Loksabha Election 2024 | ಬಾಗಲಕೋಟೆ: ಹಿರಿಯ ನಾಯಕ vs ಯುವ ನಾಯಕಿ ನೇರ ಹಣಾಹಣಿ
ಕಳೆದ ನಾಲ್ಕು ಚುನಾವಣೆಗಳಲ್ಲಿ ಅಂತಹ ತೀವ್ರ ಸ್ಪರ್ಧೆ ಇಲ್ಲದೆ ಗೆಲುವು ಕಂಡಿದ್ದ ಬಿಜೆಪಿಗೆ, ಈ ಬಾರಿ ಗೆಲುವು ಸರಳವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಜತೆಗೆ ಗ್ಯಾರಂಟಿ ಯೋಜನೆಗಳ ಅಬ್ಬರದ ಪ್ರಚಾರ, ಪಕ್ಷದ ನಾಯಕರ ಒಗ್ಗಟ್ಟು, ಮಹಿಳಾ ಮತದಾರರ ನಿರ್ಣಾಯಕ ಪಾತ್ರ, ಚುನಾವಣೆಯಲ್ಲಿ ಚಾಣಾಕ್ಷ ಹೆಜ್ಜೆ ಇಡುವಲ್ಲಿ ನಿಸ್ಸೀಮರಾಗಿರುವ ಸಚಿವ ಪಾಟೀಲರ ತಂತ್ರಗಾರಿಕೆಯನ್ನು ಬಿಜೆಪಿ ಹೇಗೆ ಎದುರಿಸುತ್ತದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.;
ರಾಜ್ಯದಲ್ಲಿ 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮೊದಲ ಸುತ್ತಿನ ಮತದಾನ ಅಂತ್ಯಗೊಂಡಿದ್ದು, ಇದೀಗ ಕರ್ನಾಟಕದ ಉತ್ತರ ಭಾಗದಲ್ಲಿ ಮೇ 7ರಂದು ನಡೆಯಲಿರುವ ಎರಡನೇ ಸುತ್ತಿನ ಮತದಾನದತ್ತ ಎಲ್ಲರ ಚಿತ್ತ ನೆಟ್ಟಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ದಿಗ್ಗಜರು ಬಿರುಬಿಸಿಲನ್ನೂ ಲೆಕ್ಕಿಸದೇ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ.
ಐತಿಹಾಸಿಕ ರಾಜಕೀಯ ಹಿನ್ನೆಲೆಯ ಬಾಗಲಕೋಟೆ
ರಾಜಕೀಯವನ್ನೇ ಹೊದ್ದು ಮಲಗುವ ಅವಿಭಜಿತ ವಿಜಯಪುರದ ಈಗಿನ ಬಾಗಲಕೋಟೆ ಜಿಲ್ಲೆ, ರಾಜಕೀಯ ಕ್ಷೇತ್ರದ ಹಲವು ತಾರೆಗಳ ಉದಯಕ್ಕೆ ನೆಲೆಯಾಗಿದೆ. ಘಟಾನುಘಟಿ ರಾಜಕಾರಣಿಗಳಿಗೆ ರಾಜಕೀಯ ನೆಲೆಯನ್ನೂ ಕಲ್ಪಿಸಿದೆ. ಈ ರಾಜಕೀಯ ಅಖಾಡ ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ ಇತ್ತೀಚಿನ ಎರಡು ದಶಕದಲ್ಲಿ ಜನತಾದಳ, ಬಿಜೆಪಿ ಎರಡು ಅರಳಿದರೂ ಹೊಸ ಗಟ್ಟಿ ನಾಯಕರ ಹುಟ್ಟಿಗೆ ಅವಕಾಶ ನೀಡಿಲ್ಲ ಎಂಬುದು ವಿಪರ್ಯಾಸ.
