The Federal Ground Report | ನೆನಪಿನ ʼಸಮಾಧಿʼಗಳಿಂದ ಹೊರ ಬರುತ್ತಿವೆ ಕಣ್ಣೀರ ಕಥನಗಳು....ಅಮ್ಮಂದಿರ ಬವಣೆಗಳು...

ಅಂತೂ.. ಇಂತೂ... ವ್ಯಕ್ತಿಯೊಬ್ಬರು ಅನೇಕ ಶವಗಳನ್ನು ಹೂತು ಹಾಕಿದ್ದೇನೆಂದು ಹೇಳಿಕೆ ನೀಡದ ಬಳಿಕ ಮತ್ತೆ ಒಂದೊಂದು ದುರಂತ ಅಂತ್ಯಗಳು ಅನಾವರಣಗೊಳ್ಳುತ್ತಿವೆ... ಇನ್ನೇನಾಗುತ್ತದೋ.....!!;

Update: 2025-07-25 02:30 GMT

ಮಕ್ಕಳ ಭವಿಷ್ಯ ರೂಪಿಸುವಲ್ಲಿ ನುಚ್ಚು ನೂರಾದ ಕನಸು... ದಶಕಗಳೇ ಕಳೆದರೂ ಮಾಸದ ಮಕ್ಕಳ ಮುಗ್ಧತೆಯ ಮನಸು... ಒಂಟಿಯಾಗಿ ಬಿಟ್ಟದ್ದೇ ಜೀವಕ್ಕೆ ತಂದ ಕುತ್ತು.... ಭವಿಷ್ಯ ರೂಪಿಸಬೇಕಾದ ತಂದೆಯೇ ಇಲ್ಲದೆ ಅನಾಥ ಭಾವ... ತಮ್ಮವರನ್ನು ಕಳೆದುಕೊಂಡ ʼಅವಿನಾಭಾವʼ... ಒಂದೊಂದು ಕುಟುಂಬದ ಒಂದೊಂದು ಕರುಣಾಜನಕ ಕಥೆ- ವ್ಯಥೆ.

ದಶಕಗಳೇ ಕಳೆದರೂ ಸೌಜನ್ಯ, ಪದ್ಮಲತಾ, ಅನನ್ಯ ಭಟ್‌  ಪೋಷಕರ ಮುಖದಲ್ಲಿ ದುಃಖ ಮಡುಗಟ್ಟಿತ್ತು.  ತಂದೆ, ಅತ್ತೆಯನ್ನು ಕಳೆದುಕೊಂಡ ಗಣೇಶ್‌ ಚಿಂತೆ ಮಾಸಿಲ್ಲ. ನುಡಿಯಲ್ಲಿ ತಮ್ಮವರ ಸಾವಿಗೆ ನ್ಯಾಯ ಸಿಗದ ನೋವು. ದಶಕಗಳಿಂದ ಸಿಗದ ನ್ಯಾಯ ಹೊಸದಾಗಿ ರಚನೆಯಾದ ಎಸ್‌ಐಟಿ (SIT)ಯ ವ್ಯಾಪ್ತಿಯೊಳಗೆ ಸೇರಿಸಿದರೆ ತಮ್ಮವರ ಸಾವಿಗೆ ನ್ಯಾಯ ಸಿಗಬಹುದೇನೋ ಎಂಬ ಆಶಾಭಾವನೆ.. ದ ಫೆಡರಲ್‌ ಕರ್ನಾಟಕ ಮೃತರ ಕುಟುಂಬದವರನ್ನು ಭೇಟಿಯಾದಾಗ ಮನದಲ್ಲಿ ಮಡುಗಟ್ಟಿದ್ದ ನೋವು ಮಾತಿನಲ್ಲಿ ಕಾಣಿಸುತ್ತಿತ್ತು. 

ಅಕಾಲಿಕವಾಗಿ, ಘೋರವಾಗಿ ಕೊಲೆಗೀಡಾದವರ  ಕುಟುಂಬದವರು ಘಟನೆ ನಡೆದ ಕಾಲಕ್ಕೆ ಆರ್ಥಿಕವಾಗಿ ಸಬಲರಲ್ಲ. ಆದರೆ, ಈಗೀಗ ಅವರವರ ದುಡಿಮೆ ಫಲವಾಗಿ ಅಷ್ಟಕಷ್ಟು ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ತಮ್ಮವರನ್ನು ಕಳೆದುಕೊಂಡಿರುವ ಮಾನಸಿಕ ಯಾತನೆಯಲ್ಲಿದ್ದಾರೆ. ದಶಕಗಳೇ ಕಳೆದರೂ ಅವರೊಂದಿಗಿನ ನೆನಪು ಮಾಸಿಲ್ಲ.

