Khushbu Sundar Interview: ಖುಷ್ಬು ಸುಂದರ್ ಡಿಎಂಕೆ-ಕಾಂಗ್ರೆಸ್ ತೊರೆದು ಬಿಜೆಪಿ ತೆಕ್ಕೆ ಸೇರಲು ಕಾರಣವೇನು?

ಬಿಜೆಪಿ ಉಳಿದ ಪಕ್ಷಗಳಂತಲ್ಲ. ಅದು ಮಹಿಳೆಯರಿಗೆ ಗೌರವವನ್ನು ನೀಡುತ್ತದೆ. ಜನರಿಗಾಗಿಯೇ ಕೆಲಸ ಮಾಡುತ್ತದೆ. ಅದು ವಂಶ ಪಾರಂಪರ್ಯ ರಾಜಕೀಯವನ್ನು ಬೆಂಬಲಿಸುವುದಿಲ್ಲ. ಪಕ್ಷದ ಸದಸ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಉತ್ತೇಜನ ನೀಡುತ್ತದೆ ಎನ್ನುತ್ತಾರೆ ತಮಿಳುನಾಡಿನ ನೂತನ ಉಪಾಧ್ಯಕ್ಷೆ ಖುಷ್ಬು ಸುಂದರ್.;

Update: 2025-08-15 03:46 GMT
ಖುಷ್ಬು ಸಂದರ್ಶನ: “ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರಿರುವಾಗ ಎಲ್ಲರಿಗೂ ಸ್ಪೂರ್ತಿ. ಅವರು ಜಗತ್ತಿನ ವಿಷಯಗಳ ಕುರಿತು ಮಾತನಾಡಿದರೆ ಜಗತ್ತು ಆಲಿಸುತ್ತದೆ. ನಾನು ಅವರ ನಾಯಕತ್ವದಿಂದ ಪ್ರತಿ ದಿನ ಕಲಿಯುತ್ತಿದ್ದೇನೆ”

2026ರ ಮೊದಲಾರ್ಧದಲ್ಲಿ ತಮಿಳು ನಾಡಿನಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಅದಕ್ಕಿನ್ನೂ ಎಂಟು ತಿಂಗಳುಗಳು ಬಾಕಿ ಇರುವಾಗಲೇ ರಾಜ್ಯದ ಬಿಜೆಪಿಗೆ ನೂತನ ಉಪಾಧ್ಯಕ್ಷರಾಗಿ ಖುಷ್ಬು ಸುಂದರ್ ಅವರನ್ನು ನೇಮಕ ಮಾಡಲಾಗಿದೆ. ದ ಫೆಡರಲ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅವರ ಹೊಸ ಜವಾಬ್ದಾರಿ, ಅವರ ರಾಜಕೀಯ ಪಯಣದಲ್ಲಿ ಉಂಟಾಗಿರುವ ಸೈದ್ಧಾಂತಿಕ ಪಲ್ಲಟದ ಬಗ್ಗೆ ಮಾತನಾಡಿರುವ ಖುಷ್ಬು ಅವರು ಡಿಎಂಕೆ ಮತ್ತು ಕಾಂಗ್ರೆಸ್ ಬಗ್ಗೆ ಕಟುವಾದ ವಿಶ್ಲೇಷಣೆಯನ್ನೂ ಮಾಡಿದ್ದಾರೆ.

ಈ ಮುಕ್ತ ಮಾತುಕತೆಯಲ್ಲಿ ಅವರು ಬೂತ್ ಮಟ್ಟದ ರಾಜಕೀಯ ಆದ್ಯತೆಗಳು, ರಾಜಕೀಯದಲ್ಲಿ ಮಹಿಳೆಯರಿಗೆ ಗೌರವ, ಮೈತ್ರಿ ರಾಜಕೀಯದ ಸವಾಲುಗಳು ಮತ್ತು ತಮ್ಮ ಹಿಂದಿನ ರಾಜಕೀಯ ಪಕ್ಷಗಳಿಗಿಂತ ಬಿಜೆಪಿ ಹೇಗೆ ಭಿನ್ನ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.

