ಗದ್ದುಗೆ ಗುದ್ದಾಟ| ಸಿದ್ದರಾಮಯ್ಯ ಆಡಳಿತಗಾರ, ಪ್ರಬಲ ಜನನಾಯಕ: ಮೋದಿ ವಿರುದ್ಧ ಸೈದ್ಧಾಂತಿಕ ಸಮರ! ಸಿಎಂ ಹುದ್ದೆಯಿಂದ ʼಕೆಳಗಿಳಿಸಿವುದುʼ ಸುಲಭವೆ?
ದೇಶದ ರಾಜಕೀಯದಲ್ಲಿ ಪ್ರಾದೇಶಿಕ ಅಸ್ಮಿತೆ ಮತ್ತು ಒಕ್ಕೂಟ ವ್ಯವಸ್ಥೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದಕ್ಷಿಣ ಭಾರತದಿಂದ ಕೇಳಿಬರುವ ಪ್ರಬಲ ದನಿ ಎಂದರೆ ಅದು ಸಿದ್ದರಾಮಯ್ಯನವರದ್ದಾಗಿದೆ.
ರಾಜ್ಯದ ಪ್ರಭಾವಿ ರಾಜಕೀಯ ನಾಯಕರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರು. ಅವರು ತಮ್ಮ ಸಮಾಜವಾದಿ ನಿಲುವುಗಳು, 'ಅಹಿಂದ' ಪರವಾದ ಹೋರಾಟ ಹಾಗೂ ಆಡಳಿತಾತ್ಮಕ ಅನುಭವಕ್ಕೆ ಹೆಸರು ವಾಸಿಯಾಗಿದ್ದಾರೆ. ಸಿದ್ದರಾಮಯ್ಯನವರು ಕೇವಲ ಒಬ್ಬ ಆಡಳಿತಗಾರರಲ್ಲ, ಅವರೊಬ್ಬ "ಚಾಣಾಕ್ಷ ರಾಜಕೀಯ ತಂತ್ರಗಾರ" . 4 ದಶಕಗಳ ರಾಜಕೀಯ ಜೀವನದಲ್ಲಿ ಅವರು ಅಧಿಕಾರ ಹಿಡಿಯಲು, ಅದನ್ನು ಉಳಿಸಿಕೊಳ್ಳಲು ಮತ್ತು ವಿರೋಧಿಗಳನ್ನು ಮಣಿಸಲು ನಡೆಸಿದ ರಾಜಕೀಯ ತಂತ್ರಗಾರಿಕೆ ಫಲ ನೀಡಿವೆ. ಸಿದ್ದರಾಮಯ್ಯನವರ ರಾಜಕೀಯ ಜೀವನವು ರಾಜ್ಯ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಅಧ್ಯಾಯವಾಗಿದೆ. ಗ್ರಾಮ ಮಟ್ಟದ ನಾಯಕನಿಂದ ರಾಜ್ಯದ ಮುಖ್ಯಮಂತ್ರಿಯಾಗುವವರೆಗಿನ ಅವರ ಪಯಣ ರೋಚಕ ಮತ್ತು ಸ್ಪೂರ್ತಿದಾಯಕ.
ರಾಜ್ಯ ಮಾತ್ರವಲ್ಲ ದೇಶದ ರಾಜಕೀಯದಲ್ಲಿಯೂ ಸಿದ್ದರಾಮಯ್ಯ ಪ್ರಮುಖ ಪಾತ್ರವಹಿಸಿದ್ದಾರೆ. ದೇಶದ ರಾಜಕೀಯ ಸನ್ನಿವೇಶದಲ್ಲಿ ಪ್ರಾದೇಶಿಕ ಅಸ್ಮಿತೆ ಮತ್ತು ಒಕ್ಕೂಟ ವ್ಯವಸ್ಥೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದಕ್ಷಿಣ ಭಾರತದಿಂದ ಕೇಳಿಬರುವ ಪ್ರಬಲ ದನಿ ಎಂದರೆ ಅದು ಸಿದ್ದರಾಮಯ್ಯನವರದ್ದಾಗಿದೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ 'ಅಶ್ವಮೇಧ ಯಾಗ'ದ ಕುದುರೆಯನ್ನು ಕಟ್ಟಿಹಾಕಬಲ್ಲ ತಾಕತ್ತು ಇರುವ ಕೆಲವೇ ಕೆಲವು ನಾಯಕರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗ್ರಗಣ್ಯರಾಗಿದ್ದಾರೆ. ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಸುಗಮವಾಗಿ ಮುಗಿಸಿದ ಸಿದ್ದರಾಮಯ್ಯ, ಎರಡನೇ ಅವಧಿಯಲ್ಲಿ ವಿವಾದ ಮತ್ತು ರಾಜಕೀಯ ಹಗ್ಗ ಜಗ್ಗಾಟ, ಪಕ್ಷದಲ್ಲಿನ ಒಳಜಗಳಗಳನ್ನು ಎದುರಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.
ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವಾಗಲೇ ರಾಜಕೀಯ ಹಗ್ಗ-ಜಗ್ಗಾಟ ನಡೆದಿತ್ತು. ಆದರೂ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಅವರನ್ನು ನಿಯೋಜನೆ ಮಾಡಿತು. ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಗಾದಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡುವ ಮಾತುಕತೆ ನಡೆದಿತ್ತು ಎಂದು ಹೇಳಲಾಗಿದೆ. ಆದರೆ ಸದ್ಯಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡುವ ಲಕ್ಷಣಗಳು ಕಾಣುತ್ತಿಲ್ಲ. ಪರಿಣಾಮ ಕಾಂಗ್ರೆಸ್‌ನಲ್ಲಿಯೇ ಡಿ.ಕೆ.ಶಿವಕುಮಾರ್ ಬಣ ಮತ್ತು ಸಿದ್ದರಾಮಯ್ಯ ಬಣ ನಡುವೆ ಅಧಿಕಾರ ಕಿತ್ತಾಟ ನಡೆಯುತ್ತಿದೆ. ಆದರೂ ಇದಕ್ಕೆಲ್ಲಾ ಸೊಪ್ಪುಹಾಕದ ಸಿದ್ದರಾಮಯ್ಯ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ವಿಶ್ವಾಸದಲ್ಲಿದ್ದಾರೆ.
ಪ್ರಬಲ ಜನನಾಯಕರಾಗಿ ಸಿದ್ದರಾಮಯ್ಯ
ಸಿದ್ದರಾಮಯ್ಯನವರು ಕೇವಲ ಒಬ್ಬ ರಾಜಕಾರಣಿಯಾಗಿ ಉಳಿಯದೆ, ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಪ್ರಬಲ ಜನನಾಯಕ (ಮಾಸ್ ಲೀಡರ್) ಆಗಿ ಬೆಳೆದ ಬಗೆ ನಿಜಕ್ಕೂ ಅದ್ಭುತ. ಹಳ್ಳಿ ಹೈದನೊಬ್ಬ ರಾಜ್ಯದ ಚುಕ್ಕಾಣಿ ಹಿಡಿಯುವಷ್ಟು ಎತ್ತರಕ್ಕೆ ಬೆಳೆದಿದ್ದು ಕೇವಲ ಅದೃಷ್ಟದಿಂದಲ್ಲ. ಬದಲಾಗಿ ಅವರ ಹೋರಾಟ, ಹಠ ಮತ್ತು ರಾಜಕೀಯ ತಂತ್ರಗಾರಿಕೆಯಿಂದ ನಾಯಕರಾಗಿ ಬೆಳೆದಿದ್ದಾರೆ. ಬಲಪಂಥೀಯ ಅಲೆ ದೇಶಾದ್ಯಂತ ಬೀಸುತ್ತಿದ್ದರೂ, ಕರ್ನಾಟಕದಲ್ಲಿ ತಮ್ಮ ಎಡಪಂಥೀಯ ಮತ್ತು ಜಾತ್ಯತೀತ ನಿಲುವುಗಳನ್ನು ಎಂದಿಗೂ ಬದಲಾಯಿಸಿಕೊಳ್ಳದ ಗಟ್ಟಿತನ ಅವರನ್ನು ಪ್ರಬಲ ನಾಯಕನನ್ನಾಗಿ ಮಾಡಿದೆ. ಜೆಡಿಎಸ್‌ನಿಂದ ಹೊರಬಂದಾಗ ಸಿದ್ದರಾಮಯ್ಯನವರು ರಾಜಕೀಯವಾಗಿ ಅನಾಥರಾಗಲಿಲ್ಲ. ಬದಲಾಗಿ, ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರನ್ನು (ಅಹಿಂದ) ಒಗ್ಗೂಡಿಸಿ ತಮಗೇ ಆದ ಬೃಹತ್ ಮತಬ್ಯಾಂಕ್ ಸೃಷ್ಟಿಸಿಕೊಂಡರು. ಇದು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ 'ಅನಿವಾರ್ಯ' ನಾಯಕನನ್ನಾಗಿ ಮಾಡಿತು. ಕಾಂಗ್ರೆಸ್‌ನಲ್ಲಿ ಮೂಲ ನಾಯಕರು ಎಷ್ಟೇ ಇದ್ದರೂ, ಜನಬಲ ಮತ್ತು ಮತ ತರುವ ತಾಕತ್ತು ಇರುವುದು ಸಿದ್ದರಾಮಯ್ಯನವರಿಗೆ ಎಂಬುದು ಹೈಕಮಾಂಡ್‌ಗೂ ಅರಿವಾಯಿತು.
ಎದುರಾಳಿ ಎಷ್ಟೇ ದೊಡ್ಡವರಾಗಿರಲಿ (ದೇವೇಗೌಡರಾಗಲಿ ಅಥವಾ ಮೋದಿಯಾಗಲಿ), ತಮಗೆ ಸರಿ ಅನ್ನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳುವ ಗುಣ ಅವರಲ್ಲಿದೆ. ವಿಧಾನಸಭೆಯಲ್ಲಿ ವಿರೋಧ ಪಕ್ಷಗಳನ್ನು ಅವರು ಎದುರಿಸುವ ರೀತಿ, ಅಂಕಿ-ಅಂಶಗಳ ಸಮೇತ ತಿರುಗೇಟು ನೀಡುವ ಪರಿ ಅವರನ್ನು 'ಸಂಸದೀಯ ಹುಲಿ'ಯನ್ನಾಗಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿ ಟೀಕಿಸುವ ಎದೆಗಾರಿಕೆ ಸಿದ್ದರಾಮಯ್ಯ ಅವರಿಗೆ ಇದೆ. ದಕ್ಷಿಣ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನು ಸಮರ್ಥವಾಗಿ ಎದುರಿಸುತ್ತಿರುವ ಏಕೈಕ ನಾಯಕ ಸಿದ್ದರಾಮಯ್ಯ. ಕೇಂದ್ರ ಸರ್ಕಾರದ ತಾರತಮ್ಯ ನೀತಿಗಳ ವಿರುದ್ಧ "ನನ್ನ ತೆರಿಗೆ ನನ್ನ ಹಕ್ಕು" ಎಂದು ಧ್ವನಿ ಎತ್ತಿದರು. ಗುಜರಾತ್ ಮಾಡೆಲ್ ವಿರುದ್ಧ 'ಕರ್ನಾಟಕ ಮಾಡೆಲ್' (ಗ್ಯಾರಂಟಿ ಯೋಜನೆಗಳು) ಇಟ್ಟು ದೇಶದ ಗಮನ ಸೆಳೆದರು.
