ಸಂಡೂರು ʼರಾಮನ ದುರ್ಗʼಕ್ಕೆ ಗಂಡಾಂತರ: ಭದ್ರಾವತಿ ಉಕ್ಕು ಕಾರ್ಖಾನೆ 'ಉಸಿರಿಗೆ' ಹಸಿರು ಬಲಿ?

ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಯು ಬಳ್ಳಾರಿ ಜಿಲ್ಲೆಯ ಹಸಿರು ಶ್ವಾಸಕೋಶದಂತಿರುವ ಸಂಡೂರು ತಾಲೂಕಿನ ರಾಮನದುರ್ಗ ಅರಣ್ಯ ಪ್ರದೇಶದ ಜನರಲ್ಲಿ ಮತ್ತು ಪರಿಸರವಾದಿಗಳಲ್ಲಿ ತೀವ್ರ ನಡುಕ ಹುಟ್ಟಿಸಿದೆ.

Update: 2025-12-11 03:30 GMT
Click the Play button to listen to article

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್‌ಎಲ್‌) ಪುರುಜ್ಜೀವನ ಕುರಿತು ಕೇಂದ್ರ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ಬಳ್ಳಾರಿ ಜಿಲ್ಲೆಯ ಹಸಿರು ಶ್ವಾಸಕೋಶದಂತಿರುವ ಸಂಡೂರು ತಾಲೂಕಿನ ರಾಮನದುರ್ಗ ಅರಣ್ಯ ಪ್ರದೇಶದ ಜನರಲ್ಲಿ ಮತ್ತು ಪರಿಸರವಾದಿಗಳಲ್ಲಿ ತೀವ್ರ ನಡುಕ ಹುಟ್ಟಿಸಿದೆ.

ಅಲ್ಲದೇ, ದೇವದಾರಿಯಲ್ಲಿ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ (ಕೆಐಒಸಿಎಲ್‌) ಗಣಿಗಾರಿಕೆ ನಡೆಸಲು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲಿಯೇ ಇದೀಗ ಮತ್ತೊಂದು ಹೋರಾಟಕ್ಕೆ ಅಣಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಪುನರುಜ್ಜೀವನದ ನೆಪದಲ್ಲಿ ಬಳ್ಳಾರಿಯ ಸಂಡೂರು ಅರಣ್ಯದ ಮೇಲೆ ಗಣಿಗಾರಿಕೆಯ ಕಾರ್ಮೋಡ ಮಾತ್ರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ವಿಐಎಸ್‌ಎಲ್ ಜೀವ ತುಂಬಬೇಕು ನಿಜ. ಆದರೆ, ಅದಕ್ಕಾಗಿ ಬಳ್ಳಾರಿಯ ಶ್ವಾಸಕೋಶದಂತಿರುವ ಸಂಡೂರಿನ ದಟ್ಟ ಕಾಡನ್ನು ಬಲಿ ಕೊಡುವುದು ಎಷ್ಟು ಸರಿ?" ಎಂಬ ಪ್ರಶ್ನೆ ಈಗ ಬಳ್ಳಾರಿ ಜಿಲ್ಲೆಯಾದ್ಯಂತ ಪ್ರತಿಧ್ವನಿಸುತ್ತಿದೆ. ಕೇಂದ್ರ ಸರ್ಕಾರವು ಭದ್ರಾವತಿ ಕಾರ್ಖಾನೆಗೆ ಅಗತ್ಯವಾದ ಕಚ್ಚಾ ಅದಿರನ್ನು ಪೂರೈಸಲು ಸಂಡೂರು ತಾಲೂಕಿನ ರಾಮನದುರ್ಗ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಚಿಂತನೆ ನಡೆಸಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ, ಪರಿಸರವಾದಿಗಳು, ರೈತರು ಮತ್ತು ಸ್ಥಳೀಯ ಹೋರಾಟಗಾರರು ಮತ್ತೆ ರೊಚ್ಚಿಗೆದ್ದಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಮತ್ತೊಂದು "ಪರಿಸರ ಹತ್ಯೆ"ಗೆ ವೇದಿಕೆ ಸಿದ್ಧವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.

