ಉಮ್ರಾವ್ ಜಾನ್ ನೆನಪು: ಸಮ ಸಮಾಜದ ಗತವೈಭವ ಸಾರುವ ಪ್ರಥಮ್ ಧರ್ ಧ್ಯಾನ್ ಹಾಡು
ಸುಮಾರು 44 ವರ್ಷಗಳ ಹಿಂದೆ ಬಿಡುಗಡೆ ಕಂಡಿರುವ ರೇಖಾ ಅಭಿನಯದ ಉಮ್ರಾವ್ ಜಾನ್ ಸಿನೆಮಾವನ್ನು 4k ಗುಣಮಟ್ಟಕ್ಕೆ ಉನ್ನತೀಕರಿಸಿ ಮರುಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಬರುವ ಪ್ರಥಮ್ ಧರ್ ಧ್ಯಾನ್ ಎಂಬ ಹಾಡು ಅಲ್ಲಾ, ನಿಜಾಮುದ್ದಿನ್ ಔಲಿಯಾ, ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಕೃಷ್ಣನನ್ನು ಒಂದೇ ಉಸಿರಿನಲ್ಲಿ ಸ್ತುತಿಸುತ್ತದೆ. ಇದು ಧರ್ಮ ಸಮನ್ವಯದ ಪ್ರತೀಕದಂತಿದೆ;
ಭಾರತೀಯ ಚಿತ್ರರಂಗದ ಕ್ಲಾಸಿಕ್-ಗಳಲ್ಲಿ ಒಂದಾದ ಉಮ್ರಾವ್ ಜಾನ್ ಚಿತ್ರ ಬಿಡುಗಡೆ ಕಂಡು ಸರಿ ಸುಮಾರು ನಾಲ್ಕೂವರೆ ದಶಕಗಳೇ ಕಳೆದಿವೆ. ಅದಕ್ಕೀಗ ಡಿಜಿಟಲ್ ಸ್ಪರ್ಶ ನೀಡಿ ಮತ್ತೊಮ್ಮೆ ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಜೂನ್ ತಿಂಗಳ ಕೊನೆಯ ಭಾಗದಲ್ಲಿ ಮರುಬಿಡುಗಡೆಯಾಗಿರುವ ಚಿತ್ರ ಮೂರು ವಾರಗಳ ಬಳಿಕವೂ ಹೊಸ ತಲೆಮಾರನ್ನು ಆಕರ್ಷಿಸುತ್ತಿದೆ.
ನಾನು ಮೊದಲ ಬಾರಿಗೆ ಚಿತ್ರಮಂದಿರದಲ್ಲಿ ಉಮ್ರಾವ್ ನೋಡಿದೆ. ಈ ಮೊದಲು ಚಿತ್ರದ ಹಾಡುಗಳನ್ನು ರೇಡಿಯೋನಲ್ಲಿ ಆಲಿಸಿದ್ದೆ ಹಾಗೂ ಕಪ್ಪು-ಬಿಳುಪು ಟಿವಿಯಲ್ಲಿ ನೋಡಿದ್ದೆ. ಆ ಬಳಿಕ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದೆ.
ಉಮ್ರಾವ್ ಜಾನ್ ಸಿನೆಮಾವನ್ನು ವೀಕ್ಷಿಸುತ್ತ ಕುಳಿತರೆ ಅದರಲ್ಲಿ ಒಂದೇ ಒಂದು ದೋಷವನ್ನು ಬೊಟ್ಟು ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ದೃಶ್ಯವೂ ಅತ್ಯದ್ಭುತ. ಮುಝಫರ್ ಅಲಿ ಅವರ ನಿರ್ದೇಶನ, ಖಯ್ಯಾಂ ಅವರ ಸಂಗೀತ, ಆಶಾ ಭೋಂಸ್ಲೆ ಅವರ ಹಿನ್ನೆಲೆ ಗಾಯನ, ಶಹರ್ಯಾರ್ ಅವರ ಗೀತೆಗಳು, ಗೋಪಿ ಕೃಷ್ಣ ಮತ್ತು ಕುಮುದಿನಿ ಲಖಿಯಾ ಅವರ ಛಾಯಾಗ್ರಹಣ, ಶುಭಾಷಿನಿ ಅಲಿ ಅವರು ವಿನ್ಯಾಸಗೊಳಿಸಿದ ವೇಷಭೂಷಣಗಳು… ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ಹೆಣೆಯಲಾಗಿದೆ.
