ರಾಜ್ಯದ ವಿದ್ಯುತ್‌ ಗ್ಯಾರಂಟಿ, ಕೇಂದ್ರದ ಕುಸುಮ್-ಸಿ ಸೋಲಾರ್ ಯೋಜನೆ; ತಾಳಮೇಳವಿಲ್ಲದ ಸಬ್ಸಿಡಿಗಳು

ಕರ್ನಾಟಕದ ಒಟ್ಟು ಬೇಡಿಕೆಯಲ್ಲಿ ಶೇ.50 ರಷ್ಟು ಸೋಲಾರ್ ವಿದ್ಯುತ್‌ನಿಂದ ಪೂರೈಕೆ ಮಾಡಬಹುದು. ಎಲ್ಲದ್ದಕ್ಕೂ ಕೇಂದ್ರ-ರಾಜ್ಯ ಕೂಡಿ ಕೆಲಸ ಮಾಡಬೇಕು. ಕೂಡಿ ಬಾಳಿದರೆ ಸ್ವರ್ಗ ಸುಖ.

Update: 2025-11-23 04:30 GMT
Click the Play button to listen to article

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ರಂಗದಲ್ಲಿ ನೀಡುವ ಸಹಾಯಧನಗಳಲ್ಲಿ ಯಾವುದೇ ರೀತಿಯ ಏಕರೂಪತೆ ಕಂಡು ಬರುತ್ತಿಲ್ಲ.

ಕೇಂದ್ರ ಸರ್ಕಾರ ಮನೆ ಮೇಲೆ ಸೋಲಾರ್ ಫಲಕ ಹಾಕಿಸಿಕೊಂಡಲ್ಲಿ 3 ಕಿವ್ಯಾಟ್‌ವರೆಗೆ 78,000 ಸಾವಿರ ರೂ.ವರೆಗೆ ಸಹಾಯಧನ ನೀಡುತ್ತದೆ. ಉಳಿದ ಹಣವನ್ನು ಗ್ರಾಹಕ ಭರಿಸಬೇಕು. ಆಗ ಪ್ರತಿದಿನ 300 ಯೂನಿಟ್ ಉಚಿತ ವಿದ್ಯುತ್ ಬರುತ್ತದೆ. ಇದನ್ನು ಬಳಸಿಕೊಳ್ಳಬೇಕು ಎಂದರೆ ಗ್ರಾಹಕ 1.47 ಲಕ್ಷ ರೂ. ಭರಿಸಬೇಕು. ಇದು ಬಹಳ ಜನರಿಗೆ ಕಷ್ಟದ ಕೆಲಸ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಪ್ರತಿ ಮನೆಗೆ ತಿಂಗಳಿಗೆ 200ಯೂನಿಟ್ ಉಚಿತ ಎಂದು ಹೇಳಿದೆ.

