ಮಾನವ ಇತಿಹಾಸದಲ್ಲಿ ಗೋಲ್ಕೊಂಡ ಕೊಹಿನೂರ್ ಎಂಬ ‘ಬೆಳಕಿನ ಪರ್ವತ’ ಸಾಗಿ ಬಂದ ಕದನದ ಹಾದಿ
“ಒಬ್ಬ ಮನುಷ್ಯ ನಾಲ್ಕು ದಿಕ್ಕುಗಳ ನಡುವಿನ ಜಾಗವನ್ನು ಚಿನ್ನದಿಂದ ತುಂಬಿದರೂ, ಅದು ಈ ರತ್ನಕ್ಕೆ ಸಮನಲ್ಲ.” ಗೋಲ್ಕೊಂಡದ ಕೊಹಿನೂರ್ ವಜ್ರ ಮಂಜಿನ ಹನಿಯಂತೆ ಶುದ್ಧಾತಿ ಶುದ್ದ. ಈ ವಜ್ರ ಸಾಗಿ ಬಂದ ಕದನದ ಹಾದಿ ಶ್ಲಾಘನೀಯ...
ಚಕ್ರವರ್ತಿ ಔರಂಗಜೇಬ್ ಆಡಳಿತದಲ್ಲಿ ಮೊಘಲ್ ಸಾಮ್ರಾಜ್ಯದ ವೈಭವವು ಏಷ್ಯಾದ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ವ್ಯಾಪಿಸಿಕೊಂಡಿತ್ತು. ಆದರೆ ಇಷ್ಟೊಂದು ವಿಶಾಲವಾದ ಸಾಮ್ರಾಜ್ಯದ ದೊರೆ ದಕ್ಷಿಣದ ಗೋಲ್ಕೊಂಡದಂತಹ ಒಂದು ಸಣ್ಣ ರಾಜ್ಯದ ಮೇಲೆ ಕಣ್ಣಿಟ್ಟಿದ್ದಾದರೂ ಯಾಕೆ? ಈಗಾಗಲೇ ತಾನು ಹೊಂದಿಲ್ಲದೇ ಇರುವಂತಹದ್ದನ್ನು ಆತ ಅಲ್ಲಿ ಕಂಡಿದ್ದಾದರೂ ಏನು?
ಇದಕ್ಕೆ ಸಿಗುವ ಉತ್ತರವೇ- ವಜ್ರಗಳು ಮತ್ತು ಅತ್ಯುತ್ತಮ ಗುಣಮಟ್ಟದ ಜವಳಿಗಳು.
ಕೋಲಾರ, ಹಟ್ಟಿ, ರಾಮಗಿರಿ, ಪೆನುಗೊಂಡ, ಗೋಲ್ಕೊಂಡ ಮತ್ತು ಸತ್ತೆನಪಲ್ಲಿ ಪ್ರದೇಶಗಳು ತಮ್ಮ ವಜ್ರದ ಗಣಿಗಳಿಗಾಗಿ ಪ್ರಸಿದ್ಧವಾಗಿದ್ದವು. ಈ ಪ್ರದೇಶಗಳೆಲ್ಲವೂ ಗೋಲ್ಕೊಂಡದ ನಿಯಂತ್ರಣದಲ್ಲಿದ್ದ ಕಾರಣ, ಈ ರಾಜ್ಯವು ಅಪಾರ ಸಂಪತ್ತಿನ ಕಣಜವಾಗಿತ್ತು. ಈ ಪ್ರದೇಶದಲ್ಲಿ ಅತ್ಯಂತ ಐಷಾರಾಮಿ ರತ್ನಗಂಬಳಿಗಳು ಮತ್ತು ವೆಲ್ವೆಟ್ ಬಟ್ಟೆಗಳು ಕೂಡ ಉತ್ಪಾದನೆಯಾಗುತ್ತಿದ್ದವು. ವಸ್ತ್ರೋದ್ಯಮಗಳು ವಾರಂಗಲ್ನ ಕೋಠವಾಡ, ಸಿರಿಸಿಲ್ಲಾ (ಈಗಿನ ಪೋಚಂಪಲ್ಲಿ), ಗಡ್ವಾಲ್, ನಾರಾಯಣಪೇಟ್ ಮತ್ತು ಸಿದ್ಧಿಪೇಟ್ನಲ್ಲಿ ಅತ್ಯಂತ ಸಮೃದ್ಧವಾಗಿದ್ದವು. ಗೋಲ್ಕೊಂಡದ ರಫ್ತು ಜಾಗತಿಕ ಮಾರುಕಟ್ಟೆ ತನಕ ವಿಸ್ತರಿಸಿತ್ತು ಮತ್ತು ಅದಕ್ಕಾಗಿಯೇ ಔರಂಗಜೇಬ್ ಈ ರಾಜ್ಯವನ್ನು ತನ್ನದಾಗಿಸಿಕೊಳ್ಳಬೇಕು ಎಂದು ಆಸೆಪಟ್ಟನು ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ನಿವೃತ್ತ ನಿರ್ದೇಶಕ ಎಸ್.ವಿ. ಸತ್ಯನಾರಾಯಣ ಹೇಳುತ್ತಾರೆ.