ಚಿರಯೌವನಿ ರೇಖಾ: ಉಮ್ರಾವ್ ಜಾನ್ ಇಡೀ ಚಿತ್ರದ ಜೀವಸೆಲೆಯಾಗಿರುವ ರೇಖಾ ಅವರು ದಿವ್ಯವಾಗಿ ಕಾಣುತ್ತಾರೆ. ಅವರ ಅತ್ಯದ್ಭುತ ಅಭಿನಯಕ್ಕೆ ಕಳೆಕಟ್ಟಿದಂತಿರುವುದು ಅವರ ಚಿರಯೌವನ ಮತ್ತು ಶ್ಯಾಮಲವರ್ಣ. ಚಿತ್ರದಲ್ಲಿನ ಶ್ರೇಷ್ಠ ಅಭಿನಯಕ್ಕಾಗಿ ರೇಖಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲ್ಮ್-ಫೇರ್ ಪುರಸ್ಕಾರದಲ್ಲಿ ಶ್ರೇಷ್ಠ ನಟಿ ಗೌರವ ಪಡೆದಿದ್ದರು. ಈ ಎರಡೂ ಪ್ರಶಸ್ತಿಗಳಲ್ಲಿ ಖಯ್ಯಾಂ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನಕ್ಕೆ ಪುರಸ್ಕಾರ ಲಭಿಸಿತ್ತು.
ಪ್ರಥಮ್ ಧರ್ ಧ್ಯಾನ್ ಅಗ್ರಪಂಕ್ತಿ: ಚಿತ್ರದಲ್ಲಿ ವಿನೋದದ ಹಾಡುಗಳಾದ ‘ದಿಲ್ ಚೀಸ್ ಕ್ಯಾ ಹೇ ಮತ್ತು ಇನ್ ಆಂಖೋಂ ಕಿ ಮಸ್ತಿ ಮತ್ತು ಜುಸ್ತ್ ಜೂ ಜಿಸ್ಕಿ ಥಿ, ಕಾಹೇ ಕೋ ಬ್ಯಾಹಿ ಬಿದೇಸ್ ಮತ್ತು ಯೆ ಕ್ಯಾ ಜಗಹ್ ಹೇ ದೋಸ್ತೋನಂತಹ ಮನಕಲಕುವ ಗೀತೆಗಳ ನಡುವೆ ಅಗ್ರಪಂಕ್ತಿಯಲ್ಲಿ ನಿಲ್ಲುವ ಒಂದೇ ಒಂದು ಹಾಡೆಂದರೆ ಪ್ರಥಮ್ ಧರ್ ಧ್ಯಾನ್. ಇದನ್ನು ಅನೇಕ ರಾಗಗಳಲ್ಲಿ ಹಾಡಲಾಗಿದೆ.