ನಾಲ್ಕು ದಶಕದ ರಾಜಕಾರಣವನ್ನು ಒಮ್ಮೆ ಹಿಂತಿರುಗಿ ನೋಡಿದರೆ ಮೊದಲ ಎರಡು ದಶಕದಲ್ಲಿ ಬರೋಬ್ಬರಿ ಆರು ಮುಖ್ಯಮಂತ್ರಿಗಳ ರಾಜಕೀಯ ಏಳು ಬೀಳುಗಳ ದೊಡ್ಡ ಸಮರವೇ ಇಲ್ಲಿ ನಡೆದಿದೆ. ಇಬ್ಬರು ಜಿಲ್ಲೆಯವರಾದರೆ ಇನ್ನು ನಾಲ್ವರು ಹೊರಗಿನವರು. ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಮತ್ತು ನಾಲ್ವರು ಸಿಎಂಗಳಿಗೆ ರಾಜಕೀಯ ನೆಲೆ ಕಲ್ಪಿಸಿದ ಹೆಗ್ಗಳಿಕೆ ಬಾಗಲಕೋಟೆ ಜಿಲ್ಲೆಗಿದೆ. ಜಮಖಂಡಿಯ ಬಿ ಡಿ ಜತ್ತಿ ಹಾಗೂ ಹುನಗುಂದದ ಎಸ್ ಆರ್ ಕಂಠಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ನಾಯಕರು. ನಂತರ ಬಿ ಡಿ ಜತ್ತಿ ಅವರು ಉಪರಾಷ್ಟ್ರಪತಿಯಾಗಿ, ಹಂಗಾಮಿ ರಾಷ್ಟ್ರಪತಿಯಾಗಿಯೂ ಕಾರ್ಯನಿರ್ವಹಿಸಿದರು. ಅಂತಹ ರಾಜಕೀಯ ನಾಯಕರನ್ನು ದೇಶಕ್ಕೆ ಕೊಡುಗೆಯಾಗಿ ಕೊಟ್ಟ ಕೀರ್ತಿ ಬಾಗಲಕೋಟೆ ಜಿಲ್ಲೆಗಿದೆ.
ರಾಜ್ಯದ ನಾಲ್ವರು ಮುಖ್ಯಮಂತ್ರಿಗಳಾಗಿದ್ದವರು ಬಾಗಲಕೋಟೆಯ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಓರೆಗೆ ಹಚ್ಚಿದ್ದರು. ಅವರಲ್ಲಿ ಮೊದಲಿಗರು ಎಸ್ ನಿಜಲಿಂಗಪ್ಪ. ಅವರು 1962ರ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊಸದುರ್ಗದಿಂದ ಸ್ಪರ್ಧಿಸಿ ಸೋಲುಕಂಡಿದ್ದರು. ಹೀಗಾಗಿ, ಎಸ್ ಆರ್ ಕಂಠಿ ರಾಜ್ಯದ ಆರನೇ ಮುಖ್ಯಮಂತ್ರಿಯಾದರು. ಎಸ್.ಆರ್. ಕಂಠಿ ಅವರ ಮುಖ್ಯಮಂತ್ರಿ ಸ್ಥಾನ ಬಹುದಿನ ಉಳಿಯಲಿಲ್ಲ. ಏಕೆಂದರೆ, ನಿಜಲಿಂಗಪ್ಪ ಮುಖ್ಯಮಂತ್ರಿಯಾಗಲಿ ಎಂದು ಬಾಗಲಕೋಟೆ ಶಾಸಕ ಬಿ ಟಿ ಮುರ್ನಾಳ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಮೂರೇ ತಿಂಗಳಲ್ಲಿ ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಸ್. ನಿಜಲಿಂಗಪ್ಪ ಹಾಗೂ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇತರೆ ಇಬ್ಬರ ನಾಮಪತ್ರ ತಿರಸ್ಕಾರವಾಗಿದ್ದರಿಂದ ಎಸ್. ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾಗಿ, ಮುಖ್ಯಮಂತ್ರಿಯಾದರು. ಆನಂತರ ವೀರೇಂದ್ರ ಪಾಟೀಲ್ ಅವರು 1980ರಲ್ಲಿ ಸ್ವಕ್ಷೇತ್ರ ಕಲಬುರಗಿ ಬಿಟ್ಟು ಬಾಗಲಕೋಟೆಯಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಇದಾದ ನಂತರ ಕಣಕ್ಕೆ ಇಳಿದವರು ರಾಮಕೃಷ್ಣ ಹೆಗಡೆ. ಇಲ್ಲಿನ ಕೆಲ ಆತ್ಮೀಯರ ಮಾತಿಗೆ ಕಟ್ಟು ಬಿದ್ದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಯುವ ರಾಜಕಾರಣಿಯಾಗಿದ್ದ ಸಿದ್ದು ನ್ಯಾಮಗೌಡ ವಿರುದ್ಧ ಸೋತಿದ್ದರು. ಇವರಾದ ಬಳಿಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಕ್ಷೇತ್ರವಾಗಿ ಬಾದಾಮಿಯಿಂದ ಸ್ಪರ್ಧಿಸಿ, ರಾಜಕೀಯವಾಗಿ ಮರುಹುಟ್ಟು ಪಡೆದರು.
