ಗಜಶ್ರೇಷ್ಠ ಅಭಿಮನ್ಯುವಿಗೆ 59 | ಗಾಂಭೀರ್ಯದ ನಡಿಗೆಗೆ ಈ ವರ್ಷವೇ ವಿದಾಯ?

ಈಗ 59 ವರ್ಷಕ್ಕೆ ಕಾಲಿಟ್ಟಿರುವ ಅಭಿಮನ್ಯು ಆನೆ ಅಂಬಾರಿ ಹೊರುವುದು ಇದೇ ವರ್ಷಕ್ಕೆ ಕೊನೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿಯ ದಸರಾದಲ್ಲಿ ಅಭಿಮನ್ಯು ಆಕರ್ಷಣೆಯ ಕೇಂದ್ರ ಬಿಂದು ಆಗಲಿದ್ದಾನೆ;

Update: 2025-07-25 00:30 GMT

ಒಂದೂವರೆ ದಶಕಗಳಿಂದಲೂ ದಸರಾದಲ್ಲಿ ಭಾಗಿಯಾಗುತ್ತಾ ಎಲ್ಲರ ಕಣ್ಮನ ಸೆಳೆದು ಸೈ ಎನ್ನಿಸಿಕೊಂಡಿರುವ ಆನೆ ಅಭಿಮನ್ಯುವಿಗೆ ಇದು ಕಡೆಯ ದಸರಾ ಆಗುವ ಸಾಧ್ಯತೆ ಇದೆ. ಅರ್ಜುನನ ನಂತರ ಗಜಪಡೆಯ ನೇತೃತ್ವ ವಹಿಸಿಕೊಂಡ ಅಭಿಮನ್ಯು 2020ರಿಂದಲೂ ಅಂಬಾರಿ ಹೊರುತ್ತಾ ಬಂದಿದ್ದು, ಇದೀಗ ಆತನಿಗೆ 59 ವರ್ಷ ತುಂಬಿದೆ.

ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ 60 ವರ್ಷ ತುಂಬಿದ ಆನೆಗಳನ್ನು ಯಾವುದೇ ಕಾರ್ಯಾಚರಣೆ, ಭಾರ ಹೊರಿಸುವುದು, ವಿವಿಧ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದು ನಿಷಿದ್ಧ. ಇದರಿಂದಾಗಿ ಅಭಿಮನ್ಯು ಈ ಬಾರಿ ಕಡೆಯದಾಗಿ ಅಂಬಾರಿ ಹೊತ್ತು ಗಾಂಭೀರ್ಯದಿಂದ ಸಾಗುವ ಚೆಂದಕ್ಕೆ ತೆರೆಬೀಳುವುದೇ ಎನ್ನುವ ಪ್ರಶ್ನೆ ಮೂಡಿದೆ.

ಅರಣ್ಯ ಇಲಾಖೆ ಮಾರ್ಗಸೂಚಿ ಅನ್ವಯ 60 ವರ್ಷ ದಾಟಿದ ಆನೆಗಳ ಮೇಲೆ ಯಾವುದೇ ಭಾರ ಹೊರಿಸಬಾರದು, ಹೆಚ್ಚಿನ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳುವಂತಿಲ್ಲ. ಅದರಂತೆ ಈಗ 59 ವರ್ಷಕ್ಕೆ ಕಾಲಿಟ್ಟಿರುವ ಅಭಿಮನ್ಯು ಆನೆ ಅಂಬಾರಿ ಹೊರುವುದು ಇದೇ ವರ್ಷಕ್ಕೆ ಕೊನೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿಯ ದಸರಾದಲ್ಲಿ ಅಭಿಮನ್ಯು ಆಕರ್ಷಣೆಯ ಕೇಂದ್ರ ಬಿಂದು ಆಗಲಿದ್ದಾನೆ. ಜೊತೆಗೆ ಭಾವುಕ ವಿದಾಯ ಸಲ್ಲಿಕೆಯಾಗುವ ಸಾಧ್ಯತೆಯೂ ಇದೆ. ಈ ಸಂಬಂಧ ಮಾತನಾಡಿರುವ ಡಿಸಿಎಫ್‌ ಪ್ರಭುಗೌಡ ಅವರು, ಅಭಿಮನ್ಯುಗೆ ವಯಸ್ಸಾಗಿದ್ದರೂ ತುಂಬಾ ಆರೋಗ್ಯವಾಗಿ ಸದೃಢವಾಗಿದ್ದಾನೆ, ಮುಂದಿನ ವರ್ಷ ಏನು ನಿರ್ಧಾರ ಆಗುತ್ತದೋ ನೋಡಬೇಕು. ಅಭಿಮನ್ಯು ನಂತರದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ ಸೇರಿ ಸಾಕಷ್ಟು ಆನೆಗಳು ಸಮರ್ಥವಾಗಿ ಇವೆ ಎಂದು ತಿಳಿಸಿದ್ದಾರೆ.