ಪದ್ಮಲತಾ ಸಹೋದರ ಕಿರಣ್ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಗಂತ ತುಂಬಾ ಸ್ಥಿತಿವಂತರಲ್ಲ.. ಆದರೆ ಆರ್ಥಿಕವಾಗಿ ತಕ್ಕ ಮಟ್ಟಿಗೆ ಇದ್ದಾರೆ. ಇದರ ಜತೆಗೆ ಸಹೋದರಿ ಸಾವಿನ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಸೌಜನ್ಯ ತಾಯಿ ಕುಸುಮಾವತಿ ಅವರು ತಮ್ಮ ಬಳಿ ಇರುವ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಮಗಳ ಕ್ರೂರ ಕೊಲೆಯಾದ ಬಳಿಕ ಸಾರ್ವಜನಿಕ ಸಂಸ್ಥೆಗಳ ಹೋರಾಟದಿಂದಾಗಿ ಅವರ ಬಳಿ ಇರುವ ಜಮೀನು ಸದ್ಯಕ್ಕೆ ʼಸುರಕ್ಷಿತʼವಾಗಿದೆ ಎಂದೆನ್ನಬಹುದು. ಅವರ ಸೋದರ, ಸೌಜನ್ಯ ಸೆಂಟರ್‌ ಎಂಬ ಪುಟ್ಟ ಗೂಡಂಗಡಿ ಇಟ್ಟುಕೊಂಡಿದ್ದಾರೆ.

ಸುಜಾತಾ ಭಟ್‌, ಕೇಂದ್ರ ಸರ್ಕಾರದ ನೌಕರಿಯಲ್ಲಿದ್ದ ಕಾರಣ ಆರ್ಥಿಕ ನೆರವಿದೆ. ಪತಿ ತೀರಿಕೊಂಡ ಬಳಿಕ ಮಗಳೇ ಎಲ್ಲಾ ಎಂಬ ಧೈರ್ಯದಿಂದಿದ್ದ ಆಕೆ, ಮಗಳೂ ʼಕಾಣೆʼಯಾದ ಬಳಿಕ ಹಾಗೂ  ತಾವೇ ಹಲ್ಲೆಗೊಳಗಾದ ಬಳಿಕ ಅವರ ಜಂಘಾಬಲವೇ ಉಡುಗಿಹೋಗಿದೆ!  ಮಗಳ ಚಿಂತೆಯಲ್ಲಿ ದಿನ ದೂಡುತ್ತಿದ್ದಾರೆ. ಮಗಳ ಅಂತ್ಯ ಸಂಸ್ಕಾರ ಮಾಡದೆ ಇರುವ ಸಂದರ್ಭ ಬಂದೊದಗಿದ್ದಕ್ಕಾಗಿ ಮಾನಸಿಕವಾಗಿ ಜರ್ಜರಿತವಾಗಿದ್ದಾರೆ.

ನಾರಾಯಣ ಸಪಲ್ಯ ಅವರನ್ನುಕಳೆದುಕೊಂಡ ಪುತ್ರ  ಗಣೇಶ ಅವರು ಆರ್ಥಿಕವಾಗಿ ತುಂಬಾ ಸಧೃಡವಾಗಿಲ್ಲದಿದ್ದರೂ ಜೀವನ ನಡೆಸಲೂ ಸಮಸ್ಯೆ ಇಲ್ಲ.. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಆರೋಪಿಸಿದವರ ಪಾತ್ರದ ತನಿಖೆಯೇ ಆಗಲಿಲ್ಲ..!

