಪಿಸುಗುಟ್ಟಿದರು. ಭಯಭೀತವಾಗಿದ್ದ ಮೂರು ಸಾಂಬಾರ್ ಜಿಂಕೆಗಳ (ಅದೊಂದು ಅದ್ಭುತ ದೃಶ್ಯ) ಕಡೆಗೆ ಯಾರೊ ಬೊಟ್ಟುಮಾಡಿ ತೋರಿಸಿದರು. ಅವುಗಳೋ ಹುಲಿಗಳಿಗೆ ಇಷ್ಟದೂಟ. ಅವುಗಳ ತೀಕ್ಷ್ಣ ಹಾಗೂ ವಿಶಿಷ್ಟ ರೀತಿಯ ಕೂಗು ಅಲ್ಲಿ ಅಷ್ಟೂ ಹೊತ್ತು ಆವರಿಸಿದ್ದ ನಿಶ್ಬದ್ಧವನ್ನು ಭೇದಿಸಿತು. ವನ್ಯಜೀವಿಗಳ ಪರಿಭಾಷೆಯಲ್ಲಿ ಇದು ‘ಎಚ್ಚರಿಕೆಯ ಕರೆ’. ಇನ್ನೇನು ಬೇಟೆಗಾರ ಬರುತ್ತಿದ್ದಾನೆ ಎಂಬುದಕ್ಕೆ ಜಿಂಕೆ ಮತ್ತು ಲಂಗೂರ್ ಗಳು ನೀಡುವ ಸೂಚನೆ ಅದಾಗಿತ್ತು.

ಮಾತು, ಮೌನ, ವಿನೋದ: 34ನೇ ಬ್ಯಾಚ್ ಗೆ ಕಾಡಿನ ಕಥೆಗಳನ್ನು ರಂಜನೀಯವಾಗಿ ಹೇಳುತ್ತಿರುವ ಮೋಹನ ಕುಮಾರ್ (ಮಧ್ಯದಲ್ಲಿರುವವರು).

ಮಧ್ಯ ಹಾದಿಯಲ್ಲೇ ಶಾಮಣ್ಣ ವಾಹನ ನಿಲ್ಲಿಸಿಬಿಟ್ಟ. ಅದು ಮೂರು ಹಾದಿಗಳು ಕೂಡುವ ಜಾಗ. ಅಲ್ಲಿಂದ ದೃಷ್ಟಿ ಹಾಯಿಸಿದರೆ ಆ ಅರಣ್ಯದ ಭವ್ಯವಾದ ನೋಟ ಕಾಣುತ್ತಿತ್ತು. ನಮ್ಮ ಹೃದಯಗಳು ‘ಧಗ್ ಧಗ್’ ಎಂದು ಬಡಿದುಕೊಳ್ಳುತ್ತಿದ್ದವು. ಆಗ ಪ್ರತ್ಯಕ್ಷವಾಯಿತು. ಯಾರೋ ಒಬ್ಬರು ಮಿದುವಾದ ದನಿಯಲ್ಲಿ ಹೇಳಿದರು, “ನೋಡಿ ಅಲ್ಲಿ, ಆ ಪೊದೆಯಿಂದ ಜಿಗಿದು ಬರುತ್ತಿದೆ.”

