ತಗ್ಗಿದ ಬಡತನ, ಅಸಮಾನತೆ: ಕೇಂದ್ರ ಸರ್ಕಾರದ ಹೇಳಿಕೆಗಳಿಗೆ ಸ್ವತಂತ್ರ ದತ್ತಾಂಶದ ಕೊರತೆ!
ದೇಶದಲ್ಲಿ ಬಡತನ ಮತ್ತು ಅಸಮಾನತೆ ತಗ್ಗಿದೆ ಎನ್ನುವ ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ನೀಡಿದ ವರದಿಗಳು ಕೇಂದ್ರ ಸರ್ಕಾರವೇ ಸಲ್ಲಿಸಿದ ದತ್ತಾಂಶಗಳನ್ನು ಆಧರಿಸಿವೆ. ಕೇಂದ್ರ ಸರ್ಕಾರ ಸಲ್ಲಿಸಿದ ದತ್ತಾಂಶಗಳಲ್ಲಿ ಮೂರು ಬಹುದೊಡ್ಡ ಆರ್ಥಿಕ ಆಘಾತಗಳಾದ ನೋಟು ರದ್ದತಿ, ಜಿ.ಎಸ್.ಟಿ ಮತ್ತು ಕೋವಿಡ್ ಲಾಕ್-ಡೌನ್ ಪ್ರಸ್ತಾಪವೇ ಇಲ್ಲ!;
ದೇಶದಲ್ಲಿ ಬಡತನದ ಪ್ರಮಾಣ ತಗ್ಗಿದೆ ಎಂದು ಹೇಳಿಕೊಂಡಿದ್ದ ಕೇಂದ್ರ ಸರ್ಕಾರ, ಈಗ ಸಮಾನತೆ ಮತ್ತು ಸಾಮಾಜಿಕ ಭದ್ರತೆಯನ್ನು ಸುಧಾರಿಸುವಲ್ಲಿ ಗಣನೀಯ ಯಶಸ್ಸು ಸಾಧಿಸಿದೆ ಎಂದು ಹೇಳಿಕೊಂಡಿದೆ. ಇಂತಹ ವಾದಕ್ಕೆ ಅದು ಉಲ್ಲೇಖ ಮಾಡುತ್ತಿರುವುದು ಬಹುರಾಷ್ಟ್ರೀಯ ಸಂಸ್ಥೆಗಳಾದ ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯನ್ನು. ಆದರೆ ಈ ಸಂಸ್ಥೆಗಳು ಸ್ವತಂತ್ರ ಮೌಲ್ಯಮಾಪನ ಮಾಡಿಲ್ಲ, ಬದಲಾಗಿ ಸರ್ಕಾರ ಪೂರೈಕೆ ಮಾಡಿದ ದತ್ತಾಂಶಗಳನ್ನಷ್ಟೇ ಬಳಸಿಕೊಂಡಿವೆ. ಆದರೆ ಇಂತಹ ಸಂಗತಿಯ ಬಗ್ಗೆ ಕೇಂದ್ರ ಸರ್ಕಾರ ಬಾಯಿಬಿಡುತ್ತಿಲ್ಲ.
ವಿಶ್ವ ಬ್ಯಾಂಕಿನ ಬಡತನ ಮತ್ತು ಸಮಾನತೆ ವರದಿಯಲ್ಲಿ ಭಾರತವು ಎರಡು ಅಂಶಗಳನ್ನು ಹೇಳಿವೆ:
ಎ) 2011-12ರಲ್ಲಿ ಶೇ.16.2ರಷ್ಟಿದ್ದ ಭಾರತದ ತೀವ್ರ ಬಡತನವು ($2.15, 2017 PPP) 2022-23ರಲ್ಲಿ ಶೇ.2.3ಕ್ಕೆ ಕುಸಿದಿದೆ. ಅಂದರೆ 17.1 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತಂದಿದೆ. ಭಾರತದ ಕೆಳ-ಮಧ್ಯಮ ಆದಾಯದ ದೇಶ(LMIC)ಕ್ಕಾಗಿರುವ ($3.65 2017 PPP) ಬಡತನ ರೇಖೆಯಲ್ಲಿ ಇಳಿಕೆ ಕಂಡುಬಂದಿದ್ದು, 2022-23ರಲ್ಲಿದ್ದ ಬಡತನದ ಪ್ರಮಾಣವು ಶೇ.61.8ರಿಂದ ಶೇ.28.1ಕ್ಕೆ ಇಳಿದಿದೆ. ಇದರಿಂದಾಗಿ 37.8 ಕೋಟಿ ಜನರನ್ನು ಆ ಚೌಕಟ್ಟಿನಿಂದ ಹೊರತಂದಿದೆ. ಮೂರು ಡಾಲರ್ (2011 PPP)ಇದ್ದ ಪರಿಷ್ಕೃತ ತೀವ್ರ ಬಡತನ ರೇಖೆಯಲ್ಲಿ ಇದು ಶೇ.5.3 ಬಡವರಿಗೆ ಸರಿಹೊಂದುತ್ತದೆ ಹಾಗೂ 4.2 ಡಾಲರ್ (2021 PPP)ನ ಪರಿಷ್ಕೃತ LMCI ಬಡತನ ರೇಖೆಯಲ್ಲಿ, 2022-23ರಲ್ಲಿ ಶೇ.29.3ಕ್ಕೆ ಸರಿಹೊಂದುತ್ತದೆ.
[$2.15, 2017 PPP ಎಂದರೆ ದಿನಕ್ಕೆ 2.15 ಡಾಲರ್ ಅಂತಾರಾಷ್ಟ್ರೀಯ ಬಡತನ ರೇಖೆ, ಇದನ್ನು 2017ರ ಖರೀದಿ ಶಕ್ತಿ ಸಾಮ್ಯತೆ (Purchasing power parity-PPP)ಯಲ್ಲಿ ಅಳೆಯಲಾಗುತ್ತದೆ]
ಬಿ) 2011-12ರಲ್ಲಿ ಶೇ.28.8ರಷ್ಟಿದ್ದ (ಗಿನಿ ಸೂಚ್ಯಂಕ) ಭಾರತದ ಅನುಭೋಗದಲ್ಲಿನ ಅಸಮಾನತೆಯು ಶೇ.25.5ಕ್ಕೆ ಸುಧಾರಣೆ ಕಂಡಿದೆ. (ಕಡಿಮೆ ಗಿನಿ ಸೂಚ್ಯಂಕ ಎಂದರೆ ಅನುಭೋಗದಲ್ಲಿನ ಕಡಿಮೆ ಅಸಮಾನತೆ). ಇದು 2022-23ರ ಭಾರತದ ಗೃಹ ಬಳಕೆ ವೆಚ್ಚದ ಸಮೀಕ್ಷೆ (HCES)ಯನ್ನು ಆಧರಿಸಿದೆ.
2025ರ ಮೇ ತಿಂಗಳಲ್ಲಿ ಇದೇ ಅಂಶಗಳನ್ನು ಮುಂದಿಟ್ಟುಕೊಂಡು ಅರ್ಥಶಾಸ್ತ್ರಜ್ಞರಾದ ಸಿ.ರಂಗರಾಜನ್ ಮತ್ತು ಮಹೇಂದ್ರ ದೇವ್ ಅವರು ಬರೆದ ಲೇಖನವನ್ನು ಪತ್ರಿಕೆಯೊಂದು ಪ್ರಕಟಿಸಿತ್ತು. ಆದರೆ ಅವರು ಪ್ರಸ್ತಾಪಿಸಿದ ಅಂಶಗಳನ್ನು ನಿರ್ಲಕ್ಷಿಸಲಾಯಿತು.
ಬಡತನ ನಿರ್ವಹಣೆ ಸುಲಭ
“2011-12ರಲ್ಲಿ ಶೇ.29.5ರಷ್ಟಿದ್ದ ಭಾರತದ ಬಡತನವು 2022-23ರಲ್ಲಿ ಶೇ.9.5ಕ್ಕೆ ಮತ್ತು 2023-24ರಲ್ಲಿ ಶೇ.4.9ಕ್ಕೆ ಇಳಿದಿದೆ. ಬಹುತೇಕ ಬಡವರು ಬಡತನ ರೇಖೆಯ ಸನಿಹದಲ್ಲಿದ್ದಾರೆ- ಇದರಿಂದಾಗಿ ಬಡತನವನ್ನು ಕೂಡ ಸುಲಭವಾಗಿ ನಿರ್ವಹಿಸಬಹುದು ಎಂಬುದಾಗಿದೆ” ಎಂದು ಲೇಖನದಲ್ಲಿ ವಿಶ್ಲೇಷಿಸಲಾಗಿತ್ತು.
ಅನುಭೋಗದಲ್ಲಿನ ಅಸಮಾನತೆಯ (ಗಿನಿ ಸೂಚ್ಯಂಕ) ಬಗ್ಗೆಯೂ ಇದೇ ರೀತಿಯ ಕುಸಿತವನ್ನು ಗುರುತಿಸಲಾಗಿದೆ. ಆದರೆ 2022-23 ಮತ್ತು 2023-24ರ ನಡುವಿನ ಒಂದು ವರ್ಷದಲ್ಲಿ ಬಳಕೆ ಅಸಮಾನತೆ ಕುಸಿತದ ಪ್ರಮಾಣವು 2011-12 ಮತ್ತು 2022-23ರ ನಡುವಿನ 11 ವರ್ಷಗಳಲ್ಲಿನ ಕುಸಿತಕ್ಕೆ ಬಹುತೇಕ ಹೋಲಿಕೆಯಾಗುತ್ತದೆ ಎಂಬುದಾಗಿ ವಿಶ್ಲೇಷಿಸಿದ ವೈಪರೀತ್ಯದ ಬಗ್ಗೆ ವಿವರಣೆ ನೀಡಿಲ್ಲ.
ಹಾಗೆ ವರದಿ ಪ್ರಕಟವಾದ ಒಂದೇ ವಾರದ ಬಳಿಕ ದೇವ್ ಅವರನ್ನು ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕಮಾಡಿಕೊಳ್ಳಲಾಯಿತು.
“ಸಾಮಾಜಿಕ ಭದ್ರತಾ ವ್ಯಾಪ್ತಿಯಲ್ಲಿನ ಸುಧಾರಣೆಗಳನ್ನು ಹೇಳಿಕೊಳ್ಳಲು ಕೇಂದ್ರ ಸರ್ಕಾರವು ಉಲ್ಲೇಖಿಸಿದ ಮೂರನೇ ವರದಿಯು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರದಿ ಮತ್ತು ಡಾಟಾ ಎಂಟ್ರಿ. ಇವೆರಡೂ ಜನಸಂಖ್ಯೆಗಾಗಿರುವ ಎಸ್.ಡಿ.ಜಿ. ಸೂಚ್ಯಂಕದ ವ್ಯಾಪ್ತಿಯಲ್ಲಿ ಬರುತ್ತದೆಯೇ ವಿನಾ ಕಾರ್ಮಿಕರದ್ದಲ್ಲ. 2025ರ ದತ್ತಾಂಶ ನಮೂದು ಭಾರತಕ್ಕೆ ಮಾತ್ರ. ಉಳಿದೆಲ್ಲವೂ 2023ರ ವರೆಗೆ ಲಭ್ಯವಿವೆ.
