ಪತಿಯ ಎರಡನೇ ಮದುವೆ ತಡೆಯಿರಿ… ಮೋದಿಗೆ ಪಾಕ್ ಮಹಿಳೆಯ ಮನವಿ
ದಿಲ್ಲಿಯಲ್ಲಿ ಪತಿ ಎರಡನೇ ಮದುವೆಯಾಗುತ್ತಿದ್ದಾಳೆ. ನ್ಯಾಯ ಒದಗಿಸಿ ಎಂದು ಕೋರಿ ಪಾಕಿಸ್ತಾನ ಮೂಲದ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾಳೆ.
ನನ್ನ ಪತಿ ರಹಸ್ಯವಾಗಿ ದಿಲ್ಲಿಯಲ್ಲಿ ಎರಡನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಪಾಕಿಸ್ತಾನಿ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿರುವ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಕರಾಚಿ ಮೂಲದ ಮಹಿಳೆಯೊಬ್ಬಳು ವಿಡಿಯೊ ಹರಿಬಿಟ್ಟು ನ್ಯಾಯ ಒದಗಿಸುವಂತೆ ಮೋದಿಗೆ ದಂಬಾಲು ಬಿದ್ದಿದ್ದಾಳೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಏನಿದು ಘಟನೆ?
ಕರಾಚಿ ಮೂಲದ ನಿವಾಸಿ ನಿಕಿತಾ ನಾಗ್‌ದೇವ್ ಎಂಬಾಕೆ ಈ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ತನ್ನ ವಿಡಿಯೊದಲ್ಲಿ ತನ್ನ ಪತಿ ವಿಕ್ರಮ್ ನಾಗ್‌ದೇವ್ ತನಗೆ ಮೋಸ ಮಾಡಿ ದೆಹಲಿಗೆ ಓಡಿ ಹೋಗಿದ್ದು, ಅಲ್ಲಿ ಆತ ಎರಡನೇ ಮದುವೆಗೆ ತಯಾರಿ ನಡೆಸುತ್ತಿದ್ದಾನೆ. ಅದನ್ನು ತಡೆದು ತನಗೆ ನ್ಯಾಯ ಒದಗಿಸಿಕೊಡುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾಳೆ. ಸದ್ಯ ಈ ವಿಡಿಯೊ ಉಭಯ ರಾಷ್ಟ್ರಗಳ ಗಮನ ಸೆಳೆದಿದೆ.
ನಿಕಿತಾ ಹೇಳೋದೇನು?
ದೀರ್ಘಾವಧಿ ವೀಸಾ ಪಡೆದು ಮಧ್ಯ ಪ್ರದೇಶದ ಇಂದೋರ್‌ನಲ್ಲಿ ವಾಸವಾಗಿರುವ ಪಾಕಿಸ್ತಾನ ಮೂಲದ ವಿಕ್ರಮ್‌ನನ್ನು ನಿಕಿತಾ ಜನವರಿ 26, 2020 ರಂದು ಕರಾಚಿಯಲ್ಲಿ ಮದುವೆಯಾಗಿದ್ದಳು. ಇವರಿಬ್ಬರು ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ್ದರು. ಒಂದು ತಿಂಗಳ ನಂತರ, ಫೆಬ್ರವರಿ 26, 2020 ರಂದು, ವಿಕ್ರಮ್ ಮತ್ತು ನಿಕಿತಾ ಇಬ್ಬರೂ ಭಾರತಕ್ಕೆ ಬರಲು ನಿರ್ಧರಿಸಿದರು.
ಜುಲೈ 9, 2020 ರಂದು, ವಿಕ್ರಮ್ ವೀಸಾ ತಾಂತ್ರಿಕತೆಯ ನೆಪದಲ್ಲಿ ಅಟ್ಟಾರಿ ಗಡಿಯಲ್ಲಿ ತನ್ನನ್ನು ಕೈಬಿಟ್ಟು ಬಲವಂತವಾಗಿ ಪಾಕಿಸ್ತಾನಕ್ಕೆ ಕಳುಹಿಸಿದ್ದಾರೆ ಎಂದು ನಿಕಿತಾ ಆರೋಪಿಸಿದ್ದಾಳೆ. ಅಂದಿನಿಂದ, ವಿಕ್ರಮ್ ನನ್ನನ್ನು ಭಾರತಕ್ಕೆ ಕರೆದೊಯ್ಯವ ಯಾವುದೇ ಪ್ರಯತ್ನ ಮಾಡಿಲ್ಲ. ನನ್ನನ್ನೂ ಭಾರತಕ್ಕೆ ಕರೆಸುವಂತೆ ವಿನಂತಿಸುತ್ತಲೇ ಇದ್ದೆ, ಆದರೆ ಅವರು ಪ್ರತಿ ಬಾರಿಯೂ ನಿರಾಕರಿಸುತ್ತಲೇ ಬಂದಿದ್ದಾರೆ ಎಂದು ನಿಕಿತಾ ಅಳಲು ತೋಡಿಕೊಂಡಿದ್ದಾಳೆ.