ಇದರಿಂದ ಬಜೆಟ್‌ನಲ್ಲಿ 10,000 ಕೋಟಿ ರೂ. ನೀಡಬೇಕಾಗಿ ಬಂದಿದೆ. ಕೇಂದ್ರದ ಯೋಜನೆ ಸೋಲಾರ್ ಫಲಕಕ್ಕೆ ಸಹಾಯಧನ ಪ್ರಕಟಿಸಿದರೆ, ರಾಜ್ಯ ಸರ್ಕಾರ ತಿಂಗಳಿಗೆ 200 ಯೂನಿಟ್ ಉಚಿತ ಎಂದು ಹೇಳಿದೆ. ಜನ ಇದರಿಂದ ಕೇಂದ್ರದ ಯೋಜನೆಗೆ ಹೋಗುತ್ತಿಲ್ಲ. ಅದರಲ್ಲಿ ಕೈನಿಂದ ಹಣ ಕಟ್ಟಬೇಕು. ರಾಜ್ಯದ ಗೃಹಜ್ಯೋತಿ ಯೋಜನೆಯಿಂದ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮಾಸಿಕ 200 ರೂ. ಲಭಿಸುತ್ತದೆ ಎಂದು ಜನ ಇದನ್ನೇ ಒಪ್ಪಿಕೊಳ್ಳುತ್ತಿದ್ದಾರೆ. ಇದು ನೋಡುವುದಕ್ಕೆ ಚೆನ್ನಾಗಿ ಕಾಣಿಸುತ್ತಿದೆ. ಆದರೆ ದೀರ್ಘಕಾಲಿಕ ಯೋಚನೆ ಮಾಡಿದರೆ ಗ್ರಾಹಕರಿಗೆ ಅನ್ಯಾಯವಾಗುತ್ತದೆ. ರಾಜ್ಯ ಸರ್ಕಾರ ಕೊಡುವ 200 ಯೂನಿಟ್ ಉಚಿತ ಕಾರ್ಯಕ್ರಮ ಎಂದು ನಿಲ್ಲುತ್ತದೋ ತಿಳಿಯದು. ಇದು ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಅವಲಂಬಿಸಿದೆ. ಈಗ ೫ ಗ್ಯಾರಂಟಿ ಯೋಜನೆಗಳಿಗೆ ಹಣ ಪೂರೈಸಲು ಸರ್ಕಾರ ಸಾಲ ಪಡೆದುಕೊಳ್ಳುತ್ತಿದೆ. ಇದು ಎಷ್ಟು ವರ್ಷ ನಡೆಯುತ್ತದೋ ತಿಳಿಯದು.

ಕೇಂದ್ರದ ಯೋಜನೆಯಲ್ಲಿ ಮನೆ ಮೇಲೆ ಸೋಲಾರ್ ಅಳವಡಿಕೆಗೆ 3 ಕೆವಿಗೆ 78 ಸಾವಿರ ರೂ. ಸಹಾಯಧನ ದೊರಕುತ್ತದೆ. ಆದರೆ ಈ ಹಣ ನೇರವಾಗಿ ಗ್ರಾಹಕನಿಗೆ ಸೇರುವುದರಿಂದ ರಾಜ್ಯ ಸರ್ಕಾರಕ್ಕೆ ಆಸಕ್ತಿ ಕಡಿಮೆಯಾಗುವುದು ಸಹಜ. ರಾಷ್ಟ್ರೀಯ ಪೋರ್ಟಲ್‌ಗೆ ಗ್ರಾಹಕ ಅರ್ಜಿ ಸಲ್ಲಿಸಬೇಕು. ಆಮೇಲೆ ಸೋಲಾರ್ ಫಲಕ ಅಳವಡಿಸುವ ಏಜನ್ಸಿಗಳ ಪಟ್ಟಿ ಬರುತ್ತದೆ. ಅದರಲ್ಲಿ ಗ್ರಾಹಕ ಆಯ್ಕೆ ಮಾಡಿದರೆ ಆ ಏಜನ್ಸಿಯವರು ತಮ್ಮ ದರವನ್ನು ನಮೂದಿಸುತ್ತಾರೆ. ಗ್ರಾಹಕ ತನ್ನ ಪಾಲಿನ ಹಣವನ್ನು ಪಾವತಿ ಮಾಡಬೇಕು. ಸೋಲಾರ್ ಫಲಕ ಅಳವಡಿಸಿದ ಮೇಲೆ ಸಹಾಯಧನ ನೇರವಾಗಿ ಗ್ರಾಹಕನ ಖಾತೆಗೆ ಬರುತ್ತದೆ. ಹೀಗಾಗಿ ಇದರಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ.

