The Federal Ground Report | ʼಸತ್ಯʼ ಶೋಧನೆಯಲ್ಲಿ ವಿಳಂಬ; ಧರ್ಮಸ್ಥಳದ ಒಳಗೂ... ಹೊರಗೂ.. ಶಂಕೆ, ಆತಂಕ!
ಧರ್ಮಸ್ಥಳದ ಅಸಹಜ ಸಾವುಗಳ ಕುರಿತ ತನಿಖೆ ಆರಂಭಿಸದ ರಾಜ್ಯ ಸರ್ಕಾರದ ಕ್ರಮಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ʼದ ಫೆಡರಲ್ ಕರ್ನಾಟಕʼ ಧರ್ಮಸ್ಥಳ ಮತ್ತು ಸುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದಾಗ ಜನ ಆಘಾತ ಮತ್ತು ಆತಂಕಕ್ಕೆ ಒಳಗಾಗಿರುವುದು ಕಂಡು ಬಂದಿತು.;
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಿಂದ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದ ಧರ್ಮಸ್ಥಳದಲ್ಲಿ ಇದೀಗ ಭಯ, ಆಘಾತ, ಆತಂಕಗಳು ಒಟ್ಟೊಟ್ಟಿಗೆ ಆವರಿಸಿವೆ. ಮೇ 11ರಂದು ಅಪರಿಚಿತ ವ್ಯಕ್ತಿಯೊಬ್ಬ ವಕೀಲರ ಮೂಲಕ ಆಗಮಿಸಿ ʼ 1999 ರಿಂದ 2014 ರವರೆಗೆ ʼ ನೂರಾರು ಶವ ಹೂತು ಹಾಕಿದ್ದೇನೆʼ ಎಂದಿರುವುದು ಸ್ಥಳೀಯರನ್ನು ಗಾಬರಿಗೊಳಿಸಿದೆ. ಇದರಿಂದ ಸುತ್ತಲಿನ ಗ್ರಾಮಗಳಲ್ಲಿ ಆತಂಕದ ಜತೆಗೆ ಅನುಮಾನವನ್ನೂ ಸೃಷ್ಟಿಸಿದೆ.
ಅಸಹಜ ಸಾವುಗಳ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼ ಧರ್ಮಸ್ಥಳ ಮತ್ತು ಸುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದಾಗ ಜನ ಆಘಾತ ಮತ್ತು ಆತಂಕಕ್ಕೆ ಒಳಗಾಗಿರುವುದು ಕಂಡು ಬಂದಿತು. ಧರ್ಮಸ್ಥಳದ ನೆರೆಹೊರೆಯ ಗ್ರಾಮಸ್ಥರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕೆಲವರು ವಿಷಯ ಪ್ರಸ್ತಾಪಸಲೂ ಅಂಜುತ್ತಿದ್ದರು. ಧರ್ಮಸ್ಥಳದ ಜನಸಂದಣಿ ಪ್ರದೇಶದಲ್ಲಿ ಅಸಹಜ ಸಾವುಗಳು ಹಾಗೂ ಸೌಜನ್ಯ ಪ್ರಕರಣದ ಬಗ್ಗೆ ವಿಚಾರಿಸುತ್ತಿದ್ದಂತೆ ಸುತ್ತಲಿನವರ ಕಣ್ಣುಗಳು ದಿಟ್ಟಿಸಿ ನೋಡಲು ಆರಂಭಿಸಿದವು.
ತನಿಖೆ ವಿಳಂಬಕ್ಕೆ ಹಲವರ ಬೇಸರ
ಧರ್ಮಸ್ಥಳ ಸಮೀಪದ ಗುರುವಾಯನಕೆರೆ ನಿವಾಸಿ ಭರಮಪ್ಪ (ಹೆಸರು ಬದಲಿಸಲಾಗಿದೆ) ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "ಧರ್ಮಸ್ಥಳದಲ್ಲಿ ಹಲವು ವರ್ಷಗಳಿಂದ ಇಂತಹ ಘಟನೆಗಳ ಬಗ್ಗೆ ಕೇಳಿದ್ದೇವೆ. ನೇತ್ರಾವತಿ ನದಿಯಲ್ಲಿ ಬಿದ್ದು ಸತ್ತಿದ್ದಾರೆ ಎಂಬುದನ್ನು ಸಾಮಾನ್ಯವಾಗಿ ಕೇಳುತ್ತಿದ್ದೆವು. ಆದರೆ, ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬ ಹೇಳಿರುವುದು ನೋಡಿದರೆ ಭಯವಾಗುತ್ತದೆ. ಜನರಲ್ಲಿರುವ ಆತಂಕ ದೂರವಾಗಬೇಕಾದರೆ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು" ಎಂದು ಹೇಳಿದರು.