ಭದ್ರಾವತಿ ಮತ್ತು ಸಂಡೂರು: ಅಭಿವೃದ್ಧಿ ಮತ್ತು ಅರಣ್ಯದ ನಡುವಿನ ಸಂಘರ್ಷ

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ರಾಜ್ಯದ ಹೆಮ್ಮೆ. ಅದನ್ನು ಉಳಿಸಿಕೊಳ್ಳಬೇಕು ಎಂಬುದು ರಾಜ್ಯದ ಜನರ ಭಾವನೆ. ಆದರೆ, ಅದಕ್ಕೆ ಬೇಕಾದ ಕಚ್ಚಾ ವಸ್ತುವಿಗಾಗಿ ಜೀವವೈವಿಧ್ಯದ ತಾಣವಾದ ರಾಮನದುರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ವಿವಾದದ ಕೇಂದ್ರಬಿಂದುವಾಗಿದೆ. ಈ ಯೋಜನೆಯಡಿ ರಾಮನದುರ್ಗದ ಸುಮಾರು 60 ಕ್ಕೂ ಹೆಚ್ಚಿನ ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಉದ್ದೇಶಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಯೋಜನೆ ಜಾರಿಯಾದರೆ ಬರೋಬ್ಬರಿ 29,400ಕ್ಕೂ ಹೆಚ್ಚು ಬೃಹತ್ ಮರಗಳು ನೇಲಕ್ಕುರುಳಲಿವೆ.

ಪರಿಸರ ಪರಿಣಾಮ ಅಂದಾಜು (ಇಐಎ) ವರದಿಯು 'ರಾಮ ಮತ್ತು ಧರ್ಮ ಮೈನ್ಸ್' ವರದಿಯ ʼಕಟ್ ಅಂಡ್ ಪೇಸ್ಟ್ʼ ಆಗಿದ್ದು, ಕೇವಲ ಕಂಪನಿಯ ಹೆಸರು ಬದಲಿಸಲಾಗಿದೆ. ಪ್ರದೇಶದ ವಾಸ್ತವ ಚಿತ್ರಣವನ್ನು ಮರೆಮಾಚಲಾಗಿದೆ ಎಂಬುದು ಪರಿಸರ ಪ್ರೇಮಿಗಳ ಆರೋಪವಾಗಿದೆ. ಇಐಎ ವರದಿಯಲ್ಲಿ ಎಷ್ಟು ಮರಗಳನ್ನು ಕಡಿಯಲಾಗುತ್ತದೆ ಎಂಬ ಮಾಹಿತಿಯನ್ನು ಮುಚ್ಚಿಡಲಾಗಿದೆ. ಆದರೆ, ಅರಣ್ಯ ಇಲಾಖೆಯ ವರದಿಯ ಪ್ರಕಾರ ಈ ಯೋಜನೆಗಾಗಿ ಸುಮಾರು 29,400 ಮರಗಳನ್ನು ಕಡಿಯಬೇಕಾಗುತ್ತದೆ ಎಂಬ ಆಘಾತಕಾರಿ ಮಾಹಿತಿ ಇದೆ ಎಂದು ಹೇಳಲಾಗಿದೆ. ಈ ಗಣಿಗಾರಿಕೆ ಯೋಜನೆಯು ನಿಜವಾಗಿಯೂ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಲು ನಡೆಯುತ್ತಿದೆಯೇ ಅಥವಾ ಖಾಸಗಿಯವರಿಗೆ ಲಾಭ ಮಾಡಿಕೊಡಲು ನಡೆಯುತ್ತಿದೆಯೇ ಎಂಬ ಅನುಮಾನವನ್ನು ಹೋರಾಟಗಾರರು ವ್ಯಕ್ತಪಡಿಸಿದ್ದಾರೆ. 