ಕ್ಷಣಕಾಲ ಮೌನ. ತಕ್ಷಣ ಕೆಲವರು ಅವಸರಕ್ಕೆ ಬಿದ್ದರು. ಇನ್ನು ಕೆಲವರು ತಮ್ಮ ಕ್ಯಾಮರಾ ಕ್ಯಾಪ್ ತೆಗೆದು ಸಿದ್ಧರಾದರು, ಹೇಗಾದರೂ ಮಾಡಿ ಕಣ್ಣು ತುಂಬಿಕೊಳ್ಳೋಣ ಎಂದುಕೊಳ್ಳುತ್ತ ಕೆಲವರು ಕ್ಯಾಬಿನ್ನಿನ ಮುಂಭಾಗಕ್ಕೆ ನುಗ್ಗಿದರು. ಕೆಲವರಂತೂ ಉತ್ಸಾಹಭರಿತರಾಗಿ ಮಾತಿನಲ್ಲಿ ತೊಡಗಿಕೊಂಡರು. ಮೋಹನ್ ಅವರು ಮಧ್ಯಪ್ರವೇಶಮಾಡಿ ಎಲ್ಲರನ್ನೂ ನಿಶ್ಶಬ್ಧರಾಗಿರುವಂತೆ ಹೇಳಿದರು. ಅಷ್ಟಕ್ಕೂ ನಾವು ಅಲ್ಲಿ ಪರದೇಶಿಗಳು-ಅವರ ಜಾಗದಲ್ಲಿ ಅತಿಕ್ರಮಣಕಾರರು. ಅಂತಿಮವಾಗಿ ಪೊದೆಗಳ ಮೂಲಕ ಅನೇಕರಿಗೆ ನೋಡಲು ಸಾಧ್ಯವಾಗಿದ್ದು ಹುಲಿಯ ತಲೆ ಅಥವಾ ಬಾಲ? ಏನೇ ಆಗಲಿ ಅದು ಹುಲಿಯೇ ಆಗಿತ್ತು.

ಮೃಗಾಲಯಗಳಲ್ಲಿ ಕಂಡಂತೆ ಯಾರೂ ಹುಚ್ಚಿಗೆ ಬಿದ್ದು ಹುಲಿಯನ್ನು ಕೆಣಕುವ ಸಾಹಸ ಮಾಡಲಿಲ್ಲ. ನಾವಂತೂ ಕಾದೇ ಕಾದೆವು. ಚಿಂತೆ ಏನೆಂದರೆ ಹುಲಿಗಳು ಕೆಲವೊಮ್ಮೆ ಹದಿನಾರು ತಾಸು ನಿದ್ದಿಗೆ ಜಾರುತ್ತವೆ.

ಚಾಲಕ ಶಕ್ತಿಗಳು: ನಿಸರ್ಗಪ್ರೇಮಿ ಧರ್ಮ ಮತ್ತು ಚಾಲಕ ಶ್ಯಾಮಣ್ಣ. ಬಂಡೀಪುರ ಕಾರ್ಯಕ್ರಮದ ಚಾಲಕಶಕ್ತಿಗಳಿವರು.

ಸೂರ್ಯನಿನ್ನೂ ಹೊಂಬಣ್ಣ ಹೊದ್ದಿರುವ ಹೊತ್ತಿನಲ್ಲೇ ಆ ಪೊದೆಯಿಂದ ಹುಲಿ ಹೊರಬಂತು. ಅದರ ಮೈಮೇಲಿನ ಹೊಳೆವ ಕಿತ್ತಳೆ ಬಣ್ಣದ ಪಟ್ಟೆಗಳು ಆ ಹಚ್ಚಹಸಿರಿನ ಕಾಡಿನ ನಡುವೆ ಥಳಗುಟ್ಟಿದವು. ನಮ್ಮಂತಹ ಅತಿಕ್ರಮಣಕಾರರು ಮತ್ತು ವಾಹನಗಳ ಸದ್ದಿನ ನಡುವೆಯೂ ಅದು ತಣ್ಣಗಿತ್ತು. ಅದು ಕೆರಳಲಿಲ್ಲ. ಕುತೂಹಲದಿಂದ ದಿಟ್ಟಿಸಲೂ ಇಲ್ಲ. ಅದು ನಿಧಾನಕ್ಕೆ ರಾಜ ಗಾಂಭೀರ್ಯದಿಂದ ನಡೆದುಬಂದಿತು. ನಾವಲ್ಲಿದ್ದೇವೆ ಎಂಬುದನ್ನೂ ಅದು ಕೇರ್ ಮಾಡಲಿಲ್ಲ. ಅದೇನು ತಿರಸ್ಕಾರವೇ? ಬಹುಶಃ ಇರಬೇಕು!

