ಐಟಿ ಸಿಟಿಯಲ್ಲೊಂದು ಕಲಾ ಪಯಣ: ನೀವು ಭೇಟಿ ನೀಡಲೇಬೇಕಾದ ಹತ್ತು ಆರ್ಟ್ ಗ್ಯಾಲರಿ, ಮ್ಯೂಸಿಯಂಗಳು

ಬೆಂಗಳೂರಿನ ಸುತ್ತಮುತ್ತ ಇರುವ ಭಿನ್ನ-ವಿಭಿನ್ನ ಕಲಾ ಗ್ಯಾಲರಿಗಳನ್ನು ನೀವು ನೋಡಿದ್ದೀರಾ? ನಿಮ್ಮೊಳಗೊಂದು ಕಲಾ ಮನಸ್ಸು ಜಾಗೃತವಾಗಿದೆ ಅನ್ನುವುದಾದರೆ ಒಂದು ಅಥವಾ ಎರಡು ದಿನದ ಕಲಾ ಟೂರ್ ನಡೆಸಲು ಇಲ್ಲಿದೆ ಕಲಾ ಮಾರ್ಗದರ್ಶಿ...

Update: 2025-11-20 00:30 GMT
ವೆಂಕಟಪ್ಪ ಆರ್ಟ್‌ ಗ್ಯಾಲರಿಯ ಒಂದು ನೋಟ.

ನವದೆಹಲಿ ಮತ್ತು ಮುಂಬೈ ಬಹಳ ಹಿಂದಿನಿಂದಲೂ ಜಹಾಂಗೀರ್ ಆರ್ಟ್ ಗ್ಯಾಲರಿಯಂತಹ ಸಂಸ್ಥೆಗಳೊಂದಿಗೆ ಭಾರತೀಯ ಸಮಕಾಲೀನ ಕಲಾ ಚಳುವಳಿಯ ಜೊತೆ ತಳಕು ಹಾಕಿಕೊಂಡಿದೆ. ಡಿಎಜಿ ಅಥವಾ ನೇಚರ್ ಮೋರ್ಟೆಯಂತಹ ಕಲಾ ಕೇಂದ್ರಗಳು ನಿರಂತರವಾಗಿ ಸಂದರ್ಶಕರನ್ನು ಆಕರ್ಷಿಸುತ್ತವೆ.

ಈಗ ಬೆಂಗಳೂರು ಅವುಗಳ ಸಾಲಿಗೆ ಸೇರುವ ಪ್ರಯತ್ನ ನಡೆಸಿದೆ. ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಫಿ (MAP) ಯಂತಹ ಹೊಸ ಪ್ರವೇಶಗಳು ಮತ್ತು ಬಹಳ ದೊಡ್ಡ ಇತಿಹಾಸವನ್ನು ಹೊಂದಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯಂತಹ ಸಂಸ್ಥೆಗಳು ನಗರದ ಮಹತ್ವಾಕಾಂಕ್ಷೆ ಅರಳುವಂತೆ ಮಾಡಿವೆ.

ಇಲ್ಲಿ ಪಟ್ಟಿ ಮಾಡಲಾದ 10 ಪ್ರಮುಖ ಆರ್ಟ್ ಗ್ಯಾಲರಿಗಳು ಮತ್ತು ವಸ್ತುಸಂಗ್ರಹಾಲಯಗಳ ಜೊತೆಗೆ, ಕೈಂಕಿಣಿ ಆರ್ಟ್ ಗ್ಯಾಲರಿ (Kynkyny Art Gallery), ಆರ್ಟ್ ಹೌಸ್ (Art Houz) ಮತ್ತು ಟೈಮ್ ಅಂಡ್ ಸ್ಪೇಸ್ (Time and Space) (ಕಲಾ ಸಂಗ್ರಾಹಕಿ ರೇಣು ಜಾರ್ಜ್ ಅವರು ಸ್ಥಾಪಿಸಿದ್ದು) ಸೇರಿದಂತೆ ಹಲವಾರು ಕಲಾ ಸ್ಥಳಗಳು ಸಾರ್ವಜನಿಕರಿಗಾಗಿ ಕಲಾ ಪ್ರದರ್ಶನಗಳನ್ನು ನಿರಂತರವಾಗಿ ಆಯೋಜಿಸುತ್ತ ಬಂದಿವೆ.

ನಗರದ ಕಲಾತ್ಮಕ ಪಯಣವು ಅದರ ಕೇಂದ್ರ ಭಾಗದಿಂದಲೇ ಆರಂಭವಾಗುತ್ತದೆ. ಮ್ಯೂಸಿಯಂ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ ಗ್ಯಾಲರಿ ಮತ್ತು ಸರ್ಕಾರಿ ವಸ್ತುಸಂಗ್ರಹಾಲಯದಿಂದ ಹೆಜ್ಜೆ ಹಾಕೋಣ. ನಂತರ MAP ಕಡೆಗೆ ಮುಂದುವರಿಯಬಹುದು. ಮಧ್ಯಾಹ್ನದ ಊಟ ಮುಗಿಸಿದ ಬಳಿಕ, ಎರಡು ಮಾರ್ಗಗಳಲ್ಲಿ ಒಂದನ್ನು ಆರಿಸಿಕೊಳ್ಳಿ: ಎಂಕೆಎಫ್ ಮ್ಯೂಸಿಯಂ ಆಫ್ ಆರ್ಟ್ ಮತ್ತು ಟೈಮ್ ಅಂಡ್ ಸ್ಪೇಸ್ ಗೆ ಭೇಟಿ ನೀಡಲು ಅಲ್ಲೇ ಹತ್ತಿರದಲ್ಲಿರುವ ಲಾವೆಲ್ಲೆ ರಸ್ತೆಗೆ ತೆರಳಿ, ಅಥವಾ ಶಾಂತಿರೋಡ್ ಸ್ಟುಡಿಯೋ ಗ್ಯಾಲರಿ ಮತ್ತು ಗ್ಯಾಲರಿ ಸುಮುಖಕ್ಕಾಗಿ ಡಬಲ್ ರಸ್ತೆಯತ್ತ ಸಾಗಬಹುದು. ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ಪರಿಶೀಲಿಸಲು ಚಾಲ್ತಿಯಲ್ಲಿರುವ ಪ್ರದರ್ಶನಗಳ ಬಗ್ಗೆ ಮುಂಚಿತವಾಗಿ ಗಮನ ಹರಿಸಿ. ಇದಕ್ಕೆ ಪರ್ಯಾಯವಾಗಿ, ಆ ಮಧ್ಯಾಹ್ನವನ್ನು ಎನ್‌ಜಿಎಂಎ (NGMA) ಮತ್ತು ಚಿತ್ರಕಲಾ ಪರಿಷತ್‌ನಲ್ಲಿ ಕಳೆಯುವ ಪ್ಲಾನ್ ಕೂಡ ರೂಪಿಸಬಹುದು. ಸಮಯವಿದ್ದರೆ, ಉಳಿದ ಸ್ಥಳಗಳನ್ನು 2ನೇ ದಿನಕ್ಕೆ ಉಳಿಸಿಕೊಳ್ಳಿ.