ಸಾಂಪ್ರದಾಯಿಕ ಕಾವ್ಯವನ್ನು ಆಧರಿಸಿದ ಸ್ತೋತ್ರದಂತಹ ಗೀತೆ ಪ್ರಥಮ್ ಧರ್ ಧ್ಯಾನ್. ಉಮ್ರಾವ್ ಜಾನ್ ಪ್ರಕರಣದಲ್ಲಿ ಖಾನುಮ್ ಜಾನ್ (ಖ್ಯಾತ ಕವಿ ಕೈಫಿ ಅಜ್ಮಿ ಅವರ ಪತ್ನಿ ಶೌಕತ್ ಕೈಫಿ ಈ ಪಾತ್ರದಲ್ಲಿ ಅಭಿನಯಿಸಿದ್ದಾರೆ)ಳ ಅಡ್ಡೆಗೆ (ಕೋಥಾ) ಅಪಹರಿಸಲಾದ ಹುಡುಗಿಯರನ್ನು ಕರೆತಂದಾಗ ಅವರ ಸಂಗೀತ ಮತ್ತು ನೃತ್ಯ ತರಬೇತಿಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಉಮ್ರಾವ್ ಜಾನ್ (ಅವರ ನಿಜವಾದ ಹೆಸರು ಅಮಿರನ್) ಮತ್ತು ಬಿಸ್ಮಿಲ್ಲಾ ಜಾನ್ (ಪ್ರೇಮಾ ನಾರಾಯಣ್) ಅವರಿಗೆ ಖಾನ್ ಸಾಹೇಬ್ ಸಂಗೀತ ಕಲಿಸುತ್ತಿರುವಂತೆ ತೋರಿಸಲಾಗಿದೆ.
ಸಮಗ್ರ ಸಂಸ್ಕೃತಿಯ ಪ್ರತೀಕ
ಈ ಗೀತೆ ಆರಂಭವಾಗುವುದು ‘ಅಲ್ಲಾ’ ಎಂಬ ಪದದಿಂದ. ತರುವಾಯ ಅದರ ಸಾಲುಗಳು ಸೂರ್ಯ ದೇವರು ಹಾಗೂ ಹಿಂದು ಧರ್ಮದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮಹೇಶ್ವರನನ್ನು ಸ್ತುತಿಸುತ್ತದೆ. ನಂತರ 13 ಮತ್ತು 14ನೇ ಶತಮಾನಗಳಲ್ಲಿ ಜೀವಿಸಿದ್ದ ಪೂಜ್ಯ ಸೂಫಿ ಸಂತರಾದ ನಿಜಾಮುದ್ದಿನ್ ಔಲಿಯಾ ಅವರನ್ನು ಸ್ಮರಿಸುತ್ತದೆ. ಸಂಕಷ್ಟದಿಂದ ಪಾರುಮಾಡಲು ನೆರವಾಗುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ. ಮನಸ್ಸಿಗೆ ಉತ್ತಮ ಆಲೋಚನೆಗಳು ಬರಲಿ ಮತ್ತು ನಮ್ಮ ಮುಂದೆ ನೀನು ಪ್ರತ್ಯಕ್ಷನಾಗುವಂತೆ ಪ್ರಾರ್ಥಿಸಲಾಗುತ್ತದೆ. ಯಾಕೆಂದರೆ ಜನ ಆತನ ಪಾದಗಳಿಗೆ ಎರಗದೇ ಇದ್ದರೆ ಯಾವ ಯಶಸ್ಸೂ ದಕ್ಕುವುದಿಲ್ಲ ಎಂದು ತಿಳಿಸುತ್ತದೆ.
ಉಸ್ತಾದ್ ಗುಲಾಂ ಮುಸ್ತಫಾ ಖಾನ್ ಅವರು ಹಾಡಿರುವ ಪ್ರಥಮ್ ಧರ್ ಧ್ಯಾನ್ ಗೀತೆಯಲ್ಲಿ ಮೂರು ಬಾರಿ ಕೃಷ್ಣನು ಜನಿಸಿ ತನ್ನ ಬಾಲ್ಯವನ್ನು ಕಳೆದ ಬ್ರಜ್-ನಲ್ಲಿ ನಡೆಸುವ ಲೀಲೆಗಳನ್ನು ಮೂರು ಭಾರಿ ಉಲ್ಲೇಖಿಸಲಾಗಿದೆ.