ಬಾಲ್ಯ ಮತ್ತು ಆರಂಭಿಕ ಜೀವನ
ಸಿದ್ದರಾಮಯ್ಯನವರು ಜನಿಸಿದ್ದು 1948ರ ಆ. 12ರಂದು ಮೈಸೂರು ಜಿಲ್ಲೆಯ ವರುಣಾ ಹೋಬಳಿಯ 'ಸಿದ್ದರಾಮನಹುಂಡಿ' ಎಂಬ ಪುಟ್ಟ ಗ್ರಾಮದಲ್ಲಿ. ಬಾಲ್ಯದಲ್ಲಿ ದನ ಮೇಯಿಸುತ್ತಲೇ ಅಕ್ಷರಾಭ್ಯಾಸ ಕಲಿತ ಸಿದ್ದರಾಮಯ್ಯನವರಿಗೆ ಎಳವೆಯಲ್ಲಿಯೇ ಬಡತನ ಮತ್ತು ಹಳ್ಳಿಯ ಕಷ್ಟಗಳ ಅರಿವಿತ್ತು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ ಪಡೆದ ನಂತರ, ಕಾನೂನು ಪದವಿಯನ್ನು ಪಡೆದರು. ವಕೀಲ ವೃತ್ತಿಯನ್ನು ಆರಂಭಿಸಿದರಾದರೂ, ಅವರ ಮನಸ್ಸು ಸಮಾಜ ಸೇವೆಯತ್ತ ತುಡಿಯುತ್ತಿತ್ತು. ಈ ಸಮಯದಲ್ಲಿಯೇ ಅವರಿಗೆ ಸಮಾಜವಾದಿ ನಾಯಕ ಡಾ. ರಾಮಮನೋಹರ್ ಲೋಹಿಯಾ ಅವರ ಸಿದ್ಧಾಂತಗಳ ಪರಿಚಯವಾಯಿತು. ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಗರಡಿಯಲ್ಲಿ ಪಳಗಿದ ಸಿದ್ದರಾಮಯ್ಯ, ಭಾಷಣ ಕಲೆ ಮತ್ತು ಹೋರಾಟದ ಮನೋಭಾವವನ್ನು ಮೈಗೂಡಿಸಿಕೊಂಡರು.
ರಾಜಕೀಯ ಪ್ರವೇಶ ಮತ್ತು ಜನತಾ ಪರಿವಾರದ ದಿನಗಳು
ಸಿದ್ದರಾಮಯ್ಯನವರ ರಾಜಕೀಯ ಪ್ರವೇಶವು ತಾಲೂಕು ಬೋರ್ಡ್ ಸದಸ್ಯರಾಗುವ ಮೂಲಕ ಆರಂಭವಾಯಿತು. 1978ರಲ್ಲಿ ಮೈಸೂರು ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾದರು. ಆದರೆ 1983ರಲ್ಲಿ ಅವರ ರಾಜ್ಯಮಟ್ಟದ ರಾಜಕೀಯ ಆರಂಭವಾಯಿತು. 1983ರಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ 'ಕನ್ನಡ ಕಾವಲು ಸಮಿತಿ'ಯ (ಈಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ) ಮೊದಲ ಅಧ್ಯಕ್ಷರಾಗಿ ಕನ್ನಡ ಭಾಷೆಯ ಅನುಷ್ಠಾನಕ್ಕೆ ಶ್ರಮಿಸಿದರು. ನಂತರದ ದಿನಗಳಲ್ಲಿ ರೇಷ್ಮೆ, ಪಶುಸಂಗೋಪನೆ ಮತ್ತು ಸಾರಿಗೆ ಖಾತೆಗಳನ್ನು ನಿರ್ವಹಿಸಿದರು. 1994ರಲ್ಲಿ ಜನತಾ ದಳ ಸರ್ಕಾರದಲ್ಲಿ ಹಣಕಾಸು ಸಚಿವರಾದರು. ಆರ್ಥಿಕ ವಿಷಯಗಳಲ್ಲಿ ಅವರಿಗಿದ್ದ ಹಿಡಿತ ಎಷ್ಟು ಪ್ರಬಲವಾಗಿತ್ತೆಂದರೆ, ಅಧಿಕಾರಿಗಳೇ ಬೆರಗಾಗುವಂತೆ ಬಜೆಟ್ ಮಂಡಿಸುತ್ತಿದ್ದರು.
1996ರಲ್ಲಿ ಜೆ.ಎಚ್. ಪಟೇಲ್ ಅವರ ಸಂಪುಟದಲ್ಲಿ ಮತ್ತು 2004ರಲ್ಲಿ ಧರಂ ಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಸಿದ್ದರಾಮಯ್ಯನವರು ಹಣಕಾಸು ಸಚಿವರಾಗಿ ಅತ್ಯುತ್ತಮ ನಿರ್ವಹಣೆ ತೋರಿದರು. ಇಂದಿಗೂ ರಾಜ್ಯದ ಇತಿಹಾಸದಲ್ಲಿ 16 ಬಾರಿ ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವ ಎಂಬ ದಾಖಲೆ ಅವರ ಹೆಸರಿನಲ್ಲಿದೆ.
