ಕಬ್ಬಿನ ಬವಣೆ: Part-3| ರೈತರ ಕೋಟ್ಯಂತರ ರೂ.ಬಾಕಿ: ಸಿಹಿ ಉದ್ಯಮದಲ್ಲಿ ಕಹಿ ಸತ್ಯ!
ನಾಡಿನ ಅನ್ನದಾತನ ಬದುಕು ಸಿಹಿಯಾಗಿಸಬೇಕಿದ್ದ ಕಬ್ಬು ಕಹಿಯಾಗಿದೆ. ಕಬ್ಬಿನ ಕಾರ್ಖಾನೆಗಳು 1500 ಕೋಟಿ ರೂ.ಗಿಂತ ಹೆಚ್ಚು ಮೊತ್ತ ರೈತರಿಗೆ ನೀಡದೆ ಬಾಕಿ ಉಳಿಸಿಕೊಂಡಿವೆ.
ನಾಡಿನ ಅನ್ನದಾತನ ಬದುಕು ಸಿಹಿಯಾಗಿಸಬೇಕಿದ್ದ ಕಬ್ಬು ಇದೀಗ ಕಹಿಯಾಗಿದೆ. 2024-25ನೇ ಕಬ್ಬು ಅರೆಯುವ ಹಂಗಾಮಿನಲ್ಲಿ ಕಬ್ಬಿನ ಕಾರ್ಖಾನೆಗಳು ಸುಮಾರು 1500 ಕೋಟಿ ರೂ.ಗಿಂತ ಹೆಚ್ಚು ಮೊತ್ತವನ್ನು ರೈತರಿಗೆ ನೀಡದೆ ಬಾಕಿ ಉಳಿಸಿಕೊಂಡಿವೆ.
ಬೆಳಗಾವಿ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 377.98 ಕೋಟಿ ರೂ. ಬಾಕಿ ಇದ್ದು, ಬಾಗಲಕೋಟೆ ಜಿಲ್ಲೆಯಲ್ಲಿ 1040.54 ಕೋಟಿ ರೂ. ಬಾಕಿ ಇದೆ. ಇದರ ಜೊತೆಗೆ, ಕೆಲವು ನಿರ್ದಿಷ್ಟ ಕಾರ್ಖಾನೆಗಳು (ಭಾಲ್ಕೇಶ್ವರ, ಸೋಮೇಶ್ವರ, ಬಸವೇಶ್ವರ, ನಂದಿ, ಜಮಖಂಡಿ) ಒಟ್ಟು 38 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ.
2024-25 ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು ರೈತರಿಗೆ ಒಟ್ಟು 16,741.93 ಕೋಟಿ ರೂ. ಪಾವತಿ ಮಾಡಿವೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ದರದಂತೆ ಸುಮಾರು 18,235.60 ಕೋಟಿ ರೂ. ರೈತರಿಗೆ ಪಾವತಿಸಬೇಕು. ಇನ್ನೂ ಸುಮಾರು 1,832 ಕೋಟಿ ರೂ. ಪಾವತಿ ಬಾಕಿ ಉಳಿದುಕೊಂಡಿದೆ. ಬೆಳಗಾವಿ ಜಿಲ್ಲೆಯ 29 ಸಕ್ಕರೆ ಕಾರ್ಖಾನೆಗಳು ರೈತರಿಗೆ 2024-25 ಸಾಲಿನಲ್ಲಿ 6,967 ಕೋಟಿ ರೂ. ಬಿಲ್ ಪಾವತಿ ಮಾಡಿದ್ದು, ಸುಮಾರು 377.98 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಬಾಗಲಕೋಟೆ ಜಿಲ್ಲೆಯಲ್ಲಿನ 13 ಸಕ್ಕರೆ ಕಾರ್ಖಾನೆಗಳು ರೈತರಿಗೆ 4,375.58 ಕೋಟಿ ರೂ. ಹಣ ಪಾವತಿ ಮಾಡಿದ್ದು, 1,040.54 ಕೋಟಿ ರೂ. ಬಿಲ್ ಬಾಕಿ ಉಳಿದು ಕೊಂಡಿದೆ. ಬೀದರ್ ಜಿಲ್ಲೆಯ 5 ಸಕ್ಕರೆ ಕಾರ್ಖಾನೆಗಳು 387 ಕೋಟಿ ರೂ. ಪಾವತಿ ಮಾಡಿವೆ. ಇನ್ನೂ ಸುಮಾರು 127.24 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿವೆ. ವಿಜಯಪುರ ಜಿಲ್ಲೆಯ 10 ಸಕ್ಕರೆ ಕಾರ್ಖಾನೆಗಳು ರೈತರಿಗೆ 1,378.27 ಕೋಟಿ ರೂ. ಪಾವತಿಸಿದ್ದು, 222.72 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಈ ನಡುವೆ, ಭಾಲ್ಕೇಶ್ವರ, ಸೋಮೇಶ್ವರ, ಬಸವೇಶ್ವರ, ನಂದಿ, ಜಮಖಂಡಿ ಸಕ್ಕರೆ ಕಾರ್ಖಾನೆಗಳು ಒಟ್ಟು 38 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಆನಂದ್ ನ್ಯಾಮೇಗೌಡ ಮಾಲೀಕತ್ವದ ಬಾಗಲಕೋಟೆಯಲ್ಲಿನ ಜಮಖಂಡಿ ಶುಗರ್ಸ್ ಲಿಮಿಟೆಡ್ 14.74 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಕುಮಾರ ಚಂದ್ರಕಾಂತ್ ದೇಸಾಯಿ ಮಾಲೀಕತ್ವದ ವಿಜಯಪುರದಲ್ಲಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ 8.49 ಕೋಟಿ ರೂ., ಎಸ್.ಮನೋಜ್ ಕುಮಾರ್ ಮಾಲೀಕತ್ವದ ವಿಜಯಪುರದಲ್ಲಿನ ಬಸವೇಶ್ವರ್ ಶುಗರ್ಸ್ ಲಿ. 6.23 ಕೋಟಿ ರೂ., ಬಸವರಾಜ್ ಬಾಳೇಕುಂದರಗಿ ಮಾಲೀಕತ್ವದ ಬೆಳಗಾವಿಯಲ್ಲಿನ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ 5.63 ಕೋಟಿ ರೂ., ಮತ್ತು ಪ್ರಕಾಶ್ ಖಂಡ್ರೆ ಮಾಲೀಕತ್ವದ ಬೀದರ್‌ನಲ್ಲಿನ ಭಾಲ್ಕೇಶ್ವರ ಶುಗರ್ಸ್ ಲಿ. 3.73 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಅಧಿವೇಶನದ ವೇಳೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದರು.
2023-24ನೇ ಸಾಲಿನಲ್ಲಿ 76 ಸಕ್ಕರೆ ಕಾರ್ಖಾನೆಗಳು ರೈತರಿಗೆ ಯಾವುದೇ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ. ಆ ವರ್ಷದಲ್ಲಿ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಿದ್ದ 19,898.65 ಕೋಟಿ ರೂ.ಗೆ ಬದಲಾಗಿ, ಒಟ್ಟು 20,645.91 ಕೋಟಿ ರೂ. ಪಾವತಿಸಿವೆ. ಇದು, ಹಲವು ಕಾರ್ಖಾನೆಗಳು ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ಬೆಲೆಗಿಂತ ಹೆಚ್ಚಿನ ದರ ನೀಡಿದ್ದವು. ಆದರೆ ಈಗ ಎಫ್‌ಆರ್‌ಪಿ ದರ ನೀಡದ ಕಾರಣ ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ಕಬ್ಬು ಮಾರಾಟದಲ್ಲಿ ಮಧ್ಯವರ್ತಿಗಳ ಕಾಟ
ಕಬ್ಬು ಬೆಳೆಗಾರ ಬೆಳೆದ ಬೆಳೆಗೆ ಸಿಹಿ ಸಿಗುವ ಬದಲು, ಮಧ್ಯವರ್ತಿಗಳ ಹಾವಳಿಯಿಂದಾಗಿ ಪ್ರತಿ ಹಂತದಲ್ಲೂ ಕಹಿಯನ್ನೇ ಅನುಭವಿಸುವಂತಾಗಿದೆ. ಕಬ್ಬು ಕಟಾವಿನಿಂದ ಹಿಡಿದು ಕಾರ್ಖಾನೆ ತಲುಪಿಸುವವರೆಗಿನ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಮಧ್ಯವರ್ತಿಗಳ ಜಾಲ, ರೈತನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇದು ಕೇವಲ ರೈತನಿಗೆ ಮಾತ್ರವಲ್ಲ, ಕೆಲವು ಸಂದರ್ಭಗಳಲ್ಲಿ ಸಕ್ಕರೆ ಕಾರ್ಖಾನೆಗಳಿಗೂ ತಲೆನೋವಾಗಿ ಪರಿಣಮಿಸಿದೆ. ಕಾರ್ಖಾನೆಗಳಿಗೆ ನೇರವಾಗಿ ಕಬ್ಬು ಮಾರಾಟ ಮಾಡುವ ಬದಲು, ರೈತರು ಮಧ್ಯವರ್ತಿಗಳ ಮೂಲಕವೇ ವಹಿವಾಟು ಮಾಡಬೇಕಾಗುತ್ತಿರುವುದರಿಂದ ಬೆಲೆ ಕಡಿತ, ಪಾವತಿ ವಿಳಂಬ ಮತ್ತು ಲಾಭನಷ್ಟ ಸಮಸ್ಯೆಗಳು ಹೆಚ್ಚಾಗಿವೆ.
