ನಿತೀಶ್‌ ಮುಖ್ಯಮಂತ್ರಿ ಆಗುವುದು ಖಚಿತ: ಉಪಮುಖ್ಯಮಂತ್ರಿ ಸ್ಥಾನಕ್ಕೆ ಚಿರಾಗ್ ಪಾಸ್ವಾನ್ ಬೇಡಿಕೆ

ಶುಕ್ರವಾರ ರಾತ್ರಿ 10 ಗಂಟೆಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಪಕ್ಷವು ಸ್ಪರ್ಧಿಸಿದ್ದ 29 ಸ್ಥಾನಗಳ ಪೈಕಿ 18ರಲ್ಲಿ ಗೆಲುವು ಸಾಧಿಸಿ, ಒಂದರಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಐದೂ ಸ್ಥಾನಗಳನ್ನು ಅದು ಗೆದ್ದುಕೊಂಡಿತ್ತು.

Update: 2025-11-15 04:20 GMT

 ಚಿರಾಗ್ ಪಾಸ್ವಾನ್

Click the Play button to listen to article

ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸ್ಪಷ್ಟ ಬಹುಮತದತ್ತ ಸಾಗುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಆದರೆ, ಎನ್‌ಡಿಎ ಮಿತ್ರಪಕ್ಷವಾದ, ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್‌) ಮಾತ್ರ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಪ್ರಯತ್ನ ಆರಂಭಿಸಿದೆ ಎಂದು 'ದ ಫೆಡರಲ್‌'ಗೆ ತಿಳಿದುಬಂದಿದೆ.

ಚುನಾವಣೆಗಳಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವುದನ್ನೇ ಆಧಾರವಾಗಿಟ್ಟುಕೊಂಡು ಎಲ್‌ಜೆಪಿ(ಆರ್‌ವಿ) ಈ ಬೇಡಿಕೆ ಇಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ ರಾತ್ರಿ 10 ಗಂಟೆಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಪಕ್ಷವು ಸ್ಪರ್ಧಿಸಿದ್ದ 29 ಸ್ಥಾನಗಳ ಪೈಕಿ 18ರಲ್ಲಿ ಗೆಲುವು ಸಾಧಿಸಿ, ಒಂದರಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಐದೂ ಸ್ಥಾನಗಳನ್ನು ಅದು ಗೆದ್ದುಕೊಂಡಿತ್ತು.

ಬಿಹಾರದ ಪ್ರಮುಖ ದಲಿತ ನಾಯಕನಾಗುವತ್ತ ಚಿರಾಗ್‌ ಚಿತ್ತ

ಶುಕ್ರವಾರ ರಾತ್ರಿ 10 ಗಂಟೆಯ ವೇಳೆಗೆ, ಬಿಹಾರದ 243 ವಿಧಾನಸಭಾ ಸ್ಥಾನಗಳ ಪೈಕಿ 202ರಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿತ್ತು. ಇದು 2010ರಲ್ಲಿ ಮೈತ್ರಿಕೂಟ ಗಳಿಸಿದ್ದ 206 ಸ್ಥಾನಗಳ ಸಾರ್ವಕಾಲಿಕ ದಾಖಲೆಗೆ ಸಮೀಪವಿತ್ತು. ಇದೇ ವೇಳೆ, ಬಿಜೆಪಿ ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸೂಚನೆ ನೀಡಿತ್ತು. ಸ್ಪರ್ಧಿಸಿದ್ದ 101 ಸ್ಥಾನಗಳಲ್ಲಿ 89 ಸ್ಥಾನಗಳನ್ನು ಗೆಲ್ಲುವ ಮೂಲಕ ಮಿತ್ರಪಕ್ಷ ಜೆಡಿಯು (85 ಸ್ಥಾನ) ಅನ್ನು ಹಿಂದಿಕ್ಕಿತ್ತು.

