ಚಿನ್ನ ಕಳವು, ಕಿಕ್ಕಿರಿದ ಭಕ್ತ ಗಣ: ಮತ್ತೆ ರಣಾಂಗಣವಾದ ಶಬರಿಮಲೆ
ಶಬರಿಮಲೆ ದೇಗುಲದಲ್ಲಿ ನಡೆದಿದೆ ಎನ್ನಲಾದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧನಗಳು ಆಗುತ್ತಿದ್ದಂತೆ ಕೇರಳದಲ್ಲಿ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದೆ. ಇನ್ನೇನು ಸ್ಥಳೀಯ ಚುನಾವಣೆಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲೇ ವಿವಾದವು ಭುಗಿಲೆದ್ದಿರುವ ಕಾರಣ ಆಡಳಿತಾರೂಢ ಎಲ್.ಡಿ.ಎಫ್. ಇಕ್ಕಟ್ಟಿಗೆ ಸಿಕ್ಕಿದೆ
ಸದ್ಯ ತೀರ್ಥಯಾತ್ರೆಯ ಋತುವಿನಲ್ಲಿ ವ್ಯಸ್ತವಾಗಿರುವ ಶಬರಿಮಲೆ ಮತ್ತೊಮ್ಮೆ ತೀವ್ರ ರಾಜಕೀಯ ಸ್ವರೂಪದ ವಿಷಯವಾಗಿ ಮುನ್ನೆಲೆಗೆ ಬಂದಿದೆ. ಸ್ಥಳೀಯ ಸರ್ಕಾರದ ಚುನಾವಣೆಗಳ ಹೊಸ್ತಿಲಲ್ಲಿರುವ ಕೇರಳ ಇನ್ನೊಂದು ರಾಜಕೀಯದ ಜಂಗೀಕುಸ್ತಿಗೆ ಸಿದ್ಧವಾಗಿದೆ. ಸಾಮಾನ್ಯ ಚಿನ್ನ ಕಳ್ಳತನದ ತನಿಖೆಯೊಂದಿಗೆ ಪ್ರಾರಂಭವಾದದ್ದು ಈಗ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (LDF) ಮತ್ತು ವಿರೋಧ ಪಕ್ಷದ ಕೂಟಗಳ ನಡುವೆ ಬಹು-ಸ್ತರದ ಸಂಘರ್ಷವಾಗಿ ಪರಿಣಮಿಸಿದೆ.
ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಹಿರಿಯ ಸಿಪಿಐ(ಎಂ) ನಾಯಕರಾದ ಎ. ಪದ್ಮಕುಮಾರ್ ಮತ್ತು ಎನ್. ವಾಸು ಅವರ ಬಂಧನದ ನಂತರ ಎಲ್ಡಿಎಫ್-ಗೆ ದೊಡ್ಡ ಪೆಟ್ಟು ಬಿದ್ದಿದೆ. ಇಬ್ಬರೂ ಬೇರೆ ಬೇರೆ ಕಾಲದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದು, ದೇವಾಲಯದ ಮೂಲಸೌಕರ್ಯ ಮತ್ತು ಆಚರಣೆಗಳಿಗೆ ಸಂಬಂಧಿಸಿದ ಪ್ರಮುಖ ಕಾರ್ಯಗಳ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದರು. ಅವರ ಬಂಧನವು ವಿರೋಧ ಪಕ್ಷಗಳಿಗೆ ಎಡಪಂಥೀಯರ ವಿರುದ್ಧ ಪ್ರಹಾರ ನಡೆಸಲು ರಾಜಕೀಯ ಅಸ್ತ್ರ ನೀಡಿದಂತಾಗಿದೆ. ವಿಶೇಷವಾಗಿ ಲಕ್ಷಾಂತರ ಅಯ್ಯಪ್ಪ ಭಕ್ತರು ಗಿರಿಧಾಮದ ದೇವಾಲಯಕ್ಕೆ ಧಾವಿಸುತ್ತಿರುವ ಈ ಸಮಯದಲ್ಲಿ ಇದು ವಿವಾದದ ಕೇಂದ್ರವಾಗಿರುವುದು ಮುಜುಗರಕ್ಕೆ ಕಾರಣವಾಗಿದೆ.