ಈ ನಾಟಕ ಅಷ್ಟಕ್ಕೇ ನಿಲ್ಲಲಿಲ್ಲ. ಹುಲಿ ನಿಧಾನಕ್ಕೆ ಇನ್ನೊಂದು ದಿಕ್ಕಿಗೆ ಹೆಜ್ಜೆಹಾಕಿದ ಕ್ಷಣಾರ್ಧದಲ್ಲಿ ಶ್ಯಾಮಣ್ಣ ರಿವರ್ಸ್ ಗೇರ್ ಹಾಕಿದರು. ತಮ್ಮ ಮಿನಿ ಬಸ್ಸನ್ನು ಸುಮಾರು ಎರಡು ಕಿ.ಮೀ. ಹಿಂದಕ್ಕೆ ಕೊಂಡೊಯ್ದು ನಿಲ್ಲಿಸಿದರು. ಹಾಗೆ 30-40 ನಿಮಿಷ ಕಳೆದಿರಬಹುದು. ಅಷ್ಟು ದೂರ, ಅಷ್ಟು ನಿಖರವಾಗಿ ಅದೇ ಸ್ಥಳಕ್ಕೆ ಹುಲಿ ನಡೆದು ಬರಬಹುದೇ ಎಂದು ಅನೇಕ ಅನುಮಾನ-ಅಸಡ್ಡೆಯಿಂದ ನೋಡಿದರು. ಆಗ ಅಲ್ಲೊಂದು ಕಾಡೆಮ್ಮೆ ಗುರಾಯಿಸುತ್ತ ನಡೆದುಬಂತು. ಯಾರೂ ಅದರ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳಲಿಲ್ಲ. ಓಹ್! ಮತ್ತೆ ಎಚ್ಚರಿಕೆಯ ಕರೆಗಳು.

ಕೆಲವೇ ನಿಮಿಷಗಳು ಕಳೆದಿದ್ದವು. ಅಬ್ಬಾ! ಆ ಭವ್ಯವಾದ ಹುಲಿ ಪ್ರತ್ಯಕ್ಷವಾಗಿಬಿಟ್ಟಿತು. ಶ್ಯಾಮಣ್ಣನಿಗೇನು ಹುಲಿಯ ಹೆಜ್ಜೆ ಜಾಡು ತಿಳಿದಿದೆಯೇ ಎಂಬಷ್ಟು ನಿಖರವಾಗಿತ್ತು ಅದರ ಆಗಮನ. ಅಜಮಾಸು ಮೂರು ನಿಮಿಷಗಳ ಕಾಲ ಅದು ಅಲ್ಲೆಲ್ಲ ಅಡ್ಡಾಡಿತು; ಫೊಟೋಶೂಟ್ ಮಾಡಿಕೊಳ್ಳಿ ಎಂಬಂತೆ. ನಮ್ಮಲ್ಲಿದ್ದ ಅನೇಕ ಫೊಟೋಗ್ರಾಫರ್ ಗಳಿಗೆ ಅದು ಪುಷ್ಕಳ ಭೋಜನ. ಇನ್ನೇನು ಮುಗಿಯಿತು ಎನ್ನುವಂತೆ ಅದು ನಿಭಿಡ ಕಾನನದೊಳಗೆ ಮರೆಯಾಯಿತು.

ಬಂಡಿಪುರದ ಹೆಗ್ಗುರುತು

ಅದೇ ಮೂರ್ಕೆರೆ ಹುಲಿ. ಅದುವೇ ಬಂಡೀಪುರದ ಹೆಗ್ಗುರುತು. ಅಮ್ಮನನ್ನು ಮರಿಗಳು ಫಾಲೋ ಮಾಡಲಿಲ್ಲ ಎಂಬುದೇ ನಮ್ಮ ಪಾಲಿನ ಬೇಸರ.

“ಹುಲಿ ಕಟ್ಟಕಡೆಯ ಕಿಕ್ ನೀಡಿತು” ಎಂದು ಯಾರೋ ಕಟಕಿಯಾಡಿದರು. ಭಾರತದಲ್ಲಿ ಹುಲಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದ್ದರೂ ವನ್ಯಜೀವಿ ಛಾಯಾಗ್ರಾಹಕರಿಗೆ ಮತ್ತು ಉತ್ಸಾಹಿಗಳ ಪಾಲಿಗೆ ಹುಲಿ ದರ್ಶನ ಭಾಗ್ಯ ಲಭಿಸಿತೆಂದರೆ ಅದು ಅಪೇಕ್ಷಣೀಯವೇ ಆಗಿದೆ. ಅದಕ್ಕಾಗಿ ಕೆಲವರು ದಿನಗಳ ಕಾಲ, ಕೆಲವರು ತಿಂಗಳುಗಳ ಕಾಲ ಕಾಯುತ್ತಾರೆ. ನಿಜಕ್ಕೂ ಅದೊಂದು ಶುದ್ಧ ಅದೃಷ್ಟ.