ವಯನಾಡು ಮಾದರಿಯ ದುರಂತದ ಭೀತಿ

ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ಭೀಕರತೆ ಇನ್ನೂ ಕಣ್ಣಮುಂದಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಂಡುಬರುವಂತಹ ದಟ್ಟವಾದ ಹಸಿರು ಮತ್ತು ಬೆಟ್ಟಗುಡ್ಡಗಳನ್ನು ಹೊಂದಿರುವ ಸಂಡೂರು, ಬಳ್ಳಾರಿಯ "ಮಲೆನಾಡು" ಎಂದೇ ಖ್ಯಾತಿ ಪಡೆದಿದೆ. ಈಗಾಗಲೇ ದಶಕಗಳ ಅವ್ಯಾಹತ ಗಣಿಗಾರಿಕೆಯಿಂದ ಸಂಡೂರಿನ ಬೆಟ್ಟಗಳು ಜರ್ಜರಿತವಾಗಿವೆ. ಈಗ ರಾಮನದುರ್ಗದಂತಹ ಸೂಕ್ಷ್ಮ ವಲಯದಲ್ಲಿ ಮತ್ತೆ ಯಂತ್ರಗಳು ಸದ್ದು ಮಾಡಿದರೆ, ಭೂಕುಸಿತ ಕಟ್ಟಿಟ್ಟ ಬುತ್ತಿ ಎಂದು ಭೂಗರ್ಭ ವಿಜ್ಞಾನಿಗಳು ಮತ್ತು ಪರಿಸರವಾದಿಗಳು ಎಚ್ಚರಿಸಿದ್ದಾರೆ. ರಾಮನದುರ್ಗ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಗೊಂಡರೆ "ನಾವು ಮತ್ತೊಂದು ವಯನಾಡು ದುರಂತವನ್ನು ಆಹ್ವಾನಿಸುತ್ತಿದ್ದೇವೆ," ಎಂಬುದು ಹೋರಾಟಗಾರರ ಒಕ್ಕೊರಲ ದನಿಯಾಗಿದೆ.

ವಯನಾಡಿನಲ್ಲಿ ಅತಿಯಾದ ಮಾನವ ಹಸ್ತಕ್ಷೇಪದಿಂದ ಭೂಕುಸಿತವಾಯಿತು. ಸಂಡೂರಿನಲ್ಲೂ ಇತ್ತೀಚೆಗೆ ಭೂಕಂಪನದ ಅನುಭವವಾಗಿದೆ. ಇದು ಪ್ರಕೃತಿ ನೀಡುತ್ತಿರುವ ಎಚ್ಚರಿಕೆ ಗಂಟೆ. ಇಲ್ಲಿ ನಿರಂತರ ಗಣಿಗಾರಿಕೆಗೆ ಅವಕಾಶ ನೀಡಿದರೆ, ಮುಂದೊಂದು ದಿನ ವಯನಾಡಿನಲ್ಲಿ ಆದ ಪರಿಸ್ಥಿತಿ ಇಲ್ಲಿಯೂ ಸಂಭವಿಸಬಹುದು. ಮುಂದಿನ ಪೀಳಿಗೆಗೆ ಇಲ್ಲಿನ ಸಂಪನ್ಮೂಲಗಳನ್ನು ಉಳಿಸಬೇಕೇ ಅಥವಾ ಬೇಡವೇ ಎಂದು ಅಧಿಕಾರಿಗಳು ಯೋಚಿಸಬೇಕು ಎಂದು ಹೋರಾಟಗಾರರ ಎಚ್ಚರಿಸಿದ್ದಾರೆ. 