ಕೇಂದ್ರ ಸರ್ಕಾರ ಒಟ್ಟು 1 ಕೋಟಿ ಜನರಿಗೆ ನೆರವು ನೀಡಲು 75 ಸಾವಿರ ಕೋಟಿ ರೂ ವೆಚ್ಚ ಮಾಡುತ್ತಿದೆ. ಇದರಿಂದ ಪ್ರತಿ ಮನೆಗೂ 300 ಯೂನಿಟ್ ಸೋಲಾರ್ ವಿದ್ಯುತ್ ಲಭಿಸಲಿದೆ. ಸಾಮಾನ್ಯವಾಗಿ ಒಂದು ಮನೆಗೆ 2 ಕೆವಿ ವಿದ್ಯುತ್ ಸಾಕು. ಆದರೆ ಕೇಂದ್ರ ಸರ್ಕಾರ 3 ಕೆವಿವರೆಗೆ ಸಹಾಯಧನ ನೀಡುತ್ತಿರುವುದರಿಂದ ಎಲ್ಲರೂ ಮೂರು ಕೆವಿ ವಿದ್ಯುತ್ ಪಡೆಯಲು ಬಯಸುತ್ತಾರೆ. ಸೋಲಾರ್ ಫಲಕ 25 ವರ್ಷ ಕೆಲಸ ಮಾಡುವುದರಿಂದ ಗ್ರಾಹಕ ಹಾಕಿದ ಬಂಡವಾಳ ಹಿಂದಕ್ಕೆ ಬರುತ್ತದೆ.

ಕೇಂದ್ರದ ಯೋಜನೆಯಲ್ಲಿ ರಾಜ್ಯ ಸರ್ಕಾರ ಕೈಜೋಡಿಸಿದರೆ ಸೋಲಾರ್ ಬಳಕೆಯನ್ನು ಹೆಚ್ಚಿಸಬಹುದು. ಈಗ ಕೇಂದ್ರ ಸರ್ಕಾರದ 78,000 ಸಾವಿರ ರೂ. ನೀಡುವುದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವೂ 78 ಸಾವಿರ ರೂ. ನೀಡಿದರೆ ಗ್ರಾಹಕ ಉಳಿದ 76 ಸಾವಿರ ರೂ.ಗಳನ್ನು ಭರಿಸಬೇಕು. ಆಗ ಗ್ರಾಹಕ ಬಳಸಿ ಉಳಿದ 1 ಕೆವಿಯನ್ನು ಸರ್ಕಾರ ಬಳಸಿಕೊಳ್ಳಬಹುದು. ಇದರಿಂದ ಸರ್ಕಾರ ನೀಡಿದ ಸಹಾಯಧನ 2 ವರ್ಷದಲ್ಲಿ ವಿದ್ಯುತ್ ರೂಪದಲಿ ಹಿಂದಕ್ಕೆ ಬಂದು ಬಿಡುತ್ತದೆ. ಈಗ 200  ಯೂನಿಟ್ ಉಚಿತ ವಿದ್ಯುತ್ ಕೊಡುವುದರಿಂದ ಸರ್ಕಾರಕ್ಕೆ ಲಾಭವೇನೂ ಇಲ್ಲ. ಅಲ್ಲದೆ ಉಚಿತ ವಿದ್ಯುತ್ ದುರುಪಯೋಗವಾಗುವುದು ಖಚಿತ. ಹೀಗೆ ಸೋಲಾರ್ ಫಲಕ ಅಳವಡಿಕೆಗೆ ಉತ್ತೇಜನ ನೀಡಿದರೆ ರಾಜ್ಯ ವಿದ್ಯುತ್ ವಿತರಣ ಕಂಪನಿಗಳ ವಿದ್ಯುತ್ ನಷ್ಟದ ಪ್ರಮಾಣ ಇಳಿಮುಖಗೊಂಡು ಕಂಪನಿಗಳ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡು ಜೋಡೆತ್ತುಗಳು ಇದ್ದ ರೀತಿ ಬದುಕಿನ ಬಂಡಿ ಸರಿಯಾಗಿ ಸಾಗಬೇಕು ಎಂದರೆ ಎರಡೂ ಎತ್ತುಗಳು ಸಮಾನವಾಗಿ ಹೆಜ್ಜೆ ಹಾಕಬೇಕು.

