ಡೆಲ್ಲಿ ಸಿಎಂ ಅತಿಶಿ ತಂದೆಯನ್ನು ಬದಲಾಯಿಸಿದ್ದಾರೆ: ಬಿಜೆಪಿ ಅಭ್ಯರ್ಥಿ ಬಿಧುರಿ ವಿವಾದಾತ್ಮಕ ಹೇಳಿಕೆ

ಕಲ್ಕಾಜಿ ಕ್ಷೇತ್ರದ ಹಾಲಿ ಶಾಸಕಿಯಾಗಿರುವ ಅತಿಶಿ ಸ್ವಲ್ಪ ಸಮಯದ ಹಿಂದೆ ತಮ್ಮ ಉಪನಾಮ ಮರ್ಲೆನಾ ಕೈಬಿಟ್ಟಿದ್ದರು. ಇದನ್ನೇ ಎತ್ತಿಕೊಂಡು ಬಿಧುರಿ ಅವಹೇಳನಕಾರಿ ಟೀಕೆ ಮಾಡಿದ್ದಾರೆ.;

Update: 2025-01-06 06:57 GMT
ರಮೇಶ್‌ ಬಿಧುರಿ

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಳಿಕ ಟೀಕೆಗೆ ಗುರಿಯಾಗಿರುವ ದೆಹಲಿಯ ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಭಾನುವಾರ ದೆಹಲಿ ಮುಖ್ಯಮಂತ್ರಿ ಅತಿಶಿ ಅವರ ಬಗ್ಗೆಯೂ ಕಳಪೆ ಹೇಳಿಕೆ ನೀಡಿದ ವಿವಾದ ಸೃಷ್ಟಿಸಿದ್ದಾರೆ.

ರೋಹಿಣಿಯಲ್ಲಿ ನಡೆದ ಬಿಜೆಪಿಯ ಪರಿವರ್ತನ ರ್ಯಾಲಿಯಲ್ಲಿ ಮಾತನಾಡಿದ ಬಿಧುರಿ, ಅತಿಶಿ ಅವರ ʼಮೆರ್ಲೆನಾʼ ಎಂಬ ಉಪನಾಮದಿಂದ ʼಸಿಂಗ್‌ʼ ಎಂದು ಬದಲಾಯಿಸಿದ್ದನ್ನು ಉಲ್ಲೇಖಿಸಿದ ಬಿಧುರಿ, ಅವರು "ತಂದೆಯನ್ನು ಬದಲಾಯಿಸಿದವರರು" ಎಂದು ಟೀಕಿಸಿದ್ದಾರೆ .

ಕಲ್ಕಾಜಿ ಕ್ಷೇತ್ರದ ಹಾಲಿ ಶಾಸಕಿಯಾಗಿರುವ ಅತಿಶಿ ಸ್ವಲ್ಪ ಸಮಯದ ಹಿಂದೆ ತಮ್ಮ ಉಪನಾಮ ಮರ್ಲೆನಾ ಕೈಬಿಟ್ಟಿದ್ದರು. ಇದನ್ನೇ ಎತ್ತಿಕೊಂಡು ಬಿಧುರಿ ಅವಹೇಳನಕಾರಿ ಟೀಕೆ ಮಾಡಿದ್ದಾರೆ.

"ಈ ಮರ್ಲೆನಾ (ಈ ಹಿಂದೆ ಅತಿಶಿ ಬಳಸುತ್ತಿದ್ದ ಉಪನಾಮ) ಸಿಂಗ್ ಆಗಿ ಬದಲಾಯಿತು. ಭ್ರಷ್ಟ ಕಾಂಗ್ರೆಸ್ ಜೊತೆ ಹೋಗುವುದಿಲ್ಲ ಎಂದು ಕೇಜ್ರಿವಾಲ್ ತಮ್ಮ ಮಕ್ಕಳ ಮೇಲೆ ಪ್ರಮಾಣ ಮಾಡಿದರು, ಮರ್ಲೆನಾ ತಂದೆಯನ್ನು ಬದಲಾಯಿಸಿದರು" ಎಂದು ಬಿಧುರಿ ಆರೋಪಿಸಿದ್ದಾರೆ.

