
ಧರ್ಮಸ್ಥಳದಲ್ಲಿ ಅಸಹಜ ಸಾವುಗಳು | ಎಸ್‌ಐಟಿಗೆ ತನಿಖಾ ಹೊಣೆ; ನ್ಯಾಯಕ್ಕಾಗಿ ಕನವರಿಸುತ್ತಿವೆ ಮಡಿದ ಜೀವಗಳು
ಜು.3 ರಂದು ಪೌರಕಾರ್ಮಿಕ ನೂರಾರು ಶವಗಳನ್ನು ಹೂತು ಹಾಕಿರುವ ಸಂಗತಿ ಹೊರಬಿತ್ತು. ಜು.4 ರಂದು ನ್ಯಾಯಾಲಯದ ಮುಂದೆ ಸಾಕ್ಷಿದಾರನ ಹೇಳಿಕೆ ದಾಖಲಾಗಿದೆ. ಆದರೆ, ಸರ್ಕಾರ ಜು.20 ರಂದು(ಭಾನುವಾರ) ಎಸ್‌ಐಟಿ ತನಿಖೆಗೆ ಆದೇಶಿಸಿದೆ.
ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ತನಿಖೆಗೆ ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿ ಆದೇಶ ಹೊರಡಿಸಿದೆ. ತಡವಾಗಿಯಾದರೂ ಎಚ್ಚೆತ್ತ ರಾಜ್ಯ ಸರ್ಕಾರವು ಅಸಹಜ ಸಾವುಗಳ ಕಾರಣ ಪತ್ತೆಗೆ ಮುಂದಾಗಿದೆ.
ರಾಜ್ಯ ಸರ್ಕಾರದ ಎಸ್‌ಐಟಿ ರಚನೆ ಕುರಿತ ಆದೇಶಕ್ಕೆ ಸೌಜನ್ಯ ಪ್ರಕರಣದ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದು, ʼದ ಫೆಡರಲ್ ಕರ್ನಾಟಕʼದ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನ್ಯಾಯ ಕೊಡೋದು ಸರ್ಕಾರದ ಕರ್ತವ್ಯ
ಧರ್ಮಸ್ಥಳದಲ್ಲಿ ಎರಡು ದಶಕಗಳಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂಬ ಪೌರಕಾರ್ಮಿಕರೊಬ್ಬರು ಹೇಳಿಕೆ ನೀಡಿದ ಬಳಿಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಕೊಲೆ, ಅತ್ಯಾಚಾರ ಮಾಡಿದ್ದು ಯಾರು, ಮಾಡಿಸಿದವರು ಯಾರೆಂಬುದರ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು ಎಂದು ಧರ್ಮಸ್ಥಳದ ಅಸಹಜ ಸಾವುಗಳ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಹೈಕೋರ್ಟ್ ಹಿರಿಯ ವಕೀಲ ಬಾಲನ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಜು.3 ರಂದು ಪೌರಕಾರ್ಮಿಕನಿಂದ ನೂರಾರು ಶವಗಳನ್ನು ಹೂತು ಹಾಕಿರುವ ಸಂಗತಿ ಹೊರಬಿತ್ತು. ಜು.4 ರಂದು ನ್ಯಾಯಾಲಯದ ಮುಂದೆ ಸಾಕ್ಷಿದಾರನ ಹೇಳಿಕೆ ದಾಖಲಾಗಿದೆ. ವಿಶೇಷ ತನಿಖಾ ತಂಡ ರಚನೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸರ್ಕಾರ ಜು.20 ರಂದು(ಭಾನುವಾರ) ಎಸ್‌ಐಟಿ ತನಿಖೆಗೆ ಆದೇಶಿಸಿದೆ ಎಂದು ಹೇಳಿದರು.
367 ಆತ್ಮಗಳು ನ್ಯಾಯಕ್ಕಾಗಿ ಆಲಾಪಿಸುತ್ತಿವೆ
ಧರ್ಮಸ್ಥಳದಲ್ಲಿ ಕಾಣೆಯಾದ, ಕೊಲೆಯಾಗಿರಬಹುದಾದ, ಅತ್ಯಾಚಾರಕ್ಕೆ ಒಳಗಾಗಿರಬಹುದಾದ 367 ಆತ್ಮಗಳು ನ್ಯಾಯಕ್ಕಾಗಿ ಆಲಾಪಿಸುತ್ತಿವೆ. ಅಸಹಜ ಸಾವುಗಳಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ನ್ಯಾಯ ಕೊಡಿಸುವುದು ಸರ್ಕಾರದ ಆದ್ಯ ಕರ್ತವ್ಯ.
