
The Federal Ground Report |ಧರ್ಮಸ್ಥಳದಲ್ಲಿ ಅನ್ಯರನ್ನು ಅನುಮಾನದಿಂದ ನೋಡುವ ಮನಸ್ಥಿತಿ - ಪರಿಸ್ಥಿತಿ ನಿರ್ಮಾಣ
ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಬಗ್ಗೆ ಕೇಳಿ ಬರುತ್ತಿರುವ ಆರೋಪಗಳಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಹೊರಗಿನವರನ್ನು ಅನುಮಾನದಿಂದ ನೋಡುವಂತಾಗಿದೆ.
ರಾಜ್ಯ ಮಾತ್ರವಲ್ಲ, ದೇಶದಲ್ಲಿಯೇ ಧರ್ಮಸ್ಥಳ ತನ್ನದೇ ಪ್ರಭಾವದೊಂದಿಗೆ ಛಾಪು ಮೂಡಿಸಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಧರ್ಮಸ್ಥಳದ ಬಗ್ಗೆ ಸಂಶಯದ ಮನಸ್ಥಿತಿ ಮೂಡಲು ಕಾರಣವಾಗಿದೆ. ಅಲ್ಲದೇ ಅಲ್ಲಿನ ಜನರು ಕೂಡ ಹೊರಗಿನವರನ್ನು ಅನುಮಾನದ ಕಣ್ಣುಗಳಿಂದ ನೋಡುವಂತಾಗಿದೆ.
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಬಳಿಕ ಧರ್ಮಸ್ಥಳದ ಬಗ್ಗೆ ಹಲವರು ನಾನಾ ರೀತಿಯ ಹೇಳಿಕೆ ನೀಡಿದ್ದರು. ಈಗ ಶವಗಳನ್ನು ಹೂತಿರುವ ಪ್ರಕರಣ ಬೆಳಕಿಗೆ ಬಂದ ಬಳಿಕವಂತೂ ಆರೋಪಗಳಿಗೆ ಇನ್ನಷ್ಟು ಪುಷ್ಠಿ ಸಿಕ್ಕಿದೆ. ಧರ್ಮಸ್ಥಳದ ಬಗ್ಗೆ ಕೇಳಿ ಬರುತ್ತಿರುವ ಆರೋಪಗಳು ಸ್ಥಳೀಯರನ್ನೂ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಹೊರಗಿನವರು ಧರ್ಮಸ್ಥಳದ ಹೆಸರಿಗೆ ಕಪ್ಪುಮಸಿ ಬಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂಬುದು ಸ್ಥಳೀಯರ ಬಲವಾದ ಆರೋಪವಾಗಿದೆ.
ಧರ್ಮಸ್ಥಳದಲ್ಲಿ ಸೌಜನ್ಯ ಸೇರಿದಂತೆ ಕೆಲವು ಹತ್ಯೆ ಪ್ರಕರಣಗಳು ನಡೆದಿವೆ. ಇಲ್ಲಿ ನೆಲೆಸಿರುವವರ ಪೈಕಿ ಕೆಲವು ಕೆಟ್ಟ ವ್ಯಕ್ತಿಗಳು ಇರಬಹುದು. ಆದರೆ, ಇಡೀ ಜನ ಸಮುದಾಯವೇ ಕೆಟ್ಟದ್ದಿದೆ ಎಂಬ ರೀತಿಯಲ್ಲಿ ಧರ್ಮಸ್ಥಳದ ಹೊರಗಿನವರು ನೋಡುವಂತಾಗಿದೆ. ಅನಗತ್ಯವಾಗಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಗುಮಾನಿ ಸ್ಥಳೀಯರಲ್ಲಿದೆ.
ಸ್ಥಳೀಯರಿಗೆ ಬೇಹುಗಾರಿಕೆ ಅನುಮಾನ
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಅಸಹಜ ಸಾವಿನ ಪ್ರಕರಣಗಳ ಬಗ್ಗೆ ಮಾತನಾಡಲು ಸ್ಥಳೀಯರು ಹೆದರುವಂತಾಗಿದೆ. ಹೊರಗಿನವರು ಬಂದು ತಮ್ಮ ಪ್ರದೇಶದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾರೆಯೇ ಎಂಬ ಅನುಮಾನವೂ ಸ್ಥಳೀಯರಲ್ಲಿ ಮೂಡಿದೆ. ಭಕ್ತರ ಹೆಸರಲ್ಲಿ ಬರುವವರು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಗೂಢಾಚಾರ್ಯ ಮಾಡುತ್ತಿರುವ ಪ್ರಸಂಗಗಳು ನಡೆಯುತ್ತಿವೆ ಎಂದು ಹೆಸರೇಳದ ಇಚ್ಛಿಸದ ಸ್ಥಳೀಯ ವ್ಯಾಪಾರಿ "ದ ಫೆಡರಲ್ ಕರ್ನಾಟಕ"ಕ್ಕೆ ತಿಳಿಸಿದರು.
