ಬಂಗಾಳ ಚುನಾವಣೆಯತ್ತ ದೃಷ್ಟಿ: ಮೋದಿಯಿಂದ ವಂದೇ ಮಾತರಂ ಹೈಡ್ರಾಮಾ: ಪ್ರಿಯಾಂಕಾ ಗಾಂಧಿ ಕಿಡಿ

ಸಂಸತ್‌ನಲ್ಲಿ ನಡೆಯುತ್ತಿರುವ ವಂದೇ ಮಾತರಂ ಚರ್ಚೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾಧ್ರಾ ಭಾಗಿಯಾಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Update: 2025-12-08 13:28 GMT
ಸಂಸತ್‌ನಲ್ಲಿ ಇಂದು ಪ್ರಿಯಾಂಕಾ ಗಾಂಧಿ ಮಾತನಾಡಿದರು.
Click the Play button to listen to article

ಸಂಸತ್‌ನಲ್ಲಿ ನಡೆಯುತ್ತಿರುವ ವಂದೇ ಮಾತರಂ ಕುರಿತ ಚರ್ಚೆ ತಾರಕಕ್ಕೇರಿದೆ. ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಜವಾಹರಲಾಲ್‌ ನೆಹರೂ ಅವರೇ ಉದ್ಧೇಶಪೂರ್ವಕವಾಗಿ ತೆಗೆದು ಹಾಕಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೇರ ಆರೋಪ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ನಾಯಕರು ಮತ್ತು ಮೋದಿ ಸರ್ಕಾರಕ್ಕೆ ತಿರುಗೇಟು ಕೊಟ್ಟಿದ್ದಾರೆ. ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ವಿಷಯವನ್ನು ಎತ್ತಿ ತೋರಿಸುತ್ತಿದೆ. ತನ್ನ ರಾಜಕೀಯ ಲಾಭಕ್ಕಾಗಿ ಮೋದಿ ಸರ್ಕಾರ ಹೈಡ್ರಾಮ ಮಾಡುತ್ತಿದೆ ಎಂದು ಆರೋಪಿಸಿದರು.

"ವಂದೇ ಮಾತರಂ ಬಗ್ಗೆ ನಾವು ಏಕೆ ಚರ್ಚೆ ನಡೆಸುತ್ತಿದ್ದೇವೆ? ಇದರ ಬಗ್ಗೆ ಈಗ ಚರ್ಚೆ ನಡೆಸುವ ಅವಶ್ಯಕತೆಯೇ ಇಲ್ಲ. ಬಂಗಾಳ ಚುನಾವಣೆ ಶೀಘ್ರದಲ್ಲೇ ಬರಲಿರುವ ಕಾರಣ ಸರ್ಕಾರವು ವಂದೇ ಮಾತರಂ ಬಗ್ಗೆ ಚರ್ಚೆಯನ್ನು ಬಯಸಿದೆ... ಸರ್ಕಾರವು ವರ್ತಮಾನ ಮತ್ತು ಭವಿಷ್ಯವನ್ನು ನೋಡಲು ಬಯಸದ ಕಾರಣ ಭೂತಕಾಲದ ಘಟನೆಗಳನ್ನೇ ಮೆಲುಕು ಹಾಕುತ್ತಾ ಕಾಲಹರಣ ಮಾಡುತ್ತಿದೆ," ಎಂದು ಪ್ರಿಯಾಂಕಾ ಕಿಡಿಕಾರಿದರು.

ಮೋದಿ ಭಾಷಣದಲ್ಲೇನಿತ್ತು?

