ಬಾಂಗ್ಲಾ ವಲಸಿಗರಿಗೆ ಮದರಸಾಗಳಲ್ಲಿ ಆಶ್ರಯ : ಬಿಜೆಪಿ ಅಧ್ಯಕ್ಷ ನಡ್ಡಾ ಆರೋಪ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಬಿಸಿ ಸಮುದಾಯದ ಚಾಂಪಿಯನ್ ಆಗಲು ಬಯಸುತ್ತಾರೆ. ಆದರೆ ರಾಜೀವ್ ಗಾಂಧಿ ಫೌಂಡೇಶನ್ ಮತ್ತು ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಎಷ್ಟು ಒಬಿಸಿ ಸದಸ್ಯರಿದ್ದಾರೆ ಎಂದು ನಡ್ಡಾ ಪ್ರಶ್ನಿಸಿದರು.;
ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುತ್ತಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಬಾಂಗ್ಲಾ ವಲಸಿಗರ ಸಮಸ್ಯೆಯನ್ನೆ ಮುಂದಿಟ್ಟು ಬಿಜೆಪಿಗೆ ಮತ ಹಾಕುವಂತೆ ಕೋರುತ್ತಿದ್ದಾರೆ. ಭಾನುವಾರ (ನವೆಂಬರ್ 17) ನಡೆದ ಸಭೆಯಲ್ಲಿ ಅವರು ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸರ್ಕಾರ ಮದರಸಾಗಳಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಗೆ ಆಶ್ರಯ ಒದಗಿಸಲು ಅನುಮತಿ ನೀಡಿದೆ ಎಂದು ಆರೋಪಿಸಿದ್ದಾರೆ. ಸರ್ಕಾರವು ಆಧಾರ್, ಮತದಾರರ ಗುರುತಿನ ಚೀಟಿಗಳು, ಅನಿಲ ಸಂಪರ್ಕಗಳು, ಪಡಿತರ ಚೀಟಿಗಳನ್ನು ನೀಡಿ ವಲಸಿಗರಿಗೆ ಭೂಮಿ ಖರೀದಿಸಲು ನೆರವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಬಿಸಿ ಸಮುದಾಯದ ಚಾಂಪಿಯನ್ ಆಗಲು ಬಯಸುತ್ತಾರೆ. ಆದರೆ ರಾಜೀವ್ ಗಾಂಧಿ ಫೌಂಡೇಶನ್ ಮತ್ತು ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಎಷ್ಟು ಒಬಿಸಿ ಸದಸ್ಯರಿದ್ದಾರೆ ಎಂದು ಬೊಕಾರೊ ಜಿಲ್ಲೆಯ ಗೋಮಿಯಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ ಪ್ರಶ್ನಿಸಿದರು.
'ಬಾಂಗ್ಲಾದೇಶಿ ನುಸುಳುಕೋರರಿಗೆ ಆಶ್ರಯ
ನನ್ನ ಬಳಿಗೆ ಈಗಷ್ಟೇ ಗುಪ್ತಚರ ವರದಿ ಬಂದಿದೆ. ಬಾಂಗ್ಲಾದೇಶದ ನುಸುಳುಕೋರರಿಗೆ ಇಲ್ಲಿನ ಮದರಸಾಗಳಲ್ಲಿ ಆಶ್ರಯ ನೀಡಲಾಗುತ್ತದೆ ಎಂದು ಅದು ಹೇಳುತ್ತದೆ. ಅವರಿಗೆ ಆಧಾರ್, ಮತದಾರರ ಗುರುತಿನ ಚೀಟಿ, ಅನಿಲ ಸಂಪರ್ಕ ಮತ್ತು ಪಡಿತರ ಚೀಟಿ ನೀಡಲಾಗಿದೆ. ನಂತರ ಹೇಮಂತ್ ಸೊರೆನ್ ಸರ್ಕಾರವು ಅವರಿಗೆ ಭೂಮಿ ಕೂಡ ನೀಡಿದೆ ಎಂದರು.
"ಹೇಮಂತ್ ಸೊರೆನ್ ಜಾರ್ಖಂಡ್‌ನ 'ನೀರು , ಅರಣ್ಯ, ಜಮೀನು ' ಅನ್ನು ಲೂಟಿ ಮಾಡಿದ್ದಾರೆ, ಇಲ್ಲಿ ಒಳನುಸುಳುವಿಕೆ ವ್ಯಾಪಕವಾಗಿದೆ. ನುಸುಳುಕೋರರು ಬುಡಕಟ್ಟು ಮಹಿಳೆಯರನ್ನು ಮದುವೆಯಾಗುತ್ತಿದ್ದಾರೆ ಮತ್ತು ಅವರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ. ಅವರ ಸಂತತಿಯನ್ನು ಭೂಮಿಯಿಂದ ನಿಷೇಧಿಸಲು ನಾವು ಶಾಸನ ತರುತ್ತೇವೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾತ್ರ ಒಳನುಸುಳುವಿಕೆ ತಡೆಯಲು ಸಾಧ್ಯ" ಎಂದು ನಡ್ಡಾ ಹೇಳಿದರು.