MKF ಮ್ಯೂಸಿಯಂ ಆಫ್ ಆರ್ಟ್

ನಗರದ ಹೃದಯಭಾಗವಾದ ಲಾವೆಲ್ಲೆ ರಸ್ತೆಯಲ್ಲಿರುವ ಎಂಕೆಎಫ್ ಮ್ಯೂಸಿಯಂ ಆಫ್ ಆರ್ಟ್ ಅನ್ನು 2018ರಿಂದ ದಿವಂಗತ ಮಂಜುಶ್ರೀ ಖೈತಾನ್ ಅವರ ಅಪೇಕ್ಷೆಯ ಮೇರೆಗೆ ಮಂಜುಶ್ರೀ ಖೈತಾನ್ ಫೌಂಡೇಶನ್ ನಡೆಸುತ್ತಿದೆ. ಇದು ಎಂ.ಎಫ್. ಹುಸೇನ್, ಜಾಮಿನಿ ರಾಯ್, ಲಾಲು ಪ್ರಸಾದ್ ಶಾ, ಬಾಲನ್ ನಂಬಿಯಾರ್ ಮತ್ತು ಯೂಸುಫ್ ಅರಕ್ಕಲ್ ಅವರ ಕೃತಿಗಳು ಸೇರಿದಂತೆ ಆಧುನಿಕ ಮತ್ತು ಸಮಕಾಲೀನ ಕೃತಿಗಳ ಗಮನಾರ್ಹ ಖಾಸಗಿ ಸಂಗ್ರಹವನ್ನು ಹೊಂದಿದೆ. ಈ ಗ್ಯಾಲರಿಯು ಸಮಕಾಲೀನ ಕಲಾವಿದರ ಪ್ರದರ್ಶನಗಳನ್ನು ಕೂಡ ನಿರಂತರವಾಗಿ ಆಯೋಜಿಸುತ್ತದೆ, ಇದು ನಗರದ ಕಲಾ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ರಸ್ತೆಯ ಎದುರುಗಡೆ, ಸುದೀರ್ಘ ಇತಿಹಾಸ ಹೊಂದಿರುವ ಮತ್ತು ಈಗ ಆಧುನಿಕ ಕಟ್ಟಡದಲ್ಲಿರುವ ಟೈಮ್ ಅಂಡ್ ಸ್ಪೇಸ್, ಸಂಗ್ರಾಹಕರು ಮತ್ತು ಕಲಾ ಪೋಷಕರಿಗೆ ಒಂದು ಪ್ರಮುಖ ತಾಣವಾಗಿದೆ.

ವಿಳಾಸ: 55/1, ಲಾವೆಲ್ ರಸ್ತೆ, ಸೋಡಾ ಬಾಟಲ್ ಓಪನರ್ ವಾಲಾ ಎದುರು, ಶಾಂತಲಾ ನಗರ, ಅಶೋಕ ನಗರ, ಬೆಂಗಳೂರು, ದೂರವಾಣಿ: +919019276294, ತೆರೆಯುವ ಸಮಯ: ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 11:00ರಿಂದ ಸಂಜೆ 6:30ರವರೆಗೆ. ಸೋಮವಾರ ಮುಚ್ಚಿರುತ್ತದೆ.