ಸಂಘರ್ಷ ಮತ್ತು ಅಹಿಂದ ಉದಯ
2005ರಲ್ಲಿ ಸಿದ್ದರಾಮಯ್ಯನವರ ರಾಜಕೀಯ ಜೀವನದ ಅತಿ ದೊಡ್ಡ ತಿರುವು ಪಡೆಯಿತು. ಜೆಡಿಎಸ್ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಮತ್ತು ಎಚ್.ಡಿ. ದೇವೇಗೌಡರು ಕುಟುಂಬ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ, ಬಂಡಾಯದ ಬಾವುಟ ಹಾರಿಸಿದರು. ಈ ಸಂದರ್ಭದಲ್ಲಿ ಅವರು ಹುಟ್ಟುಹಾಕಿದ ಪರಿಕಲ್ಪನೆಯೇ 'ಅಹಿಂದ' . ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಎಂಬ ಮೂರು ವರ್ಗಗಳನ್ನು ಒಗ್ಗೂಡಿಸಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಿದರು. ಇದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿತು. ಇದರ ಪರಿಣಾಮವಾಗಿ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲಾಯಿತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಜನರ ಮುಂದೆ ಹೋಗುವ ಧೈರ್ಯ ತೋರಿದರು. ಇದು ಅವರಿಗೆ ಕೇವಲ ಕುರುಬ ಸಮುದಾಯದ ನಾಯಕನಾಗಿ ಉಳಿಯದೆ, ರಾಜ್ಯದ ಬಹುಸಂಖ್ಯಾತ ಕೆಳವರ್ಗಗಳ 'ಮಾಸ್ ಲೀಡರ್' ಆಗಲು ಸಹಾಯ ಮಾಡಿತು. ಈ ಮತಬ್ಯಾಂಕ್ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಕುರ್ಚಿಯವರೆಗೆ ತಲುಪಿಸಿದೆ.
ಜೆಡಿಎಸ್‌ನ 'ಕುಟುಂಬ ರಾಜಕಾರಣ'ದ ವಿರುದ್ಧ ಬಂಡಾಯ
ಜೆಡಿಎಸ್‌ನಲ್ಲಿದ್ದಾಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ಮಗ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುನ್ನೆಲೆಗೆ ತರುತ್ತಿದ್ದಾರೆ ಮತ್ತು ತಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂಬುದು ಸಿದ್ದರಾಮಯ್ಯನವರಿಗೆ ಅರ್ಥವಾಯಿತು. ಅಲ್ಲಿಯೇ ಇದ್ದು ಸಣ್ಣವರಾಗುವ ಬದಲು, ಬಂಡಾಯವೆದ್ದು ಹೊರಬಂದರು. "ದೇವೇಗೌಡರು ನನ್ನನ್ನು ಬೆಳೆಸಿಲ್ಲ, ನಾನೇ ಬೆಳೆದಿರುವುದು" ಎಂದು ನೇರವಾಗಿ ಸವಾಲು ಹಾಕಿದರು. ಇದು ಅವರ ಸ್ವತಂತ್ರ ಅಸ್ತಿತ್ವವನ್ನು ರೂಪಿಸಿತು. ಜೆಡಿಎಸ್ ಪಕ್ಷದಲ್ಲಿದ್ದಾಗ ಎಚ್.ಡಿ. ದೇವೇಗೌಡರೊಂದಿಗೆ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿ 2005ರಲ್ಲಿ ಪಕ್ಷದಿಂದ ಉಚ್ಚಾಟಿತರಾದರು. ಬಳಿಕ ರಾಜ್ಯಾದ್ಯಂತ 'ಅಹಿಂದ' ಸಮಾವೇಶಗಳನ್ನು ನಡೆಸಿ ಜನಪ್ರಿಯತೆ ಗಳಿಸಿದರು.
ಕಾಂಗ್ರೆಸ್ ಸೇರ್ಪಡೆ ಮತ್ತು ಚಾಮುಂಡೇಶ್ವರಿ ಕದನ
2006ರಲ್ಲಿ ಸೋನಿಯಾ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇದು ಅವರ ರಾಜಕೀಯ ಜೀವನದ 'ಪುನರ್ಜನ್ಮ' ಎಂದೇ ಹೇಳಬಹುದು. ಕಾಂಗ್ರೆಸ್ ಸೇರಿದ ತಕ್ಷಣ ಎದುರಾದದ್ದು 'ಚಾಮುಂಡೇಶ್ವರಿ ಉಪಚುನಾವಣೆ'. ಇಡೀ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರ ಅವರ ವಿರುದ್ಧ ಕೆಲಸ ಮಾಡಿದರೂ, ಕೇವಲ 257 ಮತಗಳ ಅಂತರದಿಂದ ಗೆದ್ದು ಬೀಗಿದರು. ಈ ಗೆಲುವು ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಗಟ್ಟಿಯಾಗಿ ನೆಲೆನಿಲ್ಲುವಂತೆ ಮಾಡಿತು. 2006ರಲ್ಲಿ ಕಾಂಗ್ರೆಸ್ ಸೇರಿದಾಗ ಅವರನ್ನು 'ವಲಸಿಗ' ಎಂದು ಕರೆಯಲಾಗುತ್ತಿತ್ತು. ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್, ಮತ್ತು ಡಿ.ಕೆ. ಶಿವಕುಮಾರ್ ಅವರಂತಹ ಮೂಲ ಕಾಂಗ್ರೆಸ್ಸಿಗರನ್ನು ಮೀರಿ ಬೆಳೆಯುವುದು ಕಷ್ಟವಿತ್ತು. ಆದರೂ ತಮ್ಮ ಛಾಪು ಮೂಡಿಸಿ ಹೈಕಮಾಂಡ್ ಜತೆ ನೇರ ಸಂಪರ್ಕ ಬೆಳೆಸಿದರು. ತಮ್ಮ ಭಾಷಣ ಕಲೆ ಮತ್ತು ಜನಪ್ರಿಯತೆಯ ಮೂಲಕ, "ನಾನಿಲ್ಲದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ" ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಮೂಲ ಕಾಂಗ್ರೆಸ್ಸಿಗರನ್ನು ಹಿಂದಿಕ್ಕಿ 2013ರಲ್ಲಿ ಮುಖ್ಯಮಂತ್ರಿಯಾದರು.