ಒಂದು ನಿರ್ಣಾಯಕ ಕಾಲಘಟ್ಟದಲ್ಲಿ ತಮಿಳು ನಾಡು ಬಿಜೆಪಿ ಉಪಾಧ್ಯಕ್ಷರಾಗಿ ನಿಮ್ಮನ್ನು ನೇಮಕ ಮಾಡಲಾಗಿದೆ. ನೀವು ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಏನನ್ನಿಸುತ್ತದೆ ಮತ್ತು ನೀವು ನೀಡಬಹುದಾದ ಮುಖ್ಯ ಕೊಡುಗೆ ಏನು?

ನಾವು ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಇದು ಏಕವ್ಯಕ್ತಿ ಪ್ರಯತ್ನವಲ್ಲ. ನಮಗಿನ್ನು ಉಳಿದಿರುವುದು ಕೇವಲ ಎಂಟು ತಿಂಗಳ ಕಾಲಾವಕಾಶ ಮಾತ್ರ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ಆದರೆ ಬಿಜೆಪಿಯಲ್ಲಿ ನಾವು ವ್ಯಕ್ತಿಗತ ಮಟ್ಟದಲ್ಲಿ ಕೆಲಸ ಮಾಡುವುದಿಲ್ಲ, ಬದಲಾಗಿ ಒಂದು ಟೀಮ್ ಆಗಿ ಕೆಲಸ ಮಾಡುತ್ತೇವೆ. ನಾನು ನನ್ನನ್ನು ಉಪಾಧ್ಯಕ್ಷೆಯಾಗಿ ಪರಿಗಣಿಸುತ್ತಿಲ್ಲ, ಬದಲಾಗಿ ಕಾರ್ಯಕರ್ತೆ ಎಂದು ಪರಿಗಣಿಸುತ್ತೇನೆ.

ಅಮಿತ್ ಶಾ ಅವರು ಪ್ರತಿಪಾದಿಸುವ ಹಾಗೆ ನಾವು ಬೂತ್ ಮಟ್ಟದ ರಾಜಕೀಯದ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇವೆ. ನಾನು ನಮ್ಮ ಬೂತ್ ಮಟ್ಟದ ಕಾರ್ಯಕರ್ತರನ್ನು ಪ್ರೇರೇಪಿಸಬೇಕಾದ ಅಗತ್ಯವಿದೆ. ಚುನಾವಣಾ ಯಶಸ್ಸಿನ ಮಾರ್ಗದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು. ಅವರಿಗೆ ಇದೊಂದು ವ್ಯಾಪಾರವಲ್ಲ ಎಂಬುದನ್ನು ಖಾತರಿಪಡಿಸಬೇಕು. ಇಲ್ಲಿ ಯಾರೊಬ್ಬರೂ ಹಣ ಮಾಡಲು ಬಂದಿಲ್ಲ. ಬಿಜೆಪಿಯ ಮುಖ್ಯ ಧ್ಯೇಯವೆಂದರೆ ಜನರಿಗೆ ಸೇವೆ ಸಲ್ಲಿಸುವುದು ಮತ್ತು ರಾಷ್ಟ್ರಕ್ಕಾಗಿ ದುಡಿಯುವುದು. ನಾವು ಅದನ್ನು ಮುನ್ನಡೆಸುವ ಗುರಿಯನ್ನು ಹೊಂದಿದ್ದೇವೆ.

ನೀವು ಈಗಾಗಲೇ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ರಾಜಕೀಯ ಪಯಣವನ್ನು ಆರಂಭಿಸಿದ್ದೀರಿ. ಈಗ ಬಿಜೆಪಿಗೆ ಬಂದಿದ್ದಿರಿ. ಈ ವಿಕಸನವನ್ನು ನೀವು ಹೇಗೆ ನೋಡುತ್ತಿರಿ? ಅದರಲ್ಲೂ ಮುಖ್ಯವಾಗಿ ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾದ ಕಾರಣ ನಿಮ್ಮ ಹಿಂದಿನ ಪಕ್ಷಗಳಿಗಿಂತ ಇದು ಹೇಗೆ ಭಿನ್ನವಾಗಿದೆ?

