ಸ್ಕರ್ಟ್ ಜೊತೆ ಫ್ಲರ್ಟ್: ಲಂಗು-ಲಗಾಮಿಲ್ಲದ ಲಂಗ-ದಾವಣಿಯ ಬಣ್ಣದ ಲೋಕದಲ್ಲೊಂದು ರೌಂಡ್
ಲಂಗಗಳೆಂದರೆ ಸೀದಾಸಾದಾ ದಿರಿಸೆಂದು ಮೂಗು ಮುರಿಯುವವರನ್ನೂ ಮೀರಿಸುವ ಹಾಗೆ ಅವು ಎಷ್ಟೊಂದು ವೈನು-ವೈನಾಗಿ ರೂಪಾಂತರಗೊಂಡಿವೆ ಎಂಬುದು ಉಡುಪುಗಳ ಲೋಕದಲ್ಲೊಮ್ಮೆ ವಿಹರಿಸಿಬಂದಾಗಲೇ ತಿಳಿಯುತ್ತದೆ. ಅವುಗಳ ವೈವಿಧ್ಯತೆಗೆ ತಕ್ಕಂತೆ ಗುಣಮಟ್ಟವೂ ಇರುವುದರಿಂದ ಉಳಿದ ಉಡುಪುಗಳಿಂದ ಪ್ರತ್ಯೇಕಿಸಿ ನೋಡುವಂತೆ ಮಾಡುತ್ತದೆ.
ಫ್ಯಾಶನ್ ಜಗತ್ತಿನಲ್ಲಿ ಮತ್ತೊಮ್ಮೆ ಸ್ಕರ್ಟ್ ಜೊತೆ ಫ್ಲರ್ಟ್ ಮಾಡುವ ಸಮಯ ಬಂದಿದೆ! ಎಲ್ಲ ಅಳತೆ, ಎಲ್ಲ ಆಕಾರ ಮತ್ತು ಎಲ್ಲ ಗಾತ್ರಗಳಲ್ಲಿ - ಅಂದರೆ ವಿಸ್ತಾರವೂ ಆಗಿರುವ ಅಥವಾ ದೇಹಕ್ಕೆ ಅಂಟಿಕೊಂಡಂತೆ ಇರುವ ಅಥವಾ ಉಬ್ಬಿಕೊಂಡಿರುವ ಅಥವಾ ಅತ್ಯಂತ ಸರಳವೂ ಆಗಿರುವ ಶೈಲಿಯಲ್ಲಿ... ಹೇಗೇ ಇರಲಿ –ಈ ಸ್ಕರ್ಟ್-ಗಳು ಕಣ್ ಸೆಳೆಯುವ ಉಡುಪುಗಳಾಗಿ ಉಳಿದಿವೆ.
ಇದು ಕ್ಯಾಶುವಲ್ ಮತ್ತು ಔಪಚಾರಿಕ ಉಡುಗೆ ಎರಡಕ್ಕೂ ಸೂಕ್ತ. ಅದರ ಕಥೆಯ ಉದ್ದ-ಗಿಡ್ಡ, ಥಳಕು-ಬಳಕು ಏನೇ ಇರಲಿ - ಮಿಡಿ, ಮಿನಿ, ಅಥವಾ ಮ್ಯಾಕ್ಸಿ ಆಗಿರಲಿ – ಈ ಸ್ಕರ್ಟಿನ ಕ್ಯಾನ್ವಾಸು ಅದರ ಕೆಳಅಂಚಿನಲ್ಲೇ ಕೊನೆಗೊಳ್ಳುವುದಿಲ್ಲ... ಸೌಂದರ್ಯ, ಗ್ಲಾಮರ್, ಕ್ಲಾಸ್, ನಾವೀನ್ಯತೆ ಮತ್ತು ಆರಾಮದಾಯಕ ದಿರಿಸನ್ನು ಅನಾವರಣಗೊಳಿಸಲು ಇದು ವಿನ್ಯಾಸಕನ ಕಲ್ಪನೆಯ ಜಗತ್ತನ್ನು ಮತ್ತಷ್ಟು ವಿಸ್ತರಿಸುತ್ತ ಹೋಗುತ್ತದೆ.
ಬೀಚ್ ಪಾರ್ಟಿಗಳಲ್ಲಿ ಖುಲ್ಲಂಖುಲ್ಲವಾಗಿರುವ ಕಟ್‌ಗಳು ಮತ್ತು ಫ್ರಿಲ್‌ಗಳಿಂದ ಹಿಡಿದು, ಕಚೇರಿಯ ಸಭೆಗಳಲ್ಲಿ ಧರಿಸಬಹುದಾದ ಔಪಚಾರಿಕ ಪೆನ್ಸಿಲ್ ಅಥವಾ ಎ-ಲೈನ್ ಶೈಲಿಯವರೆಗೆ, ಸಾಂಸ್ಕೃತಿಕ ಸಮಾರಂಭಗಳಿಗೂ ಪಕ್ಕಾಗುವ, ದೇಹಕ್ಕೆ ಅಂಟಿಕೊಳ್ಳುವ, ಸೊಂಟದ ಸುತ್ತಲೂ ಆವರಿಸಿಕೊಳ್ಳಯವ ತನಕ ಮತ್ತು ಹೊಳೆಯುವ ರ್‍ಯಾಂಪ್ ಶೋಗಳಲ್ಲಿ ಗಮನ ಸೆಳೆಯುವ ಸ್ಪೋರ್ಟಿ ಲೆದರ್ ಸ್ಕರ್ಟ್‌ಗಳವರೆಗೆ –ಈ ಲಂಗದ್ದು ಬಹುಮುಖ ಪ್ರತಿಭೆ.. ಶೈಲಿಯ ವಿಚಾರದಲ್ಲಿ ಲಂಗಗಳಿಗೆ ಎಲ್ಲೆಗಳಿಲ್ಲ.
