ಗೋವಾ ಅಗ್ನಿ ದುರಂತ; ನೈಟ್‌ ಕ್ಲಬ್‌ ಮಾಲೀಕ ಪೊಲೀಸ್‌ ಬಲೆಗೆ

ʼಬಿರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್‌ನ ನಾಲ್ವರು ಮಾಲೀಕರಲ್ಲಿ ಒಬ್ಬರಾದ ಅಜಯ್‌ ಗುಪ್ತಾರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

Update: 2025-12-10 04:33 GMT
ಗೋವಾಲ ನೈಟ್‌ಕ್ಲಬ್‌ ಮಾಲೀಕ ಅಜಯ್‌ ಗುಪ್ತಾ
Click the Play button to listen to article

ಗೋವಾದಲ್ಲಿ ಬರೋಬ್ಬರಿ 25ಜನರನ್ನು ಬಲಿ ಪಡೆದ ನೈಟ್‌ ಕ್ಲಬ್‌ ಅಗ್ನಿ ದುರಂತದ ಬಳಿಕ ತಲೆ ಮರೆಸಿಕೊಂಡಿದ್ದ ಕ್ಲಬ್‌ನ ಮಾಲೀಕನನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್‌ನ ನಾಲ್ವರು ಮಾಲೀಕರಲ್ಲಿ ಒಬ್ಬರಾದ ಅಜಯ್‌ ಗುಪ್ತಾರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅಜಯ್ ಗುಪ್ತಾ ವಿರುದ್ಧ ಗೋವಾ ಪೊಲೀಸರು ಲುಕ್ ಔಟ್ ಸರ್ಕ್ಯುಲರ್ (ಎಲ್‌ಒಸಿ) ಹೊರಡಿಸಿದ್ದರು. ಮತ್ತೊಬ್ಬ ಮಾಲೀಕ ಸುರಿಂದರ್ ಕುಮಾರ್ ಖೋಸ್ಲ ವಿರುದ್ಧವೂ ನೊಟೀಸ್‌ ಜಾರಿಗೊಳಿಸಲಾಗಿದೆ.

ಪ್ರಕರಣದಲ್ಲಿ ಇದು ಆರನೇ ಬಂಧನ

ಈ ಬಗ್ಗೆ ಗೋವಾ ಪೊಲೀಸ್‌ ವಕ್ತಾರರು ಮಾಹಿತಿ ಹಂಚಿಕೊಂಡಿದ್ದು, “ನಾವು ನೈಟ್‌ಕ್ಲಬ್‌ನ ಮಾಲೀಕರಲ್ಲಿ ಒಬ್ಬರಾದ ಅಜಯ್ ಗುಪ್ತಾ ಅವರನ್ನು ಬಂಧಿಸಿದ್ದೇವೆ. ಈತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರನೇ ವ್ಯಕ್ತಿ" ತಿಳಿಸಿದ್ದಾರೆ.

ಇಂಟರ್‌ಪೋಲ್‌ನಿಂದ ನೋಟಿಸ್ ಜಾರಿ

ದುರ್ಘಟನೆ ಬೆನ್ನಲ್ಲೇ ಕ್ಲಬ್‌ನ ಮ್ಯಾನೇಜರ್‌, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಮ್ಯಾನೇಜರ್‌ ಅನ್ನು ಅರೆಸ್ಟ್‌ ಮಾಡಿದ್ದ ಪೊಲೀಸರಿಗೆ ಮಾಲೀಕರ ಸುಳಿವು ಸಿಕ್ಕಿರಲಿಲ್ಲ. ಪೊಲೀಸ್ ತಂಡವು ಅಜಯ್ ಗುಪ್ತಾ ಅವರನ್ನು ಹುಡುಕಲು ವಿಫಲವಾದ ಕಾರಣ ಅವರ ವಿರುದ್ಧ ಎಲ್‌ಒಸಿ ಹೊರಡಿಸಲಾಗಿತ್ತು. ಇದಾದ ಬಳಿಕ ಗುಪ್ತಾ ದೆಹಲಿಯಲ್ಲಿ ಪತ್ತೆಯಾಗಿದ್ದು, ಅವರನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು ಗೋವಾಕ್ಕೆ ಕರೆತರುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಆತನನ್ನು ಅರೆಸ್ಟ್‌ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತರ ಇಬ್ಬರು ಮಾಲೀಕರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್