ಸಂಸತ್‌ನಲ್ಲಿ ವಂದೇ ಮಾತರಂ ಕುರಿತ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದು, ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. ಇಂದಿರಾ ಗಾಂಧಿ ಅಧಿಕಾರಾವಧಿಯಲ್ಲಿ ದೇಶಾದ್ಯಂತ ಹೇರಲಾಗಿದ್ದ ತುರ್ತಪರಿಸ್ಥಿತಿಯನ್ನು ಉಲ್ಲೇಖಿಸಿದ ಮೋದಿ, ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡರು. ಮೊಹಮ್ಮದ್‌ ಅಲಿ ಜಿನ್ನಾಗೆ ವಂದೇ ಮಾತರಂ ಬಗ್ಗೆಅಸಮಾಧಾನವಿತ್ತು. ಹೀಗಾಗಿ ಅವರು ಅದನ್ನು ವಿರೋಧಿಸುತ್ತಿದ್ದರು. ಹೀಗಾಗಿ ಅವರ ಮನಸ್ಥಿತಿಯನ್ನೇ ಜವಾಹರಲಾಲ್ ನೆಹರೂ ಕೂಡ ಅನುಸರಿಸಿದರು. ಏಕೆಂದರೆ ಅವರು ಮುಸ್ಲಿಮರನ್ನು ಓಲೈಕೆ ಮಾಡುವತ್ತ ಹೆಚ್ಚಿನ ಆಸಕ್ತಿ ಹೊಂದಿದ್ದರು ಎಂದು ಆರೋಪಿಸಿದರು.

'ವಂದೇ ಮಾತರಂ' ತನ್ನ 100ನೇ ವಾರ್ಷಿಕೋತ್ಸವವನ್ನು ಆಚರಿಸಿದಾಗ, ದೇಶವು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿತ್ತು. ಅದು ತನ್ನ 100 ನೇ ವಾರ್ಷಿಕೋತ್ಸವವನ್ನು ಆಚರಿಸಿದಾಗ, ಸಂವಿಧಾನವನ್ನು ಕತ್ತು ಹಿಸುಕಲಾಯಿತು. ಈಗ, 150 ವರ್ಷಗಳಲ್ಲಿ, 1947 ರಲ್ಲಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟ 'ವಂದೇ ಮಾತರಂ' ನ ವೈಭವವನ್ನು ಪುನಃಸ್ಥಾಪಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಪ್ರಧಾನಿ ಹೇಳಿದರು.

"ನಾವು ಇತ್ತೀಚೆಗೆ ನಮ್ಮ ಸಂವಿಧಾನದ 75ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದೇವೆ. ದೇಶವು ಸರ್ದಾರ್ ವಲ್ಲಭ ಪಟೇಲ್ ಮತ್ತು ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯನ್ನು ಆಚರಿಸಿದೆ. ನಾವು ಗುರು ತೇಜ್ ಬಹದ್ದೂರ್ ಜಿ ಅವರ 350 ನೇ ಹುತಾತ್ಮ ದಿನವನ್ನೂ ಆಚರಿಸುತ್ತಿದ್ದೇವೆ. ಈಗ ನಾವು ವಂದೇ ಮಾತರಂನ 150 ವರ್ಷಗಳನ್ನು ಆಚರಿಸುತ್ತಿದ್ದೇವೆ," ಎಂದು ಸಮರ್ಥಿಸಿಕೊಂಡರು.

ಈ ಚರ್ಚೆಯ ಪೂರ್ವಭಾವಿಯಾಗಿ ಬಿಜೆಪಿ 'ವಂದೇ ಮಾತರಂ' ಬಗ್ಗೆ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡಿದೆ. ವಂದೇ ಮಾತರಂನ ಮೂಲ ಕವಿತೆಯ ಎರಡು ಚರಣಗಳಲ್ಲಿ ಹಿಂದೂ ದೇವತೆಗಳ ಉಲ್ಲೇಖವಿದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿಯೇ ತೆಗೆದುಹಾಕಿದೆ. ಅದರಲ್ಲೂ ನೆಹರೂ ಪಾತ್ರ ಪ್ರಮುಖವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದು ದೇಶಭಕ್ತಿಗೀತೆಗೆ ತಂದಿರುವ ಅಗೌರವ ಮತ್ತು ಕಾಂಗ್ರೆಸ್‌ನ ಓಲೈಕೆ ರಾಜಕೀಯಕ್ಕೆ ಸಿಕ್ಕಿರುವ ಸಾಕ್ಷಿ ಎಂಬುದು ಬಿಜೆಪಿ ಅರೋಪವಾಗಿದೆ.

Tags:    

Similar News