ಬೆಂಗಳೂರಿಗೆ ಸುರಂಗ: Part-3| ಉದ್ಯಾನ ನಗರಿಯ ಅಂತರ್ಜಲ ಕುಸಿಯುವ ಆತಂಕ : ವಿಸ್ತೃತ ಅಧ್ಯಯನಕ್ಕೆ ಒತ್ತಾಯ

ಸುರಂಗ ಮಾರ್ಗ ರಸ್ತೆ ನಿರ್ಮಾಣದಿಂದ ಈಗಾಗಲೇ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿಗೆ ಮತ್ತೊಂದು ಗಂಭೀರ ಪರಿಸರ ಬಿಕ್ಕಟ್ಟನ್ನು ತಂದೊಡ್ಡುವ ಸಾಧ್ಯತೆ ಇದೆ.

Update: 2025-11-12 03:00 GMT
Click the Play button to listen to article

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಸುರಂಗ ರಸ್ತೆ ಮಾರ್ಗ (ಟನಲ್‌ ರಸ್ತೆ) ನಿರ್ಮಾಣಕ್ಕೆ ಮುಂದಾಗಿರುವುದು ಅಂತರ್ಜಲ, ಜಲಮೂಲ ಮತ್ತು ಕೊಳವೆಬಾವಿಗಳಿಗೆ ಸಮಸ್ಯೆ ಎದುರಾಗುವ ಆತಂಕ ಸೃಷ್ಟಿಸಿದೆ. ಸರ್ಕಾರದ ನಡೆಯಿಂದಾಗಿ ಈಗಾಗಲೇ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿಗೆ ಮತ್ತೊಂದು ಗಂಭೀರ ಪರಿಸರ ಬಿಕ್ಕಟ್ಟನ್ನು ತಂದೊಡ್ಡುವ ಸಾಧ್ಯತೆ ಇದೆ. 

ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ 17 ಕಿ.ಮೀ ಉದ್ದದ ಅವಳಿ ಸುರಂಗ ರಸ್ತೆ ನಿರ್ಮಾಣದಿಂದ ಅಂತರ್ಜಲದ ಹರಿವಿಗೆ ಅಡ್ಡಿಯುಂಟಾಗಿ ನಗರದ ಅಂತರ್ಜಲಮಟ್ಟ ಸಂಪೂರ್ಣವಾಗಿ ಕುಸಿಯುವ ಅಪಾಯವಿದೆ. ಈ ಬಗ್ಗೆ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ತಜ್ಞರ ಸಮಿತಿಯೇ ಹೇಳಿದೆ. ಅಂತರ್ಜಲ ಮಟ್ಟ ಕುಸಿಯದಿರುವಂತೆ ಕಾಪಾಡಲು ಯಾವುದೇ ಪರಿಹಾರವನ್ನು ವಿಸ್ತೃತ ಯೋಜನಾ ವರದಿಯಲ್ಲಿ ಉಲ್ಲೇಖಿಸಿಲ್ಲ. ಕೇವಲ ಯೋಜನೆ ಬಗ್ಗೆ ಮಾತ್ರ ವಿವರಣೆ ನೀಡಿದ್ದು, ಯೋಜನೆಯಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. 

ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಭಾಗವಾಗಿ ಸುರಂಗ ಮಾರ್ಗ ಕಾಮಗಾರಿ ಒಂದು ಕಡೆ ಸಂಚಾರ ದಟ್ಟಣೆ ನಿವಾರಣೆಗೆ ಪರಿಹಾರ ನೀಡಿದರೆ, ಮತ್ತೊಂದೆಡೆ ಭೂಗರ್ಭಜಲ ಸಂಪನ್ಮೂಲಗಳ ಮೇಲೆ ಗಂಭೀರ ಪರಿಣಾಮ ಬೀರಲಿವೆ. ನಗರದ ಹಲವೆಡೆ ಭೂಮಿಯೊಳಗೆ ನಡೆಸುವ ಸುರಂಗ ಕಾಮಗಾರಿಯಿಂದ ಅಂತರ್ಜಲದ ನೈಸರ್ಗಿಕ ಹರಿವು ಅಸ್ತವ್ಯಸ್ತವಾಗಲಿದೆ. ಭೂಗರ್ಭದ ನೀರಿನ ಹಾದಿಗಳು ಕತ್ತರಿಸಲ್ಪಡುವುದರಿಂದ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತವೆ ಎಂಬ ಆತಂಕವನ್ನು ಜಲತಜ್ಞರು ವ್ಯಕ್ತಪಡಿಸಿದ್ದಾರೆ. 