ರಾಜ್ಯದಲ್ಲಿ ಪ್ರತಿ ವರ್ಷ ಲಕ್ಷಾಂತರ ಟನ್ ಕಬ್ಬು ಉತ್ಪಾದನೆಯಾಗುತ್ತದೆ. ಆದರೆ ಕಾರ್ಖಾನೆಗಳು ನೇರವಾಗಿ ರೈತರಿಂದ ಕಬ್ಬು ಖರೀದಿಸುವ ಬದಲು, ಕೆಲವು ಪ್ರದೇಶಗಳಲ್ಲಿ ಮಧ್ಯವರ್ತಿಗಳ ಮೂಲಕ ಒಪ್ಪಂದ ಮಾಡಿಕೊಳ್ಳುತ್ತಿವೆ. ಈ ಮಧ್ಯವರ್ತಿಗಳು ರೈತರ ಕಬ್ಬನ್ನು ಕಡಿಮೆ ಬೆಲೆಗೆ ಖರೀದಿಸಿ, ಕಾರ್ಖಾನೆಗಳಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡುವ ಮೂಲಕ ಭಾರೀ ಲಾಭ ಗಳಿಸುತ್ತಿದ್ದಾರೆ. ರೈತರಿಗೆ ನಿಗದಿತ ಕನಿಷ್ಠ ಬೆಲೆ ಸಿಗದೆ ನಷ್ಟ ಎದುರಿಸುತ್ತಿದ್ದಾರೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳ ರೈತರು ಈ ಸಮಸ್ಯೆ ಹೆಚ್ಚಾಗಿ ಎದುರಿಸುತ್ತಿದ್ದಾರೆ. ಮಧ್ಯವರ್ತಿಗಳು ನಮ್ಮ ಕಬ್ಬನ್ನು ತೂಕದ ತಪ್ಪು, ಬೆಲೆ ತಗ್ಗಿಸುವುದು ಅಥವಾ ಪಾವತಿ ತಡಮಾಡುವ ಮೂಲಕ ನಷ್ಟ ಮಾಡಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಪಾವತಿಗೆ 30 ರಿಂದ 45 ದಿನಗಳ ಕಾಲ ತಡವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಪ್ರತಿ ಟನ್ನಿಗೆ 800–850 ರೂ. ವೆಚ್ಚವಾಗುತ್ತಿರುವುದರಿಂದ ರೈತರ ಲಾಭದ ಅಂಚು ಸೀಮಿತವಾಗಿದೆ. ಮಧ್ಯವರ್ತಿಗಳು ಈ ವೆಚ್ಚಗಳನ್ನು ಸಹ ರೈತರಿಂದಲೇ ವಸೂಲಿ ಮಾಡಲಾಗುತ್ತಿದೆ ಎಂಬುದು ರೈತರ ಅಳಲಾಗಿದೆ.
