ಹುಲಿ ಖೆಡ್ಡಾದಲ್ಲಿ ಚೀತಾಧಾಮವೇ? ಪರಭಕ್ಷಗಳ ನಡುವೆಯೇ ಜಗಳ ತಂದಿಡುವ ಎಡವಟ್ ಯೋಜನೆಗೆ ಅಪಸ್ವರ
ಕುನೋ ಮತ್ತು ಗಾಂಧಿ ಸಾಗರ್‌ನಲ್ಲಿ ಈಗಾಗಲೇ ಎರಡು ಚೀತಾ ನೆಲೆಗಳನ್ನು ಹೊಂದಿರುವ ಮಧ್ಯ ಪ್ರದೇಶದ ನೌರಾದೇಹಿಯಲ್ಲಿ ಇನ್ನೊಂದು ಚೀತಾ ಧಾಮವನ್ನು ಮಾಡಲು ಪ್ರಯತ್ನ ನಡೆದಿದೆ. ಆದರೆ ಇದು ವೈಜ್ಞಾನಿಕವೇ?
ಮಧ್ಯಪ್ರದೇಶದ ಸಾಗರ್, ದಮೋಹ್ ಮತ್ತು ನರಸಿಂಗ್‌ಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಸುಮಾರು 1,200 ಚದರ ಕಿ.ಮೀ ವಿಸ್ತೀರ್ಣದ ಸಂರಕ್ಷಿತ ಪ್ರದೇಶವಾದ ನೌರಾದೇಹಿ ವನ್ಯಜೀವಿ ಅಭಯಾರಣ್ಯವನ್ನು ಆಫ್ರಿಕನ್ ಚೀತಾಗಳಿಗೆ ಮೂರನೇ ನೆಲೆಯನ್ನಾಗಿ ಮಾಡುವ ಪ್ರಸ್ತಾವನೆಯು, ಭಾರತದ ಮಹತ್ವಾಕಾಂಕ್ಷೆಯ ಚೀತಾ ಮರುಪರಿಚಯ ಯೋಜನೆಯ ವೈಜ್ಞಾನಿಕ ಮತ್ತು ಪರಿಸರ ತರ್ಕದ ಕುರಿತು ದೀರ್ಘಕಾಲದಿಂದ ನಡೆಯುತ್ತಿರುವ ಚರ್ಚೆಗೆ ಮತ್ತೆ ಜೀವ ತುಂಬಲಾಗಿದೆ.
ಅರಣ್ಯ ಇಲಾಖೆ ಈ ಪ್ರದೇಶವನ್ನು ಪರಿಶೀಲನೆ ನಡೆಸುತ್ತಿರುವ ಹೊತ್ತಿನಲ್ಲಿಯೇ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಬಗ್ಗೆ ತಜ್ಞರು ಸೂಕ್ಷ್ಮವಾಗಿ ಗಮನ ಹರಿಸಿದ್ದಾರೆ. ಈ ಕ್ರಮವು ಆವಾಸಸ್ಥಾನಕ್ಕೆ ಎಷ್ಟು ಸೂಕ್ತ ಎಂಬ ಪ್ರಶ್ನೆ ಕಾಡುತ್ತಿದೆ. ಜೊತೆಗೆ ಇತರ ಪರಭಕ್ಷಕಗಳ ಜೊತೆ ಸಹಬಾಳ್ವೆ ಮತ್ತು ಯೋಜನೆ ತನ್ನ ಮೂಲ ಉದ್ದೇಶಕ್ಕೆ ಎಷ್ಟರ ಮಟ್ಟಿಗೆ ಬದ್ಧವಾಗಿದೆ ಎಂಬುದರ ಚಿಂತನೆಯೂ ನಡೆದಿದೆ.
ಮಧ್ಯಪ್ರದೇಶವು ಈಗಾಗಲೇ ಕುನೋ ಮತ್ತು ಗಾಂಧಿ ಸಾಗರ್ ಎಂಬ ಎರಡು ಚೀತಾ ನೆಲೆಗಳನ್ನು ಹೊಂದಿದೆ.