ಸ್ಥಳೀಯ ಕಾಲೇಜೊಂದರ ವಿದ್ಯಾರ್ಥಿ ರಾಘವ(ಹೆಸರು ಬದಲಿಸಲಾಗಿದೆ) ಮಾತನಾಡಿ, ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗದಿದ್ದಕ್ಕೆ ತೀವ್ರ ಬೇಸರವಾಗಿತ್ತು. ಇಂತಹದ್ದೇ ಕೆಲವು ಪ್ರಕರಣಗಳು ನಡೆದಿವೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೆವು. ಈಗ ಧರ್ಮಸ್ಥಳದಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ನೂರಾರು ಕೊಲೆಗಳ ಬಗ್ಗೆ ಮಾಹಿತಿ ನೀಡಿರುವುದು ದಿಗಿಲು ಮೂಡಿಸಿದೆ. ಪ್ರಶಾಂತವಾದ ಪರಿಸರದಲ್ಲಿ ಭಯಾನಕತೆ ಆವರಿಸಿರುವುದು ಊಹಿಸಲು ಆಗುತ್ತಿಲ್ಲ. ಅಪರಿಚಿತ ವ್ಯಕ್ತಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಬಳಿಕವೂ ತನಿಖೆ ಮಂದಗತಿಯಲ್ಲಿ ನಡೆಯುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಸಂಶಯ ಹುಟ್ಟಿಸಿದ ಪೊಲೀಸರ ನಡೆ
ಕಳೆದ ಇಪ್ಪತ್ತು ವರ್ಷಗಳಿಂದ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಅಪರಿಚಿತ ವ್ಯಕ್ತಿ ಹೇಳಿಕೆ ನೀಡಿದರೂ ಸರ್ಕಾರದ ವಿಳಂಬ ನೀತಿ, ಪೊಲೀಸರ ಅಲಕ್ಷ್ಯವು ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದೆ.
ಜುಲೈ 11 ರಂದು ಸಾಕ್ಷಿದಾರ ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದಾಗ್ಯೂ ಸರ್ಕಾರ ದಿನಗಟ್ಟಲೆ ಕ್ರಮ ಜರುಗಿಸಲಿಲ್ಲ. ನನ್ನ ಕುಟುಂಬಕ್ಕೆ ರಕ್ಷಣೆ ನೀಡಿದರೆ ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ತೋರಿಸುವುದಾಗಿ ಹೇಳಿದರೂ ಪೊಲೀಸರು ಸಾಕ್ಷಿದಾರನನ್ನೇ ಅನುಮಾನದಿಂದ ನೋಡುತ್ತಿದ್ದಾರೆ. ಶವಗಳನ್ನು ಹೂತಿರುವ ಕಡೆ ಮಹಜರು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪುದುವೆಟ್ಟು ಗ್ರಾಮದ ನಿವಾಸಿ ಶಂಕರ( ಹೆಸರು ಬದಲಾಯಿಸಲಾಗಿದೆ) ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬಹುಜನರ ಒತ್ತಾಯದ ಮೇರೆಗೆ ಸರ್ಕಾರವು ವಿಶೇಷ ತನಿಖಾ ತಂಡ (SIT) ರಚಿಸಿದೆ. ಆದರೆ, ತನಿಖಾ ತಂಡವಾಗಲಿ, ಸ್ಥಳೀಯ ಪೊಲೀಸರಾಗಲಿ ಈವರೆಗೂ ಯಾವುದೇ ತನಿಖೆ ಆರಂಭಿಸಿಲ್ಲ. ಈಗ ಸಾಕ್ಷಿ ಹೇಳಲು ಬಂದಿರುವ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿರುವುದು ಯೋಜನಾಬದ್ಧವಾಗಿ ಪ್ರಕರಣ ಮುಚ್ಚಿ ಹಾಕುವ ಷಡ್ಯಂತ್ರ ಎಂಬ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು.
