ಸಂಪುಟ ಪುನಾರಚನೆಗೆ ಮುಹೂರ್ತ ಫಿಕ್ಸ್? ಖರ್ಗೆ ಭೇಟಿಯಾದ ಸಿಎಂ ಸಿದ್ದರಾಮಯ್ಯ

ಈ ಭೇಟಿಯು ಸಂಪುಟ ಪುನಾರಚನೆಯ ಕಸರತ್ತಿನ ಭಾಗವಾಗಿದ್ದು, ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಮತ್ತು ಹೊಸದಾಗಿ ಯಾರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Update: 2025-11-17 14:02 GMT

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದರು.

Click the Play button to listen to article

ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹೊತ್ತಿನಲ್ಲಿ, ರಾಜ್ಯ ಸಚಿವ ಸಂಪುಟ ಪುನಾರಚನೆಯ ಮಾತುಗಳು ದಟ್ಟವಾಗಿದ್ದು, ರಾಜಕೀಯ ಚಟುವಟಿಕೆಗಳು ಇದೀಗ ದೆಹಲಿಗೆ ಸ್ಥಳಾಂತರಗೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ದೆಹಲಿಯ ನಿವಾಸದಲ್ಲಿ ಭೇಟಿಯಾಗಿ, ಸಂಪುಟ ಪುನಾರಚನೆಯ ಕುರಿತು ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ ನಂತರ, ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿದರು. ಈ ಭೇಟಿಯು ಸಂಪುಟ ಪುನಾರಚನೆಯ ಕಸರತ್ತಿನ ಭಾಗವಾಗಿದ್ದು, ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಮತ್ತು ಹೊಸದಾಗಿ ಯಾರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

"ಹೈಕಮಾಂಡ್ ನಿರ್ಧಾರಕ್ಕೆ ಬದ್ಧ"

ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ಪುನಾರಚನೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. "ನವೆಂಬರ್ 20ಕ್ಕೆ ನಮ್ಮ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿದೆ. ಪಕ್ಷದಲ್ಲಿ 140 ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ ಮತ್ತು ಅವರೆಲ್ಲರೂ ಸಮರ್ಥರೇ ಆಗಿದ್ದಾರೆ," ಎಂದು ಅವರು ಹೇಳಿದರು. "ಈ ಬಗ್ಗೆ ಚರ್ಚಿಸಲು ನಾನು ದೆಹಲಿಗೆ ಹೋಗುತ್ತಿದ್ದೇನೆ. ಹೈಕಮಾಂಡ್ ಎಷ್ಟು ಬದಲಾವಣೆ ಮಾಡಲು ಹೇಳುತ್ತದೆಯೋ, ಅಷ್ಟು ಮಾಡಲು ನಾನು ಬದ್ಧನಾಗಿದ್ದೇನೆ," ಎಂದು ಹೇಳುವ ಮೂಲಕ, ಸಂಪುಟ ಪುನಾರಚನೆಯ ಚೆಂಡನ್ನು ವರಿಷ್ಠರ ಅಂಗಳಕ್ಕೆ ಹಾಕಿದ್ದರು.

ಇದೇ ವೇಳೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಖರ್ಗೆ ಅವರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಅವರು ಭೇಟಿಯಾಗಿರುವುದು ನನಗೆ ತಿಳಿದಿದೆ. ಆದರೆ, ಇಬ್ಬರ ನಡುವೆ ಏನು ಚರ್ಚೆಯಾಗಿದೆ ಎಂಬುದು ನನಗೆ ತಿಳಿದಿಲ್ಲ," ಎಂದಷ್ಟೇ ಹೇಳಿದರು.

ಈ ಬೆಳವಣಿಗೆಗಳೊಂದಿಗೆ, ರಾಜ್ಯ ಸಚಿವ ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಹಲವು ಹಾಲಿ ಸಚಿವರಲ್ಲಿ ಆತಂಕ ಶುರುವಾಗಿದ್ದರೆ, ಹೊಸ ಆಕಾಂಕ್ಷಿಗಳಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವು ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಪರಿಣಾಮ ಬೀರಲಿದೆ.

Tags:    

Similar News