ಐಷಾರಾಮಿ ಜೀವನದ ಪ್ರತೀಕ
ಗೋಲ್ಕೊಂಡದ ಕುತುಬ್ ಶಾಹಿ ಆಡಳಿತಗಾರರು ಡಚ್, ಇಂಗ್ಲಿಷ್ ಮತ್ತು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಖುದುರಿಸಿದ್ದರು. ಇದರಿಂದಾಗಿಯೇ ಹೈದರಾಬಾದನ್ನು ಒಂದು ಜಾಗತಿಕ (ಕಾಸ್ಮೋಪಾಲಿಟನ್) ವ್ಯಾಪಾರ ಕೇಂದ್ರವಾಗಿ ಪರಿವರ್ತಿಸಿತ್ತು. ಗೋಲ್ಕೊಂಡವು ದಕ್ಷಿಣ ಭಾರತದ ಮೊದಲ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿತು. ಇದು ಹೈದರಾಬಾದನ್ನು ದೌಲತಾಬಾದ್ ಮತ್ತು ಔರಂಗಾಬಾದ್ ಮೂಲಕ ಸೂರತ್ಗೆ, ನಲ್ಗೊಂಡ ಮೂಲಕ ಮಚಲಿಪಟ್ಟಣಂಗೆ, ವಿಜಯವಾಡ ಮೂಲಕ ಮದ್ರಾಸ್ಗೆ, ಮತ್ತು ಬಿಜಾಪುರ ಮೂಲಕ ಗೋವಾಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಫ್ರೆಂಚ್ ಪ್ರವಾಸಿಗ ಜೀನ್-ಬ್ಯಾಪ್ಟಿಸ್ಟ್ ಟಾವರ್ನಿಯರ್ (1605-1689) ಬರೆದಿರುವ ಮಾತು ಇದಕ್ಕೆ ಸಾಕ್ಷಿ: “ಇಲ್ಲಿನ ಜನರು ಐಷಾರಾಮಿ ಜೀವನವನ್ನು ಪ್ರೀತಿಸುತ್ತಿದ್ದರು.”
ಫ್ರೆಂಚ್ ಪರಿಶೋಧಕ ಮತ್ತು ವಜ್ರಗಳ ವ್ಯಾಪಾರಿ ಟಾವರ್ನಿಯರ್ ಮೊದಲು ಭಾರತಕ್ಕೆ ಭೇಟಿ ನೀಡಿದ್ದು 1638ರಲ್ಲಿ. ಇಲ್ಲಿ ಕಂಡುಬರುವ ನೈಸರ್ಗಿಕ ವಜ್ರಗಳನ್ನು ನೋಡಿ ಚಕಿತನಾದ ಆತ, ಭಾರತದ ರತ್ನಗಳನ್ನು ಮನತುಂಬಿ ವರ್ಣಿಸಿದ್ದಾನೆ: "ಪ್ರಪಂಚದ ಅತ್ಯಂತ ಪರಿಶುದ್ಧವಾದ ವಜ್ರಗಳು ಇಲ್ಲಿ ಕಂಡುಬರುತ್ತವೆ" ಎಂದು ಆತ ಬರೆದಿದ್ದಾನೆ. ಟಾವರ್ನಿಯರ್ ಆರು ಬಾರಿ ಭಾರತಕ್ಕೆ ಭೇಟಿ ನೀಡಿದ್ದ ಮತ್ತು ಹಲವಾರು ವಜ್ರಗಳನ್ನು ಯುರೋಪ್ಗೆ ಕೊಂಡೊಯ್ದಿದ್ದ. ಅಲ್ಲಿ ಅವು ಯುರೋಪ್ ಮತ್ತು ರಷ್ಯಾದ ರಾಜಮನೆತನದವರನ್ನು ಆಕರ್ಷಿಸಿದವು: ಈ ವಜ್ರಗಳು ಅಧಿಕಾರ, ಪ್ರತಿಷ್ಠೆ ಮತ್ತು ಅದೃಷ್ಟದ ಸಂಕೇತಗಳಾಗಿದ್ದವು.