ಪಾದವನ್ನೂ ಮೀರಿ ನೆಲವನ್ನೂ ಮುತ್ತಿಕ್ಕುತ್ತ ಸಾಗುವ ಗೌನ್‌ನಂತಹ ಲಂಗಗಳು ಬಾಲ್‌ರೂಮ್‌ನ ಸೊಬಗನ್ನು ಹೆಚ್ಚಿಸುತ್ತವೆ ಎಂಬುದೇನೋ ದಿಟ. ಆದರೆ ಸೊಂಟವನ್ನು ಬಿಗಿಗೊಳಿಸುವ, ದೇಹವನ್ನು ಅಪ್ಪಿಕೊಂಡಂತಿರುವ ಶೈಲಿಯ ಸ್ಕರ್ಟ್-ಗಳು ದೇಹದ ಪ್ರತಿಯೊಂದು ಅಂಕು-ಡೊಂಕುಗಳಿಗೂ ಆಕರ್ಷಣೆಯನ್ನು ತುಂಬುತ್ತವೆ ಎಂಬ ಮಾತೂ ಸುಳ್ಳಲ್ಲ. ಲೇಸ್‌ವರ್ಕ್, ನಿಟ್‌ವೇರ್, ಅಥವಾ ತೆಳ್ಳನೆಯ ಬಟ್ಟೆಯಲ್ಲಿ ವಿನ್ಯಾಸಗೊಳಿಸಲಾದ ಲಂಗಗಳು ಇನ್ನಷ್ಟು ರಚನಾತ್ಮಕ ಭಾವವನ್ನು ತುಂಬುತ್ತವೆ, ಅವು ಕಲಾತ್ಮಕವಾಗೂ ಹೌದು ಮತ್ತು ಆಕರ್ಷಣೆಯಲ್ಲಿ ದೈವಿಕವೂ ಹೌದು
ವಾರ್ಡ್-ರೋಬಿನ ಪ್ರಧಾನ ಉಡುಪು
ಫ್ಯಾಶನ್ ಜಗತ್ತು ಇಷ್ಟೆಲ್ಲ ಪಲ್ಲಟಗಳು ನಡೆದಿದ್ದರೂ ಈ ತರಾವರಿ ಲಂಗಗಳು ಇನ್ನೂ ಮಹಿಳೆಯರಿಗೆ ಇಷ್ಟವಾದ ಉಡುಪಾಗಿ ಉಳಿಯಲು ಕಾರಣವೇನು? ಸರಳವಾಗಿ ಹೇಳಬೇಕೆಂದರೆ, ಅವು ಹೆಚ್ಚು ಆರಾಮದಾಯಕ. ಹಾಗಂತ ಕ್ರಿಯಾತ್ಮಕತೆಯಲ್ಲಿ ಅದೇನೂ ಕಮ್ಮಿಯಿಲ್ಲ. ವಿನ್ಯಾಸಕರು ಮತ್ತು ಸ್ಟೈಲಿಸ್ಟ್ ಆದ ರೂಮಾ ಜೈನ್ ಅವರು ತಮ್ಮ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸುತ್ತಾರೆ, “ಲಂಗಗಳು ಜನಪ್ರಿಯವಾಗಿ ಉಳಿಯಲು ಸರಳ ಕಾರಣವೆಂದರೆ, ಅವು ಯಾವತ್ತಿಗೂ ಆರಾಮ, ಜೊತೆಗೆ ಬಹುಮುಖ ಶೈಲಿ ಅದಕ್ಕೆ ವಿಶಿಷ್ಟ ಸಂಯೋಜನೆಯನ್ನು ನೀಡುತ್ತದೆ, ಈ ಕಾರಣಕ್ಕೆ ಅದು ಅನೇಕ ಮಹಿಳೆಯರಿಗೆ ಇಷ್ಟವಾಗುತ್ತದೆ. ಅವು ಬಿಗಿಯಾದ ಪ್ಯಾಂಟ್ ಅಥವಾ ಚರ್ಮಕ್ಕೆ ಅಂಟಿಕೊಂಡಿರುವ ಟ್ರೌಸರ್‌ಗಳಿಗಿಂತ ಉತ್ತಮ. ಚರ್ಮಕ್ಕೆ ಬೇಕಾದ ಗಾಳಿಯ ಕೊರತೆ ಉಂಟಾಗದು ಮತ್ತು ತಾಪಮಾನವನ್ನೂ ನಿಯಂತ್ರಿಸುತ್ತದೆ. ಬಟ್ಟೆಯ ನಿರ್ಬಂಧವಿಲ್ಲದೆ ಕಾಲುಗಳಿಗೆ ಚಲನೆಯ ಸ್ವಾತಂತ್ರ್ಯವನ್ನು ಸಹ ಒದಗಿಸುತ್ತವೆ. ಪ್ರಯೋಜನಗಳಂತೂ ಹೇರಳವಾಗಿವೆ. ಸ್ಕರ್ಟ್-ಗಳಲ್ಲಿ ಇರುವ ವ್ಯಾಪಕ ಶ್ರೇಣಿ ವಿಭಿನ್ನ ದೇಹ ಪ್ರಕೃತಿ ಇದ್ದವರಿಗೆ ಅನುಕೂಲ,”
ಕಾಲೇಜು ವಿದ್ಯಾರ್ಥಿನಿ ಜಾಹ್ನವಿ ವರ್ಮಾ ಅವರು ಮುಂದಿಡುವ ಅಭಿಪ್ರಾಯವನ್ನೇ ಕೇಳಿ, "ನನ್ನ ವಾರ್ಡ್ರೋಬ್‌ನಲ್ಲಿ ನಿಶ್ಚಿತವಾಗಿ ಇರುವ ಉಡುಪೆಂದರೆ ಸ್ಕರ್ಟ್. ಅವುಗಳನ್ನು ಸುಲಭವಾಗಿ ಧರಿಸಬಹುದು ಮತ್ತು ಒಂದು ಸ್ಥಳದಿಂದ ಇನ್ನೊಂದು ಕಡೆ ಪ್ರಯಾಣ ಮಾಡುವಾಗ ಓಡಾಟ ಸುಲಭ. ಶೈಕ್ಷಣಿಕ ಕ್ಯಾಂಪಸ್‌ಗಳಿಂದ ಹಿಡಿದು ಶಾಪಿಂಗ್‌ವರೆಗೆ, ಮತ್ತು ಕೆಫೆಯಲ್ಲಿ ಸ್ನೇಹಿತರೊಂದಿಗೆ ವಿಶ್ರಾಂತಿ ಪಡೆಯುವವರೆಗೆ ನೀವು ದಿನವಿಡೀ ಸ್ಕರ್ಟ್-ಗಳಲ್ಲೇ ಇದ್ದುಬಿಡಬಹುದು.”