ಈ ಬಾರಿಯ ಮಂಡಲ ಋತುವಿನ ಆರಂಭದ ದಿನ ಲಕ್ಷಾಂತರ ಭಕ್ತ ಸಮೂಹ ಏಕಾಏಕಿ ದೇವಾಲಯಕ್ಕೆ ಆಗಮಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬಿಗಿಯಾದ ಪ್ರತಿಪಕ್ಷದ ಹಿಡಿತ
ಈ ಪ್ರಕರಣಕ್ಕೆ ಸಂಬಂಧಿಸಿದ ರಾಜಕೀಯ ಚರ್ಚೆಗಳಲ್ಲಿ ಮಾಜಿ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರ ಹೆಸರು ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಆಡಳಿತಾರೂಢ ರಂಗದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಯಾಕೆಂದರೆ ಅವರ ಅವಧಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಹಿರಿಯ ಅಧಿಕಾರಿಗಳು ಮತ್ತು ಮಂಡಳಿಯ ಸದಸ್ಯರನ್ನು ಒಳಗೊಂಡಿರುವ ಈ ಹಗರಣದಿಂದ ಅವರು ದೂರ ಸರಿಯಲು ಸಾಧ್ಯವಿಲ್ಲ ಎಂಬುದು ವಿರೋಧ ಪಕ್ಷದ ವಾದ. ಅವರ ವಿರುದ್ಧದ ತನಿಖೆಯ ಅಧಿಕೃತ ದೃಢೀಕರಣವಿಲ್ಲದಿದ್ದರೂ, ರಾಜಕೀಯ ಚರ್ಚೆಯಲ್ಲಿ ಅವರ ಹೆಸರು ಕೇಳಿಬಂದಿರುವುದು ವಿರೋಧ ಪಕ್ಷಕ್ಕೆ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಲು ಅವಕಾಶ ಸಿಕ್ಕಂತಾಗಿದೆ.
ಹಾಗಿದ್ದೂ ಪದ್ಮಕುಮಾರ್ ಅವರ ಕುರಿತಂತೆ ನ್ಯಾಯಾಲಯಕ್ಕೆ ಸಲ್ಲಿಸಲಾದ ಎಸ್ಐಟಿ ರಿಮ್ಯಾಂಡ್ ವರದಿಯ ಪ್ರಕಾರ, ಅವರು ಅಧಿಕೃತ ದಾಖಲೆಗಳನ್ನು ತಿರುಚಿ, ಉನ್ನಿಕೃಷ್ಣನ್ ಪೋಟ್ಟಿ ಅವರಿಗೆ ಚಿನ್ನದ ಬಾಗಿಲಿನ ಚೌಕಟ್ಟುಗಳನ್ನು ಕಿತ್ತುಹಾಕಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಆಡಳಿತಾತ್ಮಕ ವೈಫಲ್ಯಕ್ಕೆ ಪುರಾವೆ
ಯುಡಿಎಫ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಮ್ಮ ಕೈಗೆ ಸಿಕ್ಕ ಇಂತಹ ಅಪರೂಪದ ಅವಕಾಶವನ್ನು ಅಸಾಮಾನ್ಯ ಆಕ್ರಮಣಶೀಲ ನಿಲುವಿನೊಂದಿಗೆ ಬಳಸಿಕೊಂಡಿವೆ. ಈ ಎರಡೂ ರಂಗಗಳ ನಾಯಕರು ಸಾರ್ವಜನಿಕ ಸಭೆ ಮತ್ತು ಮಾಧ್ಯಮ ಸಂವಾದಗಳಲ್ಲಿ ಪ್ರಕರಣದಲ್ಲಿ ಭಾಗಿಯಾದ ಸಿಪಿಐ(ಎಂ) ಸದಸ್ಯರನ್ನು ಬಹಿರಂಗವಾಗಿ 'ಅಯ್ಯಪ್ಪನ ಚಿನ್ನದ ಕಳ್ಳರು' ಎಂದು ಯಾವುದೇ ಬಿಢೆ ಇಲ್ಲದೇ ಕರೆಯುತ್ತಿದ್ದಾರೆ. ಅವರು ಬಳಸುತ್ತಿರುವ ಭಾಷೆಯು ಇತ್ತೀಚೆಗೆ ಹೆಚ್ಚು ತೀಕ್ಷ್ಣವಾಗಿದೆ, ಇದು ಅವರ ಚುನಾವಣಾ ತಂತ್ರದ ಕೇಂದ್ರಬಿಂದುವಾಗಿದೆ ಎಂಬುದು