ರಾಜಮನೆತನದ ಖಜಾನೆ ಲೂಟಿ
ಗೋಲ್ಕೊಂಡವನ್ನು ವಶಪಡಿಸಿಕೊಂಡ ನಂತರ, ಕೋಟೆಯ ದುರಸ್ತಿ ಮತ್ತು ಭದ್ರಪಡಿಸಲು ಔರಂಗಜೇಬ್ ಆಗಿನ ಕಾಲದಲ್ಲಿ 80,000 ರೂ. ಖರ್ಚು ಮಾಡಿದ್ದ ಎಂದು 'ಮೊಘಲ್ ಅಡ್ಮಿನಿಸ್ಟ್ರೇಷನ್ ಇನ್ ಗೋಲ್ಕೊಂಡ (1975)' ಕೃತಿಯ ಲೇಖಕ, ಇತಿಹಾಸಕಾರ ಜಾನ್ ಎಫ್. ರಿಚರ್ಡ್ಸ್ (1938-2007) ಬರೆದಿದ್ದಾರೆ. ಮೊಘಲರು ಈ ಕೋಟೆಯ ಬಗ್ಗೆ "ಒಂದು ನಿರ್ದಿಷ್ಟ ವಾತ್ಸಲ್ಯವನ್ನು" ತೋರಿಸಲು ಪ್ರಯತ್ನಿಸಿದರು ಎಂಬುದನ್ನು ಅವರು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಆ ವಿಜಯವು ಸಾಧ್ಯವಾಗಿದ್ದು ಎಂಟು ತಿಂಗಳ ಮುತ್ತಿಗೆಯ ನಂತರವೇ. ಔರಂಗಜೇಬನು ಕುತುಬ್ ಶಾಹಿ ಅಧಿಕಾರಿಯಾಗಿದ್ದ ಸರಂದಾಜ್ ಖಾನ್ಗೆ ಲಂಚವನ್ನು ನೀಡಿ ಹಿಂಬಾಗಿಲನ್ನು ತೆರೆಯುವಂತೆ ಮಾಡಿದ. ಇದರಿಂದ ಮೊಘಲ್ ಸೈನ್ಯವು ಕೋಟೆಯೊಳಗೆ ನುಗ್ಗಲು ಸಾಧ್ಯವಾಯಿತು. ಅವರು ರಾಜಮನೆತನದ ಖಜಾನೆಯನ್ನು ಲೂಟಿ ಮಾಡಿದರು. ನೂರ್-ಉಲ್-ಐನ್, ಕಾರಾ, ಹೋಪ್, ದರ್ಯಾ-ಎ-ನೂರ್ ಮತ್ತು ರೀಜೆಂಟ್ನಂತಹ ಪ್ರಮುಖ ವಜ್ರಗಳನ್ನು ಔರಂಗಜೇಬನಿಗೆ ಒಪ್ಪಿಸಲಾಯಿತು.
ಮಸೀದಿ ತಳದಲ್ಲಿತ್ತು ಅಪಾರ ಸಂಪತ್ತು
ಇತಿಹಾಸದ ನಿವೃತ್ತ ಪ್ರಾಧ್ಯಾಪಕ ಅಡಪಾ ಸತ್ಯನಾರಾಯಣ ಅವರ ಪ್ರಕಾರ, 1672ರಿಂದ 1687ರವರೆಗೆ ಸಾಮ್ರಾಜ್ಯವನ್ನು ಆಳಿದ, ತಾನಾ ಷಾ ಎಂದೂ ಕರೆಯಲಾಗುತ್ತಿದ್ದ ಗೋಲ್ಕೊಂಡಾ ದೊರೆ ಅಬುಲ್ ಹಸನ್ ಕುತುಬ್ ಷಾ, ಕಪ್ಪ ಪಾವತಿ ಮಾಡುವುದನ್ನು ತಪ್ಪಿಸಲು ಜಾಮೀಯಾ ಮಸೀದಿಯ ಕೆಳಗೆ ಅಪಾರ ಸಂಪತ್ತನ್ನು ಅಡಗಿಸಿ ಇಟ್ಟಿದ್ದ. ಆದರೆ ಔರಂಗಜೇಬನು ಮಸೀದಿಯನ್ನು ನಾಶಪಡಿಸಿ ಆ ಸಂಪತ್ತನ್ನು ಹೊರತೆಗೆದ ಮತ್ತು 60 ದಶಲಕ್ಷಕ್ಕೂ ಹೆಚ್ಚು ರೂಪಾಯಿ ಮೌಲ್ಯದ ಸಂಪತ್ತನ್ನು ಒಂಟೆಗಳ ಸಾರಿಗೆ ಮೂಲಕ ಉತ್ತರ ಮೊಘಲ್ ರಾಜಧಾನಿಗಳಿಗೆ ಸಾಗಿಸಿದ.
