ತಿರುಪತಿ ಪಾರಕಾಮಣಿ ಹಗರಣ: ತನಿಖೆ ಎದುರಿಸುತ್ತಿದ್ದ ಟಿಟಿಡಿ ಮಾಜಿ ವಿಚಕ್ಷಣಾಧಿಕಾರಿ ಶವವಾಗಿ ಪತ್ತೆ

ಟಿಟಿಡಿಯ ಮಾಜಿ ಸಹಾಯಕ ವಿಚಕ್ಷಣಾ ಮತ್ತು ಭದ್ರತಾ ಅಧಿಕಾರಿ (AVSO) ಹಾಗೂ ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ವೈ. ಸತೀಶ್ ಕುಮಾರ್ ಅವರ ಮೃತದೇಹವು ಅನಂತಪುರ ಜಿಲ್ಲೆಯ ತಡಿಪತ್ರಿ ಬಳಿಯ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿದೆ.

Update: 2025-11-15 09:29 GMT

ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯ

Click the Play button to listen to article

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪಾರಕಾಮಣಿ ಹಗರಣದಲ್ಲಿ ತನಿಖೆ ಎದುರಿಸುತ್ತಿದ್ದ ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು ಹಗರಣಕ್ಕೆ ಹೊಸ ತಿರುವು ನೀಡಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗಾಗಿ 12 ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಟಿಟಿಡಿಯ ಮಾಜಿ ಸಹಾಯಕ ವಿಚಕ್ಷಣಾ ಮತ್ತು ಭದ್ರತಾ ಅಧಿಕಾರಿ (AVSO) ಹಾಗೂ ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ವೈ. ಸತೀಶ್ ಕುಮಾರ್ ಅವರ ಮೃತದೇಹವು ಅನಂತಪುರ ಜಿಲ್ಲೆಯ ತಡಿಪತ್ರಿ ಬಳಿಯ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿದೆ. "ಪಾರಕಾಮಣಿ ಪ್ರಕರಣದಲ್ಲಿನ ಪ್ರತಿಸ್ಪರ್ಧಿಗಳೇ ನನ್ನ ಸಹೋದರನನ್ನು ಕೊಲೆ ಮಾಡಿದ್ದಾರೆ," ಎಂದು ಸತೀಶ್ ಕುಮಾರ್ ಅವರ ಸಹೋದರ ಹರಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ, ಗುಂತಕಲ್‌ನ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 103(1)(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಏನಿದು ಪಾರಕಾಮಣಿ ಹಗರಣ?

ಪಾರಕಾಮಣಿ ಎಂಬುದು ತಿರುಮಲ ದೇವಸ್ಥಾನದಲ್ಲಿ ಯಾತ್ರಾರ್ಥಿಗಳು ನೀಡುವ ದೇಶೀಯ ಮತ್ತು ವಿದೇಶಿ ಕರೆನ್ಸಿ ಸೇರಿದಂತೆ ಎಲ್ಲಾ ಕಾಣಿಕೆಗಳನ್ನು ಎಣಿಕೆ ಮಾಡುವ ಪವಿತ್ರ ಸ್ಥಳವಾಗಿದೆ. 2023ರ ಆರಂಭದಲ್ಲಿ, ಅಲ್ಲಿನ ಸಿಬ್ಬಂದಿಯೊಬ್ಬರು ನಗದು ಕದಿಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾದಾಗ ಈ ಹಗರಣ ಬೆಳಕಿಗೆ ಬಂದಿತ್ತು. ದಾಖಲಾದ ಕಳ್ಳತನದ ಮೊತ್ತ ಚಿಕ್ಕದಾಗಿದ್ದರೂ, ಇದು ಕೋಟ್ಯಂತರ ರೂಪಾಯಿಗಳ ದೊಡ್ಡ ಹಗರಣದ ಭಾಗವಾಗಿರಬಹುದು ಎಂದು ಟಿಟಿಡಿ ಮಂಡಳಿಯ ಸದಸ್ಯರು ಮತ್ತು ರಾಜಕೀಯ ನಾಯಕರು ಆರೋಪಿಸಿದ್ದರು.