ಕರಾಚಿಯಿಂದ ರೆಕಾರ್ಡ್ ಮಾಡಲಾದ ವೀಡಿಯೊ ಸಂದೇಶದಲ್ಲಿ, "ಇಂದು ನ್ಯಾಯ ಸಿಗದಿದ್ದರೆ, ಮಹಿಳೆಯರು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಅನೇಕ ಹುಡುಗಿಯರು ತಮ್ಮ ವೈವಾಹಿಕ ಬದುಕಿನಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ಎದುರಿಸುತ್ತಾರೆ. ಎಲ್ಲರೂ ನನ್ನೊಂದಿಗೆ ನಿಲ್ಲಬೇಕೆಂದು ನಾನು ಒತ್ತಾಯಿಸುತ್ತೇನೆ" ಎಂದು ಅವರು ಮನವಿ ಮಾಡಿದ್ದಾಳೆ.
ತಾನು ಅತ್ತೆ ಮನೆಯಲ್ಲೂ ಕಿರುಕುಳ ಅನುಭವಿಸುತ್ತಿದ್ದೇನೆ. ಆದರೆ ಅದು ಸಹಜ ಎಂಬಂತೆ ಸಹಿಸಿಕೊಂಡು ಹೋಗುತ್ತಿದ್ದೇನೆ. ಆದರೆ ನನ್ನ ಪತಿ ಮತ್ತೊರ್ವ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಇದೀಗ ಗುಟ್ಟಾಗಿ ದಿಲ್ಲಿಯಲ್ಲಿ ಆಕೆಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಇದು ನಡೆದರೆ ಮಹಿಳೆಯರಿಗೆ ನ್ಯಾಯ ಸಿಗುವ ಭರವಸೆಯೇ ಇಲ್ಲದಂತಾಗುತ್ತದೆ ಎಂದಿದ್ದಾಳೆ.
ಮಧ್ಯಸ್ಥಿಕೆ ಪ್ರಯತ್ನವೂ ನಡೆದಿತ್ತು
ಇನ್ನು ಈ ಘಟನೆ ಬಗ್ಗೆ ನಿಕಿತಾ ಜನವರಿ 27, 2025 ರಂದು ಲಿಖಿತ ದೂರು ಸಲ್ಲಿಸಿದ್ದಳು. ಮಧ್ಯಪ್ರದೇಶ ಹೈಕೋರ್ಟ್‌ನಿಂದ ಅಧಿಕಾರ ಪಡೆದ ಸಿಂಧಿ ಪಂಚ ಮಧ್ಯಸ್ಥಿಕೆ ಮತ್ತು ಕಾನೂನು ಸಲಹೆ ಕೇಂದ್ರವು ಈ ಪ್ರಕರಣವನ್ನು ಕೈಗೆತ್ತಿಕೊಂಡಿತು. ವಿಕ್ರಮ್ ಮತ್ತು ಆತ ಮದುವೆಯಾಗು ಮುಂದಾಗಿದ್ದ ಯುವತಿಗೂ ನೋಟಿಸ್‌ಗಳನ್ನು ನೀಡಲಾಯಿತು ಮತ್ತು ವಿಚಾರಣೆಯನ್ನು ನಡೆಸಲಾಯಿತು.
ಆದರೆ, ಮಧ್ಯಸ್ಥಿಕೆ ಪ್ರಯತ್ನಗಳು ವಿಫಲವಾದವು. ಏಪ್ರಿಲ್ 30, 2025 ರಂದು ಕೇಂದ್ರವು ತನ್ನ ವರದಿಯಲ್ಲಿ, ಸಂಗಾತಿಗಳು ಇಬ್ಬರೂ ಭಾರತೀಯ ನಾಗರಿಕರಲ್ಲದ ಕಾರಣ, ಈ ವಿಷಯವು ಪಾಕಿಸ್ತಾನದ ನ್ಯಾಯವ್ಯಾಪ್ತಿಗೆ ಬರುತ್ತದೆ ಮತ್ತು ವಿಕ್ರಮ್ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲು ಶಿಫಾರಸು ಮಾಡಿದೆ ಎಂದು ಹೇಳಿದೆ.