ಧರ್ಮಸ್ಥಳದಲ್ಲಿ ನಡೆದ ಮತ್ತು ನಡೆಯುತ್ತಿರುವ ಬೆಳವಣಿಗೆಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹೊರಗಿನವರು ನಮಗೆ ಗೌರವ ನೀಡುವುದು ಕಡಿಮೆಯಾಗಿದೆ ಎಂದು ಅನಿಸುತ್ತಿದೆ. ಈ ಮೊದಲು ಕ್ಷೇತ್ರದ ಬಗ್ಗೆ ಗೌರವ ಮಾತ್ರವಲ್ಲದೇ, ಸ್ಥಳೀಯರಿಗೂ ಗೌರವ ಸಿಗುತ್ತಿತ್ತು. ಆದರೆ, ಸೌಜನ್ಯ ಪ್ರಕರಣ ಹಲವು ಚರ್ಚೆಗಳಿಗೆ ಗ್ರಾಸವಾಯಿತು. ಈಗ ಶವ ಹೂತಿರುವ ಪ್ರಕರಣ ಬಯಲಾಗುತ್ತಿದ್ದಂತೆ ಇರುವ ಗೌರವವೂ ಕಡಿಮೆಯಾಗುತ್ತಿದೆ. ನಮಗೆ ಹೊರಗಿನವರ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ಹೊರಗಿನವರೊಂದಿಗೆ ಮುಕ್ತವಾಗಿ ಮಾತನಾಡಲು ಕಷ್ಟಕರವಾಗುತ್ತಿದೆ ಎಂದು ಹೇಳಿದರು.
ಇನ್ನು, ಹೊಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜೇಶ್ ʼದ ಫೆಡರಲ್ ಕರ್ನಾಟಕʼ ಮಾತನಾಡಿ, ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಘಟನೆಗಳು ನಮಗೂ ಬೇಸರವನ್ನುಂಟು ಮಾಡಿವೆ. ಅಳಿಸಲಾಗದ ಕಳಂಕ ಅಂಟಿಕೊಂಡಿದೆ. ಯಾರೋ ಮಾಡಿದ ತಪ್ಪಿಗೆ ಇಡೀ ಧರ್ಮಸ್ಥಳದಲ್ಲಿ ನೆಲೆಸಿರುವವರಿಗೆಲ್ಲಾ ಸಮಸ್ಯೆಯಾಗಿದೆ. ಅಲ್ಲದೇ, ಹೊರಗಿನ ಜನರೊಂದಿಗೆ ಮಾತನಾಡಲು ಭಯವಾಗುತ್ತಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಇನ್ನಷ್ಟು ಹೆಚ್ಚಾಗುವ ಆತಂಕ ಕಾಡುತ್ತಿದೆ. ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ಹೊರಗಿನವರು ಮತ್ತು ಸ್ಥಳೀಯರ ನಡುವೆ ಗೌರವ ಭಾವ ಮೂಡುವಂತಹ ವಾತಾವರಣ ಸೃಷ್ಟಿಯಾಗಬೇಕು ಎಂದು ಆಶಿಸಿದರು.
ದೇವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ
ಉತ್ತರ ಕರ್ನಾಟಕ ಹಾವೇರಿಯಿಂದ ಧರ್ಮಸ್ಥಳಕ್ಕೆ ಬಂದಿದ್ದ ಶರಣ ಪಾಟೀಲ್ ಎಂಬುವರು ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ, ಶವಗಳನ್ನು ಹೂತು ಹಾಕಿರುವ ಕುರಿತು ಅಪರಿಚಿತ ವ್ಯಕ್ತಿಯ ಆರೋಪವು ಧರ್ಮಸ್ಥಳದಲ್ಲಿನ ಕೆಲವರ ಬಗ್ಗೆಯೇ ಹೊರತು ದೇವರ ಮೇಲೆ ಅಲ್ಲ. ಸರ್ಕಾರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಕೊಲೆ ಪ್ರಕರಣಗಳು ನಡೆದಿವೆ ಎಂದ ಮಾತ್ರಕ್ಕೆ ದೇವರ ದರ್ಶನಕ್ಕೆ ಬರಬಾರದು ಅಂತಲ್ಲ. ಅದಕ್ಕೂ, ದೇವರ ದರ್ಶನಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದರು.
