ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಇಂದು ಮೊದಲ ಹಂತದ ಮತದಾನ
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಶಬರಿಮಲೆ ವಿಷಯವನ್ನೇ ಮುಂದಿಟ್ಟುಕೊಂಡು ಮತ ಧ್ರುವೀಕರಣಕ್ಕೆ ಯತ್ನಿಸುತ್ತಿದೆ.
ಸಾಂದರ್ಭಿಕ ಚಿತ್ರ
ಕೇರಳದಲ್ಲಿ 2026ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ, ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸಬಲ್ಲ ಮಹತ್ವದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಇಂದು (ಮಂಗಳವಾರ) ಏಳು ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಈ ಚುನಾವಣೆ ಆಡಳಿತಾರೂಢ ಎಲ್ ಡಿ ಎಫ್ (LDF), ವಿಪಕ್ಷ ಯುಡಿಎಫ್ (UDF) ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ.
ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಈ ಫಲಿತಾಂಶವು ರಾಜ್ಯ ರಾಜಕೀಯದ ಮುಂದಿನ ದಿಕ್ಕನ್ನು ನಿರ್ಧರಿಸುವ ಸಾಧ್ಯತೆಯಿದೆ.
ಕೇರಳದ ಇತಿಹಾಸವನ್ನು ಗಮನಿಸಿದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಂಬರುವ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಮುನ್ಸೂಚನೆಯಾಗಿ ಪರಿಣಮಿಸಿವೆ. 1995, 2005, 2015 ಮತ್ತು 2020ರಲ್ಲಿ ಎಲ್‌ಡಿಎಫ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೇಲುಗೈ ಸಾಧಿಸಿತ್ತು ಮತ್ತು ತದನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿಯೂ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.
ತದ್ವಿರುದ್ಧವಾಗಿ, 2000 ಮತ್ತು 2010ರ ಸ್ಥಳೀಯ ಚುನಾವಣೆಯಲ್ಲಿ ಯುಡಿಎಫ್ ಗೆಲುವು ಸಾಧಿಸಿದಾಗ, ನಂತರದ 2001 ಮತ್ತು 2011ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಚುನಾವಣೆ ರಾಜಕೀಯ ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿದೆ.
ಆಡಳಿತಾರೂಢ ಸರ್ಕಾರಕ್ಕೆ ಸಮಾಜ ಕಲ್ಯಾಣ ಯೋಜನೆಗಳೇ ಭರವಸೆ
ಆಡಳಿತಾರೂಢ ಎಲ್‌ಡಿಎಫ್ ತನ್ನ ಸರ್ಕಾರದ ಕಲ್ಯಾಣ ಯೋಜನೆಗಳನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ವಿಶೇಷವಾಗಿ ಪಿಂಚಣಿ ಹೆಚ್ಚಳ ಮತ್ತು ತಳಮಟ್ಟದ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದೆ. ವಿರೋಧ ಪಕ್ಷಗಳ ಟೀಕೆಗಳಿಗೆ ಅಭಿವೃದ್ಧಿ ಮಂತ್ರದ ಮೂಲಕ ಉತ್ತರ ನೀಡಲು ಎಡರಂಗ ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಎಲ್‌ಡಿಎಫ್ ತೀವ್ರ ಕಸರತ್ತು ನಡೆಸಿದೆ.
ವಿರೋಧ ಪಕ್ಷವಾದ ಯುಡಿಎಫ್ ಆರಂಭದಲ್ಲಿ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿತ್ತು. ಆದರೆ, ಇತ್ತೀಚೆಗೆ ಪಾಲಕ್ಕಾಡ್ ಶಾಸಕ ರಾಹುಲ್ ಮಾಮ್ಕೂಟತ್ತಿಲ್ ಅವರ ಲೈಂಗಿಕ ಹಗರಣ ಪಕ್ಷಕ್ಕೆ ತೀವ್ರ ಮುಜುಗರ ತಂದೊಡ್ಡಿತು. ಡ್ಯಾಮೇಜ್ ಕಂಟ್ರೋಲ್ ಕ್ರಮವಾಗಿ ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆಯಾದರೂ, ನೈತಿಕತೆಯ ಪ್ರಶ್ನೆ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಯುಡಿಎಫ್ ಪ್ರಯತ್ನಕ್ಕೆ ಇದು ಹಿನ್ನಡೆ ತಂದಿದೆ. ಆದಾಗ್ಯೂ, ಚಿನ್ನ ಕಳ್ಳತನ ಪ್ರಕರಣದ ಮೂಲಕ ಮತದಾರರನ್ನು ಸೆಳೆಯಲು ಅಂತಿಮ ಕಸರತ್ತು ನಡೆಸಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಶಬರಿಮಲೆ ವಿಷಯವನ್ನೇ ಮುಂದಿಟ್ಟುಕೊಂಡು ಮತ ಧ್ರುವೀಕರಣಕ್ಕೆ ಯತ್ನಿಸುತ್ತಿದೆ. ತಿರುವನಂತಪುರಂ ಪಾಲಿಕೆ ಸೇರಿದಂತೆ ಕೆಲವು ಪ್ರಮುಖ ನಗರ ಪಾಲಿಕೆಗಳಲ್ಲಿ ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿರುವ ಬಿಜೆಪಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಮತ ಗಳಿಕೆಗೆ ಮುಂದಾಗಿದೆ. ಮೊದಲ ಹಂತದ ಚುನಾವಣೆ ನಡೆಯುತ್ತಿರುವ ದಕ್ಷಿಣ ಕೇರಳದ ಜಿಲ್ಲೆಗಳಲ್ಲಿ ಶಬರಿಮಲೆ ವಿವಾದ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.