ಇದರಿಂದ ವ್ಯಕ್ತವಾಗುವುದೇನೆಂದರೆ ಕನಿಷ್ಠ ಒಂದು ಸಾಮಾಜಿಕ ಭದ್ರತೆ ಸೌಲಭ್ಯವನ್ನು ಒಳಗೊಂಡ ಜನಸಂಖ್ಯೆಯು 2022ರಲ್ಲಿ ಶೇ.48.4 ಮತ್ತು 2025ರಲ್ಲಿ ಶೇ.64.4 ಇತ್ತು ಎಂಬುದು ಸ್ಪಷ್ಟವಾಗುತ್ತದೆ.
“ಬಡತನ ವಿರುದ್ಧದ ಹೋರಾಟದಲ್ಲಿ ಭಾರತದ ದಿಗ್ವಿಜಯ”ವನ್ನು ಹೇಳಿಕೊಳ್ಳಲು ಕೇಂದ್ರವು ವಿಶ್ವ ಬ್ಯಾಂಕ್ ವರದಿಯನ್ನು ಉಲ್ಲೇಖಿಸುತ್ತದೆ. ಆದರೂ ಇದಕ್ಕಾಗಿ ಭಾರತಕ್ಕೆ ಅನ್ವಯವಾಗುವ LMC ಬಡತನ ರೇಖೆಯಾದ $3.65 2017 PPP ಬದಲಿಗೆ ತೀವ್ರ ಬಡತನ ರೇಖೆಯಾದ $2.15 2017 PPP ಅನ್ನು ಉಲ್ಲೇಖಿಸಿದೆ. (2022-2023ರಲ್ಲಿ ಭಾರತದಲ್ಲಿ ಶೇ.28.1 ರಷ್ಟು ಬಡವರಿದ್ದರು ಎಂದು ತೋರಿಸುತ್ತದೆ).
ಹೆಚ್ಚು ಸಮಾನತೆಯನ್ನು ಸಾಧಿಸಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನವೆಂದು ಹೇಳಿಕೊಳ್ಳಲು ಮತ್ತು ಅಸಮಾನತೆಯ ಪ್ರಮಾಣವು ಚೀನಾದ 35.7 ಮತ್ತು ಅಮೆರಿಕದ 41.8ಕ್ಕಿಂತ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ ಎಂಬುದನ್ನು ಹೇಳಿಕೊಳ್ಳಲು ಈ ವರದಿಯನ್ನು ಉಲ್ಲೇಖಿಸಿದೆ; ಭಾರತವು ಜಿ7 ಮತ್ತು ಜಿ20 ರಾಷ್ಟ್ರಗಳಿಗಿಂತ ಹೆಚ್ಚು ಸಮಾನತೆಯನ್ನು ಸಾಧಿಸಿದೆ.
ಭಾರತದ ಸಾಮಾಜಿಕ ಭದ್ರತಾ ಸೌಲಭ್ಯದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ; 2015ರಲ್ಲಿ ಶೇ.19ರಷ್ಟಿದ್ದ ಈ ಪ್ರಮಾಣವು 2025ರಲ್ಲಿ ಶೇ,64.3ಕ್ಕೆ ಏರಿಕೆ ಕಂಡಿದೆ ಎಂಬ ಸಂಗತಿಯನ್ನು ಐಎಲ್ಓ ಮಾನ್ಯಮಾಡಿದೆ ಎಂಬುದಾಗಿ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತದೆ. ಇದಕ್ಕೆ ವಿಸ್ತರಿತ ಆರೋಗ್ಯ ವಿಮೆ, ಪಿಂಚಣಿ ಮತ್ತು ಉದ್ಯೋಗದ ಬೆಂಬಲವೇ ಕಾರಣ ಎಂಬುದು ಅದರ ವಾದ.
ಇದಾದ ಬಳಿಕ ಇನ್ನೂ ಒಂದು ಡಾಟಾ ಎಂಟ್ರಿಯನ್ನು ಉಲ್ಲೇಖಿಸಿ, ಭಾರತವು ಸಾಮಾಜಿಕ ಭದ್ರತಾ ಸೌಲಭ್ಯದಲ್ಲಿ ಪ್ರಪಂಚದಾದ್ಯಂತ ಅತ್ಯಂತ ವೇಗದ ವಿಸ್ತರಣೆ ಕಂಡಿದೆ, ಮತ್ತೀಗ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಮತ್ತು 94 ಕೋಟಿಗೂ ಅಧಿಕ ಮಂದಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸುತ್ತಿದೆ ಎಂದು ಹೇಳಿಕೊಂಡಿದೆ.