2024ರ ಲೋಕಸಮರದ ಹುರಿಯಾಳುಗಳ ಬಲಾಬಲ
ಬಾಗಲಕೋಟೆ ಈ ಬಾರಿ ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿ ಸತತ ಐದನೇ ಗೆಲುವನ್ನು ಕಾಣುವ ಆಸೆಯಲ್ಲಿದ್ದರೆ, ಕಾಂಗ್ರೆಸ್‌ಗೆ ಮರಳಿ ಕ್ಷೇತ್ರವನ್ನು ವಶಕ್ಕೆ ತೆಗೆದುಕೊಳ್ಳುವ ನಿರೀಕ್ಷೆಯಲ್ಲಿದೆ.
ಬಿಜೆಪಿಯಿಂದ 5ನೇ ಸಲ ಕಣದಲ್ಲಿ ಗದ್ದಿಗೌಡರ್
ಬಿಜೆಪಿ ಅಭ್ಯರ್ಥಿ ಮೂಲತಃ ಜನತಾ ಪರಿವಾರದ ಪಿ.ಸಿ.ಗದ್ದಿಗೌಡರ ಅವರು ಲೋಕಸಭಾ ಸದಸ್ಯರಾಗುವ ಮುನ್ನ ವಿಧಾನ ಪರಿಷತ್ ಸದಸ್ಯರಾಗಿ, ಜಿಲ್ಲಾ ಪುನರ್ ವಿಂಗಡಣಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2004ರ ಸಂದರ್ಭದಲ್ಲಿ ಜನತಾ ಪರಿವಾರವನ್ನು ತೊರೆದು ಬಿಜೆಪಿ ಸೇರಿ, ಸತತ ನಾಲ್ಕು ಬಾರಿ ಸಂಸದರಾಗಿ ಬಾಗಲಕೋಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಪಿ.ಸಿ ಗದ್ದಿಗೌಡರ್ ಬಿಜೆಪಿಯಿಂದ ನಾಲ್ಕು ಬಾರಿ ಗೆದ್ದಿದ್ದರೂ, ಈ ಬಾರಿ ಅವರಿಗೆ ವಯಸ್ಸಿನ ಕಾರಣದಿಂದಾಗಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿತ್ತು. ಬೇರೆಯವರೂ ಟಿಕೆಟ್‌ಗಾಗಿ ಪೈಪೋಟಿಯಲ್ಲಿದ್ದರು. ಆದರೆ ಅಂತಿಮವಾಗಿ ಬಿಜೆಪಿ ಮತ್ತೊಮ್ಮೆ ಗದ್ದಿಗೌಡರ್ ಅವರಿಗೇ ಟಿಕೆಟ್ ನೀಡಿದೆ.
ಪಿಸಿ ಗದ್ದಿಗೌಡರ್ ಅವರು ಸೌಮ್ಯ ಸ್ವಭಾವದ ವ್ಯಕ್ತಿ. ಎಲ್ಲ ಜನಾಂಗದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರು ಗಾಣಿಗ ಸಮುದಾಯದವರಾಗಿದ್ದು, ಅತಿ ಹೆಚ್ಚು ಮತದಾರರನ್ನು ಹೊಂದಿರುವ ಬಣಜಿಗ, ಪಂಚಮಸಾಲಿ ಹಾಗೂ ಗಾಣಿಗ ಸಮುದಾಯದವರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಕ್ಷೇತ್ರದ ಅಭಿವೃದ್ಧಿ ವಿಚಾರವನ್ನು ಮಾತ್ರ ಕೇಳಬೇಡಿ ಎನ್ನುವ ಮನಸ್ಥಿತಿಯಲ್ಲಿ ಪಿ ಸಿ ಗದ್ದಿಗೌಡರ ಇದ್ದಾರೆ.
