Garbage problem Part -7|ದಶಕದ ಬಳಿಕ ಟೆರ್ರಾ ಫಾರಂ ಜಾಗದಲ್ಲೇ ಮತ್ತೆ ತ್ಯಾಜ್ಯ ವಿಲೇವಾರಿ; ಸ್ಥಳೀಯರ ನೆಮ್ಮದಿ ಕಸಿದ ಬಿಬಿಎಂಪಿ

ಸ್ಥಗಿತಗೊಂಡಿರುವ ಟೆರ್ರಾ ಫಾರಂನ್ನು ಮತ್ತೆ ಆರಂಭಿಸಬೇಕು ಎಂದು ಸರ್ಕಾರ ಮುಂದಾಗಿರುವುದು ಭಕ್ತರಹಳ್ಳಿ, ಸಕ್ಕರೆ ಗೊಲ್ಲಹಳ್ಳಿ ಹಾಗೂ ದೊಡ್ಡಬೆಳವಂಗಲ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಆರೋಗ್ಯದ ಮೇಲೆ ಬರೆ ಎಳೆಯಲು ಸಿದ್ಧತೆ ನಡೆಸಿದೆ.;

Update: 2025-08-11 00:30 GMT

ಪ್ರಸ್ತುತ ಸ್ಥಗಿತಗೊಂಡಿರುವ ಟೆರ್ರಾಫಾರಂ ಘಟಕ

ಬೆಂಗಳೂರಿನಿಂದ ನಲವತ್ತು ಕಿಲೋ ಮೀಟರ್‌ ದೂರದಲ್ಲಿರುವ ದೊಡ್ಡಬಳ್ಳಾಪುರಕ್ಕೂ, ಬೆಂಗಳೂರಿನ ಕಸಕ್ಕೂ ಬಿಡಿಸಲಾಗದ ನಂಟು. ದಶಕದ ಹಿಂದೆ ಹೋರಾಟಕ್ಕೆ ಬೆದರಿ ಸ್ಥಗಿತಗೊಳಿಸಿದ್ದ ತ್ಯಾಜ್ಯ ವಿಲೇವಾರಿ ಘಟಕ ಟೆರ್ರಾ ಫಾರಂ ಅನ್ನು ಮೊದಲಿನ ಸ್ಥಳದಲ್ಲೇ ಸ್ಥಾಪಿಸಲು ಬಿಬಿಎಂಪಿ ಪರವಾಗಿ ರಾಜ್ಯ ಸರ್ಕಾರ‌ ಮುಂದಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಗುಂಡ್ಲಹಳ್ಳಿ ಸಮೀಪ 2006 ರಲ್ಲಿ ತಲೆ ಎತ್ತಿದ್ದ ಟೆರ್ರಾ ಫಾರಂ ಕಸದ ಘಟಕವನ್ನು ಮುಚ್ಚುವಂತೆ ರೈತರು ಭಾರೀ ಹೋರಾಟ ನಡೆಸಿದ್ದ ಪರಿಣಾಮ 2014 ರಲ್ಲಿ ಮುಚ್ಚಲಾಗಿತ್ತು.

ಇದೀಗ ಅದೇ ಸ್ಥಳದಲ್ಲಿ ಕಸದ ಘಟಕ ಪುನರಾರಂಭಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಂದು ತುದಿಗಾಲಲ್ಲಿ ನಿಂತು ಪ್ರಕ್ರಿಯೆಗೆ ಚಾಲನೆ ನೀಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಎಂಎಸ್ ಜಿಪಿ ಘಟಕದಿಂದ ಹೈರಾಣಾಗಿರುವ ಜನರಿಗೆ ಟೆರ್ರಾ ಫಾರಂ ಎಂಬ ಮತ್ತೊಂದು ವ್ಯಾದಿ ವಕ್ಕರಿಸಲಿದೆ ಎಂಬುದು ಆತಂಕ ಹೆಚ್ಚಿಸಿದೆ. ಅಲ್ಲದೇ ದೊಡ್ಡಬೆಳವಂಗಲ ಹೋಬಳಿಯಲ್ಲಿ ಎರಡನೇ ತ್ಯಾಜ್ಯ ವಿಲೇವಾರಿ ಘಟಕ ತಲೆ ಎತ್ತಲಿರುವುದು ರೈತರಲ್ಲಿ ಕಿಚ್ಚು ಹೆಚ್ಚಿಸಿದೆ.