ನೌರಾದೇಹಿಯು ಸಂಪೂರ್ಣ ಸೂಕ್ತವಲ್ಲದೇ ಹೋದರೂ ಅದು "ಆದರ್ಶದಿಂದ ಬಹಳ ದೂರವಿದೆ" ಎಂದು ವನ್ಯಜೀವಿ ಸಂರಕ್ಷಣಾವಾದಿ ರವಿ ಚೆಲ್ಲಮ್ ಅವರು ಹೇಳಿದ್ದಾರೆ.
ಚೀತಾಗಳಿಗೆ ಅಷ್ಟೇನು ಸೂಕ್ತವಲ್ಲ
"ಈ ಆವಾಸಸ್ಥಾನವು ದಟ್ಟವಾದ ಕಾಡಿನಿಂದ ಕೂಡಿದೆ ಮತ್ತು ಇಲ್ಲಿ ಹೆಚ್ಚು ತೆರೆದ ಪ್ರದೇಶವಿಲ್ಲ ಎಂದು ನಾನು ಕೇಳಿದ್ದೇನೆ. ಇದು ಚೀತಾಗಳಿಗೆ ಅಷ್ಟೇನು ಸೂಕ್ತವಾಗದೇ ಇರಬಹುದು. ಆದರೆ ಸಂಪೂರ್ಣ ಸೂಕ್ತವಲ್ಲ ಎಂದು ಹೇಳಲು ಸಾಧ್ಯವಿಲ್ಲ. ಚೀತಾಗಳು ಸಾಮಾನ್ಯವಾಗಿ ಸಾಕಷ್ಟು ವಿಭಿನ್ನ ರೀತಿಯ ಆವಾಸಸ್ಥಾನಗಳಲ್ಲಿ ವಾಸಿಸುತ್ತವೆ" ಎಂಬ ಅಭಿಪ್ರಾಯ ಅವರದ್ದು.
ರವಿ ಚೆಲ್ಲಮ್ ಅವರು ತಮ್ಮ ವಾದಕ್ಕೆ ಸೇರಿಸಿದ ಮತ್ತೊಂದು ಕಳವಳ ಸಂಗತಿ ಎಂದರೆ, ಈ ಪ್ರದೇಶದಲ್ಲಿ ದೊಡ್ಡ ಮಾಂಸಾಹಾರಿಗಳ ಉಪಸ್ಥಿತಿ. “ಇಲ್ಲಿ 20ಕ್ಕಿಂತ ಹೆಚ್ಚು ಸ್ಥಳೀಯ ವಯಸ್ಕ ಹುಲಿಗಳಿವೆ ಮತ್ತು ಜೊತೆಗೆ ಅನೇಕ ಅಲ್ಪಾವಧಿಗೆ ಬಂದು ಹೋಗುವ ಹುಲಿಗಳೂ ಇವೆ ಎಂದು ವರದಿಯಾಗಿದೆ. ಈ ಹುಲಿಗಳು ಚೀತಾಗಳಿಗೆ, ವಿಶೇಷವಾಗಿ ದಟ್ಟವಾದ ಕಾಡುಗಳಲ್ಲಿ, ಭಾರೀ ಸವಾಲನ್ನು ಒಡ್ಡುತ್ತವೆ," ಎಂದು ಅವರು ಹೇಳಿದರು.
ವೈಜ್ಞಾನಿಕವಾಗಿ ದೋಷಪೂರಿತವೇ?
ಈ ಚರ್ಚೆಯ ಮೂಲದಲ್ಲಿ ವನ್ಯಜೀವಿ ವಿಜ್ಞಾನಿ ಅರ್ಜುನ್ ಗೋಪಾಲಸ್ವಾಮಿ ಅವರು ಎತ್ತಿರುವ ಒಂದು ವಿಶಾಲವಾದ ಪ್ರಶ್ನೆಯಿದೆ. ಅದೇನೆಂದರೆ ಈ ಯೋಜನೆಯು ವಿಜ್ಞಾನದಿಂದ ಪ್ರೇರಿತವಾಗಿದೆಯೇ?