ವಿಚಿತ್ರದ ಸಂಗತಿ ಎಂದರೆ ವಿಶ್ವ ಬ್ಯಾಂಕಿನ ಸಂಕ್ಷಿಪ್ತ ವರದಿಯು ಬಡತನ ಮತ್ತು ಅಸಮಾನತೆಯಲ್ಲಿನ ಗಣನೀಯ ಇಳಿಕೆ ಹೇಗೆ ಮತ್ತು ಯಾಕೆ ಸಂಭವಿಸಿತು ಎಂಬುದರ ವಿವರಣೆಯನ್ನು ನೀಡಿಲ್ಲ. “2021-22ರಿಂದ ಉದ್ಯೋಗ ಬೆಳವಣಿಗೆಯು ದುಡಿಯುವ ವಯಸ್ಸಿನ ಜನಸಂಖ್ಯೆಯನ್ನು ಮೀರಿಸಿದೆ” ಎಂದು ಹೇಳಿದೆಯಾದರೂ ಅದಕ್ಕೆ ಯಾವುದೇ ಆಧಾರವನ್ನು ಉಲ್ಲೇಖಿಸಿಲ್ಲ.
ಇನ್ನೊಂದು ಮಹತ್ವದ ವಿಷಯವನ್ನೂ ಇಲ್ಲಿ ಗಮನಿಸಬೇಕು. ಈ ವರದಿಯು ಮೂರು ಬಹುದೊಡ್ಡ ಆರ್ಥಿಕ ಆಘಾತಗಳ ಬಗ್ಗೆ ತುಟಿಬಿಚ್ಚಿಲ್ಲ. ಅವುಗಳೆಂದರೆ; ನೋಟು ಅಮಾನ್ಯೀಕರಣ (2016), ಜಿ.ಎಸ್.ಟಿ (2017) ಮತ್ತು ರಾತ್ರೋರಾತ್ರಿ ಹೇರಿಕೆ ಮಾಡಲಾದ ಲಾಕ್-ಡೌನ್. ಇದರಿಂದ ಬಡ ಕುಟುಂಬಗಳು ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಉಂಟಾದ ಪರಿಣಾಮ ಸಾಮಾನ್ಯವಾದುದಲ್ಲ. ಜೊತೆಗೆ ಈ ವರ್ಗಗಳು ಅವಲಂಬಿಸಿರುವ ಅನೌಪಚಾರಿಕ ಅರ್ಥ ವ್ಯವಸ್ಥೆಯನ್ನು ಹಾಳುಗೆಡವಿದ್ದವು. ಅನೌಪಚಾರಿಕ ವಲಯವು ರಾಷ್ಟ್ರೀಯ ಆದಾಯದ ಶೇ.50ರಷ್ಟು ಮತ್ತು ಸುಮಾರು ಶೇ.90ರಷ್ಟು ಉದ್ಯೋಗಗಳನ್ನು ಹೊಂದಿದೆ.
2011-12 ಮತ್ತು 2022-23ರ HCES ದತ್ತಾಂಶವನ್ನು ಬಳಸುವಲ್ಲಿ ಆಗಿರುವ ನ್ಯೂನತೆಗಳನ್ನು ವಿಶ್ವಬ್ಯಾಂಕ್ ಎತ್ತಿ ತೋರಿಸಿದೆ. ವಿಧಾನಕ್ರಮಗಳಲ್ಲಿ ಆಗಿರುವ ಬದಲಾವಣೆಯೇ ಇದಕ್ಕೆ ಕಾರಣವೆಂದೂ ತಿಳಿಸಿದೆ. ಆದರೆ ತನ್ನದೇ ವಿಧಾನಕ್ರಮಗಳಲ್ಲಿ ಒಳಗೊಂಡಿರುವ ‘ಪರಿಕಲ್ಪನಾತ್ಮಕ ಮತ್ತು ಪ್ರಾಯೋಗಿಕ ಸಮಸ್ಯೆಗಳ’ ವಿಚಾರದಲ್ಲಿ ಅದು ಮೌನವಹಿಸಿತ್ತು. ಇದರಿಂದಾಗಿಯೇ ಭಾರತದಲ್ಲಿ ರಾಷ್ಟ್ರೀಯ ಬಡತನ ರೇಖೆಯ ಅನುಪಸ್ಥಿತಿಯಾಗಿರುವ ಅಂತಾರಾಷ್ಟ್ರೀಯ ಬಡತನ ಮತ್ತು ಅಸಮಾನತೆ ಅಂದಾಜು ಮತ್ತು ಹೋಲಿಕೆಗಳ ಮೇಲಿನ ‘ಅವಲೋಕನ’ದಲ್ಲಿ ಅದರ ಬಣ್ಣ ಬಯಲಾಗಿದೆ.
ದೇಶಗಳು "ಬಡತನ" ಎಂದರೆ ಏನು ಎಂಬುದನ್ನು ತಮ್ಮಷ್ಟಕ್ಕೆ ತಾವೇ ನಿರ್ಧರಿಸುತ್ತವೆ ಅಥವಾ ಭಿನ್ನವಾಗಿ ವ್ಯಾಖ್ಯಾನಿಸುತ್ತವೆ. ಯಾಕೆಂದರೆ, ಒಂದು ನಿರ್ದಿಷ್ಟ ಸ್ಥಳದಲ್ಲಿ ಜನರು ಏನನ್ನು ಅಗತ್ಯ ಎಂದು ಭಾವಿಸುತ್ತಾರೋ, ಅದರ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಬಡವನಲ್ಲ ಎಂದು ಪರಿಗಣಿಸಲಾಗುತ್ತದೆ. ಇದನ್ನು ಲೆಕ್ಕಾಚಾರ ಮಾಡಲು, ಅವರು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಆರೋಗ್ಯವಂತನಾಗಿ ಮತ್ತು ಕ್ರಿಯಾಶೀಲನಾಗಿ ಇಡಲು ಬೇಕಾಗುವಷ್ಟು ಆಹಾರದ ವೆಚ್ಚವನ್ನು ಅಂದಾಜು ಮಾಡುವುದರಿಂದ ಶುರುಮಾಡುತ್ತಾರೆ. ನಂತರ, ಆಹಾರವನ್ನು ಹೊರತುಪಡಿಸಿ ಇತರ ಅಗತ್ಯ ವಸ್ತುಗಳಿಗಾಗಿ ಹೆಚ್ಚುವರಿ ಹಣವನ್ನು ಸೇರಿಸುತ್ತಾರೆ. ಇವೆಲ್ಲವನ್ನೂ ಅದು ತನ್ನ ಅವಲೋಕನದಲ್ಲಿ ತಿಳಿಸಿದೆ.