ಸೋಲಾರ್ ಉತ್ಪಾದನೆ

ದೇಶದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಪಾವಗಡದಲ್ಲಿ ೨ಸಾವಿರ ಮೆಗಾವ್ಯಾಟ್ ಸೋಲಾರ್ ಫಲಕಗಳ ಕೇಂದ್ರ ಇಡೀ ದೇಶದಲ್ಲೇ ದೊಡ್ಡದು. ಒಂದೇ ಕಡೆ ಈ ರೀತಿ ಸೋಲಾರ್ ಫಲಕ ಅಳವಡಿಸಲು ಸಾಧ್ಯವಾಗಿಲ್ಲ. ಈ ರೀತಿ ಎಲ್ಲ ಕಡೆ ಸೋಲಾರ್ ಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸುವುದರಲ್ಲಿ ಖಾಸಗಿ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ದೇಶದಲ್ಲಿ ರಾಜಾಸ್ತಾನ ಮೊದಲ ಸ್ಥಾನದಲ್ಲಿದ್ದು 23 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಗುಜರಾತ್ 10.13 ಗಿಗಾವ್ಯಾಟ್ ದಾಟಿದೆ.ಕರ್ನಾಟಕ 9.05 ಗಿಗಾವ್ಯಾಟ್ ಉತ್ಪಾದಿಸಿ ಮೂರನೇ ಸ್ಥಾನದಲ್ಲಿದೆ. 2030ಕ್ಕೆ ದೇಶದಲ್ಲಿ ಸೋಲಾರ್ ನಿಂದ 292 ಗಿಗಾವ್ಯಾಟ್ ಬರಲಿದೆ. ಮುಂಬರುವ ದಿನಗಳಲ್ಲಿ ಸೋಲಾರ್, ಪವನ ಮತ್ತು ಜಲ ವಿದ್ಯುತ್‌ಗಳು ದಿನದ ಬೇಡಿಕೆಯಲ್ಲಿ ಶೇಕಡ 50ರಷ್ಟು ಪೂರೈಸಲಿದೆ. ಅಂದರೆ ಕಲ್ಲಿದ್ದಲು ಬಳಸುವುದು ಶೇ.೫೦ ರಷ್ಟು ಕಡಿಮೆಯಾಗಲಿದೆ. ವಾತಾವರಣಕ್ಕೆ ಇಂಗಾಲಾಮ್ಲ ಹೊರಸೂಸುವುದು ಕಡಿಮೆಯಾಗಲಿದೆ.