ಅರ್ಜುನನ ನಂತರದ ಅಭಿಮನ್ಯು

2010ರಿಂದಲೂ ಅಂಬಾರಿಯನ್ನು ಹೊತ್ತು ಸಾಗಿದ್ದು ಅರ್ಜುನ. ಅವನ ನಂತರ 2020ರಿಂದ ಆ ಜವಾಬ್ದಾರಿಯನ್ನು ವಹಿಸಿಕೊಂಡು ಅಂಬಾರಿಯ ಮೆರವಣಿಗೆಗೆ ಮೆರುಗು ತುಂಬಿದವನು ಅಭಿಮನ್ಯು. ಇನ್ನು ಅರ್ಜುನ ಆನೆ ಕಾರ್ಯಾಚರಣೆಯಲ್ಲಿ ತೀರಿಕೊಂಡಾಗ ಆ ಶೂನ್ಯವನ್ನು ತುಂಬಿದ್ದೂ ಇದೇ ಅಭಿಮನ್ಯು. 1970ರಲ್ಲಿ ನಾಗರಹೊಳೆ ಅರಣ್ಯ ವ್ಯಾಪ್ತಿಯ ಹೆಬ್ಬಳ್ಳದಲ್ಲಿ ಖೆಡ್ಡಕ್ಕೆ ಕೆಡವಿ ಸೆರೆ ಹಿಡಿದ ಆನೆ ಈಗ ಅಭಿಮನ್ಯುವಾಗಿ ಜನರ ಮನದಲ್ಲಿ ಹಸಿರಾಗಿದೆ.

ಜಂಬೂಸವಾರಿಯಲ್ಲಿ ಸುಂದರವಾಗಿ ಅಲಂಕೃತಗೊಂಡು ಗಾಂಭೀರ್ಯದಿಂದ ಹೆಜ್ಜೆ ಹಾಕುವುದಿರಲಿ, ಕಾಡಿನಲ್ಲಿ ಪುಂಡಾನೆ, ಹುಲಿಗಳ ಸೆರೆಯ ಕಾರ್ಯಾಚರಣೆ ಇರಲಿ ಅಭಿಮನ್ಯು ಮೊದಲ ಆಯ್ಕೆ. ಕಾಡಿನಲ್ಲಿ ಹುಲಿ ವಾಸನೆ ಹಿಡಿದು ಅಪ್ರತಿಮ ಧೈರ್ಯದಿಂದ ಅವುಗಳ ಹಿಡಿಯಲು ನೆರವಾಗುವುದು, ಆಟಾಟೋಪ ಮಾಡುವ ಆನೆಗಳ ಸೊಕ್ಕು ಇಳಿಸುವುದು, ಸಂಕಷ್ಟಕ್ಕೆ ಸಿಲುಕಿದ ಪ್ರಾಣಿಗಳ ರಕ್ಷಣೆ ಹೀಗೆ ಎಲ್ಲಾ ಕಾರ್ಯಗಳಿಗೂ ಅಭಿಮನ್ಯುವನ್ನು ಮುಂದಾಳಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.


