ಅಂಗನವಾಡಿಗಳಿಗೆ 50 ವರ್ಷ| ದೇಶದ ಮೊದಲ ಅಂಗನವಾಡಿ ಕಾರ್ಯಕರ್ತೆ ಮೈಸೂರು ಟಿ.ನರಸೀಪುರದ ನಾಗರತ್ನಾ!
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮಹತ್ವದ ಅಂಗನವಾಡಿ ಯೋಜನೆಗೆ ಪ್ರಾಯೋಗಿಕ ನೆಲೆಯಾಗಿ ಆಯ್ಕೆ ಮಾಡಿದ್ದು ಟಿ. ನರಸೀಪುರ. ಮೊದಲ ಅಂಗನವಾಡಿ ಕಾರ್ಯಕರ್ತರಲ್ಲಿ ಒಬ್ಬರಾದ ನಾಗರತ್ನಾ ಅವರ ನೆನಪಿನ ಬುಟ್ಟಿ ಇಲ್ಲಿದೆ.
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಪ್ರಾಯೋಗಿಕ ಯೋಜನೆಗೆ ಟಿ.ನರಸೀಪುರ ಆಯ್ಕೆ
ಒಂದು ಕಾಲವಿತ್ತು, ಹಳ್ಳಿಗಳಲ್ಲಿ ಅಪೌಷ್ಟಿಕತೆ ಎಂಬುದು ಕರಾಳ ನೆರಳಿನಂತೆ ಆವರಿಸಿತ್ತು. ಬಡತನದ ಕಾರಣದಿಂದಾಗಿ, ತಾಯಂದಿರು ತಮ್ಮ ಮಕ್ಕಳ ಕೈ ಹಿಡಿದು ಭವಿಷ್ಯದ ಬಗ್ಗೆ ಧೈರ್ಯ ಹೇಳುವುದೇ ಕಷ್ಟವಾಗಿತ್ತು. ಗರ್ಭಿಣಿಯರು ಮತ್ತು ಬಾಣಂತಿಯರ ಆರೈಕೆ ದೊಡ್ಡ ಸವಾಲಾಗಿತ್ತು. ಆದರೆ, 1975ರ ಅಕ್ಟೋಬರ್ 2ರಂದು, ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ದೇಶದ ಕೋಟ್ಯಂತರ ಕುಟುಂಬಗಳ ಕನಸಿಗೆ ಹೊಸ ಬೆಳಕು ಮೂಡಿತು.
ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ (ICDS) ಆರಂಭವಾಯಿತು. ಇದರ ಭಾಗವಾಗಿಯೇ, ಮಕ್ಕಳ ಪಾಲಿಗೆ ಆಟ, ಊಟ, ಪಾಠದ ಪ್ರಪಂಚ ತೆರೆಯಿತು. ಅಂದಿನಿಂದ, ಹೆತ್ತವರು ತಮ್ಮ ಪುಟ್ಟ ಮಕ್ಕಳ ಕೈ ಹಿಡಿದು ಮುಗುಳು ನಗುತ್ತಾ "ಹೋಗು ಮಗಳೇ, ಅಲ್ಲಿ ಆಟ ಇರುತ್ತದೆ, ಊಟ ಇರುತ್ತದೆ, ಪಾಠ ಇರುತ್ತದೆ" ಎಂದು ಧೈರ್ಯ ಹೇಳಲು ಶುರು ಮಾಡಿದರು.
ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಮಕ್ಕಳ ಕಲ್ಯಾಣ ಯೋಜನೆ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಭಾಗವಾಗಿರುವ ಅಂಗನವಾಡಿ ಕೇಂದ್ರಗಳು 2025ಕ್ಕೆ 50 ವರ್ಷಗಳ ಸುವರ್ಣ ಮಹೋತ್ಸವ ಆಚರಿಸುತ್ತಿವೆ. ಅಂದಿನ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರು ಕಂಡ ಕನಸು ಇದು. ಕೇವಲ ಪೌಷ್ಟಿಕ ಆಹಾರ ನೀಡುವುದಷ್ಟೇ ಅಲ್ಲದೆ, ಗುಣಮಟ್ಟದ ಶಿಕ್ಷಣ, ಆರೋಗ್ಯ ತಪಾಸಣೆ, ಲಸಿಕೆ ಮತ್ತು ಆರೈಕೆ ಸೇರಿದಂತೆ ಆರು ಪ್ರಮುಖ ಸೇವೆಗಳನ್ನು ಒಂದೇ ಸೂರಿನಡಿ ತರುವ ಪರಿಕಲ್ಪನೆ ಇದು. ಈ ಕ್ರಾಂತಿಕಾರಿ ಯೋಜನೆಗೆ ಪ್ರಾಯೋಗಿಕ ನೆಲೆಯಾಗಿ ಆಯ್ಕೆಯಾದ ಸ್ಥಳ, ಕರ್ನಾಟಕದ ಮೈಸೂರು ಜಿಲ್ಲೆಯ ತಿರಮಕೂಡಲು ( ಟಿ.) ನರಸೀಪುರ. ಈ ಯೋಜನೆಗೆ ಚಾಲನೆ ಸಿಕ್ಕಿದ್ದು ಕನ್ನಡ ನೆಲದಲ್ಲಿ ಎಂಬುವುದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ವಿಷಯ.
ಟಿ. ನರಸೀಪುರದಲ್ಲಿ ಮೊದಲ ಅಂಗನವಾಡಿ
ಟಿ. ನರಸೀಪುರದಲ್ಲಿ ಆರಂಭವಾದ ಆ ಮೊದಲ 100 ಅಂಗನವಾಡಿ ಕೇಂದ್ರಗಳಲ್ಲಿಯೇ ಈ ಬದಲಾವಣೆಯ ಅಡಿಪಾಯ ಹಾಕಲಾಯಿತು. ಗರ್ಭಿಣಿ ತಾಯಂದಿರ ಗರ್ಭಾವಸ್ಥೆಯ ಮತ್ತು ಬಾಣಂತಿಯರ ಆರೋಗ್ಯದ ಬಗ್ಗೆ ಮನೆಯ ಮುಂದೆಯೇ ಕಾಳಜಿ ಮಾಡುವ ವ್ಯವಸ್ಥೆ ಸೃಷ್ಟಿಯಾಯಿತು. ಈಗ ಹಳ್ಳಿ ಹಳ್ಳಿಗಳಿಗೂ ತಲುಪಿರುವ ಸುಮಾರು 14 ಲಕ್ಷ ಅಂಗನವಾಡಿಗಳು, ಮಕ್ಕಳ ಅಪೌಷ್ಟಿಕತೆ ನಿವಾರಣೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ.
ಈ ಯೋಜನೆ ಯಶಸ್ವಿಯಾಗಲು ಅಡಿಪಾಯ ಹಾಕಿದವರು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು. ಮನೆ ಮನೆಗೆ ಹೋಗಿ ಅಪೌಷ್ಟಿಕತೆಯ ಅಪಾಯಗಳನ್ನು ಮನವರಿಕೆ ಮಾಡಿಕೊಡುವುದು, ತಾಯಂದಿರನ್ನು ಲಸಿಕೆ ಹಾಕಿಸಲು ಮತ್ತು ಆರೋಗ್ಯ ತಪಾಸಣೆಗೆ ಮನವೊಲಿಸುವ ಕೆಲಸ ಮಾಡುತ್ತಿದ್ದರು.