ಅಸಹಜ ಸಾವುಗಳ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯ ಕೈವಾಡದ ಬಗ್ಗೆ ನಿರ್ಣಯಕ್ಕೆ ಬಂದಿಲ್ಲ. ಬೇರೆ ಯಾವುದಾದರೂ ಕೊಲೆ, ಅತ್ಯಾಚಾರ ನಡೆದರೆ ಕ್ಷಣ ಮಾತ್ರದಲ್ಲಿ ತನಿಖಾ ಪ್ರಕ್ರಿಯೆ ನಡೆಸುವ ಪೊಲೀಸರು ಈ ಪ್ರಕರಣದಲ್ಲಿ ವೃಥಾ ವಿಳಂಬ ನೀತಿ ಅನುಸರಿಸುತ್ತಿರುವುದು, ಸಾಕ್ಷಿ ಹೇಳಲು ಬಂದವನಿಗೆ ಮಂಪರು ಪರೀಕ್ಷೆ ಮಾಡಿಸಲು ಮುಂದಾಗಿರುವುದು ಏಕೆ ಎಂಬುದೇ ತಿಳಿಯುತ್ತಿಲ್ಲ. ತನಿಖಾ ವಿಳಂಬದಿಂದ ಪ್ರಕರಣ ಹಳ್ಳ ಹಿಡಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಲೇಜು ವಿದ್ಯಾರ್ಥಿನಿಯೊಬ್ಬರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, ಸೌಜನ್ಯಳ ದುರಂತ ಅಂತ್ಯ ಯಾವ ಹೆಣ್ಣು ಮಕ್ಕಳಿಗೂ ಬರಬಾರದು. ಅಪರಿಚಿತ ವ್ಯಕ್ತಿಯು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಧರ್ಮಸ್ಥಳದ ಅಸಹಜ ಸಾವುಗಳ ಸತ್ಯ ಹೇಳಲು ಬಂದಿದ್ದಾರೆ. ಆದರೆ, ಸರ್ಕಾರ ಮಾತ್ರ ಯಾರನ್ನೋ ರಕ್ಷಿಸುವ ಉದ್ದೇಶದಿಂದ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.
ಆತಂಕ, ಅನುಮಾನ ಮತ್ತು ಸಾರ್ವಜನಿಕ ಕೋಪ
ಅಸಹಜ ಸಾವುಗಳ ಕುರಿತು ಮಾಧ್ಯಮಗಳ ಸರಣಿ ಮಾಧ್ಯಮ ವರದಿಗಳು ಪ್ರಕಟವಾದ ಬಳಿಕ ಧರ್ಮಸ್ಥಳದವರ ಮನಸ್ಥಿತಿ ಬದಲಾಗಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರನ್ನು ಅನುಮಾನದ ಕಂಗಳಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕೋರಿ ಸೋಮವಾರ ಬಂದಿದ್ದ ಕಲಬುರಗಿಯ ಯುವಕರ ಗುಂಪನ್ನು ಭಕ್ತರು ತಡೆದಿದ್ದರು. ಯುವಕರು ಗುಂಪು ʼನಕಲಿ ದೇವಮಾನವʼ ಎಂಬ ಘೋಷಣೆ ಕೂಗಿದ ಬಳಿಕ ಭಕ್ತರು ಹಾಗೂ ಯುವಕರ ಮಧ್ಯೆ ಘರ್ಷಣೆಯೂ ನಡೆದಿತ್ತು. ಪ್ರತಿಭಟನಾಕಾರರನ್ನು ದೇವಾಲಯ ಪ್ರವೇಶಿಸಲು ಬಿಡದೇ ಭಕ್ತರೇ ತಡೆಗೋಡೆಯಂತೆ ನಿಂತಿದ್ದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಅಸಹಜ ಸಾವುಗಳ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿರುವುದನ್ನು ಶ್ರೀಕ್ಷೇತ್ರ ಧರ್ಮಸ್ಥಳ ಸಮಿತಿ ಸ್ವಾಗತಿಸಿದೆ. ಆದರೂ, ಕೆಲವರು ದೇವಸ್ಥಾನದ ಹೆಸರಿಗೆ ಮಸಿ ಬಳಿಯಲು ಹಾಗೂ ಪಟ್ಟಣದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೇವಾಲಯದ ಭಕ್ತ ಮಾಧವ ಹರೀಶ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಧರ್ಮಸ್ಥಳದಲ್ಲಿ ಅಹಿತಕರ ಘಟನೆಗಳ ಬಗ್ಗೆ ಕೇಳಿದ್ದೇವೆ. ಆದರೆ, ಅಪರಿಚಿತ ವ್ಯಕ್ತಿ ಹೇಳಿದಷ್ಟು ಪ್ರಕರಣಗಳು ನಡೆದಿವೆ ಎಂದರೆ ನಂಬಲಾಗುತ್ತಿಲ್ಲ. ಸೌಜನ್ಯ ಪ್ರಕರಣದಂತೆ ಮುಚ್ಚಿ ಹಾಕದೇ ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಧರ್ಮಸ್ಥಳ ಸಮೀಪದ ಅಂಗಡಿಯೊಂದರ ಮಾಲೀಕ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಸೌಜನ್ಯಳಿಗೂ ನ್ಯಾಯ ಒದಗಿಸಿ
ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ 2012 ರಲ್ಲಿ ನಡೆದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಪಟ್ಟಭದ್ರರು ನಿಧಾನವಾಗಿ ತೆರೆಮರೆಗೆ ಸರಿಸುತ್ತಿದ್ದರೂ ಆಕೆಯ ನ್ಯಾಯ ಒದಗಿಸಬೇಕೆಂಬ ಕೂಗು ಇನ್ನೂ ಕಡಿಮೆಯಾಗಿಲ್ಲ. ಸಾರ್ವಜನಿಕರಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಸೌಜನ್ಯ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಆದರೆ, ಆಕೆಗೆ ನ್ಯಾಯ ಮಾತ್ರ ಸಿಗಲಿಲ್ಲ ಎಂಬ ಕೊರಗು ಧರ್ಮಸ್ಥಳ ನಿವಾಸಿಗಳಲ್ಲಿದೆ.
ಅಸಹಜ ಸಾವುಗಳ ಕುರಿತು ಅಪರಿಚಿತ ವ್ಯಕ್ತಿ ನೀಡಿದ ಹೇಳಿಕೆಯ ನಂತರ ಸೌಜನ್ಯ ಕೊಲೆ ಪ್ರಕರಣದ ತನಿಖೆಗೂ ಒತ್ತಾಯಗಳು ಕೇಳಿ ಬರುತ್ತಿವೆ.
"ಹೂತು ಹಾಕಿರುವ ಶವಗಳಿಗೆ ಮಾತ್ರವಲ್ಲ, ಸೌಜನ್ಯಳಿಗೂ ನ್ಯಾಯ ಸಿಗಬೇಕು ಎಂದು ಬಯಸುತ್ತೇವೆ. ಸರ್ಕಾರವು ಅಸಹಜ ಸಾವುಗಳ ತನಿಖೆ ಮೂಲಕವೇ ಸೌಜನ್ಯ ಪ್ರಕರಣವನ್ನು ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು" ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು ಕೇವಲ ಅಸಹಜ ಸಾವುಗಳ ತನಿಖೆ ಮಾತ್ರ ನಡೆಸಲಿದೆ ಎಂಬುದಾಗಿ ತಿಳಿದು ಬಂದಿದೆ. ಸೌಜನ್ಯ ಸೇರಿದಂತೆ ಹಳೆಯ ಪ್ರಕರಣಗಳನ್ನು ತನಿಖೆ ವ್ಯಾಪ್ತಿಗೆ ಸೇರಿಸುವುದಿಲ್ಲ ಎನ್ನಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಸೌಜನ್ಯಳಂತಹ ಹಲವು ಹೆಣ್ಣು ಮಕ್ಕಳು, ಹೋರಾಟಗಾರರಿಗೆ ನಿರಾಶೆಯಾಗಲಿದೆ ಎಂದು ಹೇಳಿದರು.