ಸಣ್ಣಪ್ಪ, ವಸಂತನ ಗರಡಿಯ ಸರದಾರ

1970ರಲ್ಲಿ ಸೆರೆ ಸಿಕ್ಕ ಅಭಿಮನ್ಯು ಮೊದಲು ಪಳಗಿದ್ದು ಮಾವುತ ಸಣ್ಣಪ್ಪ ಅವರಿಂದ. ಆನೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಸಣ್ಣಪ್ಪ ಅಭಿಮನ್ಯುವನ್ನು ಎಲ್ಲಾ ಬಗೆಯ ಚಟುವಟಿಕೆಗಳಿಗೂ ಬೇಗನೇ ಒಗ್ಗಿಕೊಳ್ಳುವಂತೆ ಮಾಡುತ್ತಾನೆ. ನಂತರ ಸಣ್ಣಪ್ಪನವರ ಮಗ ವಸಂತ ಅಭಿಮನ್ಯುವನ್ನು ನೋಡಿಕೊಳ್ಳುತ್ತಿದ್ದು, ಈ ಜೋಡಿ 300ಕ್ಕೂ ಹೆಚ್ಚು ಆನೆ ಕಾರ್ಯಾಚರಣೆ, 34 ಹುಲಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಬೆಳಿಗ್ಗೆ ಕಾಡಿನಲ್ಲಿ ಹೋಗಿ ಮೇವು ತಿಂದು ಬರುವ ಅಭಿಮನ್ಯು ವಸಂತ ನೀಡುವ ಬೆಲ್ಲಕ್ಕಾಗಿ ಈಗಲೂ ಮಗುವಿನಂತೆ ಮನೆ ಬಾಗಿಲ ಮುಂದೆ ನಿಂತು ಘೀಳಿಡುತ್ತಾನೆ. ವಸಂತ ತನ್ನ ಮೇಲೆ ಕೂತಿದ್ದರೆ ಸಾಕು ಯಾವುದೇ ರೀತಿಯ ಸಾಹಸ ಕಾರ್ಯಗಳಿಗೂ ಎದೆಗುಂದದೆ ಮುಂದಡಿ ಇಡುತ್ತಾನೆ.


ದಸರಾ ವೇಳೆಯಲ್ಲಂತೂ ಈತನ ನಡವಳಿಕೆ ಎಲ್ಲರ ಮನಸೂರೆಗೊಳ್ಳುತ್ತದೆ. ಜಂಬೂಸವಾರಿ ಆರಂಭವಾಗುವ ವೇಳೆ ರಾಷ್ಟ್ರಗೀತೆ, ನಾಡಗೀತೆ ಹಾಡುವ ವೇಳೆ ಅಭಿಮನ್ಯೂ ಮುಂದಿನ ಎರಡೂ ಕಾಲುಗಳನ್ನು ಮೇಲೆತ್ತಿ ಗೌರವ ಸಲ್ಲಿಸುತ್ತಾನೆ. ಸೊಂಡಿಲನ್ನು ಮೇಲಕ್ಕೆ ಮಾಡಿ ನಿಲ್ಲುತ್ತಾನೆ. ಇದೆಲ್ಲವನ್ನೂ ತನ್ನ ಅನುಭವದಿಂದಲೇ ಸಿದ್ಧಿಸಿಕೊಂಡಿರುವ ಈ ಗಜಶ್ರೇಷ್ಠ ಎಂದರೆ ಎಲ್ಲರಿಗೂ ಪ್ರೀತಿ, ಅಕ್ಕರೆ.


ಮುಂದಿನ ನಿರ್ಧಾರಗಳ ಬಗ್ಗೆ ಕುತೂಹಲ..!