ಒಂದು ವೇಳೆ ಸರ್ಕಾರ ತನಿಖೆಗೆ ಆದೇಶಿಸದೇ ಹೋಗಿದ್ದರೆ ನಾಳೆ(ಜು.21) ಬೆಳಿಗ್ಗೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಎಲ್ಲಾ ತಯಾರಿ ನಡೆಸಲಾಗಿತ್ತು. ಅಷ್ಟರಲ್ಲಿ ಸರ್ಕಾರವೇ ಎಸ್‌ಐಟಿ ರಚಿಸಿ ಆದೇಶಿಸಿದೆ. ಪ್ರಾಮಾಣಿಕ ಹಾಗೂ ಪಾರದರ್ಶಕ ತನಿಖೆ ನಡೆಯಬೇಕು ಎಂಬುದೇ ನಮ್ಮ ಆಶಯ ಎಂದು ಬಾಲನ್ ತಿಳಿಸಿದರು.
ಎಸ್‌ಐಟಿ ರಚನೆ ಒಳ್ಳೆಯ ಬೆಳವಣಿಗೆ
ರಾಜ್ಯ ಮಹಿಳಾ ಆಯೋಗದ ಶಿಫಾರಸು ಆಧರಿಸಿ ರಾಜ್ಯ ಸರ್ಕಾರ ಧರ್ಮಸ್ಥಳದ ಅಸಹಜ ಸಾವುಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದೆ. ಅಸಹಜ ಸಾವುಗಳ ಕುರಿತು ಇಂಚಿಂಚು ಮಾಹಿತಿಯನ್ನು ಮಹಿಳಾ ಆಯೋಗಕ್ಕೆ ನೀಡಿದ ಒತ್ತಡ ಹಾಕಿಸಿದ ಫಲವಾಗಿ ಎಸ್ ಐಟಿ ರಚನೆಯಾಗಿದೆ ಎಂದು ಮಕ್ಕಳು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
“ನಾನು ಈ ಹಿಂದೆ ಹೇಳಿದಂತೆ ಆತ್ಮಸಾಕ್ಷಿ ಹೊಂದಿರುವ ಒಬ್ಬ ಕಳ್ಳ ಸಾಕ್ಷ್ಯ ನುಡಿಯಲು ಬರುತ್ತಾನೆ ಎಂದಿದ್ದೆ. ಅದರಂತೆ ಈಗ ಕೊಯಮತ್ತೂರಿನ ಪೌರಕಾರ್ಮಿಕ ಬಂದಿದ್ದಾನೆ. ಹಿಂಬಾಗಿಲ ತನಿಖೆ (Back Door Investigation) ನಡೆಯುತ್ತದೆ ಎಂದು ಹೇಳಿದ್ದೆ. ಅದೇ ರೀತಿ ಅಸಹಜ ಸಾವುಗಳ ತನಿಖೆಯ ಮೂಲಕ ಮರೆಗೆ ಸರಿದಿರುವ ಸೌಜನ್ಯ, ಅನನ್ಯಾ ಭಟ್ ಪ್ರಕರಣಗಳ ತನಿಖೆಯೂ ನಡೆಯಲಿದೆ” ಎಂದು ಹೇಳಿದರು.
"ಇಲ್ಲಿ ಹಿಂಬಾಗಿಲ ತನಿಖೆ ಎಂದರೆ ಯಾವುದೇ ಒಂದು ಪ್ರಕರಣದ ತನಿಖೆ ನಿಂತು ಹೋದರೆ ಅಥವಾ ಸ್ಥಗಿತವಾದರೆ ಅದೇ ವಿಧಾನದ ಅಪರಾಧಗಳ ಬೇರೊಂದು ಪ್ರಕರಣದ ತನಿಖೆಯ ಮೂಲಕ ಸತ್ಯ ಹೊರಗೆಡುವುದಾಗಿದೆ. ನಿರ್ದಿಷ್ಟ ಪ್ರಾಂತ್ಯದಲ್ಲಿ ಒಂದು ಗ್ಯಾಂಗ್ ಸಕ್ರಿಯವಾಗಿದೆ, ಅವರು ಯಾರೆಂಬುದು ತಿಳಿಯಬೇಕು. ಈ ನಿಟ್ಟಿನಲ್ಲಿ ಎಸ್‌ಐಟಿ ರಚನೆ ಒಳ್ಳೆಯ ಬೆಳವಣಿಗೆ” ಎಂದರು.