ಸಂಸದರಾಗಿ ಗದ್ದಿಗೌಡರ್ ಅವರ ಕಾರ್ಯವೈಖರಿ ಬಗ್ಗೆ ಕ್ಷೇತ್ರದ ಜನರಿಗೆ ಸಮಾಧಾನವಿಲ್ಲ. ನಿರುದ್ಯೋಗ ನಿವಾರಣೆಯಲ್ಲಿ, ಹೊಸ ಕೈಗಾರಿಕೆ ತರುವಲ್ಲಿ ಅವರು ವಿಫಲರಾಗಿದ್ದಾರೆ ಎಂಬ ದೂರು ವ್ಯಾಪಕವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಹಾಯ ಮಾಡಿದ ಸಂತ್ರಸ್ತರ ನೆರವಿಗೆ ಬಂದಿಲ್ಲ ಎಂಬ ದೂರೂ ಇದೆ.
ಇತ್ತೀಚೆಗೆ ಲೋಕಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಕ್ಷೇತ್ರದಲ್ಲಿ ನೈಯಾಪೈಸೆ ಕೆಲಸ ಮಾಡದಿದ್ದರೂ, ಗೆಲುವು ಸಾಧಿಸುತ್ತಿದ್ದಾರೆ. ಅದಕ್ಕೆ ಕಾರಣ ಕೇವಲ ಮೋದಿ ಎನ್ನುವ ಅಲೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ರೀತಿ ಗದ್ದಿಗೌಡರ್ ಕೂಡ ಕ್ಷೇತ್ರದಲ್ಲಿ ಕೆಲಸ ಮಾಡದಿದ್ದರೂ ದಿಗ್ವಿಜಯ ಸಾಧಿಸುತ್ತಲೇ ಬಂದಿದ್ದಾರೆ. ಈ ಚುನಾವಣೆಯಲ್ಲಿಯೂ ಗದ್ದಿಗೌಡರ್ ಅವರು ಮೋದಿ ವರ್ಚಸ್ಸನ್ನೇ ನಂಬಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಪ್ರತಿಬಾರಿ ಎದುರಾಳಿ ಎಷ್ಟೇ ಬಲಿಷ್ಠರಾಗಿದ್ದರೂ ಗದ್ದಿಗೌಡರ್ ಅವರನ್ನು ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಜಿಲ್ಲೆಯ ಕಾಂಗ್ರೆಸ್ ನಾಯಕರ ಒಳಜಗಳ ಮತ್ತು ಪರಸ್ಪರ ಕಾಲೆಳೆಯುವ ಆಟ ಬಿಜೆಪಿಗೆ ಲಾಭವಾಗಿಸುತ್ತಿತ್ತು. ಆ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬೆನ್ನಿಗೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು ನಿಂತಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿಯ ಪಂಚಮಸಾಲಿ ಸಮುದಾಯದ ಮಾಜಿ ಸಚಿವರೊಬ್ಬರು ಗದ್ದಿಗೌಡರ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅದೇನೆಂದರೆ, ವಿಧಾನಸಭಾ ಚುನಾವಣೆ ಸಮಯದಲ್ಲಿ ಗದ್ದಿಗೌಡರ್ ಅವರು ಜಿಲ್ಲೆಯ ಯಾವುದೇ ಕ್ಷೇತ್ರದ ಅಭ್ಯರ್ಥಿಯ ಪರವಾಗಿಯೂ ಪ್ರಚಾರ ಮಾಡಲ್ಲ, ಈಗ ನಾವೇಕೆ ಅವರಿಗೆ ನಮ್ಮ ಕ್ಷೇತ್ರದ ಮತಗಳನ್ನು ನೀಡಬೇಕು ಎನ್ನುವ ಮಾತುಗಳನ್ನು ಆಡಿದ್ದರು. ಇವೆಲ್ಲ ವಿಚಾರಗಳು ಗದ್ದಿಗೌಡರ ಗದ್ದುಗೆ ಅಲುಗಾಡಿಸಿದರೆ ಅಚ್ಚರಿಪಡಬೇಕಿಲ್ಲ.