ಬಂಡೀಪುರದ ಹೆಗ್ಗುರುತು: ಮರಿಗಳೊಂದಿಗೆ ವಿರಮಿಸಿರುವ ಬಂಡೀಪುರ ಅರಣ್ಯದ ಹೆಮ್ಮೆ ಎಂದೇ ಭಾವಿಸಲಾಗಿರುವ ಮೂರ್ಕೆರೆ ಹುಲಿ. (ಮರಿಗಳನ್ನು ನೋಡಲು ದಯವಿಟ್ಟು ಫೊಟೋ ಝೂಮ್ ಮಾಡಿ). ಈ ವರ್ಷದ ಆರಂಭದಲ್ಲಿ ಈ ಚಿತ್ರ ಸೆರೆಹಿಡಿದವರು ಮೋಹನ ಕುಮಾರ್.

2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರ ಅರಣ್ಯದಲ್ಲಿ ಸಫಾರಿ ಕೈಗೊಂಡಾಗ ಹುಲಿಯಾಗಲಿ ಚಿರತೆಯಾಗಲಿ ದರ್ಶನ ನೀಡಲಿಲ್ಲ. ಒಂದು ದಾಖಲೆಯ ಪ್ರಕಾರ ಪ್ರಸಿದ್ಧ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿಕ (250) ಭಾರತದಲ್ಲಿ ಅತಿಹೆಚ್ಚು ಹುಲಿಗಳನ್ನು ಹೊಂದಿರುವುದು (191)ಬಂಡೀಪುರದಲ್ಲಿ.

ಬಂಡೀಪುರ, ಮದುಮಲೈ (ತಮಿಳುನಾಡು) ಮತ್ತು ನಾಗರಹೊಳೆ ಸರಣಿಯು ನೀಲಗಿರಿಯ ಜೈವಿಕಮಂಡಲದಲ್ಲಿ ಹುಲಿಗಳ ತ್ರಿಕೋನಾಕೃತಿಯನ್ನು (tiger trifecta) ರೂಪಿಸುತ್ತದೆ. ಅಂದರೆ ಇಲ್ಲಿ ಭರೋಬ್ಬರಿ ನಾಲ್ಕುನೂರು ಹುಲಿಗಳು ನೆಲೆಸಿವೆ ಎಂದು ಅಂದಾಜುಮಾಡಲಾಗುತ್ತದೆ. ಪ್ರಪಂಚದಲ್ಲಿ ಕೇವಲ ಹದಿಮೂರು ರಾಷ್ಟ್ರಗಳಲ್ಲಿ ಮಾತ್ರ ಹುಲಿಗಳು ಕಂಡುಬರುತ್ತವೆ. ಅಂದರೆ ಹುಲಿಗಳ ಮಹತ್ವ ಎಷ್ಟು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.

ಇಂತಹ ವಿಶೇಷತೆಗಳು ಒತ್ತಟ್ಟಿಗಿರಲಿ. ಇದು ಕೇವಲ ಹುಲಿಗಳ ಕಥೆ ಮಾತ್ರ ಅಲ್ಲ. ಬದಲಿಗೆ ಇತರ ಜೀವಿಗಳ ಕಥೆಯೂ ಹೌದು.