1728ಕ್ಕೂ ಮೊದಲು, ಭಾರತವು ಜಗತ್ತಿನ ಏಕೈಕ ವಜ್ರಗಳ ಮೂಲವಾಗಿತ್ತು. ಭೂವಿಜ್ಞಾನಿಗಳ ಪ್ರಕಾರ, ಆಂಧ್ರಪ್ರದೇಶದ ಮಣ್ಣು ಜಗತ್ತಿನ ವಜ್ರಗಳ ಹೃದಯಭೂಮಿಯಾಗಿತ್ತು. ವಿಜಯನಗರ ಸಾಮ್ರಾಜ್ಯದ (1450-1530) ಅವಧಿಯಲ್ಲಿ, ಡೊಮಿಂಗೋ ಪೇಸ್‌ನಂತಹ ಪೋರ್ಚುಗೀಸ್ ಪ್ರವಾಸಿಗರು ರಸ್ತೆಗಳಲ್ಲಿ ರಾಶಿ ರಾಶಿಯಾಗಿ ಮಾರಾಟವಾಗುತ್ತಿದ್ದ ರತ್ನಗಲ್ಲುಗಳ ಬಗ್ಗೆ ಬಣ್ಣಿಸಿದ್ದಾರೆ. ನಂತರ, ಗೋಲ್ಕೊಂಡಾದ ಕುತುಬ್ ಶಾಹಿಗಳು ಗುಂಟೂರು, ಕೃಷ್ಣಾ, ಅನಂತಪುರ, ಕಡಪ ಮತ್ತು ಕರ್ನೂಲ್ ಪ್ರದೇಶದ ಉದ್ದಗಲಕ್ಕೂ ವಜ್ರ ಗಣಿಗಾರಿಕೆಯನ್ನು ಅಭಿವೃದ್ಧಿಪಡಿಸಿದರು ಎಂಬ ವಿವರಗಳು ನಮಗೆ ಲಭ್ಯವಾಗುತ್ತವೆ.
ಮುಂಬೈನ ಪ್ರಿನ್ಸ್ ಆಫ್ ವೇಲ್ಸ್ ವಸ್ತು ಸಂಗ್ರಹಾಲಯದಲ್ಲಿರುವ ಕೊಹಿನೂರ್ ವಜ್ರದ ತದ್ರೂಪು. ಚಿತ್ರ: ವಿಕಿಮಿಡಿಯಾ ಕಾಮನ್ಸ್
ನೀರ ಹನಿಯಂತೆ ಶುದ್ಧಾತಿ ಶುದ್ಧ
ಗೋಲ್ಕೊಂಡಾದ ವಜ್ರಗಳು ಯಾವುದಕ್ಕೂ ಸಾಟಿಯಿರಲಿಲ್ಲ. ಅವು ನೀರಿನ ಹನಿಗಳಂತೆ ಶುದ್ಧಾತಿ ಶುದ್ಧ. ಬಣ್ಣರಹಿತವಾಗಿದ್ದ ಅವುಗಳಲ್ಲಿ ಒಂದೇ ಒಂದು ಸಣ್ಣ ಕಲೆ ಗುರುತಿಸಲು ಸಾಧ್ಯವಿರಲಿಲ್ಲ. ನಿಸರ್ಗದತ್ತವಾದ ಬೆಳಕು ಮತ್ತು ಪಾವಿತ್ರ್ಯವನ್ನು ಅವು ಹೊರಸೂಸುತ್ತಿದ್ದವು. ಗೋಲ್ಕೊಂಡಾ ಇನ್‌ಸ್ಟಿಟ್ಯೂಟ್ ಆಫ್ ಡೈಮಂಡ್ಸ್‌ನ ಅಧ್ಯಕ್ಷರಾದ ಇಮ್ರಾನ್ ಷರೀಫ್ ಅವರು ಹೇಳುವಂತೆ, ಅರಬ್ಬರು ಮತ್ತು ಪರ್ಷಿಯನ್ನರಿಗೆ ಈ ವಜ್ರಗಳೆಂದರೆ ಅಪಾರ ಪ್ರೀತಿ ಮತ್ತು ಗೌರವ. ಕೆಲವು ಅಪರೂಪದ ವಜ್ರಗಳು ತಿಳಿ ಕಂದು, ಹಳದಿ ಅಥವಾ ಕಪ್ಪು ಬಣ್ಣದಲ್ಲಿದ್ದವು. ಕೆಲವು ಇನ್ನೂ ಅಪರೂಪದ ವಜ್ರಗಳು ಗುಲಾಬಿ, ಹಸಿರು, ಕೆಂಪು ಅಥವಾ ನೀಲಿ ಬಣ್ಣದಲ್ಲಿದ್ದವು.