ನಿಸ್ಸಂದೇಹ. ನಿರ್ದಿಷ್ಟವಾಗಿ ಬಿಜೆಪಿಯು, ದೇವಸ್ಥಾನಗಳಿಗೆ ಹೋಗುವ ಹಿಂದೂ ಮತದಾರರ ವಿಶ್ವಾಸಕ್ಕೆ ಎಡಪಂಥೀಯರು ದ್ರೋಹ ಎಡಗಿದ್ದಾರೆ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿಲ್ಲ. ಕಾಂಗ್ರೆಸ್ ಕೂಡ ಅದೇ ಧಾಟಿಯಲ್ಲಿ ಮಾತನಾಡುತ್ತಿದ್ದರೂ, ಈ ಹಗರಣವು ವ್ಯಾಪಕ ಮಟ್ಟದ ಆಡಳಿತಾತ್ಮಕ ವೈಫಲ್ಯಕ್ಕೆ ಪುರಾವೆಯಾಗಿದೆ ಎಂಬುದನ್ನು ಸೇರಿಸುವುದನ್ನು ಮರೆಯುವುದಿಲ್ಲ. ಜೊತೆಗೆ ಎಲ್ಡಿಎಫ್ ಅಧೀನದಲ್ಲಿ ದೇವಸ್ವಂ ಆಡಳಿತದ ಬಗ್ಗೆ ಹೆಚ್ಚು ಸಾಂಸ್ಥಿಕ ವಿಮರ್ಶೆ ನಡೆಯಬೇಕು ಎಂಬ ಪ್ರಯತ್ನದಲ್ಲಿ ತೊಡಗಿದೆ.
"ಇಂತಹ ಲೂಟಿಯನ್ನು ಸಚಿವರು ಸೇರಿದಂತೆ ಹಿರಿಯ ನಾಯಕರ ಬೆಂಬಲದೊಂದಿಗೆ ಸಿಪಿಐ(ಎಂ) ನೇತೃತ್ವದ ಮಂಡಳಿಯು ನಡೆಸಿದೆ ಎಂದು ನಾವು ನಿರಂತರವಾಗಿ ಪ್ರತಿಪಾದಿಸುತ್ತ ಬಂದಿದ್ದೇವೆ. ಮುಖ್ಯಮಂತ್ರಿಗಳು ಇದರ ಹೊಣೆ ಹೊರಬೇಕು,” ಎಂದು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಹೇಳಿದ್ದಾರೆ. "ಚಿನ್ನದ ಕಳ್ಳತನದಲ್ಲಿ ಭಾಗಿಯಾದವರು ಜೈಲಿಗೆ ಹೋಗುವ ದಾರಿಯಲ್ಲಿ ಮೆರವಣಿಗೆ ನಡೆಸುತ್ತಿರುವಾಗ, ಮುಖ್ಯಮಂತ್ರಿಗಳು ಏಕೆ ಮೌನವಾಗಿದ್ದಾರೆ?" ಎಂದು ಅವರು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ, "ಉಪ್ಪು ತಿಂದವರು ನೀರು ಕುಡಿಯಲೇಬೇಕು" ಎಂಬ ನಿಲುವನ್ನು ಸಿಪಿಐ(ಎಂ) ಕಾಯ್ದುಕೊಂಡಿದೆ, ಅಂದರೆ ತಪ್ಪಿತಸ್ಥರು ಯಾರೇ ಆಗಿದ್ದರೂ ಪರಿಣಾಮ ಎದುರಿಸಲೇಬೇಕಾಗುತ್ತದೆ. "ಈ ತಪ್ಪು ಕೆಲಸಗಳಲ್ಲಿ ಭಾಗಿಯಾದ ಯಾರನ್ನೂ ನಾವು ರಕ್ಷಿಸುವುದಿಲ್ಲ," ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಹೇಳಿದ್ದಾರೆ.
ತನಿಖೆಯನ್ನು ನಡೆಸಿರುವುದು ಯಾವುದೇ ಕೇಂದ್ರ ಸಂಸ್ಥೆಯಲ್ಲ, ಬದಲಾಗಿ ಕೇರಳ ಪೊಲೀಸರು, ಮತ್ತು ನ್ಯಾಯಾಲಯವು ತನಿಖೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ. "ಬಂಧನ ಮಾಡಿದ ಕಾರಣಕ್ಕೆ ಅವರು ತಪ್ಪಿತಸ್ಥರಾಗಿದ್ದಾರೆ ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ. ಹಾಗಿದ್ದೂ ಅವರು ತಪ್ಪಿತಸ್ಥರೆಂದು ಕಂಡುಬಂದರೆ, ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ," ಎಂದು ಗೋವಿಂದನ್ ಹೇಳಿದರು.
