Mother Milk Bank | ವಾಣಿ ವಿಲಾಸ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ 'ಅಮೃತಧಾರೆ'ಯ ವರ ; ಅಪೌಷ್ಟಿಕತೆ ದೂರ
ತಾಯಿಯ ಎದೆ ಹಾಲಿನಲ್ಲಿ ಲವಣಾಂಶ, ಪ್ರೋಟೀನ್, ಶಕ್ಕರಪಿಷ್ಠ, ಫ್ಯಾಟ್, ಪ್ರತಿರೋಧಕ ಶಕ್ತಿ ಹೆಚ್ಚಿಸುವ ಜೀವಕಣ ಅತ್ಯಧಿಕವಾಗಿದ್ದು, ಇದು ಶಿಶುವಿನ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗಿದೆ.;
ಅವಧಿ ಪೂರ್ವ ಜನನ, ಕಡಿಮೆ ತೂಕ ಅಥವಾ ತಾಯಿಯ ಅನಾರೋಗ್ಯದಿಂದಾಗಿ ಎದೆಹಾಲಿನಿಂದ ವಂಚಿತರಾಗುವ ಶಿಶುಗಳಿಗೆ 'ಅಮೃತ ಪಾನ' ಉಣಿಸುತ್ತಿರುವ ಬೆಂಗಳೂರಿನ ʻವಾಣಿ ವಿಲಾಸ ಆಸತ್ರೆʼಯ ತಾಯಂದಿರ ಎದೆ ಹಾಲಿನ ಬ್ಯಾಂಕ್, ಕಳೆದ ಮೂರ್ನಾಲ್ಕು ವರ್ಷಗಳಿಂದ ಶಿಶು ಮರಣ ಪ್ರಮಾಣ ತಗ್ಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ತಾಯಂದಿರ ಎದೆ ಹಾಲಿನ ಬ್ಯಾಂಕ್ ʻಅಮೃತಧಾರೆʼ ಸ್ಥಾಪಿಸುವ ಮೂಲಕ ನವಜಾತ ಶಿಶುಗಳ ಅಪೌಷ್ಟಿಕತೆ ನನ್ನ ದೂರ ಮಾಡುತ್ತಿದೆ.
ತಾಯಿಯ ಎದೆ ಹಾಲಿನಲ್ಲಿ ಲವಣಾಂಶ, ಪ್ರೋಟೀನ್, ಶಕ್ಕರಪಿಷ್ಠ, ಫ್ಯಾಟ್, ಪ್ರತಿರೋಧಕ ಶಕ್ತಿ ಹೆಚ್ಚಿಸುವ ಜೀವಕಣ ಅತ್ಯಧಿಕವಾಗಿದ್ದು, ಇದು ಶಿಶುವಿನ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗಿದೆ. ಹುಟ್ಟಿದಾಗಿನಿಂದ ಶಿಶುವಿಗೆ ಆರು ತಿಂಗಳವರೆಗೆ ತಾಯಿ ಹಾಲನ್ನು ಬಿಟ್ಟು ಬೇರೆ ಏನನ್ನು ನೀಡಬಾರದೆಂದು ಎನ್ನುತ್ತಾರೆ ವೈದ್ಯರು. ಅದಕ್ಕಾಗಿ ಇಂತಹ ತಾಯಿ ಹಾಲು ವಂಚಿತ ಮಕ್ಕಳಿಗೆ ಈ ಹಾಲು ವರದಾನವಾಗಿದೆ.
ಮಾರ್ಚ್ 8, 2022 ರಲ್ಲಿ ಮಹಿಳಾ ದಿನಾಚರಣೆ ದಿನದಂದೇ, ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆ ವಾಣಿವಿಲಾಸದಲ್ಲಿ ತಾಯಿ ಎದೆಹಾಲು ಬ್ಯಾಂಕ್ ಯೋಜನೆ ಆರಂಭಗೊಂಡಿದ್ದು, ನೂರಾರು ನವಜಾತ ಶಿಶುಗಳಿಗೆ ಅನುಕೂಲವಾಗಿದೆ.