ಕಾಂಗ್ರೆಸ್‌ನಿಂದ ಮಂತ್ರಿ ಮಗಳು ಸಂಯುಕ್ತಾ ಪಾಟೀಲ್
ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಪಂಚಮಸಾಲಿ ಸಮುದಾಯದ ವೀಣಾ ಕಾಶಪ್ಪನವರ ಮತ್ತೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದರಾದರೂ, ಅವರಿಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ಕೊಟ್ಟಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ಕ್ಷೇತ್ರದಲ್ಲಿನ ಇನ್ನುಳಿದ ಕಾಂಗ್ರೆಸ್ ನಾಯಕರ ವಿರೋಧ. ವೀಣಾ ಕಾಶಪ್ಪನವರ ಪ್ರಭಲ ಪ್ರತಿಸ್ಪರ್ಧಿ. ಆದರೆ, ಅವರಿಗೆ ಅವರ ಪತಿ ವಿಜಯಾನಂದ್ ಕಾಶಪ್ಪನವರ ಕಾರಣಕ್ಕೆ ಇನ್ನುಳಿದ ಕಾಂಗ್ರೆಸ್ ನಾಯಕರು ವಿರೋಧ ತೋರುತ್ತಾರೆ ಎನ್ನುವುದೇ ವೀಣಾ ಅವರಿಗೆ ಟಿಕೆಟ್ ಕೈ ತಪ್ಪಲು ಕಾರಣವಾಗಿದೆ ಎಂದು ಹೇಳಲಾಗಿದೆ.
ವೀಣಾ ಕಾಶಪ್ಪನವರ್ ಅವರು ಟಿಕೆಟ್ ಸಿಗದಿದ್ದಕ್ಕೆ ಆರಂಭದಲ್ಲಿ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಆದರೆ, ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ದಿನ ರೋಡ್ ಶೋ ನಲ್ಲಿ ಭಾಗಿಯಾಗುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಈ ಬಾರಿ ಅನೇಕ ಸಚಿವರ ಮಕ್ಕಳಿಗೆ ಟಿಕೇಟ್ ನೀಡಿ, ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಸಚಿವರುಗಳಿಗೆ ನೀಡಿದೆ. ಅದರ ಭಾಗವಾಗಿ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ್ ಅವರನ್ನು ಕಾಂಗ್ರೆಸ್ ಇಲ್ಲಿಂದ ಕಣಕ್ಕಿಳಿಸಿದೆ. ಬಿಜೆಪಿಯ ಹಿರಿಯ ಅನುಭವಿ ಸಂಸದರ ಎದುರು ಕಾಂಗ್ರೆಸ್ ಯುವನಾಯಕಿಯನ್ನು ಕಣಕ್ಕಿಳಿಸಿ ಕ್ಷೇತ್ರವನ್ನು ಸೆಳೆದುಕೊಳ್ಳಲು ಹೊರಟಿದೆ.
ಕಾಂಗ್ರೆಸ್ ಅಭ್ಯರ್ಥಿ ವಿಜಯಪುರದ ಸಚಿವ ಶಿವಾನಂದ ಪಾಟೀಲರ ಪುತ್ರಿಯಾಗಿರುವ ಸಂಯುಕ್ತಾ ಪಾಟೀಲ, ಎಲ್ ಎಲ್‌ಬಿ ಪದವೀಧರರು. ವಿಜಯಪುರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರು, ಯುವ ಕಾಂಗ್ರೆಸ್ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿರುವ ಅವರು ಕೆಲವು ಜನಪರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಕಷ್ಟು ಜನಪ್ರಿಯರಾಗಿದ್ದಾರೆ. ಇದೆ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
ಸಂಯುಕ್ತಾ ಪಾಟೀಲ್ ಹೊರಗಿನವರು ಎನ್ನುವ ಅಪಸ್ವರ ಆರಂಭದಲ್ಲಿ ಕೇಳಿಬಂದರೂ ದಿನಕಳೆದಂತೆ ಆ ಕೂಗು ನಿಂತುಹೋಗಿದೆ. ಕಾಂಗ್ರೆಸ್ ಹೈಕಮಾಂಡ್ ಹಾಗೂ ಕ್ಷೇತ್ರ ಎಲ್ಲ ಕಾಂಗ್ರೆಸ್ ನಾಯಕರು ಅಭ್ಯರ್ಥಿ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದಾರೆ.