ಈಗ ಕರ್ನಾಟಕದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಸಮಸ್ಯೆಯಲ್ಲ. ಈಗ ಶೇ.50 ರಷ್ಟು ಬೇಡಿಕೆ ಪೂರೈಕೆ ಆಗುತ್ತಿದೆ. ಆದರೆ ಈಗಿರುವ ಸಮಸ್ಯೆ ಎಂದರೆ ಈ ವಿದ್ಯುತ್ ಬಳಸಲು ಪ್ರಸರಣ ಜಾಲದ ಸಾಮರ್ಥ್ಯ ಅಧಿಕಗೊಳ್ಳಬೇಕು. ಕೇಂದ್ರ ಸರ್ಕಾರ ಕುಸುಮ್-ಸಿ ಯೋಜನೆಯಲ್ಲಿ ಸೋಲಾರ್ ವಿದ್ಯುತ್ ಪ್ರಸರಣಕ್ಕೆ ಪ್ರತ್ಯೇಕ ಜಾಲ ಹೊಂದಲು ನೆರವು ನೀಡುತ್ತಿದೆ. ಇದನ್ನು ಬಳಸಿಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕು. ಈಗಿರುವ ವಿದ್ಯುತ್ ಜಾಲದ ಸಮೀಪದಲ್ಲಿ ಹೆಚ್ಚು ಸೋಲಾರ್ ಫಲಕ ಅಳವಡಿಸಿದರೆ ಅದನ್ನು ಈಗಿರುವ ಜಾಲದ ಮೂಲಕ ಸರಬರಾಜು ಮಾಡಬಹುದು. ಈಗ ಹಗಲು ಹೆಚ್ಚು ವಿದ್ಯುತ್ ಲಭಿಸುತ್ತಿದೆ. ಸಂಜೆ 6 ಗಂಟೆಯಾಗುತ್ತಿದ್ದಂತೆ ಸೂರ್ಯ ಮುಳುಗುತ್ತಾನೆ. ಸೋಲಾರ್ ವಿದ್ಯುತ್ ಬರುವುದು ನಿಂತು ಹೋಗುತ್ತದೆ. ಆಗ ವಿದ್ಯುತ್ ಜಾಲ (ಗ್ರಿಡ್) ಕುಸಿಯುವ ಸಂಭವವಿದೆ. ವಿದ್ಯುತ್ ಜಾಲದಲ್ಲಿ ನಿರಂತರವಾಗಿ 50 ಸೈಕಲ್ ಇರುವಂತೆ ವಿದ್ಯುತ್ ತರಂಗಾಂತರವನ್ನು ನೋಡಿಕೊಳ್ಳಬೇಕು. ಇದು ಸುಲಭದ ಕೆಲಸವಲ್ಲ. ಸೋಲಾರ್ ನಿಂತುಹೋಗುವಾಗ ಅದಕ್ಕೆ ಪರ್ಯಾಯ ವಿದ್ಯುತ್ ಹುಡುಕಬೇಕು.

ಅದಕ್ಕೆ ಪರ್ಯಾಯ ಎಂದರೆ ಹಗಲು ಹೆಚ್ಚು ಬರುವ ವಿದ್ಯುತ್ತನ್ನು ಬ್ಯಾಟರಿಗಳಲ್ಲಿ ಹಿಡಿದಿಟ್ಟುಕೊಳ್ಳುವುದು. ಇದನ್ನು ಎಲ್ಲಿ ಬೇಕಾದರೂ ಮಾಡಬಹುದು. ಇದು ಸ್ವಲ್ಪ ದುಬಾರಿ ಎನಿಸಿದರೂ ಗ್ರಿಡ್ ಸಮಸ್ಯೆ ಇರುವುದಿಲ್ಲ. ಇನ್ನು ಜಲ ವಿದ್ಯುತ್ ಕೇಂದ್ರಗಳಲ್ಲಿ ಪಂಪ್ಡ್ ಸ್ಟೋರೇಜ್ ಸಿಸ್ಟಂ ಅಳವಡಿಸುವುದು. ಈಗ ಶರಾವತಿ ಕಣಿವೆಯಲ್ಲಿ ಇದನ್ನು ಅಳವಡಿಸಿ 2 ಸಾವಿರ ಮೆಗಾವ್ಯಾಟ್ ಉತ್ಪಾದಿಸಲು ಅವಕಾಶವಿದೆ. ರಾಜ್ಯ ಸರ್ಕಾರ ಇದಕ್ಕೆ ಕೈಹಾಕಿದೆ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ನಿಸರ್ಗದ ಮೇಲೆ ಪರಿಣಾಮಗಳಾಗುತ್ತವೆ ಎಂಬುದಂತೂ ನಿಜ. ಶರಾವತಿ ವಿದ್ಯುತ್ ಅತ್ಯಂತ ಕಡಿಮೆ ದರದಲ್ಲಿ ಲಭಿಸುತ್ತಿರುವುದರಿಂದ ಪಂಪ್ಡ್ ಸ್ಟೋರೇಜ್ ದುಬಾರಿ ಎನಿಸುವುದಿಲ್ಲ. ಬೇರೆ ಜಲ ವಿದ್ಯುತ್‌ಗಳಲ್ಲಿ ಕೈಗೊಳ್ಳಿ ಎಂಬ ಒತ್ತಾಯವೂ ಇದೆ.