ಬೆಳಾಲು ಗ್ರಾಮದ ನಿವೃತ್ತ ಶಾಲಾ ಶಿಕ್ಷಕರೊಬ್ಬರು ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ, "ನೀವು ನೆಲವನ್ನು ಅಗೆದು ಸತ್ಯವನ್ನು ಹುಡುಕದಿದ್ದರೆ, ಏನು ಪ್ರಯೋಜನ?, ಎಸ್ಐಟಿಯು ಈ ಹಿಂದೆ ಮುಚ್ಚಿ ಹೋಗಿರುವ ಎಲ್ಲಾ ಕಡತಗಳನ್ನು ಮರು ತನಿಖೆಗೆ ಒಳಪಡಿಸಬೇಕು" ಎಂದು ಆಗ್ರಹಿಸಿದರು.
ಜೂನ್ ತಿಂಗಳಲ್ಲೂ ಶವ ಹೂತಿರುವ ವದಂತಿ
ಕಳೆದ ಜೂನ್ ತಿಂಗಳಲ್ಲೂ ಧರ್ಮಸ್ಥಳದ ಹಲವೆಡೆ ಶವಗಳನ್ನು ಹೂತು ಹಾಕಿರುವ ಬಗ್ಗೆ ಪಿಸು ಮಾತುಗಳು ಕೇಳಿ ಬಂದಿವೆ. ಆದರೆ, ಈ ಬಗ್ಗೆ ಸ್ಥಳೀಯ ಪೊಲೀಸರು ಗಂಭೀರವಾಗಿ ಪರಿಗಣಿಸಲಿಲ್ಲ ಎಂವ ಆರೋಪವೂ ಇದೆ.
ಸುಮಾರು 20 ವರ್ಷಗಳಿಂದ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಇತ್ತೀಚೆಗೆ ಇಬ್ಬರು ವಕೀಲರು ಸಹಿ ಮಾಡಿದ ಪತ್ರ ವೈರಲ್ ಆಗಿತ್ತು. ಧರ್ಮಸ್ಥಳ ಸುತ್ತಮುತ್ತ ಶವಗಳನ್ನು ಹೂತಿರುವ ಬಗ್ಗೆ ಊಹಾಪೋಹ ಹರಡುತ್ತಿದ್ದಂತೆ ವ್ಯಕ್ತಿಯೊಬ್ಬ ದಿಢೀರ್ ಪ್ರತ್ಯಕ್ಷನಾಗಿ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದ. ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆಗೆ ನೀಡಿದರೆ ಧರ್ಮಸ್ಥಳ ಗ್ರಾಮದಲ್ಲಿ ಹೂತಿಟ್ಟಿರುವ ಶವಗಳ ಸ್ಥಳಗಳನ್ನು ತೋರಿಸಲಾಗುವುದು ಎಂದು ಹೇಳಿದ್ದು ತೀವ್ರ ಸಂಚಲನ ಮೂಡಿಸಿತ್ತು. ಧರ್ಮಸ್ಥಳದಲ್ಲಿ ಇಂತಹದೊಂದು ಘಟನೆ ನಡೆದಿದೆಯೇ ಎಂಬುದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿತ್ತು.
ಇಬ್ಬರು ಅಧಿಕಾರಿಗಳು ತಂಡದಿಂದ ಹೊರಗೆ?
ಧರ್ಮಸ್ಥಳದಲ್ಲಿ ಹೂತಿರುವ ಶವಗಳ ತನಿಖೆಗಾಗಿ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಲಾಗಿದೆ. ತಂಡದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್, ಸಿಎಆರ್ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ಇದ್ದಾರೆ.