ವೆಂಕಟಪ್ಪ ಆರ್ಟ್ ಗ್ಯಾಲರಿ

ಇದೀಗ ನವೀಕರಿಸಲಾಗಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯು ನಗರದ ಎರಡು ಹೆಗ್ಗುರುತುಗಳ ಪಕ್ಕದಲ್ಲಿದೆ: ಅವು ಕ್ಯೂಬನ್ ಪಾರ್ಕ್ ಮತ್ತು ದಕ್ಷಿಣ ಭಾರತದ ಅತಿ ಹಳೆಯ ವಸ್ತುಸಂಗ್ರಹಾಲಯವಾದ ಸರ್ಕಾರಿ ವಸ್ತುಸಂಗ್ರಹಾಲಯ. ಇದನ್ನು ಕರ್ನಾಟಕ ಸರ್ಕಾರವು 1966ರಲ್ಲಿ ಆರಂಭಿಸಿತು ಮತ್ತು ಅಂತಿಮವಾಗಿ 1975ರಲ್ಲಿ ಉದ್ಘಾಟಿಸಲಾಯಿತು. ವಿಎಜಿಯ ಖಾಯಂ ಸಂಗ್ರಹದಲ್ಲಿ ಕೆ. ವೆಂಕಟಪ್ಪ, ಕಲಾವಿದ-ಶಿಕ್ಷಕ ಕೆ.ಕೆ. ಹೆಬ್ಬಾರ್, ತಂದೆ-ಮಗನ ಜೋಡಿಯಾದ ನಿಕೋಲಸ್ ಮತ್ತು ಸ್ವೆಟೋಸ್ಲಾವ್ ರೋರಿಚ್ ಹಾಗೂ ಶಿಲ್ಪಿ ರಾಜಾರಾಮ್ ಅವರ ಕಲಾಕೃತಿಗಳಿವೆ. 1975 ರಿಂದ, ಈ ಗ್ಯಾಲರಿಯು ಕಲಾವಿದರಿಗೆ ಕೈಗೆಟುಕುವ ದರದಲ್ಲಿ ಪ್ರದರ್ಶನ ಸ್ಥಳವನ್ನು ಒದಗಿಸುವ ಮೂಲಕ ಅವರನ್ನು ಬೆಂಬಲಿಸುವ ಸುದೀರ್ಘ ಸಂಪ್ರದಾಯವನ್ನು ಕಾಯ್ದುಕೊಂಡು ಬಂದಿದೆ. ಇದು ಶೀಲಾ ಗೌಡ ಮತ್ತು ಎನ್. ಪುಷ್ಪಮಾಲಾ ಅವರಂತಹ ಹೆಸರಾಂತ ಕಲಾವಿದರ ವೃತ್ತಿಜೀವನವನ್ನು ಪ್ರಾರಂಭಿಸಲು ಸಹಾಯ ಮಾಡಿದೆ. ಸಂದರ್ಶಕರು ಇಲ್ಲಿನ ಕಮಲದ ಕೊಳದ ಬಳಿ ಕುಳಿತು ಚಿಂತನೆ ಮತ್ತು ಸಂಭಾಷಣೆಗಳಿಗೆ ಇಳಿಯಬಹುದು. ಈ ಸ್ಥಳವು ಅತ್ಯಂತ ಪ್ರಶಾಂತವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ನಿರ್ವಹಣೆ, ಕ್ಯುರೇಶನ್ ಮತ್ತು ನವೀಕರಣವನ್ನು ಖಾಸಗಿ ಫೌಂಡೇಶನ್ಗೆ ವರ್ಗಾಯಿಸುವ ಸರ್ಕಾರದ ಯೋಜನೆ ವಿರುದ್ಧ ಸ್ಥಳೀಯ ಕಲಾವಿದರು ಪ್ರತಿಭಟಿಸಿ, ಆ ಪ್ರತಿಭಟನೆಯಲ್ಲಿ ಅವರು ಜಯವನ್ನೂ ಸಾಧಿಸಿದರು.

ವಿಳಾಸ: ವೆಂಕಟಪ್ಪ ಆರ್ಟ್ ಗ್ಯಾಲರಿ ಕಟ್ಟಡ, ಕಸ್ತೂರಬಾ ರಸ್ತೆ, ಅಂಬೇಡ್ಕರ್ ವೀಧಿ, ಸಂಪಂಗಿ ರಾಮ ನಗರ, ಬೆಂಗಳೂರು

ದೂರವಾಣಿ: +91 80 2286 4483, ಗ್ಯಾಲರಿ ತೆರೆಯುವ ಸಮಯ: ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 10:00ರಿಂದ ಸಂಜೆ 5:00ರವರೆಗೆ. ಸೋಮವಾರ ಮುಚ್ಚಿರುತ್ತದೆ.

ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿ

ಸಂಕ್ಷಿಪ್ತವಾಗಿ MAP ಎಂದು ಕರೆಯಲ್ಪಡುವ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯು ಚಿತ್ರಕಲೆಗಳು, ಶಿಲ್ಪಕಲೆಗಳು, ಜವಳಿ, ಛಾಯಾಚಿತ್ರಗಳು ಮತ್ತು ಇತರ ಅನೇಕ ವಸ್ತುಗಳ ವಿಸ್ತಾರವಾದ ಸಂಗ್ರಹವನ್ನು ಹೊಂದಿದೆ. ಈ ಸಂಗ್ರಹದಲ್ಲಿನ ಕೆಲವು ಕಲಾಕೃತಿಗಳು 10ನೇ ಶತಮಾನದಷ್ಟು ಹಳೆಯವು. 2023ರಲ್ಲಿ ಉದ್ಘಾಟನೆಯಾದ ಈ ಆರು ಅಂತಸ್ತಿನ ವಸ್ತುಸಂಗ್ರಹಾಲಯವು ತನ್ನ ಗ್ಯಾಲರಿಗಳನ್ನು ಶಾಶ್ವತ ಸಂಗ್ರಹಗಳು ಮತ್ತು ಕಾಲಕಾಲಕ್ಕೆ ಬದಲಾಗುವ ಪ್ರದರ್ಶನಗಳು ಎರಡಕ್ಕೂ ಮೀಸಲಿಟ್ಟಿದೆ. ಅಲ್ಲದೆ, ಇದು ನೆಲ ಮಹಡಿಯಲ್ಲಿ ಉತ್ತಮವಾಗಿ ಸಂಗ್ರಹಿಸಲಾದ ಉಡುಗೊರೆ ಅಂಗಡಿಯೂ ಇದೆ.