ಸೋಲಾರ್ ವಿದ್ಯುತ್ ಉತ್ಪಾದನೆ ಅಧಿಕಗೊಂಡಂತೆAತೆ ವಿದ್ಯುತ್ ಜಾಲವನ್ನು ಉತ್ತಮಪಡಿಸುವುದೂ ಅಗತ್ಯ. ಇಲ್ಲದಿದ್ದಲ್ಲಿ ಉತ್ಪಾದಿತ ವಿದ್ಯುತ್ ಬಳಸುವುದು ಕಷ್ಟ. ಈಗಲೇ ವಿದ್ಯುತ್ ಖರೀದಿ ಇಳಿಮುಖಗೊಳ್ಳುತ್ತಿದೆ. ಈಗಲೇ ಮುಕ್ತ ಮಾರುಕಟ್ಟೆಯಲ್ಲಿ 2.50 ರೂಗಳಿಗೆ ಒಂದು ಯೂನಿಟ್ ಸೋಲಾರ್ ಲಭಿಸುತ್ತಿದೆ. ಅದರಿಂದ ಉತ್ಪಾದನೆಯೊಂದಿಗೆ ಪ್ರಸರಣ ಮತ್ತು ವಿದ್ಯುತ್ ದಾಸ್ತಾನಿಗೆ ಚಿಂತನೆ ನಡೆಸುವುದು ಅಗತ್ಯ. ವಿದ್ಯುತ್ ಜಾಲದ ಮೇಲೆ ಒತ್ತಡ ಅಧಿಕಗೊಳ್ಳುವುದನ್ನು ತಪ್ಪಿಸಬೇಕು ಎಂದರೆ ಗ್ರಿಡ್‌ನಿಂದ ಹೊರಗೆ ಗ್ರಾಹಕರು ಸ್ವತಂತ್ರವಾಗಿ ವಿದ್ಯುತ್ ಉತ್ಪಾದಿಸಿ ಬಳಸುವಂತೆ ಮಾಡಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ಮನೆ ಮೇಲೆ 3ಕೆವಿ ವಿದ್ಯುತ್ ಸೌರ ಫಲಕ ಅಳವಡಿಸಿಕೊಳ್ಳಲು ನೆರವು ನೀಡುತ್ತಿದೆ. ಇದನ್ನು ರಾಜ್ಯದಲ್ಲಿ ಹೆಚ್ಚು ಬಳಸಿಕೊಂಡಲ್ಲಿ ವಿದ್ಯುತ್ ಜಾಲದ ಮೇಲೆ ಈಗ ಬೀಳುತ್ತಿರುವ ಹೊರೆ ಕಡಿಮೆ ಯಾಗುತ್ತದೆ. ವಿದ್ಯುತ್ ಜಾಲದ ಮೂಲಕ ವಿದ್ಯುತ್ ನೀಡಬೇಕು ಎಂದರೆ ವಿದ್ಯುತ್ ನಷ್ಟ ಶೇ೧೧-೧೫ ವರೆಗೆ ಭರಿಸಬೇಕು. ಇದು ಗ್ರಾಹಕರಿಗೆ ಅನಗತ್ಯ ಹೊರೆ. ಅಲ್ಲದೆ ವಿದ್ಯುತ್ ಕಂಪನಿಗಳ ಸಿಬ್ಬಂದಿ ವೆಚ್ಚವನ್ನು ಭರಿಸಬೇಕು. ಇದೆಲ್ಲ ಮನೆ ಮೇಲೆ ಸೌರ ಫಲಕ ಬಂದರೆ ಇರುವುದಿಲ್ಲ. ಈ ರೀತಿ ಕೇಂದ್ರದ ಸಹಾಯಧನ ಬಳಸಿಕೊಳ್ಳುವುದರಲ್ಲಿ ಗುಜರಾತ್ ಮುಂದಿದೆ. ಅಲ್ಲಿ 4984.2 ಮೆಗಾವ್ಯಾಟ್ ಸೋಲಾರ್ ಫಲಕದಿಂದ ಬರುತ್ತಿದೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು 3034.3 ಮೆಗಾವ್ಯಾಟ್ ಪಡೆಯುತ್ತಿದೆ. ರಾಜಾಸ್ತಾನ 1483.1 ಮೆಗಾವ್ಯಾಟ್ ಪಡೆಯುತ್ತಿದೆ. ನಮ್ಮದು ಇನ್ನೂ 683.60 ಮೆಗಾವ್ಯಾಟ್‌ನಲ್ಲಿದೆ. ಇದಕ್ಕೆ ಕಾರಣವೇನು ಎಂದರೆ ರಾಜ್ಯ ಸರ್ಕಾರದ ಮಂದಗತಿಯ ಧೋರಣೆ. ಬೇರೆ ರಾಜ್ಯಗಳಲ್ಲಿ ಉಚಿತ ವಿದ್ಯುತ್ ಕೊಡುವ ಪದ್ಧತಿಯೂ ಜಾರಿಯಲ್ಲದೆ.ಆದರೂ ಮನೆ ಮೇಲೆ ಸೋಲಾರ್ ಫಲಕ ಅಳವಡಿಸುವ ಯೋಜನೆಗೆ ಉತ್ತೇಜನ ನೀಡುವುದನ್ನು ನಿಲ್ಲಿಸಿಲ್ಲ. ನಮ್ಮಲ್ಲೂ ಇದೇ ಧೋರಣೆ ಅನುಸರಿಸುವುದು ಅಗತ್ಯ.