ಆದರೆ, ನಾಲ್ವರು ಐಪಿಎಸ್ ಅಧಿಕಾರಿಗಳ ಪೈಕಿ ಇಬ್ಬರು ತಂಡದಿಂದ ಹೊರಬರಲು ಮುಂದಾಗಿದ್ದಾರೆ. ಅನುಚೇತ್ ಮತ್ತು ಸೌಮ್ಯಲತಾ ಅವರು ವೈಯಕ್ತಿಕ ಕಾರಣ ನೀಡಿ ಹೊರಗೆ ಬರಲು ಇಚ್ಛಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಗೃಹ ಸಚಿ ಡಾ. ಜಿ. ಪರಮೇಶ್ವರ್ ಅವರು ಈ ವದಂತಿಯನ್ನು ತಳ್ಳಿ ಹಾಕಿದ್ದು, ಯಾರೂ ಕೂಡ ತಂಡದಿಂದ ಹೊರಹೋಗುವ ಬಗ್ಗೆ ತಮಗೆ ಮಾಹಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೌಜನ್ಯ ಪ್ರಕರಣದಲ್ಲಿಯೂ ತಡ
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಳನ್ನು 2012ರ ಅಕೋಬರ್ 9ರಂದು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಬೆಳ್ತಂಗಡಿ ಪೊಲೀಸರು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದರು. ಆಗಲೂ ಸಾಕಷ್ಟು ಒತ್ತಾಯಗಳು ಕೇಳಿಬಂದಾಗ ಸಿಐಡಿ ತನಿಖೆಗೆ ಒಪ್ಪಿಸಲಾಯಿತು. ಅಲ್ಲಿಯೂ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಪ್ರಕರಣವನ್ನು 2012ರ ನವೆಂಬರ್ 6ರಂದು ಸಿಬಿಐ ತನಿಖೆಗೆ ಒಪ್ಪಿಸಿತು. ಆದರೂ ನ್ಯಾಯ ಸಿಗಲಿಲ್ಲ ಎಂದು ಹೋರಾಟಗಾರರು ಆರೋಪಿಸುತ್ತಾರೆ.
ಹಿಂದಿನ ಪ್ರಕರಣಗಳ ತನಿಖೆ ಇಲ್ಲ
ರಾಜ್ಯ ಸರ್ಕಾರ ರಚನೆ ಮಾಡಿರುವ ಎಸ್‌ಐಟಿ ತಂಡವು ಕೇವಲ ಶವಗಳ ಹೂತಿರುವ ಪ್ರಕರಣವನ್ನು ಮಾತ್ರ ತನಿಖೆ ನಡೆಸಲಿದೆ. ಸರ್ಕಾರವೇ ಈ ಬಗ್ಗೆ ಸ್ಪಷ್ಟಪಡಿಸಿದೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸೇರಿಸಲಾಗುವುದಿಲ್ಲ ಎಂದು ತಿಳಿಸಿದೆ.
ಧರ್ಮಸ್ಥಳ ಪ್ರಕರಣವನ್ನು ಸಣ್ಣ ದೂರು ಎಂದು ಭಾವಿಸಿಲ್ಲ. ಸಾಮಾನ್ಯವಾಗಿ ಯಾವುದೇ ಪ್ರಕರಣವಾದರೂ ಪೊಲೀಸ್ ಠಾಣೆ ಮಟ್ಟದಲ್ಲಿ ಪ್ರಾಥಮಿಕ ತನಿಖೆ ಪ್ರಾರಂಭಿಸಲಾಗುತ್ತದೆ. ಅದು ಬೆಳೆದಾಗ, ತನಿಖೆ ವಿಭಿನ್ನ ತಿರುವು ಪಡೆಯುತ್ತದೆ. ಹೀಗಾಗಿ ಹೂತಿರುವ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿದೆ. ಆದರೆ, ಸೌಜನ್ಯ ಪ್ರಕರಣ ಸೇರಿದಂತೆ ಇನ್ನಾವುದೇ ಪ್ರಕರಣಗಳನ್ನು ಸೇರಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.
ಶವ ಹೂತಿರುವ ಆರೋಪ ಬೆಳಕಿಗೆ ಬಂದ ಹಂತಗಳು
ಜೂ.22 : ಧರ್ಮಸ್ಥಳ ಗ್ರಾಮದಲ್ಲಿ 20 ವರ್ಷಗಳ ಹಿಂದೆ ಅನೇಕ ಶವಗಳನ್ನು ಹೂತು ಹಾಕಲಾಗಿದೆ ಎಂದು ವಕೀಲರಾದ ಓಜಸ್ವಿಗೌಡ, ದೇಶಪಾಂಡೆ ಹೆಸರಲ್ಲಿ ಪತ್ರ ವೈರಲ್
ಜೂ.27: ವೈರಲ್ ಆದ ಪತ್ರ ನಕಲಿಯಲ್ಲ, ಬದಲಿಗೆ ಅಸಲಿ ಎಂದು ವಕೀಲರ ಸ್ಪಷ್ಟನೆ.