ʼದ ಫೆಡರಲ್‌ ಕರ್ನಾಟಕʼ ಸೌಜನ್ಯ ಅವರ ಮನೆಗೆ ಭೇಟಿ ನೀಡಿದಾಗ ಸೌಜನ್ಯಳ ತಾಯಿ ಕುಸುಮಾವತಿ ಮನದ ತೊಳಲಾಟ ಕಡಿಮೆಯಾಗಿರಲಿಲ್ಲ. ಸೌಜನ್ಯ ದುರಂತ ವಿವರಿಸುವಾಗ ಅವರ ಕಣ್ಣಾಲಿಗಳು ಪದೇ ಪದೇ ತುಂಬಿ ಬರುತ್ತಿದ್ದವು. ಎಷ್ಟೇ ಸಾಂತ್ವನ ಹೇಳಿದರೂ ಸೌಜನ್ಯ ನೆನಪು ಮಾತ್ರ ಅವರಿಂದ ದೂರವಾಗಿರಲಿಲ್ಲ. ಮನೆಯಲ್ಲಿ ಅಲ್ಲಲ್ಲಿ ಅಳವಡಿಸಿದ ಸೌಜನ್ಯಗಳ ಚಿತ್ರಗಳನ್ನೇ ನೋಡಿಕೊಂಡೇ ಮನಸ್ಸಿಗೆ ಸಮಾಧಾನ ಹೇಳಿಕೊಳ್ಳುತ್ತಿದ್ದಾರೆ.

ಆರೋಪಿಗಳನ್ನು ತನ್ನ ಮಗಳು ಕೊನೆಯದಾಗಿ ಕಾಣಿಸಿಕೊಂಡ ಸ್ಥಳದ ಬಳಿ ನೋಡಲಾಗಿದೆ ಎಂದು ಆಕೆಯ ತಂದೆ ಆರೋಪಿಸಿದರು. ಆದರೆ ಅವರ ಪಾತ್ರವನ್ನು ಎಂದಿಗೂ ತನಿಖೆ ಮಾಡಲಾಗಿಲ್ಲ. ಆದರೂ ಪೊಲೀಸರು ಸಂತೋಷ್ ರಾವ್ ಅವರನ್ನು ಪ್ರಮುಖ ಅಪರಾಧಿ ಎಂದು ಹೆಸರಿಸಿದರು. ಅನಗತ್ಯವಾಗಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಯಿತು. ವಿಚಾರಣಾ ನ್ಯಾಯಾಲಯವು ಯಾವುದೇ ಪುರಾವೆಗಳಿಲ್ಲದ ಕಾರಣ ರಾವ್ ಅವರನ್ನು ನಂತರ ಖುಲಾಸೆಗೊಳಿಸಿತು. ನಿಜವಾದ ಆರೋಪಿ ಮಾತ್ರ ಈವರೆಗೂ ಸಿಕ್ಕಿಲ್ಲ ಎಂದು ಕುಸುಮಾವತಿ ಬೇಸರ ವ್ಯಕ್ತಪಡಿಸಿದರು.

ಈ ಪ್ರಕರಣವನ್ನು ಆರಂಭದಲ್ಲಿ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದ್ದರು, ನಂತರ ಅದನ್ನು ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ವರ್ಗಾಯಿಸಲಾಯಿತು. ತದನಂತರ ಸಿಬಿಐ ತನಿಖೆ ನಡೆಸಿತು. ಆದರೂ ನ್ಯಾಯ ಮಾತ್ರ ಸಿಗಲಿಲ್ಲ. ಜೀವ ಇರುವವರೆಗೆ ಮಗಳ ಸಾವಿಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು. ಜೀವ ಇರುವವರೆಗೆ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇವೆ ಎಂದು ನೋವಿನಿಂದ ನುಡಿದರು. 

2012 ಅ. 9 ನಡೆದದ್ದು ಏನು? 

ಉಜಿರೆಯ  ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸೌಜನ್ಯ 2012ರ ಅ.9 ರ ಸಂಜೆ 4.15ಕ್ಕೆ ಕಾಲೇಜು ಮುಗಿಸಿ ನೇತ್ರಾವತಿ ನದಿ ನಿಲ್ದಾಣದಲ್ಲಿ ಇಳಿದು ಮನೆಯತ್ತ ಹೊರಟ್ಟಿದ್ದಳು. ಆದರೆ, ಮನೆಗೆ ತಲುಪಿರಲಿಲ್ಲ. ನಿಗದಿತ ಸಮಯಕ್ಕೆ ಮಗಳು ಮನೆಗೆ ಬಾರದಿದ್ದಾಗ ಪೋಷಕರೆಲ್ಲಾ ಆತಂಕಗೊಂಡಿದ್ದರು. ಅಂದು ಹೊಸ-ಅಕ್ಕಿ ಹಬ್ಬದ ದಿನವಾಗಿದ್ದರಿಂದ ಬೆಳಗ್ಗೆ ಕೇವಲ ಏನನ್ನೂ ತಿನ್ನದೆ ಕೇವಲ ಕಾಫಿ ಕುಡಿದು ಹೋಗಿದ್ದಳು. ಊಟ ಮಾಡದಿದ್ದ ಮಗಳು ಮನೆಗೆ ಬಂದು ಮಾಡುವುದಾಗಿ ಹೇಳಿದ್ದರು. ಕಾಲೇಜು ಮುಗಿಸಿ ಬೇರೆಲ್ಲಾ ಮಕ್ಕಳು ಬಂದರೂ ಮಗಳು ಮಾತ್ರ ಬಾರದಿರುವುದು ಪೋಷಕರಲ್ಲಿ ಆತಂಕ ಮೂಡಿಸಿತು. 

