2006 ಮುಂಬೈ ಸ್ಫೋಟ ಪ್ರಕರಣ: ಕಾನೂನು ಕಲಿತು ನ್ಯಾಯಕ್ಕಾಗಿ ಹೋರಾಡಿದ ಆರೋಪಿ ವಾಹಿದ್ ಶೇಖ್ ಕಥೆ
ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಅಬ್ದುಲ್ ವಾಹೀದ್ ಶೇಖ್ ಅವರು ಜೈಲಿನಿಂದಲೇ ಅಧ್ಯಯನ ಮಾಡಿ ಕಾನೂನು ತಜ್ಞರಾದ ಕಥೆ ಕುತೂಹಲಕಾರಿ. ಈಗ ಅವರು ತಮ್ಮ ಸಹ-ಆರೋಪಿಗಳಿಗೆ ಕೊಟ್ಟ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದಾರೆ…;
2006ರಂದು ಮುಂಬೈ ಲೋಕಲ್ ರೈಲಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ 12 ಮಂದಿ ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಕಳೆದ ವಾರ ಖುಲಾಸೆಗೊಳಿಸಿತ್ತು. ಈ ನಿರ್ಧಾರವನ್ನು ಈಗ ಸುಪ್ರೀಂ ಕೋರ್ಟ್ ತಡೆಹಿಡಿದಿದೆ.
2006ರ ಜುಲೈ ಹನ್ನೊಂದರಂದು ರೈಲಿನಲ್ಲಿ ಸಂಭವಿಸಿದ ಸರಣಿ ಸ್ಫೋಟಕ್ಕೆ ಸಂಬಂಧಿಸಿ 12 ಮಂದಿಯನ್ನು ಬಂಧಿಸಲಾಗಿತ್ತು. ಅವರಲ್ಲಿ ಒಬ್ಬರು ವಾಹೀದ್ ಶೇಖ್ . ಮಹಾರಾಷ್ಟ್ರ ಪೊಲೀಸರು ಇವರ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿದ್ದರು. ಈಗ ಬಾಂಬೆ ಕೋರ್ಟ್ ವಾಹೀದ್ ಅವರನ್ನು ದೋಷಮುಕ್ತಗೊಳಿಸಿದ್ದ ಅವರಿಗೆ ನೀಡಿದ ಭರವಸೆ ಈಡೇರಿದ ಕಥೆಯಾಗಿದೆ.
ಅಂದಿನ ದುರ್ಘಟನೆಯಲ್ಲಿ 180 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಭರವಸೆಯ ಆಶಾಕಿರಣ: ಸ್ಫೋಟ ಪ್ರಕರಣದಲ್ಲಿ ತನಗೆ ಯಾವುದೇ ರೀತಿಯ ಸಂಬಂಧ ಇಲ್ಲದೇ ಇದ್ದರೂ ಒಮ್ಮೆ ಜೈಲು ಸೇರಿದ ಬಳಿಕ ತಕ್ಷಣ ಅಲ್ಲಿಂದ ಹೊರಬರುವುದು ಸಾಧ್ಯವಿಲ್ಲದ ಮಾತು ಎಂಬುದನ್ನು ವಾಹೀದ್ ಗೆ ಅರಿವಾಗಿತ್ತು. ಆದರೆ ಆತನ ಪಾಲಿಗೆ ಭರವಸೆಯ ಆಶಾಕಿರಣವಾಗಿ ಬಂದವರು ವಕೀಲ ಶಾಹೀದ್ ಆಜ್ಮಿ.
“ವಕೀಲ ಆಜ್ಮಿ ಕೂಡ ಒಂದು ಕಾಲದಲ್ಲಿ ಭಯೋತ್ಪಾದನೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಬಳಿಕ ವಕೀಲರಾದವರು. ಜೈಲಿನಲ್ಲಿ ಇದ್ದುಕೊಂಡೇ ಕಾನೂನು ಅಧ್ಯಯನ ಮಾಡುವಂತೆ ನಮ್ಮಲ್ಲಿ ಕೆಲವರಿಗೆ ಅವರು ಸಲಹೆ ನೀಡಿದರು. ಅವರು ನನ್ನ ಪರವಾಗಿ ಮತ್ತು ನನ್ನ ಸಹಕೈದಿ ಡಾ.ತನ್ವೀರ್ ಅನ್ಸಾರಿ ಪರವಾಗಿ ನ್ಯಾಯಾಧೀಶೆ ಮೃದುಲಾ ಭಟ್ಕರ್ ಅವರ ನ್ಯಾಯಾಲಯದಲ್ಲಿ ಅರ್ಜಿ ಸಿದ್ಧಪಡಿಸಿ ಸಲ್ಲಿಸಿದರು,” ಎಂದು ಶೇಖ್ ನೆನಪಿಸಿಕೊಳ್ಳುತ್ತಾರೆ.