ಹೊಸ ಟ್ರೆಂಡ್‌ಗಾಗಿ ಹುಡುಕಾಟ
ಯಾವತ್ತೂ ಟ್ರೆಂಡ್-ಗಳ ಬೆನ್ನ ಹಿಂದೆ ಬೀಳುವವರು ಸ್ಕರ್ಟ್-ಗಳಿಗೆ ಅಳವಡಿಸಲಾಗಿರುವ ಹೊಸ ವಿನ್ಯಾಸಗಳ ಕಡೆಗೆ ಗಮನ ಹರಿಸುತ್ತಾರೆ. ಅದರಲ್ಲಿರುವ ವಿಶೇಷ ಕಟ್‌ಗಳು ಮತ್ತು ಶೈಲಿಗಳ ವಿಷಯದಲ್ಲಿ ಮಾರುಕಟ್ಟೆಯಲ್ಲಿ ಯಾವುದು ಚಾಲ್ತಿಯಲ್ಲಿದೆ ಎಂಬುದನ್ನು ಗಮನಿಸುತ್ತಿರುತ್ತಾರೆ. ಸೀದಾ-ಸಾದಾ ಸ್ಕರ್ಟ್ ಬದಲಾಗಿ ಪದರಗಳಿರುವ ಸ್ಕರ್ಟ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಅವು ಸುಲಭವಾಗಿ ಹೊಂದಿಕೊಳ್ಳುತ್ತವೆ ಮತ್ತು ನಾನಾ ದೇಹ ಪ್ರಕಾರಗಳಿಗೆ ಹೊಂದಿಕೊಳ್ಳುತ್ತವೆ. ವ್ರ್ಯಾಪ್ ಅಥವಾ ಸುತ್ತು-ಶೈಲಿಯ ಮಾದರಿಗಳು ಕೂಡ ಹೆಚ್ಚು ಜನಪ್ರಿಯವಾಗುತ್ತಿವೆ. ಅದನ್ನು ಧರಿಸಲು ಸುಲಭವೂ ಹೌದು. ಸೊಬಗಿನಲ್ಲಿ ಅದಕ್ಕೆ ಎಣೆಯೂ ಇಲ್ಲ. ನಮ್ಮ ಬ್ರ್ಯಾಂಡ್ ಕೂಡ ಹಗಲಿನಿಂದ ಸಂಜೆಯ ಉಡುಗೆಗೆ ಸಲೀಸಾಗಿ ಬದಲಾಯಿಸಬಹುದಾದ ಫ್ಲೋಯಿ ಮಿಡಿ ಮತ್ತು ಉದ್ದದ ಸ್ಕರ್ಟ್‌ಗಳ ಕಡೆಗೆ ಒಲವು ತೋರಿಸುತ್ತಿದೆ," ಎಂದು ಹೆಸರಾಂತ ಸ್ವದೇಶಿ ಫ್ಯಾಷನ್ ಬ್ರ್ಯಾಂಡ್ ರೈಸಿನ್ ಗ್ಲೋಬಲ್ ಸಹ-ಸಂಸ್ಥಾಪಕಿ ಇಶಾ ಪಚೇರಿವಾಲ್ ಹೇಳುತ್ತಾರೆ.
ಜೈನ್ ಅವರು ಮೊಣಕಾಲಿನವರೆಗಿನ ಅಲೈನ್, ಚಿಕ್ಕದಾಗಿ ಕತ್ತರಿಸಿದ ಆವೃತ್ತಿಗಳು, ಶಾರ್ಪ್ ಪೆನ್ಸಿಲ್ ಸ್ಕರ್ಟ್‌ಗಳು ಮತ್ತು ಕ್ಲಿಪ್ಡ್ ಫ್ಲೌನ್ಸ್ ಸಿಲೂಯೆಟ್‌ಗಳನ್ನು ಇತ್ತೀಚಿನ ಟ್ರೆಂಡ್‌ಗಳೆಂದು ಪಟ್ಟಿ ಮಾಡುತ್ತಾರೆ. ಇನ್ನೂ ಒಂದು ಗಮನಿಸುವ ಸಂಗತಿ ಏನೆಂದರೆ, "ತೆಳ್ಳಗಿನ ರಚನೆಗಳು, ಮೆಶ್ ಅಥವಾ ಸ್ಯಾಟಿನ್ ಮೆಟೀರಿಯಲ್ ಗಳಿಂದ ರೂಪಿತವಾದ ಮಿನುಗುಬೊಟ್ಟುಗಳು (ಸೀಕ್ವಿನ್) ಮತ್ತು ಮಿಡಿ ಆಯಾಮಗಳನ್ನು ಹೊಂದಿರುವ ಭಿನ್ನ ವಿಭಿನ್ನ ಕಟ್‌ಗಳನ್ನು ಹೊಂದಿರುವ ಐಟಂಗಳು ಪ್ರಸ್ತುತ ಸ್ಕರ್ಟ್ ಜಗತ್ತಿನಲ್ಲಿ ಮೆರೆಯುತ್ತಿವೆ," ಎಂದು ಅವರು ವಿವರಿಸುತ್ತಾರೆ.