ನೇತ್ರಾವತಿ ನದಿ ಬಸ್‌ ನಿಲ್ದಾಣದಿಂದ ಮನೆಯವರೆಗಿನ ಎಲ್ಲಾ ಇಕ್ಕೆಲಾಗಳಲ್ಲಿ ಹುಡುಕಾಟ ನಡೆಸಿದರು. ಆದರೂ ಮಗಳು ಪತ್ತೆಯಾಗಿದ್ದಾಗ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದರು. ಕಾಣೆಯಾಗಿರುವ ಬಗ್ಗೆ ಅಧಿಕೃತವಾಗಿ ಪೊಲೀಸರು ದೂರು ದಾಖಲಿಸಿಕೊಂಡರು. ಮರುದಿನ ಸೌಜನ್ಯ ವಿವಸ್ತ್ರವಾಗಿ ಪತ್ತೆಯಾಗಿದ್ದಳು. ಭೀಕರವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ದೇಹದಲ್ಲಿ ಊಟದ ಅಂಶಗಳಿದ್ದವು. ಅಂದು ಉಪವಾಸ ಇದ್ದ ಸೌಜನ್ಯಳಿಗೆ ಆಹಾರ ಸೇವನೆ ಮಾಡಿದ್ದು ಯಕ್ಷಪ್ರಶ್ನೆಯಾಗಿತ್ತು. ಸೌಜನ್ಯ ಪ್ರಕರಣದ ತನಿಖೆಯನ್ನು ಸ್ಥಳೀಯರು, ಸಿಐಡಿ ಮತ್ತು ಸಿಬಿಐ ತನಿಖೆ ನಡೆಸಿತು. ಆದರೂ ಆಕೆಯ ಅತ್ಯಾಚಾರ ಮತ್ತು ಹತ್ಯೆ ಇಂದಿಗೂ ಹಲವು ಪ್ರಶ್ನೆಗಳಿಂದ ನಿಗೂಢವಾಗಿಯೇ ಇದೆ. 

ʼಕಮ್ಯುನಿಸ್ಟ್‌ʼ ಅಪ್ಪನ ಮೇಲಿನ ದ್ವೇಷಕ್ಕೆ ಮಗಳ ಸಾವೇ? 

ರಸ್ತೆಗೆ ಹೊಂದಿಕೊಂಡಂತೆ ಸಣ್ಣದೊಂದು ಹಳ್ಳ ದಾಟಿ ಗಿಡ-ಮರಗಳ ಹಸಿರಿನ ನಡುವೆ ಸಾಗಿದರೆ ಅಚ್ಚುಕಟ್ಟಾದ ಮನೆಯಲ್ಲಿ ನೆಲೆಸಿರುವ ಮೃತ ಪದ್ಮಲತಾಳ ಕುಟುಂಬ ಇಂದಿಗೂ ನ್ಯಾಯಕ್ಕಾಗಿ ಕಾದು ಕುಳಿತಿದೆ. ದ ಕರ್ನಾಟಕ ಫೆಡರಲ್‌ ಪದ್ಮಲತಾ ಮನೆಗೆ ಭೇಟಿ ನೀಡಿದಾಗ  ಕಂಡುಬಂದಿದ್ದು, ಸಹೋದರಿ ಚಂದ್ರಾವತಿ ತಂಗಿಯ ಸಾವಿನ ದುಃಖದಲ್ಲಿಯೇ ಸೊರಗಿದ್ದಾರೆ. ಸಹೋದರ ಕಿರಣ್‌ ಸಹೋದರಿಯ ಸಾವಿನ ಚಿಂತೆಯಲ್ಲಿಯೇ ತಮ್ಮ ಕುಟುಂಬದ ನೊಗವನ್ನು ಎಳೆಯುತ್ತಾ ಜೀವನ ಸಾಗಿಸುತ್ತಿದ್ದಾರೆ. 