"ಮೂಲಭೂತವಾಗಿ, ಚೀತಾಗಳನ್ನು ತರಲು ಸಿದ್ಧಪಡಿಸಿದ ಕಾರ್ಯ ಯೋಜನೆಯು ವೈಜ್ಞಾನಿಕವಾಗಿ ದೋಷಪೂರಿತವಾಗಿತ್ತು. ಈ ವಿಷಯದ ತಿರುಳು ಏನೆಂದರೆ ಕುನೋ ಎಷ್ಟು ಚೀತಾಗಳನ್ನು ಹಿಡಿದಿಡಬಲ್ಲದು ಎಂಬುದರ ಬಗ್ಗೆ ಸಂಪೂರ್ಣವಾಗಿ ಅತಿಯಾಗಿ ಅಂದಾಜು ಮಾಡಲಾಗಿತ್ತು. ಮತ್ತು ನಿಜಕ್ಕೂ 'ಎಷ್ಟು' ಎಂದು ನಾನು ಹೇಳಿದಾಗ, ನಾನು ನಿರ್ದಿಷ್ಟವಾಗಿ ಮುಕ್ತ ವ್ಯಾಪ್ತಿಯ ಪರಿಸ್ಥಿತಿಯಲ್ಲಿ ಎಷ್ಟು ಎಂದು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದ್ದೇನೆ," ಎಂದು ಅವರು ಹೇಳಿದರು.
ಅವರ ಪ್ರಕಾರ, ಈ ಯೋಜನೆಯು ಕುನೋದ ನಿರ್ವಹಣಾ ಸಾಮರ್ಥ್ಯವನ್ನು "ಕನಿಷ್ಠ ಮೂರರಿಂದ ನಾಲ್ಕು ಪಟ್ಟು" ಹೆಚ್ಚಿಗೆ ಅಂದಾಜು ಮಾಡಿತ್ತು, ಇದು ಕಾರ್ಯಸಾಧುವಾದ ಸಂಖ್ಯೆಯನ್ನು ಹಿಡಿದಿಡುವಷ್ಟು ಈ ಪ್ರದೇಶ ದೊಡ್ಡದಾಗಿರಲಿಲ್ಲ. ಚೀತಾಗಳು ಕುನೋದಿಂದ ರಾಜಸ್ಥಾನ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಚದುರಿಹೋಗಬಹುದು ಎಂಬುದನ್ನು ಸಂಪೂರ್ಣವಾಗಿ ಊಹಿಸಬಹುದಾಗಿತ್ತು.
"ಇದು ಚೀತಾಗಳ ನೈಸರ್ಗಿಕ ಪರಿಸರ ವಿಜ್ಞಾನವಾಗಿದೆ, ಇದನ್ನು ಕಾರ್ಯ ಯೋಜನೆಯಲ್ಲಿ ಪರಿಗಣಿಸಲೇ ಇಲ್ಲ," ಎಂದು ಅವರು ಗಮನಸೆಳೆಯುತ್ತಾರೆ.
ವಿಜ್ಞಾನಿಗಳ ಟೀಕೆ ಮತ್ತು ಭವಿಷ್ಯವಾಣಿ
ಗೋಪಾಲಸ್ವಾಮಿ ಮತ್ತು ಚೆಲ್ಲಮ್ ಅವರು ಇತರ ವಿಜ್ಞಾನಿಗಳೊಂದಿಗೆ 2022ರಲ್ಲಿ ನೇಚರ್ ಇಕಾಲಜಿ ಮತ್ತು ಎವಲ್ಯೂಷನ್ ನಿಯತಕಾಲಿಕೆಯಲ್ಲಿ "Introducing African cheetahs to India is an ill-advised conservation attempt" ಎಂಬ ಶೀರ್ಷಿಕೆಯ ಲೇಖನವನ್ನು ಕೂಡ ಬರೆದಿದ್ದರು.