ಒಂದು ಎಚ್ಚರಿಕೆಯ ಸೂಚನೆ ಎನ್ನುವ ರೀತಿಯಲ್ಲಿ ಜನರು ನಮಗೆ ರಾಜಕಾರಣಿಗಳೆಂದು ಹಣೆಪಟ್ಟಿ ಕಟ್ಟುತ್ತಾರೆ. ನಾನು ನನ್ನನ್ನು ಕೇವಲ ಜನರ ಸೇವಕ ಎಂದು ಪರಿಗಣಿಸುತ್ತೇನೆ. ನಾನು ಹಣ ಅಥವಾ ಖ್ಯಾತಿಗಾಗಿ ಬಂದಿಲ್ಲ. ನಾನು ಈಗಾಗಲೇ ಹಣ ಮತ್ತು ಹೆಸರನ್ನು ಗಳಿಸಿದ್ದೇನೆ. ಈಗ ನಾನು ಇಲ್ಲಿರುವುದು ಸೇವೆಗಾಗಿ.

ಅತ್ಯಂತ ವಿನಮ್ರ ಹಿನ್ನೆಲೆ, ಜಾಗತಿಕ ಖ್ಯಾತಿಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಂತಹ ವ್ಯಕ್ತಿಯನ್ನು ಹೊಂದಿರುವುದೆ ನಮಗೆ ಸ್ಪೂರ್ತಿ. ಅವರು ಜಾಗತಿಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರೆ ಜಗತ್ತು ಆಲಿಸುತ್ತದೆ. ಅವರ ನಾಯಕತ್ವದಿಂದ ನಾನು ದಿನವೂ ಕಲಿಯುತ್ತಿದ್ದೇನೆ.

ನಾನು ಡಿಎಂಕೆ ಸೇರಿಕೊಂಡಾಗ ಅಲ್ಲಿ ಕರುಣಾನಿಧಿ ಅವರಿದ್ದರು. ಆದರೆ ಇಂದಿನ ಡಿಎಂಕೆ ತುಂಬಾ ಭಿನ್ನ. ನಾನು ಡಿಎಂಕೆಯಲ್ಲಿ ಕಲಿತ ಮೊದಲ ಪಾಠವೆಂದರೆ ಮಹಿಳೆಯರಿಗೆ ಗೌರವವನ್ನು ನೀಡುವುದು. ಜೆ.ಜಯಲಲಿತಾ ಅವರನ್ನು ಯಾವತ್ತೂ ಅಗೌರವದಿಂದ ನೋಡಬೇಡಿ ಎಂದು ಕರುಣಾನಿಧಿ ಅವರು ನಮಗೆ ಕಲಿಸಿಕೊಟ್ಟರು. ಅವರನ್ನು ಯಾವತ್ತೂ “ಅಮ್ಮಾ” ಅಥವಾ “ಜಯಲಲಿತಾ ಅವರಗಳ್” ಎಂದು ಕರೆಯುತ್ತಿದ್ದರು.

ಅಂತಹ ಮೂಲಭೂತವಾದ ಗೌರವ ಇಂದಿನ ಡಿಎಂಕೆಯಲ್ಲಿ ಇಲ್ಲ. ಈಗ ಸಾರ್ವಜನಿಕ ವೇದಿಕೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರನ್ನು ಅಗೌರವದಿಂದ ಕಾಣುವ ಹಿಂಸಾತ್ಮಕ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಯಕತ್ವದಲ್ಲಿನ ಸಂಪೂರ್ಣ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ. ಹೌದು, ನಾನು ಎಂ.ಕೆ.ಸ್ಟಾಲಿನ್ ಅವರ ಬಗ್ಗೆಯೇ ಈ ಮಾತು ಹೇಳುತ್ತಿದ್ದೇನೆ. ಒಬ್ಬ ಮುಖ್ಯಮಂತ್ರಿಯಾಗಿ ನಾನು ಅವರನ್ನು ಗೌರವಿಸುತ್ತೇನೆ. ಆದರೆ ಒಬ್ಬ ರಾಜಕೀಯ ನಾಯಕನಾಗಿ ಅವರು ತಮ್ಮ ಪಕ್ಷದಲ್ಲಿ ಈ ನಡವಳಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದಾಗ ನನಗೆ ನಗು ಬರುತ್ತದೆ.