ಬಿಧುರಿ ಅವರ ಭಾಷಣ ವೈರಲ್ ಆಗುತ್ತಿದ್ದಂತೆ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದರ ನಾಯಕರು "ಮರ್ಯಾದೆಯ " ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಎಂದು ಹೇಳಿದ್ದಾರೆ. "ಬಿಜೆಪಿ ನಾಯಕರು ದೆಹಲಿ ಮುಖ್ಯಮಂತ್ರಿ ಅತಿಶಿ ಅವರನ್ನು ನಿಂದಿಸುತ್ತಿದ್ದಾರೆ. ಮಹಿಳಾ ಮುಖ್ಯಮಂತ್ರಿಗೆ ಅವಮಾನ ಮಾಡುವುದನ್ನು ದೆಹಲಿ ಜನರು ಸಹಿಸುವುದಿಲ್ಲ. ದೆಹಲಿಯ ಎಲ್ಲಾ ಮಹಿಳೆಯರು ಇದಕ್ಕೆ ಸೇಡು ತೀರಿಸಿಕೊಳ್ಳಲಿದ್ದಾರೆ" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಜೆಪಿಯ ಮಹಿಳಾ ವಿರೋಧಿ ಮನಸ್ಥಿತಿಗೆ ಸಾಕ್ಷಿ: ಎಎಪಿ

ಮಹಿಳಾ ಮುಖ್ಯಮಂತ್ರಿಯ ವಿರುದ್ಧ ಬಿಧುರಿ ಅವರ ನಿಂದನಾತ್ಮಕ ಹೇಳಿಕೆಗಳು ಬಿಜೆಪಿಯ "ಮಹಿಳಾ ವಿರೋಧಿ" ಮನಸ್ಥಿತಿ ಬಹಿರಂಗಪಡಿಸಿವೆ ಎಂದು ಎಎಪಿ ಹೇಳಿಕೆಯಲ್ಲಿ ತಿಳಿಸಿದೆ.

"ಅವರು ಈಗ ಈ ರೀತಿ ವರ್ತಿಸುತ್ತಾರೆ. ಶಾಸಕರಾದರೆ ಸಾಮಾನ್ಯ ಮಹಿಳೆಯರು ಎದುರಿಸಬೇಕಾದ ಕಿರುಕುಳವನ್ನು ಊಹಿಸಿ" ಎಂದು ದೆಹಲಿಯ ಆಡಳಿತ ಪಕ್ಷ ಹೇಳಿದೆ.

ನಗರದ ಮಹಿಳೆಯರಿಗೆ ಮಾಸಿಕ 2,100 ರೂ.ಗಳ ಭತ್ಯೆ ನೀಡುವ ಕೇಜ್ರಿವಾಲ್ ಅವರ ಭರವಸೆಯು ಬಿಜೆಪಿಯನ್ನು ಬೆಚ್ಚಿಬೀಳಿಸಿದೆ ಎಂದು ಪಕ್ಷ ಹೇಳಿದೆ. ಬಿಜೆಪಿ ಮತ್ತು ರಮೇಶ್ ಬಿಧುರಿ ಅವರನ್ನು ಸೋಲಿಸುವ ಮೂಲಕ ದೆಹಲಿ ಅವರಿಗೆ ಪಾಠ ಕಲಿಸಲಿದೆ ಎಂದು ಎಎಪಿ ಪ್ರತಿಪಾದಿಸಿದೆ.

ಪ್ರಿಯಾಂಕಾ ಕೆನ್ನೆಗಳಂತೆ ರಸ್ತೆಗಳು

ಬಿಧೂರಿ ಈ ಹಿಂದೆ ಪ್ರಿಯಾಂಕ ಗಾಂಧಿಯ ಬಗ್ಗೆಯೂ ಟೀಕೆ ಮಾಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ, ಬಿಧುರಿ ಅವರು "ಕಲ್ಕಾಜಿಯ ಎಲ್ಲಾ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿಯ ಕೆನ್ನೆಗಳಂತೆ ಮಾಡುತ್ತೇನೆ" ಎಂದು ಹೇಳಿದ್ದರು.

