Judicial Activism| 92ರ ವೃದ್ಧೆ ಬಳಿಯೇ ತೆರಳಿ ಲಂಡನ್‌ ವಾಸಿ ಪುತ್ರನಿಂದ ನ್ಯಾಯ ಒದಗಿಸಿದ ನ್ಯಾಯಾಧೀಶರು!

92 ವರ್ಷದ ವೃದ್ಧೆಯೊಬ್ಬರ ಆಸ್ತಿ ವಿವಾದ ಬಗೆಹರಿಸಲು ಸ್ವತಃ ನ್ಯಾಯಾಧೀಶರೇ ಮುಂದಾಗಿ, ಲಂಡನ್‌ನಲ್ಲಿದ್ದ ಆಕೆಯ ಮಗನೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ದಶಕದ ಸಮಸ್ಯೆಗೆ ಮುಕ್ತಿ ನೀಡಿದರು.

Update: 2025-12-21 02:30 GMT
Click the Play button to listen to article

"ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಿಸಿದಂತೆ" ಎಂಬ ಮಾತು ಕಾನೂನು ಜಗತ್ತಿನಲ್ಲಿ ಅತ್ಯಂತ ಪ್ರಚಲಿತ. ಅದರಲ್ಲೂ ಜೀವನದ ಸಂಜೆಯ ಹೊತ್ತಿನಲ್ಲಿರುವ ಹಿರಿಯ ಜೀವಗಳಿಗೆ, ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತುವುದೇ ಒಂದು ದೊಡ್ಡ ಶಿಕ್ಷೆಯಾಗಿ ಪರಿಣಮಿಸುತ್ತದೆ. ದೈಹಿಕ ಅಶಕ್ತತೆ, ಮಾನಸಿಕ ಒತ್ತಡ ಮತ್ತು ಸುದೀರ್ಘ ಕಾನೂನು ಹೋರಾಟದ ದಣಿವು ಅವರ ಬದುಕಿನ ನೆಮ್ಮದಿಯನ್ನೇ ಕಸಿದುಕೊಳ್ಳುತ್ತದೆ.

ಇಂತಹ ಸನ್ನಿವೇಶದಲ್ಲಿ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕಂಡುಬಂದ ತಂತ್ರಜ್ಞಾನ ಮತ್ತು ಮಾನವೀಯತೆಯ ಸಮ್ಮಿಲನವು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಭರವಸೆಯ ಕಿರಣವನ್ನು ಮೂಡಿಸಿದೆ. ರಾಮನಗರದಲ್ಲಿ ನಡೆದ ಘಟನೆಯು ಕೇವಲ ಒಂದು ಪ್ರಕರಣದ ಇತ್ಯರ್ಥವಲ್ಲ, ಬದಲಾಗಿ ಆಧುನಿಕ ತಂತ್ರಜ್ಞಾನವು ತ್ವರಿತ ನ್ಯಾಯದಾನಕ್ಕೆ ಹೇಗೆ 'ಸಂಜೀವಿನಿ'ಯಾಗಬಲ್ಲದು ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ರಾಮನಗರದಲ್ಲಿ ನಡೆದ ಲೋಕಅದಾಲತ್ ಮಾನವೀಯತೆ ಮತ್ತು ತಂತ್ರಜ್ಞಾನದ ಅಪರೂಪದ ಸಂಗಮಕ್ಕೆ ಸಾಕ್ಷಿಯಾಯಿತು. 92 ವರ್ಷದ ವೃದ್ಧೆಯೊಬ್ಬರ ಆಸ್ತಿ ವಿವಾದವನ್ನು ಬಗೆಹರಿಸಲು ಸ್ವತಃ ನ್ಯಾಯಾಧೀಶರೇ ಮುಂದಾಗಿ, ಲಂಡನ್‌ನಲ್ಲಿದ್ದ ಆಕೆ ಮಗನೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕ ಕಲ್ಪಿಸಿ, ದಶಕಗಳ ಸಮಸ್ಯೆಗೆ ಮುಕ್ತಿ ನೀಡಿದರು. ಈ ಘಟನೆ ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.