ಅದರಲ್ಲಿ ಹೀಗೆ ಹೇಳಲಾಗಿದೆ: "ಬೇಲಿ ಹಾಕಿ ಇರಿಸಲಾದ ನಮೀಬಿಯಾದ ಚೀತಾಗಳು ಶೀಘ್ರದಲ್ಲೇ ಭಾರತದಲ್ಲಿ ಮುಕ್ತವಾಗಿ ಓಡಾಡುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಭಾರತದಲ್ಲಿ ಸರಾಸರಿ ಮಾನವ ಜನಸಂಖ್ಯಾ ಸಾಂದ್ರತೆಯು 150 ಪಟ್ಟು ಹೆಚ್ಚಾಗಿದೆ. ಅಂತಹ ಊಹಾತ್ಮಕ ಮತ್ತು ಅವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳುವುದು ಮಾನವ-ಚೀತಾ ಸಂಘರ್ಷಗಳು, ಮರುಪರಿಚಯಿಸಲಾದ ಚೀತಾಗಳ ಸಾವು ಅಥವಾ ಎರಡಕ್ಕೂ ಕಾರಣವಾಗುತ್ತದೆ ಮತ್ತು ಇದು ಜಾಗತಿಕವಾಗಿ ಮತ್ತು ಭಾರತದೊಳಗೆ ಇತರ ವಿಜ್ಞಾನ ಆಧಾರಿತ ಪ್ರಭೇದಗಳ ಚೇತರಿಕೆಯ ಪ್ರಯತ್ನಗಳನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ."
ಅಂದಿನಿಂದ ಅವರ ಪ್ರತಿಯೊಂದು ಭವಿಷ್ಯವಾಣಿಯೂ ನಿಜವಾಗಿದೆ ಎಂದು ಗೋಪಾಲಸ್ವಾಮಿ ಅವರು ಹೇಳುತ್ತಾರೆ. "ಚೀತಾಗಳು ತನ್ನ ವ್ಯಾಪ್ತಿಯನ್ನು ಮೀರಿ ಹೊರಗೆ ಹೋಗುವುದು, ಚೀತಾಗಳು ಮೇಕೆಗಳನ್ನು ಕೊಲ್ಲುವುದು ಅಥವಾ ಗ್ರಾಮಸ್ಥರಿಂದ ಕಲ್ಲು ತೂರಾಟಕ್ಕೆ ಒಳಗಾಗುವುದು, ಎಲ್ಲವೂ ಸಂಭವಿಸಿದೆ. ನಿರ್ವಹಣಾ ಸಾಮರ್ಥ್ಯವು ಅತ್ಯಂತ ಕಡಿಮೆಯಾಗಿದೆ, ಬಹುತೇಕ ಎಲ್ಲಾ ಚೀತಾಗಳು ಹೊರಗೆ ಹೋಗುತ್ತಿವೆ," ಎಂದು ಅವರು ವಿವರಿಸುತ್ತಾರೆ.
ಅವರು ಮತ್ತು ಅವರ ಸಹ-ಲೇಖಕರು ಪ್ರಭೇದಗಳ ಮರುಪರಿಚಯಕ್ಕಾಗಿ ಅಗತ್ಯವಾದ ವೈಜ್ಞಾನಿಕ ಮಾನದಂಡಗಳಾದ ನಿರಂತರವಾಗಿ ವಾಸಿಸುವ ಪ್ರದೇಶ, ಬೇಟೆಯ ಆಧಾರ ಮತ್ತು ದೀರ್ಘಾವಧಿಯ ಕಾರ್ಯಸಾಧ್ಯತೆಗಳನ್ನು ಎಂದಿಗೂ ಪೂರೈಸಲಾಗಿಲ್ಲ ಎಂದು ವಾದಿಸುತ್ತಾರೆ.
ಮೃಗಾಲಯದಂತಾದ ಯೋಜನೆ
"ನಾವು ಈಗ ನೋಡುತ್ತಿರುವುದು ಮತ್ತೊಂದು ಬೇಲಿ ಹಾಕಿದ ಸ್ಥಳ. ಅಲ್ಲಿ ಚೀತಾಗಳನ್ನು ಸಣ್ಣ ಆವರಣಗಳಲ್ಲಿ ನಿರ್ವಹಿಸಲಾಗುತ್ತದೆ. ಇದು ಆರಂಭವಾಗಬೇಕಿದ್ದ ಯೋಜನೆಯಲ್ಲ; ಇದು ನೈಸರ್ಗಿಕ ಪರಿಸರದಲ್ಲಿನ ಮೃಗಾಲಯದಂತೆ ಆಗುತ್ತಿದೆ," ಎಂದು ಗೋಪಾಲಸ್ವಾಮಿ ಪ್ರತಿಪಾದಿಸಿದರು.
