ಲೈಕ್ಸ್ , ಕಮೆಂಟ್ಸ್ ಕೌಂಟ್ ಆಗುತ್ತೆ...H-1B ವೀಸಾ ರೂಲ್ ಮತ್ತಷ್ಟು ಬಿಗಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ, ಮತ್ತೊಮ್ಮೆ H-1B ವೀಸಾ ನಿಯಮಗಳನ್ನು ಕಠಿಣಗೊಳಿಸಲಾಗಿದ್ದು, ಡಿ. 15ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.
ಭಾರತದ ಮೇಲೆ ಸುಂಕದ ಮೇಲೆ ಸುಂಕ ವಿಧಿಸಿ ವ್ಯಾಪಾರ ಸಮರಕ್ಕೆ ಮುಂದಾಗಿರುವ ಅಮೆರಿಕ ಇದೀಗ ಮತ್ತೆ H-1B ವೀಸಾಗಳತ್ತ ತನ್ನ ದೃಷ್ಟಿಯನ್ನು ನೆಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ, ಮತ್ತೊಮ್ಮೆ H-1B ವೀಸಾ ನಿಯಮಗಳನ್ನು ಕಠಿಣಗೊಳಿಸಲಾಗಿದ್ದು, ಡಿ. 15ರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ. ಹೊಸ ನಿಯಮದ ಪ್ರಕಾರ ಇನ್ನು ಮುಂದೆ H-1B ವೀಸಾಕ್ಕೆ ಅರ್ಜಿ ಹಾಕುವವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕಡ್ಡಾಯವಾಗಿ ಸಾರ್ವಜನಿಕ ಅಕೌಂಟ್(ಪಬ್ಲಿಕ್ ಅಕೌಂಟ್) ಬದಲಿಸಬೇಕು ಮಾಡಬೇಕು. ಇದು ವೀಸಾ ಅಧಿಕಾರಿಗಳು ಅರ್ಜಿದಾರರ ಆನ್‌ಲೈನ್ ಚಟುವಟಿಕೆಗಳನ್ನು ಪರಿಶೀಲಿಸಲು ದಾರಿ ಮಾಡಿಕೊಡುತ್ತದೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ನ ಸಾಮಾಜಿಕ ಮಾಧ್ಯಮ ಪರಿಶೀಲನೆ ನೀತಿಯು H-1B ವೀಸಾ ಅರ್ಜಿದಾರರಿಗೆ ಸಂಕಷ್ಟ ಎದುರಿಸುವಂತೆ ಮಾಡಿದೆ.
ಲೈಕ್, ಕಮೆಂಟ್‌ಗಳೂ ಕೌಂಟ್ ಆಗುತ್ತವೆ
ಹೊಸ ಹೊಸ ನಿಯಮದ ಅಡಿಯಲ್ಲಿ, H-1B ಅರ್ಜಿದಾರರ ಫೇಸ್ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು, ಲೈಕ್‌ಗಳು, ಕಮೆಂಟ್‌ಗಳು ಎಲ್ಲವೂ ಪರಿಶೀಲನೆಯ ಅಡಿಗೆ ಬರುತ್ತವೆ. ಯಾವುದೇ ಆನ್‌ಲೈನ್ ಚಟುವಟಿಕೆ ಅಮೆರಿಕ ಹಿತಾಸಕ್ತಿಗೆ ವಿರುದ್ಧವೆಂದು ಕಂಡುಬಂದರೆ, ವೀಸಾವನ್ನು ತಕ್ಷಣವೇ ನಿರಾಕರಿಸಲಾಗುತ್ತದೆ.
ಇದೇ ನಿಯಮವನ್ನು ಆಗಸ್ಟ್‌ನಿಂದ ವಿದ್ಯಾರ್ಥಿ (F-1), ಸಂಶೋಧನಾ (J-1), ಪ್ರವಾಸಿ (B-1, B-2) ವೀಸಾಗಳಿಗೂ ಅನ್ವಯಿಸಲಾಗುತ್ತಿದೆ. ವಿದೇಶಿಗರ ಮೇಲೆ ಹಿಡಿತ ಸಾಧಿಸಲು ಟ್ರಂಪ್ ಆಡಳಿತವು ಈ ‘ಮಾಸ್ಟರ್ ಪ್ಲ್ಯಾನ್’ ಅನ್ನು ಜಾರಿಗೆ ತಂದಿದೆ.
ರಾಯಭಾರ ಕಚೇರಿ ಎಕ್ಸ್ ಪೋಸ್ಟ್‌ನಲ್ಲೇನಿದೆ?