ರಾಷ್ಟ್ರೀಯ ಬಡತನ ರೇಖೆಗಳು ಶ್ರೀಮಂತ ದೇಶಗಳಲ್ಲಿ ಅಧಿಕ ಖರೀದಿ ಶಕ್ತಿ ಹೊಂದಿರುತ್ತವೆ ಎಂಬ ಅಂಶದ ಕಡೆಗೂ ಅದು ಬೊಟ್ಟುಮಾಡಿದೆ.
ಹೀಗಾಗಿ ಭಾರತವು ತನ್ನ ನಾಗರಿಕರಿಗೆ ಘನತೆಯ ಜೀವನವನ್ನು ಖಾತರಿಪಡಿಸುವ ದೃಷ್ಟಿಯಿಂದ ತನ್ನ ರಾಷ್ಟ್ರೀಯ ಬಡತನ ರೇಖೆಯನ್ನು ಸರಿಪಡಿಸುವ ವರೆಗೂ ವಿಶ್ವಬ್ಯಾಂಕ್ ನಿಗದಿಪಡಿಸಿದ PPP ಮಾದರಿಯು ಬಡತನ ಪ್ರಮಾಣ ತಗ್ಗಿರುವ ಬಗ್ಗೆ ಹಾದಿತಪ್ಪಿಸುವ ಚಿತ್ರಣವನ್ನು ನೀಡುತ್ತಲೇ ಇರುತ್ತದೆ.
ಉದಾಹರಣೆಗೆ, 2025ರ ಪಿಪಿಪಿಯಲ್ಲಿರುವ 2.15 ಡಾಲರ್ ತೀವ್ರ ಬಡತನ ರೇಖೆಯು (ಕೇಂದ್ರ ಸರ್ಕಾರ ಉಲ್ಲೇಖಿಸುವಂತೆ) 20.66 ರೂ/ಡಾಲರ್ ಆಗಿರುತ್ತದೆ. IMF ಪ್ರಕಾರ ಇದು 44 ರೂಪಾಯಿಗೆ ಸಮನಾಗಿರುತ್ತದೆ.
ಅಂದರೆ ಪ್ರತಿ ವ್ಯಕ್ತಿಯ ಪ್ರತಿದಿನದ ಖರ್ಚು 44 ರೂ. ಪೌಷ್ಟಿಕ ಆಹಾರ ಮತ್ತು ಆಹಾರೇತರ ಸಂಗತಿಗಳಾದ ಮನೆ ಬಾಡಿಗೆ, ಬಟ್ಟಬರೆ, ಆರೋಗ್ಯ ಮತ್ತು ಶಿಕ್ಷಣವನ್ನು ಗಣನೆಗೆ ತೆಗೆದುಕೊಂಡರೆ ಇದು ಅತ್ಯಂತ ಸಣ್ಣ ಮೊತ್ತವಾಗುತ್ತದೆ.
ಭಾರತವು 2004-05ರ ಸಾಲಿಗೆ (ತೆಂಡುಲ್ಕರ್)ಕೊನೆಯ ಬಾರಿಗೆ ರಾಷ್ಟ್ರೀಯ ಬಡತನ ರೇಖೆಯನ್ನು ರೂಪಿಸಿದ್ದು 2009ರಲ್ಲಿ. 2011-12ರ ಸಾಲಿಗೆ ರಂಗರಾಜನ್ ಸಮಿತಿ ರೂಪಿಸಿದ ಬಡತನ ರೇಖೆಯನ್ನು ಕೇಂದ್ರ ಸರ್ಕಾರ ಒಪ್ಪಿರಲಿಲ್ಲ. ದಶಕದಷ್ಟು ಹಿಂದೆಯೇ ಹೊಸ ಪ್ರಮಾಣವನ್ನು ನಿಗದಿ ಮಾಡುವುದಾಗಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಭರವಸೆ ನೀಡಿತ್ತು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಆದಾಯ ಸಮೀಕ್ಷೆಗಳಿಗಿಂತ ಭಿನ್ನವಾಗಿ ಗೃಹ ಬಳಕೆ ವೆಚ್ಚದ ಸಮೀಕ್ಷೆ (HCES)ಯ ಬಳಕೆ ಅನೇಕ ಕಾರಣಗಳಿಂದ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಬಳಕೆ ವೆಚ್ಚವನ್ನು ಆದಾಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ಬಡತನ ಮತ್ತು ಅಸಮಾನತೆಯನ್ನು ಅಳೆಯಲು ಅದು ಸೂಕ್ತವಲ್ಲ. ಇದು 81.35 ಕೋಟಿ (ಜನಸಂಖ್ಯೆಯ ಶೇ.60ಕ್ಕಿಂತ ಅಧಿಕ) ಜನರಿಗೆ ಉಚಿತ ಪಡಿತರ ಮತ್ತು ಹತ್ತು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಪಿಎಂ ಕಿಸಾನ್ ನ 6000 ರೂ. ಮತ್ತು 200 ರೂ.ಗೆ ಸಬ್ಸಿಡಿಯನ್ನು ನೀಡಿದ ಎಲ್.ಪಿ.ಜಿ. ಸಿಲಿಂಡರ್-ಗಳಂತಹ ಉಚಿತ ಸೌಲಭ್ಯಗಳನ್ನು ಒಳಗೊಂಡಿದೆ. ಇಲ್ಲಿ ಪ್ರಸ್ತಾಪಿಸಲಾದ ಎರಡೂ ಸಂದರ್ಭಗಳಲ್ಲಿ ಬಳಕೆ ವೆಚ್ಚದ ದತ್ತಾಂಶವನ್ನು ಹೆಚ್ಚಿಸುತ್ತದೆ. ಉಚಿತ ಸೌಲಭ್ಯಗಳು ಯಾವತ್ತೂ ಆದಾಯಗಳಾಗಲು ಸಾಧ್ಯವಿಲ್ಲ.