ಆದರೆ, ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಖಮರ್ ಖುರೇಷಿ ಅವರಿಗೆ ಇದು ಹೆಚ್ಚು ಸೂಕ್ಷ್ಮವಾಗಿ ಕಾಣಿಸುತ್ತಿದೆ. ನೌರಾದೇಹಿಯು ಯೋಜನೆಯ ಮೂಲ ಯೋಜನೆಯ ಭಾಗವಾಗಿತ್ತು ಮತ್ತು ಮಧ್ಯಪ್ರದೇಶದೊಳಗೆ ಅನೇಕ ಸ್ಥಳಗಳಿಗೆ ಚೀತಾಗಳನ್ನು ಪರಿಚಯಿಸುವುದು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುವ ಭಾಗವಾಗಿದೆ ಎಂದು ಅವರು ತಿಳಿಸಿದರು.
"ಇದು ಮೊದಲ ಹಂತ. ನಾವು ಪ್ರಾರಂಭದಲ್ಲಿ ಇಲ್ಲಿ ಮೂರು ಘಟಕಗಳನ್ನು ಗುರುತಿಸಿದ್ದೇವೆ, ಅವುಗಳಿಂದ ಕಲಿಯುತ್ತೇವೆ ಮತ್ತು ಈ ಪ್ರದೇಶಗಳು ಯಶಸ್ವಿಯಾಗಿ ಚೀತಾಗಳನ್ನು ಹೊಂದಿದ ನಂತರ ಇತರ ರಾಜ್ಯಗಳಿಗೆ ವಿಸ್ತರಿಸುತ್ತೇವೆ," ಎಂದು ಅವರು ಹೇಳುತ್ತಾರೆ. ಯೋಜನೆಯನ್ನು ಮಧ್ಯಪ್ರದೇಶವನ್ನೂ ಮೀರಿ ವಿಸ್ತರಿಸಲು ಯಾವುದೇ ಔಪಚಾರಿಕ ಯೋಜನೆ ಇಲ್ಲದಿದ್ದರೂ, ಅದು ನೈಸರ್ಗಿಕವಾಗಿ ಮುಂದಿನ ಹೆಜ್ಜೆಯಾಗಿರುತ್ತದೆ ಎಂದು ಖುರೇಷಿ ನಂಬುತ್ತಾರೆ.
"ಚೀತಾಗಳೇ ಏಕೆ" ಎಂಬ ಚರ್ಚೆಯು ಅವುಗಳ ಸಾಂಕೇತಿಕ ಮತ್ತು ಪರಿಸರ ಮೌಲ್ಯವನ್ನು ನಿರ್ಲಕ್ಷಿಸುತ್ತದೆ ಎಂದು ಅವರು ವಾದಿಸಿದರು.
"ನಿಮಗೆ ಜೀವನದ ಪ್ರತಿ ವಲಯದಲ್ಲಿ ಪೋಸ್ಟರ್ ಗರ್ಲ್ಸ್ ಮತ್ತು ಪೋಸ್ಟರ್ ಬಾಯ್‌ಗಳು ಬೇಕು. ಚೀತಾದ ಹೆಸರಿನಲ್ಲಿ, ನೀವು ಆ ಒಣ, ಶುಷ್ಕ ಪ್ರದೇಶಗಳನ್ನು ಸಂರಕ್ಷಿಸಬಹುದು. ಹುಲಿಯ ಹೆಸರಿನಲ್ಲಿ ಎಷ್ಟು ಸಂರಕ್ಷಿಸಲಾಗಿದೆ? ಹುಲಿಯನ್ನು ಮಾತ್ರ ರಕ್ಷಿಸಲಾಗುತ್ತಿಲ್ಲ, ಸಸ್ಯಗಳು ಮತ್ತು ಪ್ರಾಣಿಗಳ ಸಂಪೂರ್ಣ ಶ್ರೇಣಿಯು ಹುಲಿ ಸಂರಕ್ಷಣೆಯಿಂದ ಪ್ರಯೋಜನ ಪಡೆಯುತ್ತದೆ. ಚೀತಾವು ಈ ದೇಶದ ಅರೆ-ಶುಷ್ಕ ಪರಿಸರ ವ್ಯವಸ್ಥೆಯನ್ನು ಪ್ರತಿನಿಧಿಸುವ ಪ್ರಾಣಿಯಾಗಿದೆ," ಎಂದು ಅವರು ಹೇಳಿದರು.