ನೈಟ್‌ಕ್ಲಬ್‌ನ ಇನ್ನಿಬ್ಬರು ಮಾಲೀಕರಾದ ಸೌರಭ್ ಲುತ್ರಾ ಮತ್ತು ಗೌರವ್ ಲುತ್ರಾ ಅವರನ್ನು ಇನ್ನೂ ಬಂಧಿಸಲಾಗಿಲ್ಲ. ಅವರನ್ನು ಪತ್ತೆಹಚ್ಚಲು ಅಧಿಕಾರಿಗಳು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದಾರೆ. ಇಲ್ಲಿಯವರೆಗೆ, ತನಿಖಾಧಿಕಾರಿಗಳು ಐದು ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಕ್ಲಬ್‌ನ ಮುಖ್ಯ ಜನರಲ್ ಮ್ಯಾನೇಜರ್ ರಾಜೀವ್ ಮೋಡಕ್‌, ಜನರಲ್ ಮ್ಯಾನೇಜರ್ ವಿವೇಕ್ ಸಿಂಗ್, ಬಾರ್ ಮ್ಯಾನೇಜರ್ ರಾಜೀವ್ ಸಿಂಘಾನಿಯಾ, ಗೇಟ್ ಮ್ಯಾನೇಜರ್ ರಿಯಾನ್ಶು ಠಾಕೂರ್, ಮತ್ತು ಉದ್ಯೋಗಿ ಭರತ್ ಕೊಹ್ಲಿ ಸೇರಿದ್ದಾರೆ. ಸುರಕ್ಷತಾ ಕಾರ್ಯವಿಧಾನಗಳು ಮತ್ತು ಕಾರ್ಯಾಚರಣೆಯ ಮೇಲ್ವಿಚಾರಣೆಯಲ್ಲಿನ ಲೋಪಗಳ ಆರೋಪದ ಮೇಲೆ ಐವರನ್ನೂ ಬಂಧಿಸಲಾಗಿದೆ.

ಶನಿವಾರ ಮಧ್ಯರಾತ್ರಿ ಸ್ವಲ್ಪ ಮೊದಲು ಉತ್ತರ ಗೋವಾದ ಅರ್ಪೋರಾದಲ್ಲಿರುವ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ವಿನಾಶಕಾರಿ ಬೆಂಕಿಯಿಂದ ಈ ಪ್ರಕರಣ ಉದ್ಭವಿಸಿದೆ. ಬೆಂಕಿಯ ಪರಿಣಾಮವಾಗಿ 25 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡರು, ಇದು ಸ್ಥಾಪನೆಯಲ್ಲಿನ ಹೊಣೆಗಾರಿಕೆ ಮತ್ತು ಅನುಸರಣೆ ವೈಫಲ್ಯಗಳ ಬಗ್ಗೆ ದೊಡ್ಡ ಪ್ರಮಾಣದ ತನಿಖೆಗೆ ಕಾರಣವಾಯಿತು.

ಗೋವಾದಲ್ಲಿ ಏನಾಗಿತ್ತು?

ಉತ್ತರ ಗೋವಾದ ಅರ್ಪೋರಾದ ಬರ್ಚ್ ಬೈ ರೋಮಿಯೋ ಲೇನ್ ಪ್ರದೇಶದಲ್ಲಿರುವ ಕ್ಲಬ್‌ ನಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಡಿಜೆ ನೈಟ್ ಆಯೋಜಿಸಲಾಗಿತ್ತು. ಕಳೆದ ಶನಿವಾರ ರಾತ್ರಿ 10 ಗಂಟೆಯಿಂದಲೇ ಪಾರ್ಟಿ ಜೋರಾಗಿತ್ತು. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರವಾಸಿಗರು ಬಂದಿದ್ದರು. ರಾತ್ರಿ 12.30ರ ಹೊತ್ತಿಗೆ ವೇದಿಕೆ ಬಳಿ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿದೆ. ಇಡೀ ಕ್ಲಬ್ ಬೆಂಕಿಗೆ ಆಹುತಿಯಾಗಿ ಒಟ್ಟು 25 ಮಂದಿ ಸಹೀವ ದಹನಗೊಂಡಿದ್ದರು. ಮೃತರಲ್ಲಿ ನಾಲ್ವರು ಪ್ರವಾಸಿಗರಿದ್ದರು.

ಮೊಬೈಲ್‌ ತೆಗೆದುಕೊಳ್ಳಲು ಹೋದ ಕನ್ನಡಿಗ ಸಜೀವ ದಹನ

ಗೋವಾದ ನೈಟ್ ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಬೆಂಗಳೂರಿನ ಥಣಿಸಂದ್ರ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ. ಥಣಿಸಂದ್ರದ ಹೆಗಡೆನಗರ ನಿವಾಸಿ ಇಶಾಕ್(25) ಮೃತರು. ನಾಲ್ವರು ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ಇಶಾಕ್, ಅಗ್ನಿ ದುರಂತ ಸಂಭವಿಸಿದ ಕ್ಲನ್‌ನಲ್ಲಿ ನೈಟ್ ಪಾರ್ಟಿಗೆ ಹೋಗಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಇಶಾಕ್ ಹಾಗೂ ಆತನ ಸ್ನೇಹಿತರು ಕ್ಲಬ್‌ನಿಂದ ಹೊರಬಂದಿದ್ದರು. ಆದರೆ, ಟೇಬಲ್ ಮೇಲೆ ಮೊಬೈಲ್ ಬಿಟ್ಟು ಬಂದಿದ್ದರಿಂದ ಮತ್ತೆ ಕ್ಲಬ್ ಒಳಗೆ ಹೋಗಿದ್ದಾಗ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿ ದಹನವಾಗಿದ್ದಾರೆ.

 

Tags:    

Similar News