ಝೆನ್-Z ಪ್ರಜ್ಞೆಯೂ ಜಾಗೃತ
ಸ್ಟೈಲ್ ವಿಷಯಕ್ಕೆ ಬಂದಾಗ, ಪ್ಲೀಟ್ ಅಥವಾ ನೆರಿಗೆಗಳು, ಪಾಕೆಟ್‌ಗಳು, ರಫಲ್, ಸುಕ್ಕುಗಟ್ಟಿದಂತೆ ಕಾಣುವ ರಚನೆಗಳು, ಲೇಸ್‌ವರ್ಕ್, ನಿಟ್‌ವೇರ್, ಪಾರದರ್ಶಕ ಓವರ್‌ಲೇಗಳು, ಮಧ್ಯದಲ್ಲಿ ಒಂದಷ್ಟು ಸೀಳುಗಳು ಈ ಸ್ಕರ್ಟ್‌ಗಳ ಲೋಕದಲ್ಲಿ ಇನ್ನೂ ಎಷ್ಟೊಂದು ಅವಕಾಶಗಳಿವೆಯಲ್ಲ ಎಂಬ ಅಚ್ಚರಿಯನ್ನು ಮೂಡಿಸುತ್ತವೆ.. ಹೊಸ ಶೈಲಿಯ ಟ್ರೆಂಡ್‌ಗಳ ಪಟ್ಟಿಗೆ ಸೇರಿಸುವುದಾದರೆ, ಇಂದಿನ ಫ್ಯಾಷನ್ ಪ್ರಜ್ಞೆಯ ಜೆನ್ ಝಡ್-ಗಾಗಿ ಅನೇಕ ವಿನ್ಯಾಸಕಾರರು "ಹಳೆಯ ಅಂಶಗಳನ್ನೂ ಜೊತೆಗೆ ಪೋಣಿಸಿ ಅಂಚುಗಳಿಗೆ ಅಸಮವಾದ ಟಚ್ ನೀಡುತ್ತಾರೆ ಮತ್ತು ಬೋಲ್ಡ್ ಆಗಿ ಕಾಣಿಸುವ ಝಿಪ್ಪರ್ಗಳ ಜೊತೆಗೆ ಲೆದರ್ ಪ್ಯಾಚ್‌ಗಳನ್ನು ಅಳವಡಿಸುತ್ತಾರೆ"
ಈ ಮಧ್ಯೆ, ಬೋಹೀಮಿಯನ್ ಡ್ರೆಸ್ಸರ್ ಶೈಲಿಗಳು ಅದರಲ್ಲಿ ಅಡಕವಾಗಿರುವ ಪದರ-ಪದರವಾಗಿರುವ ಕಟ್-ಔಟ್ ಪ್ಯಾನೆಲ್‌ಗಳು, ಬಟನ್-ಫ್ರಂಟ್ ಕ್ಲೋಸರ್‌ಗಳನ್ನು ಮಜಾ ಕೊಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ಈ ರಚನೆಯಲ್ಲಿ ಸ್ಟಿಚ್ ಮಾಡಲಾದ ಪ್ರತಿಯೊಂದು ಪದರವೂ ಕೂಡ ಸೌಂದರ್ಯಕ್ಕೆ ಒತ್ತು ನೀಡುತ್ತವೆ. ಇಂತಹ ಪ್ರಯೋಗಗಳನ್ನು ಜಾರಿಗೆ ತರುವುದರಲ್ಲಿ ಯಾವತ್ತೂ ಖುಷಿ ನೀಡುತ್ತವೆ ಎನ್ನುತ್ತಾರೆ ಇಶಾ ಪಚೆರಿವಾಲ್
"ಇಂತಹ ಲಂಗಗಳಲ್ಲಿ ಟೆಕ್ಸ್ಚರ್ (ರಚನೆ)ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತೇವೆ. ನಾವು ನಮ್ಮ ಸಂಗ್ರಹಗಳಲ್ಲಿ ಕಸೂತಿ ಮಾಡಿದ ಪ್ಯಾನೆಲ್‌ಗಳು, ಅತ್ಯಂತ ಸೂಕ್ಷ್ಮ ಸ್ಪರ್ಶವನ್ನು ಒಳಗೊಂಡ ಮೆಟಲ್ ಹೈಲೈಟ್‌ಗಳು ಮತ್ತು ವಿಶಿಷ್ಟ ರೀತಿಯ ಸೊಂಟದ ಪಟ್ಟಿಗಳನ್ನು ಸೇರಿಸುವ ಮೂಲಕ ಹೊಸ ಪ್ರಯೋಗ ಮಾಡುತ್ತಿದ್ದೇವೆ. ಇಂತಹ ವಿವರಗಳು ಇರುವುದರಿಂದ ಸ್ಕರ್ಟ್‌ಗಳು ಇತರ ಕಸೂತಿ ಅಂಶಗಳಿಂದಲೇ ಎದ್ದು ಕಾಣುವಂತೆ ಮಾಡುತ್ತವೆ. ಸೈಡ್ ಟೈ, ಅಥವಾ ಮೃದುವಾದ ರೂಚಿಂಗ್‌ನಂತಹ ಸಣ್ಣ ಸಣ್ಣ ಅಂಶಗಳು ಸರಳವಾದ ಸಿಲೂಯೆಟ್ ಅನ್ನು ಕೂಡ ಉನ್ನತೀಕರಿಸಬಹುದು." ಎನ್ನುವ ಅಭಿಪ್ರಾಯ ಅವರದ್ದಾಗಿದೆ.