2019ರಲ್ಲಿ ದಾಖಲಾಗಿದ್ದ ಆಸ್ತಿ ವಿಭಾಗದ ದಾವೆಯೊಂದರಲ್ಲಿ ಅರ್ಜಿದಾರರು ಬರೋಬ್ಬರಿ 92 ವರ್ಷದ ವೃದ್ಧೆ.  ಗಿರಿಜಾ ಎಂಬವರಿಗೆ ಪ್ರತಿವಾದಿ ಬೇರಾರೂ ಆಗಿರದೆ ಲಂಡನ್‌ನಲ್ಲಿ ನೆಲೆಸಿರುವ ಅವರ ಮಗನೇ ಆಗಿದ್ದನು. ವೃದ್ಧ ತಾಯಿಗೆ ನ್ಯಾಯಾಲಯಕ್ಕೆ ಪದೇ ಪದೇ ಅಲೆದಾಡುವ ಶಕ್ತಿಯಿರಲಿಲ್ಲ ಮತ್ತು ಲಂಡನ್‌ನಲ್ಲಿದ್ದ ಮಗನಿಗೆ ಪದೇ ಪದೇ ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ಸಾಂಪ್ರದಾಯಿಕ ವಿಧಾನದಲ್ಲಿ ಈ ಪ್ರಕರಣ ಮುಂದುವರಿದಿದ್ದರೆ, ತೀರ್ಪು ಬರುವ ಹೊತ್ತಿಗೆ ಅರ್ಜಿದಾರರು ಇನ್ನೆಷ್ಟು ವರ್ಷಗಳು ಕಾಯಬೇಕಿತ್ತೋ ಏನೋ! ಈ ಹಂತದಲ್ಲಿ ನ್ಯಾಯಾಂಗ ವ್ಯವಸ್ಥೆಯು ಯಾಂತ್ರಿಕವಾಗಿ ವರ್ತಿಸದೆ, ಮಾನವೀಯ ನೆಲೆಗಟ್ಟಿನಲ್ಲಿ ಯೋಚಿಸಿದ್ದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿತು.

ತಂತ್ರಜ್ಞಾನದ ಮೂಲಕ ವಿಚಾರಣೆ

ಪ್ರಕರಣದಲ್ಲಿ ನ್ಯಾಯಾಧೀಶರು ಮತ್ತು ರಾಜಿ ಸಂಧಾನಕಾರರು ತೆಗೆದುಕೊಂಡ ನಿರ್ಧಾರ ಕ್ರಾಂತಿಕಾರಿಯಾಗಿತ್ತು. "ಕಕ್ಷಿದಾರರು ನ್ಯಾಯಾಲಯಕ್ಕೆ ಬರಲಾಗದಿದ್ದರೆ, ನ್ಯಾಯಾಲಯವೇ ತಂತ್ರಜ್ಞಾನದ ಮೂಲಕ ಅವರನ್ನು ತಲುಪಬೇಕು" ಎಂಬ ನಿಲುವಿಗೆ ಬಂದರು.

'ವಿಡಿಯೋ ಕಾನ್ಫರೆನ್ಸ್' ತಂತ್ರಜ್ಞಾನವನ್ನು ಬಳಸಿಕೊಂಡು, ಲಂಡನ್‌ನಲ್ಲಿದ್ದ ಮಗನನ್ನು ವರ್ಚುವಲ್ ಆಗಿ ಸಂಪರ್ಕಿಸಲಾಯಿತು. ಇದು ಕೇವಲ ಒಂದು ವಿಡಿಯೋ ಕರೆಯಾಗಿರಲಿಲ್ಲ. ಇದು ನ್ಯಾಯಾಲಯದ ಅಧಿಕೃತ ಕಲಾಪವಾಗಿತ್ತು. ಸ್ಕ್ರೀನ್ ಮೇಲೆ ಮಗ, ನ್ಯಾಯಾಲಯದ ಸಭಾಂಗಣದಲ್ಲಿ ತಾಯಿ ಮತ್ತು ಮಧ್ಯದಲ್ಲಿ ನ್ಯಾಯಾಧೀಶರು ಹಾಗೂ ಸಂಧಾನಕಾರರು.