ಸಾಕ್ಷಿದಾರ ಗ್ಯಾಂಗ್‌ನ ಕೊನೆಯ ಕೊಂಡಿ
20 ವರ್ಷದಲ್ಲಿ ನೂರಾರು ಶವ ಹೂತಿರುವುದಾಗಿ ಹೇಳಿರುವ ಸಾಕ್ಷಿದಾರನಾದ ಪೌರಕಾರ್ಮಿಕ ಗ್ಯಾಂಗ್‌ನ ಕೊನೆಯ ಕೊಂಡಿ. ಈ ಹಂತದಲ್ಲಿ ತನಿಖಾಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಪೌರಕಾರ್ಮಿಕ ಅಪರಾಧಕ್ಕೆ ಸಹಕರಿಸಿದ ವ್ಯಕ್ತಿಯಾಗಿ ಸಾಕ್ಷಿನಾಶದಲ್ಲೂ ಭಾಗಿಯಾಗಿದ್ದಾನೆ. ಹಾಗಾಗಿ ಇದನ್ನು ಪ್ರಮುಖ ಸಾಕ್ಷ್ಯವೆಂದು ಪರಿಗಣಿಸಬೇಕು. ಸಾಕ್ಷಿದಾರರನ್ನು ‘ಭಾರತೀಯ ಸಾಕ್ಷ್ಯ ರಕ್ಷಣೆ ಅಧಿನಿಯಮ-2018’ ಅಡಿ ಭದ್ರತೆ ಒದಗಿಸಬೇಕು ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹೇಳಿದರು.
ಸಾಕ್ಷಿದಾರನಿಗೆ ಅಗತ್ಯ ಭದ್ರತೆ ಒದಗಿಸಿ
ಶವಗಳನ್ನು ಹೂತಿರುವುದಾಗಿ ಹೇಳಿರುವ ವ್ಯಕ್ತಿಗೆ ಸಾಮಾಜಿಕ, ಆರ್ಥಿಕ ಹಾಗೂ ಜೀವದ ಭದ್ರತೆ ಒದಗಿಸಬೇಕು. ವ್ಯಕ್ತಿಯ ಹೇಳಿಕೆಯಿಂದ ಎಷ್ಟೋ ಪ್ರಕರಣಗಳು ಇತ್ಯರ್ಥವಾಗುವ, ಎಷ್ಟೋ ಹೆಣಗಳು ಎದ್ದುಬರುವ ಸಾಧ್ಯತೆ ಇದೆ. ಸಾಕ್ಷ್ಯ ನುಡಿಯುವ ವ್ಯಕ್ತಿಯ ಗುರುತನ್ನು ಎಸ್‌ಐಟಿ ಬಿಟ್ಟು ಕೊಡಬಾರದು. ಮನೆಯವರು, ಮಕ್ಕಳಿಗೆ ಭದ್ರತೆ ಒದಗಿಸಬೇಕು. ಸಾಕ್ಷಿದಾರ ವ್ಯಕ್ತಿಗೆ ಯಾವುದೇ ಜೀವ ಭಯ ಇಲ್ಲದಂತೆ, ಲೋಭಕ್ಕೆ ಒಳಗಾಗದಂತೆ ಸರ್ಕಾರ ನೋಡಿಕೊಳ್ಳಬೇಕು.
ಸತ್ಯ, ಸುಳ್ಳುಗಳನ್ನು ತನಿಖೆಗೆ ಒಳಪಡಿಸಬೇಕು. ಮೇಲ್ಮಟ್ಟದ ತನಿಖಾ ವಿಧಾನಗಳನ್ನು ಬಳಸಬೇಕು. ಸಾಕ್ಷ್ಯ ಹೇಳಲು ಬಂದಿರುವ ವ್ಯಕ್ತಿಯ ಹಿತಾಸಕ್ತಿ ಏನು, ಈಗ ಹೇಳಿಕೆ ನೀಡಿದ್ದು ಏಕೆ, ಕರೆತಂದವರು ಯಾರು, ಅವರ ಹಿತಾಸಕ್ತಿ ಏನು ಎಂಬುದು ಬೆಳಕಿಗೆ ಬರಬೇಕು. ಪಾರದರ್ಶಕವಾಗಿ ತನಿಖೆ ನಡೆಯಬೇಕು ಎಂದು ಸ್ಟ್ಯಾನ್ಲಿ ಹೇಳಿದರು.
