
Bihar Election Results| ದೀರ್ಘಾವಧಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಲು ನಿತೀಶ್ ಕುಮಾರ್ ಸಜ್ಜು?
ನಿತೀಶ್‌ಕುಮಾರ್ ಅವರು ಈ ಬಾರಿ ಸಿಎಂ ಆಗಿ ಪೂರ್ಣಾವಧಿ ಅಧಿಕಾರ ನಡೆಸಿದರೆ ದೇಶದಲ್ಲೇ ಅತಿ ಹೆಚ್ಚು ಅವಧಿ( 25 ವರ್ಷ) ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ದಾಖಲೆ ಬರೆಯಲಿದ್ದಾರೆ.
2025ರ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಎನ್‌ಡಿಎ ಮೈತ್ರಿಕೂಟಕ್ಕೆ ಜಯದ ಮಾಲೆ ಹಾಕಿದೆ. ಎರಡನೇ ಅವಧಿಯಲ್ಲೂ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದೆ. ಜೆಡಿಯು ಗೆಲುವಿನೊಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ದಾಖಲೆಯ 10ನೇ ಬಾರಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗುತ್ತಿದ್ದಾರೆ.
74 ವರ್ಷದ ನಿತೀಶ್ ಕುಮಾರ್ 2000 ನೇ ಮಾರ್ಚ್ ತಿಂಗಳಲ್ಲಿ ಸಮತಾ ಪಕ್ಷದಿಂದ ಗೆಲುವು ಸಾಧಿಸಿ ಮೊದಲ ಬಾರಿ ಮುಖ್ಯಮಂತ್ರಿಯಾದರೂ ಕೇವಲ ಒಂದು ವಾರ ಮಾತ್ರ ಅಧಿಕಾರದಲ್ಲಿದ್ದರು. ಅಲ್ಲಿಂದ 2005ರಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರುವ ಮೂಲಕ ಲಾಲು ಪ್ರಸಾದ್ ಯಾದವ್ ಅವರ ದೀರ್ಘಕಾಲದ ಅಧಿಪತ್ಯಕ್ಕೆ ಕೊನೆ ಹಾಡಿದ್ದರು.
ಅಂದಿನಿಂದ ಎರಡು ದಶಕಗಳ ಕಾಲ ಬಿಹಾರದ ಆಡಳಿತವನ್ನು ತೆಕ್ಕೆಗೆ ತೆಗೆದುಕೊಂಡರು. 2014-15ರಲ್ಲಿ ನಿತೀಶ್ ಕುಮಾರ್ ಅವರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಜಿತನ್ ರಾಮ್ ಮಾಂಝಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ(9 ತಿಂಗಳು) ಕೂರಿಸಿದ್ದರು. ಇದಾದ ಬಳಿಕ ತಾವೇ ಬಿಹಾರದ ಚುಕ್ಕಾಣಿ ಹಿಡಿದು ‘ನಿರ್ವಿವಾದಿತ ಮುಖ್ಯಮಂತ್ರಿʼಯಾಗಿ ಮುಂದುವರಿದರು. ಹಲವು ಬಾರಿ ಮೈತ್ರಿಕೂಟ ತೊರೆದು, ನಂತರ ಸೇರ್ಪಡೆಯಾಗಿದ್ದರು. ‘ಪಲ್ಟು ರಾಮ್’ ಎಂಬ ಟೀಕೆಗೆ ಗುರಿಯಾದರೂ ಬಿಹಾರದ ರಾಜಕಾರಣದಲ್ಲಿ ಅವರ ಬಲಪಡೆ ಅಪ್ರತಿಮವಾಗಿತ್ತು. ಈಗ ಅದು ಮತ್ತೊಮ್ಮೆ ಸಾಬೀತು ಮಾಡಿದೆ.
ನಿತೀಶ್ ಅವರು ಹಲವು ಮೈತ್ರಿ ಬದಲಾವಣೆಗಳ ಮೂಲಕ ಐದು ವರ್ಷ ಅಧಿಕಾರಾವಧಿ ಪೂರ್ಣಗೊಳಿಸಿದ್ದಾರೆ. ಈ ಬಾರಿಯೂ ಸಿಎಂ ಆಗಿ ಪೂರ್ಣಾವಧಿ ಅಧಿಕಾರ ನಡೆಸಿದರೆ ದೇಶದಲ್ಲೇ ಅತಿ ಹೆಚ್ಚು ಅವಧಿ( 25 ವರ್ಷ) ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ದಾಖಲೆಗೆ ಪಾತ್ರರಾಗಲಿದ್ದಾರೆ. ಪ್ರಸ್ತುತ, 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ದೀರ್ಘಾವಧಿ ಮುಖ್ಯಮಂತ್ರಿಗಳು ಯಾರು?