ಜು.3 : ದಕ್ಷಿಣ ಕನ್ನಡ ಎಸ್‌ಪಿ ಕಚೇರಿಗೆ ವಕೀಲರ ಭೇಟಿ. ವೈರಲ್ ಆದ ಪತ್ರದ ಬಗ್ಗೆ ಮಾಹಿತಿ. ವಕೀಲರ ಮೂಲಕ ಅಪರಿಚಿತ ವ್ಯಕ್ತಿ ದೂರು.
ಜು.4 : 1999ರಿಂದ 2014ರ ಅವಧಿಯಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಅಪರಿಚಿತ ವ್ಯಕ್ತಿ ದೂರಿನಲ್ಲಿ ಹೇಳಿಕೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
ಜು.10: ದೇಶಾದ್ಯಂತ ಈ ಬಗ್ಗೆ ವ್ಯಾಪಕ ಚರ್ಚೆ ಬಳಿಕ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣದೇವಿ ಸೂಚನೆ
ಜು.11 : ಬೆಳ್ತಂಗಡಿ ನ್ಯಾಯಾಲಯಕ್ಕೆ ವಕೀಲರೊಂದಿಗೆ ಗುರುತು ಮರೆಮಾಚಿ ಹಾಜರಾದ ವ್ಯಕ್ತಿ. ಪ್ರಕರಣದ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಿಕೆ
ಜು.13: ಅಪರಿಚಿತ ವ್ಯಕ್ತಿಯ ಗುರುತನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದವರ ವಿರುದ್ಧ ಬಂಟ್ವಾಳ ಡಿವೈಎಸ್‌ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೆ ಎಸ್‌ಪಿ ಸೂಚನೆ
ಜು.14: ರಾಜ್ಯ ಮಹಿಳಾ ಆಯೋಗದಿಂದ ಧರ್ಮಸ್ಥಳ ಗ್ರಾಮದಲ್ಲಿ ಶವಗಳು ಹೂತ ಘಟನೆಗೆ ಸಂಬಂಧಿಸಿದಂತೆ ಎಸ್‌ಐಟಿ ರಚನೆಗೆ ಆಗ್ರಹ.
ಜು.15: ವಕೀಲರ ತಂಡದಿಂದಲೂ ಎಸ್‌ಐಟಿ ತಂಡ ರಚನೆಗೆ ಸರ್ಕಾರಕ್ಕೆ ಮನವಿ.
ಜು.16: ವಕೀಲರಾದ ಬಾಲನ್ ಮತ್ತು ದ್ವಾರಕನಾಥ್ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ, ಎಸ್‌ಐಟಿ ರಚನೆಗೆ ಬೇಡಿಕೆ. ಹೂತಿದ್ದ ಶವಗಳ ಹೊರತೆಗೆಯುವ ಸಲುವಾಗಿ ಪೊಲೀಸರಿಗಾಗಿ ಕಾದ ಅಪರಿಚಿತ ವ್ಯಕ್ತಿ ಮತ್ತು ವಕೀಲರ ತಂಡ. ಅಪರಿಚಿತ ವ್ಯಕ್ತಿಯ ಬ್ರೈನ್ ಮ್ಯಾಪಿಂಗ್ ಅಗತ್ಯ ಎಂದು ಹೇಳಿದ ದಕ್ಷಿಣ ಕನ್ನಡ ಎಸ್‌ಪಿ.
ಜು.17: ಎಸ್‌ಐಟಿ ತನಿಖೆ ನಡೆಸುವಂತೆ ಹಿರಿಯ ವಕೀಲರಿಂದ ಸಹಿ ಮತ್ತು ಕೇರಳ ಸರ್ಕಾರ ಕೂಡ ತನಿಖೆಯಲ್ಲಿ ಭಾಗಿಯಾಗುವಂತೆ ಕೋರಿ ಪತ್ರ ಬರೆಯಲು ನಿವೃತ್ತ ನ್ಯಾಯಾಧೀಶರ ಅಭಿಪ್ರಾಯ
ಜು. 18: ಎಸ್‌ಐಟಿ ರಚನೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತೆ ನಾಗಮಣಿ ಎಂಬುವರಿಂದ ರಾಹುಲ್‌ಗಾಂಧಿಗೆ ಪತ್ರ. ನಟ ಪ್ರಕಾಶ್ ರಾಜ್ ರಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ
ಜು.20: ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿ ಆದೇಶ ಹೊರಡಿಸಿದ ರಾಜ್ಯಸರ್ಕಾರ.