ಅನಿರೀಕ್ಷಿತವಾಗಿ ಆರಂಭವಾದ ಅಂಗನವಾಡಿ ವೃತ್ತಿ ಬದುಕು
ಟಿ. ನರಸೀಪುರದಲ್ಲಿ 36 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿರುವ 75 ವರ್ಷದ ನಾಗರತ್ನ ಅವರು, ʻದ ಫೆಡರಲ್ ಕರ್ನಾಟಕʼದೊಂದಿಗೆ ತಮ್ಮ ಆರಂಭಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಎಸ್.ಎಸ್.ಎಲ್.ಸಿ. ಓದಿದ್ದರೂ, ತಾವು ಕೆಲಸಕ್ಕೆ ಸೇರುವ ಆರಂಭದಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚಿನ ಜ್ಞಾನವಿರಲಿಲ್ಲ. ಈ ಯೋಜನೆ ಟಿ. ನರಸೀಪುರಕ್ಕೆ ಬಂದಾಗ ನಾನು ಟೈಲರಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಪಿಡಿಒ ನಾಗಯ್ಯ ಎಂಬವರು ಫ್ಯಾಕ್ಟರಿಗೆ ಭೇಟಿ ನೀಡಿದ್ದಾಗ, ಅವರು ನನ್ನ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ತಿಳಿದುಕೊಂಡಿದ್ದರು. ಈ ಯೋಜನೆ ಬಗ್ಗೆ ತರಬೇತಿ ಬಗ್ಗೆ ಮನವರಿಕೆ ಮಾಡಿದರು. ನಾಗಯ್ಯ ಅವರ ಶಿಫಾರಸ್ಸಿನ ಮೇರೆಗೆ ನಾನು ಕೆಲಸಕ್ಕೆ ಸೇರಿಕೊಂಡರು. ಡಿಸೆಂಬರ್‌ನಲ್ಲಿ ಕೆಲಸ ಆರಂಭಿಸಿ, ಫೆಬ್ರವರಿಯಷ್ಟಕ್ಕೆ ತರಬೇತಿ ಪಡೆದು ಕೆಲಸ ಆರಂಭಿಸಿದೆ ಎಂದು ಅವರು ತಾವು ಕೆಲಸಕ್ಕೆ ಸೇರಿಕೊಂಡ ದಿನಗಳನ್ನು ನೆನಪಿಸಿಕೊಂಡರು.
ಪಂಚಾಯತ್ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಆರಂಭ
ಮೊದಲಿಗೆ ಪಂಚಾಯತ್ ಕಟ್ಟಡದಲ್ಲಿಯೇ ಅಂಗನವಾಡಿ ಕೇಂದ್ರವನ್ನು ಆರಂಭಿಸಲಾಗಿತ್ತು. ಆ ದಿನಗಳಲ್ಲಿ ಜನರಿಗೆ ಈ ಯೋಜನೆಗಳ ಬಗ್ಗೆ ಯಾವುದೇ ರೀತಿಯ ಅರಿವು ಇರಲಿಲ್ಲ. ಆದರೆ, ನಾವು ಮನೆ ಮನೆಗೆ ಹೋಗಿ ಅಪೌಷ್ಟಿಕತೆಯ ಅಪಾಯಗಳನ್ನು ಮನವರಿಕೆ ಮಾಡಿಕೊಟ್ಟೆವು, ಲಸಿಕೆ ಹಾಕಿಸಲು ತಾಯಂದಿರನ್ನು ಮನವೊಲಿಸಿದೆವು. ನರ್ಸ್‌ಗಳು, ವೈದ್ಯರು, ಸೂಪರ್‌ವೈಸರ್‌ಗಳು ಭೇಟಿ ನೀಡಿ ಮಾರ್ಗದರ್ಶನ ನೀಡಿದ ನಂತರ ನಮ್ಮ ಕೆಲಸಕ್ಕೆ ಒಂದು ಸ್ಪಷ್ಟ ರೂಪ ಸಿಕ್ಕಿತು. ನಂತರದ ದಿನಗಳಲ್ಲಿ ಸುಮಾರು 40-50 ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿತ್ತು ಎಂದು ಅವರು ತಿಳಿಸಿದರು.
130 ರೂಪಾಯಿ ವೇತನ
ಆರಂಭದಲ್ಲಿ ಕೇವಲ 130 ರೂಪಾಯಿ ವೇತನ ಪಡೆಯುತ್ತಿದೆ. ನರಸೀಪುರದಲ್ಲಿ ಒಟ್ಟು 4 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಒಟ್ಟು 36 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದೇನೆ. 14ವರ್ಷ ಹಿಂದೆ ನಿವೃತ್ತಿ ಹೊಂದಿದ್ದೇನೆ ಎಂದು ಅವರು ʼ ದ ಫೆಡರಲ್ ಕರ್ನಾಟಕʼದೊಂದಿಗೆ ಮನಬಿಚ್ಚಿ ಮಾತನಾಡಿದರು.