ದೂರದೃಷ್ಟಿಯ ಕೊರತೆ
ವನ್ಯಜೀವಿ ಸಂರಕ್ಷಣಾ ಜೀವಶಾಸ್ತ್ರಜ್ಞ ರಘು ಚುಂಡಾವತ್ ಅವರು ಈ ಹಿಂದಿನ ಖಮರ್ ಖುರೇಷಿ ಅವರ ತರ್ಕವನ್ನು ಪ್ರಶ್ನಿಸುತ್ತಾರೆ. ಅವರು ಈ ಯೋಜನೆಯನ್ನು "ದೂರದೃಷ್ಟಿಯ ಕೊರತೆಯಿಂದ ಕೂಡಿದ ಮತ್ತು ತಾತ್ಕಾಲಿಕ" ಎಂದು ಕರೆದಿದ್ದಾರೆ.
"ಇದಕ್ಕೆ ಯಾವುದೇ ಯೋಜನೆಯಿಲ್ಲ. ಇದು ಕೇವಲ ಬೇಕಾಬಿಟ್ಟಿ ಆಲೋಚನಾ ಪ್ರಕ್ರಿಯೆ. ಯಾವುದೇ ವೈಜ್ಞಾನಿಕ ಅಡಿಪಾಯವಿಲ್ಲದೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಉದ್ದೇಶವೇನು? ಅವರು ನೌರಾದೇಹಿಗೆ ಯಾಕೆ ಚೀತಾಗಳನ್ನು ಏಕೆ ಪರಿಚಯಿಸಬೇಕು?" ಎಂದು ಅವರು ಪ್ರಶ್ನಿಸಿದರು.
ಅವರ ಪ್ರಕಾರ, ಸಮಸ್ಯೆಯು ಕೇವಲ ಕಾರ್ಯಸಾಧ್ಯತೆ ಮಾತ್ರವಲ್ಲ, ಉದ್ದೇಶದ ಸ್ಪಷ್ಟತೆ ಸಹ ಆಗಿದೆ. "ಈ ಪ್ರಶ್ನೆಯನ್ನು ಅವರಿಗೆ ಕೇಳಬೇಕು: ಭಾರತಕ್ಕೆ ತನ್ನ ಸಂರಕ್ಷಣೆಗಾಗಿ ಚೀತಾಗಳ ಅಗತ್ಯವಿದೆಯೆ? ಮತ್ತು ಅಗತ್ಯವಿದ್ದರೆ, ಯಾವ ಉದ್ದೇಶಕ್ಕಾಗಿ?" ಎಂದು ಅವರು ಕೇಳುತ್ತಾರೆ.
"ಅವರು ಅವುಗಳನ್ನು ಡೆಸರ್ಟ್ ನ್ಯಾಷನಲ್ ಪಾರ್ಕ್‌ನಲ್ಲಿ ಪರಿಚಯಿಸಿದ್ದರೆ, ಅದು ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗೆ ರಕ್ಷಣೆ ಒದಗಿಸುತ್ತಿತ್ತು. ಅದಕ್ಕೆ ನಾನು ಅತೀವ ಸಂತೋಷಪಡುತ್ತಿದ್ದೆ. ಆದರೆ ಹುಲಿ ಮತ್ತು ಚಿರತೆಯ ಆವಾಸಸ್ಥಾನಗಳಲ್ಲಿ ಚೀತಾಗಳನ್ನು ಪರಿಚಯಿಸುವುದರಿಂದ ಯಾರಿಗಾದರೂ ಹೇಗೆ ಪ್ರಯೋಜನವಾಗುತ್ತದೆ?"