ದೇಗುಲದಲ್ಲಿ ನಡೆದಿದೆ ಎನ್ನಲಾದ ಚಿನ್ನ ಕಳವು ಪ್ರಕರಣದ ತನಿಖೆಗಾಗಿ ಶಬರಿಮಲೆ ದೇಗುಲಕ್ಕೆ ಆಗಮಿಸಿರುವ ವಿಶೇಷ ತನಿಖಾ ದಳದ ಸದಸ್ಯರು
ಲಕ್ಷಾಂತರ ಭಕ್ತರು-ನಿಭಾಯಿಸುವಲ್ಲಿ ಹೈರಾಣ
ಮಂಡಲ ಋತುವಿನ ಆರಂಭದ ದಿನದಿಂದಲೇ ಜನಸಮೂಹದ ನಿರ್ವಹಣೆಯಲ್ಲಿ ಆಗಿರುವ ಲೋಪಗಳಿಂದಾಗಿ ಶಬರಿಮಲೆ ವಿವಾದವು ಕೆರಳಿ ಕೆಂಡವಾಗಿತ್ತು. ಮೊದಲ ದಿನವೇ ಒಂದು ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ದೇಗುಲವನ್ನು ತಲುಪಿದ್ದರು ಮತ್ತು ಕೆಲವು ಗಂಟೆಗಳ ಕಾಲ ಪರಿಸ್ಥಿತಿ ಬಹುತೇಕ ಕೈಮೀರಿ ಹೋಗಿತ್ತು. ಪೋಲೀಸ್ ಮತ್ತು ದೇವಸ್ವಂ ಅಧಿಕಾರಿಗಳ ಹಸ್ತಕ್ಷೇಪದ ನಂತರ ಅಂತಿಮವಾಗಿ ಭಕ್ತರ ಹರಿವು ತಹಬಂದಿಗೆ ಬಂದಿತ್ತು, ಆದರೆ ಜಾಮ್ ಆಗಿದ್ದ ಮಾರ್ಗಗಳು ಮತ್ತು ಅಸ್ತವ್ಯಸ್ತಗೊಂಡ ಸರತಿ ಸಾಲುಗಳ ದೃಶ್ಯಗಳು ವ್ಯಾಪಕ ಪ್ರಮಾಣದಲ್ಲಿ ಹರಿದಾಡಿದವು. ಪರಿಸ್ಥಿತಿ ಮೂರನೇ ದಿನದೊಳಗೆ ಸುಧಾರಿಸಿದರೂ, ಮೊದಲ ದಿನದ ಈ ಆಡಳಿತ ಲೋಪ ವಿರೋಧ ಪಕ್ಷಕ್ಕೆ ಅಸ್ತ್ರವಾಗಿ ಪರಿಣಮಿಸಿತು. ಇಂತಹ ತೀರ್ಥಯಾತ್ರೆಯ ಋತುವಿನಲ್ಲಿ ಸರ್ಕಾರವು ತನ್ನ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಲು ಅವಕಾಶ ಕೊಟ್ಟಂತಾಯಿತು.
ಹೀಗೆ ಸರಣಿ ಆರೋಪಗಳ ಕಾರಣದಿಂದಾಗಿ ಶಬರಿಮಲೆ ಸುತ್ತಲಿನ ಪ್ರತಿಯೊಂದು ಬೆಳವಣಿಗೆಯನ್ನು ರಾಜಕೀಯವಾಗಿ ವ್ಯಾಖ್ಯಾನಿಸುವ ವಾತಾವರಣ ಉಂಟಾಗಿದೆ. ಇದು ಸ್ಥಳೀಯ ಸ್ವಾಯತ್ತ ಸರ್ಕಾರದ ಚುನಾವಣೆಗಳ ಮುನ್ನ ನಡೆಯುತ್ತಿರುವ ವಿದ್ಯಮಾನವಾದ ಕಾರಣ, ಆಡಳಿತಾರೂಢ ರಂಗವು ತನ್ನ ಆಡಳಿತಾತ್ಮಕ ಸಾಮರ್ಥ್ಯದ ಕುರಿತು ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಾಗಿದೆ. ಆದರೆ, ಶಬರಿಮಲೆ ವಿವಾದವು ಅಕಾಲದಲ್ಲಿ ಮೇಲೆದ್ದು ಕುಳಿತಿದೆ.
ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಈ ಶಬರಿಮಲೆ ವಿವಾದವನ್ನು ಹಿಂದೂ ಮತದಾರರನ್ನು ಕ್ರೋಢೀಕರಿಸಲು ಸಿಕ್ಕ ಅವಕಾಶ ಎಂಬಂತೆ ನೋಡುತ್ತಿವೆ, ವಿಶೇಷವಾಗಿ ಎಲ್ಡಿಎಫ್ ಸಮುದಾಯದ ಕೆಲವು ವಿಭಾಗಗಳಲ್ಲಿ ಒಡಕು ಧ್ವನಿಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿಯೇ ಈ ವಿವಾದವು ದೊಡ್ಡ ತಲೆನೋವಿಗೆ ಕಾರಣವಾಗಿದೆ.
ಹಾಗಾಗಿ ಇಲ್ಲಿನ ರಾಜಕೀಯ ವಾತಾವರಣವು ಗೊಂದಲದಿಂದ ಕೂಡಿದೆ. ರಾಜಕೀಯ ಪಕ್ಷಗಳು ತಮ್ಮ ಆದ ಕಥೆಗಳನ್ನು ಹೆಣೆಯುತ್ತಿವೆ. ಒಂದು ಕಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಗಳು ನಡೆಯುತ್ತಿವೆ. ಇನ್ನೊಂದು ಕಡೆ ರಾಜಕೀಯ ಪ್ರಹಾರಗಳು ಅವ್ಯಾಹತವಾಗಿವೆ. ಇನ್ನೂ ಒಂದು ಕಡೆ ಇದರಲ್ಲಿ ರಾಜಕೀಯ ಮಾಡುವಂತಹುದು ಏನೂ ಇಲ್ಲ, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದು ಎಂದು ಆಡಳಿತಾರೂಢ ಎಲ್.ಡಿ.ಎಫ್ ಹೇಳಿಕೊಂಡಿದೆ.
ಕಳೆದ ಅನೇಕ ವರ್ಷಗಳಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವು ನಂಬಿಕೆ, ಅಸ್ತಿತ್ವ ಲಿಂಗ ಸಂಬಂಧಿ ವಿಚಾರಗಳಿಂದ ಇಡೀ ವಿಶ್ವದ ಗಮನವನ್ನು ಸೆಳೆಯುತ್ತಿದೆ.
ಇದು ಚುನಾವಣೆಯ ಸಮಯ
ಇವೆಲ್ಲದರ ನಡುವೆ ಕೇರಳದ ರಾಜಕೀಯ ಕಲ್ಪನೆಯಲ್ಲಿ ಶಬರಿಮಲೆಯ ಸ್ಥಾನಮಾನವನ್ನು ಒಳಗೊಂಡಿರುವ ಗುಪ್ತಗಾಮಿನಿಯೊಂದು ಯಾವತ್ತೂ ಹರಿಯುತ್ತಿರುತ್ತದೆ. ಕಳೆದ ಅನೇಕ ವರ್ಷಗಳಿಂದ, ಈ ದೇವಾಲಯವು ನಂಬಿಕೆ, ಅಸ್ತಿತ್ವ, ಲಿಂಗ ಸಂಬಂಧಿ ಚರ್ಚೆಗಳು ಮತ್ತು ಚುನಾವಣಾ ತಂತ್ರವನ್ನು ಛೇದಿಸುವ ಒಂದು ಸಾಂಕೇತಿಕ ಅಕ್ಷರೇಖೆಯಾಗಿ ಕಾರ್ಯನಿರ್ವಹಿಸಿದೆ. ಪ್ರಸ್ತುತ ವಿವಾದವು ಕೂಡ ಅಷ್ಟು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುತ್ತದೆ. ಸ್ಥಳೀಯ ಸ್ವಾಯತ್ತ ಸರ್ಕಾರದ ಚುನಾವಣೆ ಸಮಯವಾದ್ದರಿಂದ ವಿವಾದದ ಪಾಲು ಹೆಚ್ಚೇ ಇರುತ್ತದೆ.
