ಧರ್ಮಸ್ಥಳ ಪ್ರಕರಣಕ್ಕೆ ಮಹತ್ವದ ತಿರುವು: ತನಿಖೆಗೆ ಹಿರಿಯ ಐಪಿಎಸ್​​ ಅಧಿಕಾರಿಗಳ ಎಸ್​ಐಟಿ  ರಚನೆ
x

ಧರ್ಮಸ್ಥಳ ಪ್ರಕರಣಕ್ಕೆ ಮಹತ್ವದ ತಿರುವು: ತನಿಖೆಗೆ ಹಿರಿಯ ಐಪಿಎಸ್​​ ಅಧಿಕಾರಿಗಳ ಎಸ್​ಐಟಿ ರಚನೆ

ಧರ್ಮಸ್ಥಳದಲ್ಲಿ ಪೌರಕಾರ್ಮಿಕನೊಬ್ಬ, ತಾನು ಎರಡು ದಶಕಗಳ ಕಾಲ ನೂರಾರು ಶವಗಳನ್ನು ಹೂತಿರುವುದಾಗಿ ನ್ಯಾಯಾಲಯದಲ್ಲಿ ನೀಡಿದ ಆಘಾತಕಾರಿ ಹೇಳಿಕೆಯು ಈ ತನಿಖೆಗೆ ಮೂಲ ಕಾರಣವಾಗಿದೆ.


ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಮತ್ತು ನ್ಯಾಯಕ್ಕಾಗಿ ವ್ಯಾಪಕ ಜನಾಂದೋಲನಕ್ಕೆ ಕಾರಣವಾಗಿದ್ದ ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣದ ತನಿಖೆಗೆ, ರಾಜ್ಯ ಸರ್ಕಾರವು ಅಂತಿಮವಾಗಿ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ (ADGP) ಪ್ರಣವ ಮೊಹಾಂತಿ ಅವರು ಈ ಉನ್ನತ ಮಟ್ಟದ ಎಸ್‌ಐಟಿಯ ನೇತೃತ್ವ ವಹಿಸಲಿದ್ದಾರೆ. ಅವರಿಗೆ ಸಹಕಾರ ನೀಡಲು, ನೇಮಕಾತಿ ವಿಭಾಗದ ಉಪ ಪೊಲೀಸ್ ಮಹಾನಿರ್ದೇಶಕ ಎಂ.ಎನ್. ಅನುಚೇತ್, ಸಿಎಆರ್ ಕೇಂದ್ರ ಕಚೇರಿಯ ಉಪ ಪೊಲೀಸ್ ಆಯುಕ್ತರಾದ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಅವರು ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಧರ್ಮಸ್ಥಳದಲ್ಲಿ ಪೌರಕಾರ್ಮಿಕನೊಬ್ಬ, ತಾನು ಎರಡು ದಶಕಗಳ ಕಾಲ ನೂರಾರು ಶವಗಳನ್ನು ಹೂತಿರುವುದಾಗಿ ನ್ಯಾಯಾಲಯದಲ್ಲಿ ನೀಡಿದ ಆಘಾತಕಾರಿ ಹೇಳಿಕೆಯು ಈ ತನಿಖೆಗೆ ಮೂಲ ಕಾರಣವಾಗಿದೆ. ಈ ಭಾಗದಲ್ಲಿ ವ್ಯಾಪಕವಾಗಿ ಅತ್ಯಾಚಾರ, ಹತ್ಯೆ ಮತ್ತು ದೌರ್ಜನ್ಯಗಳು ನಡೆದಿವೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು, ಹೋರಾಟಗಾರರು ಮತ್ತು ಹಲವು ಗಣ್ಯರು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದರು. ರಾಜ್ಯ ಮಹಿಳಾ ಆಯೋಗವೂ ಸಹ ಸರ್ಕಾರಕ್ಕೆ ಪತ್ರ ಬರೆದು ತನಿಖೆಗೆ ಆಗ್ರಹಿಸಿತ್ತು.

ಈ ವ್ಯಾಪಕ ಒತ್ತಡದ ಫಲವಾಗಿ, ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ನೀಡಿದ್ದ ಭರವಸೆಯಂತೆ ಸರ್ಕಾರವು ಇದೀಗ ಎಸ್‌ಐಟಿ ರಚನೆಗೆ ಮುಂದಾಗಿದೆ. ಸರ್ಕಾರದ ಆದೇಶದ ಪ್ರಕಾರ, ಈ ವಿಶೇಷ ತನಿಖಾ ತಂಡವು ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಮಾತ್ರವಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಯಾವುದೇ ಇತರ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಬಗ್ಗೆಯೂ ಗಮನಹರಿಸಿ ತನಿಖೆ ನಡೆಸಲಿದೆ. ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Read More
Next Story