ಒಂದು ಕೋಟಿ ರೂ. ವೆಚ್ಚದಲ್ಲಿ'ತಾಯಂದಿರ ಎದೆ ಹಾಲಿನ ಬ್ಯಾಂಕ್' ನಿರ್ಮಾಣ ಮಾಡಲಾಗಿದ್ದು, ಪ್ರತಿ ದಿನ 20-30 ತಾಯಂದಿರು ಎದೆ ಹಾಲು ನೀಡುತ್ತಿದ್ದಾರೆ. ಈ ತಾಯಂದಿರ ಎದೆ ಹಾಲಿನ ಬ್ಯಾಂಕ್‌ಗೆ ʼಅಮೃತಧಾರೆʼ ಎಂದು ಹೆಸರಿಡಲಾಗಿದೆ.
1000 ದಿಂದ 1,500ಕ್ಕೂ ಅಧಿಕ ಹೆರಿಗೆ
ವಾಣಿವಿಲಾಸ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ( ಹೆಚ್‌ಒಡಿ) ಆಗಿರುವ ಡಾ.ಸಹನ ದೇವದಾಸ್ ಅವೆಉ ʻದ ಫೆಡರಲ್ ಕರ್ನಾಟಕ' ದೊಂದಿಗೆ ಮಾತನಾಡಿ, ಪ್ರಸ್ತುತ ನಮ್ಮ ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 1000 ದಿಂದ 1,500ಕ್ಕೂ ಅಧಿಕ ಹೆರಿಗೆಗಳಾಗುತ್ತವೆ. ಪ್ರತಿ ತಿಂಗಳು ಜನಿಸುವ ಮಕ್ಕಳಲ್ಲಿ ಕನಿಷ್ಠ 150 ಶಿಶುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಎದೆ ಹಾಲು ಅಗತ್ಯವಿದೆ. ಈ ಬ್ಯಾಂಕ್ ಪ್ರಾರಂಭದ ಬಳಿಕ ನಮ್ಮಲ್ಲಿ ಜನಿಸಿದ ಯಾವ ಮಗುವೂ ಎದೆ ಹಾಲಿನಿಂದ ವಂಚಿತವಾಗುತ್ತಿಲ್ಲ. ಈ ಎದೆಹಾಲಿನಿಂದಾಗಿ ಶಿಶು ಮರಣ ಪ್ರಮಾಣವು ಕಡಿಮೆಯಾಗಿದೆ ಎಂದು ಹೇಳಿದರು.
ತಾಯಿಯ ಎದೆಹಾಲಿನಲ್ಲಿ ಪೌಷ್ಠಿಕಾಂಶ, ರೋಗ ನಿರೋಧಕ ಶಕ್ತಿ ಇದ್ದು, ಇದು ಏಕೈಕ ಅಮೃತಪಾನ ಎಂದರು.
ಮಗುವಿಗೆ ತೂಕದ ಆಧಾರದ ಮೇಲೆ ಹಾಲು ನೀಡಲಾಗುತ್ತದೆ. ಒಂದು ಕೆ.ಜಿ. ತೂಕ ಹೊಂದಿರುವ ಮಗುವಿಗೆ ಮೊದಲ ದಿನ 15ರಿಂದ 20 ಎಂ.ಎಲ್, ಎರಡನೇ ದಿನ 30 ರಿಂದ 40 ಎಂಎಲ್ ಹಾಗೂ 5 ನೇಯ ದಿನ 150 ಎಂಎಲ್ ಹಾಲನ್ನು ನೀಡಲಾಗುತ್ತದೆ. ಸಾಮ್ಯಾನವಾಗಿ ಮಗುವಿಗೆ ದಿನವೊಂದಕ್ಕೆ 8 ರಿಂದ 12 ಬಾರಿ ಹಾಲು ನೀಡಬೇಕಾಗುತ್ತದೆ ಎನ್ನುತ್ತಾರೆ ಡಾ.ಸಹನ ದೇವದಾಸ್.