ಗೋಲ್ಕೊಂಡಾ ಪ್ರದೇಶವು ಸೂರತ್ ಮತ್ತು ಮಚಿಲಿಪಟ್ಟಣಂ ಎಂಬ ಎರಡು ದೊಡ್ಡ ಬಂದರುಗಳ ನಡುವೆ ಹರಡಿಕೊಂಡಿತ್ತು. ಇದು ಜಾಗತಿಕ ವ್ಯಾಪಾರ ಕೇಂದ್ರವಾಗಿತ್ತು. ವಜ್ರದ ವ್ಯಾಪಾರವೇ ಉತ್ತುಂಗ ಸ್ಥಿತಿಯಲ್ಲಿತ್ತು. ಗಣಿಗಾರಿಕೆ, ಪಾಲಿಶ್ ಮಾಡುವುದು ಮತ್ತು ವಜ್ರಗಳನ್ನು ಕಾಯುವ ಕೆಲಸಕ್ಕಾಗಿ 1,10,000ಕ್ಕೂ ಹೆಚ್ಚು ಕಾರ್ಮಿಕರು ನೇಮಕಗೊಂಡಿದ್ದರು. ಕೊಲ್ಲೂರು ಗಣಿಗಳಲ್ಲಿ (ಗುಂಟೂರು ಜಿಲ್ಲೆ) ಪ್ರತಿದಿನ 60,000 ಜನರು ಮತ್ತು ರಾಮಲ್ಲಕೋಟೆಯಲ್ಲಿ (ಕರ್ನೂಲ್ ಜಿಲ್ಲೆ) 30,000 ಜನರು ಕೆಲಸ ಮಾಡುತ್ತಿದ್ದರು ಎಂದು ದಾಖಲೆಗಳು ತಿಳಿಸುತ್ತವೆ. ಮೊಘಲ್ ಸಿರಿವಂತನಾದ ಮೀರ್ ಜುಮ್ಲಾ ಸಹ ಕಡಪಾದ ಗಂಡಿಕೋಟೆಯ ಬಳಿ 12,000 ಕಾರ್ಮಿಕರ ಮೇಲ್ವಿಚಾರಣೆ ಮಾಡುತ್ತಿದ್ದ.
ನಲ್ಲಮಾಲ ಬೆಟ್ಟಗಳ ಅಂಚಿನಲ್ಲಿದ್ದ ಕೊಲ್ಲೂರು ಭಾರತದ ಅತಿದೊಡ್ಡ ವಜ್ರದ ಗಣಿಯಾಗಿತ್ತು; ಅಲ್ಲಿ ಇಂದಿಗೂ ಕುತುಬ್ ಶಾಹಿ ಯುಗದ ಕಾವಲುಗೋಪುರಗಳ ಅವಶೇಷಗಳು ಕಾಣಸಿಗುತ್ತವೆ. ಕ್ರಿ.ಪೂ. 327ರಲ್ಲಿ ಅಲೆಕ್ಸಾಂಡರ್ ದಿ ಗ್ರೇಟ್ ಕೆಲವು ವಜ್ರಗಳನ್ನು ಗ್ರೀಸ್ಗೆ ತೆಗೆದುಕೊಂಡು ಹೋದ ಸಂದರ್ಭದಲ್ಲಿ ಮತ್ತು ನಂತರ ಮಾರ್ಕೊ ಪೋಲೋ (1292) ಅವುಗಳ ಹೊಳಪಿಗೆ ವಿಸ್ಮಯಗೊಂಡಾಗ ಜಗತ್ತು ಭಾರತೀಯ ವಜ್ರಗಳ ಬಗ್ಗೆ ಮೊದಲ ಬಾರಿಗೆ ಅಚ್ಚರಿಯಿಂದ ಆಲಿಸಿತು.
ಬೆಳಕಿನ ಪರ್ವತವೆಂಬ ಕೊಹಿನೂರ್
ಆದರೆ ಎಲ್ಲಕ್ಕಿಂತ ಪ್ರಸಿದ್ಧವಾದ ವಜ್ರವೆಂದರೆ ಕೊಹಿನೂರ್ , ಇದು ಗುಂಟೂರು ಜಿಲ್ಲೆಯ ಕೃಷ್ಣಾ ನದಿಯ ಬಳಿಯ ಕೊಲ್ಲೂರು ಗ್ರಾಮದಲ್ಲಿ ಪತ್ತೆಯಾಗಿತ್ತು. ಮೂಲತಃ 793 ಕ್ಯಾರೆಟ್ಗಳಷ್ಟು ತೂಕವಿದ್ದ ಇದನ್ನು ನಂತರ 105.6 ಕ್ಯಾರೆಟ್ಗಳಿಗೆ ಕತ್ತರಿಸಲಾಯಿತು. ರಕ್ತ ಮತ್ತು ದಿಗ್ವಿಜಯದಲ್ಲಿ ಅದರ ಕಥೆಯು ನೆನೆದಿದೆ, ಇದು ಆಂಧ್ರದ ಅಪಾರ ನೈಸರ್ಗಿಕ ಸಂಪತ್ತಿನ ಸಂಕೇತ ಎಂಬುದರಲ್ಲಿ ಅನುಮಾನವಿಲ್ಲ.