ದ ಫೆಡರಲ್‌ ಕರ್ನಾಟಕದೊಂದಿಗೆ ಮಾಸದ ಘಟನೆಗಳ ಬಗ್ಗೆ ಮಾಹಿತಿ ಹಂಚಿಕೊಂಡ ಚಂದ್ರಾವತಿ, 1986ರ ಸಮಯದಲ್ಲಿ ಗ್ರಾಮಪಂಚಾಯಿತಿ ಚುನಾವಣೆಗೆ ಧರ್ಮಸ್ಥಳ ಅಣಿಯಾಗಿತ್ತು. ಇಡೀ ಊರಿನಲ್ಲಿ ಚುನಾವಣಾ ಸಮರದ ಕಾವು ಜೋರಾಗಿತ್ತು. ಸಿಪಿಎಂನಲ್ಲಿ ಗುರುತಿಸಿಕೊಂಡಿದ್ದ ದೇವಾನಂದ ಚುನಾವಣೆಗೆ ಸ್ಪರ್ಧಿಸಿದ್ದರು. ಪರಿಣಾಮ ಕೇವಲ ರಾಜಕೀಯ ಜೀವನ ನಶಿಸಲಿಲ್ಲ, ಮಗಳನ್ನೇ ಕಳೆದುಕೊಂಡು ಜೀವನವೇ ನಶ್ವರ ಎಂಬಂತಹ ಪರಿಸ್ಥಿತಿ ನಿರ್ಮಾಣವಾಯಿತು. ಮಾತ್ರವಲ್ಲ, ಅವರೊಂದಿಗೆ ಜಮೀನು ವಿಷಯದಲ್ಲಿ ವಿವಾದವೂ ಇತ್ತು. ಪರಿಣಾಮ ತಂಗಿಯನ್ನು ಕಳೆದುಕೊಳ್ಳಬೇಕಾಯಿತು. ತಂದೆಯ ಮೇಲಿನ ರಾಜಕೀಯ ದ್ವೇಷಕ್ಕೆ ಮಗಳು ಬಲಿಯಾಗುವಂತಾಯಿತು ಎಂದು ನೋವಿನ ಮಾತನಾಡಿದರು. 

ಸಹೋದರ ಕಿರಣ್‌ ಮಾತನಾಡಿ, ಪದ್ಮಲತಾ ಕಾಲೇಜು ಮುಗಿಸಿ ಧರ್ಮಸ್ಥಳಕ್ಕೆ ಬಸ್‌ನಲ್ಲಿ ಬಂದಿಳಿದಿದ್ದಳು. ಅದನ್ನು ಮಾವ ದಿವಾಕರ್‌ ನೋಡಿದ್ದರು. ಆದರೆ, ಮನೆಗೆ ಬರಲಿಲ್ಲ. ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿಲ್ಲ. ಪ್ರಕರಣ ಮುಚ್ಚಿ ಹಾಕಲಾಯಿತು. ನೀಡಿದ ದೂರಿನ ಪ್ರತಿಯು ಧೂಳು ಹಿಡಿದು ಪ್ರಕರಣ ಹಳ್ಳಹಿಡಿಯಿತು. ಮೂರು ದಶಕಗಳಿಂದಲೂ ನ್ಯಾಯ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಸ್‌ನಲ್ಲಿದ್ದರುವುದನ್ನು ಮಾವ ಗಮನಿಸಿದ್ದರು: 