ಪರಸ್ಪರ ಮುಖಾಮುಖಿಯಾಗಿ ಮಾತನಾಡಲು ಅವಕಾಶ ಕಲ್ಪಿಸಿದಾಗ, ಕೇವಲ ಕಾನೂನಿನ ಅಂಶಗಳಷ್ಟೇ ಅಲ್ಲದೆ, ತಾಯಿ-ಮಗನ ನಡುವಿನ ಭಾವನಾತ್ಮಕ ಎಳೆಗಳೂ ಗಟ್ಟಿಯಾದವು. ಸಂಧಾನಕಾರರ ಮಧ್ಯಸ್ಥಿಕೆಯಲ್ಲಿ ಇಬ್ಬರ ನಡುವಿನ ಮನಸ್ತಾಪಗಳು ಕರಗಿದವು. ಅಂತಿಮವಾಗಿ ಪ್ರಕರಣವು ರಾಜಿ ಮೂಲಕ ಸುಖಾಂತ್ಯವಾಯಿತು.

ಪ್ರಕರಣ ಹಿನ್ನೆಲೆ

ಪಿ. ಗಿರಿಜಾ 2019ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು . 2006ರಲ್ಲಿ ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಲಾಗಿದೆ ಎಂಬುದು ಗಿರಿಜಾ ಅವರ ಆರೋಪವಾಗಿತ್ತು. ಗಿರಿಜಾ ಅವರಿಗೆ 92 ವರ್ಷ ವಯಸ್ಸಾಗಿರುವುದರಿಂದ ಮತ್ತು ದೈಹಿಕವಾಗಿ ಅಶಕ್ತರಾಗಿದ್ದರಿಂದ ಅವರು ನ್ಯಾಯಾಲಯದ ಕೊಠಡಿಯೊಳಗೆ ಬರುವುದು ಕಷ್ಟಕರವಾಗಿತ್ತು.

ಅರಿತ ನ್ಯಾಯಾಧೀಶರು, ತಮ್ಮ ಸಾಂಪ್ರದಾಯಿಕ ಪೀಠದಿಂದ ಎದ್ದು ಬಂದು, ನ್ಯಾಯಾಲಯದ ಆವರಣದಲ್ಲಿ ಕಾರಿನಲ್ಲೇ ಕುಳಿತಿದ್ದ ವೃದ್ಧೆಯ ಬಳಿಗೆ ತೆರಳಿದರು. ಅಲ್ಲಿಯೇ ಅವರ ಅಹವಾಲು ಆಲಿಸಿ, ಕಾನೂನು ಪ್ರಕ್ರಿಯೆಗಳನ್ನು ನಡೆಸಿಕೊಡುವ ಮೂಲಕ ನ್ಯಾಯಾಂಗದ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದರು.

ಈ ಘಟನೆ ಏಕೆ ಮಹತ್ವದ್ದು?

ಕಾಲ ಮತ್ತು ವೆಚ್ಚದ ಉಳಿತಾಯ

ಸಾಮಾನ್ಯವಾಗಿ ಅನಿವಾಸಿ ಭಾರತೀಯರು ಭಾಗಿಯಾಗಿರುವ ಪ್ರಕರಣಗಳಲ್ಲಿ, ಅವರು ಭಾರತಕ್ಕೆ ಬರುವವರೆಗೂ ಪ್ರಕರಣ ಮುಂದೂಡಲ್ಪಡುತ್ತದೆ. ವಿಮಾನದ ವೆಚ್ಚ, ರಜೆಗಳ ಸಮಸ್ಯೆ ಮತ್ತು ಸಮಯದ ಅಭಾವದಿಂದಾಗಿ ವರ್ಷಗಳು ಉರುಳುತ್ತವೆ. ಆದರೆ, ಇಲ್ಲಿ ತಂತ್ರಜ್ಞಾನವು ಲಂಡನ್ ಮತ್ತು ರಾಮನಗರದ ನಡುವಿನ ಸಾವಿರಾರು ಮೈಲುಗಳ ಅಂತರವನ್ನು ಕ್ಷಣಾರ್ಧದಲ್ಲಿ ಅಳಿಸಿಹಾಕಿತು. ಕಕ್ಷಿದಾರರಿಗೆ ಲಕ್ಷಾಂತರ ರೂಪಾಯಿ ಪ್ರಯಾಣದ ವೆಚ್ಚ ಉಳಿಯಿತು, ಮತ್ತು ಅದಕ್ಕಿಂತ ಮುಖ್ಯವಾಗಿ ಅಮೂಲ್ಯವಾದ ಸಮಯ ಉಳಿಯಿತು.