ಕಟಾವು ಮತ್ತು ಸಾಗಣೆ ವೆಚ್ಚದಲ್ಲಿ ಮೋಸ
ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಣೆ ವೆಚ್ಚವನ್ನು ನಿಗದಿಪಡಿಸುತ್ತವೆ. ಆದರೆ, ಮಧ್ಯವರ್ತಿಗಳು ರೈತರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಾರೆ. ಕಾರ್ಮಿಕರ ಕೊರತೆಯ ನೆಪವೊಡ್ಡಿ, ಪ್ರತಿ ಟನ್‌ಗೆ ನೂರಾರು ರೂಪಾಯಿ ಹೆಚ್ಚುವರಿ ಹಣ ನೀಡಿದರೆ ಮಾತ್ರ ಕಟಾವು ಮಾಡುವುದಾಗಿ ಪಟ್ಟು ಹಿಡಿಯುತ್ತಾರೆ. ತುರ್ತಿನಲ್ಲಿರುವ ರೈತ ಬೇರೆ ದಾರಿಯಿಲ್ಲದೆ ಇದಕ್ಕೆ ಒಪ್ಪಿಕೊಳ್ಳುತ್ತಾರೆ. ಮಧ್ಯವರ್ತಿಗಳ ಹಾವಳಿಯ ಅತ್ಯಂತ ಗಂಭೀರ ಆರೋಪವೆಂದರೆ ತೂಕದಲ್ಲಿನ ವಂಚನೆ ಮಾಡುವುದು. ಕಾರ್ಖಾನೆಗೆ ಕಬ್ಬು ಸಾಗಿಸುವ ದಾರಿಯಲ್ಲಿ ಅಥವಾ ಕಾರ್ಖಾನೆಯ ಹೊರಗಿನ ಖಾಸಗಿ ತೂಕದ ಯಂತ್ರಗಳಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡಲಾಗುತ್ತದೆ. ಕಾರ್ಖಾನೆಯಲ್ಲಿ ನಡೆಯುವ ತೂಕದಲ್ಲೂ ಪ್ರತಿ ವರ್ಷ ವ್ಯತ್ಯಾಸ ಕಂಡು ಬರುತ್ತದೆ. ಮಧ್ಯವರ್ತಿಗಳು ಮತ್ತು ಕಾರ್ಖಾನೆ ಅಧಿಕಾರಿಗಳ ನಡುವಿನ ಹೊಂದಾಣಿಕೆಯಿಂದಾಗಿ, ಹೆಚ್ಚು 'ಕಮಿಷನ್' ನೀಡುವ ರೈತರ ಅಥವಾ ಪ್ರಭಾವಿಗಳ ಜಮೀನಿನಲ್ಲಿ ಬೇಗನೆ ಕಟಾವು ಮಾಡಲಾಗುತ್ತದೆ. ಸಾಮಾನ್ಯ ರೈತರು ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ. ಇದರಿಂದ ಕಬ್ಬು ಒಣಗಿ ತೂಕ ಕಡಿಮೆಯಾಗಿ, ಸಕ್ಕರೆ ಇಳುವರಿಯೂ ಕುಂಠಿತಗೊಂಡು ರೈತರಿಗೆ ನಷ್ಟವಾಗುತ್ತದೆ. 12 ತಿಂಗಳಿಗೆ ಕಟಾವಾಗಬೇಕಾದ ಕಬ್ಬು 14 ತಿಂಗಳಾದರೂ ಕಟಾವಾಗದ ಉದಾಹರಣೆಗಳಿವೆ ಎಂದು ʼದ ಫೆಡರಲ್ ಕರ್ನಾಟಕʼಕ್ಕೆ ರೈತ ಮುಖಂಡ ಮಹಾಂತೇಶ್ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಕಬ್ಬು ಬೆಳೆದು ನಾಡಿಗೆ ಸಿಹಿ ನೀಡುವ ರೈತನ ಬದುಕು ಮಧ್ಯವರ್ತಿಗಳ ವ್ಯವಸ್ಥಿತ ಜಾಲದಿಂದಾಗಿ ಕಹಿಯಾಗಿದೆ. ಈ ಸಮಸ್ಯೆಗೆ ಕಡಿವಾಣ ಹಾಕಲು ಸರ್ಕಾರ ಮತ್ತು ಜಿಲ್ಲಾಡಳಿತ ರಾಜಕೀಯ ಒತ್ತಡಗಳಿಗೆ ಮಣಿಯದೆ, ತೂಕದಲ್ಲಿನ ವಂಚನೆ ತಡೆಯಲು ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು ಮತ್ತು ಕಟಾವು ಹಾಗೂ ಸಾಗಣೆ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬೇಕು. ಆಗ ಮಾತ್ರ ರೈತನ ಶ್ರಮಕ್ಕೆ ತಕ್ಕ ಬೆಲೆ ಸಿಗಲು ಸಾಧ್ಯ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.