ಭಾರತದಲ್ಲಿ ಅಧ್ಯಯನ ಮಾಡದೇ ಇದ್ದರೂ ಅಮೆರಿಕ ಮತ್ತು ಯುರೋಪ್ ನಲ್ಲಿ ಮನೆ ಸಮೀಕ್ಷೆಗಳು ವಿಶ್ವಾಸಾರ್ಹ ದತ್ತಾಂಶಗಳನ್ನು ಒದಗಿಸುವಲ್ಲಿ ವಿಫಲವಾಗಿವೆ. ಯಾಕೆಂದರೆ ಶ್ರೀಮಂತರು ಇಂತಹ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸುತ್ತಾರೆ. ಇದಲ್ಲದೆ ಶ್ರೀಮಂತರು ಮತ್ತು ಬಡವರು ತಮ್ಮದೇ ಆದ ಕಾರಣಗಳಿಗಾಗಿ ಪ್ರಯೋಜನಗಳನ್ನು ಪಡೆಯಲು ಒಲ್ಲೆ ಎನ್ನುತ್ತಾರೆ.
ಶ್ರೀಮಂತರು ಮತ್ತು ಬಡವರ ನಡುವಿನ ಆದಾಯದ ಅಂತರ ಕೂಡ ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿದೆ. 2024ರ ವಿಶ್ವ ಅಸಮಾನತೆ ವರದಿಯ ಪ್ರಕಾರ, ಭಾರತದ ಅಗ್ರ ಶೇ.10ರಷ್ಟು ಜನರ ಆದಾಯದ ಪಾಲು 2014ರಲ್ಲಿ ಶೇ.56.1ರಷ್ಟಿತ್ತು. ಅದು 2022ರಲ್ಲಿ ಶೇ.57.7ಕ್ಕೆ ಏರಿಕೆಯಾಗಿದೆ. ಆದರೆ ಉಳಿದ ಶೇ.90ರಷ್ಟು ಜನರ ಆದಾಯದ ಪಾಲು ಶೇ.43.9ರಿಂದ ಶೇ.42.3ಕ್ಕೆ ಕುಸಿದಿದೆ.
ವಿಶ್ವ ಅಸಮಾನತೆ ವರದಿಯು ಹೆಚ್ಚು ವಿಶ್ವಾಸಾರ್ಹವಾಗಿದೆ. ಯಾಕೆಂದರೆ ಅದು ಇತರ ವರದಿಗಳಂತೆ ಕೇವಲ ಸಮೀಕ್ಷೆ ಆಧಾರಿತವಾಗಿರದೆ ಆದಾಯ ತೆರಿಗೆ ದತ್ತಾಂಶವನ್ನೂ ಬಳಸಿಕೊಳ್ಳುತ್ತದೆ.
ಹಾಗಾಗಿ ಬಡತನ ಮತ್ತು ಅಸಮಾನತೆಯನ್ನು ಅಳೆಯಲು ಭಾರತಕ್ಕಿರುವ ಉತ್ತಮ ಮಾರ್ಗವೆಂದರೆ ಮನೆ ಆದಾಯದ ಸಮೀಕ್ಷೆಗಳನ್ನು ನಡೆಸುವುದು ಮತ್ತು ಅವುಗಳನ್ನು ಆದಾಯ ತೆರಿಗೆ ಮತ್ತು ಡಿಜಿಟಲ್ ವಹಿವಾಟು ದತ್ತಾಂಶದ ಜೊತೆಗೆ ಪೂರಕಗೊಳಿಸುವುದು.
ರಂಗರಾಜನ್-ದೇವ್ ಲೇಖನವು ಸಂಪೂರ್ಣವಾಗಿ ಅಧಿಕೃತ ದತ್ತಾಂಶವನ್ನು ಆಧರಿಸಿದೆ. ‘ಜಿಡಿಪಿ ಪ್ರಗತಿಯು ಸಮೀಪದ ಕಾರಣವಾಗಿರಬಹುದು’ ಎಂದು ಹೇಳುವ ಮೂಲಕ ಅದು ಬಡತನ ಮತ್ತು ಅಸಮಾನತೆ ಯಾಕೆ ಕಡಿಮೆಯಾಗಿದೆ ಎಂದು ವಿವರಿಸುವಲ್ಲಿ ಸ್ಪಷ್ಟತೆಯನ್ನು ಹೊಂದಿಲ್ಲ.