ಎಲ್ಲರ ಹಿತಾಸಕ್ತಿಗಳು ಏನೆಂಬುದು ತಿಳಿಯಲಿ, ಧರ್ಮಸ್ಥಳದಲ್ಲಿ ಸಾವುಗಳು ಹೇಗೆ ಘಟಿಸಿವೆ, ಕೊಲೆ, ಅತ್ಯಾಚಾರಕ್ಕೆ ಕಾರಣಗಳೇನು, ಹಣಕಾಸು, ಆಸ್ತಿ, ದ್ವೇಷ ಅಥವಾ ಕೋಮುವಾದ ಕಾರಣವಾಗಿತ್ತಾ ಎಂಬುದು ತಿಳಿಯಬೇಕು ಎಂದರು.
ಪ್ರಕರಣದ ತನಿಖೆಯು ಸಾಕಷ್ಟು ತಿರುವು ಪಡೆಯುವ ಸಾಧ್ಯತೆಗಳೂ ಇವೆ. ನಾಯಕನನ್ನು ಕಾಯಲು ಸಾಕಷ್ಟು ಜನ ಬರಬಹುದು, ತಮ್ಮ ಮೇಲೆ ಆರೋಪ ಹೊತ್ತುಕೊಳ್ಳಬಹುದು. ಹಾಗಾಗಿ ಸರ್ಕಾರವೇ ಈ ಪ್ರಾಂತ್ಯದಲ್ಲಿ ಜಾಗೃತಿ ಮೂಡಿಸಬೇಕು. ಜನರಿಗೆ ರಕ್ಷಣೆ ಹಾಗೂ ನೆರವಿನ ಭರವಸೆ ನೀಡಬೇಕು ಎಂದು ಸ್ಟ್ಯಾನ್ಲಿ ಅವರು ಅಭಿಪ್ರಾಯಪಟ್ಟರು.
ಸುಜಾತಾ ಭಟ್, ಪೌರಕಾರ್ಮಿಕನ ಸಾಕ್ಷ್ಯ ಹೆಚ್ಚು ಅಗತ್ಯ
ಅಸಹಜ ಸಾವಿನ ಪ್ರಕರಣಗಳ ತನಿಖೆ ನಡೆಸಲಿರುವ ಎಸ್‌ಐಟಿಯು ಈಗಿರುವ ಸಾಕ್ಷ್ಯಗಳನ್ನು ಹೆಚ್ಚು ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗಿದೆ. ಕೊಯಮತ್ತೂರಿನ ಪೌರಕಾರ್ಮಿಕ ಹಾಗೂ ಸುಜಾತಾ ಭಟ್ ಸಾಕ್ಷ್ಯವನ್ನು ಪ್ರಮುಖವಾಗಿ ಪರಿಗಣಿಸಬೇಕು. ಸುಜಾತಾ ಭಟ್ ಅವರ ಹೇಳಿಕೆಯಿಂದ ಅನನ್ಯಾ ಭಟ್ ಪ್ರಕರಣ ಬಯಲಾಗಲಿದೆ. ಹೆಬಿಯಸ್ ಕಾರ್ಪಸ್ ನಿಂದಾಗಿ ಎಸ್ಐಟಿ ಅಧಿಕಾರಿಗಳು ಅನನ್ಯಾ ಭಟ್ ಅವರನ್ನು ಜೀವಂತವಾಗಿಯಾಗಲಿ, ಅಥವಾ ಶವವನ್ನಾಗಲಿ ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಬರಬೇಕಾಗಿದೆ ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಸತ್ಯ ಹೊರಬಂದು ನ್ಯಾಯದ ನಿರೀಕ್ಷೆ ಇದೆ.
ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಕುರಿತ ಮಾಹಿತಿ, ನ್ಯಾಯಾಲಯದ ತೀರ್ಪುಗಳನ್ನು ಮೈಸೂರಿನ ಒಡನಾಡಿ ಸಂಸ್ಥೆ ತಮ್ಮ ಗಮನಕ್ಕೆ ತಂದು ಚರ್ಚಿಸಿತ್ತು. ಇದರ ಆಧಾರದ ಮೇಲೆ ಸೂಕ್ತ ತನಿಖೆಗೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಪ್ರಕರಣದಲ್ಲಿ ಕೆಳಹಂತದಿಂದ ಮೇಲ್ಮಟ್ಟದವರೆಗಿನವರ ತನಿಖೆ ಆಗಲಿದೆ. ಆಳದಲ್ಲಿ ಹುದುಗಿರುವ ಸತ್ಯ ಹೊರಬರಬೇಕಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ʼದ ಫೆಡರಲ್ ಕರ್ನಾಟಕʼ ಕ್ಕೆ ತಿಳಿಸಿದರು.
ಸೌಜನ್ಯ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಎಸ್‌ಐಟಿ ತನಿಖೆ ನಡೆಸಬೇಕಾಗಿದೆ. ನಾವು ನ್ಯಾಯದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.