ಅಭಿಮನ್ಯು ಆರೋಗ್ಯದ ಬಗ್ಗೆ ಈಗಾಗಲೇ ವರದಿ ಸಿದ್ಧವಾಗಿದೆ. 5450 KG ತೂಕ ಇರುವ ಈತ, 2.74 ಮೀಟರ್‌ ಎತ್ತರ ಇದ್ದಾನೆ, ಅಂಬಾರಿ ಹೊರುವುದಕ್ಕೆ ಸಮತಟ್ಟಾದ ಬೆನ್ನು, ಅರಮನೆ ಮುಂಭಾಗದಿಂದ ಬನ್ನಿಮಂಟಪದ ವರೆಗೆ 5.2 KM ದೂರ ಕ್ರಮಿಸುವ ಶಕ್ತಿ ಇದೆ. ಆದರೆ ವಯಸ್ಸಿನ ಕಾರಣದಿಂದ ಮುಂದಿನ ಬಾರಿಯ ದಸರಾದಲ್ಲಿ ಅಂಬಾರಿ ಹೊರುವ ಅವಕಾಶ ಸಿಗುವುದೋ, ಇಲ್ಲವೋ ಎನ್ನುವ ಅನುಮಾನ ಇದೆ. ಈ ಸಂಬಂಧ ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿರುವ ಡಿಸಿಎಫ್‌ ಪ್ರಭುಗೌಡ ಅವರು, ಅಭಿಮನ್ಯುಗೆ ವಯಸ್ಸಾಗಿದ್ದರೂ ತುಂಬಾ ಆರೋಗ್ಯವಾಗಿ ಸದೃಢವಾಗಿದ್ದಾನೆ, ಮುಂದಿನ ವರ್ಷ ಏನು ನಿರ್ಧಾರ ಆಗುತ್ತದೋ ನೋಡಬೇಕು. ಅಭಿಮನ್ಯು ನಂತರದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಕಂಜನ್‌ ಸೇರಿ ಸಾಕಷ್ಟು ಆನೆಗಳು ಸಮರ್ಥವಾಗಿ ಇವೆ ಎಂದು ತಿಳಿಸಿದ್ದಾರೆ.


ಮಧ್ಯಪ್ರದೇಶದಲ್ಲಿ ಹೀರೋ ಆಗಿದ್ದ ಅಭಿಮನ್ಯು

ಮಧ್ಯಪ್ರದೇಶ, ಛತ್ತೀಸ್‌ಗಢದ ಸರ್ಗೂಜ ಅರಣ್ಯ ಪ್ರದೇಶದಲ್ಲಿ ಕಾಡು ಆನೆಗಳ ಹಾವಳಿ ಹೆಚ್ಚಿದ್ದ ಸಂದರ್ಭದಲ್ಲಿ ಅವುಗಳನ್ನು ಸೆರೆಹಿಡಿಯುವುದಕ್ಕಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಇದೇ ಅಭಿಮನ್ಯು. ನಾಲ್ಕು ತಿಂಗಳಿಗೂ ಹೆಚ್ಚಿನ ಸಮಯದ ಅಭಿಮನ್ಯು ಮತ್ತು ಇತರ ಆನೆಗಳ ತಂಡ ಸರ್ಗೂಜ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಎಪ್ಪತ್ತಕ್ಕೂ ಅಧಿಕ ಆನೆಗಳನ್ನು ಸೆರೆ ಹಿಡಿಯುತ್ತವೆ. ಅಲ್ಲಿನ ಜನರಿಗೆ ಆಗುತ್ತಿದ್ದ ತೊಂದರೆ ತಪ್ಪಿಸುತ್ತವೆ. ಆ ವೇಳೆಗೆ ಅಭಿಮನ್ಯುವಿನ ಪರಾಕ್ರಮ, ಶಕ್ತಿ, ಬುದ್ದಿವಂತಿಕೆ, ಕಾರ್ಯಾಚರಣೆಯಲ್ಲಿ ತೋರುತ್ತಿದ್ದ ಚಾಕಚಕ್ಯತೆ ದೇಶಾದ್ಯಂತ ಸುದ್ದಿಯಾಗುತ್ತದೆ. ಇದರ ಕುರಿತಾಗಿ ರೂಪುಗೊಂಡ ದಿ ಲಾಸ್ಟ್‌ ಮೈಗ್ರೇಷನ್‌ – ವೈಲ್ಡ್‌ ಎಲಿಫೆಂಟ್‌ ಕ್ಯಾಪ್ಚರ್‌ ಎನ್ನುವ ಸಾಕ್ಷ್ಯ ಚಿತ್ರದಲ್ಲೂ ಅಭಿಮನ್ಯು ಕಾಡಿಸಿಕೊಂಡು ಮತ್ತಷ್ಟು ಪ್ರಸಿದ್ಧವಾಗುತ್ತಾನೆ.