ಸಂಯುಕ್ತಾ ಪಾಟೀಲರ ದೊಡ್ಡಪ್ಪನ ಮಗ ಹರ್ಷಗೌಡ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದರೂ, ದೊಡ್ಡಪ್ಪ ಶಿವಶರಣಗೌಡ ಮಾತ್ರ ಸಂಯುಕ್ತಾ ಪರವಾಗಿಯೇ ಪ್ರಚಾರದಲ್ಲಿ ತೊಡಗಿರುವುದು ವಿಶೇಷ.
ಬಿಜೆಪಿ ಅಭ್ಯರ್ಥಿಯ ವೈಫಲ್ಯಗಳನ್ನೇ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ದಾಳವಾಗಿಸಿಕೊಂಡಿದ್ದಾರೆ. ಅದರ ಜೊತೆಗೆ ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳನ್ನು ನಂಬಿದ್ದಾರೆ. ತಂದೆ ಶಿವಾನಂದ್ ಪಾಟೀಲರ ರಾಜಕೀಯ ಚಾಣಾಕ್ಷ್ಯತನ ಸಂಯುಕ್ತಾ ಪಾಟೀಲ ಅವರಿಗೆ ನೆರವಾಗುವ ಲಕ್ಷಣಗಳಿವೆ.
ಸಮಬಲದ ಹೋರಾಟ
ಕಳೆದ ನಾಲ್ಕು ಚುನಾವಣೆಗಳಲ್ಲಿ ಅಂತಹ ತೀವ್ರ ಸ್ಪರ್ಧೆ ಇಲ್ಲದೆ ಗೆಲುವು ಕಂಡಿದ್ದ ಬಿಜೆಪಿಗೆ, ಈ ಬಾರಿ ಗೆಲುವು ಸರಳವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಜತೆಗೆ ಗ್ಯಾರಂಟಿ ಯೋಜನೆಗಳ ಅಬ್ಬರದ ಪ್ರಚಾರ, ಪಕ್ಷದ ನಾಯಕರ ಒಗ್ಗಟ್ಟು, ಮಹಿಳಾ ಮತದಾರರ ನಿರ್ಣಾಯಕ ಪಾತ್ರ, ಚುನಾವಣೆಯಲ್ಲಿ ಚಾಣಾಕ್ಷ ಹೆಜ್ಜೆ ಇಡುವಲ್ಲಿ ನಿಸ್ಸೀಮರಾಗಿರುವ ಸಚಿವ ಪಾಟೀಲರ ತಂತ್ರಗಾರಿಕೆಯನ್ನು ಬಿಜೆಪಿ ಹೇಗೆ ಎದುರಿಸುತ್ತದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
20 ವರ್ಷಗಳಿಂದ ತೆಕ್ಕೆಯಲ್ಲಿಟ್ಟುಕೊಂಡಿರುವ ಕ್ಷೇತ್ರವನ್ನು ಮತ್ತೆ ಉಳಿಸಿಕೊಳ್ಳುವ ಸವಾಲು ಬಿಜೆಪಿಯೆದುರು ಇದ್ದರೆ, ಅದನ್ನು ಕಸಿದುಕೊಳ್ಳುವ ನಿಟ್ಟಿನ ಯತ್ನದಲ್ಲಿ ಕಾಂಗ್ರೆಸ್ ತೊಡಗಿದೆ.