ಬಳ್ಳಾರಿ ಪಾದಯಾತ್ರೆ: ಹೋರಾಟದ ಹಾದಿ
2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾದರು. ಈ ಸಮಯದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸೋದರರ ಅಕ್ರಮ ಗಣಿಗಾರಿಕೆ ವಿರುದ್ಧ ಅವರು ತೋರಿದ ಕೆಚ್ಚೆದೆ ಇತಿಹಾಸ ನಿರ್ಮಿಸಿತು. ವಿಧಾನಸೌಧದಲ್ಲಿ ಮಾತನಾಡಿದರೆ ಸಾಲದು, ಜನರ ಬಳಿ ಹೋಗಬೇಕು ಎಂದು ನಿರ್ಧರಿಸಿ, 2010ರಲ್ಲಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ 'ಬಳ್ಳಾರಿ ಚಲೋ' ಪಾದಯಾತ್ರೆ ಕೈಗೊಂಡರು. ಇದು ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆಯಿತು. ಮಾತ್ರವಲ್ಲದೆ, 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಲವಾದ ಅಡಿಪಾಯ ಹಾಕಿತು.
ಮುಖ್ಯಮಂತ್ರಿಯಾಗಿ ಮೊದಲ ಅವಧಿ : ಸಾಮಾಜಿಕ ನ್ಯಾಯದ ಆಡಳಿತ
2013ರ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿತು. ಮೇ 13, 2013ರಂದು ಸಿದ್ದರಾಮಯ್ಯ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 1978ರ ದೇವರಾಜ ಅರಸು ನಂತರ, ಪೂರ್ಣ 5 ವರ್ಷಗಳ ಅವಧಿಯನ್ನು ಪೂರೈಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ತಮ್ಮ ರಾಜಕೀಯ ಉಳಿವಿಗೆ ಆಯ್ದುಕೊಂಡ ಇನ್ನೊಂದು ಮಾರ್ಗವೆಂದರೆ 'ಉಚಿತ ಯೋಜನೆಗಳು'. ಅನ್ನಭಾಗ್ಯದ ಮೂಲಕ ಬಡವರ ತಟ್ಟೆ ಸೇರಿದ ಅವರು, ಆ ವರ್ಗದ ಮತಗಳು ಚದುರದಂತೆ ನೋಡಿಕೊಂಡರು. ಇದು ರಾಜಕೀಯವಾಗಿ ಅವರಿಗೆ ದೊಡ್ಡ ರಕ್ಷಾಕವಚವಾಯಿತು. ರಾಜ್ಯದಲ್ಲಿ ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಬಡವರಿಗೆ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದರು. ಬಳಿಕ ಶಾಲಾ ಮಕ್ಕಳಿಗೆ ಹಾಲು ನೀಡುವ ಕ್ಷೀರಭಾಗ್ಯ ಯೋಜನೆ, ಹಸಿದವರಿಗೆ ಕಡಿಮೆ ದರದಲ್ಲಿ ಊಟ/ತಿಂಡಿ ನೀಡುವ ಇಂದಿರಾ ಕ್ಯಾಂಟೀನ್, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು ನೀಡುವ ವಿದ್ಯಾಸಿರಿ ಯೋಜನೆ, ಎಸ್.ಸಿ/ಎಸ್.ಟಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಾತಿ ಕಲ್ಪಿಸುವ ಕಾಯ್ದೆ ಜಾರಿಗೊಳಿಸಿ ಮತ್ತಷ್ಟು ಜನಪ್ರಿಯಗೊಂಡರು.
2018ರಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕಡೆ ಸ್ಪರ್ಧಿಸಿದರು. ಚಾಮುಂಡೇಶ್ವರಿಯಲ್ಲಿ ಸೋತರೂ, ಬಾದಾಮಿಯಲ್ಲಿ ಗೆಲುವು ಸಾಧಿಸಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಸರ್ಕಾರ ಪತನಗೊಂಡ ನಂತರ, 2019ರಿಂದ 2023ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷದ ವಿರುದ್ಧ ಸಮರ್ಥವಾಗಿ ದನಿ ಎತ್ತಿದರು.
ಸಿದ್ದರಾಮಯ್ಯಗೆ ಬಲ ತುಂಬಿದ ಸಿದ್ದರಾಮೋತ್ಸವ
ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ 2022ರ ಆ. 3 ರಂದು ದಾವಣಗೆರೆಯಲ್ಲಿ ನಡೆದ ಅವರ 75ನೇ ಹುಟ್ಟುಹಬ್ಬದ ಆಚರಣೆ ಅಥವಾ "ಸಿದ್ದರಾಮೋತ್ಸವ" ಒಂದು ಮಹತ್ವದ ಮೈಲಿಗಲ್ಲು. ಈ ಕಾರ್ಯಕ್ರಮವು ಕೇವಲ ಹುಟ್ಟುಹಬ್ಬದ ಆಚರಣೆಯಾಗಿರದೆ, 2023ರ ಚುನಾವಣೆಗೆ ಮುನ್ನ ಸಿದ್ದರಾಮಯ್ಯನವರ ರಾಜಕೀಯ ಶಕ್ತಿಯನ್ನು ಮತ್ತು ವರ್ಚಸ್ಸನ್ನು ಇಡೀ ರಾಜ್ಯಕ್ಕೆ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಸಾಬೀತುಪಡಿಸಿದ ವೇದಿಕೆಯಾಗಿತ್ತು.