"ಬಿಹಾರದಲ್ಲಿ ಲಾಲು ಅವರು ಹೇಮಾ ಮಾಲಿನಿ ಅವರ ಕೆನ್ನೆಗಳಂತೆ ರಸ್ತೆಗಳನ್ನು ನಿರ್ಮಿಸುವುದಾಗಿ ಹೇಳಿದ್ದರು. ಅವರು ಸುಳ್ಳು ಹೇಳಿದ್ದಾರೆ. ಅವರು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ನಾವು ಓಖ್ಲಾ ಮತ್ತು ಸಂಗಮ್ ವಿಹಾರ್ನಲ್ಲಿ ರಸ್ತೆಗಳನ್ನು ಮಾಡಿದಂತೆಯೇ, ಕಲ್ಕಾಜಿಯ ಎಲ್ಲಾ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿಯವರ ಕೆನ್ನೆಗಳಂತೆ ಮಾಡುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ಬಿಧುರಿ ಶನಿವಾರ ಕಲ್ಕಾಜಿ ಕ್ಷೇತ್ರದಲ್ಲಿ ಪ್ರಚಾರದ ಸಮಯದಲ್ಲಿ ಹೇಳಿದ್ದರು.

ಬಿಜೆಪಿ ಕ್ಷಮೆಯಾಚಿಸಬೇಕು: ಕಾಂಗ್ರೆಸ್ ಆಗ್ರಹ

"ಪ್ರಿಯಾಂಕಾ ಗಾಂಧಿ ಬಗ್ಗೆ ರಮೇಶ್ ಬಿಧುರಿ ಅವರ ಹೇಳಿಕೆ ಅತ್ಯಂತ ನಾಚಿಕೆಗೇಡಿನ ಸಂಗತಿ ಮಾತ್ರವಲ್ಲ, ಅವರ ಕೊಳಕು ಮಹಿಳಾ ವಿರೋಧಿ ಚಿಂತನೆ ತೋರಿಸುತ್ತದೆ. ಆದರೆ ಸದನದಲ್ಲಿ ತನ್ನ ಸಹ ಸಂಸದರ ವಿರುದ್ಧ ಕೆಟ್ಟ ಭಾಷೆ ಬಳಸಿದ ಮತ್ತು ಯಾವುದೇ ಶಿಕ್ಷೆಯನ್ನು ಪಡೆಯದ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಹೇಳಿದ್ದಾರೆ.

"ಬಿಧುರಿ ಮಾತ್ರವಲ್ಲ, ಬಿಜೆಪಿಯ ಉನ್ನತ ನಾಯಕತ್ವವು ಕೈಮುಗಿದು ಕ್ಷಮೆಯಾಚಿಸಬೇಕು" ಎಂದು ಶ್ರಿನಾಟೆ ಆಗ್ರಹಿಸಿದ್ದಾರೆ. ಇದು ಪ್ರಿಯಾಂಕಾ ಗಾಂಧಿಗೆ ಮಾತ್ರವಲ್ಲ, ಎಲ್ಲಾ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು.

ಲಾಲು ಮೇಲೆ ಆರೋಪ ಹೊರಿಸಿದ ಬಿಧುರಿ

ಕ್ಷಮೆಯಾಚಿಸಬೇಕು ಎಂಬ ಕಾಂಗ್ರೆಸ್ ಬೇಡಿಕೆಯ ಬಗ್ಗೆ ಕೇಳಿದಾಗ, ಬಿಧುರಿ ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು, "ಇದು ತಪ್ಪಾಗಿದ್ದರೆ, ಅದನ್ನು ಮಾಡಿದವರು ಮೊದಲು ಕ್ಷಮೆಯಾಚಿಸಬೇಕು. ಹೇಮಾ ಮಾಲಿನಿ ಮಹಿಳೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. 

Tags:    

Similar News