ಇಳಿ ವಯಸ್ಸಿಗೆ ನೆಮ್ಮದಿ

92 ವರ್ಷ ಗಿರಿಜಾ ಅವರಿಗೆ ಈ ಇಳಿವಯಸ್ಸಿನಲ್ಲಿ ಬೇಕಾಗಿದ್ದು ಆಸ್ತಿಗಿಂತ ಹೆಚ್ಚಾಗಿ ನೆಮ್ಮದಿ ಮತ್ತು ಮಗನೊಂದಿಗಿನ ಬಾಂಧವ್ಯ. ಒಂದು ವೇಳೆ ಈ ಪ್ರಕರಣ ಸಿವಿಲ್ ಕೋರ್ಟ್‌ನ ಸಾಮಾನ್ಯ ಪ್ರಕ್ರಿಯೆಯಲ್ಲೇ ನಡೆದಿದ್ದರೆ, ತೀರ್ಪು ಬರುವಷ್ಟರಲ್ಲಿ ಆಕೆಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತವಾಗುತ್ತಿದ್ದರು. ತಂತ್ರಜ್ಞಾನದ ಬಳಕೆಯು ಆಕೆಗೆ ತ್ವರಿತ ನ್ಯಾಯ ಒದಗಿಸುವ ಮೂಲಕ ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿತು.

ನ್ಯಾಯಾಂಗದಲ್ಲಿ ತಂತ್ರಜ್ಞಾನದ ಅಳವಡಿಕೆ

ದೇಶದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಇತ್ತೀಚಿನ ದಿನಗಳಲ್ಲಿ ಇ-ಕೋರ್ಟ್ ಮತ್ತು ವರ್ಚುವಲ್ ವಿಚಾರಣೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಕೋವಿಡ್-19 ಸಮಯದಲ್ಲಿ ಅನಿವಾರ್ಯವಾಗಿ ಜಾರಿಗೆ ಬಂದ ಈ ಪದ್ಧತಿ, ಈಗ ನ್ಯಾಯದಾನದ ಅವಿಭಾಜ್ಯ ಅಂಗವಾಗುತ್ತಿದೆ. ರಾಮನಗರದ ಈ ಪ್ರಕರಣವು, ಕೆಳಹಂತದ ನ್ಯಾಯಾಲಯಗಳಲ್ಲೂ ತಂತ್ರಜ್ಞಾನವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಲೋಕ್ ಅದಾಲತ್‌ನ ಶಕ್ತಿ

ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯಾಗಿ ಲೋಕಅದಾಲತ್ ಎಷ್ಟು ಶಕ್ತಿಯುತವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಇಲ್ಲಿ ಸೋಲು-ಗೆಲುವಿನ ಪ್ರಶ್ನೆಗಿಂತ 'ರಾಜಿ' ಮತ್ತು 'ಸಮನ್ವಯ'ಕ್ಕೆ ಪ್ರಾಮುಖ್ಯತೆ ಇರುತ್ತದೆ. ತಂತ್ರಜ್ಞಾನವು ಈ ಸಂಧಾನ ಪ್ರಕ್ರಿಯೆಯನ್ನು ಸುಗಮಗೊಳಿಸಿತು. ಮುಖತಃ ಭೇಟಿಯಾಗದಿದ್ದರೂ, ವರ್ಚುವಲ್ ಆಗಿ ಭಾವನೆಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿತು.

ಮಾಜಿ ಕ್ರಿಕೆಟಿಗ ಸದಾನಂದ ವಿಶ್ವನಾಥ್ ಮೊಗದಲ್ಲೂ ಸಂತಸ!

ಈ ಬಾರಿಯ ಲೋಕ್ ಅದಾಲತ್‌ನಲ್ಲಿ ಗಮನ ಸೆಳೆದ ಮತ್ತೊಂದು ಭಾರತದ ಮಾಜಿ ಕ್ರಿಕೆಟಿಗ ಸದಾನಂದ ವಿಶ್ವನಾಥ್ ಅವರದ್ದು. 2024ರಲ್ಲಷ್ಟೇ ದಾಖಲಾಗಿದ್ದ ಮಾಜಿ ಕ್ರಿಕೆಟಿಗ ಸದಾನಂದ ವಿಶ್ವನಾಥ್ ಅವರ ಆಸ್ತಿ ವಿವಾದ ಪ್ರಕರಣವು ದಾಖಲಾದ ಒಂದೇ ವರ್ಷದಲ್ಲಿ (2024-25) ರಾಜಿ ಸಂಧಾನದ ಮೂಲಕ ಸುಖಾಂತ್ಯ ಕಂಡಿದೆ.