ಭಾರತದ ಫ್ಯಾಶನ್ ಜಗತ್ತು ಸ್ಕರ್ಟ್-ಗಳಿಗೆ ಹೊಸ ಸ್ಪರ್ಶ ನೀಡಿದೆ. ಎಲ್ಲ ಋತುವಿಗೂ, ಎಲ್ಲ ಸಂಸ್ಕೃತಿ-ಸಮಾರಂಭಗಳಿಗೂ ಲಗತ್ತಾಗಬಲ್ಲ ಲಂಗಗಳ ವಿನ್ಯಾಸಗಳು ಈಗ ಎಲ್ಲ ಬ್ರಾಂಡ್-ಗಳಲ್ಲಿಯೂ ಲಭ್ಯ.
ಹೀಗೆ ಲಂಗಗಳೆಂದರೆ ಸೀದಾಸಾದಾ ದಿರಿಸೆಂದು ಮೂಗು ಮುರಿಯುವವರನ್ನೂ ಮೀರಿಸುವ ಹಾಗೆ ಅವು ಎಷ್ಟೊಂದು ವೈನು-ವೈನಾಗಿ ರೂಪಾಂತರಗೊಂಡಿವೆ ಎಂಬುದು ಉಡುಪುಗಳ ಲೋಕದಲ್ಲೊಮ್ಮೆ ವಿಹರಿಸಿಬಂದಾಗಲೇ ತಿಳಿಯುತ್ತದೆ. ಅವುಗಳ ವೈವಿಧ್ಯತೆಗೆ ತಕ್ಕಂತೆ ಗುಣಮಟ್ಟವೂ ಇರುವುದರಿಂದ ಉಳಿದ ಉಡುಪುಗಳಿಂದ ಪ್ರತ್ಯೇಕಿಸಿ ನೋಡುವಂತೆ ಮಾಡುತ್ತದೆ. "ಪೆನ್ಸಿಲ್‌ನಿಂದ ಫಿಶ್‌ಟೇಲ್‌ವರೆಗಿನ ಸ್ಕರ್ಟ್‌ಗಳಲ್ಲಿ ಇರುವ ಪ್ರತಿಯೊಂದು ವಿಧವು ನಮ್ಮ ವ್ಯಕ್ತಿತ್ವವನ್ನು ಅಳೆದುಬಿಡುತ್ತವೆ. ನಮ್ಮ ಮನಸ್ಥಿತಿಯನ್ನು ವ್ಯಕ್ತಪಡಿಸುವ ವಿಶಿಷ್ಟ ಮಾರ್ಗವನ್ನು ಅನಾವರಣಗೊಳಿಸುತ್ತದೆ, ಇದು ವಿನ್ಯಾಸಕರು ಮತ್ತು ಧರಿಸುವವರು ಇಬ್ಬರಿಗೂ ಅಚ್ಚುಮೆಚ್ಚಿನ ಉಡುಪಾಗಿ ಮಾಡುತ್ತದೆ," ಎಂದು ಜೈನ್ ಹೇಳುತ್ತಾರೆ.
ಸ್ಕರ್ಟ್‌ಗಳಲ್ಲಿ ದೇಸಿ ಹುಡುಗಿಯರು
ಇನ್ನಷ್ಟು ನಾವೀನ್ಯತೆಯೊಂದಿಗೆ, ಹೊಸಯುಗದ ಸ್ಕರ್ಟ್‌ಗಳ ಶ್ರೇಣಿಯನ್ನು ಈಗ ವಿನ್ಯಾಸಕರ ಲುಕ್‌ಬುಕ್‌ಗೆ ಸೇರಿಸಬಹುದಾಗಿದೆ. ತಂತ್ರಜ್ಞಾನ-ಸಂಯೋಜಿತವಾದ ಹೊಸತನಗಳಲ್ಲಿ ಥರ್ಮೊಕ್ರೋಮಿಕ್ ಫ್ಯಾಬ್ರಿಕ್‌ಗಳಿಂದ (ಬಣ್ಣ ಅಥವಾ ತಾಪಮಾನವನ್ನು ಬದಲಾಯಿಸುವ) ತಯಾರಿಸಿದ ಸ್ಮಾರ್ಟ್ ಸ್ಕರ್ಟ್‌ಗಳು, ಆರೋಗ್ಯ ಸಂವೇದಕಗಳು, ಮತ್ತು ಹವಾಮಾನಕ್ಕೆ ಹೊಂದಿಕೊಳ್ಳುವ ವಸ್ತುಗಳು, ಜೊತೆಗೆ ವೈಯಕ್ತಿಕ ಆಸಕ್ತಿಗೆ ತಕ್ಕ ಫಿಟ್‌ಗಳು ಮತ್ತು 3D-ಮುದ್ರಿತ ವಿನ್ಯಾಸಗಳಿಗಾಗಿ 4D-Text ತಂತ್ರಜ್ಞಾನಗಳು ಕೂಡ ಸೇರ್ಪಡೆಗೊಂಡಿವೆ.
ಈ ಸ್ಕರ್ಟ್‌ಗಳ (ಸ್ಕರ್ಟ್ ಮತ್ತು ಶಾರ್ಟ್ಸ್ ಮಿಶ್ರಣ) ಗತವೈಭವ ಮರಳಿ ಬರುತ್ತಿವೆ ಎಂದು ತಜ್ಞರು ಹೇಳುತ್ತಾರೆ. ಅಂತರ್ನಿರ್ಮಿತವಾದ ಪದರಗಳನ್ನು ಹೊಂದಿರುವ ಹೈಬ್ರಿಡ್ ಉಡುಪುಗಳು ಕೂಡ ಮಾಡರ್ನ್ ಟಚ್ ನೀಡುತ್ತಿವೆ ಎಂದು ಅವರು ಹೇಳುತ್ತಾರೆ. "ನಮ್ಮ ಬ್ರ್ಯಾಂಡ್ ಸಮಕಾಲೀನ ಭಾರತೀಯ, ಸ್ಥಳೀಯ ಅಂಶಗಳಿಂದ ಪ್ರೇರಿತವಾದ ವಿವರಗಳ ಕಡೆಗೆ ಪ್ರಜ್ಞಾಪೂರ್ವಕವಾಗಿ ಗಮನಹರಿಸುತ್ತದೆ. ಆದ್ದರಿಂದ, ನಾವು ಹೆಚ್ಚಾಗಿ ಉತ್ತಮ ಕಸೂತಿ ಅಥವಾ ಹೊಸ ಬಟ್ಟೆಯ ಜೋಡಣೆಗಳೊಂದಿಗೆ ಸ್ಕರ್ಟ್-ಗಳಿಗೆ ಕ್ಲಾಸಿಕ್ ಸ್ವರೂಪ ನೀಡುತ್ತೇವೆ," ಎಂದು ಇಶಾ ಪಚೆರಿವಾಲ್ ಹೇಳುತ್ತಾರೆ.