ದುಬೈ, ಸಿಂಗಾಪುರದಿಂದಲೂ ದಾನಿಗಳು
ಸದ್ಯ ವಾಣಿವಿಲಾಸ ಆಸ್ಪತ್ರೆಯಲ್ಲಿ ಹುಟ್ಟಿರುವ ಕಂದಮ್ಮಗಳಿಗೆ ಮಾತ್ರ ಈ ಹಾಲು ಬಳಸಲಾಗುತ್ತಿದೆ. ಹೊರಗಿನ ಯಾವುದೇ ಶಿಶುಗಳಿಗೆ ಎದೆ ಹಾಲು ಶೇಖರಣೆ ಘಟಕದಿಂದ ತಾಯಿ ಹಾಲನ್ನು ನೀಡಲಾಗುತ್ತಿಲ್ಲ. ಆದರೆ, ಹೊರಗಿನಿಂದ ಬಂದು ತಾಯಂದಿರು ಹಾಲನ್ನು ಕೊಟ್ಟು ಹೋಗುತ್ತಿದ್ದಾರೆ. ದುಬೈ ಮತ್ತು ಸಿಂಗಾಪುರದಿಂದಲೂ ದಾನಿಗಳು ತಮ್ಮ ಎದೆಹಾಲು ನೀಡುತ್ತಿದ್ದಾರೆ ಎಂದು ಡಾ. ಸಹನಾ ದೇವದಾಸ್ ಅವರು ʻದ ಫೆಡರಲ್ ಕರ್ನಾಟಕʼಕ್ಕೆ ಮಾಹಿತಿ ನೀಡಿದರು.
ಎದೆಹಾಲು ದಾನ ಮಾಡಿದರೆ ಅದು ಎಂದಿಗೂ ಕಡಿಮೆಯಾಗುವುದಿಲ್ಲ, ಬದಲಿಗೆ "ಅಕ್ಷಯಪಾತ್ರೆ"ಯಂತೆ ಹೆಚ್ಚುತ್ತಾ ಹೋಗುತ್ತದೆ. ದಾನಿಗಳಿಂದ ಹಾಲು ಸಂಗ್ರಹಿಸುವುದರಿಂದ ಹಿಡಿದು, ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಅಗತ್ಯವಿರುವ ಶಿಶುಗಳಿಗೆ ತಲುಪಿಸುವವರೆಗೂ ನಾವು ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುತ್ತೇವೆ. ಕಡಿಮೆ ತೂಕ ಇರುವ ಮಕ್ಕಳಿಗೆ, ಅಂದರೆ 700 ರಿಂದ 800 ಗ್ರಾಂ ಇರುವ ಶಿಶುಗಳಿಗೆ, ಎದೆಹಾಲು ಅತ್ಯಂತ ಪ್ರಯೋಜನಕಾರಿ ಎಂದು ಹೇಳಿದರು.
ಯಾರಿಗೆ ಅವಶ್ಯಕ?
ಮಗುವಿನ ತಾಯಿ ಅನಾರೋಗ್ಯಕ್ಕೆ ಒಳಗಾದಾಗ, ತಾಯಿಗೆ ಎದೆ ಹಾಲು ಕೊರತೆ ಆದಾಗ, ಅನಾಥ ಮಗು, ಅವಧಿ ಪೂರ್ವ ಜನಿಸಿದ ಮಗು ಸೇರಿದಂತೆ ಒಟ್ಟಾರೆ ತನ್ನ ಹೆತ್ತ ತಾಯಿಯಿಂದ ಸೂಕ್ತ ಕಾಲಕ್ಕೆ ಹಾಲನ್ನು ಕುಡಿಯಲಾಗದ ಮಗುವಿಗೆ ಇದರ ಪ್ರಯೋಜನ ದೊರೆಯಲಿದೆ.
ಹಾಲು ಸಂಗ್ರಹ ಹೇಗೆ?