ಮಾಜಿ ವಿಕೆಟ್ ಕೀಪರ್ ಸದಾನಂದ ವಿಶ್ವನಾಥ್ ಮತ್ತು ಅವರ ಬಾಡಿಗೆದಾರರಾದ ಡಿ. ಚಂದ್ರಶೇಖರ್ ಮತ್ತು ಇತರರ ನಡುವೆ ಅಪಾರ್ಟ್‌ಮೆಂಟ್‌ ತೆರವುಗೊಳಿಸುವ ವಿಚಾರವಾಗಿ ವಿವಾದವಿತ್ತು. ವಿಶ್ವನಾಥ್ ಅವರು ತಮ್ಮ ನಿವಾಸದಲ್ಲಿ ನೆಲೆಸಿದ್ದ ಬಾಡಿಗೆದಾರರನ್ನು ಖಾಲಿ ಮಾಡಿಸಲು ಕ್ರಮ ಕೈಗೊಂಡಿದ್ದರು. ಇದನ್ನು ಪ್ರಶ್ನಿಸಿ ಬಾಡಿಗೆದಾರರು ೨೦೨೪ರಲ್ಲಿ ದಾವೆ ಹೂಡಿದ್ದರು. ಬಾಡಿಗೆ ಮತ್ತು ಎವಿಕ್ಷನ್ ಕಾಯ್ದೆಯಡಿ ಇಂತಹ ಪ್ರಕರಣಗಳು ಸಾಮಾನ್ಯವಾಗಿ ವರ್ಷಗಟ್ಟಲೆ ಎಳೆಯುತ್ತವೆ. ನ್ಯಾಯಾಲಯದಲ್ಲಿ ದೀರ್ಘಕಾಲ ವಾದ-ಪ್ರತಿವಾದ ನಡೆಸುವ ಬದಲು, ಉಭಯ ಪಕ್ಷಕಾರರು ಲೋಕ ಅದಾಲತ್ ಮೂಲಕ ರಾಜಿ ಮಾಡಿಕೊಳ್ಳಲು ಮುಂದಾದರು.

ರಾಜಿ ಸೂತ್ರ ಮತ್ತು 35 ಲಕ್ಷ ರೂ. ಪರಿಹಾರ

ನ್ಯಾಯಾಲಯದ ಸಂಧಾನಕಾರರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ, ಪ್ರತಿಷ್ಠೆಯನ್ನು ಬದಿಗಿಟ್ಟು ಪ್ರಾಯೋಗಿಕ ಪರಿಹಾರ ಕಂಡುಕೊಳ್ಳಲಾಯಿತು. ಸದಾನಂದ ವಿಶ್ವನಾಥ್ ಅವರು ಬಾಡಿಗೆದಾರರಿಂದ ಪಡೆದಿದ್ದ ಭೋಗ್ಯದ ಮೊತ್ತವನ್ನು ಹಿಂತಿರುಗಿಸಲು ಒಪ್ಪಿಗೆ ಸೂಚಿಸಿದರು. ಸಂಧಾನದಂತೆ ಅಂದಾಜು 35 ಲಕ್ಷ ರೂ.ಗಳನ್ನು ಬಾಡಿಗೆದಾರರಿಗೆ ಪಾವತಿಸಲು ತೀರ್ಮಾನಿಸಲಾಯಿತು. ಹಣಕಾಸಿನ ಇತ್ಯರ್ಥಕ್ಕೆ ಪ್ರತಿಯಾಗಿ, ಬಾಡಿಗೆದಾರರಾದ ಡಿ. ಚಂದ್ರಶೇಖರ್ ಅವರು ತಕರಾರು ತೆಗೆಯದೆ ಮನೆ ಖಾಲಿ ಮಾಡಿ, ಸದಾನಂದ ವಿಶ್ವನಾಥ್ ಅವರ ವಶಕ್ಕೆ ನೀಡಲು ಒಪ್ಪಿಗೆ ನೀಡಿದರು.