ರಾಜ್ಯ ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ಇತ್ತು. ದಾವಣಗೆರೆಯಲ್ಲಿ ಸೇರಿದ ಸುಮಾರು 6 ರಿಂದ 8 ಲಕ್ಷ ಜನಸಾಗರವನ್ನು ಕಂಡು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಬೆರಗಾಯಿತು. ಸಿದ್ದರಾಮಯ್ಯ ಕೇವಲ ಪಕ್ಷದ ನಾಯಕರಲ್ಲ, ಅವರು ಜನರನ್ನು ಸೆಳೆಯಬಲ್ಲ ಮಾಸ್ ಲೀಡರ್ ಎಂಬ ಸಂದೇಶ ಈ ಉತ್ಸವದ ಮೂಲಕ ರವಾನೆಯಾಯಿತು. ಇದು ಟಿಕೆಟ್ ಹಂಚಿಕೆ ಮತ್ತು ಮುಖ್ಯಮಂತ್ರಿ ಆಯ್ಕೆ ಸಮಯದಲ್ಲಿ ಸಿದ್ದರಾಮಯ್ಯನವರ ಕೈ ಮೇಲಾಗುವಂತೆ ಮಾಡಿತು.
ಸಿದ್ದರಾಮೋತ್ಸವವು ಅಘೋಷಿತವಾಗಿ ಒಂದು 'ಅಹಿಂದ' ಸಮಾವೇಶದಂತೆಯೇ ನಡೆಯಿತು. ರಾಜ್ಯದ ಮೂಲೆ ಮೂಲೆಗಳಿಂದ ಕುರುಬ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ಜನರು ಸ್ವಯಂಪ್ರೇರಿತರಾಗಿ ಹರಿದುಬಂದರು. ಇದು ಬಿಜೆಪಿ ವಿರುದ್ಧದ ಹೋರಾಟಕ್ಕೆ ತಳಮಟ್ಟದ ಮತದಾರರನ್ನು ಒಗ್ಗೂಡಿಸಿತು ಮತ್ತು ಸಿದ್ದರಾಮಯ್ಯನವರೇ ನಮ್ಮ ನಾಯಕ ಎಂದು ಆ ಸಮುದಾಯಗಳು ದೃಢಪಡಿಸಿದವು. ಈ ವೇದಿಕೆಯಲ್ಲಿಯೇ ರಾಹುಲ್ ಗಾಂಧಿಯವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಪರಸ್ಪರ ಅಪ್ಪಿಕೊಳ್ಳುವಂತೆ ಮಾಡಿದರು. ಇದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿತು. ಸಿದ್ದರಾಮೋತ್ಸವವು ಕೇವಲ ವ್ಯಕ್ತಿ ಪೂಜೆಯಾಗದೆ, ಕಾಂಗ್ರೆಸ್ ಪಕ್ಷದ ಚುನಾವಣಾ ಕಹಳೆಯಾಗಿ ಬದಲಾಯಿತು. 2023ರ ವಿಧಾನಸಭಾ ಚುನಾವಣೆಗೆ ಸುಮಾರು 8-9 ತಿಂಗಳು ಬಾಕಿ ಇರುವಾಗಲೇ ನಡೆದ ಈ ಉತ್ಸವ, ಕಾಂಗ್ರೆಸ್ ಪರವಾದ ಅಲೆಯನ್ನು ಸೃಷ್ಟಿಸಿತು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎರಡನೇ ಅವಧಿ
2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಮಿಂಚಿನ ಸಂಚಾರ ನಡೆಸಿ, ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳ ಅಭೂತಪೂರ್ವ ಗೆಲುವು ತಂದುಕೊಟ್ಟರು. ವರುಣಾ ಕ್ಷೇತ್ರದಿಂದ ಗೆದ್ದು, ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. ಮೇ 20, 2023ರಂದು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರಕ್ಕೆ ಬಂದ ಮೊದಲ ದಿನವೇ 'ಪಂಚ ಗ್ಯಾರಂಟಿ'ಗಳಿಗೆ (ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ) ಚಾಲನೆ ನೀಡಿದರು. ಈ ಯೋಜನೆಗಳು ಇಂದು ದೇಶಾದ್ಯಂತ ಚರ್ಚೆಯಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪ್ರಣಾಳಿಕೆಗೆ ಇವೇ ಮಾದರಿಯಾದವು.
ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಡುವೆ ಶೀತಲ ಸಮರ
ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ 'ಮುಖ್ಯಮಂತ್ರಿ ಕುರ್ಚಿಗಾಗಿನ ಕಿತ್ತಾಟ ತೀವ್ರ ಚರ್ಚೆಯನ್ನುಂಟು ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳ ಬೃಹತ್ ಬಹುಮತ ಬಂದಿದ್ದರೂ, ಈ ಇಬ್ಬರು ಘಟಾನುಘಟಿ ನಾಯಕರ ನಡುವಿನ ಅಧಿಕಾರದ ಪೈಪೋಟಿ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಜನಪ್ರಿಯ ನಾಯಕರಾಗಿದ್ದು, ಅಹಿಂದ ಮತಗಳು ಅವರಿಂದಾಗಿ ಬಂದಿವೆ ಮತ್ತು ಶಾಸಕರ ಬೆಂಬಲ ತಮಗೇ ಹೆಚ್ಚಿದೆ ಎಂಬುದು ಸಿದ್ದರಾಮಯ್ಯ ಬಣದ ವಾದವಾಗಿದೆ. ಆದರೆ, ಡಿ.ಕೆ.ಶಿವಕುಮಾರ್ ಪಕ್ಷ ಸಂಕಷ್ಟದಲ್ಲಿದ್ದಾಗ ಅಧ್ಯಕ್ಷರಾಗಿ ಸಂಘಟಿಸಿದ್ದಾರೆ. ಟ್ರಬಲ್ ಶೂಟರ್ ಆಗಿ ದುಡಿದಿದ್ದಾರೆ. ಒಕ್ಕಲಿಗ ಮತಗಳನ್ನು ಸೆಳೆದಿದ್ದೇವೆ. ಆದ್ದರಿಂದ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ಡಿ.ಕೆ.ಶಿವಕುಮಾರ್ ಬಣದ ವಾದವಾಗಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ 'ಒಗ್ಗಟ್ಟಿನ ಮಂತ್ರ' ಜಪಿಸುತ್ತಿದ್ದರೂ, ಒಳಗೊಳಗೆ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಲೇ ಇದೆ. ಹೈಕಮಾಂಡ್ ತೆಗೆದುಕೊಳ್ಳುವ ನಿಲುವು ಮುಂದಿನ ದಿನಗಳಲ್ಲಿ ಈ 'ಕಿತ್ತಾಟ'ದ ಅಂತ್ಯವನ್ನು ನಿರ್ಧರಿಸಲಿದೆ. ಸದ್ಯದ ಮಟ್ಟಿಗೆ ಮುಖ್ಯಮಂತ್ರಿ ಕುರ್ಚಿಯ ಕಾಲುಗಳು ಅಲುಗಾಡುತ್ತಿದ್ದರೂ, ಸಿದ್ದರಾಮಯ್ಯನವರು ಭದ್ರವಾಗಿ ಕೂತಿದ್ದಾರೆ. ಒಂದೆಡೆ ಸಿದ್ದರಾಮಯ್ಯನವರನ್ನು ಕೆಳಗಿಳಿಸಿದರೆ ಅಹಿಂದ ಮತಬ್ಯಾಂಕ್ ಮುನಿಸಿಕೊಳ್ಳಬಹುದು. ಇನ್ನೊಂದೆಡೆ ಡಿ.ಕೆ. ಶಿವಕುಮಾರ್‌ಗೆ ಅವಕಾಶ ನೀಡದಿದ್ದರೆ, ಒಕ್ಕಲಿಗ ಸಮುದಾಯ ಮತ್ತು ಪಕ್ಷದ ಸಂಘಟನೆಗೆ ಪೆಟ್ಟು ಬೀಳಬಹುದು ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಸೈದ್ಧಾಂತಿಕ ಸಮರ
ಪ್ರಸ್ತುತ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಬಿಜೆಪಿಯ ವಿರುದ್ಧ ಅತ್ಯಂತ ಗಟ್ಟಿಯಾಗಿ ನಿಂತಿರುವ ನಾಯಕ ಸಿದ್ದರಾಮಯ್ಯ ಅವರಾಗಿದ್ದಾರೆ. ಸಿದ್ದರಾಮಯ್ಯನವರು "ನನ್ನ ತೆರಿಗೆ ನನ್ನ ಹಕ್ಕು" ಎಂಬ ಅಭಿಯಾನದ ಮೂಲಕ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಿದರು. 15ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಆದ ನಷ್ಟವನ್ನು ಅಂಕಿ-ಅಂಶಗಳ ಸಮೇತ ಪ್ರಶ್ನಿಸಿದ ಏಕೈಕ ಮುಖ್ಯಮಂತ್ರಿ ಅವರಾಗಿದ್ದಾರೆ. "ಕೇಂದ್ರದ ಮುಂದೆ ನಾವು ಭಿಕ್ಷುಕರಲ್ಲ, ಪಾಲುದಾರರು" ಎಂಬ ಅವರ ಮಾತುಗಳು ದಕ್ಷಿಣ ಭಾರತದ ರಾಜ್ಯಗಳಿಗೆ ಸ್ಫೂರ್ತಿಯಾಯಿತು.