ಉಜಿರೆಯ  ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಪದ್ಮಲತಾ ಧರ್ಮಸ್ಥಳ ಬಸ್‌ ನಿಲ್ದಾಣದಲ್ಲಿ ಬಸ್‌ನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದಳು. ಬಸ್‌ನಲ್ಲಿ ಆಕೆ ಇರುವುದನ್ನು ಮಾವ ನೋಡಿದ್ದರು. ಅಲ್ಲದೇ, ಬಸ್‌ ನಿಲ್ದಾಣದಲ್ಲಿ ಇಳಿದ ಬಳಿಕ ಮಾತನಾಡಿಸಿ ಕಳುಹಿಸಿದ್ದರು. ಮನೆಗೆ ತೆರಳದ ಆಕೆ ಕಣ್ಮರೆಯಾದಳು. ತಂದೆ ಕಮ್ಯೂನಿಸ್ಟ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಅವರ ರಾಜಕೀಯವೇ ಪದ್ಮಲತಾಳಿಗೆ ಮುಳುವಾಯಿತು. ಗ್ರಾಮಪಂಚಾಯಿತಿಗೆ ಸ್ಪರ್ಧಿಸಿದ್ದು ಮತ್ತು ಜಮೀನು ವಿವಾದದಿಂದಾಗಿ ಕೆಲವರ ವಿರೋಧ ಕಟ್ಟಿಕೊಂಡಿದ್ದರು. ಹೀಗಾಗಿ ಮಗಳನ್ನು ಅಪಹರಣವಾಯಿತು ಎಂಬ ಮಾತುಗಳು ಕೇಳಿಬಂದಿವೆ. 

ನಾಪತ್ತೆಯಾದ 56 ದಿನಗಳ ಬಳಿಕ ಪದ್ಮಲತಾಳ ಮೃತದೇಹ ಪತ್ತೆಯಾಯಿತು. ನದಿಯಲ್ಲಿ ವಿವಸ್ತ್ರವಾಗಿ ಮೃತದೇಹ ಸಿಕ್ಕಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ಆದರೆ ದೂರು ತೆಗೆದುಕೊಳ್ಳಲು ಆರಂಭದಲ್ಲಿ ಹಿಂದೇಟು ಹಾಕಿದರು. ನಂತರ ಒತ್ತಡ ಬಂದ ಬಳಿಕ ದೂರು ತೆಗೆದುಕೊಂಡರೂ ಸಹ ಪ್ರಕರಣ ಇತ್ಯರ್ಥವಾಗಲಿಲ್ಲ. 

ಹಣ ಸಂಗ್ರಹ ಕೆಲಸ ಮಾಡಿಕೊಂಡು ಜೀವನ 

ಇನ್ನು, ಧರ್ಮಸ್ಥಳದಲ್ಲಿ ಮಾವುತರಾಗಿ ಕೆಲಸ ಮಾಡುತ್ತಿದ್ದ ನಾರಾಯಣ ಸಪಲ್ಯ(62) ಮತ್ತು ಅವರ ಸಹೋದರಿ ಯಮುನಾ (45)  ಅವರು ತಮ್ಮ ಮನೆಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾದರು. ನಾರಾಯಣ ಅವರ ತಲೆಯನ್ನು ಕಲ್ಲಿನ ಚಪ್ಪಡಿಯಿಂದ ಜಜ್ಜಲಾಗಿತ್ತು ಮತ್ತು ಅವರ ಸಹೋದರಿಯನ್ನು ಪುಡಿ ಕಲ್ಲಿನಿಂದ ಹೊಡೆದು ಕೊಲ್ಲಲಾಗಿತ್ತು ಎಂದು ದಾಖಲೆಗಳು ಹೇಳುತ್ತವೆ.

ನಾರಾಯಣ ಪುತ್ರ ಗಣೇಶ್‌ ಅವರದ್ದು ಮತ್ತೊಂದು ವ್ಯಥೆ. ಜೀವನ ರೂಪಿಸಬೇಕಾದ ಸಂದರ್ಭದಲ್ಲೇ ತಂದೆಯನ್ನು ಕಳೆದುಕೊಂಡು ಅನಾಥವಾಗಿ ಬೆಳೆಯಬೇಕಾಯಿತು. ಹೇಗೋ ಜೀವನ ಸಾಗಿಸುತ್ತಿದ್ದು, ಫೈನಾನ್ಸ್‌ ಕಂಪನಿಯೊಂದರಲ್ಲಿ ಹಣ ಸಂಗ್ರಹಣೆ ಮಾಡುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತಮ್ಮ ನೋವನ್ನು ಹಂಚಿಕೊಂಡ ಗಣೇಶ್‌, ನಾಲ್ಕು ತಲೆಮಾರುಗಳಿಂದ, ಕುಟುಂಬದವರು  ಮಾವುತರಾಗಿದ್ದಾರೆ. ತಮ್ಮ 400 ವರ್ಷಗಳಷ್ಟು ಹಳೆಯದಾದ ಮನೆ ಇದ್ದ ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸಿದ್ದರಿಂದ ತಮ್ಮ ತಂದೆ ಮತ್ತು ಚಿಕ್ಕಮ್ಮನ ಹತ್ಯೆಯಾಯಿತು. ನಂತರ ಧರ್ಮಸ್ಥಳ ತೊರೆದು ಬೆಳ್ತಂಗಡಿ ಬಳಿ ಜೀವನ ನಡೆಸಲಾಗುತ್ತಿದೆ. ನಮ್ಮ ಕುಟುಂಬದವರ ಸಾವಿಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ಇಲ್ಲ ಎಂದಷ್ಟೇ ಹೇಳಿದರು. 