ಹೆಚ್ಚಿನ ಸ್ಕರ್ಟ್‌ಗಳನ್ನು ಭಾರತ ದೇಹದ ಪ್ರಕಾರಗಳಿಗೆ ಅನುಗುಣವಾಗಿ ಆದ್ಯತೆ ಮೇಲೆ ವಿನ್ಯಾಸಗೊಳಿಸಬಹುದು ಮತ್ತು ಕಸ್ಟಮೈಸ್ ಮಾಡಬಹುದು. "ಅಲೈನ್ ಮತ್ತು ಎತ್ತರದ ಸೊಂಟದ ಸ್ಕರ್ಟ್‌ಗಳು ತುಂಬಿದ ಮೈಕಟ್ಟನ್ನು ಬ್ಯಾಲೆನ್ಸ್ ಮಾಡುತ್ತವೆ, ಆದರೆ ನೀಳಕಾಯದ ಅಥವಾ ಪೆನ್ಸಿಲ್ ಕಟ್‌ಗಳು ಸಣ್ಣ, ಸಣಕಲು ಆಕಾರಕ್ಕೂ ಪ್ರಭೆಯನ್ನು ತುಂಬುತ್ತವೆ. ಸಹಜ ಸೊಂಟದ ಗಾತ್ರಕ್ಕೆ ಒತ್ತು ನೀಡುವ ಮತ್ತು ದೇಹದ ಉದ್ದಕ್ಕೆ ಲಗತ್ತಾಗುವ ಫಿಟ್‌ಗಳೊಂದಿಗೆ ಕೆಲಸ ಮಾಡುವುದು ನಮ್ಮ ಯೋಚನೆ. ಇದು ಸಹಜತೆಯನ್ನು ಬಿಂಬಿಸಬೇಕು," ಎಂದು ಪಚೆರಿವಾಲ್ ವಿವರಿಸುತ್ತಾರೆ.
ಹೊಂದಾಣಿಕೆ ಮತ್ತು ಬಣ್ಣಗಳ ಲೋಕ
ಭಾರತದ ದೇಹ ಪ್ರಕಾರಗಳು ವೈವಿಧ್ಯಮಯ. ಆದರೆ ಖುಷಿಯ ಸಂಗತಿಯೆಂದರೆ ಸ್ಕರ್ಟ್‌ಗಳು ಈ ವಿಭಿನ್ನ ಆಕಾರಗಳಿಗೆ ಪಕ್ಕಾ ಸೂಟ್ ಆಗುತ್ತವೆ. "ವಿಶಾಲ ಸ್ವರೂಪದ ಸ್ಕರ್ಟ್‌ಗಳು ಪಿಯರ್ ಆಕಾರದ ಮೈಕಟ್ಟುಗಳಿಗೆ ಬಿನ್ನಾಣವನ್ನು ತುಂಬುತ್ತವೆ, ಆದರೆ ಪೆನ್ಸಿಲ್ ಸ್ಕರ್ಟ್‌ಗಳು hourglass (ಮರಳು ಗಡಿಯಾರ) ಸ್ವರೂಪದ ಸೊಂಟವನ್ನು ಆಕರ್ಷಕಗೊಳಿಸುತ್ತವೆ. ಮ್ಯಾಕ್ಸಿ ಮತ್ತು ವ್ರ್ಯಾಪ್ ಶೈಲಿಗಳು ಸಣ್ಣ ಮೈಕಟ್ಟುಗಳು ಎತ್ತರವಾಗಿ ಮತ್ತು ಹೆಚ್ಚು ತೆಳ್ಳಗೆ ಕಾಣುವಂತೆ ಮಾಡುತ್ತವೆ. ಹೀಗೆ ಸ್ಕರ್ಟ್‌ಗಳ ಬಹುಮುಖ ಮೋಡಿಯು ಪ್ರತಿಯೊಂದು ಕಟ್ ಅಗತ್ಯವಿರುವ ಕಡೆ ವಕ್ರಾಕೃತಿಗಳನ್ನು ಹೆಚ್ಚಿಸುತ್ತದೆ," ಎಂದು ಜೈನ್ ವಿವರಿಸುತ್ತಾರೆ.