ತಾಯಿ ಎದೆಹಾಲು ಸಂಗ್ರಹಣೆಯ ಬಗ್ಗೆ ʻದ ಫೆಡರಲ್ ಕರ್ನಾಟಕʼಕ್ಕೆ ವಿವರಿಸಿದ ಸಿಎಲ್‌ಎಂಸಿ ವ್ಯವಸ್ಥಾಪಕಿ ಆಗಿರುವ ಅರ್ಚನಾ ಬಿ ಅವರು, ಆಸ್ಪತ್ರೆಯಲ್ಲಿ ಹೆರಿಗೆಯಾಗುವ ತಾಯಂದಿರಿಂದ ಹಾಲು ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಹಾಲನ್ನು ಬ್ಯಾಕ್ಟೀರಿಯಾ ಪರೀಕ್ಷೆಗೆ ಒಳಪಡಿಸಿದ ನಂತರ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಶೇಖರಿಸಿಡಲಾಗುತ್ತಿದೆ. ಇಂತಹ ಹಾಲನ್ನು ಗರಿಷ್ಠ 6 ತಿಂಗಳ ಕಾಲ ಸಂಗ್ರಹಿಸಿ ನೀಡಬಹುದು. ಮೊದಲಿಗೆ ಉಪಕರಣ ಬಳಸಿ ಎದೆಹಾಲು ದಾನ ಮಾಡುವ ತಾಯಿಯಿಂದ ಪಂಪ್ ಮಾಡಿ ಪ್ಯಾಶ್ಚರೀಕರಣ ಪ್ರಕ್ರಿಯೆ ಮಾಡಿ ಆ ಬಳಿಕ ಶೀತಲಿಕರಣ ಮಾಡಿ ಎದೆ ಹಾಲು ಸಂಗ್ರಹಿಸಲಾಗುತ್ತದೆ ಎಂದು ವಿವರಿಸಿದರು.
ಸುರಕ್ಷತೆಗೆ ಆದ್ಯತೆ
ಎದೆಹಾಲು ಬ್ಯಾಂಕ್‌ನಲ್ಲಿ ದಾನಿ ತಾಯಿಯಿಂದ ಸಂಗ್ರಹಿಸುವ ಎದೆ ಹಾಲನ್ನು ಮಕ್ಕಳ ಆರೋಗ್ಯ, ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಲನ್ನು ಹಲವು ಪ್ರಾರಂಭಿಕ ಹಂತದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತದೆ. ಬಳಿಕ ಪಾಶ್ಚರೀಕರಿಸಿ ರೋಗಾಣುಗಳನ್ನು ನಾಶ ಮಾಡಿ, ಉಳಿದ ಪೌಷ್ಠಿಕಾಂಶ ಭರಿತ ಹಾಲನ್ನು ಬಾಟಲಿಗೆ ಹಾಕಿ ಭದ್ರಗೊಳಿಸಲಾಗುತ್ತದೆ ಎಂದು ಅರ್ಚನಾ ವಿವರಿಸಿದರು.
ಹಾಲು ಕೊಡುವ ಕ್ರಮ
ಕೆಲವು ಬಾಣಂತಿಯರಲ್ಲಿ ಎದೆ ಹಾಲು ಹೆಚ್ಚಿದ್ದು, ನೋವು ಅನುಭವಿಸುತ್ತಿರುತ್ತಾರೆ. ಅಂಥವರು ವೈದ್ಯರ ಸಲಹೆಯಂತೆ ದಾನ ಮಾಡಲು ಬಯಸುತ್ತಾರೆ. ಅವರಿಗೆ ಆಪ್ತ ಸಮಾಲೋಚನೆ ನಡೆಸಿ, ಘಟಕಕ್ಕೆ ಕಳುಹಿಸಲಾಗುತ್ತದೆ. ಕೆ-ಶೀಟ್ ಸಹಿತ ಬರುವ ತಾಯಂದಿರ ಫೈಲ್ ಚೆಕ್ ಮಾಡಿ, ಸಂಪೂರ್ಣ ಆರೋಗ್ಯವಂತರು ಎಂದು ಖಾತ್ರಿಯಾದ ಬಳಿಕವೇ ಹಾಲು ಪಡೆಯಲಾಗುತ್ತದೆ. ತಾಯಿಗೆ ಸೆರೋಲಜಿ ಪರೀಕ್ಷೆಗಳಾದ ಹೆಚ್‌ಐವಿ, ಹೆಚ್‌ಬಿಎಸ್‌ಎಜಿ. ವಿಡಿಆರ್‌ಎಲ್, ಹೆಚ್‌ಸಿವಿ ಪರೀಕ್ಷೆ ಮಾಡಲಾಗುತ್ತವೆ. ಎಲ್ಲವೂ ನೆಗೆಟಿವ್ ಇರಬೇಕು. ಯಾವುದೇ ಸೋಂಕುಗಳಿದ್ದರೂ ಹಾಲನ್ನು ಪಡೆದುಕೊಳ್ಳಲಾಗುವುದಿಲ್ಲ.
