ಬೆಲ್ಜಿಯಂ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ; ಮೆಹುಲ್‌ ಚೋಕ್ಸಿ ಗಡಿಪಾರು ಪಕ್ಕಾ!

13,000 ಕೋಟಿ ರೂ.ಗಳ ಪಿಎನ್‌ಬಿ ಹಗರಣ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಅವರ ಮನವಿಯನ್ನು ಬೆಲ್ಜಿಯಂನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ, ಭಾರತದ ಹಸ್ತಾಂತರದ ಕೋರಿಕೆಯನ್ನು ಎತ್ತಿಹಿಡಿದಿದೆ.

Update: 2025-12-10 08:10 GMT
ಮೆಹುಲ್‌ ಚೋಕ್ಸಿ
Click the Play button to listen to article

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 13,000 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್‌ ಚೋಕ್ಸಿಗೆ ಬೆಲ್ಜಿಯಂ ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದೆ. ತಮ್ಮನ್ನು ಭಾರತಕ್ಕೆ ಹಸ್ತಾಂತರಿಸಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬೆಲ್ಜಿಯಂನ ಅತ್ಯುನ್ನತ ನ್ಯಾಯಾಲಯ 'ಕೋರ್ಟ್ ಆಫ್ ಕ್ಯಾಸೇಶನ್' ತಿರಸ್ಕರಿಸಿದೆ.

ಕೋರ್ಟ್ ಆಫ್ ಕ್ಯಾಸೇಶನ್‌ನ ವಕ್ತಾರ ಅಡ್ವೊಕಾಟ್-ಜನರಲ್ ಹೆನ್ರಿ ವಾಂಡರ್‌ಲಿಂಡೆನ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಚೋಕ್ಸಿಯವರ ಮೇಲ್ಮನವಿಯನ್ನು ಕೋರ್ಟ್‌ ತಿರಸ್ಕರಿಸಿದೆ. ಹೀಗಾಗಿ ಅವರ ಹಸ್ತಾಂತರ ಆದೇಶ ಹಾಗೆಯೇ ಉಳಿಯಲಿದೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಇದರೊಂದಿಗೆ, ಭಾರತಕ್ಕೆ ಚೋಕ್ಸಿಯ ಹಸ್ತಾಂತರಕ್ಕೆ ಇದ್ದ ಕಾನೂನು ಅಡ್ಡಿಯು ಬಹುತೇಕ ನಿವಾರಣೆಯಾದಂತಾಗಿದೆ.

ಕೋರ್ಟ್ ಆಫ್ ಕ್ಯಾಸೇಶನ್ ಕೇವಲ ಅಪೀಲ್ ಕೋರ್ಟ್‌ನ ವಿಚಾರಣೆಯನ್ನು ಪರಿಶೀಲಿಸುತ್ತದೆ. ಅಂದರೆ ಅದು ಸರಿಯಾದ ಕಾನೂನು ವಿಧಿವಿಧಾನಗಳನ್ನು ಅನುಸರಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ನೋಡುತ್ತದೆ. ಆದ್ದರಿಂದ, ಹೊಸ ಸಾಕ್ಷ್ಯಗಳನ್ನು ಇಲ್ಲಿ ಮಂಡಿಸಲು ಅವಕಾಶವಿಲ್ಲ ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ತಿಳಿಸಿದೆ. 

ಈ ಹಿಂದೆ, ಆಂಟ್‌ವರ್ಪ್ ಕೋರ್ಟ್ ಆಫ್ ಅಪೀಲ್  ಭಾರತದ ಹಸ್ತಾಂತರ ಮನವಿಯನ್ನು ಎತ್ತಿಹಿಡಿದು, ಅದನ್ನು ಜಾರಿಗೊಳಿಸಬಹುದಾಗಿದೆ ಎಂದು ತೀರ್ಪು ನೀಡಿತ್ತು. ಹಗರಣ ಬೆಳಕಿಗೆ ಬರುವ ಕೆಲವೇ ದಿನಗಳ ಮೊದಲು, ಅಂದರೆ 2018ರ ಜನವರಿಯಲ್ಲಿ, ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾಕ್ಕೆ ಪರಾರಿಯಾಗಿದ್ದರು. ಬಳಿಕ ಅವರು ಚಿಕಿತ್ಸೆ ಪಡೆಯಲು ಬೆಲ್ಜಿಯಂನಲ್ಲಿ ಕಾಣಿಸಿಕೊಂಡಿದ್ದರು. ಮುಂಬೈನ ವಿಶೇಷ ನ್ಯಾಯಾಲಯವು ಹೊರಡಿಸಿದ್ದ ಬಂಧನದ ವಾರಂಟ್‌ಗಳ ಆಧಾರದ ಮೇಲೆ, ಭಾರತ ಸರ್ಕಾರ ಕಳೆದ ವರ್ಷ ಆಗಸ್ಟ್ 27 ರಂದು ಬೆಲ್ಜಿಯಂಗೆ ಹಸ್ತಾಂತರ ಮನವಿಯನ್ನು ಕಳುಹಿಸಿತ್ತು.

