ದೇಶದಲ್ಲಿ ಮತ್ತೊಂದು ಭೀಕರ ಅಗ್ನಿ ದುರಂತ; ಹತ್ತಕ್ಕೂ ಹೆಚ್ಚು ದೋಣಿಗಳು ಸುಟ್ಟು ಕರಕಲು
ಇಂದು ಬೆಳ್ಳಂ ಬೆಳಗ್ಗೆ ಕೇರಳದ ಕೊಲ್ಲಂನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಸುಮಾರು 10ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಸುಟ್ಟು ಕರಕಲು ಆಗಿವೆ.
ಗೋವಾ ನೈಟ್ ಕ್ಲಬ್‌ನಲ್ಲಿ 25 ಪ್ರವಾಸಿಗರನ್ನು ಬಲಿ ಪಡೆದ ಭೀಕರ ಅಗ್ನಿ ದುರಂತದ ಬೆನ್ನಲ್ಲೇ ದೇಶದಲ್ಲಿ ಮತ್ತೊಂದು ಬೆಂಕಿ ಅವಘಡವೊಂದು ವರದಿಯಾಗಿದೆ. ಕೇರಳದ ಕೊಲ್ಲಂನಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದ ಅಗ್ನಿ ದುರಂತಕ್ಕೆ ಒಂದಲ್ಲ ಎರಡಲ್ಲ ಹತ್ತಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಸುಟ್ಟು ಕರಕಲಾಗಿವವೆ.
ಅಷ್ಟಮುಡಿ ಸರೋವರದ ದೋಣಿ ಲಂಗರು ಹಾಕುವ ಸ್ಥಳದಲ್ಲಿ ಭಾನುವಾರ ಬೆಳಗಿನ ಜಾವ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಹತ್ತು ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಸುಟ್ಟು ಭಸ್ಮವಾಗಿವೆ.
ಅಧಿಕಾರಿಗಳು ಹೇಳೋದೇನು?
ಅಯ್ಯಂಕೋವಿಲ್ ದೇವಸ್ಥಾನದ ಸಮೀಪವಿರುವ ಕುರೀಪುಳ ಚರ್ಚ್ ಬಳಿ ಬೆಳಗಿನ ಜಾವ 2:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಆರು ಘಟಕಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ದೋಣಿಗಳಲ್ಲಿ ಸಂಗ್ರಹಿಸಲಾದ ಗ್ಯಾಸ್ ಸಿಲಿಂಡರ್‌ಗಳು ತಕ್ಷಣ ಸ್ಫೋಟಗೊಂಡು, ಬೆಂಕಿ ತೀವ್ರಗೊಂಡಿತು. ಹಾನಿಗೊಳಗಾದ ಹಲವು ದೋಣಿಗಳು ಕೊಲಾಚಲ್ ಮತ್ತು ಪೂವಾರ್‌ನ ಮೀನುಗಾರರಿಗೆ ಸೇರಿವೆ ಎಂದು ವರದಿಯಾಗಿದೆ.
ಗೋವಾದಲ್ಲಿ ಬೆಂಕಿ ಕೆನ್ನಾಲಿಗೆ ಪ್ರವಾಸಿಗರು ದಹನ
ಇನ್ನು ನಿನ್ನೆ ತಡರಾತ್ರಿ ಗೋವಾದ ನೈಟ್ ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಪ್ರವಾಸಿಗರು ಸೇರಿದಂತೆ 25ಕ್ಕೂ ಅಧಿಕ ಪ್ರವಾಸಿಗರು ಸುಟ್ಟು ಕರಕಲಾಗಿದ್ದಾರೆ. ಉತ್ತರ ಗೋವಾದ ಪ್ರಸಿದ್ಧ ಪ್ರವಾಸಿ ತಾಣವಾದ ಅರ್ಪೋರಾ ಗ್ರಾಮದ ನೈಟ್‌ಕ್ಲಬ್ ಒಂದರಲ್ಲಿ ಶನಿವಾರ ತಡರಾತ್ರಿ ಅಚಾನಕಕ್ಕಾಗಿ ಬೆಂಕಿ ಕಾಣಿಸಿಕೊಂಡಿತ್ತು. ನೈಟ್ ಕ್ಲಬ್‌ನಲ್ಲಿ ಬೆಂಕಿ ಹೊತ್ತಿಕೊಂಡಾಗ ಡ್ಯಾನ್ಸ್ ಫ್ಲೋರ್‌ನಲ್ಲಿ ಕನಿಷ್ಠ 100 ಮಂದಿ ಇದ್ದರು. ಬೆಂಕಿ ಕಾಣಿಸಿಕೊಂಡಾಗ ಅಲ್ಲಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಡುಗೆ ಕೋಣೆಯತ್ತ ಓಡಿ ಹೋದರು. ಇದರಿಂದಾಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಸಿಕ್ಕಿಹಾಕಿಕೊಂಡರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಬೆಂಕಿ ಅವಘಡಕ್ಕೆ ಕಾರಣ ಏನು?
ಇನ್ನು ಭೀಕರ ಅಗ್ನಿ ದುರಂತಕ್ಕೆ ಸೂಕ್ತ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸಿಲಿಂಡರ್ ಸ್ಫೋಟದಿಂದಾಗಿ ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಜ್ಯ ಪೊಲೀಸರು ಹೇಳಿದರೆ, ಪ್ರವಾಸಿಗರು ನೃತ್ಯ ಮಾಡುತ್ತಿದ್ದ ಕ್ಲಬ್‌ನ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಗೋವಾದ ನೈಟ್‌ಕ್ಲಬ್'ನಲ್ಲಿ ಅಗ್ನಿ ದುರಂತ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ರೂ.2 ಲಕ್ಷ ಹಾಗೂ ಗಾಯಾಳುಗಳಿಗೆ 50,000 ರೂ ಪರಿಹಾರ ಘೋಷಿಸಿದ್ದಾರೆ.