ವನ್ಯಜೀವಿ ಮತ್ತು ಜೀವವೈವಿಧ್ಯಕ್ಕೆ ಕಂಟಕ

ರಾಮನದುರ್ಗ ಅರಣ್ಯವು ಕರಡಿ, ಚಿರತೆ ಮತ್ತು ನವಿಲುಗಳ ಆವಾಸ ಸ್ಥಾನವಾಗಿದೆ. ಗಣಿಗಾರಿಕೆಯಿಂದ ಪ್ರಾಣಿ-ಪಕ್ಷಿಗಳು ನಾಶವಾಗುತ್ತಿವೆ. ಮಲೆನಾಡಿಗಿಂತಲೂ ಅಮೂಲ್ಯವಾದ ಈ ಕಾಡನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಬೇಕೇ ಹೊರತು ಗಣಿಗಾರಿಕೆ ತಾಣವನ್ನಾಗಿ ಅಲ್ಲ. ಅಲ್ಲದೇ, ರಾಮನದುರ್ಗ ಅರಣ್ಯ ಪ್ರದೇಶವು ಅಪರೂಪದ ಔಷಧಿ ಸಸ್ಯಗಳ ತವರು. ಗಣಿಗಾರಿಕೆಯಿಂದ ಇವುಗಳ ಆವಾಸಸ್ಥಾನ ಸಂಪೂರ್ಣ ನಾಶವಾಗಲಿದ್ದು, ಪ್ರಾಣಿಗಳು ನಾಡಿಗೆ ನುಗ್ಗುವ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಲಿದೆ ಎಂಬ ಆತಂಕ ಎದುರಾಗಿದೆ. 

ಧೂಳಿನಿಂದ ನರಕವಾಗಲಿರುವ ಬದುಕು

ಈಗಾಗಲೇ ಸಂಡೂರಿನ ಜನರು ಗಣಿಗಾರಿಕೆಯ ಕೆಂಪು ಧೂಳಿನಿಂದ ಉಸಿರಾಟದ ಸಮಸ್ಯೆ, ಚರ್ಮರೋಗ ಮತ್ತು ಅಸ್ತಮಾದಿಂದ ಬಳಲುತ್ತಿದ್ದಾರೆ. ಹೊಸ ಗಣಿಗಾರಿಕೆ ಆರಂಭವಾದರೆ, ಸುತ್ತಮುತ್ತಲಿನ ರಾಮಘಡ, ಸುಶೀಲಾನಗರ ಸೇರಿದಂತೆ ಹಲವು ಗ್ರಾಮಗಳ ಜನರ ಬದುಕು ಅಕ್ಷರಶಃ ನರಕವಾಗಲಿದೆ. ಕೃಷಿ ಭೂಮಿಗಳ ಮೇಲೆ ಧೂಳು ಕುಳಿತು ಬೆಳೆ ನಾಶವಾಗಲಿದೆ ಎಂಬುದು ರೈತರ ಅಳಲಾಗಿದೆ. ಸುಶೀಲಾನಗರದ 10 ಸಾವಿರ ಜನರಿಗೆ ವೈದ್ಯಕೀಯ ತಪಾಸಣೆ ನಡೆಸಿದಾಗ, ಬಹುತೇಕರು ಕಿಡ್ನಿ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ ಮತ್ತು ಚರ್ಮರೋಗಗಳಿಂದ ಬಳಲುತ್ತಿರುವುದು ಕಂಡುಬಂದಿದೆ. ಆರೋಗ್ಯ ಸಮಸ್ಯೆ ಮಾತ್ರವಲ್ಲದೇ, ಬೆಳೆಯ ಮೇಲೂ ದುಷ್ಪರಿಣಾಮ ಬೀರಿದೆ. ಈ ಹಿಂದೆ ಎಕರೆಗೆ 25 ಕ್ವಿಂಟಾಲ್ ಬೆಳೆ ಬರುತ್ತಿತ್ತು, ಈಗ ಧೂಳಿನಿಂದಾಗಿ ಕೇವಲ 20 ಕ್ವಿಂಟಾಲ್ ಬೆಳೆ ಬರುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. 

