ಗುಜರಾತ್: ಸೂಫಿ ಸಂತನ ಮಂದಿರದ ಮೇಲೆ ದಾಳಿಯಿಂದ ಕೋಮು ಉದ್ವಿಗ್ನತೆ

ಕೋಮು ಉದ್ವಿಗ್ನತೆ, 30 ಮಂದಿ ಬಂಧನ

Update: 2024-05-09 10:47 GMT

ಮೇ 9- ಅಹಮದಾಬಾದ್‌ನ ಹೊರ ವಲಯದ ಪಿರಾನಾದಲ್ಲಿ ಜನರ ಗುಂಪೊಂದು ಇಮಾಮ್‌ ಶಾ ಬಾವಾ ಅವರ ದೇಗುಲದ ಮೇಲೆ ದಾಳಿ ನಡೆಸಿದ್ದರಿಂದ, ಕೋಮು ಉದ್ವಿಗ್ನತೆ ಉಂಟಾಗಿತ್ತು. 

ಸೂಫಿ ಸಂತ ಇಮಾ‌ಮ್‌ ಶಾ ಬಾವಾ ಅವರ 500 ವರ್ಷಗಳಷ್ಟು ಹಳೆಯ ಸಮಾಧಿಯನ್ನು ಧ್ವಂಸಗೊಳಿಸಲಾಗಿದೆ. ಈ ದೇವಾಲಯ ಹಿಂದೂ-ಮುಸ್ಲಿಂ ಐಕ್ಯತೆಯ ಸಂಕೇತವಾಗಿದ್ದು, ಅದರ ಧರ್ಮದರ್ಶಿ ಮಂಡಳಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಅನುಯಾಯಿಗಳು ಇದ್ದಾರೆ.

ದೇಗುಲದ ಮುಸ್ಲಿಂ ಟ್ರಸ್ಟಿಗಳು ಮತ್ತು ಕೆಲವು ಭಕ್ತರು ದಾಳಿಕೋರರನ್ನು ಪ್ರತಿರೋಧಿಸಿದರು. ಗಲಭೆ ಭುಗಿಲೆದ್ದು, ಕೋಮು ಉದ್ವಿಗ್ನತೆಗೆ ಕಾರಣವಾಯಿತು. ಎರಡೂ ಗುಂಪುಗಳು ಕಲ್ಲು ತೂರಾಟಕ್ಕೆ ಇಳಿದು, ನಾಲ್ವರು ಗಾಯಗೊಂಡರು. ಮುಂಜಾನೆ 3 ರಿಂದ 5 ಗಂಟೆ ನಡುವೆ ಘಟನೆ ನಡೆದಿದೆ.

30 ಮಂದಿ ಬಂಧನ: ʻಇಮಾಮ್‌ಶಾ ಬಾವಾ ರೋಜಾ ಧರ್ಮದರ್ಶಿ ಮಂಡಳಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸದಸ್ಯರಿದ್ದಾರೆ. ದೇಗುಲದ ಬಗ್ಗೆ ಬಹಳ ಹಿಂದಿನಿಂದಲೂ ವಿವಾದವಿದೆ. ಮೇ 9 ರ ಮುಂಜಾನೆ ಗೋರಿಯನ್ನು ಧ್ವಂಸಗೊಳಿಸಿದ ಸುದ್ದಿ ಹರಡಿದ ನಂತರ ಎರಡೂ ಸಮುದಾಯಗಳ ಜನರು ದೇಗುಲವನ್ನು ತಲುಪಿದರು ಎಂದು ಅಹಮದಾಬಾದ್ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಓಂಪ್ರಕಾಶ್ ಜಾಟ್ ಹೇಳಿದರು. 

ʻ ಕಲ್ಲು ತೂರಾಟದಲ್ಲಿ ಭಾಗಿಯಾಗಿದವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಆನಂತರ ದೂರು ದಾಖಲಿಸುತ್ತೇವೆ. ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 30 ಮಂದಿಯನ್ನು ಬಂಧಿಸಲಾಗಿದೆ. ಅಸ್ಲಾಲಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಎನ್‌.ಎಚ್. ಸವ್ಸೆತಾ ಸೇರಿದಂತೆ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ,ʼ ಎಂದು ಜಾಟ್ ತಿಳಿಸಿದ್ದಾರೆ. 

ವಿವಾದಿತ ದೇಗುಲ: ಅಹಮದಾಬಾದ್ ಗ್ರಾಮಾಂತರ ಪೊಲೀಸಿನ ಎಲ್‌ಸಿಬಿ (ಸ್ಥಳೀಯ ಅಪರಾಧ ವಿಭಾಗ) ಮತ್ತು ಎಸ್‌ಒಜಿ (ವಿಶೇಷ ಕಾರ್ಯಾಚರಣೆ ಗುಂಪು) ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಆದರೆ, ಪೊಲೀಸರ ಕ್ರಮಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʻಗೋರಿಗಳ ಧ್ವಂಸವನ್ನು ನಾವು ವಿರೋಧಿಸಿದ್ದೇವೆ. ಸಮಾಧಿಯ ಪುನರ್ನಿರ್ಮಾಣದ ಭರವಸೆ ನೀಡಿದ್ದಾರೆ. ಆದರೆ, ಯಾವುದೇ ಕ್ರಮವಾಗಿಲ್ಲ,ʼಎಂದು ಸಂತನ ವಂಶಸ್ಥ ಮತ್ತು ಪಿರಾನಾ ನಿವಾಸಿ ಅಜರ್ ಸೈಯದ್ ಹೇಳಿದರು. 

ಮತ್ತೊಂದೆಡೆ, ಆವರಣದೊಳಗಿನ ಹಿಂದು ಸಂತನ ವಿಗ್ರಹವನ್ನು ಮುಸ್ಲಿಂ ಗುಂಪು ಧ್ವಂಸಗೊಳಿಸಿದೆ ಎಂದು ಹಿಂದೂ ಬಲಪಂಥೀಯ ಗುಂಪು ದೂರಿದೆ. ಕಳೆದ ಕೆಲವು ದಶಕಗಳಿಂದ ಇದು ಬಗೆಹರಿಯದ ಸಮಸ್ಯೆಯಾಗಿ ಉಳಿದಿದೆ. ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಹಲವು ದೂರು ನೀಡಲಾಗಿದೆ. ಸೂಫಿ ಮಂದಿರವನ್ನು ಹಿಂದೂ ದೇಗುಲವನ್ನಾಗಿ ಪರಿವರ್ತಿಸಲಾಗುತ್ತಿದ್ದು, ಮಧ್ಯಪ್ರವೇಶಿಸುವಂತೆ ಕೋರಿ ಮುಸ್ಲಿಂ ಸಮುದಾಯದವರು ಗುಜರಾತ್ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಕಳೆದ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯ ಪಿಐಎಲ್ ನ್ನು ತಿರಸ್ಕರಿಸಿತು.

Tags:    

Similar News