ನೀವು ಕೇಂದ್ರೀಯವಾದಿ ಎಂದು ವಿಶ್ಲೇಷಿಸುವ ಕಾಂಗ್ರೆಸ್ ಪಕ್ಷದಲ್ಲಿಯೂ ಕೆಲಸ ಮಾಡಿದವರು. ಆ ಪಕ್ಷವನ್ನು ತೊರೆದಿದ್ದಾದರೂ ಯಾಕೆ?

ಕಾಂಗ್ರೆಸ್ ಪಕ್ಷದಲ್ಲಿ ನೀವು ದೇಶದ ಸೇವೆ ಮಾಡುವುದಿಲ್ಲ ಬದಲಾಗಿ ಒಂದು ಕುಟುಂಬದ ಸೇವೆ ಮಾಡುತ್ತೀರಿ. ಅಲ್ಲಿ ನೀವು ಪ್ರತಿಯೊಂದಕ್ಕೂ ‘ಯಸ್ ಮ್ಯಾಮ್” ಮತ್ತು “ಯಸ್ ಸರ್” ಎಂದು ಹೇಳಬೇಕೆಂದು ನಿರೀಕ್ಷಿಸುತ್ತಾರೆ. ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದಾಗ, ಯಾರು ಉತ್ತರಾಧಿಕಾರಿಯಾಗಬೇಕು ಎಂದು ನಮ್ಮನ್ನು ಕೇಳಲಾಯಿತು. ನಾನು ಜ್ಯೋತಿರಾದಿತ್ಯ ಸಿಂದಿಯಾ ಅವರ ಹೆಸರು ಸೂಚಿಸಿದೆ. ಯಾಕೆಂದರೆ ಅವರಿಗೊಂದು ಸ್ಪಷ್ಟತೆಯಿತ್ತು, ಧೈರ್ಯಶಾಲಿ ಹಾಗೂ ಮಧ್ಯಪ್ರದೇಶದಲ್ಲಿ ಅವರಿಗೆ ಭದ್ರ ನೆಲೆಯಿತ್ತು. ಆದರೆ ರಾಹುಲ್ ಗಾಂಧಿ ಅವರ ಹೆಸರನ್ನು ಯಾಕೆ ಹೇಳಲಿಲ್ಲ ಎಂದು ನನ್ನನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಅದು ನನಗೆ ಅಚ್ಚರಿಯುಂಟುಮಾಡಿತು.

ರಾಹುಲ್ ಗಾಂಧಿ ಅವರು ರಾಜಕೀಯದಲ್ಲಿರುವುದು ಒಲ್ಲದ ಮನಸ್ಸಿನಿಂದ. ಅವರು ರಾಜಕೀಯವನ್ನು ಆಯ್ಕೆ ಮಾಡಿಕೊಂಡು ಬಂದವರಲ್ಲ, ಕುಟುಂಬದ ಹಿನ್ನೆಲೆಯಿಂದಾಗಿ ಬಲವಂತದಿಂದ ರಾಜಕೀಯದಲ್ಲಿದ್ದಾರೆ. ಕಾಂಗ್ರೆಸ್ ನಲ್ಲಿ ಭಿನ್ನಮತವನ್ನು ಯಾವತ್ತೂ ಸಹಿಸಿಕೊಳ್ಳುವುದಿಲ್ಲ. ನಿಮ್ಮನ್ನು ಅಭಿಪ್ರಾಯಕ್ಕಾಗಿ ಕೇಳಲಾಗುತ್ತದೆ ಮತ್ತು ಅವರಿಗೆ ಬೇಕಾದುದು ಅವರು ಬಯಸಿದ ಅಭಿಪ್ರಾಯ ಮಾತ್ರ. ಅದು ನನಗೆ ಸರಿಹೊಂದಲಿಲ್ಲ.