2006 ರಿಂದ 2014 ರವರೆಗೂ ಬೆಂಗಳೂರಿನ ತ್ಯಾಜ್ಯವನ್ನು ಗುಂಡ್ಲಹಳ್ಳಿಯ ಟೆರ್ರಾ ಫಾರಂನಲ್ಲಿ ಸುರಿಯಲಾಗುತ್ತಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅನಾರೋಗ್ಯ ಹಾಗೂ ನೊಣದ ಸಮಸ್ಯೆ ಹೆಚ್ಚಾಗಿತ್ತು. ರೈತರು ನಿರಂತರ ಹೋರಾಟ ಮಾಡಿದ ಫಲವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘಟಕವನ್ನು ಬಂದ್‌ ಮಾಡಿ, ನಾಲ್ಕು ಕಿಲೋ ಮೀಟರ್‌ ಅಂತರದಲ್ಲೇ ಚಿಗರೇನಹಳ್ಳಿ ಬಳಿ ಎಂಎಸ್‌ಜಿಪಿ ಘಟಕ ಸ್ಥಾಪಿಸಿತ್ತು.

ದಶಕಗಳಿಂದ ಹಿಂದೆ ಟೆರ್ರಾ ಫಾರಂ ಘಟಕದಲ್ಲಿ ತಂದು ಸುರಿದಿರುವುದು ಇಂದಿಗೂ ಬೆಟ್ಟಗಳಂತೆ ಕಾಣಲಿದೆ. ಚಿಗರೇನಹಳ್ಳಿ ಘಟಕದಲ್ಲಿ ಪ್ರತಿ ನಿತ್ಯ 500ಕ್ಕೂ ಹೆಚ್ಚು ಟನ್‌ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದು ಘಟಕದ ಸುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜನರು ಉಸಿರಾಟದ ಸಮಸ್ಯೆ ಸೇರಿದಂತೆ ಹಲವಾರು ಆರೋಗ್ಯ ಹಾಗೂ ವೈವಾಹಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಹೋಬಳಿಯಲ್ಲಿ ಎಂಎಸ್‌ಜಿಪಿ ಮುಚ್ಚುವಂತೆ ನಾವು ಆಗ್ರಹಿಸುತ್ತಿದ್ದರೆ ಸರ್ಕಾರ‌ ಮಾತ್ರ ಮುಚ್ಚಿರುವ ಘಟಕವನ್ನು ಮತ್ತೆ ಆರಂಭಿಸಲು ಹೊರಟಿರುವುದು ಸರಿಯಲ್ಲ. ಇದರಿಂದ ಭಕ್ತರಹಳ್ಳಿ, ಸಕ್ಕರೆ ಗೊಲ್ಲಹಳ್ಳಿ ಹಾಗೂ ದೊಡ್ಡಬೆಳವಂಗಲ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗರ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಸರ್ಕಾರವೇ ಜನರನ್ನು ಸಂಕಷ್ಟಗಳಿಗೆ ದೂಡಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಟೆರ್ರಾ ಫಾರಂ ಆರಂಭಿಸಕೂಡದು ಎಂದು ಕಾಡತಿಪ್ಪೂರು ನಿವಾಸಿ ಮಂಜುನಾಥ್ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಅಪಘಾತಗಳು ಹೆಚ್ಚಾಗುವ ಭೀತಿ

ಪ್ರತಿ ದಿನ ತ್ಯಾಜ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸರ್ಕಾರ ನಿಯಮ ರೂಪಿಸಿದೆ. ಆದರೆ, ಎಂಎಸ್‌ಜಿಪಿ ಘಟಕವು ನಿಯಮ ಉಲ್ಲಂಘಿಸಿ ಪ್ರತಿ ದಿನ ಸುಮಾರು 2,000 ಟನ್ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಪ್ರತಿದಿನ ಸುಮಾರು ಕನಿಷ್ಠ 150ಕ್ಕೂ ಹೆಚ್ಚು ಲಾರಿಗಳು ಸಂಚರಿಸುತ್ತಿರುವುದರಿಂದ ಅಪಘಾತಗಳು ಸಾಮಾನ್ಯವಾಗಿವೆ. ಈಗ ಟೆರ್ರಾ ಫಾರಂ ಆರಂಭಿಸಿದರೆ ಮತ್ತಷ್ಟು ಲಾರಿಗಳು ತ್ಯಾಜ್ಯ ಹೊತ್ತು ಬರಲಿದ್ದು ಅಪಘಾತಗಳು ಹೆಚ್ಚಾಗುವ ಭೀತಿ ಸ್ಥಳೀಯರಲ್ಲಿ ಆವರಿಸಿದೆ. 

ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಟೆರ್ರಾ ಫಾರಂ ಹಾಗೂ ಎಂಎಸ್‌ಜಿಪಿ ಘಟಕಗಳ ಸುತ್ತಲೂ ಸುಮಾರು 15ಕ್ಕೂ ಹೆಚ್ಚು ದೊಡ್ಡ ಗ್ರಾಮಗಳು ಹಾಗೂ 20ಕ್ಕೂ ಹೆಚ್ಚು ಸಣ್ಣ ಗ್ರಾಮಗಳಿದ್ದು, ಅಂದಾಜು 8 -10 ಸಾವಿರ ಜನಸಂಖ್ಯೆ ಇದೆ. ಎರಡೂ ಕಸದ ಘಟಕಗಳಿಂದಾಗಿ ಸಮಸ್ಯೆ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ ಎಂದು ಗುಂಡ್ಲಹಳ್ಳಿ ನಿವಾಸಿ ಮುನಿಮಾರಪ್ಪ 'ದ ಫೆಡರಲ್ ಕರ್ನಾಟಕ'ದ ಬಳಿ ಆತಂಕ ತೋಡಿಕೊಂಡರು.

ಅನುಮತಿ ನೀಡಲ್ಲ, ಹೋರಾಟಕ್ಕೆ ಸಿದ್ಧ

"ದಶಕಗಳಿಂದ ಬೆಂಗಳೂರಿನ ತ್ಯಾಜ್ಯ ತಂದು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಗರೇನಹಳ್ಳಿ ಬಳಿ ಸುರಿಯಲಾಗುತ್ತಿದೆ. ಈ ತ್ಯಾಜ್ಯ ಘಟಕದಿಂದ ಈಗಾಗಲೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆ ಎದುರಾಗಿದೆ. ಈ ಕುರಿತು ಹಲವು ಬಾರಿ ನೋಟಿಸ್‌ ನೀಡಿದ್ದರೂ ಸಮರ್ಪಕ ಉತ್ತರ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಸ್ಥಗಿತವಾಗಿರುವ ಟೆರ್ರಾಫಾರಂ ಘಟಕವನ್ನು ಪುನರ್‌ ಆರಂಭಿಸಬೇಕು ಹೊರಟಿರುವುದು ಸಹಿಸಲ್ಲ. ಘಟಕ ಆರಂಭಿಸಲು ಯಾವುದೇ ಕಾರಣಕ್ಕೂ ಪಂಚಾಯಿತಿಯಿಂದ ಅನುಮತಿ ನೀಡುವುದಿಲ್ಲ. ಈ ಕುರಿತು ಎಲ್ಲಾ ಸದಸ್ಯರು ಸೇರಿ ಶಾಸಕರ ನೇತೃತ್ವದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಘಟಕ ಆರಂಭಿಸದಂತೆ ಮನವಿ ಮಾಡಲಾಗುವುದು. ಒಂದು ವೇಳೆ ಸರ್ಕಾರ ಘಟಕ ಪ್ರಾರಂಭಿಸಿದರೆ ಬೃಹತ್‌ ಹೋರಾಟ ನಡೆಸಲಾಗುವುದು" ಎಂದು ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರಸಮ್ಮ"ದ ಫೆಡರಲ್‌ ಕರ್ನಾಟಕ' ಕ್ಕೆ ತಿಳಿಸಿದರು.

