ಮಣಿಪುರ ಹಿಂಸಾಚಾರ: ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಎನ್‌ಪಿಪಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬರೆದ ಅಧಿಕೃತ ಪತ್ರದಲ್ಲಿ, ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ನೇತೃತ್ವದ ಮಣಿಪುರ ಸರ್ಕಾರವು ಹಿಂಸಾಚಾರ ನಿಯಂತ್ರಿಸಲು ಮತ್ತು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ವಿಫಲವಾಗಿದೆ ಎಂದು ಎನ್‌ಪಿಪಿ ಹೇಳಿದೆ.

Update: 2024-11-17 16:31 GMT
ಸಾಂದರ್ಭಿಕ ಚಿತ್ರ

ಈಶಾನ್ಯ ರಾಜ್ಯ ಮಣಿಪುರದಲ್ಲಿ ರಾಜ್ಯದಲ್ಲಿ ನಿರಂತರ ಹಿಂಸಾಚಾರದ ಮಧ್ಯೆ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಭಾನುವಾರ (ನವೆಂಬರ್ 17) ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡಿದೆ. ಮತ್ತೊಂದು ಮಿತ್ರ ಪಕ್ಷವಾದ ಕುಕಿ ಪೀಪಲ್ಸ್ ಅಲೈಯನ್ಸ್ ಎನ್‌ಡಿಎಯಿಂದ ಸರಿದ ಒಂದು ವರ್ಷದ ನಂತರ ಈ ಬೆಳವಣಿಗೆ ಸಂಭವಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬರೆದ ಅಧಿಕೃತ ಪತ್ರದಲ್ಲಿ, ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ನೇತೃತ್ವದ ಮಣಿಪುರ ಸರ್ಕಾರವು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ನಿಯಂತ್ರಿಸಲು ಮತ್ತು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಎನ್‌ಪಿಪಿ ಹೇಳಿದೆ.

ಎನ್‌ಪಿಪಿ ತನ್ನ 7 ಶಾಸಕರ ಬೆಂಬಲವನ್ನು ಹಿಂತೆಗೆದುಕೊಳ್ಳುವ ಕ್ರಮವು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ, ಏಕೆಂದರೆ ಕೇಸರಿ ಪಕ್ಷವು ತನ್ನದೇ ಆದ ಬಹುಮತ ಹೊಂದಿದೆ. 60 ಸದಸ್ಯರ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ ಏಕಾಂಗಿಯಾಗಿ 37 ಶಾಸಕರನ್ನು ಹೊಂದಿದೆ. ಇದಕ್ಕೆ ಅದರ ಮಿತ್ರ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್) 5 ಶಾಸಕರು, ಒಬ್ಬ ಜೆಡಿಯು ಶಾಸಕ ಮತ್ತು ಮೂವರು ಸ್ವತಂತ್ರರು ಬೆಂಬಲ ನೀಡಿದ್ದಾರೆ.

ನಾಳೆ ವಿಸ್ತೃತ ಪರಿಶೀಲನಾ ಸಭೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ದೆಹಲಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಹೊಸ ಹಿಂಸಾಚಾರ ಪ್ರಕರಣಗಳ ಮಧ್ಯೆ ಮಣಿಪುರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು ಎಂದು ವರದಿಗಳು ತಿಳಿಸಿವೆ. ಅವರು ಸೋಮವಾರ ಅಧಿಕಾರಿಗಳೊಂದಿಗೆ ವಿವರವಾದ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಕುಕಿ ಉಗ್ರಗಾಮಿಗಳು ಆರು ಮಂದಿಯನ್ನು ಅಪಹರಿಸಿ ಹತ್ಯೆ ಮಾಡಿದ ನಂತರ ಕಣಿವೆ ಜಿಲ್ಲೆಗಳಲ್ಲಿ ಹೊಸ ಪ್ರತಿಭಟನೆಗಳು ಭುಗಿಲೆದ್ದಿತ್ತು. ಇಂಫಾಲ್ ಪಶ್ಚಿಮ ಮತ್ತು ಪೂರ್ವದಲ್ಲಿ ಕರ್ಫ್ಯೂ ವಿಧಿಸಿದ ನಂತರ ಮತ್ತು ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ.

ಸೋಮವಾರ ಜಿರಿಬಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯ ನಂತರ ಪರಿಹಾರ ಶಿಬಿರದಲ್ಲಿ ವಾಸಿಸುತ್ತಿದ್ದ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ.

23 ಮಂದಿ ಬಂಧನ

ಹಲವಾರು ಶಾಸಕರ ನಿವಾಸಗಳಿಗೆ ನುಗ್ಗಿದ ಗುಂಪುಗಳು ಆಸ್ತಿಪಾಸ್ತಿಗಳನ್ನು ನಾಶಪಡಿಸಿದ ನಂತರ ಕರ್ಫ್ಯೂ ವಿಧಿಸಲಾಗಿದೆ. ಉದ್ರಿಕ್ತ ಗುಂಪು ಅವರ ವಸತಿ ಕಾಂಪೌಂಡ್ಗಳಿಗೆ ನುಗ್ಗಿ, ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿ ಮನೆಗಳಿಗೆ ಬೆಂಕಿ ಹಚ್ಚಿದಾಗ ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಇಂಫಾಲ್‌ನಲ್ಲಿ ವಿವಿಧ ಮನೆಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಆಸ್ತಿಗಳನ್ನು ಗುರಿಯಾಗಿಸಿಕೊಂಡ ಗುಂಪನ್ನು ಚದುರಿಸಲು ಪ್ರಯತ್ನಿಸಿದಾಗ 8 ಜನರು ಗಾಯಗೊಂಡಿದ್ದಾರೆ.

ಮನೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಿದ ಆರೋಪದ ಮೇಲೆ ಗುಂಪಿನ ಭಾಗವಾಗಿದ್ದ 23 ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

Tags:    

Similar News