ಆ ಮುಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಲು ಜಾಗ ಸಿಕ್ಕಿರುವುದರಿಂದ ನೀವು ಬಿಜೆಪಿಯಲ್ಲಿ ಇದ್ದೀರಾ?

ಖಂಡಿತವಾಗಿಯೂ. ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯಳಾಗಿ ನಾನು ಪ್ರಧಾನಿ ಮತ್ತು ಉನ್ನತ ಮಟ್ಟದ ನಾಯಕರು ಹಾಜರಿದ್ದ ಸಭೆಗಳಲ್ಲಿ ನಾನು ಭಾಗವಿಸಿದ್ದೇನೆ. ಕಾರ್ಯರೂಪಕ್ಕೆ ಬರುವ ಮತ್ತು ಬಾರದೇ ಇರುವ ಸಂಗತಿಗಳನ್ನೂ ಹೇಳಲು ಅಲ್ಲಿ ಅವಕಾಶವಿದೆ. ನೀವು ನಿಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಹೇಳಬಹುದು. ಅವರು ಅದನ್ನು ಆಲಿಸುತ್ತಾರೆ. ಅದು ನಾನು ಬಿಜೆಪಿಯಲ್ಲಿ ಕಂಡುಕೊಂಡಿರುವ ವಿಶಿಷ್ಟವಾದ ಅಂಶ.

ತಮಿಳು ನಾಡಿನಲ್ಲಿ ಬಿಜೆಪಿಯ ಸ್ವಾಸ್ಥ್ಯವನ್ನು ಹೇಗೆ ನೀವು ವಿಶ್ಲೇಷಣೆ ಮಾಡುತ್ತೀರಿ? ಅದರಲ್ಲೂ ವಿಶೇಷವಾಗಿ ನಿಮ್ಮ ಪಕ್ಷವು ಏಕಾಂಗಿಯಾಗಿ ಗೆಲ್ಲಲು ಸಾಧ್ಯವಿಲ್ಲ, ಮಿತ್ರ ಪಕ್ಷಗಳನ್ನು ಅವಲಂಬಿಸಬೇಕು ಎಂದು ಟೀಕಾಕಾರರು ಹೇಳುತ್ತಿರುವಾಗ?

ಕಳೆದ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಕಣಕ್ಕೆ ಇಳಿಯುವ ಧೈರ್ಯ ತೋರಿದ್ದನ್ನು ಜನರು ಮರೆತಿದ್ದಾರೆ. ಡಿಎಂಕೆ ಮತ್ತು ಕಾಂಗ್ರೆಸ್ ಅದೇ ರೀತಿ ಹೇಳಲು ಸಾಧ್ಯವಿದೆಯೇ? ಅವರಿಗೆ ಅಷ್ಟು ವಿಶ್ವಾಸವಿಲ್ಲ. ಅದು ಇದ್ದಿದ್ದರೆ ಅವರು ಏಕಾಂಗಿಯಾಗಿ ಸ್ಪರ್ಧಿಸಲು ಪ್ರಯತ್ನಪಡಬೇಕು.

