ಚುನಾವಣಾ ಪಟ್ಟಿ ಪರಿಷ್ಕರಣೆ ಕೆಲಸದ ಒತ್ತಡ: ಮತ್ತೊಬ್ಬ ಬಿಎಲ್‌ಒ ಸಾವು
ಮೃತರನ್ನು 58 ವರ್ಷದ ಲಾಲ್ ಮೋಹನ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಮೋದಿ ಸೈನ್ಸ್ ಆ್ಯಂಡ್ ಕಾಮರ್ಸ್ ಇಂಟರ್ ಕಾಲೇಜಿನಲ್ಲಿ ಜೀವಶಾಸ್ತ್ರ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ಸಾಂದರ್ಭಿಕ ಚಿತ್ರ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿದ್ದ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಒಬ್ಬರು ಕೆಲಸದ ತೀವ್ರ ಒತ್ತಡದಿಂದಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮೋದಿನಗರದಲ್ಲಿ ವರದಿಯಾಗಿದೆ.
ಮೃತರನ್ನು 58 ವರ್ಷದ ಲಾಲ್ ಮೋಹನ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಮೋದಿ ಸೈನ್ಸ್ ಆ್ಯಂಡ್ ಕಾಮರ್ಸ್ ಇಂಟರ್ ಕಾಲೇಜಿನಲ್ಲಿ ಜೀವಶಾಸ್ತ್ರ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಸಾಹಿಬಾಬಾದ್ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಕಾರ್ಯಕ್ಕಾಗಿ ಇವರನ್ನು ಬಿಎಲ್‌ಒ ಆಗಿ ನಿಯೋಜಿಸಲಾಗಿತ್ತು. ಶನಿವಾರ (ಡಿ.6) ರಾತ್ರಿ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವ (Brain Haemorrhage) ಉಂಟಾಗಿದ್ದು, ನೆಹರು ನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮೋದಿನಗರದ ಸಹಾಯಕ ಪೊಲೀಸ್ ಆಯುಕ್ತ ಅಮಿತ್ ಸಕ್ಸೇನಾ ಖಚಿತಪಡಿಸಿದ್ದಾರೆ.
‘ಯಾವುದೇ ಬೆಲೆ ತೆತ್ತಾದರೂ ಕೆಲಸ ಮುಗಿಸಿ’ ಎಂದಿದ್ದ ಆಡಳಿತ
ಈ ಕುರಿತು ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಾಂಶುಪಾಲ ಸತೀಶ್ ಚಂದ್ ಅಗರ್ವಾಲ್, ‘ಸಿಂಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಚುನಾವಣಾ ಆಯೋಗದ ನಿರ್ದೇಶನದಂತೆ ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸುವ ಕೆಲಸವನ್ನು ಯಾವುದೇ ಕಾರಣಕ್ಕೂ ಪೂರ್ಣಗೊಳಿಸಲೇಬೇಕು, ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಆಡಳಿತವು ಎಚ್ಚರಿಕೆ ನೀಡಿತ್ತು. ಇದರಿಂದ ಅವರು ತೀವ್ರವಾದ ಮಾನಸಿಕ ಒತ್ತಡದಲ್ಲಿದ್ದರು’ ಎಂದು ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಭರದಿಂದ ಸಾಗುತ್ತಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಮಿತಿಮೀರಿದ ಕೆಲಸದೊತ್ತಡ ಮತ್ತು ಮೇಲಧಿಕಾರಿಗಳ ಕಿರುಕುಳ ತಾಳಲಾರದೆ ಹಲವು ಬಿಎಲ್‌ಒಗಳು ಹಾಗೂ ಸಿಬ್ಬಂದಿ ಸಾವನ್ನಪ್ಪುತ್ತಿದ್ದಾರೆ ಮತ್ತು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬ ವರದಿಗಳು ಆತಂಕ ಮೂಡಿಸಿವೆ.