ಮಣಿಪುರ ಹಿಂಸಾಚಾರ: ನದಿಯಲ್ಲಿ 2 ಶವಗಳು ಪತ್ತೆ. ಇಂದು ಅಮಿತ್ ಶಾ ಮಹತ್ವದ ಸಭೆ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಮತ್ತು ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ದೇಕಾ ಮತ್ತು ಇತರ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ;
ಮಣಿಪುರದಲ್ಲಿ ಹಿಂಸಾಚಾರ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ (ನವೆಂಬರ್ 18) ನಿರ್ಣಾಯಕ ಸಭೆ ನಡೆಸಲಿದ್ದಾರೆ. ಈಶಾನ್ಯ ರಾಜ್ಯದಲ್ಲಿ "ಅಸ್ಥಿರ" ಪರಿಸ್ಥಿತಿ ನಿಭಾಯಿಸಲು ಕಾರ್ಯತಂತ್ರ ರೂಪಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
2 ವರ್ಷದ ಬಾಲಕ ಮತ್ತು 65 ವರ್ಷದ ಮಹಿಳೆಯೊಬ್ಬಳ ಶವ ನದಿಯಲ್ಲಿ ಪತ್ತೆಯಾದ ಬಳಿಕ ಅಲ್ಲಿನ ಜನರು ಕೆರಳಿದ್ದಾರೆ. ಪರಿಹಾರ ಶಿಬಿರಗಳಲ್ಲಿ ಒಂದರ ನಿವಾಸಿ ಲೈಶಾರಾಮ್ ಹೆರೋಜಿತ್, ಸತ್ತವರಲ್ಲಿ ತನ್ನ ಇಡೀ ಕುಟುಂಬ ಸೇರಿದೆ ಎಂದು ಹೇಳಿದ್ದಾರೆ. ತನ್ನ ಮಗನ ಕತ್ತರಿಸಿದ ತಲೆ ಮತ್ತು ಹಾಗೂ ತಾಯಿಯ ಕೊಳೆತ ದೇಹ ನದಿಯಲ್ಲಿ ಪತ್ತೆಯಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಮತ್ತು ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ದೇಕಾ ಮತ್ತು ಇತರ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ತಮ್ಮ ಚುನಾವಣಾ ರ್ಯಾಲಿಗಳನ್ನು ರದ್ದುಗೊಳಿಸಿದ ನಂತರ ಅಮಿತ್ ಶಾ ಭಾನುವಾರ (ನವೆಂಬರ್ 17) ಮಣಿಪುರದ ಭದ್ರತಾ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಮೃತ ದೇಹಗಳ ಪತ್ತೆ ಹೊಸ ಪ್ರತಿಭಟನೆಗೆ ಹಾದಿ
ಕಳೆದ ವರ್ಷ ಮೇ ತಿಂಗಳಿನಿಂದ ಜನಾಂಗೀಯ ಕಲಹದಿಂದ ತತ್ತರಿಸುತ್ತಿರುವ ಮಣಿಪುರದಲ್ಲಿ ಮಹಿಳೆಯರು ಮತ್ತು ಮಕ್ಕಳ ಆರು ಶವಗಳು ಪತ್ತೆಯಾದ ನಂತರ ಪ್ರತಿಭಟನೆಗಳು ಮತ್ತು ಹಿಂಸಾಚಾರಕ್ಕೆ ತಿರುಗಿವೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಪೂರ್ವಜರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರತಿಭಟನಾಕಾರರ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದರೂ, ಉದ್ರಿಕ್ತ ಗುಂಪುಗಳು ಶನಿವಾರ ರಾತ್ರಿ (ನವೆಂಬರ್ 16) ಇಂಫಾಲ್ ಕಣಿವೆಯ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಮೂವರು ಬಿಜೆಪಿ ಶಾಸಕರ ನಿವಾಸಗಳಿಗೆ ಬೆಂಕಿ ಹಚ್ಚಿವೆ.
ಜಿರಿಬಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಹತ್ಯೆಗೈದ ನಂತರ ಆಕ್ರೋಶಗೊಂಡ ಜನರು ಶನಿವಾರ ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ನಡೆಸಿದ ನಂತರ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದ್ದರೂ ಈ ಘಟನೆಗಳು ನಡೆದಿವೆ.
ಗುಂಪುಗಳು ಅವರ ವಸತಿ ಕಾಂಪೌಂಡ್‌ಗಳಿಗೆ ನುಗ್ಗಿ, ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿ ಮನೆಗಳಿಗೆ ಬೆಂಕಿ ಹಚ್ಚಿದಾಗ ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಎನ್‌ಪಿಪಿ
ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮಣಿಪುರದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದೆ.
ಕಳೆದ ವರ್ಷ, ರಾಜ್ಯದ ಮತ್ತೊಂದು ಎನ್ಡಿಎ ಪಾಲುದಾರ ಕುಕಿ ಪೀಪಲ್ಸ್ ಅಲೈಯನ್ಸ್ ಎನ್‌ಡಿಎ ತೊರೆದಿತ್ತು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬರೆದ ಪತ್ರದಲ್ಲಿ, ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಮಣಿಪುರ ಸರ್ಕಾರವು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಎನ್‌ಬಿಪಿ ಹೇಳಿದೆ.
ಕ್ರಮದ ಎಚ್ಚರಿಕೆ ನೀಡಿದ ಗೃಹ ಸಚಿವಾಲಯ
ಮಣಿಪುರದಲ್ಲಿ ನಿಯೋಜಿಸಲಾದ ಎಲ್ಲಾ ಭದ್ರತಾ ಪಡೆಗಳಿಗೆ ರಾಜ್ಯದಲ್ಲಿ ಸುವ್ಯವಸ್ಥೆ ಮತ್ತು ಶಾಂತಿ ಪುನಃಸ್ಥಾಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾರ ತಿಳಿಸಿದೆ.
ಸಂಘರ್ಷದಲ್ಲಿರುವ ಎರಡೂ ಸಮುದಾಯಗಳ ಸಶಸ್ತ್ರ ದುಷ್ಕರ್ಮಿಗಳು ಹಿಂಸಾಚಾರದಲ್ಲಿ ತೊಡಗಿದ್ದು, ದುರದೃಷ್ಟಕರ ಪ್ರಾಣಹಾನಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಯಾಗಿದೆ ಎಂದು ಅದು ಹೇಳಿದೆ.
ಹಿಂಸಾತ್ಮಕ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ. ದುರ್ಬಲ ಪರಿಸ್ಥಿತಿಯನ್ನು ನೋಡಿದ ಕೇಂದ್ರವು ಗುರುವಾರ ಹಿಂಸಾಚಾರ ಪೀಡಿತ ಜಿರಿಬಾಮ್ ಸೇರಿದಂತೆ ಮಣಿಪುರದ ಆರು ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ಮತ್ತೆ ಜಾರಿಗೊಳಿಸಿದೆ.