ಹೀಗೆ ಪಡೆದ ಹಾಲನ್ನು ಮೈನಸ್ 20 ಡಿಗ್ರಿ ಸೆಲ್ಸಿಯಸ್ ನಲ್ಲಿ ಮೂರು ತಿಂಗಳು ಇಡಬಹುದು. ಅಷ್ಟರೊಳಗೆ ಪ್ಯಾಶ್ಚರೀಕರಣ ಮಾಡಿ, ಸಂಗ್ರಹಿಸಿದ ದಿನಾಂಕದಿಂದ ಆರು ತಿಂಗಳು ಶೇಖರಿಸಿಡಬಹುದು. ಪ್ಯಾಶ್ಚರೀಕರಣ ನಡೆದ ತಕ್ಷಣ ಕಲ್ಟರ್ ಟೆಸ್ಟ್‌ಗೆ ಕಳುಹಿಸಿ, ಈ ಹಾಲು ಶಿಶುಗಳಿಗೆ ಉಣಿಸಬಹುದು ಎಂಬ ಪ್ರಯೋಗಾಲಯದ ವರದಿ ಬಂದ ಬಳಿಕಷ್ಟೇ ವೈದ್ಯರ ಸಲಹೆ ಮೇರೆಗೆ ಹಾಲನ್ನು ಶಿಶುಗಳಿಗೆ ನೀಡಲಾಗುತ್ತದೆ ಎಂದು ವಿವರಿಸಿದರು.
ಎಷ್ಟು ಜನರಿಗೆ ಲಾಭ?
ಯಾರು ಅರ್ಹರು?
ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಹೊಂದಿರುವ ತಾಯಂದಿರೆಲ್ಲ ಹಾಲನ್ನು ದಾನ ಮಾಡಲು ಸಾಧ್ಯವಾಗುವುದಿಲ್ಲ. ಎಚ್‌ಐವಿ ಸೋಂಕು, ಜ್ವರ ಅಥವಾ ಇನ್ನಿತರ ಗಂಭೀರ ಸಮಸ್ಯೆಗೆ ಒಳಗಾಗಿದ್ದರೆ ಹಾಲನ್ನು ದಾನವಾಗಿ ಕೊಡುವಂತಿಲ್ಲ. ತಜ್ಞರಿಂದ ಪರೀಕ್ಷೆಗೆ ಒಳಗಾದ ಬಳಿಕವಷ್ಟೇ ಇನ್ನೊಂದು ಶಿಶುವಿಗೆ ಹಾಲನ್ನು ನೀಡಬಹುದು.
ವಾಣಿವಿಲಾಸ ರಾಜ್ಯದಲ್ಲಿ ಸ್ಥಾಪನೆಗೊಂಡ ಮೊದಲ ಎದೆ ಹಾಲಿನ ಕೇಂದ್ರ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಇದಲ್ಲದೆ ರಾಜ್ಯದ ಸರ್ಕಾರಿ ಹಾಜಿ ಸರ್ ಇಸ್ಮಾಯಿಲ್ ಸೇಠ್ (HSIS) ಘೋಷ ಆಸ್ಪತ್ರೆಯಲ್ಲೂ ಇನ್ನೊಂದು ಹಾಲು ಬ್ಯಾಂಕ್ ಪ್ರಾರಂಭವಾಗಿದೆ. ಮಂಗಳೂರಿನ ಲೇಡಿ ಗೋಶೆನ್ ಆಸ್ಪತ್ರೆಯಲ್ಲಿ 'ಅಮೃತ ಘಟಕ', ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹಾಗೂ ಇತ್ತೀಚೆಗೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಬೆಂಗಳೂರಿನಲ್ಲಿ ಆರಂಭವಾಗಿದೆ. ಉತ್ತರ ಕರ್ನಾಟಕ ವಿಜಯಪುರದಲಿ ಮೊದಲ ಸರ್ಕಾರಿ ಎದೆಹಾಲು ಬ್ಯಾಂಕ್ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪನೆಯಾಗುತ್ತಿದೆ. ಇದಲ್ಲದೆ ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರು - ಈ ನಾಲ್ಕು ಕಂದಾಯ ವಿಭಾಗಗಳಲ್ಲಿ ತಾಯಿ ಎದೆಹಾಲು ಬ್ಯಾಂಕ್‌ಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.