ಇಡೀ ಜೆಎಂಎಂ-ಆರ್ಜೆಡಿ-ಕಾಂಗ್ರೆಸ್ ಅನ್ನು ಭ್ರಷ್ಟ ನಾಯಕರ 'ಕುನ್ಬಾ' (ಕುಟುಂಬ) ಎಂದು ಕರೆದ ಅವರು, ಬಿಜೆಪಿ ಬಣದ ನಾಯಕರು ಜೈಲಿನಲ್ಲಿದ್ದಾರೆ ಅಥವಾ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಹೇಳಿದರು.
'ಸೊರೆನ್ ಜೈಲಿಗೆ ಹೋಗುತ್ತಾರೆ'
ಜಾಮೀನಿನ ಮೇಲೆ ಹೊರಗಿರುವ ಹೇಮಂತ್ ಸೊರೆನ್ ಮತ್ತೆ ಜೈಲಿಗೆ ಹೋಗಲಿದ್ದಾರೆ. ಅವರು 5,000 ಕೋಟಿ ರೂ.ಗಳ ಗಣಿ ಹಗರಣ, 236 ಕೋಟಿ ರೂ.ಗಳ ಭೂ ಹಗರಣ ಮತ್ತು ಇತರ ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದಾರೆ" ಎಂದು ನಡ್ಡಾ ಆರೋಪಿಸಿದರು.
"ಹೇಮಂತ್ ಸೊರೆನ್ ಸರ್ಕಾರವು ಒಡೆದು ಆಳುವ ನೀತಿಯನ್ನು ಅನುಸರಿಸಿತು ಮತ್ತು ಜನರಲ್ಲಿ ಅಶಾಂತಿ ಸೃಷ್ಟಿಸಿತು. ಈಗ ಅವರ ನಿರ್ಗಮನದ ಸಮಯ. ನಾವು ಇಲ್ಲಿ ಸರ್ಕಾರ ರಚಿಸುತ್ತೇವೆ" ಎಂದು ನಡ್ಡಾ ವಿಶ್ವಾಸ ವ್ಯಕ್ತಪಡಿಸಿದರು.
ಹೇಮಂತ್ ಸೊರೆನ್ ಸರ್ಕಾರ ಜನರಿಗೆ ದ್ರೋಹ ಬಗೆದಿದೆ. ರಾಜ್ಯವನ್ನು ಲೂಟಿ ಮಾಡಿದೆ ಮತ್ತು ವಂಶಪಾರಂಪರ್ಯ ರಾಜಕೀಯವನ್ನು ಉತ್ತೇಜಿಸಿದೆ ಎಂದು ಅವರು ಆರೋಪಿಸಿದರು.
ರಾಹುಲ್ ಗಾಂಧಿ ತಮ್ಮನ್ನು ಒಬಿಸಿಗಳ 'ಚಾಂಪಿಯನ್' ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅಧ್ಯಕ್ಷತೆಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ರಾಜೀವ್ ಗಾಂಧಿ ಪ್ರತಿಷ್ಠಾನ ಮತ್ತು ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಎಷ್ಟು ಒಬಿಸಿ ಸದಸ್ಯರಿದ್ದಾರೆ ಎಂದು ನಡ್ಡಾ ಪ್ರಶ್ನಿಸಿದರು.
ಮೋದಿ ಸಂಪುಟದಲ್ಲಿ 27 ಒಬಿಸಿ ಸಚಿವರು
"ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್‌ನಲ್ಲಿ 27 ಒಬಿಸಿ ಸಚಿವರು ಇದ್ದಾರೆ ಎಂದು ನಾನು ಹೆಮ್ಮೆಪಡುತ್ತೇನೆ" ಎಂದ ನಡ್ಡಾ ಅವರು,. ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಒಬಿಸಿಗಳು, ಬುಡಕಟ್ಟು ಜನಾಂಗದವರು ಮತ್ತು ಎಸ್ಸಿಗಳನ್ನು ಮುಖ್ಯವಾಹಿನಿಗೆ ತರುತ್ತಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು ಮೂಲಸೌಕರ್ಯಗಳನ್ನು ಹೆಚ್ಚಿಸಲು 19 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಅವರು ಹೇಳಿದರು.
ಮೋದಿ ಆಡಳಿತದಲ್ಲಿ ಕೃಷಿ ಬಜೆಟ್ ಐದು ಪಟ್ಟು ಹೆಚ್ಚಾಗಿದೆ. ಭಾರತವು ಮೂರನೇ ಅತಿದೊಡ್ಡ ಆಟೋಮೊಬೈಲ್ ತಯಾರಕ, ಎರಡನೇ ಅತಿದೊಡ್ಡ ಉಕ್ಕು ತಯಾರಕ, ಆಟಿಕೆಗಳಿಗೆ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ ಮತ್ತು ವಿಶ್ವದ ಅತ್ಯಂತ ಕೈಗೆಟುಕುವ ಔಷಧಿಗಳನ್ನು ಉತ್ಪಾದಿಸುತ್ತದೆ ಎಂದು ನಡ್ಡಾ ವಿವರಿಸಿದರು.
ಜಾರ್ಖಂಡ್‌ನಲ್ಲಿ ಐದು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಧಾನಿ ಮೋದಿ ಅವುಗಳಿಗೆ ತಲಾ 250 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದಾರೆ ಎಂದು ಅವರು ಹೇಳಿದರು.