1980ಲ್ಲಿ ಬರೆದ ಸ್ಟಿಫನ್ ಹೋವರ್ತ್ ಅವರ 'ದಿ ಕೊಹಿನೂರ್ ಡೈಮಂಡ್: ದಿ ಹಿಸ್ಟರಿ ಅಂಡ್ ದಿ ಲೆಜೆಂಡ್' ಕೃತಿಯ ಪ್ರಕಾರ, ಈ ರತ್ನ ಪತ್ತೆಯಾಗಿದ್ದು ಕೊಲ್ಲೂರಿನಲ್ಲಿ. ಇಂಗ್ಲೆಂಡ್ನ ಅರ್ಲ್ ಮಾರ್ಷಲ್ ಆಗಿದ್ದ ಹೆನ್ರಿ ಹೊವಾರ್ಡ್ ಒಮ್ಮೆ ಕೊಲ್ಲೂರು ಗಣಿಗಳನ್ನು “ಜಗತ್ತಿನ ಎಲ್ಲಾ ವಜ್ರದ ಗಣಿಗಳ ಆತ್ಮ" ಎಂದು ಕರೆದಿದ್ದರು. ಈ ರತ್ನವನ್ನು ಮೊದಲು ನೋಡಿದ ಪರ್ಷಿಯಾದ ದೊರೆ "ಕೋಹ್-ಇ-ನೂರ್" ಎಂದು ಉದ್ಗರಿಸಿದ. ಇದರ ಅರ್ಥ "ಬೆಳಕಿನ ಪರ್ವತ".
1657ರ ಕಾಲಘಟ್ಟದಲ್ಲಿ ಕೊಲ್ಲೂರಿನಲ್ಲಿ ಒಬ್ಬ ವಿದವೆ ಕೈಗೆ ಈ ವಜ್ರ ಸಿಕ್ಕಿತು. ಅದನ್ನು ಆಕೆ ಗ್ರಾಮದ ಮುಖ್ಯಸ್ಥರಿಗೆ ನೀಡಿದಳು. ಅವರು ಅದನ್ನು ಕುತುಬ್ ಶಾಹಿಗಳ ಮಂತ್ರಿಯಾಗಿದ್ದ ಮೀರ್ ಜುಮ್ಲಾ ಅವರಿಗೆ ತಲುಪಿಸಿದರು. ಚಕ್ರವರ್ತಿ ಷಾಜಹಾನ್ ಅವರನ್ನು ಮೆಚ್ಚಿಸುವ ಉದ್ದೇಶದಿಂದ ಮೀರ್ ಜುಮ್ಲಾ ಅದನ್ನು ಉಡುಗೊರೆಯಾಗಿ ನೀಡಿದ. ಅದು ನವಿಲಿನ ಸಿಂಹಾಸನದ ಪ್ರಮುಖ ಆಕರ್ಷಣೆಯಾಯಿತು ಎಂದು ಟ್ಯಾವರ್ನಿಯರ್ ಉಲ್ಲೇಖಿಸಿದ್ದಾನೆ. ನಂತರ ಔರಂಗಜೇಬ ಅದನ್ನು ತನ್ನ ಖಜಾನೆಯಲ್ಲಿ ಇರಿಸಿಕೊಂಡ. ಅದನ್ನು ಕತ್ತರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ವೆನಿಷಿಯನ್ ಆಭರಣಕಾರ ಹಾರ್ಟೆನ್ಸಿಯೋ ಬೋರ್ಜಿಯೋ, ಅದನ್ನು 793 ಕ್ಯಾರೆಟ್ಗಳಿಂದ 186 ಕ್ಯಾರೆಟ್ಗಳಿಗೆ ಇಳಿಸಿದ.