ಈ ಹಿನ್ನೆಲೆಯಲ್ಲಿ, ಸುಮಾರು ಎರಡು ದಶಕಗಳಿಂದ ಬಿಹಾರವನ್ನು ಮುನ್ನಡೆಸುತ್ತಿರುವ ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆಯೇ? ಅಥವಾ ತನ್ನ ಅದ್ಭುತ ಪ್ರದರ್ಶನದಿಂದ ಉತ್ತೇಜಿತವಾಗಿರುವ ಬಿಜೆಪಿ, ನಿತೀಶ್‌ರ ನೆರಳಿನಿಂದ ಹೊರಬಂದು ತನ್ನದೇ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸುತ್ತದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ಜೆಡಿಯು ಜೊತೆ ಅಷ್ಟೇನೂ ಉತ್ತಮ ಸಂಬಂಧ ಹೊಂದಿರದ ಎಲ್‌ಜೆಪಿ(ಆರ್‌ವಿ), ಮುಖ್ಯಮಂತ್ರಿ ಆಯ್ಕೆಯಲ್ಲಿ ಬಿಜೆಪಿಯ ನಿರ್ಧಾರಕ್ಕೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದೆ. ಒಂದು ವೇಳೆ ನಿತೀಶ್‌ಗೆ ಆ ಸ್ಥಾನ ನೀಡಿದರೂ ತಮ್ಮ ಪಕ್ಷದ ನಾಯಕನಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ನಿರೀಕ್ಷಿಸುತ್ತಿದೆ ಎಂದು ತಿಳಿದುಬಂದಿದೆ. "ನಮ್ಮ ಪ್ರದರ್ಶನ ಎಲ್ಲರ ಮುಂದಿದೆ. ಖಂಡಿತವಾಗಿಯೂ, ಉಪಮುಖ್ಯಮಂತ್ರಿ ಸ್ಥಾನವನ್ನು ಪಡೆಯುವುದು ನಮ್ಮ ಹಕ್ಕು" ಎಂದು ಎಲ್‌ಜೆಪಿ(ಆರ್‌ವಿ) ನಾಯಕರೊಬ್ಬರು 'ದ ಫೆಡರಲ್‌'ಗೆ ತಿಳಿಸಿದ್ದಾರೆ.

ದಲಿತ ನಾಯಕತ್ವಕ್ಕಾಗಿ ಪೈಪೋಟಿ

ಬಿಹಾರದ ಪ್ರಮುಖ ದಲಿತ ನಾಯಕನಾಗಿ ಹೊರಹೊಮ್ಮಲು ಚಿರಾಗ್‌ ಪಾಸ್ವಾನ್‌ ಬಯಸುತ್ತಿದ್ದು, ರಾಜ್ಯ ಸಂಪುಟದಲ್ಲಿ ತಮ್ಮ ಪಕ್ಷದ ಶಾಸಕರಿಗೆ ಪ್ರಮುಖ ಸ್ಥಾನಗಳು ಸಿಕ್ಕರೆ ಅದು ಚಿರಾಗ್‌ರ ವರ್ಚಸ್ಸನ್ನು ಹೆಚ್ಚಿಸುತ್ತದೆ ಎಂದು ಅವರ ಆಪ್ತರು ಭಾವಿಸಿದ್ದಾರೆ.

ಕುತೂಹಲಕಾರಿಯಾಗಿ, ಈ ಚುನಾವಣೆಯಲ್ಲಿ ಕೇಂದ್ರ ಸಚಿವ ಮತ್ತು ದಲಿತ ನಾಯಕ ಜಿತನ್ ರಾಮ್ ಮಾಂಝಿ ಅವರ ಹಿಂದುಸ್ತಾನಿ ಅವಾಮ್ ಮೋರ್ಚಾ (HAM) ಕೂಡ ಉತ್ತಮ ಪ್ರದರ್ಶನ ನೀಡಿದೆ. ಚಿರಾಗ್‌ರ ಪ್ರತಿಸ್ಪರ್ಧಿಯಾಗಿರುವ ಮಾಂಝಿ ಪಕ್ಷವು ಸ್ಪರ್ಧಿಸಿದ್ದ ಆರು ಸ್ಥಾನಗಳಲ್ಲಿ ಐದನ್ನು ಗೆದ್ದುಕೊಂಡಿದೆ.

2020ರಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ನಿತೀಶ್‌ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಅಂದಿನ ಸಂಯುಕ್ತ ಎಲ್‌ಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಆಗ ಚಿರಾಗ್‌ರ ನಿರ್ಧಾರದಿಂದ ಜೆಡಿಯು ಮತ್ತು ಎಚ್‌ಎಎಂ ಪಕ್ಷಗಳಿಗೆ ಹಲವು ಸ್ಥಾನಗಳಲ್ಲಿ ಮತ ವಿಭಜನೆಯಾಗಿ ನಷ್ಟವಾಗಿತ್ತು. ಈ ವಿಚಾರ ನಿತೀಶ್ ಮತ್ತು ಮಾಂಝಿ ಇಬ್ಬರನ್ನೂ ಕಾಡುತ್ತಿದೆ.

ಮೋದಿ ಮತ್ತು ಅವರ 'ಹನುಮ'

ಚುನಾವಣೆಗೂ ಮುನ್ನವೇ ಚಿರಾಗ್‌, ತಮ್ಮ ಪಕ್ಷವು ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡಲಿದೆ ಎಂಬ ಸೂಚನೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರ 'ಹನುಮ' ಎಂದು ತಮ್ಮನ್ನು ತಾವು ಬಣ್ಣಿಸಿಕೊಳ್ಳುವ ಚಿರಾಗ್‌, ಮೈತ್ರಿಕೂಟಕ್ಕಾಗಿ ಸತತವಾಗು ಪ್ರಚಾರ ನಡೆಸಿದ್ದರು.

Tags:    

Similar News