“ನಗರದ ಜನರಿಗೆ ಕಾಡು ಮತ್ತು ವನ್ಯಜೀವಿಗಳ ಬಗೆಗೆ ಯಾವುದೇ ಕಲ್ಪನೆ ಇಲ್ಲ. ನಮ್ಮ ಪರಿಸರ ವ್ಯವಸ್ಥೆಯಲ್ಲಿ ಒಂದು ಕಪ್ಪೆ ಕೂಡ ದೊಡ್ಡ ಪಾತ್ರವನ್ನು ನಿರ್ವಹಿಸುತ್ತದೆ. ಆದರೆ ನಮಗೆ ಯಾವುದರ ಬಗ್ಗೆಯೂ ಚಿಂತೆಯಿಲ್ಲ. ಒಂದು ಜನಾಂಗವಾಗಿ ಮನುಷ್ಯರಾದ ನಮಗೆ ಕಾಡಿನಲ್ಲಿ ಅಥವಾ ಬೇರೆ ಇನ್ನೆಲ್ಲೋ ಆಗಲಿ ಇತರ ಯಾವುದೇ ಜೀವಿಗಳ ಬಗ್ಗೆ ಕಾಳಜಿ ಎಂಬುದಿಲ್ಲ. ಪ್ರಕೃತಿಗೆ ಎಲ್ಲವೂ ಒಂದೇ. ಹಾಗಾಗಿ ಒಂದು ಹುಲಿ ಕಪ್ಪೆಯಷ್ಟೇ ಮುಖ್ಯ ಜೀವಿ. ಇಂತಹ ವ್ಯವಸ್ಥೆಯ ಸಂರಕ್ಷಣೆ ಬಗ್ಗೆ ಹೆಚ್ಚು ಹೆಚ್ಚು ಕಾಳಜಿ ವಹಿಸಬೇಕು ಎಂಬುದಷ್ಟೇ ನಮ್ಮ ಕಳಕಳಿ” ಎನ್ನುತ್ತಾರೆ ಈ ಬಂಡೀಪುರ ಕಾರ್ಯಕ್ರಮದ ರೂವಾರಿ ಮೋಹನ ಕುಮಾರ್.

ಅತ್ಯಂತ ಪ್ರಜ್ಞಾಪೂರ್ವಕವಾದ ಮತ್ತು ಕೆಲವೊಮ್ಮೆ ಲವಲವಿಕೆ-ಕಚಗುಳಿ ಇಡುವ ಮೋಹನಾ ಅವರ ವಿಚಾರವಿನಿಮಯಗಳು ಬೋಧಪ್ರದವಾಗಿರುತ್ತಿದ್ದವು. ಅದರಲ್ಲೂ ಮುಖ್ಯವಾಗಿ ಹಾವುಗಳು ಮತ್ತು ಕಪ್ಪೆಗಳ ಬಗ್ಗೆ ಅವರು ಹೇಳುವ ಸಂಗತಿಗಳು ಆಸಕ್ತಿಕರ.

ಇನ್ನೂ ಒಂದು ರೋಚಕ ಅನುಭವ ಎಂದರೆ ಕಾಡಿನ ಅಂಚಿನಲ್ಲಿರುವ ಕಳ್ಳಬೇಟೆ ನಿಗ್ರಹ ಕ್ಯಾಂಪಿಗೆ ಭೇಟಿ ನೀಡಿದ್ದು. ಅಲ್ಲಿ ನಾವು ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯನ್ನು ಭೇಟಿಯಾದೆವು. ಅವರಲ್ಲಿರುವ ಉತ್ಸಾಹ ಅಪರಿಮಿತವಾದುದು. ಅವರು ಕರಡಿ, ಹುಲಿಗಳು, ಕಾಡೆಮ್ಮೆ, ಹಾವುಗಳ ಬಗ್ಗೆ ಥರಾವರಿ ಕಥೆಗಳನ್ನು ಹೇಳುತ್ತ ಹೋದರು. ಕೊನೆಗೆ ಕಾಡುಗಳ್ಳ ವೀರಪ್ಪನ್ ಜೊತೆಗಿದ್ದ ನಿಕಟ ಅನುಭವಗಳನ್ನೂ ಹಂಚಿಕೊಂಡರು.

ಕಾಡಿನಲ್ಲಿ ಟ್ರೆಕ್ಕಿಂಗ್ ಮಾಡುವುದು ರೋಚಕ ಅನಿಸಬಹುದು. ಆದರೆ ಪ್ರತಿದಿನ 15-20 ಕಿ.ಮೀ. ಕಾಡಹಾದಿಯಲ್ಲಿ, ಪ್ರತಿಕೂಲ ಹವಾಮಾನದಲ್ಲಿ, ಮಾಂಸ ಭಕ್ಷಕ ಪ್ರಾಣಿಗಳನ್ನು ಮುಖಾಮುಖಿಯಾಗುವುದು ತಮಾಷೆಯ ಮಾತಲ್ಲ. ಅಷ್ಟಾಗಿಯೂ ಅವರಿಗೆ ಅದರ ಬಗ್ಗೆ ಹೆಮ್ಮೆಯಿದೆ. ಖುಷಿಯಿದೆ.