ಗಣಿಗಾರಿಕೆಗೆ ಹೋರಾಟಗಾರರ ತೀವ್ರ ವಿರೋಧ 

ಜನಸಂಗ್ರಾಮ ಪರಿಷತ್ ಮತ್ತು ಸ್ಥಳೀಯ ರೈತ ಸಂಘಟನೆಗಳು ಎಚ್‌.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. ಭದ್ರಾವತಿ ಕಾರ್ಖಾನೆ ಉಳಿಯಬೇಕು ಎಂಬ ಕಳಕಳಿ ನಮಗೂ ಇದೆ. ಆದರೆ, ಅದಕ್ಕಾಗಿ ಸಂಡೂರಿನ ಸಮಾಧಿ ಕಟ್ಟಬಾರದು. ಕುಮಾರಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ  ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದರು. ಈಗ ಅವರೇ ಸಂಡೂರಿನ ಕಾಡು ಕಡಿಯಲು ಉತ್ಸುಕರಾಗಿರುವುದು ವಿಪರ್ಯಾಸ. ಪರ್ಯಾಯ ಮಾರ್ಗಗಳನ್ನು ಹುಡುಕಲಿ, ಆದರೆ ನಮ್ಮ ಕಾಡನ್ನು ಮುಟ್ಟಬಾರದು ಎಂದು ಎಚ್ಚರಿಕೆ ನೀಡಲಾಗಿದೆ. 

ರಾಮನದುರ್ಗ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಜನಸಂಗ್ರಾಮ ಪರಿಷತ್ತು ಮುಖಂಡ ಶ್ರೀಶೈಲ್ ಆಲದಹಳ್ಳಿ, ಸಂಡೂರಿನ 60.70 ದಟ್ಟವಾದ ಅರಣ್ಯದ ಪ್ರದೇಶದಲ್ಲಿ ಗಣಿಗಾರಿಕೆಯನ್ನು ವಿಎಲ್ಎಸ್ಎಲ್‌ಗೆ ಕೊಡುವ ಬಗ್ಗೆ ಮತ್ತೆ ಚರ್ಚೆಗೆ ಬಂದಿದೆ. ಎಕೋಮೆನ್ ಮೈನಿಂಗ್ ಕಂಪನಿಯವರು ಇಐಎ.ವರದಿಯನ್ನು ತಯಾರು ಮಾಡಿದ್ದಾರೆ. ಇಐಎ ವರದಿಯಲ್ಲಿ ಎಲ್ಲಾ ಆಸತ್ಯವನ್ನು ಸೇರಿಸಲಾಗಿದೆ. ರಾಮನದುರ್ಗ ಅರಣ್ಯ ಪ್ರದೇಶದಲ್ಲಿ ಈ ಪ್ರದೇಶದಲ್ಲಿ ಕೇವಲ ಜನರು ಬದುಕುವುದಿಲ್ಲ. ಜನರೊಂದಿಗೆ ವನ್ಯಜೀವಿಗಳು ಬದುಕುತ್ತಿವೆ. ಗಣಿಗಾರಿಕೆಯಿಂದ ಜನ-ಜಾನುವಾರು, ವನ್ಯಜೀವಿಗಳಿಗೆ ಸಮಸ್ಯೆಯಾಗಲಿದೆ. ಅಲ್ಲದೇ, ನೀರಿನ ಮೂಲ, ಆಯುರ್ವೇದ ಗಿಡಮೂಲಿಕೆಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. 