2024ರಲ್ಲಿ ದಾಖಲಾದ ಪ್ರಕರಣವೊಂದು ಅದೇ ವರ್ಷ ಅಥವಾ ಮುಂದಿನ ಒಂದು ವರ್ಷದೊಳಗೆ ಇತ್ಯರ್ಥವಾಗುವುದು ಭಾರತೀಯ ಸಿವಿಲ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪರೂಪ. ಲೋಕ ಅದಾಲತ್ ಇಲ್ಲದಿದ್ದರೆ, ಈ ಪ್ರಕರಣವು ಕೆಳ ಹಂತದ ನ್ಯಾಯಾಲಯದಿಂದ ಹೈಕೋರ್ಟ್‌ವರೆಗೂ ಹೋಗಿ ದಶಕಗಳ ಕಾಲ ನಡೆಯುವ ಸಾಧ್ಯತೆಯಿತ್ತು. ವಿಶ್ವನಾಥ್ ಅವರ ಪ್ರಕರಣವು ಸಾರ್ವಜನಿಕರಿಗೆ "ಪ್ರತಿಷ್ಠೆ ಬಿಟ್ಟರೆ ಲಾಭ ಕಟ್ಟಿಟ್ಟ ಬುತ್ತಿ" ಎಂಬ ಸಂದೇಶವನ್ನು ರವಾನಿಸಿದೆ.

ನ್ಯಾಯಮೂರ್ತಿ ಜ|  ಅನು ಶಿವರಾಮ್‌

ನ್ಯಾಯಮೂರ್ತಿ ಅನು ಶಿವರಾಮನ್ ಅವರ ಪಾತ್ರ

ನ್ಯಾಯಮೂರ್ತಿ ಅನು ಶಿವರಾಮನ್ ಅವರ ನೇತೃತ್ವದಲ್ಲಿ ಕೈಗೊಂಡ ಕ್ರಮಗಳು ಶ್ಲಾಘನೀಯ. ಲೋಕಅದಾಲತ್‌ ಕೇವಲ ಸಂಖ್ಯೆಗಳ ಏರಿಕೆಯಲ್ಲ, ಬದಲಾಗಿ ಗುಣಾತ್ಮಕ ನ್ಯಾಯದಾನಕ್ಕೆ ಆದ್ಯತೆ ನೀಡಲಾಗಿದೆ. ಲಕ್ಷಾಂತರ ಕುಟುಂಬಗಳು, ವಾಹನ ಸವಾರರು ಮತ್ತು ಆಸ್ತಿ ಮಾಲೀಕರು ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ತಂತ್ರಜ್ಞಾನದ ಬಳಕೆ, ವ್ಯಾಪಕ ಪ್ರಚಾರ ಮತ್ತು ವಕೀಲರ ಸಹಕಾರದಿಂದ ಇಂತಹ ಬೃಹತ್ ಸಾಧನೆ ಸಾಧ್ಯವಾಗಿದೆ ಎಂದು ನ್ಯಾ. ಅನುಶಿವರಾಮನ್ ಅಭಿಪ್ರಾಯಪಟ್ಟಿದ್ದಾರೆ.‌

92 ವರ್ಷದ ಅಜ್ಜಿಯ ಮುಖದಲ್ಲಿ ಮೂಡಿದ ನೆಮ್ಮದಿಯ ನಗು, ಮಾಜಿ ಕ್ರಿಕೆಟಿಗ ಸದಾನಂದ ವಿಶ್ವನಾಥ್ ಅವರಿಗೆ ಸಿಕ್ಕ ತ್ವರಿತ ನ್ಯಾಯವು, ಸಾಮಾನ್ಯ ಜನರಲ್ಲಿ ಲೋಕ ಅದಾಲತ್ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ. ಲೋಕ ಅದಾಲತ್‌ನಲ್ಲಿ 1.04 ಕೋಟಿ ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥವಾಗಿರುವುದು ಸಣ್ಣ ವಿಷಯವಲ್ಲ. ಇದು ನ್ಯಾಯಾಲಯದ ಹೊರಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗಿದೆ. "ತ್ವರಿತ ನ್ಯಾಯ, ಕಡಿಮೆ ವೆಚ್ಚ ಮತ್ತು ಶಾಶ್ವತ ಪರಿಹಾರ" ಎಂಬ ಲೋಕ್ ಅದಾಲತ್‌ನ ಧ್ಯೇಯವಾಕ್ಯವು ಈ ಮೂಲಕ ಸಾಕಾರಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರು ಈ ವ್ಯವಸ್ಥೆಯ ಲಾಭ ಪಡೆಯಲು ಈ ಘಟನಾವಳಿಗಳು ಪ್ರೇರಣೆಯಾಗಲಿವೆ.

Tags:    

Similar News