ಇಂಗ್ಲಂಡ್ ಕಡೆಗೆ ಪಯಣ
ಮುಂದೆ ಇದು ಔರಂಗಜೇಬ್ನ ಮೊಮ್ಮಗನಾದ ಮೊಹಮ್ಮದ್ ಷಾ ರಂಗೀಲಾ ಅವರನ್ನು ತಲುಪಿತು, ಅವರು ಅದನ್ನು ತಮ್ಮ ಪೇಟದಲ್ಲಿ ಧರಿಸುತ್ತಿದ್ದರು. 1739ರಲ್ಲಿ ಪರ್ಷಿಯಾದ ನಾದಿರ್ ಷಾ ದೆಹಲಿಯ ಮೇಲೆ ದಾಳಿ ಮಾಡಿದಾಗ, ಅವರು ರಂಗೀಲಾ ಅವರ ಪೇಟಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಮೋಸ ಮಾಡಿ, ಆ ಮೂಲಕ ವಜ್ರವನ್ನು ವಶಪಡಿಸಿಕೊಂಡರು. ನಾದಿರ್ ಷಾ ಇದಕ್ಕೆ ಕೋಹ್-ಇ-ನೂರ್ ಎಂದು ನಾಮಕರಣ ಮಾಡಿದ ಮತ್ತು “ಒಬ್ಬ ಮನುಷ್ಯ ನಾಲ್ಕು ದಿಕ್ಕುಗಳ ನಡುವಿನ ಜಾಗವನ್ನು ಚಿನ್ನದಿಂದ ತುಂಬಿದರೂ, ಅದು ಈ ರತ್ನಕ್ಕೆ ಸಮನಲ್ಲ” ಎಂದು ಬಣ್ಣಿಸಿದ.
ನಾದಿರ್ ಷಾ ಅವರ ಹತ್ಯೆಯ ಬಳಿಕ, ಈ ವಜ್ರವು ಅಫ್ಘಾನ್, ಪರ್ಷಿಯನ್ ಮತ್ತು ಸಿಖ್ ಅರಸರ ಮೂಲಕ ಸಾಗಿ, ಅಂತಿಮವಾಗಿ ಪಂಜಾಬ್ನ ಮಹಾರಾಜ ರಣಜಿತ್ ಸಿಂಗ್ ಅವರ ಕೈಸೇರಿತು. ಬ್ರಿಟಿಷರು ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡ ನಂತರ, ಅವರು ಕೊಹಿನೂರ್ ವಜ್ರವನ್ನು ವಶಕ್ಕೆ ಪಡೆದು, ಅದನ್ನು ಇಂಗ್ಲೆಂಡ್ಗೆ ಕಳುಹಿಸಿದರು ಮತ್ತು 1850ರಲ್ಲಿ ಅದನ್ನು ರಾಣಿ ವಿಕ್ಟೋರಿಯಾ ಅವರಿಗೆ ಅರ್ಪಿಸಲಾಯಿತು.
ದುರಂತಗಳ ಸರಮಾಲೆ
ಅದರ ಸಮುದ್ರ ಪ್ರಯಾಣದ ಕಾಲದಲ್ಲಿ, ಹಡಗಿನಲ್ಲಿ ಭಾರೀ ಪ್ರಮಾಣದಲ್ಲಿ ಕಾಲರಾ ರೋಗವು ಹರಡಿತು. ಇದರಿಂದ ಅನೇಕ ಅಧಿಕಾರಿಗಳು ಸಾವನ್ನಪ್ಪಿದರು. ಅದು ಲಂಡನ್ ತಲುಪಿದ ಕೆಲವೇ ದಿನಗಳಲ್ಲಿ, ರಾಣಿ ವಿಕ್ಟೋರಿಯಾ ಹತ್ಯೆ ಯತ್ನದಿಂದ ಕೂದಲೆಳೆ ಅಂತರದಲ್ಲಿ ಪಾರಾದರು ಮತ್ತು ಪ್ರಧಾನಿ ರಾಬರ್ಟ್ ಪೀಲ್ ಅವರು ಕುಸಿದುಬಿದ್ದು ಮರಣ ಹೊಂದಿದರು. ಇವೆಲ್ಲದರ ಪರಿಣಾಮವಾಗಿ ವಜ್ರದ ಸುತ್ತ ಮೂಢನಂಬಿಕೆಗಳು ಬೆಳೆದವು. ಅದನ್ನೊಂದು ‘ಶಾಪ’ ಎನ್ನುವಂತೆ ಪರಿಗಣಿಸಲಾಯಿತು.