 ಎನ್ಎಮ್‌ಡಿಸಿ  ಕಂಪನಿಯು ಒಟ್ಟು 17 ಕೋಟಿ ಮೆಟ್ರಿಕ್ ಟನ್ ಪ್ರೊಡಕ್ಷನ್ ಮಾಡುತ್ತಿದ್ದು ಇದರಲ್ಲಿ ಕೆಓಐಸಿಎಲ್ ಮತ್ತು ಸೇಲ್ ಕಂಪನಿಗಳಿಗೆ ಅದಿರು ನೀಡಬಹುದು. ಮತ್ತೆ ಯಾಕೆ ಗಿಡಗಳನ್ನು ಮರಗಳನ್ನು ಕಡೆದು ಪರಿಸರ ಹಾನಿಮಾಡಬೇಕು. ಮುಂದಿನ ಪಿಳೀಗೆಗೆ ಸಂಪತ್ತು ಬೇಡವೇ? ಅರಣ್ಯವನ್ನು ಕಡಿದು ಗಣಿಗಾರಿಕೆ ಮಾಡಿದರೆ ಭೂ ಕುಸಿತವಾಗುತ್ತದೆ ಎಂದು ಅರಣ್ಯ ಇಲಾಖೆಯವರು ವರದಿ ನೀಡಿದ್ದಾರೆ. ದಟ್ಟ ಅರಣ್ಯವನ್ನು ಕಡಿದರೆ ಮುಂದಿನ ಪೀಳಿಗೆಯವರು ಏನು ಮಾಡಬೇಕು? ಹೀಗಾಗಿ ಗಣಿಗಾರಿಕೆಗೆ ಸಂಪೂರ್ಣ ವಿರೋಧ ಇದೆ ಎಂದು ಹೇಳಿದರು. 

ಯಶವಂತನಗರ ಗ್ರಾಮದ ಕಾಶಪ್ಪ ಮಾತನಾಡಿ, ಇಲ್ಲಿ ಮನುಷ್ಯನಿಗೆ ಬದುಕಲು ಹೇಗೆ ಜಾಗಬೇಕೋ? ಹಾಗೆಯೇ ವನ್ಯ ಜೀವಿಗಳಿಗೆ ಹಾಗೂ ಪಾಣಿ ಪಕ್ಷಿಗಳಿಗೆ ಸ್ಥಳ ಬೇಕು. ಜಿಂದಾಲ್ ಕಂಪನಿಯವರಿಗೆ 7 ರಿಂದ 8 ಗಣಿಗಳನ್ನು  ನೀಡಲಾಗಿದೆ. ಅದರಲ್ಲಿ ಎರಡನ್ನು ತೆಗೆದು ಇವರಿಗೆ ನೀಡಬಹುದಲ್ಲವೇ? ಇಲ್ಲಿ ಹೊಸ ಗಣಿಗಾರಿಕೆ ಯಾಕೆ ಬೇಕು?  ಹಾಗೆಯೇ ಸಿ-ಕ್ಯಾಟೆಗರಿಯಲ್ಲಿ ಅಕ್ರಮ ಗಣಿಗಾರಿಕೆಯ ಸಾಕಷ್ಟು ಗಣಿಗಾರಿಕೆ ಉಳಿದುಕೊಂಡಿವೆ. ಅವುಗಳನ್ನು ಇವರಿಗೆ ನೀಡಬಹುದಲ್ಲವೇ?  ಇಲ್ಲಿ ಹೊಸ ಗಣಿಗಾರಿಕೆಗೆ 29,400 ಮರಗಳನ್ನು ಕಡೆದರೆ ತಮ್ಮ ಪರಿಸ್ಥಿತಿ ಏನಾಗುತ್ತದೆ ಗೊತ್ತಾ? ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ದೇಶವೂ ತುರ್ತು ಪರಿಸ್ಥಿತಿಗೆಂದು ಒಂದಿಷ್ಟು ಆಹಾರವನ್ನು ತೆಗೆದಿಡಲಾಗುತ್ತದೆ. ಏಕೆಂದರೆ ಅದನ್ನು ನಾವು ಸಂಕಷ್ಟದ ಸಂದರ್ಭದಲ್ಲಿ ಬಳಸಲು ಎಂದು. ಆದರೆ ಆಮ್ಲಜನಕವನ್ನು ಯಾರಾದರೂ ಎತ್ತಿಟ್ಟಿದ್ದೀರಾ ಅಥವಾ ಎತ್ತಿಡಲು ಸಾಧ್ಯವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. 