“ತಮ್ಮ ಮುಂದೆ ಸಲ್ಲಿಕೆಯಾದ ಅರ್ಜಿಯನ್ನು ಕಂಡು ಸಂತೋಷಪಟ್ಟ ನ್ಯಾಯದೀಶರಾದ ಭಟ್ಕರ್ ನಮಗೆ ಕಾನೂನು ಕೋರ್ಸ್ ಮಾಡಲು ಅವಕಾಶವನ್ನು ನೀಡಿದರು. ಅದಾದ ಬಳಿಕ ಅವರು ಬಾಂಬೆ ಹೈಕೋರ್ಟ್ ಗೆ ಭಡ್ತಿ ಪಡೆದು ನಿರ್ಗಮಿಸಿದರು,” ಎಂದು ಆತ ವಿವರಿಸುತ್ತಾನೆ.
2015ರಲ್ಲಿ ವಿಚಾರಣಾ ಕೋರ್ಟ್ ವಾಹೀದ್ ಶೇಖ್ ನನ್ನು ದೋಷಮುಕ್ತಗೊಳಿಸಿತ್ತು. ಆಗ ಖುಲಾಸೆಗೊಂಡ ಏಕೈಕ ಆರೋಪಿ ಈತ. ಅಂದು ವಿಚಾರಣಾ ಕೋರ್ಟ್ ಐವರು ಆರೋಪಿಗಳಿಗೆ ಮರಣ ದಂಡನೆ ಮತ್ತು ಇನ್ನುಳಿದ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕುತೂಹಲದ ಸಂಗತಿ ಎಂದರೆ ಪೊಲೀಸರು ಶೇಖ್ ಖುಲಾಸೆಯನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿರಲಿಲ್ಲ.
ಕಾನೂನು ಅರಿವಿನ ಗುರಾಣಿ: “ಕಾನೂನು ಅಧ್ಯಯನ ಮಾಡಲು ಸಲ್ಲಿಸಿದ ಅರ್ಜಿಗೆ ಅನುಮತಿ ನೀಡಲಾಗಿದ್ದರೂ ಹಲವಾರು ಕಾರಣಗಳಿಂದ ತಕ್ಷಣ ಕೋರ್ಸ್ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮೊದಲು ನನ್ನ ತಂದೆ ನಿಧನರಾದರು. ಅದಾದ ಬಳಿಕ ಶಾಹೀದ್ ಆಜ್ಮಿ ಅವರನ್ನು ಅವರ ಕಚೇರಿಯಲ್ಲಿಯೇ ಹತ್ಯೆ ಮಾಡಲಾಯಿತು” ಎಂದು ಶೇಖ್ ದ ಫೆಡರಲ್ ಗೆ ವಿವರಿಸಿದರು.
ಈ ನಡುವೆ ಶಾಹೀದ್ ಜೀವನ ಕಥನವನ್ನು ಆಧಾರವಾಗಿಟ್ಟುಕೊಂಡು ಚಿತ್ರವೊಂದು ನಿರ್ಮಾಣವಾಯಿತು. ಶಾಹೀದ್ ಎಂಬ ಹೆಸರಿನ ಆ ಚಲನಚಿತ್ರವನ್ನು ನಿರ್ದೇಶನ ಮಾಡಿದವರು ಹನ್ಸಲ್ ಮೆಹ್ತಾ. ರಾಜ್-ಕುಮಾರ್ ರಾವ್ ಹತ್ಯೆಗೀಡಾದ ವಕೀಲನ ಪಾತ್ರವನ್ನು ನಿರ್ವಹಿಸಿದ್ದರು.
