ಕೆಂಪು ಕೋಟೆ ಸ್ಫೋಟ ಪ್ರಕರಣ: ಪಶ್ಚಿಮ ಬಂಗಾಳದ ವೈದ್ಯಕೀಯ ವಿದ್ಯಾರ್ಥಿ ಎನ್‌ಐಎ ಬಲೆಗೆ

ಎರಡು ದಿನಗಳ ಹಿಂದಷ್ಟೇ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಯಿ ಮತ್ತು ಸಹೋದರಿಯೊಂದಿಗೆ ಉತ್ತರ ದಿನಾಜ್‌ಪುರದಲ್ಲಿರುವ ತನ್ನ ಪೂರ್ವಜರ ಮನೆಯಾದ ಕೋನಲ್ ಗ್ರಾಮಕ್ಕೆ ಬಂದಿದ್ದ.

Update: 2025-11-15 08:40 GMT
Click the Play button to listen to article

ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಸುಳಿವು ಲಭಿಸಿದ್ದು, ಪಶ್ಚಿಮ ಬಂಗಾಳದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ. ಈ ಮೂಲಕ, 'ವೈಟ್-ಕಾಲರ್' ಉಗ್ರರ ಜಾಲ ಎಂದು ಶಂಕಿಸಲಾಗಿರುವ ಪ್ರಕರಣದ ತನಿಖೆ ಮತ್ತೊಂದು ಆಯಾಮ ಪಡೆದುಕೊಂಡಿದೆ.

ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ನಿಶಾರ್ ಆಲಂ ಎಂಬ ವಿದ್ಯಾರ್ಥಿಯನ್ನು ಶುಕ್ರವಾರ ಮುಂಜಾನೆ ಉತ್ತರ ದಿನಾಜ್‌ಪುರದ ಸೂರ್ಯಾಪುರ್ ಬಜಾರ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಯಿತು ನಂತರ ಆತನನ್ನು ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ಶನಿವಾರ ತಿಳಿಸಿವೆ. ಸ್ಫೋಟದ ತನಿಖೆಯ ವೇಳೆ ಲಭಿಸಿದ ಸುಳಿವುಗಳನ್ನು ಆಧರಿಸಿ, ಎನ್‌ಐಎ ಅಧಿಕಾರಿಗಳು ಲುಧಿಯಾನದಲ್ಲಿದ್ದ ನಿಶಾರ್‌ನ ತಂದೆ ತೌಹಿದ್ ಆಲಂ ಅವರನ್ನು ಸಂಪರ್ಕಿಸಿದಾಗ, ನಿಶಾರ್ ಇರುವ ಸ್ಥಳದ ಬಗ್ಗೆ ಮಾಹಿತಿ ಲಭಿಸಿದೆ.

ಎರಡು ದಿನಗಳ ಹಿಂದಷ್ಟೇ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಯಿ ಮತ್ತು ಸಹೋದರಿಯೊಂದಿಗೆ ಉತ್ತರ ದಿನಾಜ್‌ಪುರದಲ್ಲಿರುವ ತನ್ನ ಪೂರ್ವಜರ ಮನೆಯಾದ ಕೋನಲ್ ಗ್ರಾಮಕ್ಕೆ ಬಂದಿದ್ದ. ಮೊಬೈಲ್ ಫೋನ್ ಲೊಕೇಶನ್ ಟ್ರ್ಯಾಕ್ ಮಾಡಿದ ತನಿಖಾಧಿಕಾರಿಗಳು, ಸೂರ್ಯಾಪುರ್ ಬಜಾರ್ ಪ್ರದೇಶದಲ್ಲಿ ಆತನಿರುವುದನ್ನು ಪತ್ತೆಹಚ್ಚಿ, ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಮುಂಜಾನೆ ಆತನನ್ನು ಬಂಧಿಸಿದ್ದಾರೆ. ಬಂಧನದ ನಂತರ ನಿಶಾರ್‌ನನ್ನು ಇಸ್ಲಾಂಪುರಕ್ಕೆ, ನಂತರ ಹೆಚ್ಚಿನ ವಿಚಾರಣೆಗಾಗಿ ಸಿಲಿಗುರಿಗೆ ಸ್ಥಳಾಂತರಿಸಲಾಗಿದೆ.