ಕಾನೂನುಗಳ ಉಲ್ಲಂಘನೆ 

ಸುರಂಗ ರಸ್ತೆ ನಿರ್ಮಾಣವು ಅಂತರ್ಜಲ ಹರಿವನ್ನು ಬದಲಾಯಿಸಲಿದೆ. ಮಣ್ಣಿನ ಸಮತೋಲನವನ್ನು ಸಹ ಕೆಡಿಸಬಹುದು ಮತ್ತು ಕಲುಷಿತಗೊಳಿಸಬಹುದು. ಸುರಂಗ ಕೊರೆಯುವ ಯಂತ್ರಗಳ ತಾಂತ್ರಿಕ ತೊಂದರೆಗಳು, ಕೊಳವೆಬಾವಿಗಳು ಬತ್ತಿ ಹೋಗುವಿಕೆ ಮತ್ತು ಕೆರೆಗಳ ಜಲಾನಯನ ಪ್ರದೇಶಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ನೈಸರ್ಗಿಕ ಚರಂಡಿಗಳನ್ನು ಬದಲಾಯಿಸುವುದು ರಾಜಕಾಲುವೆಗಳನ್ನು ರಕ್ಷಿಸುವ ಕಾನೂನುಗಳು ಮತ್ತು ಆದೇಶಗಳನ್ನು ಉಲ್ಲಂಘಿಸಿದಂತಾಗುತ್ತದೆ. 

ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್‌ಗೆ ಸಂಪರ್ಕ ಕಲ್ಪಿಸುವ ಸುರಂಗ ರಸ್ತೆಯು ವಸತಿ, ವಾಣಿಜ್ಯ ಕಟ್ಟಡಗಳು, ಸಾಂಸ್ಥಿಕ ವಲಯಗಳು, ಸರ್ಕಾರದ ಪ್ರಮುಖ ಕಟ್ಟಡಗಳ ಕೆಳಭಾಗದಲ್ಲಿ ಸಾಗಲಿದೆ. ಇದರಿಂದ ಮನೆ ಅಥವಾ ವಾಣಿಜ್ಯ ಕಟ್ಟಡಗಳಲ್ಲಿರುವ ಕೊಳವೆ ಬಾವಿಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ನಗರದ ಕೇಂದ್ರ ಭಾಗವೂ ಸೇರಿದಂತೆ ಬಹುತೇಕ ಭಾಗಗಳಲ್ಲಿ ಕೊಳವೆಬಾವಿಗಾಗಿ ನೂರಾರು ಅಡಿ ಆಳ ಕೊರೆಯಲಾಗಿದೆ. ಸುರಂಗ ರಸ್ತೆ 50 ಅಡಿಯಿಂದ 100 ಅಡಿ ಆಳದಲ್ಲಿ ಬರುವುದರಿಂದ ಕೊಳವೆಬಾವಿಗಳಿಗೆ ಸಮಸ್ಯೆಯಾಗಲಿದೆ. ಜಲಮೂಲ, ಅಂತರ್ಜಲ, ಕೊಳವೆ ಬಾವಿಗಳಿಗಾಗುವ ಧಕ್ಕೆಯನ್ನು ಯಾವ ರೀತಿಯಲ್ಲಿ ಸರಿಪಡಿಸಲಾಗುತ್ತದೆ ಮತ್ತು ಅವುಗಳ ರಕ್ಷಣೆಗೆ ಕೈಗೊಳ್ಳಲಾಗುವ ಕ್ರಮಗಳೇನು ಎನ್ನುವ ಬಗ್ಗೆ ಡಿಪಿಆರ್‌ನಲ್ಲಿ ಯಾವುದೇ ಮಾಹಿತಿ ಇಲ್ಲ. ಪರಿಸರ ಸೂಕ್ಷ್ಮ ಪ್ರದೇಶಗಳ ಜತೆಗೆ ಜಲಮೂಲಗಳಿಗೂ ತಡೆಯಾಗುವುದಕ್ಕೆ ಪರಿಹಾರ ಕಂಡುಕೊಳ್ಳಲು ತಜ್ಞರಿಂದ ಸೂಕ್ತ ಅಧ್ಯಯನ ಅಗತ್ಯ ಇದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. 