“ಆದರೆ ವಿಚಾರಣಾ ನ್ಯಾಯಾಲಯದಲ್ಲಿ ಕಲಾಪಗಳು ಮುಗಿದ ಬಳಿಕ 2014ರಲ್ಲಿ ನಾನು ಕಾನೂನು ಅಧ್ಯಯನವನ್ನು ಕೈಗೆತ್ತಿಕೊಂಡೆ. ಸರಿ ಸುಮಾರು ಒಂದು ವರ್ಷ ಕಾಲ ವಿಚಾರಣಾ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ನನಗೆ ಜಾಮೀನು ಸಿಕ್ಕ ಬಳಿಕ ಕಾನೂನು ಪದವಿಯನ್ನು ಪೂರ್ಣಗೊಳಿಸಿದೆ. ನಾನೀಗ ಎಲ್ಎಲ್ಎಂ ಡಿಗ್ರಿ ಕೂಡ ಪಡೆದಿದ್ದೇನೆ. ಜೊತೆಗೆ ಕಾನೂನಿನಲ್ಲಿ ಡಾಕ್ಟರೇಟ್ ಕೂಡ ಗಳಿಸಿದ್ದೇನೆ” ಎಂದು ಆತ ವಿವರಿಸುತ್ತ ಹೋದರು.
ಡಾ.ತನ್ವೀರ್ ಗೆ ಕಾನೂನು ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೆ ಈ ಪ್ರಕರಣದಲ್ಲಿನ ಇತರ ಇಬ್ಬರು ಆರೋಪಿಗಳಾದ ಎತೇಶಮ್ ಸಿದ್ದಿಖಿ ಮತ್ತು ಸಾಜಿದ್ ಅನ್ಸಾರಿ ಈಗ ಕಾನೂನು ಅಧ್ಯಯನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
2015ರಲ್ಲಿ ವಿಚಾರಣಾ ಕೋರ್ಟ್ ಖುಲಾಸೆಗೊಳಿಸಿದ ಬಳಿಕ ಅದೇ ದಿನ ಸಂಜೆ ಅವರ ಬಿಡುಗಡೆ ಪ್ರಕ್ರಿಯೆಗಳನ್ನು ಪೂರೈಸಲು ಮರಳಿ ಜೈಲಿಗೆ ಕರೆದೊಯ್ಯಲಾಯಿತು. ಆದರೆ ತಕ್ಷಣವೇ ಬಿಡುಗಡೆಗೊಳ್ಳಲು ಅರ್ಹತೆ ಹೊಂದಿದ್ದರೂ ಇನ್ನೂ ಒಂದು ದಿನ ರಾತ್ರಿ ಜೈಲಿನಲ್ಲಿ ಕಳೆಯಲು ಅವರು ನಿರ್ಧರಿಸಿದರು.
ಅದೊಂದು ದಿನ ರಾತ್ರಿ…
“ನಂತರ ಜೈಲು ಅಧಿಕಾರಿಗಳು ನನ್ನನ್ನು ಕರೆಸಿದರು. ಆ ರಾತ್ರಿಯನ್ನು ಜೈಲಿನ ಉಳಿದ ಆರೋಪಿಗಳ ಜೊತೆ ಇರಲು ಬಯಸುವೆಯಾ ಎಂದು ನನ್ನನ್ನು ಕೇಳಿದರು. ಯಾಕೆಂದರೆ ಅನೇಕ ಪ್ರಕರಣಗಳಲ್ಲಿ ಖುಲಾಸೆಗೊಂಡ ವ್ಯಕ್ತಿಗಳನ್ನು ಉಳಿದ ಸಹ ಆರೋಪಿಗಳು ನೋಡುವ ರೀತಿ ಭಿನ್ನವಾಗಿರುತ್ತದೆ. ಅವರಿಗೆ ಬಿಡುಗಡೆಯ ಅದೃಷ್ಟವಿಲ್ಲದೇ ಇರುವುದರಿಂದ ಹತಾಶೆಗೆ ಒಳಗಾಗಿರುತ್ತಾರೆ. ಅವರ ಕೋಪಕ್ಕೂ ಗುರಿಯಾಗುವ ಸಾಧ್ಯತೆ ಇರುತ್ತದೆ. ಅಂತಹ ಉದಾಹರಣೆಗಳನ್ನೂ ಅಧಿಕಾರಿಗಳು ನೋಡಿರುವುದರಿಂದ ನನ್ನ ಅಭಿಪ್ರಾಯ ಕೇಳಿದ್ದರು. ಆದರೆ ನಾನು ಸಹ ಆರೋಪಿಗಳೊಂದಿಗೇ ಆ ರಾತ್ರಿ ಕಳೆಯಲು ಬಯಸುತ್ತೇನೆ ಎಂದು ಹೇಳಿದೆ. ಅದನ್ನು ಅಧಿಕಾರಿಗಳು ಲಿಖಿತ ರೂಪದಲ್ಲಿ ಬರೆಸಿಕೊಂಡರು” ಎಂದು ಶೇಖ್ ವಿವರಿಸುತ್ತಾರೆ.