ಬ್ಲೂಮ್‌ಬರ್ಗ್‌ನಲ್ಲಿನ ವರದಿಯ ಪ್ರಕಾರ, ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಸಂದರ್ಶನಗಳನ್ನು ಮುಂದಿನ ವರ್ಷದ ಮಾರ್ಚ್‌ಗೆ ಮುಂದೂಡಲಾಗುತ್ತಿದೆ. ಆದಾಗ್ಯೂ, ಅಂತಹ ಸಂದರ್ಶನಗಳ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ. ಇನ್ನು ಮಂಗಳವಾರ ರಾತ್ರಿ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಪೋಸ್ಟ್‌ವೊಂದನ್ನು ಮಾಡಿದ್ದು, ಅನೇಕ ನೇಮಕಾತಿಗಳನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ನಿಮ್ಮ ವೀಸಾ ಅಪಾಯಿಂಟ್ಮೆಂಟ್ ಅನ್ನು ಮರು ನಿಗದಿಪಡಿಸಲಾಗಿದೆ ಎಂದು ಸೂಚಿಸುವ ಇಮೇಲ್ ನಿಮಗೆ ಬಂದಿದ್ದರೆ, ನಿಮ್ಮ ಹೊಸ ಅಪಾಯಿಂಟ್ಮೆಂಟ್ ದಿನಾಂಕದಂದು ನಿಮಗೆ ಸಹಾಯ ಮಾಡಲು ಮಿಷನ್ ಇಂಡಿಯಾ ಎದುರು ನೋಡುತ್ತಿದೆ. ಯಾವುದೇ ವೀಸಾ ಅರ್ಜಿದಾರರು ಸಂದರ್ಶನ ದಿನಾಂಕವನ್ನು ಮರು ನಿಗದಿಪಡಿಸಿದ ನಂತರವೂ ರಾಯಭಾರ ಕಚೇರಿಗೆ ಆಗಮಿಸಿದರೆ, ಅವರಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ರಾಯಭಾರ ಕಚೇರಿ ಎಚ್ಚರಿಸಿದೆ.
ವೀಸಾ ಸಂದರ್ಶನ ಮುಂದೂಡಲು ಕಾರಣ ಏನು?
ಪ್ರಮುಖ ವ್ಯವಹಾರ ವಲಸೆ ಕಾನೂನು ಸಂಸ್ಥೆಯ ವಕೀಲರು, ಅರ್ಜಿದಾರರ ಸಾಮಾಜಿಕ ಮಾಧ್ಯಮ ಪರಿಶೀಲನೆಗೆ ಹೆಚ್ಚಿನ ಸಮಯಾವಕಾಶ ಬೇಕಾಗಿರುವ ಕಾರಣ ವೀಸಾ ಸಂದರ್ಶನಗಳನ್ನು ಮುಂದೂಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ವೀಸಾ ಸಂದರ್ಶನಗಳನ್ನು ಮಾರ್ಚ್‌ವರೆಗೆ ಮುಂದೂಡಿರುವುದರಿಂದ, ಅಮೆರಿಕನ್ ಕಂಪನಿಗಳು ಭಾರತೀಯ ಉದ್ಯೋಗಿಗಳಿಗೆ ಅಲ್ಲಿಯವರೆಗೆ ಭಾರತದಲ್ಲಿ ಉಳಿಯಲು ಅವಕಾಶ ಮಾಡಿಕೊಡುತ್ತವೆಯೇ ಎಂಬ ಪ್ರಶ್ನೆಯೂ ಮೂಡಿದೆ.
ಭಾರತೀಯರ ಮೇಲೆ ಯಾವ ರೀತಿಯಲ್ಲಿ ಪರಿಣಾಮ?
ಇನ್ನು ಟ್ರಂಪ್ ಸರ್ಕಾರದ ಈ ಹೊಸ ನೀತಿಯಿಂದ ಭಾರತೀಯರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ನೋಡುವುದಾದರೆ…ಹೊಸ ನಿಯಮದಿಂದಾಗಿ ಅಮೆರಿಕ ರಾಯಭಾರ ಕಚೇರಿಗಳು ಹಲವು ಸಂದರ್ಶನಗಳನ್ನು ಮುಂದೂಡಿವೆ. ಬಹಳಷ್ಟು ಭಾರತೀಯರಾದ ಐಟಿ, ತಾಂತ್ರಿಕ ಕ್ಷೇತ್ರದ ನುರಿತ ಉದ್ಯೋಗಿಗಳು H-1B ಮೂಲಕ ಅಮೆರಿಕ ತೆರಳುತ್ತಾರೆ. ಈಗಿನ ಹೊಸ ಪರಿಶೀಲನಾ ಕ್ರಮಗಳಿಂದ ಈ ಪ್ರಕ್ರಿಯೆ ಬಹಳ ತಡವಾಗುವ ಸಾಧ್ಯತೆ ಹೆಚ್ಚಾಗಿದೆ.
H-1B ವೀಸಾಗಳ ಮೇಲೆ $100,000 ಶುಲ್ಕ
ಕೆಲವು ತಿಂಗಳ ಹಿಂದೆಯಷ್ಟೇ ಅಮೆರಿಕದ ಟ್ರಂಪ್ ಸರ್ಕಾರ -1B ವೀಸಾಗಳಿಗೆ ಹೊಸ $100,000 ಶುಲ್ಕವನ್ನು ಪರಿಚಯಿಸಿತ್ತು. ಹೊಸ ನಿಯಮದ ಪ್ರಕಾರ H-1B ವೀಸಾ ಅರ್ಜಿದಾರರನ್ನು ಪ್ರಾಯೋಜಿಸಲು ಕಂಪನಿಗಳು ಪಾವತಿಸುವ ಶುಲ್ಕವಾಗಿ 90 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಇದು ಭಾರತ ಮತ್ತು ಚೀನಾದ ನುರಿತ ಕೆಲಸಗಾರರ ಮೇಲೆ ಹೆಚ್ಚು ಅವಲಂಬಿತವಾಗಿರುವ ತಂತ್ರಜ್ಞಾನ ವಲಯಕ್ಕೆ ಗಮನಾರ್ಹ ಹೊಡೆತ ನೀಡಿತ್ತು.