ಟನಲ್ ರಸ್ತೆ ಕಾಮಗಾರಿ ಮಾಡುವಾಗ ಭೂಮಿಯೊಳಗಿನ ಕಲ್ಲು ಮತ್ತು ಮಣ್ಣಿನ ಪದರಗಳು ಹಾನಿಗೊಳಗಾಗುತ್ತವೆ. ಇದರಿಂದ ಭೂಮಿಯ ಒಳಗಿನ ಒತ್ತಡ ಬದಲಾಗುತ್ತದೆ. ನೆಲ ಕುಸಿತ ಹಾಗೂ ಬಿರುಕುಗಳ ಪ್ರಕರಣಗಳು ಕೆಲವು ಪ್ರದೇಶಗಳಲ್ಲಿ ಕಂಡುಬರಲಿವೆ.  ಮನೆಗಳ ಅಡಿಪಾಯಗಳಲ್ಲಿ ಬಿರುಕುಗಳು ಮೂಡುವುದರೊಂದಿಗೆ, ಬಾವಿಗಳ ಗೋಡೆಗಳು ಕುಸಿಯುವ ಸಾಧ್ಯತೆ ಇದೆ.  ಅಲ್ಲದೇ,  ಸುರಂಗ ಕಾಮಗಾರಿಯ ವೇಳೆ ಬಳಸುವ ಸಿಮೆಂಟ್ ಮತ್ತು ರಾಸಾಯನಿಕ ಮಿಶ್ರಣಗಳು ಭೂಮಿಯೊಳಗೆ ಸೋರಿಕೆಯಾಗಿ ನೀರಿನ ಗುಣಮಟ್ಟವನ್ನು ಹಾನಿಗೊಳಿಸಲಿವೆ. ಹಲವು ಪ್ರದೇಶಗಳಲ್ಲಿ ಬಾವಿಯ ನೀರು ಉಪ್ಪುಮಿಶ್ರಿತ ಹಾಗೂ ಕಹಿ ರುಚಿಯಾಗಲಿದ್ದು, ಕೃಷಿ ಮತ್ತು ಗೃಹಬಳಕೆಗೆ ಈ ನೀರು ಅನರ್ಹವಾಗಲಿದೆ ಎಂಬ ಆರೋಪಗಳು ಕೇಳಿಬಂದಿವೆ.  

ಸುರಂಗ ರಸ್ತೆ ಯೋಜನೆ ಕೇವಲ ಲಾಲ್‌ಬಾಗ್‌ ಮಾತ್ರವಲ್ಲ ಹೆಬ್ಬಾಳ ಮತ್ತು ಸ್ಯಾಂಕಿ ಕೆರೆಗಳ ಪರಿಸರ ಸಮತೋಲನವನ್ನು ಭಾರೀ ಮಟ್ಟದಲ್ಲಿ ಅಸ್ತವ್ಯಸ್ತಗೊಳ್ಳುವ ಆಂತಕ ಸೃಷ್ಟಿಸಿದೆ.  ಸುರಂಗ ಮಾರ್ಗದಿಂದ ಭೂಮಿಯೊಳಗಿನ ನೀರಿನ ಹಾದಿಗಳು ಬೇರ್ಪಡಿಸಿದಂತಾಗಲಿದೆ. ಇದರಿಂದ ಕೆರೆಯ ನೀರು ನಿಧಾನವಾಗಿ ಸುರಂಗದೊಳಗೆ ಸೋರಿಕೆಯಾಗುವ ಸಾಧ್ಯತೆ ಇದೆ. ಇದು ಕೆರೆಗಳ ನೀರಿನ ಮಟ್ಟ ಕುಸಿಯಲು ಮತ್ತು ಭೂಗರ್ಭಜಲ ಸಂಗ್ರಹಣಾ ಶಕ್ತಿ ಕಡಿಮೆಯಾಗಲು ಕಾರಣವಾಗಬಹುದು. ಹೆಬ್ಬಾಳ ಕೆರೆಯ ನೀರಿನ ಮಟ್ಟ ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ 20–30 ಸೆಂ.ಮೀ. ಮಟ್ಟದಲ್ಲಿ ಕುಸಿದಿದೆ. ಸ್ಯಾಂಕಿ ಕೆರೆಯ ಸುತ್ತಮುತ್ತ ನಡೆಯುವ ಸುರಂಗ ಕಾಮಗಾರಿಯಿಂದ ಮಣ್ಣಿನ ಚಲನೆ ಹಾಗೂ ಕಲ್ಲು ಬಿರುಕುಗಳು ಉಂಟಾಗಲಿವೆ. ಇದರಿಂದ ಕೆರೆಯ ತಳಭಾಗದಲ್ಲಿ ಸೋರಿಕೆಗಳು ಹೆಚ್ಚಾಗುವ ಭೀತಿ ಎದುರಾಗಲಿದೆ ಎನ್ನಲಾಗಿದೆ. 