“ಆ ರಾತ್ರಿ ನನ್ನ ಸಹ-ಆರೋಪಿಗಳೆಲ್ಲ, ನಮ್ಮ ಬಿಡುಗಡೆಗೂ ಕಾನೂನು ಹೋರಾಟ ಮಾಡುವಂತೆ ತಮಗೆ ಮಾತು ಕೊಡುವಂತೆ ಕೇಳಿಕೊಂಡರು. ನಮ್ಮನ್ನು ಮರೆಯಬಾರದು ಎಂದು ಮನವಿಮಾಡಿಕೊಂಡರು. ಯಾಕೆಂದರೆ ಅವರೂ ಕೂಡ ಈ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿರಲಿಲ್ಲ. ನಾನು ಅವರಿಗಾಗಿ ಕಾನೂನು ಹೋರಾಟ ಮಾಡುವುದಾಗಿ ಭರವಸೆ ನೀಡಿದೆ. ನನ್ನ ಭಾವಮೈದುನನಾದ ಸಾಜಿದ್ ನನ್ನು ಹೊರತುಪಡಿಸಿ ನಾವು ಒಟ್ಟಿಗೆ ಜೈಲಿಗೆ ಹೋಗುವ ಮೊದಲು ನಾನು ಯಾವುದೇ ಆರೋಪಿಯನ್ನು ಕೂಡ ಭೇಟಿ ಮಾಡಿರಲಿಲ್ಲ. ಜೈಲಿನಲ್ಲಿ ನಾನು ಅವರ ಜೊತೆಗಿದ್ದಾಗ ಅನೇಕ ಸಂಗತಿಗಳನ್ನು ಜೊತೆಯಾಗಿ ಎದುರಿಸಿದೆವು. ಅವರೊಂದಿಗೆ ಸಣ್ಣ ಸಣ್ಣ ಸಂತೋಷದ ಕ್ಷಣಗಳನ್ನೂ ಕಳೆದಿದ್ದೇನೆ. ಹಿನ್ನಡೆಗಳನ್ನೂ ಅನುಭವಿಸಿದ್ದಿದೆ. ಹಾಗಾಗಿ ಅಂದು ಅವರನ್ನು ಬಿಟ್ಟು ಹೋಗಲು ನನಗೆ ಸಾಧ್ಯವಾಗಲಿಲ್ಲ,” ಎಂದು ಶೇಖ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬದುಕೇ ಮುಗಿದು ಹೋದವು
ಅವರೆಲ್ಲರೂ ವಿಚಾರಣಾದೀನ ಕೈದಿಗಳಾಗಿ ಒಂಭತ್ತು ವರ್ಷಗಳ ಕಾಲ ಕಳೆದಿದ್ದರು. ಆದರೆ ಉಳಿದ ಕೈದಿಗಳಿಗೆ ಹೈಕೋರ್ಟ್ ನಿಂದ ಬಿಡುಗಡೆಯ ಆದೇಶ ಪಡೆಯಲು ಭರೋಬ್ಬರಿ ಹತ್ತು ವರ್ಷಗಳೇ ಕಳೆದುಹೋದವು. ಈಗ ಸುಪ್ರಿಂ ಕೋರ್ಟ್ ಆ ಆದೇಶಕ್ಕೂ ತಡೆಯಾಜ್ಞೆ ನೀಡಿರುವುದರಿಂದ ಆ ಭರವಸೆಯೂ ಅನಿಶ್ಚಿತವಾಗಿದೆ. ಈ ಮಧ್ಯೆ ಮರಣ ದಂಡನೆಗೆ ಗುರಿಯಾಗಿದ್ದ ಆರೋಪಿ ಕಮಲ್ ಅನ್ಸಾರಿ ಎಂಬಾತ 2020ರಲ್ಲಿ ಕೋವಿಡ್ ಸಂಬಂಧಿತ ಸಮಸ್ಯೆಗಳಿಂದ ಮೃತಪಟ್ಟ.