ಉಮ್ರಾವ್ ಜಾನ್ ಚಿತ್ರದಲ್ಲಿ ಅಡಕವಾಗಿರುವ ನೈತಿಕತೆ, ಅದರ ಪಾತ್ರಗಳು ಮತ್ತು ಸಂಸ್ಕೃತಿಯು ಮುಸ್ಲಿಂ ಧರ್ಮಕ್ಕೆ ಸೇರಿದ್ದಾಗಿರುತ್ತದೆ. ಖಾನಮ್ ಜಾನ್ ತನ್ನ ವೇಶ್ಯಾವಾಟಿಕೆಯಲ್ಲಿ ನೇಮಿಸಿಕೊಂಡ ಸಂಗೀತ ಶಿಕ್ಷಕ ಖಾನ್ ಸಾಹೇಬ್ ಕೂಡ ಮುಸ್ಲಿಮರೇ. ಆದರೆ ಭವಿಷ್ಯದ ವೇಶ್ಯೆಯರಿಗೆ ನೀಡಲಾಗುವ ಸಂಗೀತದ ತರಬೇತಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡೂ ಸಂಗತಿಗಳಿರುವುದು ವಿಶೇಷ. ಇದಕ್ಕೆ ಪ್ರಥಮ್ ಧರ್ ಧ್ಯಾನ್ ಹಾಡು ಉತ್ತಮ ನಿದರ್ಶನ. ಈ ಹಾಡಿನಲ್ಲಿ ಅಲ್ಲಾ ಮತ್ತು ಹಿಂದೂ ದೇವರನ್ನು ಸ್ತುತಿಸಲಾಗಿದೆ.
ಹಿಂದು ಮತ್ತು ಮುಸ್ಲಿಮರನ್ನು ಒಂದುಗೂಡಿಸುವ ಸಂಯೋಜಿತ ಸಂಸ್ಕೃತಿಯಾದ ಗಂಗಾ-ಜಮುನಿ ತೆಹಜೀಬ್ ಈ ಹಾಡಿನ ದನಿಯಾಗಿದೆ. ಈ ಸಮನ್ವಯವು ಎರಡೂ ಧರ್ಮಗಳ ಸಂಪ್ರದಾಯ, ಆಚರಣೆಗಳು, ವಾಸ್ತುಶಿಲ್ಪ, ಸಂಗೀತ, ಕಲೆಗಳು ಹಾಗೂ ಪಾಕಪದ್ಧತಿಗಳನ್ನು ಒಳಗೊಂಡಿದೆ. ಅಂದರೆ ಈ ಹಾಡು ಅವರಿಗಿಂತ ನಾವೇ ಶ್ರೇಷ್ಠ ಎಂಬ ಯಾವುದೇ ಕಲ್ಪನೆಗಳಿಗೆ ಉತ್ತೇಜನ ನೀಡುವುದಿಲ್ಲ.
ಉಮ್ರಾವ್ ಜಾನ್ ಚಲನಚಿತ್ರದ ಕಥಾಹಂದರದ ಹರಿವು ಇರುವುದು 19ನೇ ಶತಮಾನದ ಮಧ್ಯಭಾಗದಲ್ಲಿ. ಆ ಕಾಲದಲ್ಲಿ ಇದ್ದ ನಾನಾ ಧರ್ಮದ ಜನರು ಪರಸ್ಪರ ಹೊಂದಿದ್ದ ಸ್ವೀಕಾರ ಮತ್ತು ಗೌರವದ ಮನೋಭಾವಕ್ಕೆ ಈ ಹಾಡು ಕನ್ನಡಿ ಹಿಡಿದಂತಿದೆ. ಇಂತಹುದೊಂದು ಸೌಹಾರ್ದಯುತ ವಾತಾವರಣ 20ನೇ ಶತಮಾನದ ವರೆಗೂ ಮುಂದುವರಿಯಿತು.