ಆದರೆ ಇದು ಮನವರಿಕೆಯಾಗುವಂತಿಲ್ಲ. ಯಾಕೆಂದರೆ ಬೆಳವಣಿಗೆಯ ಅತಿಯಾದ ಅಂದಾಜು, ಪೂರ್ವಾನ್ವಯವಾಗುವಂತೆ ಆಗಾಗ್ಗೆ ಮಾಡಿದ ಪರಿಷ್ಕರಣೆಗಳು ಹಾಗೂ ತಿರುಚಿದ ಹಿಂದಿನ ಸರಣಿ ದತ್ತಾಂಶಗಳ ಕಾರಣದಿಂದಾಗಿ 2011-12ರ ಜಿಡಿಪಿ ದತ್ತಾಂಶವು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಸಾಕಷ್ಟು ಅಧಿಕೃತ ದತ್ತಾಂಶಗಳು ಲಭ್ಯವಿರುವುದರಿಂದ ಅವುಗಳನ್ನು ಸ್ವತಂತ್ರ ಮೌಲ್ಯಮಾಪನಕ್ಕಾಗಿ ಬಳಸಿಕೊಳ್ಳಬಹುದಾಗಿದೆ.
ವೈಯಕ್ತಿಕ ಸಾಲಗಳ ಗಣನೀಯ ಪ್ರಮಾಣದ ಏರಿಕೆ (ಕಳೆದ ಅನೇಕ ವರ್ಷಗಳಿಂದ ಕೈಗಾರಿಕೆ, ಸೇವೆಗಳು ಮತ್ತು ಕೃಷಿ ವಲಯಗಳಿಗೆ ನೀಡಿದ ಬ್ಯಾಂಕ್ ಸಾಲಗಳನ್ನು ಮೀರಿಸಿದೆ), ಚಿನ್ನದ ಹತಾಶ ಅಡಮಾನ, ಶೇ.60ಕ್ಕೂ ಹೆಚ್ಚಿನ ಜನರಿಗೆ ಉಚಿತ ಕೊಡುಗೆಗಳು ಮತ್ತು ಪ್ರತಿಗಾಮಿ ತೆರಿಗೆ ವ್ಯವಸ್ಥೆ ಇತ್ಯಾದಿ ಅಂಶಗಳು ಭಾರತದಲ್ಲಿ ಬಡತನ ಪ್ರಮಾಣ ಯಾಕೆ ಕಡಿಮೆಯಾಗುತ್ತಿದೆ ಎಂಬ ವಾದಗಳು ಕೇವಲ ಅಂಕಿ-ಅಂಶಗಳ ಚಾಣಾಕ್ಷ ಆಯ್ಕೆ ಎಂಬುದನ್ನು ಪುಷ್ಟೀಕರಿಸಿ ದ ಫೆಡರಲ್ ಪಟ್ಟಿಯನ್ನು ಸಿದ್ಧಪಡಿಸಿತ್ತು. ಇಲ್ಲಿ ಇನ್ನೂ ಕೆಲವು ಅಂಶಗಳನ್ನು ನೀಡಲಾಗಿದೆ:
• ಹಣಕಾಸು ವರ್ಷ 2012ರಲ್ಲಿ ಜಿಡಿಪಿಯ ಶೇ.23.6ರಷ್ಟಿದ್ದ ಮನೆ ಉಳಿತಾಯವು 2024ರಲ್ಲಿ ಶೇ.18.1ಕ್ಕೆ ಇಳಿದಿತ್ತು. ಮನೆ ಸಾಲಗಳು (ವಾರ್ಷಿಕ ಬದಲಾವಣೆ ಅಥವಾ ಹರಿವು) 2024ರಲ್ಲಿ ಜಿಡಿಪಿಯ ಶೇ.3.2ರಿಂದ ಶೇ.6.2ಕ್ಕೆ ಏರಿಕೆಯಾಗಿವೆ. ರಾಷ್ಟ್ರೀಯ ಖಾತೆಯ ಅಂಕಿ-ಅಂಶಗಳ ಪ್ರಕಾರ ಮನೆಗಳ ನಿವ್ವಳ ಹಣಕಾಸು ಆಸ್ತಿ ಕಳೆದ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದೆ.
• ಕುಟುಂಬಗಳ ಸಾಲದ ನಿವ್ವಳ ಮೌಲ್ಯ (ಒಟ್ಟು ಸಾಲ, ವಾರ್ಷಿ ಬದಲಾವಣೆಗಳಲ್ಲ) 2024ರ ಡಿಸೆಂಬರ್ ನಲ್ಲಿ ಜಿಡಿಪಿಯ ಶೇ.49.1ಕ್ಕೆ ಏರಿಕೆ ಕಂಡಿದೆ. ಇದು 2019ರ ಮಾರ್ಚ್ ತಿಂಗಳಲ್ಲಿ ಶೇ.34ರಷ್ಟಿತ್ತು. ವೈಯಕ್ತಿಕ ಸಾಲಗಾರರ ತಲಾ ಸಾಲವು ಹಣಕಾಸು ವರ್ಷ 2023 ಮತ್ತು 2025ರಲ್ಲಿ ಒಂದು ಲಕ್ಷ ರೂ.ಗಳಷ್ಟು ಹೆಚ್ಚಾಗಿದೆ. ಇದು 2023ರ ಮಾರ್ಚ್ ತಿಂಗಳಿನಲ್ಲಿ 3.9 ಲಕ್ಷ ರೂ. ಇತ್ತು. ಅದು 2024ರ ಮಾರ್ಚ್ ನಲ್ಲಿ 4.8 ಲಕ್ಷ ರೂ.ಗೆ ಏರಿಕೆ ಕಂಡಿದೆ. (2025ರ ಜೂನ್ ತಿಂಗಳ ಹಣಕಾಸು ಸ್ಥಿರತೆ ವರದಿ).