ಇದರ ಸಂಸ್ಥಾಪಕರು, ಕಲಾ ಸಂಗ್ರಾಹಕ ಅಭಿಷೇಕ್ ಪೊದ್ದಾರ್, ಈ ಹಿಂದೆ ತಸ್ವೀರ್ ಆರ್ಟ್ ಗ್ಯಾಲರಿಯನ್ನು ಸ್ಥಾಪಿಸಿದ್ದರು. ನಂತರ ಹೆಚ್ಚಿನ ಪ್ರೇಕ್ಷಕರಿಗೆ ಕಲೆಯನ್ನು ಸುಲಭವಾಗಿ ತಲುಪಿಸುವ ದೃಷ್ಟಿಯಿಂದ MAP ರೂಪಿಸುವ ನಿರ್ಧಾರಕ್ಕೆ ಬಂದರು. ಪ್ರಸ್ತುತ, ಕಲೆಯ ಮೂಲಕ ಮಹಿಳೆಯರ ಪ್ರಾತಿನಿಧ್ಯವನ್ನು ಅನ್ವೇಷಿಸುವ ಮೂರು ವರ್ಷಗಳ ಪ್ರದರ್ಶನವನ್ನು ಇಲ್ಲಿ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಬೆಂಗಳೂರಿನ ಪ್ರಮುಖ ಮಹಿಳಾ ಕಲಾವಿದೆಯರ ಕೃತಿಗಳೂ ಇವೆ. ಇದಲ್ಲದೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ, MAP -Museum in transit ಪ್ರಾರಂಭಿಸಿದೆ. ಇದು ಸಣ್ಣ ಪ್ರಮಾಣದ, ಆಗಾಗ ಬದಲಾಗುವ ಪ್ರದರ್ಶನಗಳನ್ನು ಪ್ರಸ್ತುತಪಡಿಸುವ ಒಂದು ತಾಣವಾಗಿದೆ.

ವಿಳಾಸ: 22, ಕಸ್ತೂರ್ಬಾ ರಸ್ತೆ, ಶಾಂತಲಾ ನಗರ, ಅಶೋಕ ನಗರ, ಬೆಂಗಳೂರು. ದೂರವಾಣಿ: +91 80 6933 4100, ತೆರೆಯುವ ಸಮಯ: ಮಂಗಳವಾರದಿಂದ ಶುಕ್ರವಾರದವರೆಗೆ: ಬೆಳಿಗ್ಗೆ 10:00 ರಿಂದ ಸಂಜೆ 6:30ರವರೆಗೆ. ಶನಿವಾರ ಮತ್ತು ಭಾನುವಾರ: ಬೆಳಿಗ್ಗೆ 10:00 ರಿಂದ ಸಂಜೆ 7:30ರವರೆಗೆ. ಸೋಮವಾರ ರಜೆ.

1 ಶಾಂತಿರೋಡ್ ಸ್ಟುಡಿಯೋ ಗ್ಯಾಲರಿ: 1 ಶಾಂತಿರೋಡ್ ಸ್ಟುಡಿಯೋ ಗ್ಯಾಲರಿಯು ಪ್ರಾಯೋಗಿಕ ಮತ್ತು ಸಮಕಾಲೀನ ಕಲಾ ಅಭ್ಯಾಸಗಳಿಗೆ ಆಶ್ರಯ ತಾಣವಾಗಿದೆ.

1-ಶಾಂತಿರೋಡ್ ಸ್ಟುಡಿಯೋ ಗ್ಯಾಲರಿ

ನಗರದ ಕಲಾ ಪ್ರೇಮಿಗಳಲ್ಲಿ ದೀರ್ಘಕಾಲದಿಂದ ಜನಪ್ರಿಯವಾಗಿರುವ 1 ಶಾಂತಿರೋಡ್ ಸ್ಟುಡಿಯೋ ಗ್ಯಾಲರಿ ಕೇವಲ ಕಲಾ ಸ್ಥಳಕ್ಕಿಂತ ಹೆಚ್ಚಾಗಿ ಪ್ರಾಯೋಗಿಕ ಮತ್ತು ಸಮಕಾಲೀನ ಕಲಾ ಅಭ್ಯಾಸಗಳಿಗೆ ಒಂದು ಆಶ್ರಯ ತಾಣವಾಗಿದೆ. ಕಲಾ ಇತಿಹಾಸಕಾರ, ಕ್ಯುರೇಟರ್ ಮತ್ತು ಲೇಖಕ ಸುರೇಶ್ ಜಯರಾಮ್ ಅವರು 2002ರಲ್ಲಿ ಇದನ್ನು ಸ್ಥಾಪಿಸಿದರು. ಈ ಸ್ಥಳವು ಹೊಸಬರು ಮತ್ತು ಹಿರಿಯ ಕಲಾವಿದರು ಇಬ್ಬರನ್ನೂ ಒಳಗೊಂಡ ಪ್ರದರ್ಶನಗಳು, ಪ್ರದರ್ಶನ ಕಲೆಗಳು ಮತ್ತು ಕಲಾವಿದರ ಸಂವಾದಗಳಿಗೆ ನಿರಂತರವಾಗಿ ಆತಿಥ್ಯ ನೀಡಿದೆ. ಇದು ಆಯ್ದ ಪುಸ್ತಕಗಳನ್ನು ಸಹ ಪ್ರಕಟಿಸುತ್ತದೆ, ಇದರಲ್ಲಿ ಇತ್ತೀಚೆಗೆ ಜಯರಾಮ್ ಅವರೇ ಬರೆದಿರುವ Bangalore's Lalbagh. A Chronicle of the Garden and the City ಕೂಡ ಸೇರಿದೆ. ತೆರೆದ ಅಂಗಳದ ಸುತ್ತ ಕೇಂದ್ರೀಕೃತವಾಗಿರುವ ಇದರ ವಿಶಿಷ್ಟ ವಾಸ್ತುಶಿಲ್ಪವು ಅತಿಥಿಗಳನ್ನು ಸೆಳೆಯಲು ಮತ್ತು ಅಲ್ಲಿ ವಾಸಿಸುವ ಕಲಾವಿದರೊಂದಿಗೆ ಸಂಭಾಷಣೆಗೆ ಮುಂದಾಗಲು ಆಹ್ವಾನಿಸುತ್ತದೆ. ಕಲಾವಿದರು ತಮ್ಮ ಕಲಾಕೃತಿಗಳ ಬಗ್ಗೆ ಚರ್ಚಿಸಲು ಹೆಚ್ಚು ಉತ್ಸುಕರಾಗಿರುತ್ತಾರೆ.