ಬ್ಯಾಂಕರ್ ಅಜಂತಾ ಗಿಲ್ ಅವರು ಇದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ, "ನಾನು ಪ್ಲಸ್-ಸೈಜ್ ವ್ಯಕ್ತಿ, ಮತ್ತು ನನ್ನ ದಪ್ಪ ಮೈಕಟ್ಟಿನ ಹೊರತಾಗಿಯೂ ನಾನು ಜೀನ್ಸ್ ಧರಿಸಲು ಯಾವಾಗಲೂ ಹಿಂಜರಿಯುತ್ತೇನೆ, ಆದರೆ ಸ್ಕರ್ಟ್ ಧರಿಸಲು ಯಾವತ್ತೂ ಹಿಂಜರಿದಿಲ್ಲ. ನನ್ನಂತಹ ಮಹಿಳೆಯರು ಸ್ಕರ್ಟ್ ತೊಟ್ಟು ರಸ್ತೆಯಲ್ಲಿ ಆತ್ಮವಿಶ್ವಾಸದಿಂದ ನಡೆಯಬಹುದು, ಅವು ವಿಶಾಲ ಸೊಂಟವನ್ನು ಗುರುತಿಸಿ ಸ್ತ್ರೀ ಸೌಂದರ್ಯವನ್ನು ಹೆಚ್ಚಿಸುತ್ತವೆ. ನನ್ನ ಪ್ರತಿ ಹೆಜ್ಜೆಯೊಂದಿಗೆ ಲಯಬದ್ಧವಾಗಿ ಚಲಿಸುವ ಸ್ಕರ್ಟ್‌ನಲ್ಲಿ ನನ್ನ ಮೈಕಟ್ಟು ಅದ್ಭುತವಾಗಿ ಕಾಣುತ್ತದೆ," ಎಂದು ಅವರು ತಮ್ಮ ಮಾದಕ ನಗುವಿನೊಂದಿಗೆ ಹೇಳುತ್ತಾರೆ.
ಈ ಋತುವಿನಲ್ಲಿ ಲೆಕ್ಕವಿಲ್ಲದಷ್ಟು ಬಣ್ಣದ ಸ್ಕರ್ಟ್ಗಳು ಪ್ರಚಲಿತದಲ್ಲಿವೆ. ಮೋಚಾ ಮತ್ತು ಎಸ್‌ಪ್ರೆಸ್ಸೊದಂತಹ ಕಾಫಿ ಕಲರು, ಪುಡಿ ಗುಲಾಬಿ ಬಣ್ಣಗಳು, ಬ್ಲಶ್ ಟೋನ್, ಪಿಸ್ತಾ ಹಸಿರು, ಚಾರ್ಟ್ರೂಸ್ (Chartreuse), ತಿಳಿ ಮಣ್ಣಿನ ತಟಸ್ಥ ಬಣ್ಣಗಳು, ಹಾಗೆಯೇ ಕ್ಲಾಸಿಕ್ ಅಥವಾ ಕೋಬಾಲ್ಟ್ ನೀಲಿ ಮತ್ತು ಕೆಂಪು ಛಾಯೆಗಳು ವರ್ಣದ್ರವ್ಯದ ಪ್ಯಾಲೆಟ್‌ನಲ್ಲಿ ಪಾರಮ್ಯ ಮೆರೆಯುತ್ತಿವೆ.
ನಸು ಹಳದಿ ಮಿಶ್ರಿತ ಕಂದುಬಣ್ಣ (ಬೀಜ್), ಕ್ರೀಮ್ ಮತ್ತು ಮೃದು ಮಧುರ ನೈಸರ್ಗಿಕ ಛಾಯೆಗಳಂತಹ ತಟಸ್ಥ ಬಣ್ಣದ ಸ್ಕರ್ಟ್‌ಗಳಿಗೆ ಯಾವತ್ತೂ ಬೇಡಿಕೆ ಇದೆ. ಕಾಲಕ್ಕೆ ತಕ್ಕ ಬಣ್ಣಗಳ ಮೂಲಕ ಪ್ರತಿದಿನದ ಉಡುಗೆಗೆ ಸ್ವಲ್ಪ ವೈವಿಧ್ಯತೆಯನ್ನು ಸೇರಿಸುವುದು ಬುದ್ಧಿವಂತಿಕೆಯಾಗಿದೆ. ಹೂವಿನ ವಿನ್ಯಾಸಗಳು ಪ್ರಾಬಲ್ಯ ಸಾಧಿಸುತ್ತಿವೆ, ವಿಶೇಷವಾಗಿ ಸೂಕ್ಷ್ಮವಾದ, ಎಲ್ಲೆಡೆ ಹರಡಿದಂತಿರುವ ವಿನ್ಯಾಸಗಳಿಗೆ ಬೇಡಿಕೆ. ಕನಿಷ್ಠ ಅಮೂರ್ತ ಪ್ರಿಂಟ್‌ಗಳು ಮತ್ತು ಸ್ಥಳೀಯ ವಿನ್ಯಾಸಗಳೂ ಡಿಮಾಂಡ್ ಕಾಯ್ದುಕೊಂಡಿವೆ.
ಪ್ಲಾಯ್ಡ್ (plaid) ಮತ್ತು ಟಾರ್ಟನ್ (tartan) ವಿನ್ಯಾಸಗಳು, ಸೂಕ್ಷ್ಮ ಹೂವಿನ ವಿನ್ಯಾಸಗಳು, ಪೋಲ್ಕಾ ಡಾಟ್, ಪಿನ್‌ಸ್ಟ್ರೈಪ್ ಮತ್ತು ಲೇಯರ್ಡ್ ಸ್ಟ್ರೈಪ್, ಪ್ರಾಣಿಗಳ ಚಿಹ್ನೆಗಳು, ವಿಂಟೇಜ್ ವಿನ್ಯಾಸಗಳ ಮಿಶ್ರಣಗಳು, ಬೋಹೊ-ಪ್ರೇರಿತ ಥೀಮ್‌ಗಳು, ಮತ್ತು ಕಲಾತ್ಮಕ ಅಥವಾ ಅಮೂರ್ತ ಚಿತ್ರಣಗಳು ಪ್ರಧಾನವಾಗಿ ದೃಶ್ಯ ರೂಪರೇಖೆಯನ್ನು ರೂಪಿಸುತ್ತವೆ, ವಿನ್ಯಾಸಕರು ತಮ್ಮ ರಚನೆಗಳಿಗೆ ಜೀವ ತುಂಬಲು ಇವುಗಳನ್ನು ಬಳಸುತ್ತಾರೆ.
