ಇಂಡಿಗೋ ಶೇ.95ರಷ್ಟು ಹಾರಾಟ ಆರಂಭ; ಇಂದು 1,500 ವಿಮಾನಗಳ ಸಂಚಾರ, ಸಿಇಒಗೆ ನೋಟಿಸ್
ಇಂಡಿಗೋ ಬಿಕ್ಕಟ್ಟನ್ನು ಕಾಂಗ್ರೆಸ್ ನಾಯಕ ಪಿ. ಚಿದಂಬರಂ 'ಬೃಹತ್ ವೈಫಲ್ಯ' ಎಂದು ಬಣ್ಣಿಸಿದ್ದಾರೆ. ಇದು ಕೇವಲ ಇಂಡಿಗೋ ಆಡಳಿತ ಮಂಡಳಿಯ ವೈಫಲ್ಯವಷ್ಟೇ ಅಲ್ಲ, ಡಿಜಿಸಿಎ ವೈಫಲ್ಯವೂ ಹೌದು ಎಂದು ಅವರು ಟೀಕಿಸಿದ್ದಾರೆ.
ಇಂಡಿಗೋ ವಿಮಾನ
ಕಳೆದ ಆರು ದಿನಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಇಂಡಿಗೋ ಏರ್‌ಲೈನ್ಸ್ ಇದೀಗ ಚೇತರಿಕೆಯ ಹಾದಿಯಲ್ಲಿದೆ. ಭಾನುವಾರ (ಇಂದು) ತನ್ನ ಶೇ.95ರಷ್ಟು ಸಂಪರ್ಕ ಜಾಲವನ್ನು ಮರುಸ್ಥಾಪಿಸಿದ್ದು, ಸಂಜೆಯ ವೇಳೆಗೆ 1,500ಕ್ಕೂ ಹೆಚ್ಚು ವಿಮಾನಗಳನ್ನು ಕಾರ್ಯಾಚರಣೆಗೊಳಿಸಲು ನಿರ್ಧರಿಸಿದೆ. ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿನ ವ್ಯತ್ಯಯದಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿತ್ತು.
ಶನಿವಾರ ಕೇವಲ 700 ವಿಮಾನಗಳನ್ನು ಮಾತ್ರ ಹಾರಾಟ ನಡೆಸುವ ಮೂಲಕ ಇಂಡಿಗೋ ತನ್ನ ಸೇವೆಯನ್ನು ಕಡಿತಗೊಳಿಸಿತ್ತು. ಗೊಂದಲಮಯವಾಗಿದ್ದ ರೋಸ್ಟರ್ (ಸಿಬ್ಬಂದಿ ಪಾಳಿ) ಮತ್ತು ತಾಂತ್ರಿಕ ವ್ಯವಸ್ಥೆಯನ್ನು ಸ್ಥಿರಗೊಳಿಸಲು ಈ ‘ರೀಬೂಟ್’ (ಹೊಸದಾಗಿ ಆರಂಭಿಸುವ) ಪ್ರಕ್ರಿಯೆ ಅನಿವಾರ್ಯವಾಗಿತ್ತು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಇದೀಗ 138 ನಿಲ್ದಾಣಗಳ ಪೈಕಿ 135 ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಮುಖ್ಯಸ್ಥರಿಗೆ ಡಿಜಿಸಿಎ ನೋಟಿಸ್
ಈ ಮಧ್ಯೆ, ವಿಮಾನಯಾನ ನಿಯಂತ್ರಣ ಸಂಸ್ಥೆ (DGCA) ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಮತ್ತು ಅಕೌಂಟೆಬಲ್ ಮ್ಯಾನೇಜರ್ ಇಸಿಡ್ರೊ ಪೊರ್ಕ್ವೆರಾಸ್ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ಪೈಲಟ್‌ಗಳ ಕರ್ತವ್ಯದ ಅವಧಿ (FDTL) ನಿಯಮಗಳ ಜಾರಿಯಲ್ಲಿ ಆದ ವೈಫಲ್ಯ ಮತ್ತು ನಿರ್ವಹಣಾ ಲೋಪಗಳ ಕುರಿತು 24 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ಶನಿವಾರ ಇಂಡಿಗೋ ಮುಖ್ಯಸ್ಥರೊಂದಿಗೆ ತುರ್ತು ಸಭೆ ನಡೆಸಿ ಪರಿಸ್ಥಿತಿಯನ್ನು ಪರಾಮರ್ಶಿಸಿದ್ದಾರೆ.
ಇಂಡಿಗೋ ಬಿಕ್ಕಟ್ಟನ್ನು ಕಾಂಗ್ರೆಸ್ ನಾಯಕ ಪಿ. ಚಿದಂಬರಂ 'ಬೃಹತ್ ವೈಫಲ್ಯ' ಎಂದು ಬಣ್ಣಿಸಿದ್ದಾರೆ. ಇದು ಕೇವಲ ಇಂಡಿಗೋ ಆಡಳಿತ ಮಂಡಳಿಯ ವೈಫಲ್ಯವಷ್ಟೇ ಅಲ್ಲ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ವೈಫಲ್ಯವೂ ಹೌದು ಎಂದು ಅವರು ಟೀಕಿಸಿದ್ದಾರೆ.