ಸಹೋದರ-ಸಹೋದರಿ ಮಾತ್ರ ಮನೆ ಖಾಲಿ ಮಾಡಿರಲಿಲ್ಲ

ಗಣೇಶ್‌ ತಂದೆ ನಾರಾಯಣ ಸಪಲ್ಯ  ಮಾವುತರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಅವರಿಗೆ ಇದ್ದ ಜಮೀನು ಬಿಟ್ಟುಕೊಡುವಂತೆ ಬೆದರಿಕೆಗಳು ಹಾಕಲಾಗುತ್ತಿತ್ತು. ಈ ಬಗ್ಗೆ ಮಂಗಳೂರು ಪೊಲೀಸ್‌ ವರಿಷ್ಠಾಧಿಕಾರಿಗೆ ನಾರಾಯಣ ಪತ್ನಿ ಸುಂದರಿ ದೂರು ನೀಡಿದ್ದರು. ಸಂಬಂಧಪಟ್ಟವರ ಹೆಸರನ್ನು ದೂರಿನಲ್ಲಿ ಉಲ್ಲೇಖ ಮಾಡಿದ್ದರು. ಬೆದರಿಕೆ ಹಿನ್ನೆಲೆಯಲ್ಲಿ ಸುಂದರಿ ಮಕ್ಕಳೊಂದಿಗೆ ಬೆಳ್ತಂಗಡಿಗೆ ಸ್ಥಳಾಂತರ ಮಾಡಿದ್ದರು. ಆದರೆ, ನಾರಾಯಣ ಸಪಲ್ಯ ಮತ್ತು ಅವರ ಸಹೋದರಿ ಯಮುನಾ ಮಾತ್ರ ಮನೆ ಖಾಲಿ ಮಾಡದೆ ತಮ್ಮ ಮನೆಯಲ್ಲಿಯೇ ನೆಲೆಸಿದ್ದರು. ಅಣ್ಣ-ತಂಗಿ ಮಾತ್ರ ಮನೆಯಲ್ಲಿದ್ದ ವೇಳೆ 2012 ರ ಸೆ.20ರಂದು ಗಣೇಶೋತ್ಸವ ಸಂಭ್ರಮ ಇತ್ತು. ಅದರ ಕೂಗಳತೆ ದೂರದಲ್ಲಿ ಮನೆಯಲ್ಲಿದ್ದ ನಾರಾಯಣ ಮತ್ತು ಯಮುನಾ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಪೊಲೀಸರು ಈ ಬಗ್ಗೆ ಸರಿಯಾಗಿ ತನಿಖೆ ನಡೆಸದೆ ಪ್ರಕರಣವನ್ನು ಹಳ್ಳ ಹಿಡಿಯುವಂತೆ ಮಾಡಿ ಮೃತರ ಕುಟುಂಬಕ್ಕೆ ನ್ಯಾಯಸಿಗದಂತೆ ಮಾಡಿದರು ಎಂಬ ಆರೋಪಗಳು ಕೇಳಿಬಂದಿವೆ. 

ಸಿಬಿಐ ಉದ್ಯೋಗಿಗೇ ಹೀಗಾದರೆ....?