ಸಮಗ್ರ ಪರಂಪರೆ
ಆ ಕಾಲದಲ್ಲಿ ವಿವಿಧ ಭಾರತಿಗಾಗಿ ರೆಕಾರ್ಡ್ ಮಾಡಲಾದ ಜೈಮಾಲಾ ಗೋಲ್ಡ್ ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕ ಮತ್ತು ಕಮಲ್ ಅಮ್ರೋಹಿ (1918-93) ಅವರು ತಮ್ಮ ಬಾಲ್ಯಕಾಲದ ನೆನಪನ್ನು ಹಂಚಿಕೊಂಡಿದ್ದರು. ಅವರ ಕುಟುಂಬ ಅಂದು ವಾಸಿಸುತ್ತಿದ್ದ ಕಟ್ಟಡದ ಮೇಲಿನ ಮಹಡಿ ಮನೆಯಲ್ಲಿ ವಾಸಿಸಲು ಬಂದ ನೀಳ ಗಡ್ಡದ ವ್ಯಕ್ತಿಯ ಬಗ್ಗೆ ಮಾತನಾಡಿದ್ದರು. ಆ ವ್ಯಕ್ತಿಯ ವರ್ತನೆ, ರೂಪ ಎಲ್ಲವನ್ನೂ ನೋಡಿ ಆತ ಮುಸ್ಲಿಂ ಎಂದೇ ಅವರು ಭಾವಿಸಿದ್ದರು. ಯುವ ಕಮಲ್ ಅವರ ತಾಯಿ ಆತನಿಗೆ ಮತ್ತು ಇತರ ಹುಡುಗರಿಗೆ ಆ ‘ಮೌಲ್ವಿ ಸಾಹೇಬರ’ ಬಳಿಗೆ ಹೋಗಿ ಕುರಾನ್ ನ ಅಯಾತ್ (ಸ್ತೋತ್ರಗಳು)ನ್ನು ಕಲಿಸಲು ಸಾಧ್ಯವೇ ಎಂದು ಕೇಳಲು ಹೇಳುತ್ತಾರೆ.
‘ನಿಶ್ಚಿತವಾಗಿ’ ಎಂದು ಆ ಸೂಫಿ ಸಂತರು ಹೇಳುತ್ತಾರೆ. ಆದರೆ ತಾನು ಮೌಲ್ವಿ ಅಲ್ಲ, ಬದಲಾಗಿ, ಹಿಂದು, ಬ್ರಾಹ್ಮಣ ಎಂದು ಸ್ಪಷ್ಟಪಡಿಸುತ್ತಾರೆ. ಕಮಲ್ ಅಮ್ರೋಹಿ ಅವರ ಸಂಪ್ರದಾಯಸ್ಥ ಕುಟುಂಬಕ್ಕೆ ಆ ಬಗ್ಗೆ ಯಾವುದೇ ಆಕ್ಷೇಪ ಇರಲಿಲ್ಲ ಎನ್ನುವುದು ಬೇರೆ ಮಾತು.
ಆಗಿನ ದಿನಗಳಲ್ಲಿ ಹಿಂದೂ ಮತ್ತು ಮುಸ್ಲಿಮರು ಪರಸ್ಪರ ತಮ್ಮ ಧರ್ಮಗ್ರಂಥಗಳಲ್ಲಿ ಪಾರಂಗತರಾಗಿದ್ದರು ಮತ್ತು ಅವುಗಳನ್ನು ಗೌರವಿಸುತ್ತಿದ್ದರು. ಹಿಂದಿ, ಉರ್ದು ಮತ್ತು ಸಂಸ್ಕೃತ ಭಾಷೆಗಳು ಕೇವಲ ಒಂದೇ ಒಂದು ನಂಬಿಕೆಯ ಭಾಷೆಗಳಾಗಿರಲಿಲ್ಲ. ಅವು ಉತ್ತರ ಮತ್ತು ಮಧ್ಯ ಭಾರತದಾದ್ಯಂತ ಪ್ರತಿಯೊಬ್ಬರ ಪರಂಪರೆಯ ಭಾಗವಾಗಿದ್ದವು ಎಂದು ಆಮ್ರೋಹಿ ಹೇಳುತ್ತಾರೆ.