ವಿಳಾಸ: 1, ಶಾಂತಿ ರಸ್ತೆ, ಭೀಮಣ್ಣ ಗಾರ್ಡನ್, ಶಾಂತಿ ನಗರ. ತೆರೆಯುವ ಸಮಯ: ಸೋಮವಾರದಿಂದ ಶನಿವಾರದವರೆಗೆ: ಬೆಳಿಗ್ಗೆ 10:00 ರಿಂದ ರಾತ್ರಿ 8:00 ರವರೆಗೆ. ರಾಷ್ಟ್ರೀಯ ರಜಾದಿನಗಳಲ್ಲಿ ಮುಚ್ಚಿರಬಹುದು.

ಗ್ಯಾಲರಿ ಸುಮುಖ

1 ಶಾಂತಿರೋಡ್‌ನ ಪಕ್ಕದಲ್ಲೇ ಇರುವ ಗ್ಯಾಲರಿ ಸುಮುಖ ಬೆಂಗಳೂರಿನ ಹಳೆಯ ಖಾಸಗಿ ಗ್ಯಾಲರಿಗಳಲ್ಲಿ ಒಂದಾಗಿದೆ (1996). ಇದು ನಗರದ ಸಮಕಾಲೀನ ಕಲಾ ಕ್ಷೇತ್ರದಲ್ಲಿ ಒಂದು ಹೆಗ್ಗುರು. ಗ್ಯಾಲರಿಸ್ಟ್ ಪ್ರಮಿಳಾ ಬೈದ್ ಅವರ ನೇತೃತ್ವದಲ್ಲಿ, ನಿಯಮಿತವಾಗಿ ಭಾರತ ಮತ್ತು ವಿದೇಶಿ ಕಲಾವಿದರ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಇದು ಪ್ರದರ್ಶಿಸಿದ ಪ್ರಮುಖ ಕಲಾವಿದರಲ್ಲಿ ಎಸ್.ಜಿ. ವಾಸುದೇವ್, ರವಿಕುಮಾರ್ ಕಾಶಿ, ಪರೇಶ್ ಮೈಟಿ ಮತ್ತು ಸೇನಾಕ ಸೇನಾನಾಯಕೆ ಸೇರಿದ್ದಾರೆ, ಜೊತೆಗೆ ವಿ.ಜಿ. ವೇಣುಗೋಪಾಲ್ ಮತ್ತು ಐಶ್ವರ್ಯನ್ ಅವರಂತಹ ಉದಯೋನ್ಮುಖ ಕಲಾವಿದರಿಗೂ ಇಲ್ಲಿ ಅವಕಾಶ ದೊರೆತಿದೆ.

ವಿಳಾಸ: 24/10, ಬಿಟಿಎಸ್ ಡಿಪೋ ರಸ್ತೆ, ವಿಲ್ಸನ್ ಗಾರ್ಡನ್, ಬೆಂಗಳೂರು. ದೂರವಾಣಿ: +91 9380420041

ತೆರೆಯುವ ಸಮಯ: ಸೋಮವಾರದಿಂದ ಶನಿವಾರದವರೆಗೆ: ಬೆಳಿಗ್ಗೆ 10:30 ರಿಂದ ಸಂಜೆ 6:00. ಭಾನುವಾರ ರಜೆ.

ಸರ್ಕಾರಿ ವಸ್ತುಸಂಗ್ರಹಾಲಯ

ಮ್ಯೂಸಿಯಂ ರಸ್ತೆಯ ವೆಂಕಟಪ್ಪ ಆರ್ಟ್ ಗ್ಯಾಲರಿ ಪಕ್ಕದಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯದ ಕೆಂಪು ಬಣ್ಣದ ಸಾಂಪ್ರದಾಯಿಕ ಮುಂಭಾಗವನ್ನು ಕಡೆಗಣಿಸಿ ಮುಂದೆ ಸಾಗುವುದು ಕಷ್ಟ. ಇದನ್ನು 1877ರಲ್ಲಿ ನಿಯೋಕ್ಲಾಸಿಕಲ್ ಶೈಲಿಯಲ್ಲಿ (ಕರಿಂಥಿಯನ್ ಸ್ತಂಭಗಳು, ಇಳಿಜಾರು ಮೇಲ್ಛಾವಣಿಗಳು ಮತ್ತು ವೃತ್ತಾಕಾರದ ಕಮಾನುಗಳೊಂದಿಗೆ) ನಿರ್ಮಿಸಲಾಗಿದೆ. ಇದು ಪುರಾತತ್ವ ಮತ್ತು ಭೂವೈಜ್ಞಾನಿಕ ಕಲಾಕೃತಿಗಳ ಪ್ರಮುಖ ಸಂಗ್ರಹವನ್ನು ಹೊಂದಿದೆ. ಇದರ ನಿಧಿಗಳಲ್ಲಿ ಕನ್ನಡ ಶಾಸನಗಳ ಆರಂಭಿಕ ಉದಾಹರಣೆಗಳಲ್ಲಿ ಒಂದಾದ ಹಲ್ಮಿಡಿ ಶಾಸನವೂ ಸೇರಿದೆ. ಈ ವಸ್ತುಸಂಗ್ರಹಾಲಯವು ಸ್ಥಳೀಯ ಮುಖ್ಯಸ್ಥರ ಶೌರ್ಯವನ್ನು ಸಾರುವ ವೀರಗಲ್ಲುಗಳನ್ನು ಮತ್ತು ಕ್ರಿ.ಪೂ. 3ನೇ ಶತಮಾನದಿಂದ ಕ್ರಿ.ಶ. 16ನೇ ಶತಮಾನದವರೆಗಿನ ಚೋಳ, ಹೊಯ್ಸಳ ಮತ್ತು ಗಂಗ ರಾಜವಂಶಗಳ ದೇವಸ್ಥಾನದ ಶಾಸನಗಳನ್ನು ಕೂಡ ಹೊಂದಿದೆ. 'ಬೆಂಗಳೂರು' ಎಂಬ ಹೆಸರನ್ನು ಬಳಸಿದ ಆರಂಭಿಕ ದಾಖಲೆಗಳಲ್ಲಿ ಒಂದಾದ ಬೇಗೂರು ಶಾಸನವನ್ನು (ಸುಮಾರು ಕ್ರಿ.ಶ. 890) ಕೂಡ ಇಲ್ಲಿ ನೋಡಬಹುದು.