ಕೇಂದ್ರ ಸರ್ಕಾರ ಬಂಜರುಭೂಮಿಯಲ್ಲಿ ಶೇ 3 ರಷ್ಟು ಸೌರ ವಿದ್ಯುತ್ ಉತ್ಪಾದನೆಗೆ ಬಳಕೆಯಾದರೆ ಸಾಕು ನಮ್ಮ ವಿದ್ಯುತ್ ಸಮಸ್ಯೆ ಇಳಿಮುಖಗೊಳ್ಳುತ್ತದೆ ಎಂದು ಅಂದಾಜು ಮಾಡಿದೆ. ರಾಜಾಸ್ತಾನ ಹೊರತುಪಡಿಸಿದರೆ ನಮ್ಮಲ್ಲೇ ಅತಿ ಹೆಚ್ಚು ಬಂಜರು ಭೂಮಿ ಇದೆ. ಪ್ರತಿ ಒಂದು ಚದರ ಮೀಟರ್‌ನಿಂದ ಪ್ರತಿದಿನ 4-7 ಕೆವಿ ಸೋಲಾರ್ ವಿದ್ಯುತ್ ಪಡೆಯಬಹುದು. ಕರ್ನಾಟಕದಲ್ಲಿ 13536.59 ಚದರ ಕಿಮೀ ಬಂಜರುಭೂಮಿ ಇದೆ ಎಂದು ಆಂದಾಜು ಮಾಡಲಾಗಿದೆ. ಇದನ್ನು ಬಳಸಿಕೊಂಡಲ್ಲಿ ನಮ್ಮ ಒಟ್ಟು ಬೇಡಿಕೆಯಲ್ಲಿ ಶೇ.50 ರಷ್ಟು ಸೋಲಾರ್ ವಿದ್ಯುತ್‌ನಿಂದ ಪೂರೈಕೆ ಮಾಡಬಹುದು. ಎಲ್ಲದ್ದಕ್ಕೂ ಕೇಂದ್ರ-ರಾಜ್ಯ ಕೂಡಿ ಕೆಲಸ ಮಾಡಬೇಕು. ಕೂಡಿ ಬಾಳಿದರೆ ಸ್ವರ್ಗ ಸುಖ.

Tags:    

Similar News