ಅಸಹಜ ಸಾವುಗಳ ಪ್ರಕರಣವೇ ಬೇರೆ, ದೇವರ ದರ್ಶನಕ್ಕೆ ಬರುವ ವಿಚಾರವೇ ಬೇರೆ. ಕೊಲೆ ಪ್ರಕರಣಗಳಲ್ಲಿ ಯಾರೇ ಭಾಗಿಯಾದರೂ ಅಂತಹವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅವರು ಎಷ್ಟೇ ಪ್ರಭಾವಿಯಾಗಿದ್ದರೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕ್ಷೀಣಿಸಿದ ಭಕ್ತರ ಸಂಖ್ಯೆ
ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟಿರುವ ಆರೋಪ ಕೇಳಿ ಬಂದ ನಂತರ ಇತ್ತ ಬರುವ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿದೆ. ಸೋಮವಾರ ಈಶ್ವರ ದಿನ. ಸಹಜವಾಗಿ ಅಂದು ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ಆದರೆ, ಆರೋಪಗಳಿಂದ ಸನ್ನಿಧಿಗೆ ಬರುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡು ಬಂದಿದೆ ಎಂದು ಹೆಸರೇಳದ ಧರ್ಮಸ್ಥಳದ ಸಿಬ್ಬಂದಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಇನ್ನು ಕೆಲ ಸಿಬ್ಬಂದಿ ಪ್ರಕಾರ, ಅಷಾಢ ಮಾಸವಾಗಿರುವುದರಿಂದ ಸಹಜವಾಗಿ ಜನರು ಕಡಿಮೆ ಇರುತ್ತಾರೆ. ಅಷಾಢದಲ್ಲಿ ಜನಸಂದಣಿ ಕಡಿಮೆಯಾಗಿರುತ್ತದೆ. ಪ್ರಕರಣಕ್ಕೂ, ಜನರು ಕಡಿಮೆಯಾಗಿರುವುದಕ್ಕೂ ಸಂಬಂಧ ಇಲ್ಲ ಎಂದು ಸಮರ್ಥಿಸಿಕೊಂಡರು.
ಏಕಾಏಕಿ ಕಂಡು ಬಂದ ಪ್ರತಿಭಟನೆ
ಸೌಜನ್ಯ ಪ್ರಕರಣ ನಡೆದು ದಶಕಗಳೇ ನಡೆದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಹೀಗಾಗಿ ನಿರಂತರ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಸಿಬಿಐ ತನಿಖೆಯಾದರೂ ಸಹ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ ಎಂಬ ಕೂಗು ಕೇಳಿಬರುತ್ತಲೇ ಇದೆ. ಸೌಜನ್ಯ ಪರ ಇಂದಿಗೂ ಹೋರಾಟ ಮುಂದುವರೆಯುತ್ತಲೇ ಇದೆ.
ಕಲಬುರಗಿಯ ಯುವಕರು ಎನ್ನಲಾದ ಕೆಲವರು ಏಕಾಏಕಿ ಪ್ರತಿಭಟನೆ ನಡೆಸಿದರು. ಜಸ್ಟೀಸ್ ಫಾರ್ ಸೌಜನ್ಯ ಎಂದು ಕೂಗಿ ಪ್ರತಿಭಟನೆ ನಡೆಸಿದರು. ತಕ್ಷಣ ಪೊಲೀಸರು ಮತ್ತು ಸ್ಥಳೀಯರು ದೌಡಾಯಿಸಿ ಪ್ರತಿಭಟನೆನಿರತ ಯುವಕರನ್ನು ತಡೆದರು. ಪೊಲೀಸರು ಪ್ರತಿಭಟನೆಕಾರರನ್ನು ತಡೆದು ಬಸ್‌ನಲ್ಲಿ ವಾಪಸ್ ಕಳುಹಿಸುವ ಕೆಲಸ ಮಾಡಿದರು. ಕೆಲವೇ ಕೆಲವು ಸಂಖ್ಯೆಯಲ್ಲಿ ಇದ್ದ ಕಾರಣ ಹೆಚ್ಚಿನ ರಾದ್ಧಾಂತ ನಡೆಯಲಿಲ್ಲ. ಆದರೂ ಸ್ಥಳದಲ್ಲಿ ಕೆಲಹೊತ್ತು ಪರಿಸ್ಥಿತಿ ಗೊಂದಲ ಸೃಷ್ಟಿಸಿತು. ಏಕಾಏಕಿ ಉಂಟಾದ ಪ್ರತಿಭಟನೆಯು ಆತಂಕ ಮೂಡಿಸಿತು.
ಪ್ರತಿಭಟನೆನಿರತ ಯುವಕರು ಕಲಬುರಗಿ ಮೂಲದವರು ಎಂದು ಹೇಳಲಾಗಿದ್ದು, ಧರ್ಮಸ್ಥಳ ಸಮೀಪದಿಂದ ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಶವಗಳ ಹೂತ ಪ್ರಕರಣ ಬೆಳಕಿಗೆ ಬಂದ ಬಳಿಕ ಸೌಜನ್ಯ ಪ್ರಕರಣಕ್ಕೂ ನ್ಯಾಯ ಒದಗಿಸಿಕೊಬೇಕು ಎಂಬುದು ಯುವಕರ ಆಗ್ರಹವಾಗಿತ್ತು.