ವಿಳಾಸ: ಕಸ್ತೂರ್ಬಾ ರಸ್ತೆ, ಅಂಬೇಡ್ಕರ್ ವೀಧಿ, ಸಂಪಂಗಿ ರಾಮ ನಗರ, ಬೆಂಗಳೂರು. ದೂರವಾಣಿ: +91 80 22864483, ತೆರೆಯುವ ಸಮಯ: ಮಂಗಳವಾರದಿಂದ ಭಾನುವಾರ. ಬೆಳಿಗ್ಗೆ 10:00 ರಿಂದ ಸಂಜೆ 5:00. ಸೋಮವಾರ ರಜೆ. (ವಸ್ತುಸಂಗ್ರಹಾಲಯವು ನವೀಕರಣಗೊಳ್ಳುತ್ತಿರುವ ಕಾರಣ ಭೇಟಿ ನೀಡುವ ಮೊದಲು ದಯವಿಟ್ಟು ಪರಿಶೀಲಿಸಿ.)

ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ (ಎನ್.ಜಿ.ಎಂ.ಎ.)

ಈ ಗ್ಯಾಲರಿಗೆ ಭೇಟಿ ನೀಡಲು ಎರಡು ಕಾರಣಗಳಿವೆ. ಮೊದಲನೆಯದು, ಸಹಜವಾಗಿ, ಇಲ್ಲಿನ ಕಲಾ ಸಂಗ್ರಹ; ಎರಡನೆಯದು ಮಾಣಿಕ್ಯವೇಲು ಮ್ಯಾನ್ಷನ್ ಕಟ್ಟಡವೇ ಅದ್ಭುತ. ಇದು 3.5 ಎಕರೆಗಳಷ್ಟು ವಿಸ್ತಾರವಾದ ಉದ್ಯಾನವನಗಳ ನಡುವೆ ನಿಂತಿರುವ ಒಂದು ಪರಂಪರಾಗತ ಕಟ್ಟಡವಾಗಿದ್ದು, ಉದ್ಯಾನದಾದ್ಯಂತ ಶಿಲ್ಪಕಲೆಗಳನ್ನು ಹೊಂದಿದೆ. ಒಳಭಾಗದಲ್ಲಿ, ಗ್ಯಾಲರಿಯು ಸಮಕಾಲೀನ ಕೃತಿಗಳ ವಿಸ್ತಾರವಾದ ಸಂಗ್ರಹವನ್ನು ಹೊಂದಿದೆ. 2009ರಿಂದ ಕಾರ್ಯನಿರ್ವಹಿಸುತ್ತಿರುವ NGMA, ನಗರದ ಕಲಾ ವಲಯವನ್ನು ಅನ್ವೇಷಿಸುವ ಹಲವಾರು ಪ್ರಮುಖ ಪ್ರದರ್ಶನಗಳನ್ನು ಆಯೋಜಿಸಿದೆ. ಇಲ್ಲಿನ ಕೆಫೆಯಲ್ಲಿ ಊಟಕ್ಕೆ ವಿರಾಮ ಪಡೆಯಬಹುದು. ಈ ತಾಣ ಆಹ್ಲಾದಕರವಾಗಿದೆ. ಅಥವಾ ಸ್ವಲ್ಪ ಉತ್ತರಕ್ಕೆ ಮುಂದುವರಿದು ಕರ್ನಾಟಕ ಚಿತ್ರಕಲಾ ಪರಿಷತ್ ಕಡೆಗೆ ತೆರಳಲೂಬಹುದು. ಸಮೀಪದಲ್ಲಿ, ಖಾಸಗಿ ಆರ್ಟ್ ಹೌಜ್ ಗ್ಯಾಲರಿಯು ನಿಯಮಿತವಾಗಿ ಉದಯೋನ್ಮುಖ ಮತ್ತು ಸಮಕಾಲೀನ ಕಲಾವಿದರ ಕಲಾ ಪ್ರದರ್ಶನಕ್ಕೆ ಅವಕಾಶ ನೀಡುತ್ತ ಬಂದಿದೆ. ಪ್ರದರ್ಶನ ಚಾಲ್ತಿಯಲ್ಲಿದ್ದರೆ ನೋಡಲು ಯೋಗ್ಯ.

ವಿಳಾಸ: 49, ಮಾಣಿಕ್ಯವೇಲು ಮ್ಯಾನ್ಷನ್, ಪ್ಯಾಲೇಸ್ ರಸ್ತೆ, ಬೆಂಗಳೂರು. ದೂರವಾಣಿ: +91 80 22342338

ತೆರೆಯುವ ಸಮಯ: ಮಂಗಳವಾರದಿಂದ ಭಾನುವಾರ. ಬೆಳಿಗ್ಗೆ 10:00 ರಿಂದ ಸಂಜೆ 6:00. ಸೋಮವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ ರಜೆ.

ಕರ್ನಾಟಕ ಚಿತ್ರಕಲಾ ಪರಿಷತ್

ದಿವಂಗತ ಆರ್ಯ ಮೂರ್ತಿ (ಸಂಸ್ಥಾಪಕ ಅಧ್ಯಕ್ಷರು) ಮತ್ತು ದಿವಂಗತ ಪ್ರೊ. ನಂಜುಂಡ ರಾವ್ (ಸಂಸ್ಥಾಪಕ ಕಾರ್ಯದರ್ಶಿ) ಅವರ ಪ್ರಯತ್ನದ ಫಲವಾಗಿ 1960ರಲ್ಲಿ ಸ್ಥಾಪನೆಯಾದ ಕರ್ನಾಟಕ ಚಿತ್ರಕಲಾ ಪರಿಷತ್ ಉದಯೋನ್ಮುಖ ಕಲಾವಿದರು ಮತ್ತು ಜಾನಪದ ಕಲೆಗಳನ್ನು ಒಳಗೊಂಡಿರುವ ವೈವಿಧ್ಯಮಯ ಶಾಶ್ವತ ಸಂಗ್ರಹಕ್ಕೆ ನೆಲೆಯಾಗಿದೆ. ಜಾನಪದ, ಆಧುನಿಕ ಮತ್ತು ಸಮಕಾಲೀನ ಕಲೆಗಳ ಬಹುದೊಡ್ಡ ಸಂಗ್ರಹ ಇಲ್ಲಿದೆ.

ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು ರೋರಿಚ್ ಅವರಿಗೆ ಮೀಸಲಾದ ಗ್ಯಾಲರಿಗಳು, ಮಾಸ್ಟರ್ ಪ್ರಿಂಟ್‌ಮೇಕರ್ ಡಾ. ಕೃಷ್ಣ ರೆಡ್ಡಿ ಅವರ ಪ್ರಿಂಟ್‌ಗಳ ಸಂಗ್ರಹ, ಮತ್ತು ಮೈಸೂರು ಸಾಂಪ್ರದಾಯಿಕ ವಸ್ತುಸಂಗ್ರಹಾಲಯ ಸೇರಿವೆ. ಈ ವಸ್ತುಸಂಗ್ರಹಾಲಯದ ಎರಡು ಗ್ಯಾಲರಿಗಳಲ್ಲಿ ತರಕಾರಿ ಮತ್ತು ಖನಿಜ ವರ್ಣದ್ರವ್ಯಗಳು, ಚಿನ್ನದ ಲೇಪನ ಮತ್ತು ಜೆಸ್ಸೋ ಬಳಸಿ ರಚಿಸಲಾದ ಶಾಸ್ತ್ರೀಯ ಮೈಸೂರು ಶೈಲಿಯ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ. ನೆಲಮಾಳಿಗೆಯಲ್ಲಿ ದಕ್ಷಿಣ ಭಾರತದ ಏಕೈಕ ಕಲಾ ಸಂರಕ್ಷಣಾ ಕೇಂದ್ರವಾದ ICKPAC (ಇಂಟ್ಯಾಕ್ ಚಿತ್ರಕಲಾ ಪರಿಷತ್ ಆರ್ಟ್ ಕನ್ಸರ್ವೇಶನ್ ಸೆಂಟರ್) ಇದೆ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ, ಇಲ್ಲಿನ ಸಂರಕ್ಷಕರು ಶತಮಾನಗಳಷ್ಟು ಹಳೆಯ ವರ್ಣಚಿತ್ರಗಳನ್ನು ಸಂರಕ್ಷಿಸುವ ಸೂಕ್ಷ್ಮ ಪ್ರಕ್ರಿಯೆಯ ಒಂದು ನೋಟವನ್ನು ನಿಮಗೆ ನೀಡಬಹುದು.

ವಿಳಾಸ: ಆರ್ಟ್ ಕಾಂಪ್ಲೆಕ್ಸ್, 1, ಕುಮಾರಕೃಪಾ ರಸ್ತೆ, ಲಲಿತ್ ಹೋಟೆಲ್ ಹತ್ತಿರ, ಕುಮಾರ ಪಾರ್ಕ್ ಈಸ್ಟ್, ಶೇಷಾದ್ರಿಪುರಂ, ಬೆಂಗಳೂರು. ದೂರವಾಣಿ: +91 80 22261816 ತೆರೆಯುವ ಸಮಯ: ವಸ್ತುಸಂಗ್ರಹಾಲಯ ವಿಭಾಗ: ಬೆಳಿಗ್ಗೆ 10:30 ರಿಂದ ಸಂಜೆ 6:30.(ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ ಪ್ರತಿದಿನ ತೆರೆದಿರುತ್ತದೆ). ನಿಯಮಿತ ಪ್ರದರ್ಶನ ಗ್ಯಾಲರಿಗಳು: ಬೆಳಿಗ್ಗೆ 11:00 ರಿಂದ ಸಂಜೆ 7:00 ರವರೆಗೆ.

 ರೂಮಾಲೆ ಆರ್ಟ್ ಹೌಸ್: ರೂಮಾಲೆ ಆರ್ಟ್ ಹೌಸ್‌ಗೆ ಕಲಾವಿದ ಮತ್ತು ಸ್ವಾತಂತ್ರ್ಯ ಹೋರಾಟಗಾರ ರೂಮಾಲೆ ಚನ್ನಬಸವಯ್ಯ ಅವರ ಹೆಸರನ್ನು ಇಡಲಾಗಿದೆ.