ಅಮಿತ್ ಶಾ ಅವರು ಇತ್ತೀಚೆಗೆ ನೀಡಿದ ಭೇಟಿಯ ಸಂದರ್ಭದಲ್ಲಿ ಎಐಎಡಿಎಂಕೆಯ ಜೊತೆಗಿನ ನಮ್ಮ ಮೈತ್ರಿಯನ್ನು ಮರು ರೂಪಿಸಲಾಗಿದೆ. ಈಗಲೂ ಎಂಟು ತಿಂಗಳುಗಳಷ್ಟು ಸಮಯವಿದೆ. ಉಳಿದವರು ನಮ್ಮನ್ನು ಬಂದು ಸೇರಿಕೊಳ್ಳಬಹುದು ಅಥವಾ ಬಿಡಬಹುದು. ಹೇಗೇ ಆದರೂ ನಾವು ಜಯ ಗಳಿಸುತ್ತೇವೆ ಎಂಬ ವಿಶ್ವಾಸವಿದೆ.

ಈ ಮೈತ್ರಿಯ ಮುಖ, ಅಂದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂದು ನೀವು ಖಚಿತವಾಗಿ ಹೇಳಬಲ್ಲಿರಾ?

ಅದು ನನಗೆ ಸೇರಿದ ವಿಚಾರ ಅಲ್ಲ. ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದು ಅಸಮರ್ಪಕವಾಗುತ್ತದೆ. ಅದನ್ನು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಅಥವಾ ದೆಹಲಿಯ ಹಿರಿಯ ನಾಯಕರು ಘೋಷಿಸಬೇಕಾದ ವಿಷಯ.

ಎಡಪ್ಪಡಿ ಕೆ.ಪಳನಿಸ್ವಾಮಿ ಅವರಂತಹ ಎಐಎಡಿಎಂಕೆ ನಾಯಕರು ಮತ್ತು ಬಿಜೆಪಿ ನಡುವೆ ಅಧಿಕಾರ ಹಂಚಿಕೆ ಬಗೆಗೆ ಇರುವ ಬಿಕ್ಕಟ್ಟು ತಳಮಟ್ಟದ ಪಕ್ಷದ ಸಮನ್ವಯದ ಮೇಲೆ ಪರಿಣಾಮ ಬೀರಲಿದೆಯೇ?

ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಾಯಗಳಿವೆ ಮತ್ತು ಮುಕ್ತ ಮನಸ್ಸುಗಳಿವೆ. ಈ ಬಗ್ಗೆ ಉಳಿದವರು ವದಂತಿಗಳನ್ನು ಹರಡುವುದಕ್ಕಿಂತ ಪಕ್ಷದ ಮುಖ್ಯಸ್ಥರು ಇಂತಹ ಸಂಗತಿಗಳನ್ನು ನಿಭಾಯಿಸುವುದು ಉತ್ತಮ. ಈ ಬಗ್ಗೆ ಮಾತನಾಡಲು ಅವರೇ ಸೂಕ್ತ.

ಎಸ್.ರಾಮದಾಸ್ ಮತ್ತು ಅನ್ಬುಮಣಿ ರಾಮದಾಸ್ ಅವರ ನಡುವೆ ಪಿಎಂಕೆಯಲ್ಲಿ ಆಂತರಿಕ ಕಲಹವಿದೆ ಮತ್ತು ಇತ್ತೀಚೆಗೆ ಡಿಎಂಡಿಕೆಯ ಪ್ರೇಮಲತಾ ವಿಜಯಕಾಂತ್ ಅವರು ಸ್ಟಾಲಿನ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ಪಕ್ಷಗಳು ನಿಮ್ಮ ಮೈತ್ರಿಕೂಟದಿಂದ ದೂರ ಸರಿಯುತ್ತಿವೆಯೇ?