ಜಾತಿ ಲೆಕ್ಕಾಚಾರ
ಈ ಕ್ಷೇತ್ರ ಲಿಂಗಾಯತ, ಮುಸ್ಲಿಂ ಹಾಗೂ ದಲಿತ ಮತದಾರರು ಹೆಚ್ಚಿದ್ದಾರೆ. ಹಾಗಾಗಿಯೇ ಈವರೆಗೆ ಇಲ್ಲಿಂದ ಗೆದ್ದವರು ಲಿಂಗಾಯತ ನಾಯಕರೇ ಹೆಚ್ಚು. 16 ಬಾರಿ ಲಿಂಗಾಯತರೇ ಗೆದ್ದಿದ್ದಾರೆ. ಒಮ್ಮೆ ಮಾತ್ರ ಕುರುಬ ಸಮುದಾಯದ ಅಭ್ಯರ್ಥಿ ಗೆದ್ದಿದ್ದರು. ಅದೇ ಕಾರಣಕ್ಕೆ, ಎಲ್ಲ ರಾಜಕೀಯ ಪಕ್ಷಗಳು ಲಿಂಗಾಯತ ನಾಯಕರಿಗೆ ಟಿಕೆಟ್ ನೀಡುತ್ತಲೇ ಬಂದಿವೆ. ವಿಧಾನಸಭೆ ಚುನಾವಣೆಗಳು, ಉಪಜಾತಿಗಳ ಲೆಕ್ಕಾಚಾರದಲ್ಲಿ ನಡೆದರೆ, ಲೋಕಸಭೆ ಚುನಾವಣೆ ಲಿಂಗಾಯತ ವರ್ಸಸ್ ಅಹಿಂದ ಲೆಕ್ಕಾಚಾರದಲ್ಲಿ ನಡೆದಿವೆ. ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಇಲ್ಲಿ ಪ್ರಬಲವಾಗಿರುವ ಗಾಣಿಗ ಸಮಾಜಕ್ಕೆ ಸೇರಿದವರು.
ಕುರುಬರು- 2,50,000, ಬಣಜಿಗರು- 2,32,000, ಪಂಚಮಸಾಲಿ- 2,25,000, ಗಾಣಿಗರು- 2,10,100, ಪರಿಶಿಷ್ಟ ಜಾತಿ –2,00,000, ಮುಸ್ಲಿಂ-1,26,000, ರೆಡ್ಡಿಗಳು-90,000, ನೇಕಾರರು-87,000, ಮರಾಠರು- 67,000, ವಾಲ್ಮೀಕಿ- 62,000, ಬಂಜಾರ, ಅಂಬಿಗ, ಉಪ್ಪಾರ, ಮಾಳಿ- 79,000, ಇತರರು- 1,62,000.
ಜಾತಿಬಲದಲ್ಲಿಯೇ ನಿಶ್ಚಯವಾಗಲಿರುವ ಬಾಗಲಕೋಟೆ ಕದನ ಕಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿಯಲ್ಲಿ ಅಂತಿಮವಾಗಿ ಗೆಲ್ಲುವವರು ಯಾರು ಎಂಬುದನ್ನು ನೋಡಬೇಕಿದೆ.
ಮತದಾರರ ಮಾಹಿತಿ
ಜಿಲ್ಲೆಯ ಒಟ್ಟು ಮತದಾರರು 18,02,462. ಅದರಲ್ಲಿ ಪುರುಷರು 8,93,698. ಮಹಿಳೆಯರು 9,08,664. ತೃತೀಯ ಲಿಂಗದ 100 ಮತದಾರರಿದ್ದಾರೆ
ಬಲಾಬಲ ಎಷ್ಟು?
ಬಾಗಲಕೋಟೆ ಜಿಲ್ಲೆಯ ಹುನಗುಂದ, ಬಾದಾಮಿ, ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ ಹಾಗೂ ತೇರದಾಳ ಸೇರಿ 7 ವಿಧಾನಸಭೆ ಕ್ಷೇತ್ರ ಹಾಗೂ ಗದಗ ಜಿಲ್ಲೆಯ ನರಗುಂದ ಕ್ಷೇತ್ರ ಸೇರಿ ಒಟ್ಟು 8 ವಿಧಾನಸಭೆ ಕ್ಷೇತ್ರಗಳು ಬಾಗಲಕೋಟೆ ಲೋಕಸಭಾ ವ್ಯಾಪ್ತಿಯಲ್ಲಿವೆ. ಐದು ಕ್ಷೇತ್ರಗಳಲ್ಲಿ ಸದ್ಯ ಕಾಂಗ್ರೆಸ್ ಶಾಸಕರಿದ್ದರೆ, ಎರಡರಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಳೆದ ಲೋಕಸಭೆ ಚುನಾವಣೆಯ ವೇಳೆ 8 ಕ್ಷೇತ್ರಗಳಲ್ಲಿ ಆರರಲ್ಲಿ ಬಿಜೆಪಿ, ಎರಡರಲ್ಲಿ (ಜಮಖಂಡಿ ಮತ್ತು ಬಾದಾಮಿ) ಕಾಂಗ್ರೆಸ್ ಶಾಸಕರಿದ್ದರು.