• ಬೃಹತ್ ಮತ್ತು ಬೆಳೆಯುತ್ತಿರುವ ಅನೌಪಚಾರಿಕ ಆರ್ಥಿಕತೆ: 2012ರ ಭಾರತ ಸರ್ಕಾರದ ವರದಿಯ ಪ್ರಕಾರ ಅನೌಪಚಾರಿಕ ವಲಯವು ಶೇ.90ಕ್ಕಿಂತ ಅಧಿಕ ಕಾರ್ಮಿಕ ಬಲವನ್ನು ಮತ್ತು ಶೇ.50ರಷ್ಟು ರಾಷ್ಟ್ರೀಯ ಉತ್ಪನ್ನವನ್ನು ಒಳಗೊಂಡಿತ್ತು. ಹಣಕಾಸು ವರ್ಷ 2023ರಲ್ಲಿ ಜಿಡಿಪಿಗೆ ಇದರ ಕೊಡುಗೆ ಶೇ.45ರಷ್ಟಿತ್ತು ಮತ್ತು 2023-24ರಲ್ಲಿ ಇದರ ಉದ್ಯೋಗದ ಪಾಲು ಶೇ.88ರಷ್ಟಿತ್ತು(ಯಾವುದೇ ಸಾಮಾಜಿಕ ಭದ್ರತೆ ಸೌಲಭ್ಯವಿಲ್ಲದೆ). (PLFS 2023-24).
• 2021-22 ಮತ್ತು 2022-23ರ ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆಯ ಪ್ರಕಾರ 2021-22ರಲ್ಲಿ ಶೇ.88ರಷ್ಟಿದ್ದ ಬಾಡಿಗೆ ಕಾರ್ಮಿಕರ (ಸಾಮಾಜಿಕ ಭದ್ರತೆ ಇಲ್ಲದ ಅನೌಪಚಾರಿಕ ಕಾರ್ಮಿಕರು) ಸಂಖ್ಯೆ 2022-23ರಲ್ಲಿ 92.9ಕ್ಕೆ ಏರಿಕೆ ಕಂಡಿದೆ.
ಕೊನೆಯ ಅಂಶವೂ ಕೂಡ ಮುಖ್ಯವಾಗಿದೆ. ಯಾಕೆಂದರೆ ILO ವರದಿಯನ್ನು ಉಲ್ಲೇಖಿಸಿದ ಕೇಂದ್ರ ಸರ್ಕಾರವು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯಲ್ಲಿ ಹೆಚ್ಚಳವಾಗಿದೆ ಎನ್ನುವ ಭಾವನೆಯನ್ನು ಮೂಡಿಸಿತು. ಇದು ILO ಮೌಲ್ಯಮಾಪನದ ಆಧಾರದಲ್ಲಿ ನಡೆದಿದೆ ಎಂದೂ ತಿಳಿಸಿತು. ಆದರೆ ಇದು ಮುಖ್ಯವಾಗಿ ಭಾರತ ಸರ್ಕಾರದ ದತ್ತಾಂಶಗಳನ್ನು ಆಧರಿಸಿದ್ದಾಗಿದೆ ಎಂದು ILO ತಿಳಿಸಿತು.
ಇದೇ ವೇಳೆ 2019 ಮತ್ತು 2020ರಲ್ಲಿ ಅಂಗೀಕರಿಸಲಾದ ಮೂರು ಕಾರ್ಮಿಕ ಸಂಹಿತೆಗಳು ಸಾರ್ವತ್ರಿಕ ಕನಿಷ್ಠ ವೇತನ ಮತ್ತು ಎಲ್ಲರಿಗೂ ಸಾಮಾಜಿಕ ಭದ್ರತೆಯ ಭರವಸೆಯನ್ನು ನೀಡಿದೆ. ಅವುಗಳಿಗಿನ್ನೂ ಜಾರಿಯ ಭಾಗ್ಯ ಬಂದಿಲ್ಲ.
ಕೇಂದ್ರ ಸರ್ಕಾರವೇ ಹೇಳಿಕೊಂಡ ಹಾಗೆ 94 ಕೋಟಿ ಜನರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತಿದ್ದು ಅವರಲ್ಲಿ 81.35 ಕೋಟಿ ಉಚಿತ ಪಡಿತರ ಪಡೆಯುತ್ತಿದ್ದಾರೆ. ಇದು, 2047ರ ಹೊತ್ತಿಗೆ ವಿಕಸಿತ ಭಾರತವನ್ನು ಕಟ್ಟುತ್ತೇವೆ ಎಂದು ಎದೆಯುಬ್ಬಿಸಿ ಹೇಳುವ ವಿಶ್ವದ ನಾಲ್ಕನೇ ಬೃಹತ್ ರಾಷ್ಟ್ರವಾಗಿರುವ ಭಾರತಕ್ಕೆ ಹೆಮ್ಮೆಯ ಸಂಗತಿಯೇನೂ ಅಲ್ಲ.