ವಿಐಎಸ್‌ಎಲ್‌ ಕಾರ್ಖಾನೆಯು ಸಾವಿರಾರು ಕಾರ್ಮಿಕರ ಬದುಕಿಗೆ ಆಧಾರವಾಗಿದೆ. ಅದನ್ನು ಉಳಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೆ, ಅದಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕುವ ಬದಲು, ಸುಲಭವಾಗಿ ಅದಿರು ಸಿಗುತ್ತದೆ ಎಂಬ ಕಾರಣಕ್ಕೆ ಪರಿಸರ ಸೂಕ್ಷ್ಮ ವಲಯದ ಮೇಲೆ ಕಣ್ಣು ಹಾಕುವುದು ದೂರದರ್ಶಿತ್ವದ ನಡೆಯಲ್ಲ. ರಾಮನದುರ್ಗದ ಅರಣ್ಯ ನಾಶವಾದರೆ, ಬಳ್ಳಾರಿಯ ತಾಪಮಾನ ಮತ್ತಷ್ಟು ಏರಲಿದೆ. ಮಳೆಯ ಪ್ರಮಾಣ ಕಡಿಮೆಯಾಗಲಿದೆ ಮತ್ತು ಮನುಷ್ಯ ಬದುಕಲು ಅಯೋಗ್ಯವಾದ ವಾತಾವರಣ ನಿರ್ಮಾಣವಾಗಲಿದೆ. 29,400 ಮರಗಳನ್ನು ಕಡಿದು ನೆಡುವ ಸಸಿಗಳು ಕಾಡಾಗಲು ನೂರಾರು ವರ್ಷಗಳು ಬೇಕು. ಆದರೆ, ಅಷ್ಟರೊಳಗೆ ಆಗುವ ಅನಾಹುತಗಳನ್ನು ತಡೆಯುವವರು ಯಾರು? ಎಂಬುದು ಹೋರಾಟಗಾರರ ಆತಂಕವಾಗಿದೆ. 

ಸರ್ಕಾರವು ತಕ್ಷಣವೇ ಪರಿಸರ ತಜ್ಞರು, ಸ್ಥಳೀಯರು ಮತ್ತು ವಿಜ್ಞಾನಿಗಳೊಂದಿಗೆ ಚರ್ಚಿಸಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಅಭಿವೃದ್ಧಿ ಬೇಕು, ಆದರೆ ಅದು ವಿನಾಶದ ಬುನಾದಿಯ ಮೇಲೆ ಅಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಬೇಕಿದೆ. ಇಲ್ಲದಿದ್ದರೆ, ಸಂಡೂರಿನ ಕೆಂಪು ಮಣ್ಣಿನಲ್ಲಿ ಹಸಿರು ಶಾಶ್ವತವಾಗಿ ಕಳೆದುಹೋಗುವ ದಿನಗಳು ದೂರವಿಲ್ಲ. ಅಂತಿಮ ನಿರ್ಧಾರವನ್ನು ರಾಜ್ಯ ಪರಿಸರ ಪರಿಣಾಮ ಅಂದಾಜು ಪ್ರಾಧಿಕಾರ  ಮತ್ತು ಕೇಂದ್ರ ಪರಿಸರ ಸಚಿವಾಲಯ ತೆಗೆದುಕೊಳ್ಳಬೇಕಿದೆ. ಆದರೆ, ಸ್ಥಳೀಯರ ತೀವ್ರ ವಿರೋಧ ಮತ್ತು ವಯನಾಡು ದುರಂತದ ಹಿನ್ನೆಲೆಯಲ್ಲಿ, ಈ ಯೋಜನೆಗೆ ಅನುಮತಿ ನೀಡುವುದು ಸರ್ಕಾರಕ್ಕೆ ಕಗ್ಗಂಟಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 

Tags:    

Similar News