ಯಾರು ಬೇಕಾದರೂ ಮುಖ್ಯಮಂತ್ರಿಯವರನ್ನು ಭೇಟಿ ಮಾಡಬಹುದು. ಇತ್ತೀಚೆಗೆ ಓ. ಪನ್ನೀರಸೆಲ್ವಂ ಅವರು ಕೂಡ ಭೇಟಿ ಮಾಡಿದ್ದಾರೆ ಮತ್ತು ಇದೊಂದು ಸೌಜನ್ಯದ ಭೇಟಿ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರೇಮಲತಾ ಅವರ ಭೇಟಿ ಕೂಡ ಇದೇ ಕಾರಣಕ್ಕಿರಬಹುದು. ಒಂದು ವೇಳೆ ಅವರು ಹೋಗಲು ನಿರ್ಧರಿಸಿದರೆ ಅದು ಅವರ ನಿರ್ಧಾರ. ಪಿಎಂಕೆಯ ಆಂತರಿಕ ಕಲಹ ದುರಾದೃಷ್ಟದ ಸಂಗತಿ. ಆದರೆ ಅದು ತಂದೆ ಮತ್ತು ಮಗನ ನಡುವಿನ ಬಿಕ್ಕಟ್ಟು. ಅವರ ಕೌಟುಂಬಿಕ ವಿಚಾರದ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ನಾವು ಕೇವಲ ವೀಕ್ಷಕರಷ್ಟೇ.

Full View

ಭೇಟಿಗಾಗಿ ಅನುಮತಿ ಕೇಳಿದರೂ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಓ ಪನ್ನೀರಸೆಲ್ವಂ ಅವರಿಗೆ ಅವಕಾಶ ನೀಡುತ್ತಿಲ್ಲ? ಅವರು ಅಣ್ಣಾಮಲೈ ಜೊತೆಗೆ ವಾಟ್ಸಾಪ್ ನಲ್ಲಿ ನಡೆಸಿದ ಮಾತುಕತೆಯ ಸಂದೇಶವನ್ನು ಕೂಡ ಹಂಚಿಕೊಂಡಿದ್ದಾರೆ. ಮೂರು ಬಾರಿ ಮುಖ್ಯಮಂತ್ರಿಯಾದ ನಾಯಕರಿಗೆ ತೋರುವ ಅಗೌರವವಲ್ಲವೇ ಇದು?

ಕೆ.ಅಣ್ಣಾಮಲೈ ಅವರ ನಿಲುವಿಗೆ ನನ್ನ ಬೆಂಬಲವಿದೆ. ವಾಟ್ಸಾಪ್ ಸಂದೇಶಗಳನ್ನು ಅಧಿಕೃತ ಒಪ್ಪಿಗೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನಾನು ಅವರನ್ನು ನಂಬುತ್ತೇನೆ.

ರಾಹುಲ್ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ನಾನು ಮೂರು ವರ್ಷ ಕಾದರೂ ಸಿಗಲಿಲ್ಲ ಎಂದು ಜಯಂತಿ ನಟರಾಜನ್ ಅವರು ಒಮ್ಮೆ ಹೇಳಿದ್ದರು. ಹಾಗಾಗಿ ಓಪಿಎಸ್ ಅವರು ಪ್ರಧಾನಿ ಭೇಟಿಗಾಗಿ ಎರಡು ತಿಂಗಳಿಂದ ಕಾದಿದ್ದರೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಪ್ರಧಾನಿಯವರು ಈ ದೇಶದ 130 ಕೋಟಿ ಜನರ ನೇತೃತ್ವ ವಹಿಸಿರುವವರು. ಅವರಿಗೆ ಅಂತಾರಾಷ್ಟ್ರೀಯ ಭಾದ್ಯತೆಗಳು ಕೂಡ ಇರುತ್ತವೆ. ಅದು ಸುಲಭದ ಮಾತಲ್ಲ. ಹೆಚ್ಚು ಹೆಚ್ಚು ಜನರನ್ನು ನಮ್ಮೊಂದಿಗೆ ಸೇರಿಸಿಕೊಳ್ಳಲು ನಾವು ಬಯಸುತ್ತೇವೆ. ಆದರೆ ನಮ್ಮೊಂದಿಗೆ ಸೇರಿಕೊಳ್ಳುವುದು ಅವರವರ ಆಯ್ಕೆ. ಓಪಿಎಸ್-ಇಪಿಎಸ್ ನಡುವಿನ ಕಲಹಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ.

ಖುಷ್ಬು ಸುಂದರ್‌ ಅವರ ಸಂದರ್ಶನವನ್ನು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ನೋಡಿ...

Full View


Tags:    

Similar News