ಸೌಮ್ಯ ಸ್ವಭಾವದ ಬಲಶಾಲಿ

ಅಭಿಮನ್ಯು ತಾನು ಇರುವ ಪ್ರದೇಶ, ಸನ್ನಿವೇಶಕ್ಕೆ ತಕ್ಕಂತೆ ವರ್ತಿಸುವ ಬುದ್ಧಿವಂತ. ಎಪ್ಪತ್ತರ ದಶಕದಲ್ಲಿ ಸೆರೆ ಸಿಕ್ಕಾಗ ಲಾರಿಗಳಿಗೆ ಟಿಂಬರ್‌ ತುಂಬಿಸುವ ಕೆಲಸ ಕೊಟ್ಟಾಗ ಅದನ್ನು ಸಮರ್ಘವಾಗಿ ನಿಭಾಯಿಸಿದವನು. ಮಾವುತರು ಕೊಟ್ಟ ಸಂಜ್ಞೆಗಳನ್ನು ತಕ್ಷಣ ಅರ್ಥ ಮಾಡಿಕೊಂಡು ಅದರಂತೆ ಕೆಲಸ ಮಾಡುವ ನಿಪುಣ. ಕಾರ್ಯಾಚರಣೆ ವೇಳೆ ಇತರ ಆನೆಗಳು ಭಯಪಟ್ಟರೂ ಅವುಗಳಿಗೂ ಧೈರ್ಯ ಬರುವಂತೆ ಮಾಡಿ ಪುಂಡಾನೆಗಳ ಸೊಕ್ಕು ಅಡಗಿಸುವವನು.


ದಸರಾ ವೇಳೆ ಭಾಗಿಯಾದಾಗ ಅಲ್ಲಿನ ಸನ್ನಿವೇಶಕ್ಕೆ ಅನುಗುಣವಾಗಿ ಸೌಮ್ಯ ಸ್ವಭಾವದಿ ವರ್ತಿಸುವ ಜಾಣ. ಫೋಟೋ ತೆಗೆಸಿಕೊಳ್ಳಲು ಮುಗಿ ಬೀಳುವ ಜನರ ಮಧ್ಯದಲ್ಲಿ, ಪಿರಂಗಿ ತೋಪುಗಳ ಶಬ್ದದ ನಡುವಲ್ಲಿ, ಜನಸಾಗರದ ಅಬ್ಬರಗೊಳಗೆ ಸ್ವಲ್ಪವೂ ವಿಚಲಿತನಾಗದೇ ಗಂಭೀರವಾಗಿ ಇರುವ ಬಲಶಾಲಿ ಈತ. ಇದಕ್ಕಾಗಿಯೇ ಅಭಿಮನ್ಯು ಎಲ್ಲರಿಗೂ ಅಚ್ಚುಮೆಚ್ಚು.

Tags:    

Similar News