ಗೋವಾ ನೈಟ್‌ಕ್ಲಬ್ ಅಗ್ನಿ ಅವಘಡ: ಮಾಲೀಕರು ವಿದೇಶಕ್ಕೆ ಪರಾರಿ
ಆರೋಪಿಗಳ ಪತ್ತೆಗಾಗಿ ಗೋವಾ ಪೊಲೀಸರ ವಿಶೇಷ ತಂಡವೊಂದು ದೆಹಲಿಯಲ್ಲಿರುವ ಗೌರವ್ ಮತ್ತು ಸೌರಭ್ ಲೂತ್ರಾ ಅವರ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಆದರೆ ಅವರು ಅಲ್ಲಿ ಲಭ್ಯವಿರಲಿಲ್ಲ. ಹೀಗಾಗಿ, ಕಾನೂನಿನ ಪ್ರಕಾರ ಅವರ ಮನೆಯ ಗೇಟ್ ಮೇಲೆ ನೋಟಿಸ್ ಅಂಟಿಸಲಾಗಿದೆ.
ಬೆಂಕಿಗಾಹುತಿಯಾದ ನೈಟ್‌ಕ್ಲಬ್ ಮಾಲೀಕ
ಗೋವಾದ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ 25 ಜನರು ಪ್ರಾಣ ಕಳೆದುಕೊಂಡ ಘಟನೆಯ ಮುಖ್ಯ ಆರೋಪಿಗಳಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಥಾಯ್ಲೆಂಡ್ನ ಫುಕೆಟ್‌ಗೆ ಪರಾರಿಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ನೈಟ್‌ಕ್ಲಬ್ ಮಾಲೀಕರನ್ನು ಪತ್ತೆಹಚ್ಚಲು ಗೋವಾ ಪೊಲೀಸರು ಇದೀಗ ಸಿಬಿಐನ ಇಂಟರ್‌ಪೋಲ್ ವಿಭಾಗದೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಮತ್ತು ಭಾರತಕ್ಕೆ ಕರೆತರಲು ಅಂತರಾಷ್ಟ್ರೀಯ ಪೊಲೀಸ್ ಸಹಕಾರ ಕೋರಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ದ ಫೆಡರಲ್'ಗೆ ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣವೇ ವಿದೇಶಕ್ಕೆ ಹಾರಿದ ಆರೋಪಿಗಳು
ಪಣಜಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಈ ದುರಂತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ, ಅಂದರೆ ಡಿಸೆಂಬರ್ 7ರ ಬೆಳಗಿನ ಜಾವ 5.30ಕ್ಕೆ ಮುಂಬೈ ವಿಮಾನ ನಿಲ್ದಾಣದಿಂದ 6E 1073 ವಿಮಾನದ ಮೂಲಕ ಆರೋಪಿಗಳಿಬ್ಬರೂ ಫುಕೆಟ್‌ಗೆ ತೆರಳಿದ್ದಾರೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಗೋವಾ ಪೊಲೀಸರ ಮನವಿ ಮೇರೆಗೆ ಡಿಸೆಂಬರ್ 7ರಂದೇ ಬ್ಯೂರೋ ಆಫ್ ಇಂಟೆಲಿಜೆನ್ಸ್ (BOI) ಆರೋಪಿಗಳ ವಿರುದ್ಧ 'ಲುಕ್ ಔಟ್ ಸರ್ಕ್ಯುಲರ್' (LOC) ಜಾರಿಗೊಳಿಸಿತ್ತು.
ದೆಹಲಿಯಲ್ಲಿ ಶೋಧ ಕಾರ್ಯ ಮತ್ತು ನೋಟಿಸ್
ಆರೋಪಿಗಳ ಪತ್ತೆಗಾಗಿ ಗೋವಾ ಪೊಲೀಸರ ವಿಶೇಷ ತಂಡವೊಂದು ದೆಹಲಿಯಲ್ಲಿರುವ ಗೌರವ್ ಮತ್ತು ಸೌರಭ್ ಲೂತ್ರಾ ಅವರ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಆದರೆ ಅವರು ಅಲ್ಲಿ ಲಭ್ಯವಿರಲಿಲ್ಲ. ಹೀಗಾಗಿ, ಕಾನೂನಿನ ಪ್ರಕಾರ ಅವರ ಮನೆಯ ಗೇಟ್ ಮೇಲೆ ನೋಟಿಸ್ ಅಂಟಿಸಲಾಗಿದೆ. "ಆರೋಪಿಗಳು ಉದ್ದೇಶಪೂರ್ವಕವಾಗಿಯೇ ಪೊಲೀಸ್ ತನಿಖೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ," ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಕ್ಲಬ್‌ನ ಉದ್ಯೋಗಿ ಭರತ್ ಕೊಹ್ಲಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಟ್ರಾನ್ಸಿಟ್ ರಿಮಾಂಡ್ ಪಡೆದು ಗೋವಾಕ್ಕೆ ಕರೆತರುತ್ತಿದ್ದಾರೆ.
ಅಧಿಕಾರಿಗಳ ಅಮಾನತು ಮತ್ತು ವಿಚಾರಣೆ
ಈ ಭೀಕರ ದುರಂತದಲ್ಲಿ ಕ್ಲಬ್‌ನ 20 ಸಿಬ್ಬಂದಿ ಹಾಗೂ ದೆಹಲಿಯ ನಾಲ್ವರು ಸೇರಿದಂತೆ ಐವರು ಪ್ರವಾಸಿಗರು ಮೃತಪಟ್ಟಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಗಾಯಗೊಂಡ ಐವರು ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಯಮಗಳ ಉಲ್ಲಂಘನೆ ಮತ್ತು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಗೋವಾ ಆಡಳಿತವು ಮೀನುಗಾರಿಕೆ ಇಲಾಖೆ ನಿರ್ದೇಶಕಿ ಹಾಗೂ ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಕಾರ್ಯದರ್ಶಿ ಶಮಿಲಾ ಮೊಂಟೀರೋ ಅವರನ್ನು ಅಮಾನತುಗೊಳಿಸಿದೆ. ಕ್ಲಬ್‌ಗೆ ಪರವಾನಗಿ ನೀಡುವಲ್ಲಿ ಮತ್ತು ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವಲ್ಲಿ ವಿಫಲರಾದ ಇತರೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.