ಪ್ರತಿಯೊಬ್ಬರೂ ಹುಲಿಗಳನ್ನು ಹುಡುಕಿಕೊಂಡೇನು ಬರುವುದಿಲ್ಲ. ಕೆಲವರಿಗೆ ಆನೆಗಳು, ಕೆಲವರಿಗೆ ಕಾಡೆಮ್ಮೆ, ಇನ್ನು ಕೆಲವರಿಗೆ ದಟ್ಟ ಹಸಿರು, ವೃಕ್ಷರಾಶಿ ಎಂದರೆ ಇಷ್ಟ. ಕೆಲವರು ಕೀಟ, ಹಕ್ಕಿಗಳನ್ನು ಹುಡುಕಿಕೊಂಡು ಬರುತ್ತಾರೆ. ಜೀವನದಲ್ಲಿ ಸಿಗುವ ಇಂತಹ ಸಣ್ಣ ಸಣ್ಣ ಖುಷಿಗಳಿಗೆ ಸರಿಸಾಟಿಯಾದುದು ಯಾವುದೂ ಇಲ್ಲ. ಯಾಕೆಂದರೆ ನಮ್ಮ ಸಫಾಸಿ ಬಸ್ಸು ಸರಿಸುಮಾರು 20 ನಿಮಿಷ ಒಂದೆಡೆ ನಿಂತಾಗ ಅಲ್ಲಿ ಕಂಡ ದೃಶ್ಯ. ಅಲ್ಲಿ ಕಿಂಗ್-ಫಿಶರ್ ಜೋಡಿಗಳು ಸಲ್ಲಾಪದಲ್ಲಿ ತೊಡಗಿದ್ದವು. ಅದನ್ನು ನೋಡಿ ನಾವು ನಿಜಕ್ಕೂ ಮಂತ್ರಮುಗ್ಧರಾದೆವು.

ಮೋಹನ ಕುಮಾರ ಅವರು ಒಂದು ಸೆಷನ್ ನಲ್ಲಿ ಹೇಳುವಂತೆ ಈ ಕಾಡಹಾದಿಯಲ್ಲಿ ಮಂದಗತಿಯನ್ನು ನಡೆಯುವುದು, ವಿರಮಿಸುವುದು, ಉಸಿರು ಬಿಗಿಹಿಡಿದು ಸಣ್ಣ ಸಣ್ಣ ಸಂಗತಿಗಳನ್ನು ಗಮನಿಸುವುದರಲ್ಲಿಯೇ ಇದರ ಭವ್ಯತೆ ಅಡಗಿದೆ. ಅದು ಹುಲಿ ಇರಲಿ, ಕಪ್ಪೆಯೇ ಇರಲಿ. ನೀವು ಗಮನಿಸುವುದು, ಗ್ರಹಿಸುವುದು ಮುಖ್ಯ. ನೀವು ಏನನ್ನು ವೀಕ್ಷಿಸುತ್ತೀರೋ ಅದಷ್ಟೇ ನಿಮಗೆ ಲಭ್ಯ.

(ಮೂರು ದಿನಗಳ ಈ ಶಿಬಿರದ ಶುಲ್ಕ 9500 ರೂ. ಈ ಪ್ಯಾಕೇಜ್ ನಲ್ಲಿ ಊಟ, ಸಫಾರಿ ಮತ್ತು ಶೇರ್ ಮಾಡಿಕೊಳ್ಳುವ ವಸತಿ ವ್ಯವಸ್ಥೆ ಸೇರಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಬುಕ್ಕಿಂಗ್ ಮಾಡಲು bandipur-tr. ಎಂಬ Instagram ಪುಟವನ್ನು ಗಮನಿಸಿ. ಲೇಖಕರು ಈ ಕಾರ್ಯಕ್ರಮಕ್ಕಾಗಿ ಹಣ ಪಾವತಿಸಿದ್ದರು.)

 


Tags:    

Similar News