ಬಿಜೆಪಿಯ ಹಿಂದುತ್ವದ ಅಲೆಗೆ ಎದುರಾಗಿ 'ಸಮಾಜವಾದ' ಮತ್ತು 'ಜಾತ್ಯತೀತತೆ'ಯನ್ನು ಮಂಡಿಸುವಲ್ಲಿ ಅವರು ಎಂದಿಗೂ ಹಿಂಜರಿಯಲಿಲ್ಲ. "ನಾನು ಹಿಂದು, ಆದರೆ ಹಿಂದುತ್ವವಾದಿಯಲ್ಲ. ರಾಮ ಎಲ್ಲರಿಗೂ ಸೇರಿದವನು" ಎಂದು ಹೇಳುವ ಮೂಲಕ ಬಿಜೆಪಿಯ ಧಾರ್ಮಿಕ ರಾಜಕಾರಣಕ್ಕೆ ಪ್ರತಿರೋಧ ಒಡ್ಡಿದರು. ರಾಜ್ಯದಲ್ಲಿ ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ವಿಷಯ ಬಂದಾಗಲೆಲ್ಲ ಸಿದ್ದರಾಮಯ್ಯ ಮುಂಚೂಣಿಯಲ್ಲಿ ನಿಂತರು. ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ನಾಮಫಲಕಗಳ ವಿರುದ್ಧ ದನಿ ಎತ್ತಿ, ಕನ್ನಡದ ಅಸ್ಮಿತೆಯನ್ನು ಕಾಪಾಡಿದರು. ಇದು ಅವರನ್ನು ಪ್ರಾದೇಶಿಕ ನಾಯಕನಾಗಿ ಗಟ್ಟಿಗೊಳಿಸಿತು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ
ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿಯನ್ನೇ ಅಲುಗಾಡಿಸಿತ್ತು. ರಾಜ್ಯಪಾಲರ ಅಭಿಯೋಜನೆ, ಹೈಕೋರ್ಟ್ ತೀರ್ಪು, ಮತ್ತು ಇಡಿ ದಾಳಿಗಳಿಂದಾಗಿ ಸಿದ್ದರಾಮಯ್ಯನವರ ರಾಜಕೀಯ ಜೀವನ ಮುಗಿದೇ ಹೋಯಿತು ಎಂದು ವಿಶ್ಲೇಷಿಸಲಾಗಿತ್ತು. ಆದರೆ, ರಾಜಕೀಯದ 'ಚಾಣಾಕ್ಷ' ಸಿದ್ದರಾಮಯ್ಯನವರು ಈ ಬೃಹತ್ ಕಂಟಕವನ್ನು ಸದ್ಯದ ಮಟ್ಟಿಗೆ ಜೀರ್ಣಿಸಿಕೊಂಡಿದ್ದಾರೆ ಎಂದೇ ಹೇಳಬಹುದು. ಮುಡಾ ಸಂಕಷ್ಟದಿಂದ ಅವರು ಪಾರಾಗಿ, ಮತ್ತೆ ಸುಸ್ಥಿತಿಗೆ ಮರಳಿದ್ದಾರೆ.
ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ತಮಗೆ ಮುಡಾದಿಂದ ಹಂಚಿಕೆಯಾಗಿದ್ದ 14 ನಿವೇಶನಗಳನ್ನು ಸ್ವಯಂಪ್ರೇರಿತವಾಗಿ ವಾಪಸ್ ನೀಡಿದ ನಿರ್ಧಾರ ಹಗರಣದ ತೀವ್ರತೆಯನ್ನು ತಗ್ಗಿಸಿತು. ಸಿದ್ದರಾಮಯ್ಯನವರು ಮುಡಾ ಹಗರಣವನ್ನು ಸಂಪೂರ್ಣವಾಗಿ ಹಿಂದಿಕ್ಕಲು ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಉಪಚುನಾವಣೆ ಫಲಿತಾಂಶವು ಕಾರಣವಾಯಿತು. ಹಗರಣದ ಆರೋಪಗಳ ನಡುವೆಯೂ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದು ಸಿದ್ದರಾಮಯ್ಯನವರ ಜನಪ್ರಿಯತೆ ಕುಗ್ಗಿಲ್ಲ ಎಂಬುದನ್ನು ಸಾಬೀತುಪಡಿಸಿತು. ಹೈಕಮಾಂಡ್ ಕೂಡ ಈ ಗೆಲುವಿನಿಂದಾಗಿ ಸಿದ್ದರಾಮಯ್ಯನವರ ಬದಲಾವಣೆ ವಿಚಾರವನ್ನು ಕೈಬಿಟ್ಟಂತಿದೆ.
ವಿರೋಧ ಪಕ್ಷಗಳು ಮುಡಾ ಬಗ್ಗೆ ಮಾತನಾಡುತ್ತಿದ್ದಂತೆ, ಸಿದ್ದರಾಮಯ್ಯನವರು ಹಳೆಯ ಕೋವಿಡ್ ಹಗರಣದ ತನಿಖಾ ವರದಿಯನ್ನು (ನ್ಯಾ. ಮೈಕೆಲ್ ಡಿ.ಕುನ್ಹಾ ವರದಿ) ಮುನ್ನೆಲೆಗೆ ತಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡುವ ಮೂಲಕ, "ನಿಮ್ಮ ಮೇಲೂ ಕಲೆಗಳಿವೆ" ಎಂದು ಬಿಜೆಪಿಯನ್ನು ಬೆದರಿಸಿದರು. ಇದು ಬಿಜೆಪಿಯ ಆಕ್ರಮಣಕಾರಿ ಹೋರಾಟದ ವೇಗವನ್ನು ತಗ್ಗಿಸಿತು.
ಆರಂಭದಲ್ಲಿ ಮುಡಾ ಹಗರಣ ಬಂದಾಗ ಕಾಂಗ್ರೆಸ್ ಪಕ್ಷದೊಳಗೆ ಕೆಲವರು ಸಿದ್ದರಾಮಯ್ಯನವರ ಬದಲಾವಣೆಗೆ ಕಾಯುತ್ತಿದ್ದರು. ಆದರೆ, ಯಾವಾಗ ಸಿದ್ದರಾಮಯ್ಯನವರು ಇಡಿ ಮತ್ತು ಲೋಕಾಯುಕ್ತ ತನಿಖೆಯನ್ನು ಎದುರಿಸಿ ನಿಂತರೋ, ಮತ್ತು ಉಪಚುನಾವಣೆ ಗೆದ್ದರೋ, ಆಗ ಪಕ್ಷದೊಳಗಿನ ಭಿನ್ನಮತೀಯರು ಸುಮ್ಮನಾಗಬೇಕಾಯಿತು. ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಬೆಂಬಲ ಈಗಲೂ ಸಿದ್ದರಾಮಯ್ಯಗಿದೆ ಎಂದು ಹೇಳಲಾಗಿದೆ.