ಮರಿಗಳ ಸಾವು ಹೆಚ್ಚೀತು
ಚುಂಡಾವತ್ ಅವರು ನೌರಾದೇಹಿಯಲ್ಲಿ ಹುಲಿಗಳು ಮತ್ತು ಚಿರತೆಗಳ ಹೆಚ್ಚಿನ ಸಾಂದ್ರತೆಯು "ತೀವ್ರವಾದ ಹಸ್ತಕ್ಷೇಪಕ್ಕೆ, ಪೈಪೋಟಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು. "ಮರಿಗಳ ಸಾವಿನ ಪ್ರಮಾಣ ಹೆಚ್ಚಬಹುದು," ಎಂದು ಅವರು ಹೇಳಲು ಮರೆಯಲಿಲ್ಲ, ಪರಭಕ್ಷಕ ಶ್ರೇಣಿಯನ್ನು ಗಮನಿಸಿದರೆ ಇದು ಕೇವಲ ಊಹಾತ್ಮಕವಾದರೂ ನಂಬಲರ್ಹವಾಗಿದೆ ಎಂದರು.
"ಚೀತಾಗೆ ಅದು ಹುಲಿಯನ್ನು ಎದುರಿಸುತ್ತಿದೆಯೇ ಅಥವಾ ಚಿರತೆಯನ್ನು ಎದುರಿಸುತ್ತಿದೆಯೇ ಎಂಬುದು ಮುಖ್ಯವಲ್ಲ. ಚಿರತೆಗಳು ಹೆಚ್ಚು ಕದ್ದುಮುಚ್ಚಿ ಇರಬಲ್ಲವು, ಆದ್ದರಿಂದ ಅವುಗಳಿಂದ ಅಪಾಯವು ಹೆಚ್ಚಾಗಿರುತ್ತದೆ."
ಏತನ್ಮಧ್ಯೆ, ಗೋಪಾಲಸ್ವಾಮಿ ಅವರು ಚೀತಾಗಳನ್ನು ಮರುಪರಿಚಯಿಸಲು, "ನಾವು ಚೀತಾಗಳ ಪರಿಸರ ವಿಜ್ಞಾನದ ಅವಶ್ಯಕತೆಗಳನ್ನು ಪೂರೈಸಬೇಕು, ಅಂದರೆ ಸುಮಾರು 10,000-20,000 ಚದರ ಕಿಲೋಮೀಟರ್‌ಗಳಷ್ಟು ಆವಾಸಸ್ಥಾನ ಮತ್ತು ಚೀತಾಗಳಿಗೆ ಸೂಕ್ತವಾದ ಉತ್ತಮ ಮತ್ತು ಹೆಚ್ಚಿನ ಸಂಖ್ಯೆಯ ಬೇಟೆಗೆ ಅಗತ್ಯವಾದ ಕಾಡು ಇರಬೇಕು. ಜೊತೆಗೆ ಅದು ಮುಕ್ತವಾದ ವಾತಾವರಣದಲ್ಲಿ ವಾಸಿಸಲು ಸಂಘರ್ಷ-ಮುಕ್ತ ಪರಿಸರವಿರಬೇಕು," ಎಂದು ಗಮನಸೆಳೆದರು.
ಮಧ್ಯಪ್ರದೇಶವು ಮತ್ತೊಂದು ಭೂದೃಶ್ಯವನ್ನು ಪರೀಕ್ಷಿಸಲು ಸಿದ್ಧವಾಗುತ್ತಿರುವ ಹೊತ್ತಿನಲ್ಲಿ, ಚೀತಾಗಳು ಎಲ್ಲಿ ಬದುಕಬಲ್ಲವು ಎಂಬುದು ಮಾತ್ರವಲ್ಲದೆ, ಭಾರತವು ಅವುಗಳಿಗೆ ನಿಜವಾದ ಕಾಡು ಮನೆಯನ್ನು ನೀಡಬಹುದೇ ಎಂಬ ಪ್ರಶ್ನೆ ಒಗಟಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.