ಈ ನಡುವೆ, ಕೋಲ್ಕತ್ತಾದ ಸಿಬಿಐನಲ್ಲಿ ಸ್ಟೇನೋಗ್ರಾಫರ್‌ ಆಗಿದ್ದ ಸುಜಾತಾಭಟ್‌ ಒಂಟಿಯಾಗಿ ನೆಲೆಸಿದ್ದಾರೆ. ಮಣಿಪಾಲ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಸುಜಾತಾ ಅವರ ಮಗಳು ಅನನ್ಯ ಭಟ್‌ 2003 ರಲ್ಲಿ ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಹೋಗಿದ್ದಳು ಮತ್ತು ಹಿಂತಿರುಗಲಿಲ್ಲ. ಕೋಲ್ಕತ್ತಾದ ಸಿಬಿಐನಲ್ಲಿ ಸ್ಟೆನೋಗ್ರಾಫರ್ ಆಗಿದ್ದ ಸುಜಾತಾ ರೈಲಿನಲ್ಲಿ ಧರ್ಮಸ್ಥಳ ತಲುಪಲು ಎರಡು ದಿನಗಳನ್ನು ತೆಗೆದುಕೊಂಡರು. ದೂರು ದಾಖಲಿಸಲು ಪದೇ ಪದೇ ಮಾಡಿದ ಪ್ರಯತ್ನಗಳನ್ನು ವಿಫಲವಾದವು. ಅನನ್ಯ ಓಡಿಹೋಗಿರಬೇಕು ಎಂದು ಪೊಲೀಸರು ಉಡಾಫೆ ಉತ್ತರ ನೀಡಿ ಕಳುಹಿಸಿದರು ಎನ್ನಲಾಗಿದೆ. ಎಲ್ಲಿಯೂ ನ್ಯಾಯ ಸಿಗದೆ ಅದೇ ಕೊರಗಿನಲ್ಲಿ ಜೀವನ ನಡೆಸುತ್ತಿದ್ದಾರೆ. 

ಸುಜಾತಾ ಪ್ರಕಾರ, ತಮ್ಮ ಮಗಳು ಕಾಣೆಯಾಗಿರುವ ಹಲವು ಪ್ರಭಾವಿಗಳ ಬಳಿ ಹೋಗಿ ಸಹಾಯ ಕೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. "ಪ್ರತಿದಿನ ಬರುವ ಸಂದರ್ಶಕರ ಜಾಡನ್ನು ನೆನಪಿನಲ್ಲಿಡಲು  ಸಾಧ್ಯವಿಲ್ಲ, ನನ್ನ ಮಗಳು ಓಡಿಹೋಗಿರಬಹುದು ಎಂಬುದಾಗಿ ಅವರು ಕೂಡ ಹೇಳಿದರು," ಎಂಬುದಾಗಿ ಕಣ್ಣೀರ್ಗರೆದರು.

ಅಸಹಾಯಕರಾಗಿದ್ದ ವೇಳೆ ಮೂವರು ತಮ್ಮನ್ನು ಸಂಪರ್ಕಿಸಿ ಅನನ್ಯ ಎಲ್ಲಿದ್ದಾಳೆಂದು ತಮಗೆ ತಿಳಿದಿದೆ ಎಂದು ಕರೆದೊಯ್ದರು. ಆದರೆ ಕೊಠಡಿಯೊಂದರಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿದರು. ತಲೆಗೆ ಪೆಟ್ಟು ಬಲವಾಗಿ ಬಿದ್ದಿದ್ದರಿಂದ ಮೂರ್ಛೆ ಹೋಗಿದ್ದೆ. ಮೂರು ತಿಂಗಳು ಕೋಮಾದಲ್ಲಿದ್ದೆ ಎನ್ನುತ್ತಾರೆ ಅವರು. ಮಂಗಳೂರು ಬಳಿಯ ಮನೆಗೆ ಹಿಂದಿರುಗಿದಾಗ, ಅದು ಮುರಿದುಹೋಗಿತ್ತು, ಎಲ್ಲಾ ದಾಖಲೆಗಳು ಮತ್ತು ಛಾಯಾಚಿತ್ರಗಳು ಕಾಣೆಯಾಗಿದ್ದವು ಮತ್ತು ಸ್ಥಳವು ಸುಟ್ಟುಹೋಗಿತ್ತು ಎಂದು ಮಾಸದ ಘಟನೆಗಳನ್ನು ಮೆಲುಕು ಹಾಕಿದರು.

ಅಂತೂ.. ಇಂತೂ... ವ್ಯಕ್ತಿಯೊಬ್ಬರು ಅನೇಕ ಶವಗಳನ್ನು  ಹೂತು ಹಾಕಿದ್ದೇನೆಂದು ಹೇಳಿಕೆ ನೀಡದ ಬಳಿಕ ಮತ್ತೆ ಒಂದೊಂದು ದುರಂತ ಕಥೆಗಳು ಅನಾವರಣಗೊಳ್ಳುತ್ತಿವೆ... ಇನ್ನೇನಾಗುತ್ತದೋ.....!!

Tags:    

Similar News