ವಿಮಾನ ಹಾರಾಟ ರದ್ದು ಪ್ರಕರಣ: ಡಿಜಿಸಿಎ ನೋಟಿಸ್‌ಗೆ ಉತ್ತರಿಸಲು ಹೆಚ್ಚಿನ ಕಾಲಾವಕಾಶ ಕೋರಿದ ಇಂಡಿಗೊ

ಸಂಪೂರ್ಣ ವರದಿ ನೀಡಲು ಸಮಯ ಕೇಳಿದ್ದರೂ, ಇಂಡಿಗೊ ಸದ್ಯಕ್ಕೆ ವಿಮಾನ ಕಾರ್ಯಾಚರಣೆಯಲ್ಲಾದ ಅಡಚಣೆಗೆ ಕೆಲವು ಪ್ರಾಥಮಿಕ ಕಾರಣಗಳನ್ನು ಪಟ್ಟಿಮಾಡಿದೆ.

Update: 2025-12-09 04:40 GMT

ಇಂಡಿಗೋ ವಿಮಾನ 

Click the Play button to listen to article

ಕಳೆದ ವಾರಾಂತ್ಯದಲ್ಲಿ ಏಕಾಏಕಿ ಸಾವಿರಾರು ವಿಮಾನಗಳ ಹಾರಾಟವನ್ನು ರದ್ದುಪಡಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಇಂಡಿಗೊ ಏರ್‌ಲೈನ್ಸ್, ಈ ಕುರಿತು ಕಾರಣ ನೀಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ನೀಡಿದ್ದ ಶೋಕಾಸ್ ನೋಟಿಸ್‌ಗೆ ಉತ್ತರಿಸಲು ಹೆಚ್ಚಿನ ಸಮಯಾವಕಾಶ ಕೋರಿದೆ.

ಇಷ್ಟು ದೊಡ್ಡ ಮಟ್ಟದ ವ್ಯತ್ಯಯಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಪತ್ತೆಹಚ್ಚಿ ವರದಿ ನೀಡಲು ಸದ್ಯದ ಸಮಯ ಸಾಕಾಗುವುದಿಲ್ಲ ಎಂದು ಸಂಸ್ಥೆ ಮನವಿ ಮಾಡಿದೆ. ಶನಿವಾರ ಡಿಜಿಸಿಎ ನೀಡಿದ್ದ ನೋಟಿಸ್‌ಗೆ ಸೋಮವಾರ ಸಂಜೆ ಇಂಡಿಗೊ ಪ್ರತಿಕ್ರಿಯೆ ನೀಡಿದ್ದು, ವಿಮಾನಗಳ ಹಾರಾಟ ರದ್ದತಿಯಿಂದ ಪ್ರಯಾಣಿಕರಿಗೆ ಉಂಟಾದ ತೊಂದರೆ ಮತ್ತು ಅನಾನುಕೂಲತೆಗಳಿಗೆ ಕ್ಷಮೆಯಾಚಿಸಿದೆ. ಅತಿದೊಡ್ಡ ಮಟ್ಟದ ಈ ವ್ಯತ್ಯಯಕ್ಕೆ ಕಾರಣವಾದ ಅಂಶಗಳನ್ನು ತಿಳಿಯಲು 'ರೂಟ್ ಕಾಸ್ ಅನಾಲಿಸಿಸ್' ಅಥವಾ ಮೂಲ ಕಾರಣಗಳ ವಿಶ್ಲೇಷಣೆ ನಡೆಸಬೇಕಿದ್ದು, ಇದಕ್ಕೆ ಹೆಚ್ಚಿನ ಕಾಲಾವಕಾಶದ ಅಗತ್ಯವಿದೆ ಎಂದು ಸಂಸ್ಥೆ ತಿಳಿಸಿದೆ.

ಸಂಪೂರ್ಣ ವರದಿ ನೀಡಲು ಸಮಯ ಕೇಳಿದ್ದರೂ, ಇಂಡಿಗೊ ಸದ್ಯಕ್ಕೆ ವಿಮಾನ ಕಾರ್ಯಾಚರಣೆಯಲ್ಲಾದ ಅಡಚಣೆಗೆ ಕೆಲವು ಪ್ರಾಥಮಿಕ ಕಾರಣಗಳನ್ನು ಪಟ್ಟಿಮಾಡಿದೆ. ವಿಮಾನಗಳಲ್ಲಿ ಕಂಡುಬಂದ ಸಣ್ಣಪುಟ್ಟ ತಾಂತ್ರಿಕ ದೋಷಗಳು, ಚಳಿಗಾಲದ ಆರಂಭಕ್ಕೆ ಸಂಬಂಧಿಸಿದಂತೆ ವಿಮಾನಗಳ ವೇಳಾಪಟ್ಟಿಯಲ್ಲಿ ಮಾಡಲಾದ ಬದಲಾವಣೆಗಳು ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಈ ಗೊಂದಲಕ್ಕೆ ಕಾರಣವಾಗಿವೆ ಎಂದು ವಿವರಿಸಿದೆ. ಇದರೊಂದಿಗೆ, ವಾಯುಯಾನ ವ್ಯವಸ್ಥೆಯಲ್ಲಿ ಹೆಚ್ಚಿದ ವಿಮಾನಗಳ ದಟ್ಟಣೆ ಮತ್ತು ನವೀಕರಿಸಲಾದ ಸಿಬ್ಬಂದಿ ರೋಸ್ಟರಿಂಗ್ (ಪಾಳಿ ಹಂಚಿಕೆ) ನಿಯಮಗಳಲ್ಲಾದ ಗೊಂದಲಗಳು ಕೂಡ ಸಮಸ್ಯೆ ಉಲ್ಬಣಿಸಲು ಕಾರಣವಾಗಿವೆ ಎಂದು ಸಂಸ್ಥೆ ತಿಳಿಸಿದೆ.

ಸವಾಲುಗಳೇನು?

ವಿಮಾನ ಸಿಬ್ಬಂದಿಯ ಕರ್ತವ್ಯದ ಅವಧಿಗೆ ಸಂಬಂಧಿಸಿದ 'ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್' (FDTL) ಹಂತ-2 ಅನ್ನು ಅನುಷ್ಠಾನಗೊಳಿಸುವಲ್ಲಿ ಎದುರಾಗುತ್ತಿರುವ ಸವಾಲುಗಳ ಕುರಿತು ಡಿಜಿಸಿಎ ಜೊತೆಗೆ ನಿರಂತರ ಮಾತುಕತೆ ನಡೆಸುತ್ತಿರುವುದಾಗಿ ಇಂಡಿಗೊ ಸ್ಪಷ್ಟಪಡಿಸಿದೆ. ಈ ಎಲ್ಲ ತಾಂತ್ರಿಕ, ಹವಾಮಾನ ಮತ್ತು ಆಡಳಿತಾತ್ಮಕ ಸಮಸ್ಯೆಗಳು ಒಟ್ಟಾಗಿ ಕಾರ್ಯಾಚರಣೆಯ ಮೇಲೆ ಗಂಭೀರ ಪರಿಣಾಮ ಬೀರಿವೆ ಎಂದು ಸಂಸ್ಥೆ ಪ್ರಾಥಮಿಕವಾಗಿ ಸಮಜಾಯಿಷಿ ನೀಡಿದೆ.

Tags:    

Similar News