ಜಲಮಾರ್ಗಗಳಿಗೆ ಅಡ್ಡಿ

ಭೂಮಿಯ ಆಳದಲ್ಲಿ ನಿರ್ಮಿಸಲಾಗುವ ಸುರಂಗಗಳು ಅಂತರ್ಜಲದ ನೈಸರ್ಗಿಕ ಹರಿವಿಗೆ ಕೃತಕ ತಡೆಗೋಡೆಗಳಾಗಿ ಪರಿಣಮಿಸುತ್ತವೆ. ಬೆಂಗಳೂರಿನ ಭೂವೈಜ್ಞಾನಿಕ ರಚನೆಯು ಗಟ್ಟಿಯಾದ ಬಂಡೆಗಳಿಂದ ಕೂಡಿದ್ದು, ನೀರು ಈ ಬಂಡೆಗಳಲ್ಲಿನ ಬಿರುಕುಗಳ ಮೂಲಕ ಹರಿಯುತ್ತದೆ. ಸುರಂಗ ನಿರ್ಮಾಣವು ಈ ನೈಸರ್ಗಿಕ ಜಲಮಾರ್ಗಗಳನ್ನು ಶಾಶ್ವತವಾಗಿ ಮುಚ್ಚಿಹಾಕಬಹುದು. ಇದರಿಂದ ಒಂದು ಬದಿಯಲ್ಲಿ ಪ್ರವಾಹ, ಇನ್ನೊಂದು ಬದಿಯಲ್ಲಿ ಬರ ಪರಿಸ್ಥಿತಿ ಉಂಟಾಗಲಿದೆ. ಸುರಂಗದ ಒಂದು ಭಾಗದಲ್ಲಿ ನೀರು ಸಂಗ್ರಹಗೊಂಡು ಜಲಾವೃತವಾದರೆ, ಮತ್ತೊಂದು ಬದಿಯಲ್ಲಿ ಅಂತರ್ಜಲದ ಹರಿವು ನಿಂತುಹೋಗಿ, ಆ ಪ್ರದೇಶದ ಕೊಳವೆಬಾವಿಗಳು ಬತ್ತಿಹೋಗಲಿವೆ. ಸುರಂಗ ಕೊರೆಯುವಾಗ ಹೊರಬರುವ ನೀರನ್ನು ಹೊರಹಾಕುವ 'ಡೀವಾಟರಿಂಗ್' ಪ್ರಕ್ರಿಯೆಯಿಂದಾಗಿ ನಿರ್ಮಾಣದ ಹಂತದಲ್ಲಿಯೇ ಸುತ್ತಮುತ್ತಲಿನ ಅಂತರ್ಜಲ ಮಟ್ಟದಲ್ಲಿ ತೀವ್ರ ಕುಸಿತ ಕಂಡುಬರಲಿದೆ. ಸುರಂಗ ಮಾರ್ಗವು ಹಾದುಹೋಗುವ ಕೆರೆಗಳು ಮತ್ತು ಜಲಮೂಲಗಳ ಒಡಲು ಬತ್ತಿಹೋಗುವ ಸಾಧ್ಯತೆಯಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. 