ವಸ್ತುವಿನ ಮಾಂತ್ರಿಕತೆ
ಸಾಂಪ್ರದಾಯಿಕವಾಗಿ, ಸ್ಕರ್ಟ್‌ಗಳನ್ನು ಹತ್ತಿ, ರೇಷ್ಮೆ, ಸ್ಯಾಟಿನ್, ಜಾರ್ಜೆಟ್, ಶಿಫಾನ್, ಕ್ರೇಪ್, ಉಣ್ಣೆ, ಟ್ವೀಡ್ ಮತ್ತು ಲಿನಿನ್‌ನಂತಹ ಬಟ್ಟೆಗಳಲ್ಲಿ ವಿನ್ಯಾಸಗೊಳಿಸಲಾಗುತ್ತದೆ, ಪ್ರತಿಯೊಂದೂ ತನ್ನದೇ ಆದ ವಿಶಿಷ್ಟವಾದ ಫಾಲ್ ಮತ್ತು ರಚನೆಯನ್ನು ಹೊಂದಿದೆ. ಇಂದು, ವಿನ್ಯಾಸಕರು ಡೆನಿಮ್ ಮತ್ತು ಲೆದರ್‌ಗಿಂತಲೂ ಹೆಚ್ಚಾಗಿ, ತೆಳ್ಳನೆ ಅಸಾಂಪ್ರದಾಯಿಕ ವಸ್ತುಗಳೊಂದಿಗೆ ಪ್ರಯೋಗ ಮಾಡುತ್ತಿದ್ದಾರೆ. ಜೊತೆಗೆ, ಸೆಣಬಿನ ಮತ್ತು ಬಿದಿರಿನ ಮಿಶ್ರಣಗಳು, ಮರುಬಳಕೆಯ ಪಾಲಿಯೆಸ್ಟರ್ ಮತ್ತು ಟೆಕ್-ಚಾಲಿತ ಜವಳಿಗಳಂತಹ ಸುಸ್ಥಿರ ಆಯ್ಕೆಗಳು ಆರಾಮ ಮತ್ತು ನಿರಾಳ ಭಾವನೆಯನ್ನು ನೀಡುತ್ತವೆ.
"ಈ ಅಸಾಮಾನ್ಯ ಮಾಧ್ಯಮಗಳು ಕ್ಲಾಸಿಕ್ ಟೈಲರಿಂಗ್‌ನ ಮೂಲತತ್ವವನ್ನು ಗೌರವಿಸುತ್ತಾ, ಹೊಸತನಕ್ಕೆ ಆಹ್ವಾನ ನೀಡುತ್ತವೆ," ಎಂದು ಜೈನ್ ಹೇಳುತ್ತಾರೆ.
ಬಜೆಟ್ ಸ್ನೇಹಿ ಮತ್ತು ಉನ್ನತ ಮಟ್ಟದ ಬ್ರ್ಯಾಂಡ್‌ಗಳು ತಮ್ಮ ಹಬ್ಬದ ಸಂಗ್ರಹ ಮತ್ತು ಆಯಾ ಋತುವಿಗೆ ಅನ್ವಯವಾಗುವ ಕೊಡುಗೆಗಳನ್ನು ಆಕರ್ಷಕ ರಿಯಾಯಿತಿಗಳು ಮತ್ತು ಉಚಿತ ಕೊಡುಗೆಗಳೊಂದಿಗೆ ಹೊರತರುತ್ತವೆ. ಉತ್ಸಾಹಿ ಖರೀದಿದಾರರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಾಗುತ್ತದೆ.
"ಹಬ್ಬದ ಸ್ಕರ್ಟ್‌ಗಳ ಬೆಲೆ ಶ್ರೇಣಿಯು ರೂ.1,000 ರಿಂದ ರೂ.4,000 ನಡುವೆ ಇರುತ್ತದೆ. ನಮ್ಮಲ್ಲಿ ಖರೀದಿ ಮಾಡುವವರಲ್ಲಿ ಮಕ್ಕಳಿಂದ ಹಿಡಿದು ಮಧ್ಯವಯಸ್ಕ ವಯಸ್ಕರವರೆಗಿನ ವ್ಯಾಪಕ ಶ್ರೇಣಿಯ ಖರೀದಿದಾರರು ಸೇರಿದ್ದಾರೆ. ಕಾರ್ಪೊರೇಟ್ ಉದ್ಯೋಗಿಗಳು, ಶಾಲಾ ಮಕ್ಕಳು ಮತ್ತು ಗೃಹಿಣಿಯರು ಕೂಡ ನಮ್ಮ ಅಂಗಡಿಗಳಿಗೆ ಬಂದು ಒಂದು ಉಡುಪನ್ನು ಆರಿಸಿಕೊಳ್ಳುತ್ತಾರೆ," ಎಂದು ಪ್ರಮುಖ ಸ್ವೀಡಿಷ್ ಬಹುರಾಷ್ಟ್ರೀಯ ಫಾಸ್ಟ್ ಫ್ಯಾಷನ್ ಬ್ರ್ಯಾಂಡ್ ಎಚ್&ಎಮ್ (H&M)ನ ಗ್ರಾಹಕ ಸೇವಾ ಕಾರ್ಯನಿರ್ವಾಹಕರೊಬ್ಬರು ಹೇಳುತ್ತಾರೆ.
ಹಬ್ಬದ ದಿನಗಳಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಮಾರಾಟವು ಸಹಜವಾಗಿ ಹೆಚ್ಚಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ನಂತರ ಇ-ಕಾಮರ್ಸ್ ಹೆಚ್ಚಿದ ಕಾರಣ, ಮಿಂತ್ರಾ, ಅಜಿಯೋ, ಮೀಶೋ ಮತ್ತು ಇತರ ಪ್ರಮುಖ ಫ್ಯಾಷನ್ ಚಿಲ್ಲರೆ ವ್ಯಾಪಾರಿಗಳಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಈ ಅವಧಿಗಳಲ್ಲಿ ಉತ್ತಮ ವ್ಯಾಪಾರ ಮಾಡುತ್ತಿವೆ.