ರೂಮಾಲೆ ಆರ್ಟ್ ಹೌಸ್

ಬೆಂಗಳೂರಿನ ಪಶ್ಚಿಮ ಭಾಗದಲ್ಲಿ ಕಲಾವಿದ ಮತ್ತು ಸ್ವಾತಂತ್ರ್ಯ ಹೋರಾಟಗಾರ ರೂಮಾಲೆ ಚನ್ನಬಸವಯ್ಯ ಅವರ ಹೆಸರಿನಲ್ಲಿ ರೂಮಾಲೆ ಆರ್ಟ್ ಹೌಸ್ ಇದೆ. 1910ರಲ್ಲಿ ಹತ್ತಿರದ ದೊಡ್ಡಬಳ್ಳಾಪುರದಲ್ಲಿ ಜನಿಸಿದ ರೂಮಾಲೆ ಅವರಷ್ಟು ಸ್ಪಷ್ಟವಾಗಿ ಬೆಂಗಳೂರನ್ನು ಕ್ಯಾನ್ವಾಸ್ ಮೇಲೆ ಸೆರೆಹಿಡಿದ ಕಲಾವಿದರು ವಿರಳ. ಜಲವರ್ಣದಲ್ಲಿ ಪರಿಣತರಾಗಿದ್ದ ಅವರು, ಅದನ್ನು ಸಾಂಪ್ರದಾಯಿಕ ಪಾರದರ್ಶಕತೆಯ ಬದಲು ಅಪಾರದರ್ಶಕವಾಗಿ ಅನ್ವಯಿಸುವ ಮೂಲಕ ಅಸಾಂಪ್ರದಾಯಿಕ ರೀತಿಯಲ್ಲಿ ಬಳಸುತ್ತಿದ್ದರು. ಸಾಮಾನ್ಯವಾಗಿ 'ದಕ್ಷಿಣದ ವ್ಯಾನ್ ಗಾಗ್' ಎಂದು ಕರೆಯಲಾಗುವ ರೂಮಾಲೆ, ತಮ್ಮ ಎದ್ದುಕಾಣುವ, ವೇಗದ ಸ್ಟ್ರೋಕ್‌ಗಳು ಮತ್ತು ಬಣ್ಣಗಳ ಬಳಕೆಗೆ ಪ್ರಸಿದ್ಧರಾಗಿದ್ದರು. 1973ರಲ್ಲಿ ಕಲಾವಿದರೇ ಸ್ಥಾಪಿಸಿದ ನಗರದ ಮೊದಲ ಖಾಸಗಿ ಕಲಾ ಸ್ಥಳವಾದ ಈ ಗ್ಯಾಲರಿಯಲ್ಲಿ ಇಂದು ಅವರ ಸುಮಾರು 20 ಕಲಾಕೃತಿಗಳು ಪ್ರದರ್ಶನದಲ್ಲಿವೆ.

ವಿಳಾಸ: 674, 45ನೇ ಕ್ರಾಸ್ ರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು. ದೂರವಾಣಿ: 9535678111. ತೆರೆಯುವ ಸಮಯ: ವಾರದ ದಿನಗಳಲ್ಲಿ: ಬೆಳಿಗ್ಗೆ 11:00 ರಿಂದ ರಾತ್ರಿ 8:00. ವಾರಾಂತ್ಯಗಳಲ್ಲಿ: ಬೆಳಿಗ್ಗೆ 10:00 ರಿಂದ ಸಂಜೆ 6:00.

ಎಪಾಲಜಿ ಗ್ಯಾಲರಿ (aPaulogy Gallery): ಎಪಾಲಜಿ ಗ್ಯಾಲರಿಯು ರಿಚರ್ಡ್ಸ್ ಟೌನ್ನಲ್ಲಿ ನೆಲೆಗೊಂಡಿದೆ. ಇದು ನೆರಳಿನ, ಮರಗಳಿಂದ ಕೂಡಿದ ರಸ್ತೆಗಳನ್ನು ಹೊಂದಿರುವ ಶಾಂತ ಪರಿಸರವನ್ನು ಹೊಂದಿದೆ.

ಎಪಾಲಜಿ ಗ್ಯಾಲರಿ (aPaulogy Gallery)

ಇದನ್ನು ಗ್ಯಾಲರಿ ಅಂತಾದರೂ ಕರೆಯಿರಿ ಅಥವಾ ಅಂಗಡಿ ಎಂದಾದರೂ ಕರೆಯಿರಿ, ಎಪಾಲಜಿ ಹಾಸ್ಯಮಯ ಜಲವರ್ಣ ವರ್ಣಚಿತ್ರಗಳು ಮತ್ತು ಮುದ್ರಣಗಳನ್ನು ಮಾರಾಟಕ್ಕೆ ಪ್ರದರ್ಶಿಸಲಾಗುತ್ತದೆ ದೀರ್ಘಕಾಲದಿಂದ ಬೆಂಗಳೂರಿನಲ್ಲಿ ನೆಲೆ ನಿಂತಿರುವ ಕಲಾವಿದ ಪಾಲ್ ಫರ್ನಾಂಡಿಸ್ ಅವರು ನಗರದ ಮರಗಳಿಂದ ಆವೃತವಾದ ಮಾರ್ಗಗಳು, ಸೈಕ್ಲಿಸ್ಟ್‌ಗಳು, ಹಳೆಯ ಪಬ್‌ಗಳು ಮತ್ತು ಪರಿಚಿತ ಹೆಗ್ಗುರುತುಗಳಂತಹ ಹಳೆಯ ಕಾಲದ ಮೋಡಿಗಳನ್ನು ಸೆರೆಹಿಡಿಯುವಲ್ಲಿ ಸಿದ್ಧಹಸ್ತರು. ಎಪಾಲಜಿಗೆ ಭೇಟಿ ನೀಡುವುದು ಅಂದಿನ ಬೆಂಗಳೂರಿಗೆ ಕಾಲಿಟ್ಟಂತೆ ಎಂದು ಅವರು ಹೇಳುತ್ತಾರೆ. ಈ ಗ್ಯಾಲರಿಯು ರಿಚರ್ಡ್ಸ್ ಟೌನ್‌ನಲ್ಲಿ ನೆಲೆಗೊಂಡಿದೆ. ಇದು ನೆರಳಿನ, ಮರಗಳಿಂದ ಕೂಡಿದ ರಸ್ತೆಗಳನ್ನು ಹೊಂದಿರುವ ಶಾಂತ ನೆರರೆಹೊರೆಯನ್ನು ಹೊಂದಿದೆ.

ವಿಳಾಸ: 002, ಎಡ್ವರ್ಡ್ ಹೌಸ್, ರೈಲ್ವೆ ಸ್ಟೇಷನ್ ಹಿಂಭಾಗದ ಗೇಟ್, 37, ಪಾಟರಿ ರಸ್ತೆ, ರಿಚರ್ಡ್ಸ್ ಟೌನ್, ಬೆಂಗಳೂರು. ದೂರವಾಣಿ: +91 96325 06422, ತೆರೆಯುವ ಸಮಯ: ಸೋಮವಾರದಿಂದ ಶನಿವಾರದವರೆಗೆ: ಬೆಳಿಗ್ಗೆ 10:00 ರಿಂದ ಸಂಜೆ 7:00.


Similar News