ಬಿಹಾರ ಗೆಲುವಿನ ಬೆನ್ನಲ್ಲೇ ಬಂಡಾಯಗಾರರ ವಿರುದ್ಧ ಬಿಜೆಪಿ ಶಿಸ್ತುಕ್ರಮ: ಮಾಜಿ ಕೇಂದ್ರ ಸಚಿವ ಅಮಾನತು
ಚುನಾವಣಾ ಪ್ರಚಾರದ ಸಮಯದಲ್ಲಿ, ಅವರು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳೇ ಆಗಿದ್ದರೂ, ಅಪರಾಧ ಹಿನ್ನೆಲೆಯುಳ್ಳವರನ್ನು ತಿರಸ್ಕರಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದರು.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಭರ್ಜರಿ ಜಯಭೇರಿ ಬಾರಿಸಿದ ಮರುದಿನವೇ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಪಕ್ಷದೊಳಗಿನ ಬಂಡಾಯಗಾರರ ವಿರುದ್ಧ ಕಠಿಣ ಶಿಸ್ತು ಕ್ರಮಕ್ಕೆ ಮುಂದಾಗಿದೆ. 'ಪಕ್ಷ ವಿರೋಧಿ' ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ, ಬಿಹಾರದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅವರೊಂದಿಗೆ, ವಿಧಾನ ಪರಿಷತ್ ಸದಸ್ಯ ಅಶೋಕ್ ಅಗರ್ವಾಲ್ ಮತ್ತು ಕತಿಹಾರ್ ಮೇಯರ್ ಉಷಾ ಅಗರ್ವಾಲ್ ಅವರನ್ನೂ ಸಹ ಅಮಾನತು ಮಾಡಲಾಗಿದೆ.
ಪಕ್ಷದ ಈ ಮೂವರು ನಾಯಕರಿಗೂ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, "ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ನಿಮ್ಮನ್ನು ಪಕ್ಷದಿಂದ ಏಕೆ ಉಚ್ಚಾಟಿಸಬಾರದು?" ಎಂದು ಪ್ರಶ್ನಿಸಲಾಗಿದೆ. ಈ ನೋಟಿಸ್‌ಗೆ ಒಂದು ವಾರದೊಳಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. "ನಿಮ್ಮ ಚಟುವಟಿಕೆಗಳು ಪಕ್ಷಕ್ಕೆ ಹಾನಿ ಉಂಟುಮಾಡಿವೆ ಮತ್ತು ಶಿಸ್ತಿನ ಉಲ್ಲಂಘನೆಯಾಗಿದೆ. ಇದನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದೆ," ಎಂದು ನೋಟಿಸ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಅಮಾನತಿಗೆ ಕಾರಣವಾದ ಗಂಭೀರ ಆರೋಪಗಳು
ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಮತ್ತು ತಮ್ಮ ನೇರ ನುಡಿಗಳಿಂದಲೇ ಸದಾ ಸುದ್ದಿಯಲ್ಲಿರುವ ಆರ್.ಕೆ. ಸಿಂಗ್, ಕಳೆದ ಕೆಲವು ತಿಂಗಳುಗಳಿಂದ ತಮ್ಮದೇ ಪಕ್ಷ ಮತ್ತು ಸರ್ಕಾರದ ವಿರುದ್ಧ ಬಹಿರಂಗವಾಗಿ ಗಂಭೀರ ಆರೋಪಗಳನ್ನು ಮಾಡುತ್ತಿದ್ದರು. ಬಿಹಾರದಲ್ಲಿನ ಸೌರ ವಿದ್ಯುತ್ ಯೋಜನೆಯನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸುವಲ್ಲಿ 62,000 ಕೋಟಿಗಳ ರೂಪಾಯಿಗಳ ಬೃಹತ್ ಹಗರಣ ನಡೆದಿದೆ ಎಂದು ಅವರು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು.
ಚುನಾವಣಾ ಪ್ರಚಾರದ ಸಮಯದಲ್ಲಿ, ಅವರು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳೇ ಆಗಿದ್ದರೂ, ಅಪರಾಧ ಹಿನ್ನೆಲೆಯುಳ್ಳವರನ್ನು ತಿರಸ್ಕರಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದರು. ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಜೆಡಿಯು ನಾಯಕ ಅನಂತ್ ಸಿಂಗ್ ಅವರಂತಹ ಪ್ರಭಾವಿ ನಾಯಕರ ವಿರುದ್ಧವೂ ಅವರು ಗಂಭೀರ ಆರೋಪಗಳನ್ನು ಮಾಡಿದ್ದರು. "ಜಾತಿಯನ್ನು ನೋಡಿ ಅಪರಾಧಿಗಳಿಗೆ ಮತ ಹಾಕಬೇಡಿ. ಕಣದಲ್ಲಿ ಯೋಗ್ಯ ಅಭ್ಯರ್ಥಿಗಳೇ ಇಲ್ಲದಿದ್ದರೆ, NOTAಗೆ ಮತ ಚಲಾಯಿಸಿ," ಎಂದು ಅವರು ಮತದಾರರಿಗೆ ಕರೆ ನೀಡಿದ್ದರು. ಇಂತಹ ಹೇಳಿಕೆಗಳು ಪಕ್ಷದ ಗೆಲುವಿಗೆ ಅಡ್ಡಿಯಾಗಬಹುದು ಎಂದು ಪರಿಗಣಿಸಿ, ಪಕ್ಷವು ಈ ಕಠಿಣ ಕ್ರಮ ಕೈಗೊಂಡಿದೆ.
ಇತರ ನಾಯಕರ ಮೇಲೂ ಕ್ರಮ
ಇನ್ನು, ಅಮಾನತುಗೊಂಡಿರುವ ವಿಧಾನ ಪರಿಷತ್ ಸದಸ್ಯ ಅಶೋಕ್ ಅಗರ್ವಾಲ್ ಮತ್ತು ಅವರ ಪತ್ನಿ ಉಷಾ ಅಗರ್ವಾಲ್, ಕತಿಹಾರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತಾರ್‌ಕಿಶೋರ್ ಪ್ರಸಾದ್ ವಿರುದ್ಧ ಸ್ಪರ್ಧಿಸಿದ್ದ ತಮ್ಮ ಪುತ್ರ ಸೌರವ್ ಅಗರ್ವಾಲ್ ಪರವಾಗಿ ಪ್ರಚಾರ ನಡೆಸಿದ್ದರು. ಸೌರವ್ ಅಗರ್ವಾಲ್, ವಿಪಕ್ಷಗಳ ಮಹಾಘಟಬಂಧನದ ಭಾಗವಾಗಿರುವ ವಿಕಾಸಶೀಲ್ ಇನ್ಸಾನ್ ಪಾರ್ಟಿಯಿಂದ (ವಿಐಪಿ) ಸ್ಪರ್ಧಿಸಿದ್ದರು. ಇದು ನೇರವಾದ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ, ಅವರ ವಿರುದ್ಧವೂ ಬಿಜೆಪಿ ಶಿಸ್ತುಕ್ರಮ ಜರುಗಿಸಿದೆ. ಬಿಹಾರದಲ್ಲಿ ಅಧಿಕಾರವನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ, ಪಕ್ಷದೊಳಗಿನ ಭಿನ್ನಮತವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ಈ ಮೂಲಕ ರವಾನಿಸಿದೆ.