600 ಅಡಿ ಆಳದ ಕಂದಕಕ್ಕೆ ಉರುಳಿದ ಕಾರು; ಒಂದೇ ಕುಟುಂಬದ ಆರು ಮಂದಿ ದುರ್ಮರಣ

ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಇದೊಂದು "ಅತ್ಯಂತ ದುರದೃಷ್ಟಕರ ಘಟನೆ" ಎಂದು ಬಣ್ಣಿಸಿದ್ದಾರೆ.

Update: 2025-12-08 03:39 GMT

ಪ್ರಸಿದ್ಧ ಯಾತ್ರಾಸ್ಥಳ ಸಪ್ತಶೃಂಗಿ ಗಢದ ಘಾಟ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟ ಘಟನೆ ಭಾನುವಾರ (ಡಿ.7) ಸಂಜೆ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಸುಮಾರು 600 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ, ಕಾರಿನಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭಾನುವಾರ ಸಂಜೆ 4 ಗಂಟೆಯ ಸುಮಾರಿಗೆ ನಾಸಿಕ್ ಜಿಲ್ಲೆಯ ಕಲ್ವಾನ್ ತಾಲೂಕಿನ ಸಪ್ತಶೃಂಗಿ ಗಢ ಘಾಟ್ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ. ಮೃತರೆಲ್ಲರೂ ನಿಫಾಡ್ ತಾಲೂಕಿನ ಪಿಂಪಲ್ಗಾಂವ್ ಬಸ್ವಂತ್ ಗ್ರಾಮದ ನಿವಾಸಿಗಳಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಟೊಯೊಟಾ ಇನ್ನೋವಾ ಕಾರಿನಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕಂದಕಕ್ಕೆ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಮೃತರನ್ನು ಕೀರ್ತಿ ಪಟೇಲ್ (50), ರಸೀಲಾ ಪಟೇಲ್ (50), ವಿಠ್ಠಲ್ ಪಟೇಲ್ (65), ಲತಾ ಪಟೇಲ್ (60), ವಚನ್ ಪಟೇಲ್ (60) ಮತ್ತು ಮಣಿಬೆನ್ ಪಟೇಲ್ (70) ಎಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪಡೆಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದವು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಇಒ ರೋಹಿತ್ ಕುಮಾರ್ ರಜಪೂತ್ ತಿಳಿಸಿದ್ದಾರೆ.

ಸಿಎಂ ಫಡ್ನವೀಸ್ ಸಂತಾಪ, ಪರಿಹಾರ ಘೋಷಣೆ:

ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಇದೊಂದು "ಅತ್ಯಂತ ದುರದೃಷ್ಟಕರ ಘಟನೆ" ಎಂದು ಬಣ್ಣಿಸಿದ್ದಾರೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. "ದುಃಖತಪ್ತ ಕುಟುಂಬಗಳೊಂದಿಗೆ ಸರ್ಕಾರ ನಿಂತಿದೆ ಮತ್ತು ಆಡಳಿತ ಯಂತ್ರವು ರಕ್ಷಣಾ ಕಾರ್ಯದಲ್ಲಿ ಸಂಪೂರ್ಣ ನೆರವು ನೀಡುತ್ತಿದೆ," ಎಂದು ಅವರು ತಿಳಿಸಿದ್ದಾರೆ.

ಈ ಘಾಟ್ ರಸ್ತೆ ಅಪಾಯಕಾರಿ ತಿರುವುಗಳಿಗೆ ಹೆಸರಾಗಿದ್ದು, ಚಾಲಕರ ಎಚ್ಚರ ತಪ್ಪಿದರೆ ಇಂತಹ ದುರಂತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. 

Tags:    

Similar News