ಕುಟುಂಬಸ್ಥರಿಗೆ ಆಘಾತ

ನಿಶಾರ್ ಬಂಧನದಿಂದ ಆತನ ಕುಟುಂಬ ಆಘಾತಕ್ಕೊಳಗಾಗಿದೆ. "ಅವನು ಸೌಮ್ಯ ಸ್ವಭಾವದ, ಸಭ್ಯ ಹುಡುಗ, ಕೇವಲ ಓದಿನ ಕಡೆಗೆ ಗಮನ ಹರಿಸುತ್ತಿದ್ದ. ಇಂತಹ ಕೃತ್ಯದಲ್ಲಿ ಅವನ ಪಾತ್ರವಿದೆ ಎಂದು ನಾವು ಊಹಿಸಲೂ ಸಾಧ್ಯವಿಲ್ಲ," ಎಂದು ಆತನ ಚಿಕ್ಕಪ್ಪ ಅಬುಲ್ ಕಾಶೆಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಸುದ್ದಿಯಿಂದ ಗ್ರಾಮಸ್ಥರಲ್ಲಿಯೂ ಗೊಂದಲ ಉಂಟಾಗಿದ್ದು, ಇಂತಹ ದೊಡ್ಡ ಪ್ರಕರಣದಲ್ಲಿ ನಿಶಾರ್ ಹೆಸರು ಹೇಗೆ ಸೇರಿಕೊಂಡಿತು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮತ್ತೆ ಮುನ್ನೆಲೆಗೆ ಬಂದ ಅಲ್-ಫಲಾಹ್ ವಿವಿ

ಈ ಬಂಧನದೊಂದಿಗೆ, ಅಲ್-ಫಲಾಹ್ ವಿಶ್ವವಿದ್ಯಾಲಯವು ಮತ್ತೆ ತೀವ್ರ ತನಿಖೆಯ ಕೇಂದ್ರಬಿಂದುವಾಗಿದೆ. ಈ ವಾರದ ಆರಂಭದಲ್ಲಿ, ಇದೇ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಮೂವರು ವೈದ್ಯರನ್ನು ಕೆಂಪು ಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಶಕ್ಕೆ ಪಡೆದಿತ್ತು. ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಿಂದ ಅಪಾರ ಪ್ರಮಾಣದ ಸ್ಫೋಟಕ ರಾಸಾಯನಿಕಗಳು ಮತ್ತು ಬಾಂಬ್ ತಯಾರಿಕಾ ಸಾಮಗ್ರಿಗಳು ಪತ್ತೆಯಾಗಿರುವುದು, ಇದೊಂದು ಸುಸಂಘಟಿತ ಜಾಲ ಎಂಬ ಶಂಕೆಯನ್ನು ಬಲಪಡಿಸಿದೆ.

ನಿಶಾರ್ ಹೆಸರು ತನಿಖೆಗೆ ಹೇಗೆ ಬಂತು ಎಂಬುದನ್ನು ಎನ್‌ಐಎ ಇನ್ನೂ ಬಹಿರಂಗಪಡಿಸಿಲ್ಲ. ಡಿಜಿಟಲ್ ಸಂವಹನ, ಫೋನ್ ದಾಖಲೆಗಳು ಮತ್ತು ಬಂಧಿತ ವೈದ್ಯರೊಂದಿಗಿನ ಸಂಪರ್ಕಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇಸ್ಲಾಮಿಕ್ ಉಗ್ರರ ಸಂಪರ್ಕದ ಬಗ್ಗೆಯೂ ತನಿಖೆ

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ನಂತರ ಸಕ್ರಿಯವಾಗಿರುವ ಇಸ್ಲಾಮಿಕ್ ಉಗ್ರಗಾಮಿ ಜಾಲಗಳೊಂದಿಗೆ ನಿಶಾರ್‌ಗೆ ಯಾವುದೇ ನೇರ ಅಥವಾ ಪರೋಕ್ಷ ಸಂಪರ್ಕವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ನಡುವೆ, ಬಾಂಗ್ಲಾದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ಖಲೀಲುರ್ ರಹಮಾನ್ ಅವರು ಶುಕ್ರವಾರ ಸಂಜೆ ಢಾಕಾದಲ್ಲಿ ಭಾರತೀಯ ಹೈಕಮಿಷನರ್ ಪ್ರಣಯ್ ಕುಮಾರ್ ವರ್ಮಾ ಅವರನ್ನು ಭೇಟಿಯಾಗಿ, ಪ್ರಾದೇಶಿಕ ಭದ್ರತಾ ಸವಾಲುಗಳ ಕುರಿತು ಚರ್ಚಿಸಿದ್ದಾರೆ.

ಕೆಂಪು ಕೋಟೆ ಸ್ಫೋಟದಲ್ಲಿ ಹಲವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದರು. ಇದನ್ನು "ರಾಷ್ಟ್ರ ವಿರೋಧಿ ಶಕ್ತಿಗಳ ಪಿತೂರಿ" ಎಂದು ಸರ್ಕಾರ ಬಣ್ಣಿಸಿದ್ದು, ತನಿಖೆ ಚುರುಕುಗೊಂಡಿದೆ. 

Tags:    

Similar News