“ನಮಗೆ ತಿಳಿದಿತ್ತು ನಾವೆಲ್ಲರೂ ನಿರಪರಾಧಿಗಳು ಎಂದು. ಆದರೆ ನಾವು ನಿರಪರಾಧಿಗಳು ಎಂಬುದಕ್ಕೆ ಪುರಾವೆ ಸಿಕ್ಕಿದ್ದು 2008ರಲ್ಲಿ ಸಾದಿಕ್ ಶೇಖ್ ಅವರ ಬಂಧನದ ಮೂಲಕ” ಎನ್ನುತ್ತಾರೆ ಶೇಖ್.
ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನೆ ಸಂಘಟನೆಯ ಸದಸ್ಯ ಎಂದು ಹೇಳಲಾದ ಸಾದಿಕ್ ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ರೈಲು ಸ್ಫೋಟಗಳನ್ನು ನಡೆಸಿದ್ದು ತಮ್ಮ ತಂಡ ಎಂದು ಹೇಳಿಕೊಂಡಿದ್ದ. ಆದರೆ ನ್ಯಾಯಾಲಯದಲ್ಲಿ ಜವಾಬ್ದಾರಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ.
ಜೈಲಿನಿಂದ ಬಿಡುಗಡೆಯಾದ ಬಳಿಕ ತಮ್ಮ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸಿದ್ದು ಮಾತ್ರವಲ್ಲದೆ ಕೋರ್ಟ್ ನಲ್ಲಿ ಇತರ ಆರೋಪಿಗಳ ಪರ ವಕೀಲರಿಗೂ ಸಹಾಯ ಮಾಡಿದರು. ಜೊತೆಗೆ ‘ಬೇಗುನಾಹ್ ಕೈದಿ’ (ನಿರಪರಾಧಿ ಕೈದಿಗಳು) ಎಂಬ ಕೃತಿಯನ್ನೂ ಬರೆದರು.
“ಈಗ ನಾನು ಬೇಗುನಾಹ್ ಕೈದಿಯ ಎರಡನೇ ಭಾಗವನ್ನು ಬರೆಯಲು ನಿರ್ಧರಿಸಿದ್ದೇನೆ. ಅದರಲ್ಲಿ ನನ್ನ ಮಾಜಿ ಸಹಕೈದಿಗಳ ಕಥೆಗಳನ್ನು ವಿವರಿಸಲಿದ್ದೇನೆ” ಎಂದು ಶೇಖ್ ಹೇಳಿದರು.
ಈಗ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ ಮೇಲ್ಮನವಿಗೆ ಪ್ರತಿಕ್ರಿಯೆ ನೀಡುವಂತೆ ಖುಲಾಸೆಗೊಂಡ ಉಳಿದ ಹನ್ನೊಂದು ಮಂದಿಗೆ ತಿಳಿಸಿದೆ. ಆದರೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಯಾವುದೇ ತಡೆಯಾಜ್ಞೆ ನೀಡಲಾಗಿಲ್ಲ.
ಕ್ಯಾಪ್: ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್ ವಾಹಿದ್ ಶೇಖ್ ಕಾನೂನು ಅಧ್ಯಯನವನ್ನು ಮುಗಿಸಿದ್ದಲ್ಲದೆ ಇತರ ಸಹ-ಆರೋಪಿಗಳ ಪರವಾಗಿಯೂ ಸಹಾಯ ಮಾಡಿದ್ದಾರೆ. ಜೊತೆಗೆ ಬೇಗುನಾಹ್ ಕೈದಿ ಎಂಬ ಕೃತಿಯನ್ನೂ ರಚಿಸಿದ್ದಾರೆ. ಒಂದು ಕಾಲದಲ್ಲಿ ಭಯೋತ್ಪಾದಕ ಎಂಬ ಆರೋಪಕ್ಕೆ ಒಳಗಾಗಿದ್ದ ವಕೀಲ ಶಾಹಿದ್ ಆಜ್ಮಿ ಕಾನೂನು ಅಧ್ಯಯನ ಮಾಡುವಂತೆ ಈತನಿಗೆ ಪ್ರೋತ್ಸಾಹ ನೀಡಿದ್ದರು.