ಇನ್ನಷ್ಟು ಅಧ್ಯಯನ ಅಗತ್ಯ

ಸುರಂಗ ಮಾರ್ಗದಿಂದ ಅಂರ್ತಜಲ ಕುಸಿತಗೊಳ್ಳುವ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ನಿವೃತ್ತ ನಿರ್ದೇಶಕ ಮತ್ತು ಅಂರ್ತಜಲ ತಜ್ಞ ವಿ.ಎಸ್‌. ಪ್ರಕಾಶ್, ಸುರಂಗ ಮಾರ್ಗ  ಯೋಜನೆಯು ನಗರದ ಅಂತರ್ಜಲ ವ್ಯವಸ್ಥೆಗೆ  ಹಾನಿ ಉಂಟುಮಾಡಲಿದೆ. ಆದರೆ ಎಷ್ಟರ ಮಟ್ಟಿಗೆ ಹಾನಿಯಾಗಲಿದೆ ಎಂಬುದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಅಧ್ಯಯನ ನಡೆಸಬೇಕಾದ ಅಗತ್ಯತೆ ಇದೆ. ಸರ್ಕಾರವು ತಜ್ಞರಿಂದ ಅಧ್ಯಯನ ನಡೆಸಿದ ಬಳಿಕ ಮುಂದಿನ ಹೆಜ್ಜೆ ಇಡುವುದು ಒಳ್ಳೆಯದು. ಈಗಾಗಲೇ ಬೆಂಗಳೂರಿನಲ್ಲಿ ಸಾವಿರಾರು ಕೊಳವೆಬಾವಿಗಳು ಬತ್ತಿ ಹೋಗಿವೆ. ಸುರಂಗ ನಿರ್ಮಾಣದಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಿಸಬಾರದು. ಹೀಗಾಗಿ ಈ ಬಗ್ಗೆ ಕೂಲಂಕಷ ಅಧ್ಯಯನದ ಅಗತ್ಯ ಇದೆ ಎಂದು ಹೇಳಿದ್ದಾರೆ. 

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಮೆಟ್ರೋ ಸುರಂಗ ನಿರ್ಮಾಣದ ವೇಳೆಯಲ್ಲಿ ಅಂತರ್ಜಲ ಮಟ್ಟದ ಮೇಲೆ ಉಂಟಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದ್ದರು. ಕೆಲವು ಪ್ರದೇಶಗಳಲ್ಲಿ ನೀರಿನ ಮಟ್ಟ ಕುಸಿದರೆ, ಇನ್ನು ಕೆಲವು ಕಡೆ ಏರಿಕೆಯಾಗಿರುವುದನ್ನು ಗುರುತಿಸಿದ್ದಾರೆ. ಇದು ಅಂತರ್ಜಲದ ನೈಸರ್ಗಿಕ ಹರಿವಿಗೆ ಉಂಟಾದ ಅಡಚಣೆಯ ಸ್ಪಷ್ಟ ಸೂಚನೆಯಾಗಿದೆ. ಬೆಂಗಳೂರಿನಂತಹ ಜಲ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಬೃಹತ್ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಸಮಗ್ರ ಭೂವೈಜ್ಞಾನಿಕ ಮತ್ತು ಜಲವೈಜ್ಞಾನಿಕ ಅಧ್ಯಯನ ನಡೆಸುವುದು ಅತ್ಯಗತ್ಯ. ಕೇವಲ ಸಂಚಾರ ದಟ್ಟಣೆಯನ್ನೇ ಮಾನದಂಡವಾಗಿಟ್ಟುಕೊಂಡು, ನಗರದ ಜೀವನಾಡಿಯಾದ ಅಂತರ್ಜಲ ವ್ಯವಸ್ಥೆಯನ್ನು ಬಲಿಕೊಡುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ ಎಂದು ತಿಳಿಸಿದ್ದಾರೆ. 

ನಗರದ ನೀರಿನ ಮೂಲಗಳು ಈಗಾಗಲೇ ಒತ್ತಡದಲ್ಲಿರುವ ಹಿನ್ನೆಲೆಯಲ್ಲಿ, ಹೆಬ್ಬಾಳ ಮತ್ತು ಸ್ಯಾಂಕಿ ಕೆರೆಗಳಿಗೆ ಮತ್ತಷ್ಟು ಹಾನಿಐ ಆಗುವುದಾದರೆ, ಉತ್ತರ ಮತ್ತು ಪಶ್ಚಿಮ ಬೆಂಗಳೂರು ಭಾಗದ ಭೂಗರ್ಭಜಲ ಸಂಪನ್ಮೂಲಗಳು ಕುಸಿಯುವ ಅಪಾಯವಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಸುರಂಗ ಕಾಮಗಾರಿಗಳನ್ನು ನಿಯಂತ್ರಣವಿಲ್ಲದೆ ಮುಂದುವರೆಸಿದರೆ, ನಗರದ ಪರಿಸರ ಮತ್ತು ನೀರಿನ ಭವಿಷ್ಯ ಕತ್ತಲೆಯಲ್ಲಿ ಮುಳುಗಬಹುದು ಎಂದು ಎಚ್ಚರಿಸಿದ್ದಾರೆ.

Tags:    

Similar News