1959ರಲ್ಲಿ ಬಿಡುಗಡೆಯಾದ ಧೂಲ್ ಕಾ ಫೂಲ್ ಚಿತ್ರಕ್ಕಾಗಿ ಸಾಹಿರ್ ಲುಧಿಯಾನ್ವಿ ಬರೆದ ಹಾಡು ಈ ಅಂಶವನ್ನು ಆಪ್ತವಾಗಿ ಹಿಡಿದಿಟ್ಟಿದೆ:
ಕುರಾನ್ ನ ಹೊ ಜಿಸ್ ಮೆ ವೊ ಮಂದಿರ್ ನಹೀ ತೇರಾ
ಗೀತಾ ನ ಹೊ ಜಿಸ್ ಮೆ, ವೊ ಹರಾಮ್ ತೇರಾ ನಹೀ ಹೆ
(ಕುರಾನ್ ಇಲ್ಲದ ಮಂದಿರವು ನಿನ್ನದಲ್ಲ
ಗೀತೆ ಇಲ್ಲದ ಪವಿತ್ರ ಸ್ಥಳವೂ ನಿನ್ನದಲ್ಲ)
ಅದೇ ರೀತಿ 1961ರಲ್ಲಿ ಬಿಡುಗಡೆ ಕಂಡ ಧರ್ಮಪುತ್ರ ಚಿತ್ರಕ್ಕೆ ಅವರು ರಚಿಸಿದ ಖವ್ವಾಲಿಯಲ್ಲಿಯೂ ಸಾಹಿರ್ ಅವರು ಕೃತಕ ವಿಭಜನೆಯನ್ನು ಹೀಗೆ ವಿಶ್ಲೇಷಣೆ ಮಾಡುತ್ತಾರೆ:
ಯೆಹ್ ಶೇಖ್-ಓ-ಬ್ರಾಹ್ಮಣ್ ಕೆ ಜಗಡೆ
ಸಬ್ ನ-ಸಮಜಹಿ ಕಿ ಬಾತೇ ಹೆ
ಹಮನೆ ತೊ ಹೆ ಬಸ್ ಇತನಾ ಜಾನ್
ಚಾಹೆ ಯೆಹ್ ಮಾನೋ ಚಾಹೆ ವೋ ಮಾನೋ
(ಮುಸ್ಲಿಮರು ಮತ್ತು ಹಿಂದುಗಳ ನಡುವಿನ ಈ ಜಗಳ ಮೂರ್ಖತನದ್ದು
ನೀವು ಅದನ್ನು ಅನುಸರಿಸುತ್ತೀರೋ ಬಿಡುತ್ತೀರೋ ನಮಗೆ ತಿಳಿದಿರುವುದು ಇಷ್ಟೇ)
ಭಕ್ತಿ ಮತ್ತು ಸೂಫಿ ಆಂದೋಲನಗಳಿಂದ ರೂಪುಗೊಂಡ ಗಂಗಾ-ಜಮುನಿ ತೆಹಜೀಬ್ -ಧರ್ಮ, ಭಾಷೆ, ಆಹಾರ ಮತ್ತು ಕಾದಾಡಲು ಯೋಗ್ಯವಲ್ಲದ ಇತರ ಸಂಗತಿಗಳ ನಿರಂತರ ಶಸ್ತ್ರೀಕರಣದ ಮೂಲಕ ನಮ್ಮನ್ನು ಮುಳುಗಿಸುವುದಿಲ್ಲ ಎಂದು ಆಶಯವನ್ನು ವ್ಯಕ್ತಪಡಿಸುತ್ತದೆ. ಸಂಸ್ಕೃತಿ ವೈರಿಗಳೇ ಹೆಚ್ಚು ಹೆಚ್ಚು ಪಾರಮ್ಯ ಮೆರೆಯುತ್ತಿರುವ ಭಾರತದಲ್ಲಿ ಇದನ್ನು ಅಪೇಕ್ಷಿಸುವುದು ಅಸಾಧ್ಯವೇ?