ಸಂಧ್ಯಾಕಾಲದಲ್ಲಿ ಒಬ್ಬಂಟಿಯಾದ ನಾಗರತ್ನ
ಅಂಗನವಾಡಿ ಕ್ಷೇತ್ರದಲ್ಲಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಾಗರತ್ನ ಮೂಲತ: ತುಮಕೂರು ಜಿಲ್ಲೆಯವರು. ಸುಮಾರು ಮೂರೂವರೆ ದಶಕಗಳ ಕಾಲ ಪುಟ್ಟ ಕಂದಮ್ಮಗಳ ಬಾಳಿಗೆ ಬೆಳಕಾಗಿ ಸೇವೆ ಸಲ್ಲಿಸಿರುವ ನಾಗರತ್ನ ನಿವೃತ್ತಿಯಾಗಿ ಹದಿನಾಲ್ಕು ವರ್ಷಗಳೇ ಕಳೆದಿವೆ. ಈಗ ಅವರು ಬದುಕಿನ ಸಂಧ್ಯಾಕಾಲದಲ್ಲಿ ಒಬ್ಬಂಟಿಯಾಗಿದ್ದಾರೆ. ತಾನು ಹೆತ್ತ ನಾಲ್ಕು ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಈಗ ಉಳಿದಿರುವ ಇಬ್ಬರು ಹೆಣ್ಣುಮಕ್ಕಳು ತಮ್ಮ ತಮ್ಮ ಬದುಕಿನ ಪಾಡಿಗೆ ಬೆಂಗಳೂರು ಮತ್ತು ತುಮಕೂರಿನಲ್ಲಿ ಇದ್ದಾರೆ. ಇಷ್ಟು ಸುದೀರ್ಘ ಸೇವೆ ಸಲ್ಲಿಸಿ ಅವರು ಇಂದು 1200ರೂ.ಬರುವ ಪಿಂಚಣಿ ಹಣದಲ್ಲಿ ತಮ್ಮ ಜೀವನ ನಡೆಸುತ್ತಿದ್ದೇನೆ ಎಂದು ʼದ ಫೆಡರಲ್ ಕರ್ನಾಟಕʼಕ್ಕೆ ತಮ್ಮ ನೋವನ್ನು ತೋಡಿಕೊಂಡರು.
ಟಿ. ನರಸೀಪುರದಲ್ಲಿ ಯಶಸ್ವಿಯಾದ ಈ ಯೋಜನೆ ನಂತರ ಇಡೀ ದೇಶಕ್ಕೆ ವಿಸ್ತರಿಸಿತು. ಈ ಯೋಜನೆ ಆರಂಭವಾದ 1975ರಲ್ಲಿ, ಶೇ. 16-30ರಷ್ಟು ಭಾರತೀಯ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಆದರೆ, ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5, 2019-21) ಪ್ರಕಾರ, ಈ ಪ್ರಮಾಣ ಶೇ. 7.7ಕ್ಕೆ ಇಳಿದಿದೆ. ಅಲ್ಲದೆ, ಮಕ್ಕಳ ಲಸಿಕಾ ವ್ಯಾಪ್ತಿಯು 1993ರಲ್ಲಿ ಶೇ. 27.5 ರಿಂದ 2021ಕ್ಕೆ ಶೇ. 77ಕ್ಕೆ ಗಣನೀಯವಾಗಿ ಏರಿಕೆಯಾಗಿದೆ. ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೂ ಈ ಕೇಂದ್ರಗಳು ಪೌಷ್ಟಿಕ ಆಹಾರ ಮತ್ತು ಆರೋಗ್ಯ ಆರೈಕೆ ನೀಡುತ್ತಿವೆ.
ವಾರ್ಷಿಕ ಶಿಕ್ಷಣ ಸ್ಥಿತಿಗತಿ (ASER) ವರದಿ 2024ರ ಪ್ರಕಾರ, ಅಂಗನವಾಡಿಗಳು ಭಾರತದಲ್ಲಿ ಪ್ರೀ-ಪ್ರೈಮರಿ ಸೇವೆಗಳನ್ನು ಒದಗಿಸುವ ಅತಿ ದೊಡ್ಡ ಸಂಸ್ಥೆಯಾಗಿದ್ದು, 3 ಮತ್ತು 4 ವರ್ಷ ವಯಸ್ಸಿನ ಅರ್ಧಕ್ಕಿಂತ ಹೆಚ್ಚು ಮಕ್ಕಳು ಇಲ್ಲಿ ದಾಖಲಾಗಿದ್ದಾರೆ. ಕರ್ನಾಟಕ, ಗುಜರಾತ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಶೇ. 75ಕ್ಕೂ ಹೆಚ್ಚು ಮಕ್ಕಳು ಅಂಗನವಾಡಿಗಳಲ್ಲಿದ್ದಾರೆ.