ಕಾನೂನು ಕ್ರಮದಲ್ಲಿ ಯಾವುದೇ ದೋಷವಿಲ್ಲ

ಆಂಟ್‌ವರ್ಪ್‌ನ ಕೋರ್ಟ್ ಆಫ್ ಅಪೀಲ್ಸ್‌ನ ನಾಲ್ಕು-ಸದಸ್ಯರ ಪೀಠ, ಮುಂಬೈನ ವಿಶೇಷ ನ್ಯಾಯಾಲಯವು 2018ರ ಮೇ ಮತ್ತು 2021ರ ಜೂನ್‌ನಲ್ಲಿ ಹೊರಡಿಸಿದ ಬಂಧನ ವಾರಂಟ್‌ಗಳು ಜಾರಿಗೊಳಿಸಬಹುದಾಗಿದೆ ಎಂದು ಹೇಳುವ ಮೂಲಕ, ಜಿಲ್ಲಾ ನ್ಯಾಯಾಲಯದ ಪ್ರಿ-ಟ್ರಯಲ್ ಚೇಂಬರ್‌ನ 2024ರ ನವೆಂಬರ್ 29ರ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ತಿಳಿಸಿ, ಭಾರತಕ್ಕೆ ಚೋಕ್ಸಿಯ ಹಸ್ತಾಂತರಕ್ಕೆ ಅನುಮತಿ ನೀಡಿತ್ತು.

ಭಾರತದಲ್ಲಿ ಪ್ರಾಣಾಪಾಯ ಇದೆ ಎಂದಿದ್ದ ಚೋಕ್ಸಿ

ಇನ್ನು ಭಾರತಕ್ಕೆ ಹಸ್ತಾಂತರಿಸಿದರೆ ತಮ್ಮ ಪ್ರಾಣಕ್ಕೆ ಅಪಾಯವಿದೆ ಅಥವಾ ವಿಚಾರಣೆ ವೇಳೆ ಚಿತ್ರಹಿಂಸೆಯಾಗುವ ಭೀತಿ ಎಂದು ಚೋಕ್ಸಿ ಕೋರ್ಟ್‌ ಎದುರು ಕಳವಳ ವ್ಯಕ್ತಪಡಿಸಿದ್ದರು. ಅವರ ವಾದವನ್ನು ತಳ್ಳಿ ಹಾಕಿದ್ದ ಕೋರ್ಟ್‌,13,000 ಕೋಟಿ ರೂ.ಗಳ ಪಿಎನ್‌ಬಿ ಹಗರಣದ ಪ್ರಮುಖ ಆರೋಪಿಯಾಗಿರುವ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಿದರೆ, ಅವರಿಗೆ ನ್ಯಾಯಯುತ ವಿಚಾರಣೆಯನ್ನು ನಿರಾಕರಿಸುವ ಅಥವಾ ಚಿತ್ರಹಿಂಸೆಗೆ ಒಳಪಡಿಸುವ ಯಾವುದೇ ಅಪಾಯವಿಲ್ಲ ಎಂದು ತೀರ್ಪು ನೀಡಿತ್ತು. 

ಸಿಬಿಐನ ಆರೋಪಪಟ್ಟಿ

ಸಿಬಿಐ ತನ್ನ ಆರೋಪಪಟ್ಟಿಯಲ್ಲಿ, ಒಟ್ಟು ಹಗರಣದ ಮೊತ್ತದಲ್ಲಿ ಚೋಕ್ಸಿ ಒಬ್ಬರೇ 6,400 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ. ಆಂಟ್‌ವರ್ಪ್‌ನ ಡಿಸ್ಟ್ರಿಕ್ಟ್ ಕೋರ್ಟ್‌ನ ಪ್ರಿ-ಟ್ರಯಲ್ ಚೇಂಬರ್, ನವೆಂಬರ್ 29, 2024ರ ತನ್ನ ಆದೇಶದಲ್ಲಿ, ಮುಂಬೈ ನ್ಯಾಯಾಲಯವು ಹೊರಡಿಸಿದ ಬಂಧನ ವಾರಂಟ್‌ಗಳು ಜಾರಿಗೊಳಿಸಬಹುದಾಗಿದೆ ಎಂದು ತೀರ್ಮಾನಿಸಿತ್ತು.

Tags:    

Similar News