1852ರಲ್ಲಿ ಡಚ್ ವಜ್ರದ ಕಂಪನಿ ಮೋಸೆಸ್ ಕಾಸ್ಟರ್, ಈ ರತ್ನವನ್ನು ಮತ್ತೆ 108.93 ಕ್ಯಾರೆಟ್ಗೆ ಕತ್ತರಿಸಿತು. ಅಂದಿನಿಂದ ಅದನ್ನು ರಾಣಿ ಅಲೆಕ್ಸಾಂಡ್ರಾ, ರಾಣಿ ಮೇರಿ ಮತ್ತು ರಾಣಿ ಎಲಿಜಬೆತ್ ಅವರು ಧರಿಸಿದ್ದಾರೆ ಮತ್ತು ಇದು ಬ್ರಿಟಿಷ್ ರಾಜಮನೆತನದ ಆನುವಂಶಿಕ ಆಭರಣವಾಗಿ ಉಳಿದಿದೆ, ಇದನ್ನು ಸಾಂಪ್ರದಾಯಿಕವಾಗಿ ಹಿರಿಯ ಪಟ್ಟದ ರಾಣಿಗೆ ಹಸ್ತಾಂತರ ಮಾಡಲಾಗುತ್ತದೆ.
ವಜ್ರ ಮರಳಿಸಲು ಹಕ್ಕೊತ್ತಾಯ
1947ರಿಂದ ಈಚೆಗೆ, ತನಗೆ ಅದನ್ನು ಒಪ್ಪಿಸಬೇಕು ಎಂದು ಭಾರತವು ಪದೇ ಪದೇ ಬೇಡಿಕೆ ಸಲ್ಲಿಸಿದೆ. ನಾನಾ ಸಂದರ್ಭಗಳಲ್ಲಿ ಪಾಕಿಸ್ತಾನ, ಇರಾನ್ ಮತ್ತು ಅಫ್ಘಾನಿಸ್ತಾನವೂ ಸೇರಿಕೊಂಡು, ಎಲ್ಲವೂ ಅದರ ಮಾಲೀಕತ್ವಕ್ಕಾಗಿ ಹಕ್ಕು ಮಂಡಿಸಿವೆ. 2009ರಲ್ಲಿ, ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ ಮತ್ತೊಮ್ಮೆ ಈ ಬೇಡಿಕೆಯನ್ನು ಮಂಡಿಸಿದರು, ಆದರೆ 2013ರಲ್ಲಿ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಅದನ್ನು ಹಸ್ತಾಂತರಿಸಲು ಸ್ಪಷ್ಟವಾಗಿ ನಿರಾಕರಿಸಿದರು.
ಬ್ರೆಜಿಲ್‌ನಲ್ಲಿ ವಜ್ರಗಳು ಪತ್ತೆಯಾಗುವ ಮೊದಲು, ಭಾರತವು ಜಗತ್ತಿನ ಏಕೈಕ ವಜ್ರದ ಮೂಲವಾಗಿತ್ತು, ಮನುಷ್ಯ ತನಗೆ ತಿಳಿದಿರುವ ಅತಿದೊಡ್ಡ ಮತ್ತು ಅತ್ಯುತ್ತಮ ರತ್ನಗಳನ್ನು ಉತ್ಪಾದನೆ ಮಾಡುತ್ತಿದ್ದ. ವಿಶ್ವಕೋಶ ಮತ್ತು ಭೌಗೋಳಿಕ ಕೃತಿಗಳಿಗೆ ಹೆಸರುವಾಸಿಯಾದ ಪ್ಲಿನಿ ಮತ್ತು ಟಾಲೆಮಿ ಅವರಂತಹ ಶಾಸ್ತ್ರೀಯ ಬರಹಗಾರರು, ಭಾರತವನ್ನು ವಜ್ರಗಳ ಭೂಮಿ ಎಂದೇ ಗುರುತಿಸಿದ್ದರು ಮತ್ತು ಮಾರ್ಕೊ ಪೋಲೋ ಅವರಂತಹ ಪ್ರವಾಸಿಗರು ಅವುಗಳ ಹೊಳಪನ್ನು ಬಣ್ಣಿಸಿದ್ದರು. ಇಂದು, ಉತ್ಪಾದನೆಯು ಕುಸಿದಿದೆ, ಆಸ್ಟ್ರೇಲಿಯಾ, ರಷ್ಯಾ ಮತ್ತು ಆಫ್ರಿಕಾದ ಗಣಿಗಳ ಉತ್ಪಾದನೆ ಎಲ್ಲವನ್ನೂ ಹಿಂದಿಕ್ಕಿದೆ, ಆದರೂ ಎಲ್ಲಿಯೂ ಯಾವುದೇ ವಜ್ರವು ಗೋಲ್ಕೊಂಡಾದ ರತ್ನಗಳ ಸ್ಪಷ್ಟತೆ ಮತ್ತು ಪರಿಪೂರ್ಣತೆಗೆ ಎಂದಿಗೂ ಸರಿಸಾಟಿಯಾಗಿಲ್ಲ.