ಆರಂಭದಲ್ಲಿ, ಸತೀಶ್ ಕುಮಾರ್ ಅವರು ಈ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಏಪ್ರಿಲ್ 29ರಂದು, ಅವರು ಪೆದ್ದ ಜೀಯರ್ ಮಠದ ಗುಮಾಸ್ತ ಮತ್ತು ಪ್ರಮುಖ ಆರೋಪಿಯಾಗಿದ್ದ ಸಿ.ವಿ. ರವಿ ಕುಮಾರ್‌ನನ್ನು 900 ಡಾಲರ್​ ಕದ್ದ ಆರೋಪದ ಮೇಲೆ ಬಂಧಿಸಿದ್ದರು.

ನಂತರ ಪ್ರಕರಣವು ಅನಿರೀಕ್ಷಿತ ತಿರುವು ಪಡೆದುಕೊಂಡಿತು. ರವಿ ಕುಮಾರ್ ಮತ್ತು ಅವರ ಪತ್ನಿ, ತಿರುಪತಿ ಮತ್ತು ಚೆನ್ನೈನಲ್ಲಿರುವ 14.4 ಕೋಟಿ ರೂಪಾಯಿ ಮೌಲ್ಯದ ತಮ್ಮ ಏಳು ಆಸ್ತಿಗಳನ್ನು ಟಿಟಿಡಿಗೆ ದಾನ ಮಾಡಿದರು. ಈ ದಾನವನ್ನು ಟಿಟಿಡಿ ಜೂನ್ 19ರಂದು ಸ್ವೀಕರಿಸಿತ್ತು. ಅದಾದ ಬಳಿಕ  2023ರ ಸೆಪ್ಟೆಂಬರ್ 9 ರಂದು, ಸತೀಶ್ ಕುಮಾರ್ ಅವರು ತಿರುಪತಿಯ ಲೋಕ ಅದಾಲತ್‌ನಲ್ಲಿ ರವಿ ಕುಮಾರ್ ಅವರೊಂದಿಗೆ ರಾಜಿ ಮಾಡಿದರು. ಬಳಿಕ ಪ್ರಕರಣವನ್ನು ಮುಚ್ಚಿ ಹಾಕಲಾಗಿತ್ತು ಮತ್ತು ರವಿ ಕುಮಾರ್ ಖುಲಾಸೆಗೊಂಡಿದ್ದರು.

ಹಗರಣದ ಮರುತನಿಖೆ

ಆಂಧ್ರಪ್ರದೇಶದಲ್ಲಿ ಸರ್ಕಾರ ಬದಲಾದ ನಂತರ, ಟಿಟಿಡಿ ವಿಚಕ್ಷಣಾ ದಳವು ಸತೀಶ್ ಕುಮಾರ್ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಿತ್ತು. ಈ ಹಿಂದೆ ಪೊಲೀಸ್ ಇಲಾಖೆಯ ಒತ್ತಡದಿಂದಾಗಿ ರಾಜಿ ಮಾಡಿಕೊಳ್ಳಬೇಕಾಯಿತು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದರು. ಲೋಕ ಅದಾಲತ್ ಆದೇಶವನ್ನು ಆಂಧ್ರಪ್ರದೇಶ ಹೈಕೋರ್ಟ್ ರದ್ದುಗೊಳಿಸಿ, ಸಿಐಡಿ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಡಿಸೆಂಬರ್ 2 ರೊಳಗೆ ಹೊಸ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿದ ನಂತರ, ಹಗರಣದ ಮರುತನಿಖೆಗೆ ಆದೇಶಿಸಲಾಗಿತ್ತು.

ಸತೀಶ್ ಕುಮಾರ್ ಅವರು ಶುಕ್ರವಾರ ಎರಡನೇ ಸುತ್ತಿನ ವಿಚಾರಣೆಗಾಗಿ ಸಿಐಡಿ ಮುಂದೆ ಹಾಜರಾಗಬೇಕಿತ್ತು. ನವೆಂಬರ್ 6 ರಂದು ಈಗಾಗಲೇ ಅವರನ್ನು ಸಿಐಡಿ ಅಧಿಕಾರಿಗಳು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. 

Tags:    

Similar News