ಎಲ್ಡಿಎಫ್ ಒಂದು ಕಡೆ ತನ್ನ ಸಾಂಸ್ಥಿಕ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಬೇಕಾಗಿದೆ. ಜೊತೆಗೆ ಹೇಳಿಕೇಳಿ ಸೂಕ್ಷ್ಮ ಧಾರ್ಮಿಕ ಋತುವಿನಲ್ಲಿಉಂಟಾಗಬಹುದಾದ ಪರಿಣಾಮಗಳನ್ನು ನಿರ್ವಹಿಸುವ ದ್ವಂದ್ವ ಸವಾಲನ್ನು ಎದುರಿಸುತ್ತಿದೆ. ಭಕ್ತರ ಕಡೆಗೆ ಯಾವುದೇ ಅಗೌರವದ ಗ್ರಹಿಕೆಯು ಸಾಂಪ್ರದಾಯಿಕ ಹಿಂದೂ ಮತದಾರರ ಬೆಂಬಲದಲ್ಲಿ ಕುಸಿತ ಉಂಟಾಗಬಹುದು, ಈ ಗುಂಪನ್ನು ಎಡಪಕ್ಷವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ಓಲೈಸುತ್ತಿದೆ ಎಂಬುದು ಗಮನಾರ್ಹ. ಅದೇ ಸಮಯದಲ್ಲಿ, ಧಾರ್ಮಿಕ ವಿಚಾರದಲ್ಲಿ ತೀರಾ ಆಕ್ರಮಣಕಾರಿಯಾಗಿ ವರ್ತಿಸಿದರೆ, ಅದು ಇತರ ಸಮುದಾಯಗಳು ದೂರವಿಡಬಹುದು ಮತ್ತು ಪ್ರತಿದಾಳಿಗೆ ಕಾರಣವಾಗಬಹುದು. ಹೀಗಾಗಿ ಆಡಳಿತಾರೂಢ ಎಲ್.ಡಿ.ಎಫ್ ಈ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕಾಗಿದೆ ಎಂಬುದಂತೂ ದಿಟ.
ಈ ಪ್ರಕರಣದಲ್ಲಿ ಎಸ್ಐಟಿ ತನ್ನ ತನಿಖೆಯನ್ನು ಮುಂದುವರೆಸುತ್ತಿದ್ದಂತೆ, ಹೆಚ್ಚಿನ ವಿವರಗಳು ಹೊರಬೀಳುವ ನಿರೀಕ್ಷೆಯಿದೆ. ಇದರಿಂದ ಹೊರಹೊಮ್ಮುವ ಪ್ರತಿಯೊಂದು ಹೊಸ ಸಂಗತಿಗಳು ಕೂಡ ರಾಜಕೀಯ ದೃಷ್ಟಿಕೋನದ ಮೂಲಕವೇ ವ್ಯಾಖ್ಯಾನಗೊಳ್ಳುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸರ್ಕಾರದ ಚುನಾವಣಾ ಪ್ರಚಾರವು ತೀವ್ರಗೊಳ್ಳುವ ನಿರೀಕ್ಷೆಯಿದೆ ಮತ್ತು ಶಬರಿಮಲೆ ಭಾಷಣಗಳು ಮತ್ತು ಚರ್ಚೆಗಳಲ್ಲಿ ಕೇಂದ್ರೀಯ ವಿಷಯವಾಗಿ ಉಳಿಯಲಿದೆ. ವಿರೋಧ ಪಕ್ಷವು ಸರ್ಕಾರದ ಭ್ರಷ್ಟಾಚಾರ, ಹೊಣೆಗೇಡಿತನ ಮತ್ತು ಆಡಳಿತ ವೈಫಲ್ಯಗಳ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸುತ್ತದೆ. ಆದರೆ, ಆಡಳಿತಾರೂಢ ರಂಗವು ವಿವಾದವನ್ನು ಸರಿಯಾದ ಪ್ರಕ್ರಿಯೆ, ಆಡಳಿತಾತ್ಮಕ ಸುಧಾರಣೆಗಳು ಮತ್ತು ಕೋಮು ಧ್ರುವೀಕರಣದ ಅಪಾಯದ ಕಡೆಗೆ ವಾಲದಂತೆ ತಡೆಯುವ ಜವಾಬ್ದಾರಿಯನ್ನು ಹೊಂದಿದೆ.