ಪವನ್ ಕುಮಾರ್ ಚಾಮ್ಲಿಂಗ್ (ಸಿಕ್ಕಿಂ) – 24 ವರ್ಷ 165 ದಿನ
ನವೀನ್ ಪಟ್ನಾಯಕ್ (ಒಡಿಶಾ) – 24 ವರ್ಷ 99 ದಿನ
ಜ್ಯೋತಿ ಬಸು (ಪಶ್ಚಿಮ ಬಂಗಾಳ) – 23 ವರ್ಷ 137 ದಿನ
ಗೆಗಾಂಗ್ ಅಪಾಂಗ್ (ಅರುಣಾಚಲ ಪ್ರದೇಶ) – 22 ವರ್ಷ 250 ದಿನ
ಲಾಲ್ ಥನಹಾವ್ಲಾ (ಮಿಜೋರಂ) – 22 ವರ್ಷ 60 ದಿನ
ವೀರಭದ್ರ ಸಿಂಗ್ (ಹಿಮಾಚಲ ಪ್ರದೇಶ) – 21 ವರ್ಷ 13 ದಿನ
ಮಾಣಿಕ್ ಸರ್ಕಾರ್ (ತ್ರಿಪುರಾ) – 19 ವರ್ಷ 363 ದಿನ
ನಿತೀಶ್ ಕುಮಾರ್ (ಬಿಹಾರ) – 19 ವರ್ಷ 87 ದಿನ (ನವೆಂಬರ್ 14, 2025ರ ತನಕ)
ಎಂ. ಕರುಣಾನಿಧಿ (ತಮಿಳುನಾಡು) – 18 ವರ್ಷ 362 ದಿನ
ಪ್ರಕಾಶ್ ಸಿಂಗ್ ಬಾದಲ್ (ಪಂಜಾಬ್) – 18 ವರ್ಷ 350 ದಿನ
ದೀರ್ಘಾವಧಿ ಮುಖ್ಯಮಂತ್ರಿಗಳ ವಿವರ
ಪವನ್ ಕುಮಾರ್ ಚಾಮ್ಲಿಂಗ್
ಸಿಕ್ಕಿಂ ಮುಖ್ಯಮಂತ್ರಿಯಾಗಿ 1994 ರಿಂದ 2019ರವರೆಗೆ 24 ವರ್ಷ 165 ದಿನ ಅಧಿಕಾರದಲ್ಲಿದ್ದು, ಭಾರತದ ಅತಿ ದೀರ್ಘಕಾಲದ ಮುಖ್ಯಮಂತ್ರಿ ಎಂಬ ದಾಖಲೆ ಹೊಂದಿದ್ದಾರೆ. ಪರಿಸರ ಸ್ನೇಹಿ ಆಡಳಿತಕ್ಕಾಗಿ ಅವರನ್ನು ದೇಶದ ‘ಹಸಿರು ಮುಖ್ಯಮಂತ್ರಿ’ ಎಂದು ಕರೆಯಲಾಗುತ್ತಿತ್ತು.
ನವೀನ್ ಪಟ್ನಾಯಕ್
2000 ರಿಂದ 2024ರವರೆಗೆ 24 ವರ್ಷ 99 ದಿನ ಒಡಿಶಾದಲ್ಲಿ ಆಡಳಿತ ನಡೆಸಿದ ಅವರು ಎರಡನೇ ಸ್ಥಾನದಲ್ಲಿದ್ದಾರೆ. 2024ರ ಚುನಾವಣೆಯಲ್ಲಿ ಅವರ ಪಕ್ಷ ಸೋತಾಗ ಪಟ್ನಾಯಕ್ ಆಡಳಿತ ಅಂತ್ಯವಾಯಿತು.
ಜ್ಯೋತಿ ಬಸು
1977 ರಿಂದ 2000ರವರೆಗೆ 23 ವರ್ಷ 137 ದಿನ ಪಶ್ಚಿಮ ಬಂಗಾಳದ ಮೊದಲ ಕಮ್ಯುನಿಸ್ಟ್ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದರು. ಯಾವುದೇ ಸೋಲು ಕಾಣದಿದ್ದರೂ ಆರೋಗ್ಯ ಸಮಸ್ಯೆಯಿಂದ ಚುನಾವಣೆಯಿಂದ ಹೊರಬಂದಿದ್ದರು.
ಗೆಗಾಂಗ್ ಅಪಾಂಗ್
ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಪಾಂಗ್ 22 ವರ್ಷ 250 ದಿನ ಆಡಳಿತ ನಡೆದ್ದರು. 1980–1999 ಮತ್ತು 2003–2007ರವರೆಗೆ ಎರಡು ಹಂತಗಳಲ್ಲಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.
ಲಾಲ್ ಥನಹಾವ್ಲಾ
ಮಿಜೋರಂನ ಕಾಂಗ್ರೆಸ್ ನಾಯಕ ಥನಹಾವ್ಲಾಅವರು 22 ವರ್ಷ 60 ದಿನ ಮೂರು ಹಂತಗಳಲ್ಲಿ ಆಡಳಿತ ನಡೆಸಿದ್ದಾರೆ. 1984–86, 1989–98 ಹಾಗೂ 2008–18 ರ ಅವಧಿಗೆ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು.
ವೀರಭದ್ರ ಸಿಂಗ್ ಮತ್ತು ಮಾಣಿಕ್ ಸರ್ಕಾರ್
ವೀರಭದ್ರ ಸಿಂಗ್ (ಹಿಮಾಚಲ)- 21 ವರ್ಷ 13 ದಿನ,
ಮಾನಿಕ್ ಸರ್ಕಾರ್ (ತ್ರಿಪುರಾ) -19 ವರ್ಷ 363 ದಿನ,
ನಿತೀಶ್ ಕುಮಾರ್
19 ವರ್ಷ 87 ದಿನಗಳ ಅವಧಿಯೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. ಈ ಬಾರಿ ಸಿಎಂ ಸ್ಥಾನ ಅಲಂಕರಿಸಿ ಐದು ವರ್ಷ ಪೂರೈಸಿದರೆ 25 ವರ್ಷ ಆಗಲಿದೆ. ಆ ಮೂಲಕ ದೇಶದಲ್ಲಿ ಅತಿ ದೀರ್ಘಾವಧಿವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