ಘಟಕ ಸ್ಥಾಪಿಸಿದರೆ ಆಹೋರಾತ್ರಿ ಧರಣಿ 

ದೊಡ್ಡಬಳ್ಳಾಪುರ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಗೆ ಎರಡು ತ್ಯಾಜ್ಯ ಘಟಕಗಳನ್ನು ಮಂಜೂರು ಮಾಡುವ ಮೂಲಕ ರಾಜ್ಯ ಸರ್ಕಾರ ಸುಮಾರು 10 ಸಾವಿರ ಜನರಿಗೆ ಅನಾರೋಗ್ಯ ಭಾಗ್ಯ ನೀಡಿದೆ. 2008 ರಲ್ಲಿ ಗುಂಡ್ಲಹಳ್ಳಿ ಸಮೀಪ ಟೆರ್ರಾ ಫಾರಂ ಘಟಕ ಸ್ಥಾಪಿಸಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ನಾನಾ ಸಮಸ್ಯೆಗಳಿಗೆ ಒಳಗಾದ ಹಿನ್ನೆಲೆ ಪ್ರತಿಭಟನೆಗಳು ತೀವ್ರಗೊಳಿಸಿದ್ದೆವು. ಟೆರ್ರಾ ಫಾರಂ ಸುತ್ತಲಿನ ಗ್ರಾಮಗಳ ಜನರ ಪ್ರತಿಭಟನೆಗೆ ಹೆದರಿದ ರಾಜ್ಯ ಸರ್ಕಾರ 2014 ರಲ್ಲಿ ಘಟಕವನ್ನು ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಆರಂಭಿಸಲು ಸಿದ್ಧತೆ ನಡೆಸಿದೆ. ಒಂದೇ ಪಂಚಾಯಿತಿಗೆ ಎರಡು ತ್ಯಾಜ್ಯ ಘಟಕಗಳನ್ನು ನೀಡುವ ಮೂಲಕ ಸರ್ಕಾರ ಹಳ್ಳಿಗರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಮತ್ತೊಮ್ಮೆ ಘಟಕ ಸ್ಥಾಪಿಸಿದರೆ ಆಹೋರಾತ್ರಿ ಧರಣಿ ಮಾಡಲಾಗುವುದು ಎಂದು  ಗುಂಡ್ಲಹಳ್ಳಿ ಹನುಮಂತರಾಯಪ್ಪ ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.

ಜಲಮೂಲಗಳು ಮತ್ತಷ್ಟು ಕಲುಷಿತ  

ಎಂಎಸ್‌ಜಿಪಿ ತ್ಯಾಜ್ಯ ವಿಲೇವಾರಿ ಘಟಕದ ಸುತ್ತಲಿನ ಚಿಗರೇನಹಳ್ಳಿ, ಬೊಮ್ಮಹಳ್ಳಿ, ಗುಂಡ್ಲಹಳ್ಳಿ, ತಣ್ಣೀರನಹಳ್ಳಿ, ಮೂಡ್ಲ ಕಾಳೇನಹಳ್ಳಿ, ಖಾಲಿಪಾಳ್ಯ, ಮಂಕಳಾಲ ಹಾಗೂ ಕಾಡತಿಪ್ಪೂರು ಸೇರಿದಂತೆ ಕೊರಟಗೆರೆ ಗಡಿಯಲ್ಲಿರುವ ಮಾವತ್ತೂರು ಕೆರೆವರೆಗಿನ ಜಲಮೂಲಗಳು ಕಲುಷಿತವಾಗಿವೆ.

ಪ್ರತಿ ಮಳೆಗಾಲಯದಲ್ಲೂ ತ್ಯಾಜ್ಯ ಘಟಕದ ರಾಸಾಯನಿಕ‌ ಮಿಶ್ರಿತ ನೀರು ಉತ್ತರ ಭಾಗದಲ್ಲಿರುವ ಬೊಮ್ಮನಹಳ್ಳಿ ಕೆರೆಗೆ ಹರಿದು, ಅಲ್ಲಿಂದ ತಣ್ಣೀರನಹಳ್ಳಿ, ಕಾಡತಿಪ್ಪೂರು, ಅಂಕೋನಹಳ್ಳಿ ಕೆರೆಗಳಿಗೆ ಹರಿದು ಬೈರಗೊಂಡ್ಲು ಹಳ್ಳದ ಮೂಲಕ ಮಾವತ್ತೂರು ಕೆರೆ ಸೇರುತ್ತಿದೆ. ಈ ಜಲಮೂಲಗಳ ಮೂಲಕ ಕಲುಷಿತ‌ ನೀರು ಅಂತರ್ಜಲ ಹೊಕ್ಕುತ್ತಿದೆ. ಸುಮಾರು 30 ಕಿ.ಮೀ.ವರೆಗೂ ಅಂತರ್ಜಲ ಕಲುಷಿತವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಟೆರ್ರಾ ಫಾರಂ ಪುನರಾರಂಭಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Tags:    

Similar News